Tag: Shivram Hebbaar

  • ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

    ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

    – ವಿಧಾನಸೌಧದಲ್ಲಿ ಸಿಎಂ ಸನ್ಮಾನ
    – ಅರ್ಧ ಗಂಟೆ ತಡವಾಗಿ ಬಂತು 3 ಲಕ್ಷದ ಚೆಕ್

    ಬೆಂಗಳೂರು: ಕಂಬಳ ವೀರ ಶ್ರೀನಿವಾಸ್‍ಗೌಡರನ್ನು ಕೆಲ ಸಚಿವರು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡ್ರಾ ಎನ್ನುವ ಪ್ರಶ್ನೆ ಎದ್ದಿದೆ. ಇವತ್ತು ಮಂಗಳೂರಿನ ಶ್ರೀನಿವಾಸ್‍ಗೌಡರನ್ನು ವಿಧಾನಸೌಧಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಸನ್ಮಾನ ಮಾಡಿದರು.

    ಸನ್ಮಾನದ ಬಳಿಕ ಚೆಕ್ ವಿತರಿಸುವಂತೆ ಸೂಚಿಸಿ ಸಿಎಂ ಅಲ್ಲಿಂದ ನಿರ್ಗಮಿಸಿದರು. ಆದರೆ ಚೆಕ್ ಬರುವುದು ತಡವಾದ ಕಾರಣ ಶ್ರೀನಿವಾಸ್ ಗೌಡರಿಗೆ ಖಾಲಿ ಕವರ್ ನೀಡಿ ಸಚಿವರಾದ ಸಿಟಿ ರವಿ ಮತ್ತು ಶಿವರಾಮ್ ಹೆಬ್ಬಾರ್ ಪೋಸ್ ನೀಡಿದರು.

    ಇದು ಖಾಲಿ ಕವರ್ ಅಂತಾ ಕೈ ಸನ್ನೆಯಲ್ಲೇ ಸಿಟಿ ರವಿ ತಿಳಿಸುವ ಪ್ರಯತ್ನ ಮಾಡಿದರು. ಅರ್ಧಗಂಟೆ ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರೀನಿವಾಸ್ ಗೌಡರಿಗೆ 3 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು. ಇದನ್ನೂ ಓದಿ: ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಈಗ ಹೋಗಲ್ಲ: ಕಂಬಳ ಸ್ಪರ್ಧೆಗಳು ಇರುವ ಕಾರಣ ಸದ್ಯಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ತೆರಳದೇ ಇರಲು ಶ್ರೀನಿವಾಸ್‍ಗೌಡ ತೀರ್ಮಾನಿಸಿದ್ದಾರೆ. ನಂಗೆ ಕಂಬಳದ ಗದ್ದೆಯೇ ಇಷ್ಟ ಎಂದಿದ್ದಾರೆ.

    https://twitter.com/CMofKarnataka/status/1229369073038848000

    ಈ ಮೊದಲೇ ನಾನು ಕಂಬಳದಲ್ಲಿ ಭಾಗವಹಿಸುತ್ತೇನೆ ಎಂದು ಕೋಣದ ಯಜಮಾನರಿಗೆ ಮಾತು ನೀಡಿದ್ದೇನೆ. ಈ ಋತುವಿನ ಎರಡು ಕಂಬಳ ಬಾಕಿಯಿದೆ. ಈ ಸಂಬಂಧ ಈಗಾಗಲೇ ನಾನು ಒಪ್ಪಂದ ಮಾಡಿಕೊಂಡಿದ್ದೇನೆ. ಕಂಬಳದ ಋತು ಮುಗಿದ ಬಳಿಕ ಸಾಯ್ ಮೌಲ್ಯಮಾಪನಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.

    ವೇಣೂರು- ಪೆಂರ್ಬುಡ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳದಲ್ಲೂ ಶ್ರೀನಿವಾಸ ಗೌಡ ಅವರ ಮೂರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಗೌಡರು ಗೆದ್ದ ಪದಕಗಳ ಸಂಖ್ಯೆ 157ಕ್ಕೆ ಏರಿಕೆಯಾಗಿದೆ.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರು ಕನ್ನಡದಲ್ಲಿ ಟ್ವೀಟ್ ಮಾಡಿ,”ಶ್ರೀನಿವಾಸರ ಪ್ರತಿಭೆಯನ್ನು ಗುರುತಿಸಿ, ಒಲಿಂಪಿಕ್ಸ್ ಗೆ ಅವರ ಕೌಶಲವನ್ನು ಅಣಿಗೊಳಿಸಲು ತರಬೇತಿ ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ಅವರಿಗೆ ನನ್ನ ಅಭಿನಂದನೆಗಳು. ಕಂಬಳ ಸ್ಪರ್ಧೆಯ ವೇಳೆ ಅಪರೂಪದ ಸಾಧನೆ ಮಾಡಿ, ಉಸೇನ್ ಬೋಲ್ಟ್ ನೊಂದಿಗೆ ಹೋಲಿಸಲ್ಪಡುತ್ತಿರುವ ಕರ್ನಾಟಕದ ಶ್ರೀನಿವಾಸ ಗೌಡ ಕೀರ್ತಿ ಪಡೆದಿದ್ದಾರೆ. ದೇಶದಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿದ್ದು, ಅವರ ಪೂರ್ಣ ಸಾಮರ್ಥ್ಯದ  ಸಾಕಾರಕ್ಕಾಗಿ ಅದನ್ನು ತಿಳಿಯುವ, ಮನ್ನಣೆ ನೀಡುವ, ಗೌರವಿಸುವ ಮತ್ತು ಪೋಷಿಸುವ  ಅಗತ್ಯವಿದೆ” ಎಂದು ಬರೆದು ಶ್ಲಾಘಿಸಿದ್ದರು.

    ಶ್ರೀನಿವಾಸ ಗೌಡ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ಮೂಡುಬಿದ್ರೆಯ ಮಿಜಾರಿನ ಅಶ್ವತ್ಥಪುರದ ನಿವಾಸಿಯಾಗಿರುವ ಶ್ರೀನಿವಾಸ ಗೌಡ, ಪರಿಶಿಷ್ಟ ವರ್ಗಕ್ಕೆ ಸೇರಿದ ಕುಡುಂಬಿ ಜನಾಂಗದ ವ್ಯಕ್ತಿ. ಆದರೆ,ಕಂಬಳದಲ್ಲಿ ಮಾಡಿದ ಸಾಧನೆ ಮಾತ್ರ ಶ್ರೀನಿವಾಸ ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ. ಅತಿ ವೇಗದ ಓಟದ ದಾಖಲೆಯ ಉಸೇನ್ ಬೋಲ್ಟ್ ಮೀರಿಸುವ ಸಾಧನೆ ಮಾಡಿದ್ದಾಗಿ ಹೋಲಿಸಲಾಗುತ್ತಿದೆ.ಇಂಥ ಖ್ಯಾತಿ ಬಂದಿದ್ದರೂ, ಶ್ರೀನಿವಾಸ ಮಾತ್ರ ಎಂದಿನಂತೇ ಕಂಬಳದಲ್ಲಿತೊಡಗಿಸಿಕೊಂಡಿದ್ದಾರೆ. ಕಂಬಳ ಬಿಟ್ಟರೆ ಕಟ್ಟಡ ಕೆಲಸದ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.

    ಶ್ರೀನಿವಾಸ ಗೌಡರ ಸಾಧನೆ ವಿಶ್ವದ ಗಮನ ಸೆಳೆದಿದ್ದರೂ, ಪದಕದ ಬೇಟೆ ನಿಂತಿಲ್ಲ. ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಮೂರು ವಿಭಾಗದಲ್ಲಿ ಮತ್ತೆ ಮೂರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಬಾರಿಯ ಕಂಬಳದ ಋತುವಿನಲ್ಲಿ ಸತತವಾಗಿ ಚಿನ್ನದ ಪದಕ ಗೆಲ್ಲುತ್ತಾ ಬಂದು ದಾಖಲೆ ಮಾಡಿದ್ದಾರೆ. ಈ ಬಾರಿ ಇನ್ನೆರಡು ಕಂಬಳ ಮಾತ್ರ ಉಳಿದಿದ್ದು, ನಾಲ್ಕು ಕೋಣಗಳ ಜೊತೆ ಓಡುವ ಶ್ರೀನಿವಾಸ ಗೌಡ ಚಿನ್ನಕ್ಕೆ ಲಗ್ಗೆಯಿಟ್ಟು ಹೊಸ ದಾಖಲೆ ನಿರ್ಮಿಸುವ ಇರಾದೆಯಲ್ಲಿದ್ದಾರೆ.