ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಆಗಿರುವ ವಿಚಾರ ತಿಳಿದು ಬಂದಿದೆ. ಹೀಗಾಗಿ ಈ ಕುರಿತಂತೆ ತನಿಖೆ ನಡೆಸಿ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಆಗಿರುವುದು ತಿಳಿದುಬಂದಿದೆ. ನಾಲ್ಕು ಜಿಲ್ಲೆಗೆ ಅದರ ಪರಿಣಾಮ ಆಗಿದೆ. ಹಿಂದೆ ಎಂದೂ ಇಂತಹ ಸ್ಫೋಟ ಸಂಭವಿಸಿರಲಿಲ್ಲ. ಎಂಪಿ, ಎಂಎಲ್‍ಎಗಳು ಘಟನಾ ಸ್ಥಳದಲ್ಲಿಯೇ ಇದ್ದಾರೆ. ಅವರೆಲ್ಲರಿಂದ ಮಾಹಿತಿಗಳನ್ನು ಪಡೆಯುತ್ತಿದ್ದೇನೆ. ಪ್ರಕರಣ ಕುರಿತಂತೆ ಸಮಗ್ರ ತನಿಖೆ ಮಾಡಿಸಿ, ಯಾರೇ ತಪ್ಪಿತಸ್ಥರಾಗಿದ್ದರು ಕೂಡ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಲಾರಿಗಳಲ್ಲಿ ಇಂತಹ ಸ್ಫೋಟಕಗಳ ಸಾಗಣೆ ಇರುವ ನಿಯಮಗಳ ಬಗ್ಗೆ ಮರು ಚರ್ಚೆ ಆಗಬೇಕು. ಈ ಕುರಿತು ಗಣಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ನಿಯಮ ಸಡಿಲಿಕೆ ಇರುವ ಬಗೆಗೆ ಮರು ಚಿಂತನೆ ನಡೆಸುತ್ತೇನೆ. ಘಟನೆ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಸಿಎಂ ಸೂಚನೆ ನೀಡಿದ್ದಾರೆ. ಪ್ರಾಥಮಿಕ ತನಿಖಾ ವರದಿ ಇಂದು ಸಂಜೆ ಬರಲಿದ್ದು, ಯಾರ ಕೈನಿಂದ ತನಿಖೆ ಮಾಡಿಸಬೇಕು ಎಂದು ಪ್ರಾಥಮಿಕ ವರದಿ ಬಂದ ನಂತರ ತಿಳಿಸುವುದಾಗಿ ಹೇಳಿದರು.

ಸದ್ಯ ಕ್ವಾರಿ ಓನರ್ ಮತ್ತು ಸ್ಫೋಟಕ ಸಪ್ಲೈ ಮಾಡಿದವರ ವಿಚಾರವಾಗಿ ತನಿಖೆ ನಡೆಸಲಾಗುತ್ತಿದ್ದು, ಕ್ವಾರಿಗೆ ಅನುಮತಿ ಇತ್ತಾ? ಅಥವಾ ಅದರ ಅವಧಿ ಮುಕ್ತಾಯ ಆಗಿದೆಯಾ? ಸ್ಫೋಟಕ ಸಪ್ಲೈಯನ್ನು ನಿಯಮಾನುಸಾರ ಮಾಡಿದ್ದಾರಾ? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಸಂಪೂರ್ಣ ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.




