Tag: Shivashankara Reddy

  • ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

    ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮಂತ್ರಿ ಎನ್.ಎಚ್.ಶಿವಶಂಕರರೆಡ್ಡಿ ಅವರದ್ದು ಎನ್ನಲಾದ ಆಡಿಯೋವೊಂದು ಈಗ ಜಿಲ್ಲೆಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ಭಾಷೆ ಬಳಕೆಯ ರೀತಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

    ಗೌರಿಬಿದನೂರು ತಾಲೂಕಿನ ಮೇಳ್ಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಅವರಿಗೆ ಕರೆ ಮಾಡಿರುವ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಸಂಘದ ನಿರ್ಣಯವೊಂದಕ್ಕೆ ಸಹಿ ಹಾಕುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ತನ್ನೊಂದಿಗೆ ಶಾಸಕರೇ ಮಾತಾಡುತ್ತಿದ್ದಾರೆಂದು ಅರಿಯದ ನರಸಿಂಹಮೂರ್ತಿ, ಅವರ ಮಾತಿಗೆ ಒಪ್ಪದೇ ತಿರುಗಿ ಬಿದ್ದಿದ್ದಾರೆ. ಕಾನೂನಿನಂತೆ ಸಭೆ ಸೇರಿ ಕೈಗೊಳ್ಳುವ ನಿರ್ಣಯಕ್ಕಷ್ಟೇ ತಾನು ಸಹಿ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಶಿವಶಂಕರರೆಡ್ಡಿ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ

    ಯಾವುದಕ್ಕೆ ಸಹಿ?

    ಇಡೀ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳಲ್ಲಿ ಇದೀಗ ಚಾಲ್ತಿಯಲ್ಲಿರುವ ವಿಷಯವೆಂದರೆ ಕೋಚಿಮುಲ್ ಇಬ್ಭಾಗದ ವಿಷಯ. ಇದೇ ವಿಷಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ರಾಜಕೀಯ ಅಜೆಂಡಾವನ್ನಾಗಿ ಮಾಡಿಕೊಂಡಿವೆ. ಸಂಘಗಳು ಸಾಮಾನ್ಯ ಸಭೆಯಲ್ಲಿ ಈ ಕುರಿತು, ತಮ್ಮ ಸಂಘವು ಕೋಚಿಮುಲ್ ವಿಭಜನೆಗೆ ವಿರೋಧ ವ್ಯಕ್ತಪಡಿಸಿ, ಹಾಲು ಉತ್ಪಾದಕ ಸಂಘವು ಉಳಿಯುವ ಬಗ್ಗೆ ಒಲವು ವ್ಯಕ್ತಪಡಿಸಿ ನಿರ್ಣಯ ಕೈಗೊಂಡಂತೆ ಸಹಿ ಹಾಕಲು ಶಾಸಕರು ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಾರ್ಯದರ್ಶಿ ನರಸಿಂಹಮೂರ್ತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಶಾಸಕ ಶಿವಶಂಕರರೆಡ್ಡಿ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಆಡಿಯೋ ಕಳವು!

    ತನ್ನ ಸ್ನೇಹಿತರ ಬಳಿ ಮೊಬೈಲ್ ನೀಡಿದ್ದಾಗ ತನಗೆ ತಿಳಿಯದಂತೆ ನನ್ನ ಮೊಬೈಲ್‍ನಲ್ಲಿದ್ದ ಆಡಿಯೋವನ್ನು ಕಳುವು ಮಾಡಿದ್ದಾರೆ. ತನ್ನ ಹಾಗೂ ಶಾಸಕರ ಸಂಭಾಷಣೆಯ ಆಡಿಯೋವನ್ನು ತನಗಾಗದವರು ಯಾರೋ ಎಡಿಟ್ ಮಾಡಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನಡಾವಳಿಗೆ ಸಹಿ ಹಾಕುವಂತೆ ಸ್ವತಃ ಶಾಸಕರೇ ಒತ್ತಡ ಹೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋವನ್ನು ಎಡಿಟ್ ಮಾಡಿ ಹರಿ ಬಿಡಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ.

    ತನಗೂ ಶಾಸಕರಿಗೂ 20 ವರ್ಷಗಳ ಪರಿಚಯವಿದ್ದು, ತಾನು ಇದುವರೆಗೂ ಸಂಘದ ಕಾರ್ಯಗಳಲ್ಲಿ ನಿಯಮಬದ್ಧವಾಗಿ ವಿಧೇಯನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಶಾಸಕರು ತನ್ನ ಆಡಿಯೋ ಸಂಭಾಷಣೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:  ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ಈ ಕುರಿತು ಶಾಸಕರು ಇದುವರೆಗೆ ಯಾವುದೇ ಪ್ರತಿಕ್ರಿಯೆಗೆ ನೀಡುತ್ತಿಲ್ಲ. ಆದರೆ ಆಡಿಯೋ ಮಾತ್ರ ಸಖತ್ ವೈರಲ್ ಆಗಿ ಪರ ವಿರೋಧದ ಚರ್ಚೆಗೆ ಗ್ರಾಸವಾಗುತ್ತಿದೆ.

  • ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಕೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆ ಹಿಡುಕ ಎಂದು ಗೌರಿಬಿದನೂರು ಶಾಸಕ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಶಿವಶಂಕರರೆಡ್ಡಿ, ಅನರ್ಹ ಶಾಸಕ ಸುಧಾಕರ್ ವಿರುದ್ಧ ಹರಿಹಾಯ್ದರು. ರಾಜಕೀಯ ಕ್ಷೇತ್ರದಲ್ಲಿ ಯಾರನ್ನೇ ಕೇಳಿ ಸುಧಾಕರ್ ಬಗ್ಗೆ ಬ್ರೋಕರ್ ಎಂದು ಕರೆಯುತ್ತಾರೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ. ಈಗಲೂ ಅದೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದ ಸುಧಾಕರ್ ಹಣ ಲೂಟಿ ಹೊಡೆಯುತ್ತಿದ್ದಾರೆ. ಪೇರೇಸಂದ್ರ ಸ್ವಗ್ರಾಮದಲ್ಲಿ ಸುಧಾಕರ್ ಕಟ್ಟಿರುವ ಶಾಲೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಮಾಡಿರುವ ಬೇನಾಮಿ ಆಸ್ತಿಯೇ ಇದಕ್ಕೆ ಸಾಕ್ಷಿ. ಬೆಂಗಳೂರಿನ ಸದಾಶಿವನಗರದಲ್ಲಿ ಸ್ವತಃ ಸಿದ್ದರಾಮಯ್ಯನವರಿಗೆ ಮನೆ ಕಟ್ಟಲು ಆಗಲಿಲ್ಲ. ಆದರೆ ಸುಧಾಕರ್ 50 ಕೋಟಿ ರೂ.ಯಲ್ಲಿ ಮನೆ ಕಟ್ಟಿದ್ದಾರೆ. ಸುಧಾಕರ್ ಏನು ಬೇಸಾಯ ಮಾಡಿದ್ರಾ, ಇಲ್ಲ ಅವರಪ್ಪ ಉಳುಮೆ ಮಾಡ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.

    ಕ್ಷೇತ್ರದಲ್ಲಿನ ಜಲ್ಲಿ ಕ್ರಷರ್ ಮಾಲೀಕರಿಂದ ತಲಾ ಒಂದು ಕ್ರಷರ್ ಗೆ ಪ್ರತಿ ತಿಂಗಳು 2 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ತಿಂಗಳಿಗೆ 2 ಕೋಟಿ ಅಷ್ಟು ಹಣ ವಸೂಲಿ ಮಾಡುತ್ತಿದ್ದು, ಭೂಪರಿವರ್ತನೆಗೆ ಎಕರೆಗೆ 8 ಲಕ್ಷ ರೂ. ವರೆಗೂ ಹಣ ಪಡೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಅಲ್ಲದೆ ಈಗಿನ ರಾಜಕಾರಣದಲ್ಲಿ ಪಕ್ಷಗಳನ್ನು ಬದಲಾಯಿಸೋದು ಸಾಮಾನ್ಯ. ಆದರೆ ಪಕ್ಷಗಳಿಗೆ ನಿಷ್ಠೆಯಿಂದ ಇರಬೇಕಾಗುತ್ತೆ. ಪಕ್ಷ ಸಂಕಷ್ಟದಲ್ಲಿ ಇದ್ದಾಗ ಪಕ್ಷಕ್ಕೆ ಕೈ ಕೊಟ್ಟು ದ್ರೋಹ ಬಗೆದ ಸುಧಾಕರ್ ಗೆ ಉಪಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಂಗ್ ನೀಡಿದರು.

  • ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಟೀಕೆ ಮಾಡಿದ್ದಾರೆ. ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ತಾಳುತ್ತಿದೆ. ದೇಶದಲ್ಲಿ ಯುದ್ಧದ ಭೀತಿ ಸೃಷ್ಟಿ ಮಾಡಿ, ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಯತ್ನ ನಡೆಸಿದೆ. ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಸಲುವಾಗಿ ಈ ಸಂಚು ರೂಪಿಸಿದೆ. ಕೇಂದ್ರ ಸರ್ಕಾರದ ಈ ನಡೆ ಬಹಳ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

    ಕೇಂದ್ರದ ನಿರ್ಧಾರದಿಂದ ಪ್ರತ್ಯೇಕವಾದಿಗಳ ಕೂಗು ಮತ್ತಷ್ಟು ಜೋರಾಗಲಿದೆ. ಉಗ್ರವಾದಿ ಸಂಘಟನೆಗಳ ಕೃತ್ಯಗಳು ಜಾಸ್ತಿ ಆಗಬಹುದು. ವಿಶೇಷ ಸ್ಥಾನಮಾನ ಇದ್ದ ಕಾರಣ ದೇಶದಲ್ಲಿ ರಕ್ಷಣೆ ಇತ್ತು. ಈಗ ವಿಶೇಷ ಸ್ಥಾನಮಾನ ತೆಗೆದಿರುವುದರಿಂದ ಉಳಿದವರು ಕೂಡ ಉಗ್ರರ ಜೊತೆ ಸೇರಿ ಪಾಕಿಸ್ತಾನಕ್ಕೆ ನಾವು ಸೇರಬೇಕೆಂಬ ಕೂಗು ಜೋರಾಗಲಿದೆ. ಇದು ದೇಶ ವಿರೋಧಿ ನೀತಿ ಎಂದು ಶಿವಶಂಕರ ರೆಡ್ಡಿ ಬಣ್ಣಿಸಿದರು.

    ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ.

    ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆಯೇ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

  • ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ: ಕೃಷಿ ಸಚಿವ

    ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ: ಕೃಷಿ ಸಚಿವ

    ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ ಎಂದು ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

    ಶಿರಡಿಗೆ ತೆರಳಿದ್ದ ಸಚಿವರು ದೇವರ ದರ್ಶನ ಪಡೆದು ಇಂದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವ ಸಂಭವ ಕಡಿಮೆಯಿದೆ. ಈ ರೀತಿಯಾದರೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ವಿಧಾನಸಭೆ ವಿಸರ್ಜನೆ ಮಾಡಿದರೆ ಉತ್ತಮವೋ ಅಥವಾ ಬಿಜೆಪಿ ಅಧಿಕಾರಕ್ಕೆ ಬರುವುದು ಸರಿಯೋ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ಸರ್ಕಾರ ರಚನೆ ಮಾಡಿದರೆ ಉತ್ತಮ. ಒಂದು ವೇಳೆ ಮರು ಚುನಾವಣೆ ನಡೆದರೆ ಎದುರಿಸಲು ಸಿದ್ಧ ಎಂದರು.

    ಇತ್ತ ಮುಖ್ಯಮಂತ್ರಿಗಳು ಸ್ಪೀಕರ್ ಮತ್ತು ಕಾನೂನಿನ ಮೂಲಕ ನಾವು ಸರ್ಕಾರವನ್ನು ಉಳಿಸುತ್ತೇವೆ. ಸಚಿವರು ಆದಷ್ಟು ತಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಪರ್ಕದಲ್ಲೇ ಇರಿ. ಹೇಗೆ ಸರ್ಕಾರ ಉಳಿಯುತ್ತದೆ ಎಂಬ ಚಿಂತೆ ನಿಮಗೆ ಬೇಡ. ಅತೃಪ್ತರ ಓಲೈಕೆಯನ್ನು ಎರಡು ಪಕ್ಷದವರು ಮಾಡುವುದು ಬೇಡ ಎಂದು ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.

    ಸ್ಪೀಕರ್ ಮತ್ತು ಕಾನೂನಿನಿಂದ ಸರಕಾರಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ಅಧಿವೇಶನ ನಡೆಯುತ್ತದೆ. ಬಿಜೆಪಿಯವರ ಜೊತೆ ಆಕ್ರೋಶಕ್ಕೆ ಯಾರು ಇಳಿಯಬೇಡಿ. ಎಲ್ಲರೂ ಒಗ್ಗಟ್ಟಾಗಿ ಇರಿ. ಇದೇ ನೀವು ಮಾಡುವ ದೊಡ್ಡ ಸಹಾಯ ಅಂತ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಕೇಳಿ ಬಂದಿದೆ.

    ಬಹಳ ಮಂದಿಗೆ ಇದೇ ಕೊನೆಯ ಕ್ಯಾಬಿನೆಟ್ ಎಂದುಕೊಂಡಿದ್ದೀರಲ್ಲ ಎಂದು ಸಚಿವರನ್ನು ನಗುತ್ತಲೇ ಪ್ರಶ್ನಿಸಿದ ಸಿಎಂ, ಇದು ಕೊನೆ ಸಭೆ ಅಲ್ಲ. ಸರ್ಕಾರ ಸೇಫ್ ಆಗಿ ಇನ್ನೂ ಬಹಳಷ್ಟು ಕ್ಯಾಬಿನೆಟ್ ಸಭೆ ನಡೆಸುತ್ತೇನೆ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಬ್ಲಾಕ್‍ಮೇಲ್ ಮಾಡೋದು ಬಹಳ ದಿನ ನಡೆಯಲ್ಲ: ಆನಂದ್ ಸಿಂಗ್ ವಿರುದ್ಧ ಶಿವಶಂಕರರೆಡ್ಡಿ ಕಿಡಿ

    ಬ್ಲಾಕ್‍ಮೇಲ್ ಮಾಡೋದು ಬಹಳ ದಿನ ನಡೆಯಲ್ಲ: ಆನಂದ್ ಸಿಂಗ್ ವಿರುದ್ಧ ಶಿವಶಂಕರರೆಡ್ಡಿ ಕಿಡಿ

    ಚಿಕ್ಕಬಳ್ಳಾಪುರ: ಬ್ಲಾಕ್‍ಮೇಲ್ ಮಾಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ, ಶಾಸಕ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.

    ಗೌರಿಬಿದನೂರು ನಗರದಲ್ಲಿ ಮಾತನಾಡಿದ ಸಚಿವರು, ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿರಬೇಕು. ಪಕ್ಷದ ಬಗ್ಗೆ ಬದ್ಧತೆ ಇರಬೇಕು. ವೈಯುಕ್ತಿಕ ಹಾಗೂ ಸ್ವಾರ್ಥಕ್ಕಾಗಿ ಪಕ್ಷವನ್ನು ಬ್ಲಾಕ್ ಮೇಲ್ ಮಾಡಬಾರದು. ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದೀರಿ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಎಂದು ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರವಾಗಿ ವಾಗ್ದಾಳಿ ನಡೆಸಿದರು.

    ಯಾರೇ ಆದರೂ ಕಾಂಗ್ರೆಸ್‍ನಿಂದ ಗೆದ್ದು ಪಕ್ಷದ ಜೊತೆ ಇರಬೇಕು. ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಕೊಳ್ಳಬೇಕು. ಯಾರೇ ಬ್ಲಾಕ್‍ಮೇಲ್ ಮಾಡಿದರೂ ಬಹಳ ದಿನ ನಡೆಯಲ್ಲ ಎಂದು ಹೇಳಿದರು.

  • ಫಲಿತಾಂಶ ನಂತರವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ: ಶಿವಶಂಕರರೆಡ್ಡಿ

    ಫಲಿತಾಂಶ ನಂತರವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ: ಶಿವಶಂಕರರೆಡ್ಡಿ

    – ಸಂಪೂರ್ಣವಾಗಿ ಎಕ್ಸಿಟ್ ಪೋಲ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಏನೇ ವ್ಯತ್ಯಾಸವಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಹಾಗೂ ಮುಂದುವರಿಯುತ್ತದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

    ನಗರದ ಜಿಲ್ಲಾಡಳಿತ ಭವನದ ಬಳಿ ಮಾತನಾಡಿದ ಸಚಿವರು, 2004 ಹಾಗೂ 2008ರಲ್ಲಿಯೂ ಎಕ್ಸಿಟ್ ಪೋಲ್‍ಗಳ ಭವಿಷ್ಯ ಸುಳ್ಳಾಗಿವೆ. ಹೀಗಾಗಿ ಎಕ್ಸಿಟ್ ಪೋಲ್‍ಗಳ ಫಲಿತಾಂಶವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‍ಗೆ 12ರಿಂದ 14 ಹಾಗೂ ಜೆಡಿಎಸ್‍ಗೆ 3 ರಿಂದ 4 ಸ್ಥಾನಗಳು ಸಿಗಲಿವೆ. ಆದರೆ ಎಕ್ಸಿಟ್ ಪೋಲ್‍ಗಳ ಪ್ರಕಾರ ಬಿಜೆಪಿಗೆ 20 ಸ್ಥಾನ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಪ್ರಾಬಲ್ಯದ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಪಾಲಾಗಿದ್ದರೂ ಉಳಿದ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದಿವೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಫೋಟೋ ಫಿನಿಷ್ ಫಲಿತಾಂಶ ಹೊರಹೊಮ್ಮಲಿದ್ದು, 10ರಿಂದ 20 ಸಾವಿರ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್-ಜೆಡಿಎಸ್‍ನ ಕೆಲ ಶಾಸಕರಲ್ಲಿ ಈಗಲೂ ಭಿನ್ನಾಭಿಪ್ರಾಯ ಇರುವುದು ನಿಜ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಮೈತ್ರಿ ಸರ್ಕಾರವು 5 ವರ್ಷ ಪೂರೈಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದರು.

    ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಯೊಬ್ಬ ಶಾಸಕರ ಜೊತೆಗೆ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಮೈತ್ರಿ ಸರ್ಕಾರ ವಿಭಜನೆ ಮಾಡುವುದೇ ಲೇಸು ಎಂಬ ಹೇಳಿಕೆ ನೀಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದರು.

  • ವೇದಿಕೆಯಲ್ಲಿ ಒಂದಾದ ಶಾಸಕ ಸುಧಾಕರ್ – ಸಚಿವ ಶಿವಶಂಕರರೆಡ್ಡಿ

    ವೇದಿಕೆಯಲ್ಲಿ ಒಂದಾದ ಶಾಸಕ ಸುಧಾಕರ್ – ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ರಾಜಕೀಯವಾಗಿ ಪರಸ್ಪರ ಕಡು ವೈರಿಗಳಾಗಿರುವ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಶಾಸಕ ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕೇಂಪೇಗೌಡ ಜಯಂತಿ ಆಚರಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವರಾಗಿರುವ ಎನ್.ಎಚ್. ಶಿವಶಂಕರರೆಡ್ಡಿ, ಭಾಗವಹಿಸಿದ್ದರು. ವೇದಿಕೆಗೆ ಮೊದಲ ಆಗಮಿಸಿ ಆಸನದಲ್ಲಿದ್ದ ಶಾಸಕ ಸುಧಾಕರ್, ಸಚಿವ ಶಿವಶಂಕರರೆಡ್ಡಿ ವೇದಿಕೆಗೆ ಆಗಮಿಸುತ್ತಿದ್ದಂತೆ ಎದ್ದು ನಿಂತು ಹಸ್ತಲಾಘವ ಮಾಡಿಕೊಳ್ಳುವ ಮೂಲಕ ಬರ ಮಾಡಿಕೊಂಡರು.

    ಇನ್ನೂ ವಿಶೇಷ ಅಂದರೆ ಶಾಸಕ ಸುಧಾಕರ್ ಇಂದು ತಮ್ಮ 45 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್ ನೀಡಿದ ಸುಳಿವಿನ ಮೇರೆಗೆ ಸುಧಾಕರ್ ಗೆ ಶಿವಶಂಕರರೆಡ್ಡಿ ಸರಳವಾಗಿ ಹುಟ್ಟು ಹಬ್ಬದ ಶುಭಾಶಯ ಕೂಡ ಕೋರಿದ್ದಾರೆ. ಇದೆಲ್ಲದರ ನಡುವೆ ಮೊದಲು ಭಾಷಣ ಆರಂಭಿಸಿದ ಸಚಿವ ಶಿವಶಂಕರರೆಡ್ಡಿ, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಆಧಿಕಾರಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಅಭಿವೃದ್ಧಿ ಪರ ಕೆಲಸ ಮಾಡೋಣ ಅಂತ ಶಾಸಕ ಸುಧಾಕರ್ ಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.

    ಇನ್ನೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕ ಸುಧಾಕರ್ ಕೂಡ, ಭಾಷಣದ ವೇಳೆ ಸಚಿವರಾಗಿ ಆಯ್ಕೆಯಾದ ಶಿವಶಂಕರರೆಡ್ಡಿಯವರಿಗೆ ಅಭಿನಂದನೆಗಳನ್ನ ಸಲ್ಲಸಿದ್ದಲ್ಲದೇ, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಚಿವರಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದರು.

    ಈ ಹಿಂದೆ ಶಾಸಕ ಸುಧಾಕರ್ ರಾಜಕೀಯವಾಗಿ ಸಚಿವ ಶಿವಶಂಕರರೆಡ್ಡಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಅಂತ ಬಹಿರಂಗವಾಗಿಯೇ ಹೇಳಿದ್ದರು. ಅಸಲಿಗೆ ಶಾಸಕ ಸುಧಾಕರ್ ಹಾಗೂ ಸಚಿವ ಶಿವಶಂಕರರೆಡ್ಡಿ ನಡುವಿನ ಶೀತಲ ಸಮರ ಹಾಗೂ ಮುಸುಕಿನ ಗುದ್ದಾಟ ಕೇವಲ ಮೇಲ್ನೋಟಕ್ಕೆ ತಣಿಸಿದ್ದು, ಹೇಳಿದ ಮಾತುಗಳಂತೆ ಮುಂದಿನ ದಿನಗಳಲ್ಲಿ ಹಾಗೆಯೇ ನಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

  • ಪಿಯುಸಿ ಮಾಡಿ ಎಂಎ, ಡಿಗ್ರಿ ಸರ್ಟಿಫಿಕೇಟ್ ಕೇಳಿದ್ರೆ ಆಗುತ್ತಾ?- ಶಾಸಕ ಸುಧಾಕರ್ ಗೆ ಶಿವಶಂಕರ ರೆಡ್ಡಿ ಟಾಂಗ್

    ಪಿಯುಸಿ ಮಾಡಿ ಎಂಎ, ಡಿಗ್ರಿ ಸರ್ಟಿಫಿಕೇಟ್ ಕೇಳಿದ್ರೆ ಆಗುತ್ತಾ?- ಶಾಸಕ ಸುಧಾಕರ್ ಗೆ ಶಿವಶಂಕರ ರೆಡ್ಡಿ ಟಾಂಗ್

    ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರೋ ಶಾಸಕ ಡಾ.ಕೆ ಸುಧಾಕರ್ ಗೆ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವನು. ಯಾರು ಪಕ್ಷ ವಿರೋಧಿ ಅಂತ ಎಲ್ಲರಿಗೂ ಗೊತ್ತು ಎಂದು ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.

    ಪಿಯುಸಿ ಮಾಡಿ ಎಂಎ ಡಿಗ್ರಿ ಸರ್ಟೀಫೀಕೇಟ್ ಬೇಕಂದ್ರೆ ಸಿಗುತ್ತಾ? ಅದಕ್ಕಾಗಿ ಓದಬೇಕಾಗುತ್ತೆ, ಅಡ್ಡದಾರಿ ರಾಜಕಾರಣ ಬಹಳ ದಿನ ಉಳಿಯಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ಎಲ್ಲಿದ್ರು? ಎಲ್ಲಿಂದ ಬಂದವರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ಹೇಳಿದ್ರು.

    ರಾಜಕಾರಣದಲ್ಲಿ ಆಸೆ ಇರಬೇಕು ದುರಾಸೆ ಇರಬಾರದು. ಎಲ್ಲಾ ಅಧಿಕಾರ ಬೇಗ ಸಿಗಬೇಕು ಅನ್ನೋ ಆತುರ ಇರಬಾರದು. ತಾಳ್ಮೆ ಇರಬೇಕು. ಹಣಬಲದಿಂದ ರಾಜಕಾರಣ ಮಾಡಿದ್ರೇ ಏನೇನು ಗತಿ ಆಗಿದೆ ಎನ್ನುವ ಇತಿಹಾಸ ಎಲ್ಲಾ ಪಕ್ಷದಲ್ಲೂ ಆಯಾ ಕಾಲಕಾಲಕ್ಕೆ ತಕ್ಕಂತೆ ರಾಜ್ಯದಲ್ಲಿದೆ. ಡೋಂಗಿ ರಾಜಕಾರಣ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ನಾನು 5 ಬಾರಿ ಶಾಸಕನಾಗಿದ್ದೇನೆ ಅರ್ಹತೆಯಿದೆ. ಹಾಗಾಗಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಇವರಿಂದ ನಾನು ಪಾಠ ಕಲಿಯಬೇಕಿಲ್ಲ ಅಂತ ಸುಧಾಕರ್ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.

    ಅಂದ ಹಾಗೆ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು.