Tag: shivarathri

  • ಮಹಾ ಶಿವರಾತ್ರಿ ಹಬ್ಬ – ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿಎಸ್‌ವೈ, ಡಿಕೆಶಿ

    ಮಹಾ ಶಿವರಾತ್ರಿ ಹಬ್ಬ – ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿಎಸ್‌ವೈ, ಡಿಕೆಶಿ

    ಬೆಂಗಳೂರು: ಇಂದು ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಉಷಾ ಶಿವಕುಮಾರ್ ಅವರು ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲಕ್ಕೆ ತೆರಳಿದ್ದಾರೆ. ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆದು ಸಿಎಂ ಪುನೀತರಾದರು.

    ಇದೇ ವೇಳೆ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದರು. ಪ್ರತಿವರ್ಷದಂತೆ ಈ ವರ್ಷವೂ ದೇವರ ದರ್ಶನಕ್ಕೆ ಬಂದಿದ್ದೇನೆ. ಈ ಮೂಲಕ ರಾಜ್ಯದ ಜನತೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸ್ತೀನಿ. ಮಳೆ, ಬೆಳೆ ಚೆನ್ನಾಗಿ ಆಗಲಿ, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ. ಕೊರೊನಾ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಎಲ್ಲರೂ ಮಾಸ್ಕ್ ಸೇರಿದಂತೆ ನಿಯಮಗಳನ್ನು ಪಾಲನೆ ಮಾಡಿ ಎಂದು ಅವರು ಮನವಿ ಮಾಡಿಕೊಂಡರು.

    ಜಾಗರಣೆ ವಿಶೇಷ:
    ಮೂರು ಯಾಮಗಳಲ್ಲಿ ನಿದ್ರಿಸದೇ ಜಾಗರಣೆ ಮಾಡಿ ಲಿಂಗಸ್ಪರ್ಶವನ್ನು ಯಾರು ಮಾಡುತ್ತಾರೋ ಅಂತಹವರಿಗೆ ತ್ರಿಜನ್ಮದಲ್ಲಿ ಮಾಡಿರುವಂತಹ ಪಾಪಗಳು ಪರಿಹಾರ ಆಗುತ್ತೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಮನುಷ್ಯ ಜೀವಿ ತನ್ನ ಜೀವಿತಾವಧಿಯಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಆತ ಮಾಡಿದ ಕರ್ಮಗಳಿರುತ್ತವೆ. ಆ ಎಲ್ಲ ಕರ್ಮ(ಪಾಪ)ಗಳ ನಿವಾರಣೆಗೆ ಶಿವರಾತ್ರಿಯಂದು ಜಾಗರಣೆ ಮಾಡಿ ಲಿಂಗಸ್ಪರ್ಶ ಮಾಡುವುದರಿಂದ ಕರ್ಮಾದಿಗಳೆಲ್ಲ ಪರಿಹಾರ ಆಗುತ್ತದೆ. ಶಿವರಾತ್ರಿಯಲ್ಲಿ ಲಿಂಗಸ್ಪರ್ಶ ಮಾಡಿದ್ರೆ ಗ್ರಹದೋಷಗಳು ಪರಿಹಾರ ಆಗುತ್ತದೆ. ಎಲ್ಲೆಲ್ಲಿ ಲಿಂಗ ದರ್ಶನ ಮತ್ತು ಸ್ಪರ್ಶದ ಅವಕಾಶ ನೀಡುತ್ತಾರೆ ಅಲ್ಲಿಗೆ ತೆರಳಿ ಜಾಗರಣೆ ಮಾಡಿ ಲಿಂಗವನ್ನು ಸ್ಪರ್ಶ ಮಾಡಬೇಕು ಎಂಬ ಪ್ರತೀತಿ ಇದೆ.

  • ಕುಕ್ಕೆಯಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ತಡೆ

    ಕುಕ್ಕೆಯಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ತಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ನಡೆಯಬೇಕಿದ್ದ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ನಿಂದ ತಡೆ ನೀಡಲಾಗಿದೆ.

    ಶೈವರು ಮತ್ತು ಮಧ್ವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಧಾರ್ಮಿಕ ದತ್ತಿ ಇಲಾಖೆ ವಿಶೇಷ ಶಿವರಾತ್ರಿ ಆಚರಣೆಗೆ ಆದೇಶ ನೀಡಿತ್ತು. ವಿಶೇಷ ಶಿವರಾತ್ರಿ ವೇಳೆ ಬಿಲ್ವಾರ್ಚನೆ, ರುದ್ರಪಾರಾಯಣ, ರುದ್ರಹೋಮ ಹಮ್ಮಿಕೊಳ್ಳಲಾಗಿತ್ತು.

    ಈ ಆದೇಶದ ವಿರುದ್ಧ ಬೆಂಗಳೂರು ಮೂಲದ ಮುರುಳೀಧರ್ ಮತ್ತು ವಿಜಯ ಸಿಂಹಾಚಾರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಂದು ಹೈಕೋರ್ಟ್, ಹಳೆಯ ಸಂಪ್ರದಾಯದಂತೆ ಶಿವರಾತ್ರಿ ಆಚರಣೆ ಮಾಡಿ. ಹೊಸ ಪದ್ಧತಿ ಬೇಡ ಅಂತಾ ಆದೇಶ ಹೊರಡಿಸಿದೆ.

  • ಶಿವರಾತ್ರಿ ಪ್ರಸಾದ ತಿಂದ ಬಳಿಕ 1500 ಮಂದಿ ಅಸ್ವಸ್ಥ

    ಶಿವರಾತ್ರಿ ಪ್ರಸಾದ ತಿಂದ ಬಳಿಕ 1500 ಮಂದಿ ಅಸ್ವಸ್ಥ

    ಭೋಪಾಲ್: ಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಚಡಿ ಪ್ರಸಾದವನ್ನ ತಿಂದು ಬರೋಬ್ಬರಿ 1500 ಜನ ಅಸ್ವಸ್ಥಗೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಬರ್ವಾನಿ ಜಿಲ್ಲೆಯ ಆಶ್ರಮವೊಂದರಲ್ಲಿ ಪ್ರಸಾದ ಹಂಚಲಾಗಿತ್ತು. ಪ್ರಸಾದ ಸೇವಿಸಿದ ಬಳಿಕ ಗ್ರಾಮಸ್ಥರಿಗೆ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಸುಮಾರು 7 ಹಳ್ಳಿಗಳ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 300 ಜನರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸಾಕಷ್ಟು ಮಂದಿ ಅಸ್ವಸ್ಥಗೊಂಡಿದ್ದರಿಂದ ಟ್ರ್ಯಾಕ್ಟರ್ ಟ್ರಾಲಿ, ಪಿಕಪ್ ವಾಹನ ಹಾಗೂ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ರವಾನಿಸಬೇಕಾಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಅಸ್ವಸ್ಥಗೊಂಡವರನ್ನ ಗುರುತಿಸಿ ಜಿಲ್ಲಾಸ್ಪತ್ರೆಗೆ ಕರೆತರಲು ತಂಡವನ್ನ ನಿಯೋಜಿಸಲಾಗಿದೆ. ಮತ್ತೆರಡು ಖಾಸಗಿ ಆಸ್ಪತ್ರೆಗಳು ಕೂಡ ನೆರವು ನೀಡಿದ್ದು, ಹಲವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ತೇಜಸ್ವಿ ಎಸ್ ನಾಯ್ಕ್ ಹೇಳಿದ್ದಾರೆ.

    ಘಟನೆಗೆ ಕಾರಣವೇನೆಂಬುದನ್ನ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

  • ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

    ಕೋಲಾರ: ಇಂದು ಮಹಾಶಿವರಾತ್ರಿ. ರಾಜ್ಯದೆಲ್ಲೆಡೆ ಶಿವನ ನಾಮ ಜಪ, ವ್ರತಾಚರಣೆಯಲ್ಲಿ ಜನರು ತೊಡಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಕೋಲಾರದ ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರಗಳನ್ನ ಮಾಡಲಾಗಿದೆ.

    ಶಿವನ ನಾಮ ಸ್ಮರಿಸಿ ಕೋಟಿ ಶಿವಲಿಂಗ ದರ್ಶನ ಪಡೆದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಂದು ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಕ್ತರು ಆಗಮಿಸಿ, ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಿಸುತ್ತಾರೆ. ರಾತ್ರಿಯಿಂದ ವ್ರತಾಚರಣೆ ಮಾಡಿ, ನಂತರ ಇಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಹಬ್ಬ ಆಚರಣೆ ಮಾಡೋದು ಇಲ್ಲಿನ ವಿಶೇಷ.

    ಮತ್ತೊಂದು ವಿಶೇಷತೆ ಅಂದ್ರೆ 108 ಅಡಿ ಶಿವಲಿಂಗ ಹಾಗೂ ಬೃಹದಾಕಾರದ ಬಸವ ಮೂರ್ತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾವಿರಾರು ಜನ ಕೋಟಿಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಾರೆ.

  • ಶಿವರಾತ್ರಿಗೆ ಇಲ್ಲಿದೆ ಗ್ರಾಹಕರಿಗೊಂದು ಗುಡ್ ನ್ಯೂಸ್

    ಶಿವರಾತ್ರಿಗೆ ಇಲ್ಲಿದೆ ಗ್ರಾಹಕರಿಗೊಂದು ಗುಡ್ ನ್ಯೂಸ್

    ಬೆಂಗಳೂರು: ಶಿವರಾತ್ರಿ ಹಬ್ಬಕ್ಕೆ ಗ್ರಾಹಕರಿಗೊಂದು ಗುಡ್ ನ್ಯೂಸ್ ಇಲ್ಲಿದೆ. ಹಬ್ಬಕ್ಕಾಗಿ ರೈತರು ಕೊಡುಗೆ ನೀಡಿದ್ದು, ಹಾಪ್‍ ಕಾಮ್ಸ್ ನಲ್ಲಿ ತರಕಾರಿಗಳನ್ನ ಕೇವಲ ಹತ್ತು ರೂಪಾಯಿಗೆ ನೀಡಲಾಗ್ತಿದೆ.

    ಶಿವರಾತ್ರಿಗೆ ಹಾಪ್‍ ಕಾಮ್ಸ್ ಈ ಸ್ಪೆಷಲ್ ಆಫರ್ ನೀಡಿದೆ. ಅಗ್ಗದ ದರದಲ್ಲಿ ತರಕಾರಿಗಳು ಸಿಗಲಿವೆ. ಮೂಲಂಗಿ, ಎಲೆಕೋಸು ಟೊಮೇಟೋ, ಸೌತೆಕಾಯಿ, ಬೀಟ್‍ರೂಟ್ ಗೆ 10 ರೂಪಾಯಿ. ಬೀನ್ಸ್, ಕ್ಯಾರೆಟ್, ತೊಂಡೆಕಾಯಿ, ಆಲೂಗಡ್ಡೆ, ತೆಂಗಿನಕಾಯಿ ಇಪ್ಪತ್ತು ರೂಪಾಯಿ.

    ಪುದೀನಾ, ಕೊತ್ತಂಬರಿ ಸೊಪ್ಪು, ಬಸಳೆ ಸೊಪ್ಪು ಏನೇ ತಗೊಂಡ್ರು ಬರೀ ಹತ್ತು ರೂಪಾಯಿ. ಭಾನುವಾರ ಹಾಗೂ ಸೋಮವಾರ ಹಬ್ಬದ ಪ್ರಯುಕ್ತ ಈ ಬಂಪರ್ ಆಫರ್ ನೀಡಲಾಗಿದೆ.

    ಹಬ್ಬದಂದು ರೈತರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರು ಹೆಚ್ಚು ತರಕಾರಿ, ಸೊಪ್ಪು ಖರೀದಿಸಬಹುದಾಗಿದೆ.

  • ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಚಾಮರಾಜನಗರ: ಕೊಳ್ಳೆಗಾಲ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವೈಭವದ ಶಿವರಾತ್ರಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.

    ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಮೂಹವೇ ಹರಿದು ಬಂದಿತ್ತು. ‘ಉಘೇ ಮಾದಪ್ಪ ಉಘೇ ಮಾದಪ್ಪ’ ಎಂಬ ಉದ್ಗೋಷವನ್ನು ಹೇಳುತ್ತಾ ಭಕ್ತರು ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದರು.

    ಜಾತ್ರೆಯ ಸಂಭ್ರಮ ಸಡಗರವನ್ನು ಡ್ರೋನ್ ಕ್ಯಾಮರಾ ದಲ್ಲಿ ಸೆರೆಹಿಡಿಯಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ರಾತ್ರಿ ಮತ್ತು ಹಗಲಿನಲ್ಲಿ ಜಾತ್ರೆಯ ಸೌಂದರ್ಯ ಹೇಗಿರುತ್ತದೆ ಎನ್ನುವುದನ್ನು ನೀವೇ ನೋಡಿ.

    https://www.youtube.com/watch?v=Hpcx0MtV_sk

  • ಶಿವರಾತ್ರಿಯಂದು ಮೋದಿಯ ಫೋಟೋ ಹಾಕಿ ಟ್ವೀಟ್ ಮಾಡಿದ್ದ ಯುವತಿಗೆ ಪ್ರಧಾನಿಯಿಂದಲೇ ಸಿಕ್ತು ಭರ್ಜರಿ ಗಿಫ್ಟ್!

    ಶಿವರಾತ್ರಿಯಂದು ಮೋದಿಯ ಫೋಟೋ ಹಾಕಿ ಟ್ವೀಟ್ ಮಾಡಿದ್ದ ಯುವತಿಗೆ ಪ್ರಧಾನಿಯಿಂದಲೇ ಸಿಕ್ತು ಭರ್ಜರಿ ಗಿಫ್ಟ್!

    ನವದೆಹಲಿ: ಗಣ್ಯ ವ್ಯಕ್ತಿಗಳಿಗೆ, ಸಿನಿಮಾ ನಟ ನಟಿಯರಿಗೆ ನಾವು ಕಳಿಸುವ ಸಂದೇಶ ಅಥವಾ ಟ್ವಿಟ್ಟರ್‍ನಲ್ಲಿ ಮಾಡುವ ಟ್ವೀಟ್‍ಗಳು ಅವರನ್ನು ನಿಜಕ್ಕೂ ತಲುಪುತ್ತವೋ ಇಲ್ಲವೋ ಎಂಬ ಬಗ್ಗೆ ಸರಿಯಾಗಿ ಗೊತ್ತಾಗುವುದಿಲ್ಲ. ಆದ್ರೆ ಪ್ರಧಾನಿ ಮೋದಿ ಯುವತಿಯೊಬ್ಬರ ಟ್ವೀಟ್‍ಗೆ ಸ್ಪಂದಿಸಿದ್ದಲ್ಲದೆ ಅವರು ಕೇಳಿದ್ದನ್ನ ಉದಾರ ಮನಸ್ಸಿನಿಂದ ನೀಡಿದ್ದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ.

    ಶುಕ್ರವಾರದಂದು ಮಹಾಶಿವರಾತ್ರಿಯ ಪ್ರಯುಕ್ತ ಪ್ರಧಾನಿ ಮೋದಿ ಇಶಾ ಫೌಂಡೇಷನ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು ತಮಿಳುನಾಡಿನ ವೆಲ್ಲಯಂಗಿರಿ ಪರ್ವತದ ತಪ್ಪಲಿನಲ್ಲಿ ನಿರ್ಮಿಸಿದ 112 ಅಡಿ ಉದ್ದದ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ರು. ಈ ವೇಳೆ ಮೋದಿ ಶಿವನ ಚಿತ್ರವಿದ್ದ ಶಾಲ್‍ವೊಂದನ್ನು ಧರಿಸಿದ್ರು. ಶಿಲ್ಪಿ ತಿವಾರಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಕಾರ್ಯಕ್ರಮದ ಒಂದು ಫೋಟೋವನ್ನ ಹಾಕಿ ನನಗೆ ಆ ಸ್ಟೋಲ್(ಶಾಲ್) ಬೇಕು ಎಂದು ಟ್ವೀಟ್ ಮಾಡಿದ್ದರು. ಆಕೆ ಆ ಶಾಲ್ ನೋಡಿ ತುಂಬಾ ಚೆನ್ನಾಗಿದೆ ನನಗೂ ಇಂತಹದ್ದೊಂದು ಬೇಕಲ್ಲಾ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ರೋ ಏನೋ ಗೊತ್ತಿಲ್ಲ. ಆದ್ರೆ ಮರುದಿನ ಬೆಳಿಗ್ಗೆ ಮೋದಿ ಧರಿಸಿದ್ದ ಅದೇ ಶಾಲ್ ಶಿಲ್ಪಿ ತಿವಾರಿ ಅವರ ಮನೆ ತಲುಪಿತ್ತು. ಇದರ ಜೊತೆ ಪ್ರಧಾನಿ ಮೋದಿ ಅವರ ಸಹಿ ಇದ್ದ ಒಂದು ಪತ್ರ ಕೂಡ ಜೊತೆಗಿತ್ತು.

    ಇದರಿಂದ ಆಶ್ಚರ್ಯಗೊಂಡ ಶಿಲ್ಪಿ ತನ್ನ ಖುಷಿಯನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ನಾನು ಈ ಶಾಲ್ ಬೇಕು ಎಂದು ಟ್ವೀಟ್ ಮಾಡಿದ್ದಕ್ಕೆ ಮೋದಿ ಅವರು ನನಗೆ ಈ ಆಶೀರ್ವಾದ ಕಳಿಸಿದ್ದಾರೆ. ನಾನೇನು ಕನಸು ಕಾಣ್ತಿದ್ದೀನಾ? ಶಾಲ್ ಜೊತೆಗೆ ಅವರ ಸಹಿ ಇರುವ ಪತ್ರವೂ ಬಂದಿದೆ. ಪ್ರಧಾನಿಯೊಬ್ಬರು ನಿಮ್ಮ ದನಿಗೆ ಓಗೊಟ್ಟಿದ್ದಲ್ಲದೆ ಅದಕ್ಕೆ ಸ್ಪಂದನೆ ಕೂಡ ಮಾಡ್ತಾರೆ ಅನ್ನೋದನ್ನ ಊಹಿಸಬಲ್ಲಿರಾ? ನಾನು ನಿಜಕ್ಕೂ ಆಶ್ಚರ್ಯಚಕಿತಳಾಗಿದ್ದೇನೆ. ನಾನು ಖುಷಿಯಿಂದ ಮಂಜುಗಟ್ಟಿದಂತಾಗಿದ್ದೇನೆ. ಹೇಗೆ ಪ್ರತಿಕ್ರಿಯಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ಅಂತ ಶಿಲ್ಪಿ ಹೇಳಿದ್ದಾರೆ.

    ಶಿಲ್ಪಿ ಅವರಿಗೆ ಪ್ರಧಾನಿ ಮೋದಿಯೇ ತಾವು ಧರಿಸಿದ್ದ ಶಾಲನ್ನು ಕಳಿಸಿದ್ದಾರೆ ಎಂದು ತಿಳಿದ ಮೇಲೆ ಟ್ವಿಟ್ಟರಿಗರು ಕೂಡ ಅಚ್ಚರಿ ಪಡ್ತಿದ್ದಾರೆ.

    ಇದನ್ನೂ ಓದಿ: ವಿಶ್ವದ ಅತಿದೊಡ್ಡ ಶಿವನ ಪ್ರತಿಮೆ ಲೋಕಾರ್ಪಣೆ