Tag: shivarame gowda

  • ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.

    ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.

    ಸಿದ್ದರಾಮಯ್ಯಗೆ ಟಾಂಗ್:
    ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
    ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.

  • ಶಿವರಾಮೇಗೌಡ ಮಂಡ್ಯದ ಗೌರವ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್ ಕಿಡಿ

    ಶಿವರಾಮೇಗೌಡ ಮಂಡ್ಯದ ಗೌರವ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್ ಕಿಡಿ

    – ಸಂಸದರ ವಿರುದ್ಧ ಕ್ರಮಕೈಗೊಳ್ಳುತ್ತೇನೆ
    – ಮೋದಿ ಜಿಯೋ ಅಂಬಾಸಿಡರ್
    – ಕುಟುಂಬ ರಾಜಕಾರಣ ಜಗತ್ತಿನ ವಿಶೇಷ
    – ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ
    – ಬೋಫೋರ್ಸ್ ಹಗರಣದಿಂದ ಕಾಂಗ್ರೆಸ್ ಬಿತ್ತು, ರಫೇಲ್‍ನಿಂದ ಬಿಜೆಪಿ ಬೀಳುತ್ತೆ

    ಬೆಂಗಳೂರು: ಸಂಸದ ಶಿವರಾಮೇಗೌಡ ಅವರು ಮಂಡ್ಯದಲ್ಲಿ ಜಾತಿ ಬಗ್ಗೆ ಪ್ರಸ್ತಾಪ ಮಾಡಬಾರದಿತ್ತು. ಈ ಮೂಲಕ ಸಂಸದರು ತಮ್ಮ ಹೇಳಿಕೆ ಮೂಲಕ ಮಂಡ್ಯದ ಗೌರವ ಹಾಳು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಆದರೂ ಅವರು ಯಾವತ್ತೂ ಜಾತಿವಾದ ಮಾಡಿಲ್ಲ. ಸಂಸದರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸುಮಲತಾ ಅಂಬರೀಶ್ ಮಂಡ್ಯದ ಸೊಸೆ. ಅಂಬರೀಶ್ ಹೆಂಡತಿ. ಅವರ ಬಗ್ಗೆ ಯಾರು ಜಾತಿ ವಿಚಾರದಲ್ಲಿ ಮಾತನಾಡಬಾರದು ಎಂದು ತಿಳಿಸಿದರು.

    ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾದ ಬಳಿಕ ಸಂಭ್ರಮಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಆರೋಗ್ಯ ಸರಿಯಿಲ್ಲದ ಕಾರಣ ನನಗೆ ಬಿಡುಗಡೆ ಕೊಡಿ ಅಂತ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಕೇಳಿಕೊಂಡೆ. ಆದರೆ ಅವರು ಒಪ್ಪಲಿಲ್ಲ. ನೀವೇ ಮುಂದುವರಿಯಬೇಕು ಎಂದು ಹೇಳಿದರು. ಹೀಗಾಗಿ ನಾನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವೆ ಎಂದರು.

    ದೇಶದಲ್ಲಿ ಲೋಕಸಭಾ ಚುನಾವಣೆ ಜೋರಾಗಿ ನಡೆಯುತ್ತಿದೆ. ಜನತಂತ್ರ ವ್ಯವಸ್ಥೆಯ ಜಾತ್ರೆ ದೇಶದಲ್ಲಿ ನಡೆಯುತ್ತಿದೆ. ಈ ಚುನಾವಣೆ ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ಬಹುತ್ವದ ಬಗೆಗಿನ ನಡುವಿನ ಸಂಘರ್ಷವಾಗಿದೆ. ನಕಲಿ ರಾಷ್ಟ್ರವಾದಿ ಬಿಜೆಪಿಯನ್ನು ಹೊಗಳಿದವರು ದೇಶಪ್ರೇಮಿಗಳು. ಇಲ್ಲ ಅಂದ್ರೆ ಅವರು ದೇಶ ವಿರೋಧಿಗಳು. ಇಂತಹ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಅವರು ದೇಶಕ್ಕೆ ಕೊಟ್ಟ ವಚನ ಏನಾಯಿತು? ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. ಹೀಗೆ ಪ್ರಶ್ನೆ ಮಾಡಿದರೆ ಅವರು ದೇಶ ವಿರೋಧಿಗಳಾಗುತ್ತಾರೆ. ಹೀಗಾಗಿ ಬಿಜೆಪಿ ನಕಲಿ ರಾಷ್ಟ್ರವಾದಿ ಎಂದು ಹೇಳಿದರು.

    ಪ್ರಧಾನಿ ಮೋದಿ ಅವರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈ ಮೂಲಕ ಅವರು 5 ವರ್ಷಗಳಲ್ಲಿ 10 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈವರೆಗೆ ಕೇವಲ 27 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಬಿಎಸ್‍ಎನ್‍ಎಲ್ ಸಂಸ್ಥೆ ಇವತ್ತು ಅವನತಿ ಹೊಂದುತ್ತಿದೆ. ಈ ಮೂಲಕ ಅಲ್ಲಿನ 50 ಸಾವಿರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಖಾಸಗಿ ಕಂಪನಿ ಜಿಯೋಗೆ ಅಂಬಾಸಿಡರ್ ಆಗಿದ್ದಾರೆ ಎಂದು ದೂರಿದರು.

    ಕುಟುಂಬ ರಾಜಕಾರಣ ಜಗತ್ತಿನ ವಿಶೇಷವಾಗಿದೆ. ಈಗಿನ ಲೋಕಸಭೆಯ ಸಂಸದರಲ್ಲಿ ಸುಮಾರು 150 ಜನ ಕುಟುಂಬ ರಾಜಕಾರಣದಿಂದಲೇ ಬಂದಿದ್ದಾರೆ. ಬಿಹಾರದ ಆರ್‍ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹಾಗೂ ಉತ್ತರ ಪ್ರದೇಶದಲ್ಲಿ ಎಸ್‍ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ 5ರಿಂದ 6 ಜನರು ಸ್ಪರ್ಧಿಸುತ್ತಿದ್ದಾರೆ. ಒಂದೇ ಕುಟುಂಬದಿಂದ ಮೂರು ಜನ ಸ್ಪರ್ಧಿಸುವುದು ತಪ್ಪೇ? ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಅಭ್ಯರ್ಥಿ ಅಂತಾನೆ ಮಂಡ್ಯ ಲೋಕಸಭಾ ಕಣಕ್ಕೆ ಇಳಿಸಿದ್ದೇವೆ ಎಂದು ಹೇಳಿದರು.

    ಜನ್ ಧನ್ ಅಕೌಂಟ್ ಇವತ್ತು ಜಿರೋ ಬ್ಯಾಲೆನ್ಸ್ ಆಗಿಯೇ ಇದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಯೋಜನಾ ಆಯೋಗ ಜಾರಿಗೆ ತಂದಿದ್ದರು. ಅದರೆ ಅದನ್ನು ಪ್ರಧಾನಿ ಮೋದಿ ತೆಗೆದು ಹಾಕಿ, ನೀತಿ ಆಯೋಗ ತಂದರು. ಆದರೆ ಇಂದು ನೀತಿ ಆಯೋಗ ಏನಾಗಿದೆ? ಅದನ್ನು ಕೂಡ ಮೋದಿ ಹಾಳು ಮಾಡಿದ್ದಾರೆ ಎಂದು ದೂರಿದರು.

    ಯುದ್ಧ ಭಾರತಕ್ಕೆ ಹೊಸದೇನಲ್ಲ. ಅನೇಕ ಯುದ್ಧಗಳನ್ನು ಭಾರತ ನೋಡಿದೆ. ಆದರೆ ಬಿಜೆಪಿಯವರು ಯುದ್ಧವನ್ನೇ ದೊಡ್ಡ ವಿಚಾರವಾಗಿ ಮಾಡಿಕೊಂಡರು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರೇ ನೇರವಾಗಿ ಪಾಕಿಸ್ತಾನಕ್ಕೆ ಹೋಗಿ ಉಗ್ರರನ್ನು ಹೊಡೆದು ಬಂದಿದ್ದಾರೆ ಎನ್ನುವಂತೆ ಬಿಂಬಿಸಲಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದರು. ಇದು ಯಾಕೆ ನಿಮಗೆ ನೆನಪು ಬರುತ್ತಿಲ್ಲ. ಯುದ್ಧದ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ ಕಿಡಿಕಾರಿದರು.

    ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಅಂದಿದ್ದರು. ಆದರೆ ರಫೇಲ್ ಡೀಲ್‍ನಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ರಫೇಲ್ ಡೀಲ್‍ನ ಕಡತಗಳೇ ನಾಪತ್ತೆಯಾಗಿವೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಬೇಕಾ ಎಂದು ಪ್ರಶ್ನಿಸಿದರು.

    2014ರಲ್ಲಿ ನರೇಂದ್ರ ಮೋದಿ ಬಗ್ಗೆ ಜನ ಅಭಿಮಾನ, ನಂಬಿಕೆ ಇಟ್ಟುಕೊಂಡು ಬಹುಮತ ಕೊಟ್ಟಿದ್ದರು. ಬೋಫೋರ್ಸ್ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದ ಇತಿಹಾಸವಿದೆ. ಹಾಗೆ ರಫೇಲ್ ಡೀಲ್‍ನ ಹಗರಣದಿಂದ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ರೈತರ ಪರ ಕೆಲಸ ಮಾಡುತ್ತಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ಮರೆತಿದೆ. ರೈತರ ಖಾತೆಗೆ ಎರಡು ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಎಷ್ಟೇ ಕಷ್ಟ ಇದ್ದರು ಸಾಲಮನ್ನಾ ಜಾರಿಗೆ ತಂದಿದ್ದಾರೆ ಎಂದರು.

    ನಮ್ಮದು ಪ್ರಾದೇಶಿಕ ಪಕ್ಷ. ದೇಶಕ್ಕೆ ಪ್ರಧಾನಿಯನ್ನ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ನಾವು ಆದ್ಯತೆ ನೀಡುತ್ತೇವೆ ಎಂದು ವಿಶ್ವನಾಥ್ ಹೇಳಿದರು.

  • ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಮಂಡ್ಯ: ಜೆಡಿಎಸ್ ವಿರುದ್ಧ ಮುಗಿಬೀಳುತ್ತಿರೋ ಸುಮಲತಾ ವಿರುದ್ಧ ಸಂಸದ ಶಿವರಾಮೇಗೌಡ ಕಿಡಿಕಾರಿದ್ದಾರೆ.

    ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯ ಗೌಡ್ತಿಯೇ ಎಂದು ಪ್ರಶ್ನಿಸಿ ಮತ್ತೆ `ಗೌಡ್ತಿ’ ಹೇಳಿಕೆಯನ್ನು ಕೆಣಕಿದ್ದಾರೆ.

    ಗೌಡ್ತಿ ಹೇಳಿಕೆ ನೀಡಿ ಭಾರೀ ವಿರೋಧಕ್ಕೆ ಗುರಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸಮ್ಮುಖದಲ್ಲೆ ಸುಮಲತಾ ಮಂಡ್ಯ ಗೌಡ್ತಿಯಲ್ಲ ಎಂದು ಸಂಸದರು ಗುಡುಗಿದ್ದಾರೆ. ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ ಅಂದ್ರು. ಇದನ್ನೂ ಓದಿ: ಅಂಬಿ ಫ್ಯಾನ್ಸ್, ಜೆಡಿಎಸ್ ನಡುವೆ ಗೌಡ್ತಿ ಫೈಟ್!- ವೈರಲ್ ಆಯ್ತು ಸಿಎಂ ತೆಲಗು ಸಂದರ್ಶನ

    ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇ ಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸುರೇಶ್‍ಗೌಡ ಕರೆ ತಂದ ರಮ್ಯರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ಸುವಲತಾ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

  • ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಮಂಡ್ಯ: ಕರ್ನಾಟಕ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಜಿಲ್ಲೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವನ್ನು ಸಾಧಿಸಿದೆ.

    ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್.ಆರ್ ಶಿವರಾಮೇಗೌಡರು ಸ್ಪಧಿಸಿದ್ದರು. ಇನ್ನೂ ಬಿಜೆಪಿಯಿಂದ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸ್ಪರ್ಧಿಸಿದ್ದು, ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎಲ್. ಆರ್.ಶಿವರಾಮೇಗೌಡ 3,24,925 ಮತಗಳ ಅಂತರದಲ್ಲಿ ದಾಖಲೆಯ ಗೆಲವುವನ್ನು ಸಾಧಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಜೆಡಿಎಸ್ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ 5,69,302 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ 2,44,377 ಮತಗಳನ್ನು ಗಳಿಸಿದ್ದಾರೆ. ಇವರಿಬ್ಬರ ಮಧ್ಯೆ 3,24,925 ಮತಗಳ ಅಂತರವಿದ್ದು ಈ ಮೂಲಕ ಮಾಜಿ ಸಂಸದ ಅಂಬರೀಶ್ ಅವರ ಗೆಲುವಿನ ದಾಖಲೆಯನ್ನು ಶಿವರಾಮೇಗೌಡ ಮುರಿದಿದ್ದಾರೆ.

    ಪಕ್ಷೇತರ ಅಭ್ಯರ್ಥಿಗಳು ಪಡೆದ ಮತ ವಿವರ:
    ಎಂ.ಹೊನ್ನೇಗೌಡ 17,842, ಜಿ.ಬಿ.ನವೀನ್ ಕುಮಾರ್ 15,305, ಕೌಡ್ಲೆ ಚನ್ನಪ್ಪ 9,094, ಕೆ.ಎಸ್.ರಾಜಣ್ಣ 7,421, ಶಂಭೂಲಿಂಗೇಗೌಡ 5,483, ಬಿ.ಎಸ್.ಗೌಡ 4,086 ಮತ್ತು ನಂದೀಶ್ 4,064 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ 15,478 ಮತಗಳು ನೋಟಾ ಚಲಾವಣೆಯಾಗಿದೆ. ಈ ಬಾರಿ ಮಂಡ್ಯದ ಉಪಚುನಾವಣೆಯಲ್ಲಿ ಒಟ್ಟು 8,92,452 ಮಂದಿ ಮತದಾನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಮಂಡ್ಯ: ಮಂಡ್ಯದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ಜೆಡಿಎಸ್ ಶಿವರಾಮೇಗೌಡ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರಿಗೂ ಸೇರಿದ್ದಾಗಿದೆ. ಚೆಲುವರಾಯಸ್ವಾಮಿ ಆದಿಯಾಗಿ ಎಲ್ಲರ ಶ್ರಮದ ಗೆಲುವು ಇದಾಗಿದೆ. ಇದನ್ನು ಅಂತರ ಎಂದು ನಾವು ಅಂದುಕೊಂಡಿಲ್ಲ. ಎರಡು ಪಕ್ಷಗಳು ಸೇರಿ ಹೆಚ್ಚಿನ ಗೆಲುವು ಬೇಕಿತ್ತು. ಶೇ.75 ರಷ್ಟು ಓಟ್ ಆಗಿದ್ರೆ ಇನ್ನೂ ಅಂತರದ ಗೆಲುವು ಸಿಗುತಿತ್ತು ಎಂದು ಹೇಳಿದರು.

    ಈ ಗೆಲುವು ನನ್ನದಲ್ಲ. ನಮ್ಮ ಪಕ್ಷದ್ದು, ಮೈತ್ರಿ ಸರ್ಕಾರದ್ದು, 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವರ ಆಶಿರ್ವಾದ ಇರಲಿಲ್ಲ. ನಾಯಕರು ಅಧಿಕಾರ ಇಲ್ಲ ಎಂದು ಟಿಕೆಟ್ ಕೊಡಿಸಿದರು. ಜನರ ಒಲವಿಗೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇನೆ. ಈ ಚುನಾವಣೆಗೆ ಮಾತ್ರ ಟಿಕೆಟ್ ಎಂದಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಸಂಸದರಾಗಿ ಇಡೀ ರಾಜ್ಯ, ದೇಶ ಮಾಡದೇ ಇರುವಂತಹ ಕೆಲಸವನ್ನು ನಮ್ಮ ದೇವೇಗೌಡರು ಮಾಡಿಕೊಂಡು ಬಂದಿದ್ದಾರೆ. ಅವರು ಮುಂದೆ ಹೋದರೆ ಅವರೊಂದಿಗೆ ಬ್ಯಾಗ್ ಹಿಡಿದುಕೊಂಡು ಅವರೊಂದಿಗೆ ಹಿಂದೆ ಹೋಗುತ್ತೇನೆ. ಅವರು ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ ಅವೆಲ್ಲಾ ನಮ್ಮ ಕಾರ್ಯಕ್ರಮ ಎಂದು ತಿಳಿಸಿದರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರ ಕುರಿತು ಮಾತನಾಡಿದ ಅವರು ಮಂಡ್ಯ ಜನರ ಜ್ವಲಂತ ಸಮಸ್ಯೆ ಬಗೆಹರಿಸಲು ಗಮನ ಹರಿಸುತ್ತೇನೆ. ನಮ್ಮ ಜಿಲ್ಲಾ ಮಂತ್ರಿಗಳೊಂದಿಗೆ ಸೇರಿ ಶಾಸಕರೊಂದಿಗೆ ಸೇರಿ ಜನರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ದೀಪಾವಳಿ ಹಬ್ಬದಂದು ನೀಡಿದ ಸಿಹಿಯನ್ನು ಅವರ ಸೇವೆಗೆ ಮೀಸಲಿಡುತ್ತೇನೆ. ಪಕ್ಷದ ಮತ್ತು ಮೈತ್ರಿ ಪಕ್ಷದ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆ

    ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆ

    ಮಂಡ್ಯ: ಇಂದು ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ.

    ಉಪಚುನಾವಣೆ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರು ಒಂದೇ ದಿನ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅದೃಷ್ಟ ಸಂಖ್ಯೆ ಆಧರಿಸಿ ನಾಲ್ಕು ನಾಮಪತ್ರ ಸಲ್ಲಿಸಿರಬಹುದು ಎಂದು ಮಂಡ್ಯದಲ್ಲಿ ಚರ್ಚೆಯಾಗುತ್ತಿದೆ. ಶಿವರಾಮೇಗೌಡ ಅವರು ನಾಲ್ಕು ನಾಮಪತ್ರ ಸಲ್ಲಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಎರಡು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಇಂದು ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿವೆ. ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರು 4 ನಾಮ ಪತ್ರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ. ಸಿದ್ದರಾಮಯ್ಯ ಅವರು 1 ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನವೀನ್ ಕುಮಾರ್ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.

    ಕರ್ನಾಟಕದಲ್ಲಿ ಎರಡು ಪಕ್ಷ ಒಗ್ಗಟ್ಟಾಗಿ ಸರ್ಕಾರ ನಡೆಸುತ್ತಿದೆ. ಹಾಗೆಯೇ ಮಂಡ್ಯದಲ್ಲೂ ಎಲ್ಲರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಒಗ್ಗಟ್ಟಿನಲ್ಲಿ ಚುನಾವಣೆ ಮಾಡುತ್ತೇವೆ ಎಂದು ಎಲ್.ಆರ್. ಶಿವರಾಮೇಗೌಡ ಅವರು ಹೇಳಿದ್ದಾರೆ.

    ಶಿವರಾಮೇಗೌಡ ಅವರು ನಾಮಪತ್ರ ಸಲ್ಲಿಕೆಗೂ ಮುನ್ನಾ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿರುವ ಕಾಲಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದರು. ಅಲ್ಲಿ ಕುಟುಂಬ ಸಮೇತರಾಗಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳ ಮುಂದೆ ಬಿಫಾರಂಗೆ ಪೂಜೆ ಮಾಡಿಸಿ ನಂತರ ನಾಮಪತ್ರ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಶಾಸಕ ಶಿವರಾಮೇಗೌಡರ ಮಗ್ಳ ಮದುವೆಗೆ ಮಂಡ್ಯದಿಂದ 216 KSRTC ಬಸ್!

    ಮಾಜಿ ಶಾಸಕ ಶಿವರಾಮೇಗೌಡರ ಮಗ್ಳ ಮದುವೆಗೆ ಮಂಡ್ಯದಿಂದ 216 KSRTC ಬಸ್!

    ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಅವರ ಮಗಳ ಮದುವೆ ಇಂದು ನಡೆಯಲಿದೆ.

    ಬುಧವಾರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಮೇಗೌಡರ ಪುತ್ರಿ ಭವ್ಯ ಮತ್ತು ರಾಜೀವ್ ಮದುವೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಮಂಡ್ಯ ವಿಭಾಗದಿಂದ ಸುಮಾರು 216 ಕೆ ಎಸ್ ಆರ್ ಟಿಸಿ ಬಸ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಮಂಡ್ಯ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ಮದ್ದೂರು, ಚನ್ನರಾಯಪಟ್ಟಣ ಹಾಗೂ ತುರುವೆಕೆರೆ ಡಿಪೋಗಳಿಂದ ಬಸ್ ಗಳು ಇಂದು ಮುಂಜಾನೆ ಸುಮಾರು 5 ಗಂಟೆಯಿಂದಲೇ ಬೆಂಗಳೂರಿನತ್ತ ಹೊರಟಿವೆ. ಇನ್ನು ಬಸ್ ಗಳ ಜೊತೆ ನೂರಾರು ಕಾರುಗಳಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

    ನಾಗಮಂಗಲ ತಾಲೂಕಿನ ಹಳ್ಳಿಗಳಿಂದ ಮಗಳ ಮದುವೆಗೆ ಬರುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಸುಮಾರು 216 ಬಸ್ ನೀಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಇಂದು ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ ಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

    ಬಾಡಿಗೆ ಪಡೆದು ಏಕಕಾಲಕ್ಕೆ ಬೃಹತ್ ಪ್ರಮಾಣದ ಬಸ್ ಮದುವೆಗೆ ನೀಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಶಿವರಾಮೇಗೌಡರು ಇಲಾಖೆಯ ಲಾಭದ ಜೊತೆಗೆ ಸಾರ್ವಜನಿಕರ ಹಿತ ಮರೆತರಾ ಎಂಬ ಚರ್ಚೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಮಾಡಿಸಿದ್ದ ವಿಶೇಷ ಆಹ್ವಾನ ಪತ್ರಿಕೆ ಮಾದರಿಯಲ್ಲೇ ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಗೆ ವಿಡಿಯೋ ಹಾಡೊಂದನ್ನು ಮಾಡಿಸಿದ್ದಾರೆ. ಹಾಡು, ಡ್ಯಾನ್ಸ್, ಗೀತೆ ಸಂಯೋಜನೆಯೊಂದಿಗೆ ವಿಶೇಷ ಡಿಜಿಟಲೈಸ್ಡ್ ಚಿತ್ರೀಕರಣ ಮಾಡಲಾಗಿದೆ. ವಿಡಿಯೋದಲ್ಲಿ ಶಿವರಾಮೇಗೌಡರ ಕುಟುಂಬ ಸದಸ್ಯರು ಕಾಣಿಸಿಕೊಂಡಿದ್ದು, ಮದುವೆಗೆ ವಿಶೇಷ ಆಹ್ವಾನ ಕೋರಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=DFbodv3fXdw