Tag: shivaram karanth layout

  • 2 ಬಡಾವಣೆ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಅಕ್ರಮ ಕಟ್ಟಡ ಕಟ್ಟಲು ಆರಂಭಿಸಿದ ಭೂ ಮಾಲೀಕರು

    2 ಬಡಾವಣೆ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಅಕ್ರಮ ಕಟ್ಟಡ ಕಟ್ಟಲು ಆರಂಭಿಸಿದ ಭೂ ಮಾಲೀಕರು

    ಬೆಂಗಳೂರು: ಇರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಇರುವಾಗಲೇ ಬಿಡಿಎ (BDA) ಈಗ ಎರಡು ಪ್ರಮುಖ ಬಡಾವಣೆ ವಿಸ್ತರಣೆಗೆ ಮುಂದಾಗಿದೆ.

    ಹೌದು. ಕೆಂಪೇಗೌಡ ಬಡಾವಣೆ (Kempegowda Layout) ಮತ್ತು ಶಿವರಾಮ ಕಾರಂತ ಬಡಾವಣೆ (Shivaram Karanth Layout) ವಿಸ್ತರಣೆಗೆ ಮುಂದಾಗಿರುವ ಬಿಡಿಎ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿದೆ.

    ಈಗಾಗಲೇ ಶಿವರಾಮಕಾರಂತ ಬಡಾವಣೆಯಲ್ಲಿ 34,000 ಸಾಮಾನ್ಯ ಸೈಟ್‌ಗಳು ಮತ್ತು 4,500 ಕಾರ್ನರ್ ಸೈಟ್‌ಗಳೊಂದಿಗೆ 3,546 ಎಕರೆ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಇದು ದೊಡ್ಡಬಳ್ಳಾಪುರ (Doddaballapura) ಮತ್ತು ಹೆಸರಘಟ್ಟ (Hesaraghatta) ನಡುವಿನ 17 ಹಳ್ಳಿಗಳನ್ನು ವ್ಯಾಪಿಸಿದೆ. ಈ ವರ್ಷದ ಆರಂಭದಲ್ಲಿ ಬಿಡಿಎ ಹೆಚ್ಚುವರಿಯಾಗಿ 2,095 ಎಕರೆಗಳಷ್ಟು ಬಡಾವಣೆಯನ್ನು ವಿಸ್ತರಿಸಲು ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

     

    ಇದೇ ಮಾದರಿಯಲ್ಲಿ ಕೆಂಪೇಗೌಡ ಬಡಾವಣೆಯನ್ನ ವಿಸ್ತರಣೆ ಮಾಡುತ್ತಿದೆ. ಬಿಡಿಎ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಿದೆ ಎಂದು ತಿಳಿದು ಭೂ ಮಾಲೀಕರು ಅಕ್ರಮವಾಗಿ ಕಟ್ಟಡವನ್ನ ಕಟ್ಟಲು ಮುಂದಾಗುತ್ತಿದ್ದಾರೆ. ಇದನ್ನು  ತಡೆಯಲು ಬಿಡಿಎ ವಿದ್ಯುತ್ ಕಡಿತಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದೆ.

    ಒಟ್ಟಾರೆ ಎರಡು ಬಡಾವಣೆಗಳಲ್ಲೂ ಸಾವಿರಾರು ಎಕರೆಯಲ್ಲಿ ಸೈಟ್ ನಿರ್ಮಾಣಕ್ಕೆ ಮುಂದಾಗಿದೆ. ವಿಸ್ತರಣಾ ಕಾರ್ಯ ಶುರುವಾಗಿದ್ದು ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

     

  • ಬಿಡಿಎ ಬಡಾವಣೆ ಮಾಡಲು ಜಮೀನು ಕೊಟ್ಟವರ ಕುಂದುಕೊರತೆ ನಿವಾರಿಸಿ – ಡಿಕೆಶಿಗೆ ಸುರೇಶ್‌ ಕುಮಾರ್‌ ಪತ್ರ

    ಬಿಡಿಎ ಬಡಾವಣೆ ಮಾಡಲು ಜಮೀನು ಕೊಟ್ಟವರ ಕುಂದುಕೊರತೆ ನಿವಾರಿಸಿ – ಡಿಕೆಶಿಗೆ ಸುರೇಶ್‌ ಕುಮಾರ್‌ ಪತ್ರ

    ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ (Shivaram Karanth Layout) ನಿವೇಶನ ಹಂಚಿಕೆ ಕುರಿತು ಮಾಜಿ ಸಚಿವ ಸುರೇಶ್ ಕುಮಾರ್ (Suresh Kumar) ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಪತ್ರ ಬರೆದಿದ್ದಾರೆ. ಮೊದಲು ಹಲವು ಬಿಡಿಎ (BDA) ಬಡಾವಣೆಗಳ ಹಂಚಿಕೆದಾದರ ಕುಂದುಕೊರತೆಗಳನ್ನು ಸರಿಪಡಿಸುವಂತೆ ಡಿಸಿಎಂ ಡಿಕೆಶಿವಕುಮಾರ್‌ಗೆ ಆಗ್ರಹ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಬನಶಂಕರಿ ಆರನೇ ಹಂತ ಬಡಾವಣೆಯಲ್ಲಿ, ಬಿಡಿಎ ಅರಣ್ಯ ಪ್ರದೇಶದಲ್ಲಿ (ತುರಹಳ್ಳಿ ಅರಣ್ಯ ಪ್ರದೇಶ) ಮತ್ತು ಅರಣ್ಯ ಬಫರ್ ವಲಯದಲ್ಲಿ 2003 – 2004 ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರ ಫಲವಾಗಿ ಇಂದು 1500 ಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ತಮ್ಮ ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿರುವುದಿಲ್ಲ. 20 ವರ್ಷ ಕಳೆದು ಹೋಗಿದ್ದರೂ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಒಟ್ಟಿಗೆ ಕುಳಿತು ಚರ್ಚಿಸಿ ಪ್ರಸ್ತುತ ಭೂಮಿಯ ಮಾಲೀಕತ್ವದ ಬಗ್ಗೆ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ಇರುವುದು ನಿಜಕ್ಕೂ ವಿಷಾದನೀಯ. ಬಿಡಿಎಯಿಂದ ನಿವೇಶನ ಪಡೆದು 20 ವರ್ಷಗಳು ಆದರೂ ತಮ್ಮ ನಿವೇಶನದಲ್ಲಿ ಒಂದು ಗೂಡು ಕಟ್ಟಿಕೊಳ್ಳುವ ಈ ಎಲ್ಲಾ ಸಂತ್ರಸ್ತ ಹಂಚಿಕೆದಾರರ ಆಸೆಗೆ ಕಣ್ಣೀರು ಎರಚುವಂತೆ ಮಾಡಿದೆ ಬಿಡಿಎ ಉದಾಸೀನ – ಬೇಜಾವ್ದಾರಿ ಮನಸ್ಥಿತಿ. ಇದನ್ನೂ ಓದಿ: Wayanad landslides – ಕಂಬನಿ… ಖಾಲಿಯಾಗಿದೆ…!

     

    ಹಾಗೆಯೇ ಸ್ವಾಧೀನತೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ದಾವೆಗಳು ಬಾಕಿ ಇರುವುದರಿಂದ ಬನಶಂಕರಿ ಆರನೇ ಹಂತ, ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಹಾಗೂ ಅಂಜನಾಪುರ ದಂತಹ ಕೆಲವು ಬಿಡಿಎ ನಿರ್ಮಿತ ಬಡಾವಣೆಗಳಲ್ಲಿನ ಸುಮಾರು ಐದು ಸಾವಿರಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ಜಮೀನಿನ ನೈಜ ಸ್ವಾಧೀನದಲ್ಲಿಲ್ಲದ ಕಾರಣ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರ ಪರಿಸ್ಥಿತಿ, ಸಂಕಟ ಹೇಳತೀರದು. ಅಲ್ಲದೆ ಇಲ್ಲಿನ ಕೆಲವು ಲೇಔಟ್ ಗಳಲ್ಲಿ ಭೂ ಸ್ವಾಧೀನಕ್ಕೆ ಒಳಪಟ್ಟ ಅನೇಕ ಜಮೀನುಗಳ ಮಾಲೀಕರು ತಮ್ಮ ಭೂಮಿಗೆ ಬದಲಾಗಿ ಪರಿಹಾರದ ರೂಪದಲ್ಲಿ ಬಿಡಿಎ ನೀಡುವ ನಿವೇಶನಗಳ ಪರಿಹಾರದ ಮಂಜೂರಾತಿಗಾಗಿ ಅನೇಕ ಸಮಯದಿಂದ ಎದುರು ನೋಡುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಮೊದಲಿಗೆ ಬನಶಂಕರಿ ಆರನೇ ಹಂತ, ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಮತ್ತು ಅಂಜನಾಪುರ ದಂತಹ ಬಡಾವಣೆಗಳಲ್ಲಿ ನಿವೇಶನ ಹಂಚಿಕೆಯಾಗಿ ಬಿಡಿಎಗೆ ಹಣ ಪಾವತಿ ಮಾಡಿ ನಿವೇಶನ ನೋಂದಣಿ ಮಾಡಿಕೊಂಡರೂ ನಾನಾ ಕಾರಣಗಳಿಂದ ನಿವೇಶನ ಸ್ವಾಧೀನ ಸಿಗಲು ಸಾಧ್ಯವಾಗದೇ ಇರುವ ಅರ್ಜಿದಾರರ ಮತ್ತು ಭೂ ಮಾಲೀಕರ ಪರಿಪಾಟಲುಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇವರ ಕುಂದು ಕೊರತೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಲಭ್ಯವಿರುವ ನಿವೇಶನಗಳನ್ನು ಸಾರ್ವಜನಿಕರಿಂದ ಹಂಚಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸುವ ಮುನ್ನ ಮೊದಲಿಗೆ ಈ ಸಂತ್ರಸ್ತರಿಗೆ ಪರ್ಯಾಯ ನಿವೇಶನ ನೀಡಬೇಕಾಗಿರುವುದು ಸಮಂಜಸ. ಇದನ್ನೂ ಓದಿ: ಇಂದಿನಿಂದ 130 Kmph ವೇಗಕ್ಕಿಂತ ಜಾಸ್ತಿ ಸ್ಪೀಡ್‌ ಹೋದರೆ ದಂಡದ ಜೊತೆ ಜೈಲು!

    ಇವರಿಗೆ ಮೊದಲಿಗೆ ನ್ಯಾಯಯುತವಾಗಿ ನಿವೇಶನ ಒದಗಿಸಬೇಕೆಂಬುದು ನನ್ನ ಆಗ್ರಹ ಪೂರ್ವಕ ಬೇಡಿಕೆ ಕೂಡ ಆಗಿದೆ. ಬಿಡಿಎ ಪರ್ಯಾಯ ನಿವೇಶನಗಳನ್ನು ಒದಗಿಸುವ ಮೊದಲು ಈ ಎಲ್ಲಾ ಭೂಬಾಧಿತ ನಿವೇಶನ ಹಂಚಿಕೆದಾರದಿಂದ ಅರ್ಜಿಗಳನ್ನು ಆಹ್ವಾನಿಸಿ, ಇದಕ್ಕಾಗಿ ವ್ಯಾಪಕ ಪ್ರಚಾರವನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

    ಇದರಿಂದ ಬಿಡಿಎಗೆ ಹಂಚಿಕೆದಾರರ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ. ಜೊತೆಗೆ ಹಂಚಿಕೆದಾರರಿಂದ ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡುವುದನ್ನು ಪೂರ್ಣವಾಗಿ ನಿಲ್ಲಿಸಬಹುದು ಮತ್ತು ಈಗಾಗಲೇ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದು. ಹಂಚಿಕೆದಾರರ ಶಾಪದಿಂದಲೂ ಬಿಡಿಎ ವಿಮುಕ್ತಿಗೊಳ್ಳಬಹುದು.

  • ಶಿವರಾಮ ಕಾರಂತ್ ಬಡಾವಣೆಯ 300 ಕಟ್ಟಡಗಳು ಸಕ್ರಮ: ಸುಪ್ರೀಂ ಕೋರ್ಟ್‌ ಆದೇಶ

    ಶಿವರಾಮ ಕಾರಂತ್ ಬಡಾವಣೆಯ 300 ಕಟ್ಟಡಗಳು ಸಕ್ರಮ: ಸುಪ್ರೀಂ ಕೋರ್ಟ್‌ ಆದೇಶ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿರುವ ಡಾ. ಶಿವರಾಮ ಕಾರಂತ್ ಬಡಾವಣೆಯ ವ್ಯಾಪ್ತಿಯಲ್ಲಿ 03-08-2018ರ ಮುಂಚಿತವಾಗಿ ಸಾರ್ವಜನಿಕರು ನಿರ್ಮಾಣ ಮಾಡಿರುವ 300 ಕಟ್ಟಡಗಳನ್ನು ಸಕ್ರಮಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ತಿಳಿಸಿದರು.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರಂತ್ ಬಡಾವಣೆ ಕುರಿತು ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿ ಈವರೆಗೆ ಸುಮಾರು 6,200 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದೆ. ಅದರಲ್ಲಿ ಮೊದಲ ಹಂತದಲ್ಲಿ 300 ಕಟ್ಟಡಗಳ ದಾಖಲೆಗಳನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು, ಅದನ್ನು ಮಾನ್ಯ ಮಾಡಿರುವ ನ್ಯಾಯಪೀಠ ನಾಲ್ಕು ವಾರದೊಳಗಾಗಿ ಸಂಬಂಧಿಸಿದವರಿಗೆ ಹಕ್ಕುಪತ್ರ ವಿತರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್‌- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್‌ ಪತ್ತೆ!

    ಸಕ್ರಮಗೊಳಿಸಿರುವ ಈ 300 ಕಟ್ಟಡಗಳ ಮಾಲೀಕರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಕೂಡ ತಮ್ಮ (ಸುಪ್ರೀಂ ಕೋರ್ಟ್‌) ನೇತೃತ್ವದ ಸಮಿತಿಯ ಮಾರ್ಗದರ್ಶನದಲ್ಲಿ ನಡೆಸಬೇಕು ಎಂದು ಸೂಚಿಸಿದೆ. ಈಗಾಗಲೇ ಆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಪ್ರತಿಯೊಬ್ಬರಿಗೂ ನೇರವಾಗಿ ಅವರು ನೋಂದಾಯಿಸಿಕೊಂಡಿರುವ ಮೊಬೈಲ್‍ಗಳಿಗೆ ಹಕ್ಕುಪತ್ರ ವಿತರಣೆ ಕುರಿತು ಸಂದೇಶ ರವಾನಿಸಲು ಕ್ರಮ ಕೈಕೊಳ್ಳಲಾಗುವುದು ಎಂದರು.

    ನ್ಯಾಯಾಲಯದ ಆದೇಶದಂತೆ ಕಾರಂತ್ ಬಡಾವಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರು ತಮ್ಮ ದಾಖಲೆಗಳನ್ನು ನೇರವಾಗಿ ಸಲ್ಲಿಸಲು ಸಹಾಯವಾಗುವಂತೆ ಸಹಾಯ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಕುರಿತು ಈವರೆಗೆ ಸಾರ್ವಜನಿಕ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಾಗೂ ಮಾಧ್ಯಮಗಳ ಮೂಲಕ ಜಾಹೀರಾತು ನೀಡಲಾಗಿದೆ. ಸಮಿತಿಯು ಸಾರ್ವಜನಿಕರು ಸಲ್ಲಿಸಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ವೈಜ್ಞಾನಿಕವಾಗಿ ಶೇಖರಿಸಿಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ಮಾದಪ್ಪನ ಹಾಡನ್ನು ತೆಗೆದು ಹಾಕಿ: ಸಾಲೂರುಶ್ರೀ

    ಮೊದಲ ಹಂತದಲ್ಲಿ ಸಲ್ಲಿಸಿದ್ದ 300 ಕಟ್ಟಡಗಳನ್ನು ಸಕ್ರಮಗೊಳಿಸಿರುವ ನ್ಯಾಯಾಲಯಕ್ಕೆ ಪ್ರತಿ ತಿಂಗಳಿಗೊಮ್ಮೆ ಇಂತಿಷ್ಟು ಗುರಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ವೇಗವಾಗಿ ಅಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಮತ್ತು ಸಕ್ರಮವಾಗಿ ಕಟ್ಟಡ ಕಟ್ಟಿರುವ ಸಾರ್ವಜನಿಕರ ಹಿತ ಕಾಯಲಾಗುವುದು. ಸುಪ್ರೀಂ ಕೋರ್ಟ್‌ ನೀಡಿರುವ ಈ ಆದೇಶ ಅತ್ಯಂತ ಮಹತ್ತರವಾದದ್ದಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಕಾರಂತ್ ಬಡಾವಣೆ ಒಂದು ಅತ್ಯುತ್ತಮ ಬಡಾವಣೆಯಾಗಿ ರೂಪುಗೊಳ್ಳಲಿದ್ದು, ತಮ್ಮ ನೇತೃತ್ವದ ಸಮಿತಿ ಪ್ರತಿ ಹಂತದಲ್ಲೂ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಹೇಳಿದರು.

    ಕಾರಂತ್ ಬಡಾವಣೆಯ ಸಾರ್ವಜನಿಕರು ತಮ್ಮ ವ್ಯಾಜ್ಯಗಳ ಕುರಿತಂತೆ ಸಮಿತಿಯನ್ನು ನೇರವಾಗಿ ಭೇಟಿಯಾಗಬಹುದಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಡಿಸೆಂಬರ್ ತಿಂಗಳೊಳಗೆ ಮತ್ತೊಂದು ಆದೇಶವನ್ನು ಪಡೆಯುವ ಗುರಿ ನಿರೀಕ್ಷಿಸಲಾಗಿದೆ. ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಮೂರು ವಿಧಗಳಲ್ಲಿ ವಿಭಜಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು, ಸಕ್ಷಮವಲ್ಲದ ಸ್ಥಳೀಯ ಪ್ರಾಧಿಕಾರದಿಂದ (ಗ್ರಾಮ ಪಂಚಾಯಿತಿಗಳು) ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು ಹಾಗೂ ಯಾವುದೇ ಅನುಮತಿಯನ್ನು ಪಡೆಯದೇ ನಿರ್ಮಿಸಿರುವ ಕಟ್ಟಡಗಳೆಂದು ಗುರುತಿಸಲಾಗಿದೆ. ಪ್ರತಿ ದಾಖಲೆಗಳನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಎಲ್ಲರಿಗೂ ನ್ಯಾಯ ಒದಗಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರು ಸಮಿತಿಯ ಹೆಚ್ಚಿನ ಮಾಹಿತಿಗಾಗಿ https://jcc-skl.in/ ಗೆ ಭೇಟಿ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

    ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಜೈಕರ್ ಜೆರೋಮ್ ಅವರು ಉಪಸ್ಥಿತಿರಿದ್ದರು.