Tag: Shivanagowda Nayak

  • ರಾಜ್ಯದ ಇಬ್ಬರು ಹಿರಿಯ ನಾಯಕರು ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ: ಕೆ.ಶಿವನಗೌಡ ನಾಯಕ್

    ರಾಜ್ಯದ ಇಬ್ಬರು ಹಿರಿಯ ನಾಯಕರು ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ: ಕೆ.ಶಿವನಗೌಡ ನಾಯಕ್

    ರಾಯಚೂರು: ರಾಜ್ಯದ ಕೆಲವು ಹಿರಿಯ ನಾಯಕರ ನಿರ್ಣಯದಿಂದ ನನಗೆ ಅನ್ಯಾಯವಾಗಿದೆ. ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಅಂತ ದೇವದುರ್ಗ ಶಾಸಕ ಶಿವನಗೌಡ ನಾಯಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗಾದ ಅನ್ಯಾಯಕ್ಕೆ ಪಕ್ಷದ ಚೌಕಟ್ಟಿನಲ್ಲಿ ಹೋರಾಟವನ್ನ ಮಾಡುತ್ತೇನೆ ಎಂದಿದ್ದಾರೆ.

    ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರಿಂದ ಸ್ಥಾನಮಾನ ಸಿಕ್ಕಿತ್ತು. ಆದರೆ ರಾಜ್ಯದ ಕೆಲ ಹಿರಿಯ ನಾಯಕರು ಬೇಕಂತಲೇ ಸ್ಥಾನಮಾನ ತಪ್ಪಿಸಿದ್ದಾರೆ. ಹಿರಿಯ ನಾಯಕರ ತುಳಿತಕ್ಕೊಳಗಾಗಿದ್ದೇನೆ. ಪರಿಶಿಷ್ಟ ಪಂಗಡದವನಾದ ನನಗೆ ದೊಡ್ಡ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದವರು ಹಲವು ಶಾಸಕರಿದ್ದಾರೆ. ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಹದಿಮೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದರು. ಇದನ್ನೂ ಓದಿ: ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ

    ಸಿಎಂ ಬಸವರಾಜ್ ಬೊಮ್ಮಾಯಿವರು ಮುಂದೆಯೂ ಮುಖ್ಯಮಂತ್ರಿಯಾಗಲಿದ್ದಾರೆ. ನಮಗೆ ಬೊಮ್ಮಾಯಿ ನ್ಯಾಯ ಒದಗಿಸಬೇಕು. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನಕೊಟ್ಟರೆ ನಮ್ಮ ಸಮಾಜಕ್ಕೆ ಸಚಿವ ಸ್ಥಾನ ಕೊಟ್ಟ ಹಾಗೆ ಆಗುವುದಿಲ್ಲ. ಸರ್ಕಾರ ರಚನೆಗೆ ಅವರ ಶ್ರಮ ಪರಿಗಣಿಸಿ ಕೊಟ್ಟಂತಾಗುತ್ತದೆ ಸಮಾಜಕ್ಕೆ ನ್ಯಾಯ ಸಿಕ್ಕಂತಾಗುವುದಿಲ್ಲ ಅಂತ ಶಿವನಗೌಡ ನಾಯಕ್ ಬೇಸರ ಹೊರಹಾಕಿದ್ದಾರೆ.

  • ನನ್ನ ಬಾವನ ಬಗ್ಗೆ ಮಾತಾಡಿದ್ರೆ ಹುಷಾರ್- ಶಿವನಗೌಡಗೆ ಅಕ್ಕನಿಂದಲೇ ವಾರ್ನಿಂಗ್

    ನನ್ನ ಬಾವನ ಬಗ್ಗೆ ಮಾತಾಡಿದ್ರೆ ಹುಷಾರ್- ಶಿವನಗೌಡಗೆ ಅಕ್ಕನಿಂದಲೇ ವಾರ್ನಿಂಗ್

    ರಾಯಚೂರು: ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ವಿರುದ್ಧ ಮನಸೋ ಇಚ್ಛೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್‍ಗೆ ಮಹಿಳೆಯೊಬ್ಬರು ಟಾಂಗ್ ನೀಡಿದ್ದಾರೆ.

    ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಮಾತನಾಡಿದ ಮಹಿಳೆ, ಬಿ.ವಿ ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಅಲ್ಲಿಯ ಸಭೆಗೆ ಬಂದು ಉತ್ತರ ಕೊಡುತ್ತೇನೆ. ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ನೀನೇ ಸ್ವತಃ ಹೇಳಿದ್ದನ್ನ ಬಯಲು ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

    ಈ ಮಹಿಳೆ ಬೇರೆ ಯಾರೂ ಅಲ್ಲ ಶಿವನಗೌಡ ನಾಯಕ್‍ಗೆ ಸಂಬಂಧದಲ್ಲಿ ಅಕ್ಕ ಆಗಬೇಕು. ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ಸಹೋದರ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್, ಶಿವನಗೌಡಗೆ ನಾಲಿಗೆ ಹರಿಬಿಡದಂತೆ ಅವಾಜ್ ಹಾಕಿದ್ದಾರೆ. ಏನೂ ಇಲ್ಲದಾಗ ನಮ್ಮ ಸಹಾಯವನ್ನ ಪಡೆದು ಈಗ ಅಧಿಕಾರ ಬಂದಾಗ ನಮ್ಮ ವಿರುದ್ಧ ಮಾತನಾಡುತ್ತಿದ್ದೀಯಾ. ಹೆಚ್ಚು ಮಾತನಾಡಿದರೆ ಸಹಿಸಿಕೊಳ್ಳಲು ನಾನು ಬಾವ ಬಿ.ವಿ.ನಾಯಕ್, ತಾತ ವೆಂಕಟೇಶ್ ನಾಯಕ್ ತರ ಅಲ್ಲಾ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಏಪ್ರಿಲ್ 16 ರಂದು ಸಿರವಾರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಿಎಂ ಹಾಗೂ ಬಿ.ವಿ.ನಾಯಕ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಿವನಗೌಡ ನಾಯಕ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

  • 1 ವಿಕೆಟ್ ಉರುಳಿಸಿದ ಬಳಿಕ ಮೂರು ವಿಕೆಟ್ ಬೀಳಿಸಲು ತಂತ್ರ!

    1 ವಿಕೆಟ್ ಉರುಳಿಸಿದ ಬಳಿಕ ಮೂರು ವಿಕೆಟ್ ಬೀಳಿಸಲು ತಂತ್ರ!

    ಬೆಂಗಳೂರು: ಲೋಕಸಭಾ ಚುನಾವಣೆಗೂ ಮೊದಲೇ ಕರ್ನಾಟಕದಲ್ಲಿ ರಾಜಕೀಯ ಕ್ರಾಂತಿ ಶುರುವಾಗಿದ್ದು, ಈಗಾಗಲೇ ಒಂದು ವಿಕೆಟ್ ಉರುಳಿಸಿ ಆಗಿದೆ. ಇನ್ನೂ ಮೂರು ವಿಕೆಟ್ ಬೀಳಿಸಲು ತಮ್ಮ ಭಂಟನ ಮೂಲಕ ಸದ್ದಿಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ `ಆಪರೇಷನ್’ ಕಸರತ್ತು ಮಾಡುತ್ತಿದ್ದಾರೆ.

    ಬಿಎಸ್‍ವೈ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರನ್ನು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿರುವ ರಮೇಶ್ ಜಾರಕಿಹೊಳಿ ಮನೆಯಲ್ಲಿಯೇ ಭೇಟಿ ನೀಡಿ ಬರೋಬ್ಬರಿ ಒಂದೂವರೆ ಗಂಟೆ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಈಗಾಗಲೇ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ ರಾಜೀನಾಮೆಯ ಸುಳಿವು ಬೆನ್ನಲ್ಲೇ ಅವರ ಮನವೊಲಿಸಲು ಕುಮಾರಸ್ವಾಮಿ ದಿಢೀರ್ ಮಾತುಕತೆ ನಡೆಸಿದ್ದರು. ಆದಾದ ಬಳಿಕ ಸ್ಪೀಕರ್ ಅವರಿಂದ ನಾಲ್ವರು ಅತೃಪ್ತ ನಾಯಕರಿಗೆ ಸಭೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಸ್ಪೀಕರ್ ನೋಟಿಸ್ ಕೊಟ್ಟ ಬೆನ್ನಲ್ಲೇ ಬಿಜೆಪಿಯಿಂದ ಮಾತುಕತೆ ನಡೆಯುತ್ತಿದೆ.

    ರಮೇಶ್ ಜಾರಕಿಹೊಳಿ ತಂಡ ಸೆಳೆಯಲು ಬಿಜೆಪಿಯಿಂದ ಕಸರತ್ತು ಮುಂದುವರಿದಿದ್ದು, ಇವತ್ತು ಸಹ ರಮೇಶ್ ಜಾರಕಿಹೊಳಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿಯ ಪ್ರಮುಖ ದೇವದುರ್ಗ ಶಾಸಕ ಶಿವನಗೌಡ ನಾಯಕ್ ರಿಂದ ರಮೇಶ್ ಜಾರಕಿಹೊಳಿ ಭೇಟಿ ಮಾಡಿಸಲಾಗಿದೆ. ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಮನೆಯಲ್ಲಿ ಮಹತ್ವದ ಮಾತುಕತೆ ನಡೆದಿದ್ದು, ರಮೇಶ್ ಜಾರಕಿಹೊಳಿ ಮನೆಯಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಹಾಜರಾಗಿದ್ದರು.

    ಯಡಿಯೂರಪ್ಪ ಅವರು ಕಾಂಗ್ರೆಸ್ ಅತೃಪ್ತರಿಗೆ ಹೊಸ ಆಫರ್ ಕೊಟ್ಟಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿಗೆ ಟಿಕೆಟ್ ಆಫರ್ ಮಾಡಿದ್ದಾರೆ. ಯಡಿಯೂರಪ್ಪ ದೆಹಲಿಯಲ್ಲಿ ಕೂತೇ ಶಿವನಗೌಡ ನಾಯಕ್ ಮೂಲಕ ಮಾತುಕತೆಗೆ ಸ್ಕೆಚ್ ಹಾಕಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಮೇಶ್ ಜಾರಕಿಹೊಳಿ ಜೊತೆ ಶಿವನಗೌಡ ನಾಯಕ್ ಚರ್ಚೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ಮುಗಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಯಾವುದೇ ಪ್ರತಿಕ್ರಿಯೆ ಕೊಡದೇ ಕಾರೊಳಗೆ ಕೂತು ಮುಖ ಆಕಡೆ ತಿರುಗಿಸಿಕೊಂಡು ಹೊರಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭವಿಷ್ಯವಾಣಿ ನಿಜವಾಗಿಸಲು ಹೊರಟ ಶಾಸಕ ಶಿವನಗೌಡರಿಂದ ಇಂದು ಬಿಎಸ್‍ವೈ ಏಕಾಂಗಿ!

    ಭವಿಷ್ಯವಾಣಿ ನಿಜವಾಗಿಸಲು ಹೊರಟ ಶಾಸಕ ಶಿವನಗೌಡರಿಂದ ಇಂದು ಬಿಎಸ್‍ವೈ ಏಕಾಂಗಿ!

    ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಡೀಲ್ ಆಡಿಯೋ ಬಿಡುಗಡೆಯಾಗಿ ಏಕಾಂಗಿ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ದೇವದುರ್ಗದ ಶಾಸಕ ಶಿವನಗೌಡ ನಾಯಕ್‍ರ ಆತುರ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಎಸ್ ಯಡಿಯೂರಪ್ಪ ದೈವಭಕ್ತರು, ಭವಿಷ್ಯವಾಣಿಗಳನ್ನು ನಂಬುತ್ತಾರೆ. ಆದ್ರೆ ಶಾಸಕ ಶಿವನಗೌಡ ನಾಯಕ್ ಹಾಗಲ್ಲ, ಭವಿಷ್ಯವಾಣಿಯನ್ನು ನಂಬುವದರ ಜೊತೆಗೆ ಅದನ್ನು ನಿಜ ಮಾಡಲು ಕೂಡಲೇ ಕಾರ್ಯಪ್ರವೃತ್ತರಾಗ್ತಾರೆ. ಅವರ ಅತೀ ಉತ್ಸಾಹವೇ ಯಡಿಯೂರಪ್ಪರನ್ನು ಇವತ್ತು ಒಂಟಿಯನ್ನಾಗಿ ಮಾಡಿದೆ ಎಂದು ಹೇಳಲಾಗುತ್ತಿದೆ.

    ದೇವದುರ್ಗ ತಾಲೂಕಿನ ಮುಂಡರಗಿಯ ಶಿವರಾಯಸ್ವಾಮಿ ದೇವಾಲಯದ ಅರ್ಚಕ ಶಿವಣ್ಣ ತಾತ ಅಂದ್ರೆ ಶಿವನಗೌಡರಿಗೆ ಎಲ್ಲಿಲ್ಲದ ನಂಬಿಕೆ. ಅವರು ಈವರೆಗೆ ಹೇಳಿದ ಎಲ್ಲಾ ಭವಿಷ್ಯವಾಣಿಗಳು ಈವರೆಗೆ ಸುಳ್ಳಾಗಿಲ್ಲ. ಎಲ್ಲವೂ ನಿಜವಾಗಿದೆ. ಹೀಗಾಗಿ ಬಜೆಟ್ ಅಧಿವೇಶನವಿದ್ದರೂ ಫೆಬ್ರವರಿ 7ರಂದು ಸಂಜೆ 5:30ಕ್ಕೆ ಶಿವನಗೌಡನ ಜೊತೆ ಏಕಾಏಕಿ ಹೆಲಿಕಾಪ್ಟರ್‍ನಲ್ಲಿ ರಾಯಚೂರಿನ ದೇವದುರ್ಗದ ಅರಕೇರಾಕ್ಕೆ ಬಂದ ಯಡಿಯೂರಪ್ಪ ರಾತ್ರಿ ವೇಳೆ ಶಿವಣ್ಣ ತಾತನನ್ನ ಭೇಟಿಯಾಗಿ ಆಶೀರ್ವಾದ ಪಡೆದರು. ಇದೇ ವೇಳೆ ಶಿವನಗೌಡ ನಾಯಕ್ ಓರ್ವ ಶಾಸಕನನ್ನು ಸೆಳೆದ್ರೆ ಬಿಎಸ್ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದರು ಎನ್ನಲಾಗಿದೆ.

    ಭವಿಷ್ಯವಾಣಿ ಕೇಳುತ್ತಿದ್ದಂತೆ ಗುರುಮಿಠಕಲ್ ಶಾಸಕರ ಪುತ್ರ ಶರಣಗೌಡಗೆ ದುಂಬಾಲು ಬಿದ್ದ ಶಿವನಗೌಡ ನಾಯಕ್, ದೇವದುರ್ಗದ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡಿದ್ದಾರೆ. ಮಧ್ಯರಾತ್ರಿ ಗಾಢ ನಿದ್ರೆಯಲ್ಲಿದ್ದ ಯಡಿಯೂರಪ್ಪರನ್ನ ಸ್ವತಃ ಶಿವನಗೌಡ ನಾಯಕ್ ಕಾಲುಮುಟ್ಟಿ ಎಬ್ಬಿಸಿದ್ದಾರೆ. ಬಳಿಕ ಎದ್ದ ಯಡಿಯೂಪರಪ್ಪ ಶಿವನಗೌಡ ಮೇಲಿನ ನಂಬಿಕೆಯಿಂದ ಬಿ.ಎಸ್ ಯಡಿಯೂರಪ್ಪ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಶಿವನಗೌಡರಿಗೆ ಭವಿಷ್ಯ ನಿಜ ಮಾಡೋ ಆತುರ, ಬಿಎಸ್ ಯಡಿಯೂರಪ್ಪರಿಗೆ ನಿದ್ದೆಯ ಮಂಪರು. ಮಾತುಕತೆಗೆ ಬಂದ ಶರಣಗೌಡ ಏನೇನ್ ಸಿದ್ಧತೆ ಮಾಡಿಕೊಂಡು ಬಂದಿದ್ದಾರೆ. ಆಡಿಯೋ ಏನಾದ್ರೂ ರೆಕಾರ್ಡ್ ಮಾಡ್ತಾರೋ ಇಲ್ವೋ ಅನ್ನೋದನ್ನ ನೋಡದೇ ಮಾತುಕತೆ ನಡೆಸಿದ್ದಾರೆ. ಇದೇ ಯಡವಟ್ಟು ಇವತ್ತು ಬಿಎಸ್ ಯಡಿಯೂರಪ್ಪರನ್ನು ಏಕಾಂಗಿಯನ್ನಾಗಿ ಮಾಡಿದೆ. ಇದನ್ನ ರೆಕಾರ್ಡ್ ಮಾಡಿಕೊಂಡಿದ್ದ ಶರಣಗೌಡ ಯಡಿಯೂರಪ್ಪ ಆಪರೇಷನ್‍ನ್ನು ಬಹಿರಂಗಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv