Tag: Shivamogga DCC Bank

  • 12 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್

    12 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್

    ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಬ್ಯಾಂಕಿನ ಸಭಾಂಗಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತಮ ವಹಿವಾಟು ನಡೆಸುವ ಮೂಲಕ ಬ್ಯಾಂಕ್ ನಿರಂತರವಾಗಿ ಲಾಭದಲ್ಲಿದೆ. ಈ ವರ್ಷ ಸಹ ಉತ್ತಮ ಲಾಭ ಗಳಿಕೆ ನಿರೀಕ್ಷೆಯಲ್ಲಿದ್ದೇವೆ ಎಂದರು.

    2020-21ನೇ ಆರ್ಥಿಕ ವರ್ಷದಿಂದ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಬ್ಯಾಂಕಿನ ಠೇವಣಿ ಪ್ರಸ್ತುತ 850 ಕೋಟಿ ರೂ.ಗಳಿದ್ದು ಇನ್ನು ಮೂರು ತಿಂಗಳಲ್ಲಿ ಅದನ್ನು 150 ಕೋಟಿ ರೂ. ಹೆಚ್ಚಿಸುವ ಮೂಲಕ 1 ಸಾವಿರ ಕೋಟಿ ರೂ.ಗಳಿಗೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಆರ್ ಬಿಐ ನಿಯಮಗಳ ಅನ್ವಯ ಶೆಡ್ಯೂಲ್ಡ್ ಬ್ಯಾಂಕಿನ ಅರ್ಹತೆ ಪಡೆದುಕೊಳ್ಳಲು ಕನಿಷ್ಠ ಠೇವಣಿ 1 ಸಾವಿರ ಕೋಟಿ ರೂ. ಇರಬೇಕು. ಇನ್ನು ಮೂರು ತಿಂಗಳಲ್ಲಿ ಆ ಗುರಿ ತಲುಪುವ ವಿಶ್ವಾಸವಿದೆ ಎಂದರು.

    ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿದ ಬಳಿಕ ವಾಣಿಜ್ಯ ಬ್ಯಾಂಕುಗಳಂತೆ ವಾಣಿಜ್ಯ ಉದ್ದೇಶಗಳಿಗೆ ಅಧಿಕ ಮೊತ್ತದ ಸಾಲ ಒದಗಿಸುವ ಅವಕಾಶ ಇರುತ್ತದೆ. ಡಿಸಿಸಿ ಬ್ಯಾಂಕಿನ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.