Tag: shivamogaa

  • ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕೈ ಮುಖಂಡ ಅರೆಸ್ಟ್

    ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕೈ ಮುಖಂಡ ಅರೆಸ್ಟ್

    ಶಿವಮೊಗ್ಗ: ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕಾಂಗ್ರೆಸ್ ಮುಖಂಡನ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಕಲೀಂವುಲ್ಲಾ ಬಂಧಿತ ಆರೋಪಿ. ಈತ ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದನು. ಉದ್ಯಮಿ ಹಬೀಬ್ ಎಂಬವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಲೀಂ ತೊಡಗಿದ್ದನು. ಈ ವ್ಯವಹಾರದ ಹಣಕಾಸಿನ ವಿಷಯದಲ್ಲಿ ಕಲೀಂ ಹಾಗೂ ಹಬೀಬ್ ಇಬ್ಬರ ನಡುವೆ ವಿವಾದ ತಲೆದೋರಿತ್ತು.

    ಇದೇ ಕಾರಣದಿಂದ ಹಬೀಬ್ ಅವರನ್ನು ಮುಗಿಸಲು ಕಲೀಂವುಲ್ಲಾ ರೌಡಿಶೀಟರ್ ಸಾತು ಎಂಬಾತನಿಗೆ ಸುಪಾರಿ ನೀಡಿದ್ದ. ಸುಪಾರಿ ಪಡೆದ ಸಾತು, ಹಬೀಬ್ ಸಾಗುವ ಮಾರ್ಗದಲ್ಲಿ ಅವರ ಕಾರಿನಲ್ಲೇ ಮುಗಿಸಲು ವಿಫಲ ಯತ್ನ ನಡೆಸಿದ್ದ. ಈ ಬಗ್ಗೆ ಹಬೀಬ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸಾತುನನ್ನು ಬಂಧಿಸಿದಾಗ ಕಲೀಂ ಸುಪಾರಿ ಕೊಟ್ಟದ್ದಲ್ಲದೆ ರಿವಾಲ್ವರ್ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಸುಪಾರಿ ಕೊಲೆ ಮಾಡಲು ನೀಡಿದ್ದ ಹಣ ಹಾಗೂ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಶಿವಮೊಗ್ಗ: ಮೀನಿಗಾಗಿ ಬಲೆ ಹಾಕಿದ್ದು, ಆದರೆ ಮೀನಿನ ಬದಲಾಗಿ ಬಲೆಗೆ ಹೆಬ್ಬಾವು ಬಿದ್ದಿರುವ ಘಟನೆ ಜಿಲ್ಲೆಯ ಆಲ್ಕೊಳ ಬಡಾವಣೆಯ ಕೆರೆಯಲ್ಲಿ ನಡೆದಿದೆ.

    ಬಡಾವಣೆಯ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಲಾಗಿತ್ತು. ಆದರೆ ಸುಮಾರು ಆರು ಅಡಿ ಉದ್ದದ ಹೆಬ್ಬಾವೊಂದು ಮೀನಿಗಾಗಿ ಹಾಕಲಾಗಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಬಲೆಯಲ್ಲಿ ಮೀನುಗಳ ಜೊತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

    ಸುಮಾರು 6 ಅಡಿ ಉದ್ದದ ಸುಮಾರು 10 ಕೆಜಿ ತೂಗುವ ಈ ಹೆಬ್ಬಾವು ಸ್ಥಳೀಯರಲ್ಲಿ ಭಯ ಮೂಡಿಸಿತ್ತು. ನಂತರ ಸ್ಥಳೀಯರು ಶಿವಮೊಗ್ಗದ ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕಿರಣ್ ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಿಸಿದ್ದಾರೆ. ಅಲ್ಲದೇ ಸಿಕ್ಕಿರುವ ಹೆಬ್ಬಾವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

  • ಸ್ನೇಹಿತನ ಪತ್ನಿಯ ಮೇಲೆ ರೇಪ್ ಕೇಸ್: ಮಾಜಿ ಸಚಿವ ಹಾಲಪ್ಪ ಖುಲಾಸೆ

    ಸ್ನೇಹಿತನ ಪತ್ನಿಯ ಮೇಲೆ ರೇಪ್ ಕೇಸ್: ಮಾಜಿ ಸಚಿವ ಹಾಲಪ್ಪ ಖುಲಾಸೆ

    ಶಿವಮೊಗ್ಗ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣದಿಂದ ದೋಷಮುಕ್ತರಾಗಿದ್ದಾರೆ.

    ಶಿವಮೊಗ್ಗ 2ನೇ ಜೆಎಂಎಫ್‍ಸಿ ನ್ಯಾಯಾಲಯ ನ್ಯಾ. ಬಿಜೆ ರಾಮ ಅವರು ಹಾಲಪ್ಪ ಅವರನ್ನು ಪ್ರಕರಣದಿಂದ ಖುಲಾಸೆ ಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. ತೀರ್ಪು ಪ್ರಕಟವಾಗುವ ವೇಳೆ ಹಾಲಪ್ಪ ಅವರು ಕೋರ್ಟ್ ನಲ್ಲಿ ಹಾಜರಾಗಿದ್ದರು. ಹಾಲಪ್ಪ ಅವರ ಬೆಂಬಲಿಗರು ಕೋರ್ಟ್ ನಲ್ಲಿ ಜಮಾಯಿಸಿದ್ದರು.

    ಕೋರ್ಟ್ ಆಗಸ್ಟ್ 8 ರಂದು ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. 2009ರ ನವೆಂಬರ್‍ನಲ್ಲಿ ಘಟನೆ ನಡೆದಿದ್ದು ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 2009ರ ನವೆಂಬರ್ 27ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಉಲ್ಲೇಖಿಸಿತ್ತು. ಐಪಿಸಿ ಸೆಕ್ಷನ್ 376ರ ಅನ್ವಯ ಆರೋಪ ಪಟ್ಟಿಯನ್ನು ಬೆಂಗಳೂರು ಸಿಐಡಿ ಪತ್ತೆ ನಿರೀಕ್ಷಕ ಎಂ.ಎಸ್.ಕೌಲಪುರೆ ಅವರು ಸಲ್ಲಿಸಿದ್ದರು.

    ರಾಜ್ಯದಾದ್ಯಂತ ತೀವ್ರ ವಿರೋಧ ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ದೂರು ದಾಖಲಾದ ಆರು ದಿನದ ನಂತರ ಹಾಲಪ್ಪ ಶಿವಮೊಗ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದರು. ನಂತರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

    ಈ ಹೈ ಪ್ರೊಫೈಲ್ ಕೇಸ್ ಬಗ್ಗೆ ಸಿಐಡಿ ಡಿಐಜಿ ಚರಣ್ ರೆಡ್ಡಿ ತನಿಖೆಯ ನೇತೃತ್ವ ವಹಿಸಿದ್ದರು. 2011ರ ಆಗಸ್ಟ್ ನಲ್ಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಐಪಿಸಿ ಸೆಕ್ಷೆನ್ 376(ಅತ್ಯಾಚಾರ), 506(ಬೆದರಿಕೆ), 341(ಅಕ್ರಮವಾಗಿ ಕೂಡಿ ಹಾಕುವುದು), 34 (ನಿರ್ದಿಷ್ಟ ಉದ್ದೇಶದ ಅಪರಾಧ) ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗದ 12 ಜನ ಸೇರಿ ಒಟ್ಟು 32 ಜನ ಸಾಕ್ಷಿಗಳನ್ನು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಜ್ಞರು, ಮಹಜರು ಸಾಕ್ಷಿಗಳು, ಅಡಿಯೋ-ವಿಡಿಯೋ ತಜ್ಞರು, ಪೊಲೀಸ್ ಅಧಿಕಾರಿಗಳು, ಗನ್ ಮ್ಯಾನ್‍ಗಳು, ಐಬಿಯಲ್ಲಿದ್ದ ಸಿಬ್ಬಂದಿ ಇನ್ನಿತರರು ಪ್ರಕರಣದ ಸಾಕ್ಷಿಗಳಾಗಿದ್ದರು. ಮುಖ್ಯವಾದ ಅಂಶವೆಂದರೆ ಈ ಪ್ರಕರಣದಲ್ಲಿ ಚಂದ್ರಾವತಿ ಅವರ ಪತಿ ವೆಂಕಟೇಶ್ ಅತ್ಯಾಚಾರದ ಬಗ್ಗೆ ಮೊಬೈಲ್‍ನಲ್ಲಿ ಮಾಡಿದ್ದ ವಿಡಿಯೋವನ್ನು ನ್ಯಾಯಾಲಯ ಸಾಕ್ಷ್ಯವನ್ನಾಗಿ ಪರಿಗಣಿಸಿರಲಿಲ್ಲ.

    ಇಂದಿನ ತೀರ್ಪು ಹರತಾಳು ಹಾಲಪ್ಪ ಅವರ ರಾಜಕೀಯ ಭವಿಷ್ಯವನ್ನ ನಿರ್ಧರಿಸಲಿದೆ. ಮುಖ್ಯವಾಗಿ ಈ ಪ್ರಕರಣದ ನಂತರ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದ ಹಾಲಪ್ಪ ಅವರಿಗೆ ಈ ತೀರ್ಪು ರಾಜಕೀಯ ಮರುಜನ್ಮ ನೀಡುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.