Tag: shivakumara swamiji

  • ಕಾಯಕ ಯೋಗಿ ದಿನಕ್ಕೆ 5 ಗಂಟೆ ಮಾತ್ರ ನಿದ್ದೆ!

    ಕಾಯಕ ಯೋಗಿ ದಿನಕ್ಕೆ 5 ಗಂಟೆ ಮಾತ್ರ ನಿದ್ದೆ!

    ಅನ್ನ, ಅಕ್ಷರ, ಜ್ಞಾನವನ್ನು ಸಾವಿರಾರು ಮಂದಿಗೆ ನೀಡಿ ಅವರ ಬಾಳನ್ನು ಬೆಳಗಿಸಿದ ಸಿದ್ದಗಂಗಾ ಶ್ರೀಗಳು ನಿದ್ದೆಗೆಂದು ಮೀಸಲಿಟ್ಟ ಸಮಯ ಕೇವಲ 5 ಗಂಟೆ ಮಾತ್ರ. ಹೌದು. ಶ್ರೀಗಳು ಪ್ರತಿದಿನವೂ ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು.

    ಬೆಳಗ್ಗೆ 6.30ರ ಸುಮಾರಿಗೆ ಆಹಾರ ಸೇವನೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವಿಸುತ್ತಿದ್ದರು. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆ ಮಾಡಿ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು.

    ಪ್ರಾರ್ಥನೆಯ ನಂತರ, ಕಚೇರಿಗೆ ಧಾವಿಸಿ ಅಲ್ಲಿ ಪತ್ರಿಕೆಗಳ ವಾಚನವಾಗುತಿತ್ತು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಈ ವೇಳೆ ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗುವುದಲ್ಲದೆ ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ ‘ಕಾಯಕವೇ ಕೈಲಾಸ’ ಎಂದು ನುಡಿಯಲ್ಲಿ ಮಾತ್ರ ಹೇಳದೇ, ನಡೆಯಲ್ಲೂ ತೋರಿಸಿಕೊಡುತ್ತಿದ್ದರು.

    ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾದ ಬಳಿಕ ಭಕ್ತರ ಕಷ್ಟ-ಸುಖಕ್ಕೆ ಸ್ಪಂದನೆ ಮಧ್ಯಾಹ್ನ ಮೂರು ಗಂಟೆವರೆಗೆ ನಿರಂತರವಾಗಿ ಸಾಗುತಿತ್ತು. ಬಳಿಕ ಶ್ರೀಗಳು ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ನಂತರ ಒಂದು ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿ ಬೇಳೆ ಸಾಂಬಾರ್ ಊಟ ಮಾಡುತ್ತಿದ್ದರು. ಸಂಜೆ 4 ಗಂಟೆಯ ನಂತರ ಪುನಃ ಭಕ್ತಗಣದ ಭೇಟಿ ಮಾಡಿ ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ಬಳಿಕ ದಾಸೋಹದ ಮಾಹಿತಿ, ಸುಮಾರು ರಾತ್ರಿ 9 ಗಂಟೆಯವರೆಗೂ ನಡೆಯುತಿತ್ತು.

    ಹಳೆಯ ಮಠದಲ್ಲಿ ರಾತ್ರಿಯ ಕಾರ್ಯಕ್ರಮ. ಸ್ನಾನ, ಪೂಜೆ, ಮತ್ತು ಪ್ರಸಾದ. ಒಂದು ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ನಿ ಅಥವಾ ಪಲ್ಯ. ಇದಿಲ್ಲದೇ ಹೋದರೆ, ಉಪ್ಪಿಟ್ಟು, ನಂತರ ಹಣ್ಣಿನ ಸೇವನೆ. ಹತ್ತು ಗಂಟೆಗೆ ಸ್ವಾಮಿಗಳು ಸಭಾಂಗಣದಲ್ಲಿ ಹಾಜರಾಗುತ್ತಿದ್ದರು. ‘ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ’ದ ಒಂದು ದೃಶ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾಯಕಕ್ಕೆ ವಿರಾಮ ಹಾಕುತ್ತಿದ್ದರು.

    ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತಿತ್ತು. ಕೆಲವು ದಿನಗಳಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು.

    ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದ ಶ್ರೀಗಳು ಉಳಿದ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿತ್ತು.

    ಶ್ರೀಗಳಿಗೆ ಸಿಕ್ಕ ಪ್ರಶಸ್ತಿಗಳು:
    ಕಾಯಕ ಯೋಗಿ ಸಿದ್ದಗಂಗಾ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 100ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಸರ್ಕಾರದಿಂದ ಕರ್ನಾಟಕ ರತ್ನ ಹಾಗೂ 2015 ನೇ ಇಸವಿಯಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಭಾರತ ಸರ್ಕಾರ ಗೌರವಿಸಿತ್ತು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಸಿದ್ದಗಂಗಾ ಶ್ರೀಗಳು ಇವತ್ತು ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ ಅವರು ಪ್ರವಚನ, ಭಾಷಣದಲ್ಲಿ ಹೇಳಿದ ವಾಣಿಗಳು ನಮ್ಮ ಜೊತೆಯಲ್ಲಿವೆ. ಹೀಗಾಗಿ ಇಲ್ಲಿ ಅವರು ಹೇಳಿದ 50 ವಾಣಿಗಳನ್ನು ನೀಡಲಾಗಿದೆ.

    1. ಮದುವೆ ಸಮಾರಂಭ ಸರಳವಾಗಿ ನಡೆಯಬೇಕು; ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು; ಎರಡು ಮನೆಗಳ ಬೆಳಕಿನ ಹಬ್ಬವಾಗಬೇಕು.
    2. ದುಡಿಮೆ ಸತ್ಯಶುದ್ಧವಾಗಿರಬೇಕು; ಪರಹಿತಮುಖಿಯಾಗಿರಬೇಕು.
    3. ಮನಸ್ಸು ಪವಿತ್ರವಾದುದು; ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.
    4. ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು; ಸಂಕೀರ್ಣ ಸ್ವರೂಪ ಅದರದ್ದು.
    5. ನಮ್ಮ ಪೂರ್ವಿಕರು ತಮಗಾಗಿ ದುಡಿದು ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೆ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ; ಮಾನವೀಯತೆ ಅವರ ಜೀವನವಾಗಿತ್ತು.

    6. ‘ಸೇವೆ’ ಪ್ರಚಾರದ ಸರಕಲ್ಲ; ಅದು ಗುಪ್ತಶಕ್ತಿ; ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
    7. ನಮ್ಮ ಹಿಂದಿನ ಪೂಜ್ಯ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನಭಾಗ್ಯ.
    8. ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು; ಮಾತು ತಪಸ್ಸು ಎಂಬಂತಿರಬೇಕು.
    9. ಆತ್ಮಾವಲೋಕನ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನನುಭವಿಸುತ್ತಿದೆ.
    10. ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.

    11. ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ; ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
    12. ಜಗತ್ತು ವೇಗವಾಗಿ ಮುಂದುವರಿದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
    13. ದುಡಿದೇ ತಿನ್ನುವುದು ಕೂಳು, ಶ್ರಮ ಜೀವನ ಊಟ ಮಾಡುವುದು ಪ್ರಸಾದ.
    14. ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
    15. ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು, ಸಮಾಜದ ಕಣ್ಣಾಗಬೇಕು.

    16. ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ, ಹೃದಯವಂತಿಕೆಯಲ್ಲಿದೆ.
    17. ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
    18. ಇಂದು ರಾಷ್ಟ್ರಾದ್ಯಂತ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.
    19. ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.
    20. ವ್ಯವಸಾಯವೆಂಬುವುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಟಿ ಮಾಡುವ ಅನುಪಮ ಉದ್ಯೋಗ.

    21. ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ ಆ ಶಕ್ತಿ ನಿಕ್ಷೇಪವಾಗಿದೆ.
    22. ‘ಕಾಯಕ’ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.
    23. ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ.
    24. ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.
    25. ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.

    26. ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.
    27. ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
    28. ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು. ಹೇಗೆಂದರೆ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ದೇಶ ಅಧೋಗತಿಗಿಳಿಯುತ್ತದೆ.
    29. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸಕ್ಕೆ ರಕ್ಷೆ.
    30. ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ. ಸಂಸಾರ ತೊರೆಯಬೇಕಾಗಿಲ್ಲ, ಕಾಡನ್ನು ಸೇರಬೇಕಾಗಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.

    31. ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ, ಮನಸ್ಸೂ ಅಲ್ಲ. ಈ ಎಲ್ಲವುಗಳಲ್ಲಿಯೂ ಇರತಕ್ಕ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.
    32. ದೀನದಲಿತರ ಉದ್ಧಾರದ ಸಲುವಾಗಿ ತಮ್ಮ ಜೀವನವನ್ನೇ ಮುಡುಪಿಡುವ ಪುಣ್ಯಶಾಲಿಯೇ ಮಹಾತ್ಮ.
    33. ಜಗತ್ತನ್ನು ಬಿಡದೇ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೇ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.
    34. ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೇ ನಡೆದುಕೊಳ್ಳುವವನೇ ಧೀರ.
    35. ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ; ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟಿಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.

    36. ಪ್ರತಿನಿತ್ಯ ಮಲಗುವ ಮುನ್ನ ನಡೆ ನುಡಿಗಳು ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.
    37. ಜ್ಞಾನ ಎನ್ನುವುದು ಬಹಳ ಪವಿತ್ರವಾದುದು. ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ.
    38. ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯ ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನ ಶೀಲನಾಗಿರಬೇಕು. ಚಲಿಸುವ ಜ್ಞಾನ ಭಂಡಾರವಾಗಿರಬೇಕು.
    39. ಯಾರೂ ಸೋಮಾರಿಗಳಾಗಬಾರದು. ಪರಾವಲಂಬನೆಯಂತೂ ಆಗಲೇಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.
    40. ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು. ಬೆವರು ಸುರಿಸದೇ, ಯಾವುದಾದರೂ ಒಂದು ರೀತಿಯ ಕಾಯಕ ಮಾಡದೆ ಫಲ ಅನುಭವಿಸಲು ಯಾರಿಗೂ ಹಕ್ಕಿಲ್ಲ.

    41. ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.
    42. ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.
    43. ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.
    44. ನಾವು ಒಮ್ಮೊಮ್ಮೆ ಯೋಚಿಸುತ್ತೇವೆ ಶ್ರೀ ಮಠ ಹೇಗೆ ಇಷ್ಟು ದೊಡ್ಡದಾಗಿ ಬೆಳೆಯಿತು ಎಂದು, ಆಗ ಇದು ಗುರುಗಳ ಶ್ರೀ ರಕ್ಷೆ ಹಾಗು ‘ಶಿವಯೋಗಿಯ ದೇಹ’ ವೃಥಾ ಸವೆಯದಂತೆ ಭಕ್ತರು ನಡೆಸಿಕೊಂಡಿದ್ದರ ಪರಿ ಎನಿಸುತ್ತಿರುತ್ತದೆ.
    45. ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರಾವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

    46. ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು, ಪೇಟಾ ತೊಡಿಸಿ ಫಲ ಪುಷ್ಪಗಳನ್ನಿತ್ತರೆ ಅದು ಸನ್ಮಾನವಲ್ಲ. ಬದಲಾಗಿ ಆ ವ್ಯಕ್ತಿಯಲ್ಲಿ ಇರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.
    47. ಸ್ವಾಮಿತ್ವದ ಸೂಕ್ಷ್ಮತೆ, ಹಣಕಾಸಿನ ನಿರ್ವಹಣೆ, ಭಕ್ತರ ಒಡನಾಟ, ಆಂತರಿಕ ಮತ್ತು ಬಾಹ್ಯ ಆಡಳಿತ, ಆಧ್ಯಾತ್ಮಿಕ ಮನೋಭಾವ ಇವುಗಳನ್ನೆಲ್ಲ ನಮ್ಮ ಪೂಜ್ಯ ಗುರುಗಳು ಹೇಳಿ ಕಲಿಸಿದವಲ್ಲ. ಬದಲಾಗಿ ಇದ್ದು ಆಚರಿಸಿ ಕಲಿಸಿದವರು.
    48. ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆ ಮಾಡಬೇಕು.
    49. ದೇಶ ಭಕ್ತಿಯಿಲ್ಲದವನು ಜೀವಂತವಾಗಿದ್ದರೂ ಮರಣಪ್ರಾಯ.
    50. ಜಗತ್ತಿನ ಜೀವನದಲ್ಲಿ ಮನುಷ್ಯ ಧರ್ಮದ ಅವಶ್ಯಕತೆ ಮಿಗಿಲಾಗಿರುವುದು. ಧರ್ಮ ಆಚರಣೆಯಾದಾಗ ಜಗತ್ತು ಶಾಂತಿ ಸಾಮ್ರಾಜ್ಯವಾಗುತ್ತದೆ. ಧರ್ಮ ಉಲ್ಲಂಘನೆಯಾದರೆ ಜಗತ್ತು ಗೊಂದಲ ವಾತಾವರಣಕ್ಕೆ ಈಡಾಗುತ್ತದೆ.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಾಲ್ಯದ ಹೆಸರು ಶಿವಣ್ಣ. 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ 1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ಜೊತೆ ಶಿವಣ್ಣ ಅವರ ಒಡನಾಟ ಹೆಚ್ಚಾಯಿತು. ಈ ವರ್ಷವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ಸೇರಿದರೂ ಶ್ರೀಗಳ ಜೊತೆಗಿನ ಸಂಬಂಧ ಹಾಗೆಯೇ ಮುಂದುವರಿದಿತ್ತು.

    1941ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಈ ವೇಳೆ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ ಅವರ ಮೇಲೆ ಶ್ರೀಗಳ ಗಮನ ಹೋಗುತ್ತದೆ. ಶಿವಣ್ಣನ ಹಿನ್ನೆಲೆಯನ್ನು ಚೆನ್ನಾಗಿ ಅರಿತ ಕಾರಣ ಉದ್ದಾನ ಶ್ರೀಗಳು ಯಾರ ಜೊತೆಯೂ ನಿರ್ಧಾರ ತೆಗೆದುಕೊಳ್ಳದೇ ಎಲ್ಲರ ಮುಂದೆ ನನ್ನ ಮುಂದಿನ ಉತ್ತರಾಧಿಕಾರಿ ಶಿವಣ್ಣ ಎಂದು ಘೋಷಿಸಿ ಬಿಡುತ್ತಾರೆ.

    ಎಲ್ಲರಂತೆ ಸಾಮಾನ್ಯರಾಗಿ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣನವರು ಮರಳಿ ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿ ‘ಶ್ರೀ ಶಿವಕುಮಾರ ಸ್ವಾಮೀಜಿ’ಯಾಗಿ ಮರಳುತ್ತಾರೆ.

    ಶ್ರೀಗಳ ಪೂರ್ವಾಶ್ರಮ ಹೀಗಿತ್ತು:
    ಕರ್ನಾಟಕ ರತ್ನ, ನಡೆದಾಡುವ ದೇವರು ಎಂದೇ ಬಿರುದಾಂಕಿತ ಶ್ರೀ ಶಿವಕುಮಾರ ಸ್ವಾಮೀಜಿಯವರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಏಪ್ರಿಲ್ 1, 1908ರಂದು ಹೊನ್ನಪ್ಪ, ಗಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ಗಂಗಮ್ಮನವವರ ಪುಣ್ಯ ಗರ್ಭದಲ್ಲಿ 13ನೇ ಮಗನಾಗಿ ಜನಿಸಿದ ಮಗುವಿಗೆ `ಶಿವಣ್ಣ’ ಎಂದು ನಾಮಕರಣ ಮಾಡಿದರು. 1913ರಲ್ಲಿ ಪ್ರಾಥಮಿಕ ಮತ್ತು 1921ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು.

    ಸಿದ್ದಗಂಗಾ ಮಠದ ಒಡನಾಟ ಹಿಂದೆಯೇ ಇದ್ದರೂ ಹೈಸ್ಕೂಲ್ ಶಿಕ್ಷಣದ ವೇಳೆ ಮತ್ತಷ್ಟು ಹೆಚ್ಚಾಯಿತು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಸ್ವಾಮಿಗಳ ಜೊತೆ ಇವರ ಸಂಪರ್ಕ ಬೆಳೆಯಿತು.

    1927ರಲ್ಲಿ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ರಾವ್ ಬಹದ್ದೂರ್ ಶ್ರೀ ಗುಬ್ಬಿ ತೋಂಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡ ಶಿವಣ್ಣ, ಶಿಸ್ತುಬದ್ಧವಾದ ವಿದ್ಯಾರ್ಥಿ ಜೀವನ ನಡೆಸಿದರು. ಮಠದ ಹಿತವನ್ನೇ ಬಯಸುತ್ತಿದ್ದ ಶಿವಣ್ಣ, ಉದ್ದಾನ ಶ್ರೀಗಳು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಹೀಗಾಗಿ ಉದ್ದಾನ ಶ್ರೀಗಳಿಗೆ ಮತ್ತು ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರಿಗೆ ಶಿವಣ್ಣ ಪ್ರೀತಿ ಪಾತ್ರರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವೈಕ್ಯ

    ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವೈಕ್ಯ

    ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಏಪ್ರಿಲ್ 1, 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿ ಜನಿಸಿದ್ದರು. ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಗೆ ಜನಿಸಿದ ಇವರ ಬಾಲ್ಯದ ಹೆಸರು ಶಿವಣ್ಣ ಆಗಿತ್ತು. ಮರಳಿನ ಮೇಲೆ ಅಕ್ಷರ ಬರೆಯುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭಗೊಂಡಿತ್ತು. ಪ್ರಾಥಮಿಕ ಶಾಲಾ ದಿನಗಳಲ್ಲೇ ತಾಯಿ ಕಳೆದುಕೊಂಡ ಶಿವಣ್ಣ, ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢ ಶಿಕ್ಷಣ, 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಓದಿದ್ದರು.

    1930ರ ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾಗಿದ್ದರು. ಬಳಿಕ 1930ರ ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಉದ್ದಾನ ಶ್ರೀಗಳು ಶಿವಣ್ಣ ಅವರನ್ನು ಆಯ್ಕೆ ಮಾಡಿದ್ದರು.

    ಆಗಿದ್ದು ಏನು?
    ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸತತ 13 ದಿನಗಳ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀಗಳು ಡಿ.19 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಠ ತಲುಪಿದ್ದರು. ರೇಲಾ ಆಸ್ಪತ್ರೆಯಲ್ಲಿ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸತತ 2 ಗಂಟೆಗಳ ಕಾಲ ವೈದ್ಯರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು.

    ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು ಬೇಗನೇ ಗುಣಮುಖರಾಗಲು ಜನವರಿ 3 ರಂದು ಸಿದ್ದಗಂಗಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಮಠದ ವಾತಾವರಣದಲ್ಲಿ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಮಠಕ್ಕೆ ವಿಐಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನಾಡಿನ ಭಕ್ತರೂ ಇದನ್ನು ಅನ್ಯತ ತಿಳಿದುಕೊಳ್ಳಬಾರದು. ಶ್ರೀಗಳ ಆರೋಗ್ಯ ಉತ್ತಮವಾಗಿ ಚೇತರಿಕೆ ಆಗುತ್ತಿದೆ. ವಿಐಪಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಮಠಕ್ಕೆ ತನ್ನನ್ನು ಕರೆದುಕೊಂಡು ಹೋಗುವಂತೆ ಸೂಚನೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜ.16 ರಂದು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಮಠದಲ್ಲೇ ಐಸಿಯು ಮಾದರಿಯಲ್ಲೇ ಕೊಠಡಿಯನ್ನು ನಿರ್ಮಿಸಿ ಅಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತಿತ್ತು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಡಾ.ಪರಮೇಶ್ ನೇತೃತ್ವದ ತಂಡ ಚಿಕಿತ್ಸೆ ನೀಡುತಿತ್ತು. ಜ.21 ಸೋಮವಾರ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮಠಕ್ಕೆ ದೊಡ್ಡ ಪ್ರಮಾಣದ ಭಕ್ತರು ಮತ್ತು ಮಕ್ಕಳು ಆಗಮಿಸತೊಡಗಿದರು. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಸಿದ್ದಗಂಗಾ ಮಠಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

    ಮಠಕ್ಕೆ ಮತ್ತೆ ಶಿಫ್ಟ್ ಆದ ಬಳಿಕ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

  • ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಬೆಳಗ್ಗಿಗಿಂತ ಈಗ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಯಾರೂ ಕೂಡ ಮಠದತ್ತ ಬರಬೇಡಿ ಎಂದು ವೈದ್ಯ ಪರಮೇಶ್ ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಆರೋಗ್ಯ ಸರಿಯಿಲ್ಲ ಎಂದು ಮಾಧ್ಯಮದ ಮೂಲಕ ತಿಳಿದುಕೊಂಡು ಎಲ್ಲರೂ ಬಂದು ಇಲ್ಲಿ ಇದ್ದುಕೊಂಡು ಅನಾನುಕೂಲ ಮಾಡಿಕೊಳ್ಳಬಾರದು. ಯಾಕಂದ್ರೆ ಇದರಿಂದ ಮಠದ ವ್ಯವಸ್ಥೆಗೂ ಅನಾನುಕೂಲವಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಮಠಕ್ಕೆ ಬಂದು ಶ್ರೀಗಳ ದರ್ಶನಕ್ಕಾಗಿ ಕಾಯಬೇಡಿ. ಮಠಕ್ಕೆ ದಯಮಾಡಿ ಯಾರೂ ಬರಬೇಡಿ. ಅಂತಹ ಏನಾದ್ರೂ ತೊಂದರೆಗಳಿದ್ದರೆ ನಾವೇ ಮಾಧ್ಯಮದ ಮುಖಾಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನ ಬಿಜಿಎಸ್ ಹಾಗೂ ಕೆಲ ತಜ್ಞ ವೈದ್ಯರನ್ನು ಬರಲು ಹೇಳಿದ್ದೇವೆ. ಈ ಮೂಲಕ ಚಿಕಿತ್ಸೆಗೆ ಸಲಹೆ ಕೊಡುವಂತೆ ಕೇಳಿಕೊಂಡಿದ್ದೇವೆ. ಹೀಗಾಗಿ ಅವರು ಶ್ರೀಘ್ರವೇ ತುಮಕೂರಿಗೆ ಬರಲಿದ್ದಾರೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕು. ಸ್ವಾಮೀಜಿಗಳ ಆರೋಗ್ಯ ಗಂಭೀರವಾಗಿದ್ದರೂ ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ಸದ್ಯಕ್ಕೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಂತಹ ಏನಾದ್ರೂ ತೊಂದರೆಗಳಾದರೆ ಚಿಕಿತ್ಸೆಯಲ್ಲಿ ಸರಿಯಾಗಿಲ್ಲ ಅಥವಾ ಸಮಸ್ಯೆಗಳಾದ್ರೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಆರೋಗ್ಯ ಗಂಭೀರ, ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಗೊತ್ತಿಲ್ಲ- ಡಾ. ಪರಮೇಶ್

    ಶ್ರೀಗಳ ಆರೋಗ್ಯ ಗಂಭೀರ, ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಗೊತ್ತಿಲ್ಲ- ಡಾ. ಪರಮೇಶ್

    ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಗೊತ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ಡಾ. ಪರಮೇಶ್ ಮಾಹಿತಿ ನೀಡಿದ್ದಾರೆ.

    ಶ್ರೀಗಳ ಆರೋಗ್ಯದ ಕುರಿತಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ಗಂಟೆಗಳಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಅಪ್‍ಡೇಟ್ಸ್ ಕೊಡುತ್ತೇವೆ. ಭಾನುವಾರ ರಾತ್ರಿಯಿಂದ ಶ್ರೀಗಳ ಬಿಪಿ ಹಾಗೂ ಶ್ವಾಸಕೋಶದಲ್ಲಿ ಏರುಪೇರುಗಳಾಗುತ್ತಿವೆ. ಹೀಗಾಗಿ ನಮ್ಮ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದೇವೆ. ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಸಸ್ ಆಗುತ್ತೇವೆ ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಸ್ವಲ್ಪ ಗಂಭೀರ ಸ್ಥಿತಿಯಲ್ಲೇ ಅವರು ಇದ್ದಾರೆ. ಹೀಗಾಗಿ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಕೊಡುತ್ತಲೇ ಇದ್ದೇವೆ. ಸದ್ಯ ಬೇರೆ ವೈದ್ಯರು ಬಂದಿಲ್ಲ ಎಂದು ತಿಳಿಸಿದರು.

    ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಬಹಳ ಕಡಿಮೆ ಆಗಿದೆ. ಒಟ್ಟಿನಲ್ಲಿ ಶ್ರೀಗಳನ್ನು ಗಂಭೀರ ಸ್ಥಿತಿಯಿಂದ ಹೊರತರುವಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ರು.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

    ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಠಕ್ಕೆ ಸಿದ್ದಗಂಗಾ ಶ್ರೀಗಳು ವಾಪಸ್ – ಬೆಳಗಿನ ಜಾವ ನಡೆದಾಡುವ ದೇವರು ಶಿಫ್ಟ್

    ಮಠಕ್ಕೆ ಸಿದ್ದಗಂಗಾ ಶ್ರೀಗಳು ವಾಪಸ್ – ಬೆಳಗಿನ ಜಾವ ನಡೆದಾಡುವ ದೇವರು ಶಿಫ್ಟ್

    ತುಮಕೂರು: ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರಿಂದ ಕಾಯಕಯೋಗಿ ಸಿದ್ದಗಂಗಾ ಶ್ರೀಗಳನ್ನು ಇಂದು ಬೆಳಗಿನ ಜಾವ ಮಠಕ್ಕೆ ಶಿಫ್ಟ್ ಮಾಡಲಾಗಿದೆ.

    ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಏರುಪೇರು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

    ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಹೋಗುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆ ಮಠದಲ್ಲೇ ಮುಂದುವರಿಸಿದ್ದೇವೆ. ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆಪರೇಷನ್ ಮಾಡಿದ ಗಾಯ ವಾಸಿಯಾಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಇತ್ತ ಶ್ರೀಮಠದಲ್ಲಿ ವಿದ್ಯಾರ್ಥಿಗಳು ಜಮಾವಣೆಯಾಗಿದ್ದು, ಶ್ರೀಗಳ ದರ್ಶನ ಪಡೆಯುವ ಕಾತರ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಜ.9ರಂದು ರಾಜ್ಯಕ್ಕೆ ಮೋದಿ, ಅಮಿತ್ ಶಾ ಆಗಮನ

    ಬೆಂಗಳೂರು: ಹೊಸ ವರ್ಷದ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ 9 ರಂದು ಮೋದಿ ಮತ್ತು ಶಾ ತುಮಕೂರಿಗೆ ಆಗಮಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಒಂದೇ ದಿನದಲ್ಲಿ ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೀಗೆ 5 ಲೋಕಸಭೆ ಕ್ಷೇತ್ರಗಳ ಪ್ರಮುಖರ ಜೊತೆ ವಿಶೇಷ ಸಭೆ ನಡೆಸಲಿದ್ದಾರೆ. ಈ 5 ಲೋಕಸಭೆ ಕ್ಷೇತ್ರಗಳ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ವಿಶೇಷ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 20 ರಿಂದ 30 ಸಾವಿರ ಪ್ರಮುಖ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಯಲಿದೆ ಎನ್ನಲಾಗಿದೆ.

    ವಿಶೇಷ ಸಭೆ ಮೂಲಕ ರಾಜ್ಯದ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರಿನ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಿಶೇಷ ಸಭೆ ನಡೆಯಲಿದ್ದು, ಸಭೆಗೂ ಮುನ್ನ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಸ್ವಲ್ಪ ನೋವಿದ್ದು, ಜ್ವರ ಬಂದಿದೆ- ಕಿರಿಯ ಶ್ರೀ

    ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಸ್ವಲ್ಪ ನೋವಿದ್ದು, ಜ್ವರ ಬಂದಿದೆ- ಕಿರಿಯ ಶ್ರೀ

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ ಎಂದು ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶ್ರೀಗಳು ವಿಶ್ರಾಂತಿಯಿಂದ ಎದ್ದು ನಿತ್ಯಕಾಯಕ ಆರಂಭಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಸ್ವಲ್ಪ ನೋವಿದೆ ಹಾಗಾಗಿ ಜ್ವರ ಕಾಣಿಸಿಕೊಂಡಿತ್ತು. ಈಗ ಜ್ವರ ಕಡಿಮೆಯಾಗಿದ್ದು ಭಕ್ತಾಧಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

    ಶ್ರೀಗಳಿಗೆ ಸ್ವಲ್ಪ ನಿಶ್ಯಕ್ತಿ ಇದ್ದು ಅದಕ್ಕೆ ಸಂಬಂಧಿಸಿದ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಮಠದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಯಲಿದ್ದು ಬೇರೆ ಎಲ್ಲೂ ಶಿಫ್ಟ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಕಳೆದ 13 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಶ್ರೀಗಳು ಗುಣಮುಖರಾಗಿ ಬುಧವಾರ ಶ್ರೀಮಠಕ್ಕೆ ವಾಪಸ್ಸಾಗಿದ್ದರು. ಗುರುವಾರ ಮುಂಜಾನೆಯೇ ವಿಶ್ರಾಂತಿಯಿಂದ ಇದ್ದ ಶ್ರೀಗಳು ಸ್ನಾನ ಮುಗಿಸಿ ಬಳಿಕ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದರು. ಎಂದಿನಂತೆ ಶ್ರೀಗಳು ಇಡ್ಲಿ, ಹಣ್ಣು ಹಂಪಲನ್ನು ಸೇವಿಸಿದ್ದು, ಸಿದ್ದಗಂಗಾ ಆಸ್ಪತ್ರೆ ವೈದ್ಯರು ಶ್ರಿಗಳ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದಾರೆ.

    ಆಸ್ಪತ್ರೆಯಲ್ಲಿಯೇ ಶ್ರೀಗಳಿಗೆ ಇನ್ನೂ ಕೆಲದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದರೂ ಶ್ರಿಗಳು ಮಠ ಹಾಗೂ ವಿದ್ಯಾರ್ಥಿಗಳನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ತುರ್ತಾಗಿ ಶ್ರೀಮಠಕ್ಕೆ ಕರೆದುಕೊಂಡು ಬರಲಾಗಿತ್ತು. ಸಿದ್ದಗಂಗಾ ಶ್ರೀಗಳನ್ನು ಕರೆದುಕೊಂಡು ಬರಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಯಾವುದೇ ತೊಂದರೆ ಇಲ್ಲದೇ ಶ್ರೀಗಳು ಶ್ರೀಮಠಕ್ಕೆ ಬಂದು ತಲುಪಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೆನ್ನೈಗೆ ಬಂದಿಳಿದ ಸಿದ್ದಗಂಗಾ ಶ್ರೀ – ನಿತ್ಯ ಪೂಜೆಗೆ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ

    ಚೆನ್ನೈಗೆ ಬಂದಿಳಿದ ಸಿದ್ದಗಂಗಾ ಶ್ರೀ – ನಿತ್ಯ ಪೂಜೆಗೆ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ

    ಚೆನ್ನೈ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಬಂದಿಳಿದಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಿಂದ ಬೆನ್ಜ್ ಕಾರಲ್ಲಿ ಹೆಚ್‍ಎಎಲ್ ಏರ್ ಪೋರ್ಟ್ ತಲುಪಿದ್ದ ಶ್ರೀಗಳನ್ನು ಅಲ್ಲಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದುಕೊಂಡು ಬರಲಾಗಿದೆ. ಚೆನ್ನೈ ಏರ್ ಪೋರ್ಟ್ ನಿಂದ ರೇಲಾ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಇಂದು ರಾತ್ರಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ಶ್ರೀಗಳ ನಿತ್ಯದ ಪೂಜೆಗಾಗಿ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಶಿಷ್ಯ ವೃಂದದವರು ಪೂಜಾ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳೊಂದಿಗೆ ಈಗಾಗಲೇ ಚೆನ್ನೈನ ಆಸ್ಪತ್ರೆಗೆ ಬಂದಿದ್ದಾರೆ. ಸ್ವಾಮೀಜಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಇದನ್ನೂ ಓದಿ: ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    ಐಸಿಎಟಿ (ಇಂಟರ್ ನ್ಯಾಷನಲ್ ಕ್ರಿಟಿಕಲ್ ಕೇರ್ ಏರ್ ಟ್ರಾನ್ಸ್ ಫರ್ ಟೀಮ್) ಸಂಸ್ಥೆಗೆ ಸೇರಿದ ಏರ್ ಅಂಬುಲೆನ್ಸ್ ನಲ್ಲಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸಬಹುದಾದ ಈ ಏರ್ ಅಂಬುಲೆನ್ಸ್ ನಲ್ಲಿ ಐಸಿಯು ಯುನಿಟ್ ಇರುತ್ತದೆ. ಡಾಕ್ಟರ್ ಶಾಲಿನಿ ನಲ್ವಾಡ್ ಮತ್ತು ರಾಹುಲ್ ಸಿಂಗ್ ನೇತೃತ್ವದ ಐಸಿಎಟಿಯನ್ನ ಏರ್ ಅಂಬುಲೆನ್ಸ್ ಸೇವೆಗಾಗಿ ಗುರುವಾರ ಸಂಪರ್ಕಿಸಲಾಗಿತ್ತು.

    https://www.youtube.com/watch?v=aO1mVgHf5ww

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv