Tag: shivakumara swamiji

  • ಜ.21 ದಾಸೋಹ ದಿನವೆಂದು ಘೋಷಿಸಿ- ಸರ್ಕಾರಕ್ಕೆ ಹೊನ್ನಮ್ಮಗವಿಮಠ ಶ್ರೀ ಆಗ್ರಹ

    ಜ.21 ದಾಸೋಹ ದಿನವೆಂದು ಘೋಷಿಸಿ- ಸರ್ಕಾರಕ್ಕೆ ಹೊನ್ನಮ್ಮಗವಿಮಠ ಶ್ರೀ ಆಗ್ರಹ

    ನೆಲಮಂಗಲ: ಜನವರಿ 21ನ್ನು ದಾಸೋಹ ದಿನವೆಂದು ಘೋಷಿಸಿರಿ ಎಂದು ರಾಜ್ಯ ಸರ್ಕಾರಕ್ಕೆ ನೆಲಮಂಗಲ ತಾಲೂಕಿನ ಹೊನ್ನಮ್ಮಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

    ಕರ್ನಾಟಕ ರತ್ನ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವೈಕ್ಯ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಜನವರಿ 21ಕ್ಕೆ 2 ವರ್ಷ ತುಂಬುತ್ತದೆ. ಹೀಗಾಗಿ ಈ ದಿನವನ್ನು ದಾಸೋಹ ದಿನವೆಂದು ಘೋಷಿಸಿರಿ ಎಂದು ಮುಖ್ಯಮಂತ್ರಿ. ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

    ಸಿದ್ದಗಂಗಾ ಶ್ರೀಗಳು 21 ನೇ ಶತಮಾನದ ತ್ರಿವಿಧ ದಾಸೋಹದ ಹರಿಕಾರರು ಎಂದು ಬಣ್ಣಿಸಿರುವ ಹೊನ್ನಮ್ಮ ಗವಿಮಠ ಶ್ರೀಗಳು, ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದಾಗ ಅಂದು 36 ಗಂಟೆಯಲ್ಲಿ 40 ಲಕ್ಷ ಜನ ಅನ್ನ ದಾಸೋಹ ಸ್ವೀಕರಿಸಿದ್ದರು. ಆದ್ದರಿಂದ ಜನವರಿ 21ನ್ನು ದಾಸೋಹ ದಿನವೆಂದು ಘೋಷಿಸಲು ಮನವಿ ಮಾಡಿದ್ದಾರೆ.

     

  • ಇಂದು ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಜಯಂತಿ

    ಇಂದು ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಜಯಂತಿ

    ತುಮಕೂರು: ಇಂದು ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಹುಟ್ಟುಹಬ್ಬವಾಗಿದ್ದು, ಮಠದ ಆಡಳಿತ ಮಂಡಳಿ ಜಯಂತಿ ಆಚರಣೆ ರದ್ದು ಮಾಡಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಮಾಡಿದ್ದಾರೆ. ಪ್ರತಿವರ್ಷ ಏಪ್ರಿಲ್ 1 ರಂದು ಶ್ರೀಗಳ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತಿತ್ತು.

    ಎಂದಿನಂತೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ ಮಠದ ವಿದ್ಯಾರ್ಥಿಗಳಿಗೆ ಸಿಹಿ ಊಟ ವಿತರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಸಿದ್ದಗಂಗಾ ಮಠದ ಮೇಲೂ ಕೊರೊನಾ ಎಫೆಕ್ಟ್- ಶಿವಕುಮಾರ ಶ್ರೀಗಳ ಜಯಂತಿ ರದ್ದು

    ಸಿದ್ದಗಂಗಾ ಮಠದ ಮೇಲೂ ಕೊರೊನಾ ಎಫೆಕ್ಟ್- ಶಿವಕುಮಾರ ಶ್ರೀಗಳ ಜಯಂತಿ ರದ್ದು

    ತುಮಕೂರು: ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿರೋ ಕೊರೊನಾ ವೈರಸ್ ಬಿಸಿ ತುಮಕೂರಿನ ಸಿದ್ದಗಂಗಾ ಮಠಕ್ಕೂ ತಟ್ಟಿದೆ. ಮಠಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಮಠದ 10 ಸಾವಿರ ವಿದ್ಯಾರ್ಥಿಗಳನ್ನು ಕೂಡಲೇ ಪರೀಕ್ಷೆ ಮುಗಿಸಿ ಊರಿಗೆ ಕಳುಹಿಸಲು ನಿರ್ಧರಿಸಲಾಗಿದೆ.

    ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ತಮ್ಮ ಊರಿನತ್ತ ಕಳುಹಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 5ರಂದು ಆಚರಿಸಲು ನಿರ್ಧರಿಸಿದ್ದ ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಜಯಂತಿಗೂ ಕೊರೊನಾ ಎಫೆಕ್ಟ್‍ನಿಂದಾಗಿ ಬ್ರೇಕ್ ಹಾಕಲಾಗಿದೆ. ಜಿಲ್ಲಾಡಳಿತದಿಂದ ಅನುಮತಿ ಸಿಗದ ಹಿನ್ನೆಲೆ ಸದ್ಯಕ್ಕೆ ಕಾರ್ಯಕ್ರಮ ನಡೆಸದಂತೆ ಬ್ರೇಕ್ ಹಾಕಲಾಗಿದೆ.

    ಈ ಕುರಿತಾಗಿ ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಸ್ಪಷ್ಟಪಡಿಸಿದ್ದಾರೆ. ಮಠದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದರಿಂದ ಸರ್ಕಾರದ ನಿರ್ದೇಶನದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಪರೀಕ್ಷೆ ಮುಗಿಸಿ ತಮ್ಮ ಊರುಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಎಲ್ಲೂ ಹೆಚ್ಚಿನ ಜನರು ಸೇರದಂತೆ ಆದೇಶಿಸಿರುವ ಸರ್ಕಾರದ ನಿಯಮದಂತೆ ಮಠದಲ್ಲೂ ಮಕ್ಕಳನ್ನು ಒಟ್ಟಿಗೆ ಸೇರದಂತೆ ಎಲ್ಲಾ ಕ್ರಮಗಳನ್ನ ಜರುಗಿಸಲಾಗಿದೆ ಎಂದು ತಿಳಿಸಿದರು.

  • ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

    ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

    – ದೆಹಲಿ ಉದ್ಯಮಿಯಿಂದ ಬೆಳ್ಳಿ ವಿಗ್ರಹ ಸಮರ್ಪಣೆ

    ತುಮಕೂರು: ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

    ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

    ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದ್ದುಗೆ ಪೀಠವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗ ಈಗಾಗಲೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಈ ಭಾವ ಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

    ಗದ್ದುಗೆ ಪೀಠದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಸಾಕ್ಷಾತ್ ಶಿವಕುಮಾರ ಶ್ರೀಗಳೇ ಬಂದು ಕುಂತ ಅನುಭವ ಭಕ್ತಾಧಿಗಳಲ್ಲಿ ಕಂಡಿದೆ. ಇಂದು ಶ್ರೀಗಳು ಲಿಂಗೈಕ್ಯರಾಗಿ 1 ವರ್ಷವಾಗಿದೆ. ಹಾಗಾಗಿ ಶ್ರೀಮಠದ ಭಕ್ತರಾದ ದೆಹಲಿ ಮೂಲದ ಉದ್ಯಮಿ ಮುಕೇಶ್ ಗರ್ಗ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಬೆಳ್ಳಿ ವಿಗ್ರಹ ಇದಾಗಿದೆ.

  • ಕಾಯಕಯೋಗಿಯ ಗದ್ದುಗೆ ಮೇಲೆ ಶಿವಲಿಂಗ ಪ್ರತಿಷ್ಠಾಪನೆ

    ಕಾಯಕಯೋಗಿಯ ಗದ್ದುಗೆ ಮೇಲೆ ಶಿವಲಿಂಗ ಪ್ರತಿಷ್ಠಾಪನೆ

    ತುಮಕೂರು: ಸಿದ್ದಗಂಗೆಯ ಶಿವೈಕ್ಯ ಶತಾಯುಷಿ ಶಿವಕುಮಾರ ಶ್ರೀಗಳ ಐಕ್ಯ ಸ್ಥಳದ ಮೇಲೆ ಇಂದು ಶಿವಲಿಂಗ ಪ್ರತಿಷ್ಠಾಪನೆಯಾಗಿದೆ.

    ಇಂದು ಬೆಳಗ್ಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಾತಃ ಕಾಲದಿಂದಲೇ ಹಲವು ವಿಧಿವಿಧಾನಗಳನ್ನು ನೆರವೇರಿಸಿ, ಶಿವಲಿಂಗವನ್ನು ದೈವೀಕರಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸೇರಿದಂತೆ ಹಲವು ಸಾಧು ಸಂತರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಯಿತು. ಇದನ್ನೂ ಓದಿ: ಪುರಾತನ ಕಾಲದ ಶಿವಲಿಂಗ ಪತ್ತೆ- ಗ್ರಾಮಸ್ಥರಲ್ಲಿ ಅಚ್ಚರಿ, ಸಂತಸ

    ಲಿಂಗವನ್ನು ಶ್ರೀಗಳು ತಂಗುತ್ತಿದ್ದ ಹಳೆ ಮಠದಲ್ಲಿ ಮಂಡಳದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿವಿಧಾನ ಪೂರೈಸಲಾಗಿತ್ತು. ಹೀಗೆ ಸಕಲ ವಿಧಾನ ಪೂರೈಸಿ ದೈವೀ ಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.

    ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರು ಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಪೂರ್ಣವಾಗಿ ಲಿಂಗ 38 ಇಂಚು ಇದೆ.

    ಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಸಮೂಹ ಬಂದಿತ್ತು. ಅದೇ ರೀತಿ ಸಂಸದ ಜಿ.ಎಸ್ ಬಸವರಾಜ ಹಾಜರಿದ್ದು, ಶಿವಲಿಂಗ ದರ್ಶನ ಪಡೆದರು.

  • ಸಿದ್ದಗಂಗಾ ಮಠಕ್ಕೆ ಸಿಎಂ ಭೇಟಿ – ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ

    ಸಿದ್ದಗಂಗಾ ಮಠಕ್ಕೆ ಸಿಎಂ ಭೇಟಿ – ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ

    ತುಮಕೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದಿದ್ದಾರೆ.

    ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ 7ನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮ ಇತ್ತು. ಹಾಗಾಗಿ ಸಿಎಂ ಮಠಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ. ಮೊದಲು ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ಬಳಿಕ ಹೊಸ ಮಠದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಇದೇ ವೇಳೆ ಸಿದ್ದಗಂಗಾ ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ದೇಣಿಗೆ ಚೆಕ್ ಸಿಎಂಗೆ ಹಸ್ತಾಂತರಿಸಲಾಯಿತು.

    ಸಿಎಂ ಆಗಮನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಶಿವಕುಮಾರ ಶ್ರೀಗಳ ಕಚೇರಿ ತೆರೆಯಲಾಗಿತ್ತು. ಈ ಕಚೇರಿಯಲ್ಲೇ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನಕ್ಕೆ ಬಂದಿದ್ದೇನೆ. ಅವರ ಆಶೀರ್ವಾದದಿಂದ ಮತ್ತೆ ಈ ರಾಜ್ಯದ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ನಾನು ಸಿಎಂ ಆಗಿದ್ದನ್ನು ಅವರು ನೋಡಿದರೆ ಎಷ್ಟು ಸಂತಸ ಪಡುತ್ತಿದ್ದರು. ಅವರ ಸಂತಸ ನೋಡುವ ಸೌಭಾಗ್ಯ ನನಗೆ ಇಲ್ಲ. ಆದರೂ ಸಹ ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಶಿವಕುಮಾರ ಶ್ರೀಗಳನ್ನು ನೆನಪಿಸಿಕೊಂಡರು.

    ಉಮೇಶ್ ಕತ್ತಿ, ಹೆಚ್‍ಡಿಕೆ ಭೇಟಿ ವಿಚಾರದಲ್ಲಿ ಮಾತನಾಡಿದ ಸಿಎಂ, ಅದರಲ್ಲಿ ಸತ್ಯಾಂಶ ಇಲ್ಲ, ಮಂಗಳವಾರ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ,  ಜೊತೆ ನಾವು ಒಂದು ಗಂಟೆ ಕುಳಿತು ಮಾತನಾಡಿದ್ದೇವೆ. ಅವರಿಗೆ ಅವಕಾಶ ಸಿಗಬೇಕು ಎನ್ನುವುದು ನಮ್ಮ ಮನಸ್ಸಿನಲ್ಲಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ನಡೆದಾಡುವ ದೇವರ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರ

    ನಡೆದಾಡುವ ದೇವರ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರ

    ತುಮಕೂರು: ಶಿವೈಕ್ಯರಾದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ. ಶ್ರೀಗಳು ಲಿಂಗೈಕ್ಯರಾದ ಗದ್ದುಗೆಯ ನೆಲಮಾಳಿಗೆ ಈಗ ಧ್ಯಾನ ಮಂದಿರವಾಗಿ ಬದಲಾಗಿದೆ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಧ್ಯಾನಾಸಕ್ತರಾಗಿ ಧ್ಯಾನದಲ್ಲಿ ಶಿವಕುಮಾರ ಶ್ರೀಗಳನ್ನು ಕಂಡು ಪುನೀತರಾಗುತ್ತಿದ್ದಾರೆ.

    ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ಬಳಿ ಓಂಕಾರ ಮೊಳಗುತ್ತಿದೆ. ಭಕ್ತಾದಿಗಳ ಮನಸ್ಸು, ಭಾವ, ಬುದ್ಧಿ ಎಲ್ಲವರೂ ಪ್ರಫುಲ್ಲವಾಗುತ್ತಿದೆ. ಆ ಮುಖೇನ ಭಕ್ತಾದಿಗಳು ಶಿವಕುಮಾರ ಶ್ರೀಗಳನ್ನು ಕಂಡು ಪಾವನರಾಗುತ್ತಿದ್ದಾರೆ.

    ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸ್ಥಳದಲ್ಲಿ ಈಗ ಧ್ಯಾನ ಮಂದಿರ ನಿರ್ಮಾಣವಾಗಿದೆ. ಅಂದರೆ ಮೇಲ್ಭಾಗದಲ್ಲಿ ಗದ್ದುಗೆ ಇದ್ದರೆ ನೆಲಮಹಡಿಯಲ್ಲಿ ಧ್ಯಾನಮಂದಿರ ನಿರ್ಮಾಣ ಮಾಡಲಾಗಿದೆ. ಪ್ರಶಾಂತ ವಾತಾವರಣ, ಮಂದ ಬೆಳಕು, ಎದುರಿಗೆ ಶಿವಕುಮಾರ ಶ್ರೀಗಳ ಪುತ್ಥಳಿ ಇದೆ. ಇನ್ನೊಂದೆಡೆಯಿಂದ ಓಂಕಾರ ನಾದ ಕೇಳಿ ಬರುತ್ತಿರುತ್ತದೆ. ಇಲ್ಲಿ ಭಕ್ತಾದಿಗಳು ಕುಳಿತು ಧ್ಯಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

    20*10 ವಿಸ್ತೀರ್ಣದಲ್ಲಿರುವ ಈ ಧ್ಯಾನ ಮಂದಿರದಲ್ಲಿ ಒಮ್ಮೆ 5-10 ಜನರಿಗೆ ಮಾತ್ರ ಧ್ಯಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೇವಲ 5-10 ನಿಮಿಷ ಮಾತ್ರ ಧ್ಯಾನಕ್ಕೆ ಅವಕಾಶ ಇದೆ. ಬಳಿಕ ಮುಂದಿನ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಧ್ಯಾನ ಮಂದಿರ ತೆರೆದಿರುತ್ತದೆ. ಮೊದಲು ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಧ್ಯಾನಕ್ಕೆ ಅವಕಾಶ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಜೀವನದ ಜಂಟಾಟ ಮರೆತು, ಧ್ಯಾನಾಸಕ್ತರಾಗಿ ಮನಸ್ಸು ಮತ್ತು ಬುದ್ಧಿಯನ್ನು ಸಮೀಕರಿಸಿ ಶಿವಕುಮಾರ ಶ್ರೀಗಳನ್ನು ಕಂಡು ಪಾವನರಾಗುತ್ತಿದ್ದಾರೆ ಎಂದು ಭಕ್ತೆ ದಿವ್ಯ ಭಾರತಿ ಹೇಳುತ್ತಾರೆ.

    ಧ್ಯಾನ ಮಂದಿರ ಪ್ರವೇಶಿಸುತಿದ್ದಂತೆಯೇ ಒಂದು ರೀತಿಯ ಆಹ್ಲಾದಕರ ವಾತಾವರಣ, ಋಣಾತ್ಮಕ ಭಾವನೆ ಹೋಗಿ ಧನಾತ್ಮ ಚಿಂತನೆ ಮೂಡುತ್ತಿದೆ. ಹಾಗಾಗಿ ದಿನೇ ದಿನೇ ಧ್ಯಾನ ಮಂದಿರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಶೇಷ ದಿನಗಳಲ್ಲಿ ಸಿದ್ದಗಂಗಾ ಪಿಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಸೇರಿದಂತೆ ಇತರ ಸ್ವಾಮೀಜಿಗಳು ಧ್ಯಾನಾಸಕ್ತರಾಗುವ ಮೂಲಕ ತಮ್ಮ ಗುರುವರ್ಯರ ದರ್ಶನ ಮಾಡುತ್ತಿದ್ದಾರೆ.

  • ಸಿದ್ದಗಂಗಾ ಮಠಕ್ಕೆ ನಟ ಶಿವರಾಜ್‍ಕುಮಾರ್ ಭೇಟಿ

    ಸಿದ್ದಗಂಗಾ ಮಠಕ್ಕೆ ನಟ ಶಿವರಾಜ್‍ಕುಮಾರ್ ಭೇಟಿ

    ತುಮಕೂರು: ಹ್ಯಾಟ್ರಿಕ್ ಹೀರೋ ನಟ ಶಿವರಾಜ್‍ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ.

    ಶಿವರಾಜ್‍ಕುಮಾರ್ ಅವರು ಗದ್ದುಗೆ ದ್ವಾರದ ಮುಂದೆ ಕೆಲಕಾಲ ಕೂತು ನಮಸ್ಕರಿಸಿದರು. ಬಳಿಕ ಹೊಸ ಮಠಕ್ಕೆ ಬಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.

    ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, “ಶಿವಕುಮಾರ ಶ್ರೀಗಳು ದೂರವಾದಾಗ ನಾನು ವಿದೇಶದಲ್ಲಿ ಇದ್ದೆ. ಹಾಗಾಗಿ ಬರಲು ಆಗಲಿಲ್ಲ. ಶ್ರೀಗಳು ಮೇಲೆ ಪ್ರೀತಿ ಹಾಗೂ ನಂಟು ಇತ್ತು. ಹಾಗಾಗಿ ಇಂದು ಬಂದು ಗದ್ದುಗೆ ದರ್ಶನ ಪಡೆದಿದ್ದೇನೆ” ಎಂದರು. ಅಲ್ಲದೇ ನಾನು ಇನ್ನು ಮುಂದೆ ಬರುತ್ತಿರುತ್ತೇನೆ. ಶಿವಕುಮಾರ ಶ್ರೀಗಳು ಇನ್ನೂ ನಮ್ಮ ಜೊತೆಯೇ ಇದ್ದಾರೆ ಎನ್ನುವ ಫೀಲ್ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ನಡುವೆ ಎಂದಿನಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

    ಇತ್ತೀಚೆಗೆ ನಟ ಉಪೇಂದ್ರ ಕೂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ಗದ್ದುಗೆಗೆ ಹೋಗಿ ಅಲ್ಲಿ ಶ್ರೀಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದರು. ಬಳಿಕ ಕೆಲಕಾಲ ಸಿದ್ದಲಿಂಗಸ್ವಾಮಿಗಳ ಜೊತೆ ಕುಳಿತು ಉಭಯಕುಶಲೋಪರಿ ನಡೆಸಿದ್ದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ, ಹುಬ್ಬಳ್ಳಿಯಲ್ಲಿ ಒಂದು ಪ್ರೆಸ್ ಮೀಟ್ ಇದೆ, ಅದಕ್ಕೆ ಹೊರಟ್ಟಿದ್ದೆ. ಈ ಕಡೆಯಿಂದ ಹೋಗಬೇಕಾದರೆ ಇಲ್ಲಿಗೆ ಬಂದು ಭೇಟಿ ಕೊಟ್ಟು ಹೋಗುವುದು ಒಂದು ಸಂಪ್ರದಾಯವಾಗಿದೆ. ಅಲ್ಲದೇ ಈ ಹಿಂದೆ ದೇವರಿದ್ದಾಗ ಮಠಕ್ಕೆ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಸಂತೋಷವಾಗುತ್ತದೆ. ಯಾಕೆಂದರೆ ಆನಂದ, ಅನುಭೂತಿ ದೊರೆಯುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

    https://www.youtube.com/watch?v=XdztOfmtLT4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಪುಣ್ಯಾರಾಧನೆ- ಧನ್ಯವಾದ ಅರ್ಪಿಸಿದ್ರು ಸಿದ್ದಲಿಂಗ ಶ್ರೀ

    ಶ್ರೀಗಳ ಪುಣ್ಯಾರಾಧನೆ- ಧನ್ಯವಾದ ಅರ್ಪಿಸಿದ್ರು ಸಿದ್ದಲಿಂಗ ಶ್ರೀ

    ತುಮಕೂರು: ಶಿವೈಕ್ಯರಾದ ಶಿವಕುಮಾರ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದ ಯಶಸ್ಸನ್ನು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತಾದಿಗಳಿಗೆ ಅರ್ಪಿಸಿದ್ದಾರೆ.

    ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಜಿಲ್ಲಾಡಳಿತ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಶ್ರಿಗಳು ಧನ್ಯವಾದ ಅರ್ಪಿಸಿದ್ದಾರೆ. ಯಾವುದೇ ಗೊಂದಲ, ಸಮಸ್ಯೆ ಇಲ್ಲದೆ ಸುಸೂತ್ರವಾಗಿ ಕಾರ್ಯಕ್ರಮ ನಡೆದಿರುವುದಕ್ಕೆ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಕಿರಿಯ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಪುಣ್ಯಾರಾಧನೆಯ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆದಿದೆ. ನಾನು ಈ ಯಶಸ್ಸನ್ನು ಮಕ್ಕಳಿಗೆ, ಸಿಬ್ಬಂದಿಗೆ, ಭಕ್ತರಿಗೆ, ಸರ್ಕಾರ, ಇಲಾಖೆ, ಜಿಲ್ಲಾಡಳಿತ ಹಾಗೂ ಕೊಡುಗೆ ನೀಡಿದವರಿಗೆ ಅರ್ಪಿಸುತ್ತೇನೆ. ಅವರ ಶ್ರಮದ ಫಲವಾಗಿ ಪುಣ್ಯಾರಾಧನೆ ಯಶಸ್ವಿ ಆಗಿದೆ. ಪೂಜ್ಯರ ಮೇಲಿದ್ದ ಭಕ್ತಿಯನ್ನು ಆ ಸಂದರ್ಭದಲ್ಲಿ ನೋಡಲು ಸಾಧ್ಯವಿಲ್ಲ. ಶ್ರೀಸಾಮಾನ್ಯನಿಂದ ಗಣ್ಯ ವ್ಯಕ್ತಿಗಳವರೆಗೂ ಸಮಾನವಾದ ಭಕ್ತಿಯಿತ್ತು. ಇಲ್ಲಿ ಎಲ್ಲರೂ ಸಮಾನವಾಗಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಎಂದರು.

    ಈ ಕಾರ್ಯಕ್ರಮವನ್ನು ಅನೇಕ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಮಾಧ್ಯಮದವರು ಕೂಡ ತಮ್ಮ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕನ್ನಡ ನಾಡಿನಲ್ಲಿ ಮಾತ್ರವಲ್ಲ ನಾಳೆ ಆಸ್ಟ್ರೇಲಿಯಾದಲ್ಲೂ ಕೂಡ ಪುಣ್ಯರಾಧನೆ ಮಾಡುತ್ತಿದ್ದಾರೆ. ಅವರು ವಿಡಿಯೋ ಕಾಲ್ ಮೂಲಕ ಮಾತನಾಡಬೇಕು ಎಂದು ಕೇಳುತ್ತಿದ್ದಾರೆ. ಅದು ಅವರ ದೊಡ್ಡ ವ್ಯಕ್ತಿತ್ವ. ಈ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಇದೇ ವೇಳೆ ಶಿವೈಕ್ಯ ಶಿವಕುಮಾರ ಶ್ರೀಗಳ ಕಂಚಿನ ಪುತ್ಥಳಿ ಬಗ್ಗೆ ಮಾತನಾಡಿದ ಅವರು, ಶ್ರೀಗಳ ಕಂಚಿನ ಪುತ್ಥಳಿ ಉದ್ಯಾನವನದ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲು ತಯಾರಿ ನಡೆಯುತ್ತಿದೆ. ಏಪ್ರಿಲ್ 1ರ ಶಿವಕುಮಾರ ಶ್ರೀಗಳ ಜನ್ಮ ದಿನದ ಮುಂಚಿತವಾಗಿಯೇ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 1 ಸಾವಿರ ವಿದ್ಯಾರ್ಥಿಗಳಿಂದ ಗುಲಾಬಿ ಹೂವನ್ನಿಟ್ಟು ಶ್ರೀಗಳಿಗೆ ಶ್ರದ್ಧಾಂಜಲಿ

    1 ಸಾವಿರ ವಿದ್ಯಾರ್ಥಿಗಳಿಂದ ಗುಲಾಬಿ ಹೂವನ್ನಿಟ್ಟು ಶ್ರೀಗಳಿಗೆ ಶ್ರದ್ಧಾಂಜಲಿ

    ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಸಾವಿರಾರು ವಿದ್ಯಾರ್ಥಿಗಳು ಗುಲಾಬಿ ಹೂ ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ತುಮಕೂರು ನಗರದ ವರಿ ಇಂಟರ್ ನ್ಯಾಷನಲ್ ಶಾಲೆಯ 1 ಸಾವಿರ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ಶ್ರೀಗಳ ಗದ್ದುಗೆಗೆ ಗುಲಾಬಿ ಹೂವನ್ನಿಟ್ಟು ನಮಸ್ಕರಿಸಿದ್ದಾರೆ. 65 ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಶ್ರೀಗಳ ಗದ್ದುಗೆ ದರ್ಶನ ಮಾಡಿಸಿದ್ದಾರೆ.

    ಇತ್ತ ಜನವರಿ 31 ರಂದು ನಡೆಯಲಿರುವ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆಯ ಸಕಲ ತಯಾರಿ ನಡೆಯುತ್ತಿದೆ. ಭಕ್ತಾದಿಗಳಿಗಾಗಿ ಭಕ್ಷ್ಯ ಭೋಜನ ತಯಾರಾಗುತ್ತಿದೆ. ಎರಡು ಲಕ್ಷ ಜಹಾಂಗೀರ್, 80 ಕ್ವಿಂಟಾಲ್ ಬೋಂದಿ, 50 ಚೀಲ ಮಾಲ್ದಿ ಪುಡಿ ತಯಾರಾಗುತ್ತಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!

    ಒಟ್ಟು 65 ಕ್ಕೂ ಹೆಚ್ಚು ಅಡುಗೆ ಭಟ್ಟರು ಮಠದ ಮೂರು ಕಡೆ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠದ ಶಿಕ್ಷಕರಿಂದ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಸಿದ್ದಗಂಗಾ ವಿದ್ಯಾಸಂಸ್ಥೆ ಶಿಕ್ಷಕರಿಂದ ಮಠದ ಆವರಣದಲ್ಲಿರುವ ಕಲ್ಯಾಣಿ ಸ್ವಚ್ಛತೆ ನಡೆಯುತ್ತಿದೆ. ಹತ್ತಾರು ಶಿಕ್ಷಕರು ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಅವರು ಜನವರಿ 21ರ ಸೋಮವಾರ ಲಿಂಗೈಕ್ಯರಾಗಿದ್ದು, ಗುರುವಾರ ಪುಣ್ಯಾರಾಧನೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv