Tag: Shivakumara Swami

  • ಶಿವಕುಮಾರ ಶ್ರೀಗಳ 6ನೇ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿಂದು ಸಂಸ್ಮರಣೋತ್ಸವ

    ಶಿವಕುಮಾರ ಶ್ರೀಗಳ 6ನೇ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿಂದು ಸಂಸ್ಮರಣೋತ್ಸವ

    – ಕರ್ನಾಟಕ, ಮೇಘಾಲಯದ ರಾಜ್ಯಪಾಲರು ಭಾಗಿ

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶಿವೈಕ್ಯ ಡಾ.ಶಿವಕುಮಾರ ಶ್ರೀಗಳು ಇಂದಿಗೆ ನಮ್ಮೆನ್ನೆಲ್ಲ ಅಗಲಿ 6 ವರ್ಷಗಳೇ ಕಳೆದಿವೆ. ಇದರ ಸ್ಮರಣಾರ್ಥವಾಗಿ ಇಂದು (ಜ.21) ತುಮಕೂರಿನ ಸಿದ್ಧಗಂಗಾ ಮಠದಲ್ಲಿ (Tumakuru Siddaganga Mutt) ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಶ್ರೀಗಳು ನಮ್ಮನ್ನಗಲಿ 6 ವರ್ಷಗಳೇ ಉರುಳಿದರೂ ಅವರ ಆದರ್ಶಗಳು, ಬದುಕಿನ ಚಿಂತನೆಗಳು, ನಡೆದುಕೊಂಡ ರೀತಿ ನೀತಿ, ಆಚಾರ-ವಿಚಾರಗಳು ಇಂದಿಗೂ ಜೀವಂತ. ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಹಿನ್ನೆಲೆ ಮಠದ ಆವಣರಣದಲ್ಲಿ ಬೃಹತ್ ವೇದಿಕೆ ತಲೆ ಎತ್ತಿದೆ.ಇದನ್ನೂ ಓದಿ: ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಏನೇನು ಕಾರ್ಯಕ್ರಮ?
    ಇಂದು ಬೆಳಗ್ಗೆಯಿಂದಲೇ ಸಿದ್ಧಮಠದ ಆವರಣದಲ್ಲಿರುವ ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ಮಂತ್ರಘೋಷ್ಯಗಳೊಂದಿಗೆ ವಿಶೇಷ ಪೂಜೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಶ್ರೀಗಳ ಪುತ್ಥಳಿಯನ್ನ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಶ್ರೀಮಠದ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ವೇದಿಕೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ಉತ್ತಾಧಿಕಾರಿ ಶ್ರೀ ಶಿವ ಸಿದ್ಧೇಶ್ವರ ಸ್ವಾಮೀಜಿ, ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

    ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೈಸೂರಿನ ಸಾಹಿತಿ ಡಾ ಹೆಚ್.ಟಿ.ಶೈಲಜಾ ಹಾಗೂ ತುಮಕೂರಿನ ಸಮಾಜ ಸೇವಕ ಜಿ.ಎನ್.ಬಸವರಾಜಪ್ಪ ಅವರಿಗೆ ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುವುದು. ಅಲ್ಲದೇ ಸಂಜೆ 6 ಗಂಟೆಗೆ ಇದೇ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನೀರಿಕ್ಷೆಯನ್ನು ಮಠದ ಆಡಳಿತ ಮಂಡಳಿ ಇಟ್ಟುಕೊಂಡಿದೆ. ಬರುವಂತಹ ಭಕ್ತರಿಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಮಠದ ಆವರಣದಲ್ಲಿ ಉಪಾಹಾರ ಸಿದ್ಧಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಇಡೀ ಮಠ ಸುತ್ತಲೂ ಹಾಗೂ ಒಳಗೆ ಪೊಲೀಸ್ ವ್ಯವಸ್ಥೆ ನಿಯೋಜಿಸಲಾಗಿದೆ.ಇದನ್ನೂ ಓದಿ: ದಿನ ಭವಿಷ್ಯ 21-01-2025

     

  • ಸಿದ್ದಗಂಗಾ ಮಠದಲ್ಲಿ ದಾಸೋಹ ದಿನ ರದ್ದು

    ಸಿದ್ದಗಂಗಾ ಮಠದಲ್ಲಿ ದಾಸೋಹ ದಿನ ರದ್ದು

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ನಡೆಯಬೇಕಿದ್ದ 3ನೇ ವರ್ಷದ ಪುಣ್ಯ ಸ್ಮರಣೆ ದಿನವನ್ನು ಸರಳ ಪೂಜೆ, ಉತ್ಸವ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ 21 ರಂದು ಶಿವಕುಮಾರ ಸ್ವಾಮಿಗಳ 3ನೇ ವರ್ಷದ ಪುಣ್ಯಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಣೆ ಮಾಡಬೇಕು ಅಂತ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಿತ್ತು. ಆದರೆ ಕೋವಿಡ್ 3 ನೇ ಅಲೆಯಿಂದಾಗಿ ಸಿದ್ದಗಂಗಾ ಮಠದಲ್ಲಿ ಸರಳ ಪೂಜೆ, ಉತ್ಸವ ಮಾಡಲು ನಿರ್ಧರಿಸಿದ್ದೇವೆ. ಸರ್ಕಾರದಿಂದಲೇ ದಾಸೋಹ ದಿನದ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲ ಎಂದು ನುಡಿದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್

    ಈಗಾಗಲೇ ನಿಗದಿಯಾಗಿದ್ದ ಅನೇಕ ಕಾರ್ಯಕ್ರಮಗಳು ರದ್ದಾಗಿವೆ. ಇಂತಹ ಸಂದರ್ಭದಲ್ಲಿ ನಾವೇಲ್ಲ ಯೋಚನೆ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

  • ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ತುಮಕೂರು: ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎನ್ನುವ ಬೇಡಿಕೆಗೆ ಹಲವು ನಾಯಕರು ಧ್ವನಿಗೂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪತ್ರವನ್ನು ಕಳುಹಿಸಿದ್ದೇನೆ ಎಂದು ತಿಳಿಸಿದರು.

    ಪೂಜ್ಯ ಶ್ರೀಗಳಿಗೆ ಆದಷ್ಟು ಬೇಗ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದು ನಮ್ಮೆಲ್ಲರ ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

    ಯಾವಾಗಲೋ ಭಾರತ ರತ್ನ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚರ್ಚೆ ನಡೆಸಿ, ಆದಷ್ಟು ಬೇಗ ಶ್ರೀಗಳಿಗೆ ಭಾರತ ರತ್ನ ಸಿಗುವಂತೆ ಶ್ರಮಿಸಬೇಕು. ಶ್ರೀಗಳಿಗೆ ಭಾರತ ರತ್ನ ನೀಡಿದರೆ, ಪುರಸ್ಕರಕ್ಕೆ ಮತ್ತಷ್ಟು ಗೌರವ ಬರುತ್ತದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಆಗ್ರಹಿಸಿದರು.

    ಸಾರ್ವಜನಿಕರು ಕೂಡ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಕೂಡ ಶಿವಕುಮಾರ ಸ್ವಾಮೀಜಿ ಭಾರತ ರತ್ನ ಗೌರವ ಅಂತ ಆಗ್ರಹಿಸಿ ಅಭಿಯಾನ ಆರಂಭಿಸಿದೆ. ಇದನ್ನು ಓದಿ: ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

    ಶ್ರೀಗಳ ಭಾವಚಿತ್ರ ಅನಾವರಣ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಿಡಿಸಿದ್ದು, ಅದನ್ನು ಕಿರಿಯ ಶ್ರೀಗಳು ಅನಾವರಣ ಮಾಡಿದರು.

    ಪ್ರಾರ್ಥನೆ ಮುಗಿಸಿದ ಬಳಿಕ ಭಾವಚಿತ್ರವನ್ನು ಅನಾವರಣ ಮಾಡಿದ ಕಿರಿಯ ಶ್ರೀಗಳು, ವಾಸ್ತವಕ್ಕೆ ಹತ್ತಿರ ಇರುವ ಶಿವಕುಮಾರ ಸ್ವಾಮೀಜಿಗಳ ಚಿತ್ರವನ್ನೇ ವಿದ್ಯಾರ್ಥಿ ಬಿಡಿಸಿದ್ದಾನೆ ಎಂದು ಕಿರಿಯ ಶ್ರೀಗಳು ಕೊಂಡಾಡಿದರು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಶ್ರೀಗಳಿಗೆ ಮತ್ತಷ್ಟು ಆರೋಗ್ಯ ಹಾಗೂ ಆಯಸ್ಸನ್ನು ಕರುಣಿಸಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

    ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪವಾಡಸದೃಶ ರೀತಿಯಲ್ಲಿ 45 ನಿಮಿಷ ಸ್ವಂತವಾಗಿ ನಡೆದಾಡುವ ದೇವರು ಉಸಿರಾಡಿದ್ದಾರೆ.

    ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶ್ರೀಗಳಿಗೆ ಹಳೇ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯರು ಶ್ರೀಮಠದಲ್ಲೇ ಬೀಡುಬಿಟ್ಟಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಪ್ರತಿಕ್ಷಣವೂ ನಿಗಾ ವಹಿಸುತ್ತಿದ್ದಾರೆ.

    ಸಿದ್ದಗಂಗಾ ಮಠಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ. ಅಪಾರ ಪ್ರಮಾಣದಲ್ಲಿ ಭಕ್ತರು ಕೂಡ ಬಂದು ಶ್ರೀಗಳ ದರ್ಶನ ಪಡೆಯಲು ಕಾಯ್ತಿದ್ದಾರೆ. ಆದರೆ ಸೋಂಕು ತಗಲುವ ದೃಷ್ಟಿಯಿಂದ ಯಾರಿಗೂ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಈ ನಡುವೆ ಶ್ರೀಮಠಕ್ಕೆ ಬಿಗಿ ಭದ್ರತೆ ಕೂಡ ಕಲ್ಪಿಸಲಾಗಿದೆ.

    ಹೆಲಿಪ್ಯಾಡ್ ನಿರ್ಮಾಣ: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಸ್ವಾಮೀಜಿ ದರ್ಶನ ಪಡೆಯಲೂ ನೂರಾರು ಗಣ್ಯರು ಮಠಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಝಡ್ ಪ್ಲಸ್ ಸೆಕ್ಯೂರಿಟಿ ಇರುವಂತಹ ಗಣ್ಯರು ಏಕಕಾಲದಲ್ಲಿ ಮಠಕ್ಕೆ ಆಗಮಿಸಿದ್ರೆ ಯಾವುದೇ ರೀತಿ ತೊಂದರೆಯಾಗದ್ದಂತೆ ಮುಂಜಾಗ್ರತಾ ಕ್ರಮವಾಗಿ ತುಮಕೂರು ನಗರದ ಅದರಲ್ಲೂ ಸಿದ್ದಗಂಗಾ ಮಠಕ್ಕೆ ಸಮೀಪವಾಗುವ ಐದು ಸ್ಥಳಗಳಲ್ಲಿ 14 ಹೆಲಿಪ್ಯಾಡ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

    ತುಮಕೂರು ನಗರದ ವಿವಿ ಕ್ಯಾಂಪಸ್ ನಲ್ಲಿ 4, ಎಂ.ಜಿ ಸ್ಟೇಡಿಯಂ ನಲ್ಲಿ 1, ಎಸ್‍ಐಟಿ ಕಾಲೇಜಿನಲ್ಲಿ 2, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 7 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv