Tag: shivakumar

  • ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‍ಪಿನ್ ಶಿವಕುಮಾರ್ ಕೊರೊನಾಗೆ ಬಲಿ

    ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‍ಪಿನ್ ಶಿವಕುಮಾರ್ ಕೊರೊನಾಗೆ ಬಲಿ

    ತುಮಕೂರು: ಎಸ್.ಎಸ್.ಎಲ್.ಸಿ, ಪಿಯುಸಿ, ಪೊಲೀಸ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಕಿಂಗ್ ಪಿನ್ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾನೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಕಾಗ್ಗೆರೆ ಮೂಲದ ಶಿವಕುಮಾರ್(65) ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ.

    2011ರಲ್ಲಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ, 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೂರು ದಾಖಲಾಗಿತ್ತು. ಅಲ್ಲೂ ಶಿವಕುಮಾರ್ ಹೆಸರು ಕೇಳಿ ಬಂದಿತ್ತು.

    2013ರಲ್ಲಿ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ದೇವೇಂದ್ರ, ತುಮಕೂರಿನ ಗುಬ್ಬಿ ಮೂಲದ ಮಲ್ಲೇಶ್ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಆಗ ವಿಚಾರಣೆ ವೇಳೆ ಕಿಂಗ್‍ಪಿನ್ ಇದೇ ಶಿವಕುಮಾರ್ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು.

    ಬಿಡುಗಡೆಗೊಂಡಿದ್ದ ಈತ 2016ರಲ್ಲಿ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಹಾಗೂ 2018ರಲ್ಲಿ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಈತ ಪೊಲೀಸರ ಅತಿಥಿಯಾಗಿದ್ದನು. ಒಟ್ಟಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದನು.

  • ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ರಾಷ್ಟ್ರಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಜನರು ಬಳಲುತ್ತಿದ್ದಾರೆ ಮತ್ತು ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಸಹ ಪ್ರಮುಖ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಅನೇಕ ಸಂಬಂಧಿತ ಅಧಿಕಾರಿಗಳು ಸರ್ಕಾರದೊಂದಿಗೆ ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಈ ಮಧ್ಯೆ ಸಿ, ಎಫ್ ಮತ್ತು ಸಗಟು ವಿತರಕರು ಬ್ಯಾಚ್ ನಂ ಆರ್ ಎಂ121004ಎ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ರೆಮ್ ಡಿಸಿವರ್ ಅನ್ನು ಸರಬರಾಜು ಮಾಡುತ್ತಿಲ್ಲ ಎಂದು ನೆಲಮಂಗಲ ನಗರದ ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ಕಳೆದ 10 ದಿನಗಳಿಂದ ಚುಚ್ಚುಮದ್ದಿನ ಬಗ್ಗೆ ವಿಚಾರಿಸಿದಾಗ, ಅವರು ಯಾವುದೇ ಸ್ಟಾಕ್ ಇಲ್ಲದೆ ಉತ್ತರಿಸುತ್ತಿದ್ದಾರೆ. ಸಿ&ಎಫ್ ವಿತರಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ. 1500 ರಿಂದ 2000 ಸಾವಿರಕ್ಕೆ ಸಿಗುವ ಔಷಧಿಯನ್ನು ಕಾಳ ಸಂತೆಯಲ್ಲಿ 15 ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ವಹಿಸುವಂತೆ ಮಾನ್ಯ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸೇರಿದಂತೆ ಅನೇಕರಿಗೆ ಶಿವಕುಮಾರ್‍ರವರು ಪತ್ರ ಬರೆದು ಕೂಡಲೇ ಈ ಪ್ರಕರಣವನ್ನು ಸಿಬಿಐ, ಸಿಸಿಬಿ, ಸಿಐಡಿಗೆ ಹಸ್ತಾಂತರ ಮಾಡಿ ಕರ್ನಾಟಕದಲ್ಲಿ ಸ್ಟಾಕ್ ಲಭ್ಯವಿರುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‍ಐಟಿ) ಈಗ ಶಿವಕುಮಾರ್ ಬೆನ್ನು ಬಿದ್ದಿದೆ.

    ಅಸಲಿಗೆ ಈ ಪ್ರಕರಣದಲ್ಲಿರುವ ಶಿವಕುಮಾರ್ ಕನಕಪುರ ಮೂಲದ ವ್ಯಕ್ತಿಯಾಗಿದ್ದು, ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾನೆ. ಈತನಿಗೆ ಸಿಡಿ ಸೂತ್ರದಾರರ ಜೊತೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಸಿಡಿ ಹುಡುಗರಿಗೆ 10 ಲಕ್ಷ ಹಣ ಸಂದಾಯ ಮಾಡಿದ್ದ ಶಿವಕುಮಾರ್ ಸಿಡಿ ರಿಲೀಸ್ ಬಳಿಕ ಯುವತಿಯ ಗೆಳೆಯನಿಗೆ 50 ಸಾವಿರ ಕೊಟ್ಟಿದ್ದಾನೆ. ಯುವತಿಯನ್ನು ಗೋವಾಗೆ ಕರೆದೊಯ್ಯಲು 50 ಸಾವಿರ ರೂ. ಕೊಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಕೊಚ್ಚಿಯಲ್ಲಿ ಶಿವಕುಮಾರ್ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಪತ್ತೆಗೆ ಈಗ ಬಲೆ ಬೀಸಲಾಗಿದೆ. ಕಾಲ್‌ ಡಿಟೈಲ್ಸ್‌ನಲ್ಲಿ ಈತ ಸಿಡಿ ಗ್ಯಾಂಗ್‌ ಸದಸ್ಯರ ಜೊತೆ ನಿಖಟ ಸಂಪರ್ಕ ಹೊಂದಿದ್ದ ಮಾಹಿತಿಯೂ ಸಿಕ್ಕಿದೆ.

    ಎಸ್‍ಐಟಿ ಪೊಲೀಸರು ಈಗ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎರಡು ದಿನ ಬ್ಯಾಂಕ್ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಸಿಕ್ಕಿರಲಿಲ್ಲ. ಬುಧವಾರ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಗ್ಯಾಂಗ್ ಸದಸ್ಯರ ಖಾತೆಗೆ ಈತ ಹಣ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    – ಪಬ್ಲಿಕ್‌ ಟಿವಿಗೆ ಶಿವಮೊಗ್ಗ ಡಿಸಿ ಹೇಳಿಕೆ
    – ವಿದೇಶದಲ್ಲಿ ಬಳಸುವ ಸ್ಫೋಟಕವನ್ನು ತಂದವರು ಯಾರು?

    ಶಿವಮೊಗ್ಗ: ಹುಣಸೋಡಿನಲ್ಲಿ ಜಿಲೆಟಿನ್‌ ಮತ್ತು ಡೈನಾಮೈಟ್‌ ಸ್ಫೋಟಗೊಂಡಿಲ್ಲ. ಬದಲಾಗಿ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪಬ್ಲಿಕ್‌ ಟಿವಿಗೆ ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್‌ ಪ್ರತಿಕ್ರಿಯಿಸಿ, ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸದಸ್ಯರು ಬಂದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ತಿಳಿದು ಬಂದಿದೆ. ಇದು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಎಂದು ತಿಳಿಸಿದರು.

    ಜೆಲ್‌ ರೀತಿಯ ಸ್ಫೋಟಕವನ್ನು ವಿದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಈ ಕ್ವಾರಿಗೆ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿಂದ ತಂದಿದ್ದಾರೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ತಂದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆದಾಗ ಸ್ಪಷ್ಟವಾದ ವಿಚಾರ ಲಭ್ಯವಾಗಲಿದೆ ಎಂದು ತಿಳಿಸಿದರು.

    ಸದ್ಯ ಸ್ಫೋಟದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

    ಗುರುವಾರ ರಾತ್ರಿ 2 ಶವಗಳು ಪತ್ತೆಯಾಗಿತ್ತು. ಇಂದು ಮೂರು ಶವ ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

  • ಸಾವನ್ನಪ್ಪಿದ ನಂತ್ರ 3 ದಿನ ಕಾರಿನಲ್ಲೇ ಇತ್ತು ಶವ!

    ಸಾವನ್ನಪ್ಪಿದ ನಂತ್ರ 3 ದಿನ ಕಾರಿನಲ್ಲೇ ಇತ್ತು ಶವ!

    – ಡೋರ್, ವಿಂಡೋ ಕ್ಲೋಸ್ ಆಗಿತ್ತು
    – ನಾಪತ್ತೆ ದೂರು ದಾಖಲಿಸಿದ್ದ ಕುಟುಂಬ

    ಮಂಡ್ಯ: ಅನಾರೋಗ್ಯದಿಂದ ಕಾರಿನಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮೃತ ದೇಹ ಮೂರು ದಿನಗಳ ಕಾಲ ಕಾರಿನಲ್ಲೇ ಮೃತ ದೇಹವಿದ್ದ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಬಳಿ ಜರುಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದ ಶಿವಕುಮಾರ್ (42) ಸಾವನ್ನಪ್ಪಿರುವ ವ್ಯಕ್ತಿ. ಶಿವಕುಮಾರ್ ಕಿರುಗಾವಲಿನಿಂದ ಕಳೆದ ಮೂರು ದಿನಗಳ ಹಿಂದೆ ಮಂಡ್ಯ ನಗರಕ್ಕೆ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಮಿಮ್ಸ್ ಆಸ್ಪತ್ರೆಯ ಎದುರು ಕಾರು ನಿಲ್ಲಿಸಿಕೊಂಡಿದ್ದು, ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ.

    ಕಾರಿನ ಡೋರ್, ವಿಂಡೋ ಮುಚ್ಚಿದ್ದ ಕಾರಣ ಯಾರಿಗೂ ಸಹ ತಿಳಿದಿಲ್ಲ. ಶಿವಕುಮಾರ್ ಮನೆಗೆ ಬಾರದ ಕಾರಣ ಕುಟುಂಬಸ್ಥರು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಮೂರು ದಿನಗಳಿಂದ ಕಾರು ಇದ್ದ ಜಾಗದಲ್ಲೇ ಇದ್ದ ಕಾರಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ಮಾಡಿದ ವೇಳೆ ಶಿವಕುಮಾರ್ ಮೃತರಾಗಿರುವುದು ತಿಳಿದು ಬಂದಿದೆ.

    ಮಿಮ್ಸ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತೊಟ್ಟಿಲು ತೂಗಿ, ಸಿಎಂ ಪದವಿಗೆ ಮೊರೆ ಹೋದ್ರಾ ಡಿಕೆಶಿ?

    ತೊಟ್ಟಿಲು ತೂಗಿ, ಸಿಎಂ ಪದವಿಗೆ ಮೊರೆ ಹೋದ್ರಾ ಡಿಕೆಶಿ?

    ಬಳ್ಳಾರಿ: ಸದ್ಯ ದೋಸ್ತಿ ಸರ್ಕಾರದ ಟ್ರಬಲ್ ಶೂಟರ್ ಸಚಿವ ಡಿ.ಕೆ. ಶಿವಕುಮಾರ್, ಸಿಎಂ ಪದವಿಗಾಗಿ ದೇವರ ಮೊರೆ ಹೋದರಾ ಅನ್ನೋ ಪ್ರಶ್ನೆ ಎದ್ದಿದೆ.

    ಸಚಿವ ಶಿವಕುಮಾರ್ ಬಳ್ಳಾರಿಯ ಚಳ್ಳಗುರ್ಕಿಯ ಯರಿತಾತ ದೇವಾಲಯದಲ್ಲಿ ತೊಟ್ಟಿಲು ತೂಗಿದ ನಂತರ ಇಂತಹದ್ದೊಂದು ಪ್ರಶ್ನೆ ಇದೀಗ ಎದ್ದಿದೆ. ಮಂಗಳವಾರ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ನಾಮಪತ್ರ ಸಲ್ಲಿಕೆ ನಂತರ ಪವಾಡ ಪುರುಷ ಯರಿತಾತನ ದೇವಾಲಯದಲ್ಲಿ ತೊಟ್ಟಿಲು ತೂಗಿ ಡಿ.ಕೆ.ಶಿವಕುಮಾರ್ ಬೇಡಿಕೊಂಡಿದ್ದಾರೆ.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇದೊಂದು ಪುಣ್ಯವಾದ ಕ್ಷೇತ್ರ. ಇಲ್ಲಿ ಇದಕ್ಕೇ ಆದಂತಹ ಇತಿಹಾಸವೂ ಇದೆ. ಇಲ್ಲಿಗೆ ಬಂದು ದರ್ಶನ ಮಾಡಲು ನನಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. ಹೀಗಾಗಿ ದೇವರ ದರ್ಶನ ಪಡೆದುಕೊಂಡಿದ್ದೇನೆ ಎಂದರು.

    ಈ ಬಗ್ಗೆ ನಾನು ಏನು ಮಾತನಾಡಲು ಇಷ್ಟ ಪಡುವುದಿಲ್ಲ. ನನ್ನ ಟಾರ್ಗೆಟ್ ಅವರಲ್ಲ. ಬೇರೆ ಇದೆ ಎಂದು ಸಿಎಂ ಕುಮಾರಸ್ವಾಮಿ ಮತ್ತು ಡಿಕೆಶಿ ಕಳ್ಳೆತ್ತುಗಳು, ರಾತ್ರಿ ಬಂದು ಮೇಯ್ದುಕೊಂಡು ಹೋಗುತ್ತವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

    ಬಳ್ಳಾರಿಯ ಚಳ್ಳಗುರ್ಕಿಯ ಯರಿತಾತ ದೇವಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತೊಟ್ಟಿಲು ತೂಗಿದರೆ ಅಂದುಕೊಂಡಿದ್ದೆಲ್ಲಾ ನೆರವೇರುತ್ತದೆ ಅನ್ನೋ ಪ್ರತೀತಿ ಇದೆ. ಅಲ್ಲದೆ ಡಿ.ಕೆ.ಶಿ ತೊಟ್ಟಿಲು ತೂಗಿದ ನಂತರ ನನ್ನ ಟಾರ್ಗೆಟ್ ಬೇರೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಉಪಚುನಾವಣೆ ಸಮಯದಲ್ಲೂ ಶಿವಕುಮಾರ್ ಬಳ್ಳಾರಿಯ ಸಂಡೂರಿನ ಜೋಗದ ತಾತನ ಬಳಿ ಹೋಗಿ ಆರ್ಶೀವಾದ ಪಡೆದಿದ್ದರು.

  • ಸಿದ್ದಗಂಗಾ ಮಠಕ್ಕೆ ನಟ ಶಿವರಾಜ್‍ಕುಮಾರ್ ಭೇಟಿ

    ಸಿದ್ದಗಂಗಾ ಮಠಕ್ಕೆ ನಟ ಶಿವರಾಜ್‍ಕುಮಾರ್ ಭೇಟಿ

    ತುಮಕೂರು: ಹ್ಯಾಟ್ರಿಕ್ ಹೀರೋ ನಟ ಶಿವರಾಜ್‍ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ.

    ಶಿವರಾಜ್‍ಕುಮಾರ್ ಅವರು ಗದ್ದುಗೆ ದ್ವಾರದ ಮುಂದೆ ಕೆಲಕಾಲ ಕೂತು ನಮಸ್ಕರಿಸಿದರು. ಬಳಿಕ ಹೊಸ ಮಠಕ್ಕೆ ಬಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.

    ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, “ಶಿವಕುಮಾರ ಶ್ರೀಗಳು ದೂರವಾದಾಗ ನಾನು ವಿದೇಶದಲ್ಲಿ ಇದ್ದೆ. ಹಾಗಾಗಿ ಬರಲು ಆಗಲಿಲ್ಲ. ಶ್ರೀಗಳು ಮೇಲೆ ಪ್ರೀತಿ ಹಾಗೂ ನಂಟು ಇತ್ತು. ಹಾಗಾಗಿ ಇಂದು ಬಂದು ಗದ್ದುಗೆ ದರ್ಶನ ಪಡೆದಿದ್ದೇನೆ” ಎಂದರು. ಅಲ್ಲದೇ ನಾನು ಇನ್ನು ಮುಂದೆ ಬರುತ್ತಿರುತ್ತೇನೆ. ಶಿವಕುಮಾರ ಶ್ರೀಗಳು ಇನ್ನೂ ನಮ್ಮ ಜೊತೆಯೇ ಇದ್ದಾರೆ ಎನ್ನುವ ಫೀಲ್ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ನಡುವೆ ಎಂದಿನಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

    ಇತ್ತೀಚೆಗೆ ನಟ ಉಪೇಂದ್ರ ಕೂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ಗದ್ದುಗೆಗೆ ಹೋಗಿ ಅಲ್ಲಿ ಶ್ರೀಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದರು. ಬಳಿಕ ಕೆಲಕಾಲ ಸಿದ್ದಲಿಂಗಸ್ವಾಮಿಗಳ ಜೊತೆ ಕುಳಿತು ಉಭಯಕುಶಲೋಪರಿ ನಡೆಸಿದ್ದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ, ಹುಬ್ಬಳ್ಳಿಯಲ್ಲಿ ಒಂದು ಪ್ರೆಸ್ ಮೀಟ್ ಇದೆ, ಅದಕ್ಕೆ ಹೊರಟ್ಟಿದ್ದೆ. ಈ ಕಡೆಯಿಂದ ಹೋಗಬೇಕಾದರೆ ಇಲ್ಲಿಗೆ ಬಂದು ಭೇಟಿ ಕೊಟ್ಟು ಹೋಗುವುದು ಒಂದು ಸಂಪ್ರದಾಯವಾಗಿದೆ. ಅಲ್ಲದೇ ಈ ಹಿಂದೆ ದೇವರಿದ್ದಾಗ ಮಠಕ್ಕೆ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಸಂತೋಷವಾಗುತ್ತದೆ. ಯಾಕೆಂದರೆ ಆನಂದ, ಅನುಭೂತಿ ದೊರೆಯುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

    https://www.youtube.com/watch?v=XdztOfmtLT4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಬೆಂಗಳೂರು: ಇತ್ತೀಚೆಗಷ್ಟೇ ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಲೀಕ್ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಾಮೀಜಿಯೊಬ್ಬರ ಹೆಸರು ಹೊರಬಂದಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ.

    ಕಲ್ಮಠ ಸ್ವಾಮಿಯ ಹೆಸರು ಕೇಳಿ ಬಂದಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಶಿವಕುಮಾರ ಸ್ವಾಮೀಜಿಯನ್ನು ಸಿಸಿಬಿ ವಿಚಾರಣೆಯನ್ನು ಮಾಡುತ್ತಿದ್ದು, ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತಿವೆ. ಕಲ್ಮಠ ಸ್ವಾಮಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ ಎಂದು ಗೊತ್ತಾಗಿದೆ.

    6 ಲಕ್ಷ ಕೊಟ್ಟವರಿಗೆ ನೂರು ಪ್ರಶ್ನೆ ಉಚಿತ ಎಂದು ಹೇಳುತ್ತಾ 15 ಕೋಟಿ ಹಣ ವಸೂಲಿ ಮಾಡಿ ಅಭ್ಯರ್ಥಿಗಳಿಗೆ ಶಿವಕುಮಾರ್ ಟ್ರೈನಿಂಗ್ ಕೊಡುತ್ತಿದ್ದನು. ಈತ ಪ್ರಶ್ನೆ ಪತ್ರಿಕೆಯ ಮುಖ್ಯ ಪೇಜ್‍ನ್ನೇ ಕದಿಯುತ್ತಿದ್ದನು. ಬಳಿಕ ಜನರಿಲ್ಲದ ರೆಸಾರ್ಟ್ ಒಂದರಲ್ಲಿ ಟ್ರೈನಿಂಗ್ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡನ ನಂಟು ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಸವರಾಜ್ ಅಲಿಯಾಸ್ ಬಸವ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವನಾಗಿದ್ದು, 110 ಜನ ಹುಡುಗರು, 10 ಜನ ಹುಡುಗಿಯರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿಂದೆ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಲ್ಮಠ ಸ್ವಾಮಿ ಈಗ ಮತ್ತೆ ಪ್ರಶ್ನೆ ಪತ್ರಿಕೆಯ ಉರುಳು ಸಿಕ್ಕಿಬಿದ್ದಿದೆ. ಪ್ರಶ್ನೆ ಪತ್ರಿಕೆಯ ಲೀಕ್ ದಂಧೆ ಗೊತ್ತಿದ್ದೇ ಸ್ವಾಮಿಜಿ ಜಾಗವನ್ನು ಬಿಟ್ಟುಕೊಟ್ಟಿದ್ರಾ.? ಅಥವಾ ಹಣವನ್ನು ಪಡೆದುಕೊಂಡಿದ್ರಾ ಅನ್ನೋ ಅನುಮಾನವನ್ನೂ ಕೂಡ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು 7 ದಿನಗಳ ಕಾಲ ಲೀಕ್ ಕಿಂಗ್‍ಪಿನ್ ಶಿವಕುಮಾರಸ್ವಾಮಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    – ಕಾರ್ಖಾನೆ ಮಾಲೀಕರನ್ನ ಬಿಡುತ್ತೇವೆ ಹೊರತು ರೈತರನ್ನ ಬಿಡುವ ಪ್ರಶ್ನೆಯೇ ಇಲ್ಲ
    – ಡಿಕೆಶಿ ಸಂಧಾನಕ್ಕೆ ಬಗ್ಗಿ ರೈತರ ಪ್ರತಿಭಟನೆ ವಾಪಸ್

    ಬೆಳಗಾವಿ: ಬಳ್ಳಾರಿಯಲ್ಲಿ ಗಣಿಧಣಿಗಳ ಕೋಟೆಯನ್ನು ಉರುಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈಗ ಜಾರಕಿಹೊಳಿ ಸಹೋದರರ ಕೋಟೆಗೆ ಲಗ್ಗೆ ಇಟ್ಟು ಯಶಸ್ವಿಯಾಗಿದ್ದಾರೆ. ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನ ಒಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಡಿಕೆಶಿ ಸಮಾಧಾನ ಮಾಡಿದ್ದಾರೆ. ರೈತರು ಕೂಡ ಡಿಕೆಶಿ ಅವರ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.

    ಈ ವೇಳೆ ಹೋರಾಟ ನಡೆಸುತ್ತಿದ್ದ ರೈತರು ಡಿ.ಕೆ.ಶಿವಕುಮಾರ್ ಅವರಲ್ಲಿ ಸಚಿವ ಜಾರಕಿಹೊಳಿ ಮತ್ತು ಡಿಸಿ ಬೊಮ್ಮನಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ನಾವೂ ಪ್ರತಿ ಸಲ ಡಿಸಿ ಅವರಿಗೆ ಮನವಿ ಕೊಡಬೇಕೇ? ನ್ಯಾಯಕ್ಕಾಗಿ ಸಾಯುವವರೆಗೂ ಮನವಿ, ಅರ್ಜಿ ಕೊಡುತ್ತಾ ಇರಬೇಕು ಎಂದು ಕಬ್ಬಿನ ಹೋರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಕಬ್ಬಿನ ಬಾಕಿ ಉಳಿದಿರುವ ಹಣವನ್ನ ಕೊಡಿಸಿ, ಅಲ್ಲದೇ ಜಿಲ್ಲಾಡಳಿತಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ರೈತರು ರಾತ್ರೋರಾತ್ರಿ ಬೆಳಗಾವಿಯಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ. ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅದಕ್ಕೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮ. ಈಗಾಗಲೇ ಮುಖ್ಯಮಂತ್ರಿಗಳು ಮೂರು ದಿನಗಳಿಂದ ಹಗಲು-ರಾತ್ರಿ ಕುಳಿತುಕೊಂಡು ಮಾಲೀಕರು, ಅಧಿಕಾರಿಗಳು ಮತ್ತು ರೈತರ ಬಳಿ ಚರ್ಚೆ ಮಾಡಿದ್ದಾರೆ. ಜೊತೆಗೆ ಇನ್ನೂ 15 ದಿನದ ಒಳಗಡೆ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಸರ್ಕಾರ ನ್ಯಾಯಬದ್ಧವಾದ ಹಣ, ಬಾಕಿಯನ್ನ ಕೊಡಿಸುವ ಕೆಲಸ ಮಾಡುತ್ತದೆ. ನಮ್ಮ ಸರ್ಕಾರಕ್ಕೆ ರೈತರ ಸಮಸ್ಯೆ ಗೊತ್ತಿದೆ. ಆದರೆ ದುರದೃಷ್ಟಕರ ಸಕ್ಕರೆ ಮಾಲೀಕರು ರೈತರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ ನಾವು ಕಾರ್ಖಾನೆ ಮಾಲೀಕರನ್ನು ಬಿಡುತ್ತೇವೆ ಹೊರತು ರೈತರನ್ನು ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಜೀವನಾಡಿ ರೈತರು, ರೈತರಿಂದಲೇ ನಮ್ಮ ಸರ್ಕಾರ. ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.


    ನಾನು ಕೂಡ ರೈತರ ಮುಖಂಡರ ಜೊತೆ ಮಾತನಾಡಿದ್ದೇನೆ. ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ನಮ್ಮ ಮನವಿಗೆ ರೈತರು ಸ್ಪಂದಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಕಬ್ಬಿನ ಬಾಕಿ ಬಿಲ್ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯಾವ ಕಿಂಗು ಇಲ್ಲ, ಪಿನ್ ಇಲ್ಲ, ಕಿಂಗ್ ಪಿನ್‍ಗಳೇ ಬೇರೆ ಇದ್ದಾರೆ: ಡಿಕೆಶಿ

    ಯಾವ ಕಿಂಗು ಇಲ್ಲ, ಪಿನ್ ಇಲ್ಲ, ಕಿಂಗ್ ಪಿನ್‍ಗಳೇ ಬೇರೆ ಇದ್ದಾರೆ: ಡಿಕೆಶಿ

    ಕಲಬುರಗಿ: ಆಪರೇಷನ್ ಕಮಲದಲ್ಲಿ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ ಎಂದು ಜಲಸಂಪನ್ಯೂಲ ಸಚಿವ ಡಿಕೆ.ಶಿವಕುಮಾರ್ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಹೇಳಿದ್ದಾರೆ.

    ಶಿವಕುಮಾರ್ ಜಾಮೀನು ಸಿಕ್ಕ ಬೆನ್ನಲ್ಲೆ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ದರ್ಶನ ಮಾಡಿ ಪಾದ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯೋಗೀಶ್ವರ್ ಅಲ್ಲದೇ ಇದೀಗ ಹಲವು ಜನ ಮುಂದಾಗಿದ್ದಾರೆ. 20 – 21 ಶಾಸಕರ ಜೊತೆ ಮಾತನಾಡಿ ಆಫರ್ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಮತ್ತು ನಮ್ಮ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

    ಆಪರೇಷನ್ ಕಮಲದಲ್ಲಿ ಬಿಜೆಪಿ ಮುಖಂಡ ಯೋಗೀಶ್ವರ್ ಕಿಂಗ್ ಪಿನ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಯಾವ ಕಿಂಗು ಇಲ್ಲ, ಪಿನ್ನು ಇಲ್ಲ, ಅವನು ಲೆಕ್ಕಾನು ಇಲ್ಲ, ಕಿಂಗ್ ಪಿನ್ ಗಳೇ ಬೇರೆ ಇದ್ದಾರೆ. ಶಾಸಕರಿಗೆ ಎಷ್ಟು ಆಮಿಷ ನೀಡಿದ್ದಾರೆ ಎಂಬುದು ನಾನು ಮಾತನಾಡುವುದಿಲ್ಲ. ಗುಪ್ತ ಇಲಾಖೆಯನ್ನು ನೋಡಿಕೊಳ್ಳುವವರು ಮಾತನಾಡುತ್ತಾರೆ ಎಂದು ಉತ್ತರಿಸಿದರು.

    ಬಹಳ ವರ್ಷದಿಂದ ದತ್ತಾತ್ರೇಯ ಪೀಠದ ಬಗ್ಗೆ ಕೇಳಿದ್ದೆ. ಇಲ್ಲಿಗೆ ಬಂದು ದೇವರ ದರ್ಶನ ಮಾಡಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಎರಡು ಮೂರು ಬಾರಿ ಬರಲು ಸಾಧ್ಯವಾಗದೇ ಮುಂದಕ್ಕೆ ಹೋಗಿತ್ತು. ಇಂದು ಎರಡು ಕಾರ್ಯಕ್ರಮಗಳಿದ್ದವು. ಆದರು ಮೊದಲು ದೇವರ ದರ್ಶನ ಮಾಡಬೇಕು ಎಂದು ಬಂದಿದ್ದೇನೆ. ಇಂದು ದರ್ಶನ ಭಾಗ್ಯ ಸಿಕ್ಕಿದ್ದು ಮನಸ್ಸಿಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

    ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ಮಾಡುತ್ತಿದೆ. ಅನಿಲ್ ಚಿಕ್ಕಮಾದುಗೆ ಬಿಜೆಪಿ ಆಫರ್ ನೀಡಿದ್ದು ಸತ್ಯ. ಆಫರ್ ಬಂದಿರುವ ಬಗ್ಗೆ ನಮ್ಮ ಬಳಿ ಶಾಸಕರೇ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಅಂತ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

    ನಾನು ಏನೂ ತಪ್ಪು ಮಾಡಿಲ್ಲ. ದೇವರನ್ನ ನಂಬಿರುವ ನನಗೆ ದೇವರೇ ನ್ಯಾಯ ಕೊಡುತ್ತಾನೆ. ನನಗೆ ನೋವು, ಕಷ್ಟ ಕೊಟ್ಟ ಎಲ್ಲರ ಮೇಲೂ ದೇವರ ಅನುಗ್ರಹ ಇರಲಿ ಅಂತ ಪೂಜೆ ಬಳಿಕ ಸಚಿವ ಡಿಕೆ ಶಿವಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv