Tag: shirooru swamiji

  • ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಉಡುಪಿ: ಶಿರೂರು ಸ್ವಾಮೀಜಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದರಿಂದ ಹೀಗಾಯಿತೋ ಏನೋ ಗೊತ್ತಿಲ್ಲ ಎಂದು ಪೇಜಾವರ ಶ್ರೀಗಳು ಶಂಕೆ ವ್ಯಕ್ತಪಡಿಸಿದ್ದಾರೆ.

    ಇಂದು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಶಿರೂರು ಶ್ರೀ ಹಲವಾರು ಒಳ್ಳೆಯ ಕಾರ್ಯಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಕೆಲಸ ಮಾಡಿದ್ದಾರೆ. ಆದರೆ ಅವರು ಸನ್ಯಾಸ ಧರ್ಮ ಪಾಲಿಸದೇ ಪುಂಡಾಟಿಕೆ ಮೆರೆದಿದ್ದರು. ಅಷ್ಟೇ ಅಲ್ಲದೆ ಅವರಿಗೆ ದುರ್ವ್ಯಸನ ಹಾಗೂ ಸ್ತ್ರೀಯರ ಮೇಲೆ ಆಸಕ್ತಿ ಇತ್ತು ಎಂದು ಆರೋಪಿಸಿದರು.

    ಶ್ರೀಗಳ ಸಾವಿನ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. ಅನ್ನಾಹಾರ ವಿಷವಾಗಿದೆಯೋ ಗೊತ್ತಿಲ್ಲ. ಕೆಲವರು ಶ್ರೀಗಳಿಗೆ ಮೂತ್ರಪಿಂಡ ಹಾಗೂ ಪಿತ್ತಕೋಶದ ಸಮಸ್ಯೆ ಅಂತಾ ಹೇಳುತ್ತಿದ್ದಾರೆ. ಇನ್ನೂ ಕೆಲವು ಮೂಲಗಳ ಪ್ರಕಾರ ಮಹಿಳೆ ಜೊತೆ ಜಗಳವಾಗಿದೆ ಎನ್ನಲಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಬೇರೆ ಯಾವ ಮಠದಿಂದ ಈ ಕೃತ್ಯ ನಡೆದಿಲ್ಲ. ಜೊತೆಗಿರುವವರಿಂದ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಪಲಾವ್ ತಿಂದಿರುವ ಬಗ್ಗೆ ಶಿರೂರು ಶ್ರೀಗಳ ಸಹೋದರ ಹೇಳಿದ್ದಾರೆ. ಹೀಗಾಗಿ ಅವರ ಮಠದವರಿಂದಲೇ ಕೃತ್ಯ ನಡೆದಿರಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ವನ ಮಹೋತ್ಸವಕ್ಕೆ ಬಂದಾಗ ವಿದ್ಯಾರ್ಥಿಗಳ ಜೊತೆ ಇರಿಸು ಮುರುಸಾಗಿತ್ತು. ಎಲ್ಲ ಸತ್ಯಾಸತ್ಯತೆಗಳು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಹೇಳಿದರು.

    ಪರ್ಯಾಯ ಸಭೆಯಲ್ಲಿಯೇ ಹಾಗೂ ವೈಯಕ್ತಿಕವಾಗಿ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಲಹೆ ನೀಡಿದ್ದೆ. ಆದರೆ ಅವರು ಯಾವುದನ್ನೂ ಪಾಲಿಸಿಲ್ಲ. ಶಿರೂರು ಶ್ರೀ ತಮಗೆ ಮಕ್ಕಳಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅವರೇ ಒಪ್ಪಿಕೊಂಡ ಮೇಲೆ ಸ್ವಾಮೀಜಿ ಆಗುವುದು ಹೇಗೆ ಎಂದು ಇತರೆ ಮಠಾಧೀಶರೂ ಪ್ರಶ್ನೆ ಕೇಳಿದ್ದಾರೆ. ಶ್ರೀಗಳು ಸನ್ಯಾಸ ಧರ್ಮ ಪಾಲಿಸದಿರುವುದರಿಂದ ಪಟ್ಟದ ದೇವರನ್ನು ಕೊಟ್ಟಿಲ್ಲ. ನಿನ್ನೆ ಹುಬ್ಬಳ್ಳಿಯಲ್ಲಿದ್ದೆ. ಆರೋಗ್ಯ ದೃಷ್ಟಿಯಿಂದ ವೈದ್ಯರು ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದ್ದರಿಂದ ಉಡುಪಿಗೆ ಬರಲು ಸಾಧ್ಯವಾಗಲಿಲ್ಲ ಎಂದರು.

  • ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿ: ಇಲ್ಲಿನ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ.

    ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಶ್ರೀಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಡ್ರಿಪ್ಸ್ ಕೂಡ ಹಾಕಲಾಗಿತ್ತು.

    ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.

    ಚುನಾವಣೆ ಸಂದರ್ಭ ನಿರ್ಜಲೀಕರದಿಂದ ಅಸ್ವಸ್ಥರಾಗಿದ್ದರು. ನಿನ್ನೆ ಬೆಳಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ಅವರು ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.

  • ಅಷ್ಟಮಠಗಳ ಶ್ರೀಗಳ ವಿರುದ್ಧ ಕೇವಿಯಟ್ ತಂದ ಶೀರೂರು ಶ್ರೀ

    ಅಷ್ಟಮಠಗಳ ಶ್ರೀಗಳ ವಿರುದ್ಧ ಕೇವಿಯಟ್ ತಂದ ಶೀರೂರು ಶ್ರೀ

    ಉಡುಪಿ: ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಚರ್ಚೆ ಆರಂಭವಾದ ಬೆನ್ನಲ್ಲೇ ಶೀರೂರು ಶ್ರೀಗಳು ಹೈಕೋರ್ಟ್ ನಿಂದ ಕೇವಿಯಟ್ ತಂದಿದ್ದಾರೆ.

    ಶೀರೂರು ಶ್ರೀ ಸನ್ಯಾಸ ಧರ್ಮವನ್ನು ಪಾಲನೆ ಮಾಡದ ಕಾರಣ ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಬೇಕು ಅನ್ನೋದು ಇತರ ಮಠಾಧೀಶರ ಅಭಿಪ್ರಾಯವಾಗಿತ್ತು.

    ಅನಾರೋಗ್ಯ ಸಂದರ್ಭದಲ್ಲಿ ಶೀರೂರು ಸ್ವಾಮೀಜಿ, ತಮ್ಮ ಪಟ್ಟದ ದೇವರನ್ನು ಅದಮಾರು ಕಿರಿಯ ಸ್ವಾಮೀಜಿಯ ವಶಕ್ಕೆ ನೀಡಿದ್ದರು. ಆದರೆ ಪಟ್ಟದ ದೇವರು ಈಗ ಕೃಷ್ಣಮಠದಲ್ಲಿದೆ. ಪರ್ಯಾಯ ಪಲಿಮಾರು ಸ್ವಾಮೀಜಿ ಪೂಜೆ ನಡೆಸುತ್ತಿದ್ದಾರೆ. ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡದಿದ್ದರೆ ಪಟ್ಟದ ದೇವರನ್ನು ನೀಡಬಾರದು ಎಂದು ಇತರ ಮಠಾಧೀಶರು ತೀರ್ಮಾನಿಸಿದ್ದರು.

    ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಷ್ಟಮಠಾಧೀಶರು ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಹಿನ್ನೆಲೆಯಲ್ಲಿ ಶೀರೂರು ಸ್ವಾಮೀಜಿ ಈ ಕೇವಿಯಟ್ ತಂದಿದ್ದಾರೆ. ತನ್ನನ್ನು ವಿಶ್ವಾಸಕ್ಕೆ ಪಡೆಯದೆ ನ್ಯಾಯಾಲಯ ಈ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂಬ ಕಾರಣಕ್ಕೆ ಈ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಅಷ್ಟ ಮಠಾಧೀಶರು ಮತ್ತೊಮ್ಮೆ ಸಭೆ ಸೇರಿ ಪಟ್ಟದ ದೇವರ ಹಸ್ತಾಂತರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದು ಬಾಕಿಯಿದೆ.

    ಕೇವಿಯಟ್ ಎಂದರೇನು?
    ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‍ಗೆ ಮನವಿ ಮಾಡುವುದನ್ನು ಕೇವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿ ಯಾವ ಆದೇಶವನ್ನೂ ನೀಡಬಾರದು. ಅಲ್ಲದೇ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಆ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವುದೇ ಕೇವಿಯಟ್ ಆಗಿದೆ.

  • ಶಿಷ್ಯನನ್ನು ಸ್ವೀಕರಿಸೋವರೆಗೂ ಶೀರೂರು ಶ್ರೀಗಳಿಗೆ ಪಟ್ಟದ ದೇವರು ಕೊಡಬಾರದು: ಉಡುಪಿ ಅಷ್ಟಮಠಾಧೀಶರ ಪಟ್ಟು

    ಶಿಷ್ಯನನ್ನು ಸ್ವೀಕರಿಸೋವರೆಗೂ ಶೀರೂರು ಶ್ರೀಗಳಿಗೆ ಪಟ್ಟದ ದೇವರು ಕೊಡಬಾರದು: ಉಡುಪಿ ಅಷ್ಟಮಠಾಧೀಶರ ಪಟ್ಟು

    ಉಡುಪಿ: ಉಡುಪಿ ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಇತರ ಅಷ್ಟಮಠಾಧೀಶರು ಕೆಲವೊಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಶಿರೂರು ಮಠಾಧೀಶರ ಬಗ್ಗೆ ಕೆಲ ತಿಂಗಳ ಹಿಂದೆ ಆರಂಭವಾಗಿದ್ದ ಚರ್ಚೆ ಈಗ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಭಾನುವಾರ ಸೇರಿದ ಐದು ಮಠಾಧೀಶರು ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಪರ್ಯಾಯ ಪಲಿಮಾರು ಮಠಾಧೀಶರು ತಿಳಿಸಿದ್ದಾರೆ.

    ಅಷ್ಟಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯವರಿಗೆ ಅನಾರೋಗ್ಯವಾಗಿದೆ. ಈ ಸಂದರ್ಭ ದಿನನಿತ್ಯ ಪೂಜೆ ಮಾಡುವ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿದ್ದರು. ಅಂದಿನಿಂದ ಪರ್ಯಾಯ ಪೀಠದಲ್ಲಿರುವ ಪಲಿಮಾರು ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆ ನಡೆಸುತ್ತಿದ್ದಾರೆ.

    ಈಗ ಶೀರೂರು ಸ್ವಾಮೀಜಿ ಗುಣಮುಖರಾಗಿದ್ದು, ಪಟ್ಟದ ದೇವರನ್ನು ವಾಪಸ್ ಕೇಳುತ್ತಿದ್ದಾರೆ. ಆದರೆ ಉಳಿದ ಏಳು ಮಠಾಧೀಶರು ಶೀರೂರು ಶ್ರೀಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ತನಕ ಪಟ್ಟದ ದೇವರನ್ನು ಶೀರೂರು ಸ್ವಾಮೀಜಿಗೆ ಕೊಡಬಾರದು ಎಂದು ನಿರ್ಧರಿಸಿದ್ದಾರೆ.

    ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ಇನ್ನೊಮ್ಮೆ ಸಭೆ ಸೇರಿ ಶಿಷ್ಯ ಸ್ವೀಕಾರದ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳುತ್ತೇವೆ. ಅಷ್ಟಮಠಾಧೀಶರಲ್ಲಿ ಬಹುಮತದ ತೀರ್ಮಾನವೇ ಅಂತಿಮ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಶೀರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.

    ಯಾರು ಪರ್ಯಾಯ ಸ್ವೀಕರಿಸುತ್ತಾರೋ ಆ ಶ್ರೀಗಳೇ ಎರಡು ವರ್ಷಗಳ ಪಟ್ಟದ ದೇವರಿಗೆ ಪೂಜೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಈ ಅವಧಿಯಲ್ಲಿ ಶ್ರೀಗಳು ಅನಾರೋಗ್ಯಕ್ಕೆ ಒಳಗಾದರೆ ಅವರ ಶಿಷ್ಯ ಪೂಜೆ ಮಾಡಬೇಕಾಗುತ್ತದೆ.

  • ಸ್ವತಂತ್ರವಾಗಿ ಹೊರಟಿದ್ದ ಶೀರೂರು ಶ್ರೀಗಳಿಗೆ ಜೆಡಿಯು ಗಾಳ

    ಸ್ವತಂತ್ರವಾಗಿ ಹೊರಟಿದ್ದ ಶೀರೂರು ಶ್ರೀಗಳಿಗೆ ಜೆಡಿಯು ಗಾಳ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಅಧೀನದಲ್ಲಿರುವ ಶೀರೂರು ಮಠಾಧೀಶರಿಗೆ ಜೆಡಿಯು ಪಕ್ಷ ಗಾಳ ಹಾಕಿದೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಜೆಡಿಯು ಪಕ್ಷ ಸೇರುವಂತೆ ಪತ್ರ ಬರೆದಿದೆ.

    ಜೆಡಿಯು ಜಿಲ್ಲಾಧ್ಯಕ್ಷರು ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ತಾವು ಇಚ್ಛಿಸಿದರೆ ಜೆಡಿಯುನಿಂದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಜೆಡಿಯು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದೆ. ಒಮ್ಮತದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಜೆಡಿಎಸ್ ಮತ್ತು ಜೆಡಿಯುನ ಮಾನಸಿಕತೆಗೂ ಸ್ವಾಮೀಜಿಗಳ ದೃಷ್ಟಿಕೋನಕ್ಕೂ ಹೊಂದಾಣಿಕೆ ಆಗುವುದರಿಂದ ಈ ಬೇಡಿಕೆ ಇಟ್ಟಿರುವುದಾಗಿ ಜನತಾದಳ ಹೇಳಿದೆ.

    ಜಿಲ್ಲೆಯಲ್ಲಿ ಈವರೆಗೆ ಐದು ಸ್ಥಾನಗಳ ಪೈಕಿ ಎರಡು ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಇದೀಗ ಮೂರನೇ ಅಭ್ಯರ್ಥಿಯ ತಲಾಶ್ ನಲ್ಲಿದ್ದ ಜೆಡಿಎಸ್ ಗೆ ಶೀರೂರು ಶ್ರೀಗಳನ್ನು ಸೆಳೆದರೆ ಕರಾವಳಿ ಜಿಲ್ಲೆಯಲ್ಲಿ ಬಲ ಬರುತ್ತದೆ ಎಂಬ ಲೆಕ್ಕಾಚಾರ ಹಾಕಿದೆ.

    ಜೆಡಿಯು ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಮಕೃಷ್ಣ ಹೆಗ್ಡೆಯವರ ತತ್ವಾದರ್ಶದ ಮೇಲೆ ಚುನಾವಣೆ ಎದುರಿಸಲಿದ್ದೇವೆ. ಶೀರೂರು ಶ್ರೀಗಳೂ ಹೆಗ್ಡೆಯವರ ಆದರ್ಶ ಮೆಚ್ಚಿದವರು. ಉಡುಪಿಯಲ್ಲಿ ಸ್ವಾಮೀಜಿ ನಮ್ಮ ಮೈತ್ರಿಯಲ್ಲಿ ಸ್ಪರ್ಧಿಸಬೇಕೆಂಬುದು ನಮ್ಮ ಆಕಾಂಕ್ಷೆ. ನಿರ್ಧಾ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬೆಂಬಲ ಕೊಡುವ ಭರವಸೆಯಿದೆ ಎಂದು ಹೇಳಿದರು.

  • ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಉಡುಪಿ: ಜಿಲ್ಲೆಯ ಶ್ರೀಕೃಷ್ಣಮಠದ ಶೀರೂರು ಶ್ರೀ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಶ್ರೀಗಳ ಜೊತೆ ಮಾತನಾಡಿದ್ದಾರೆ. ಅಲ್ಲದೇ ಸಚಿವ ಮಧ್ವರಾಜ್ ಭೇಟಿ ಮಾಡೋದಾಗಿ ಹೇಳಿದ್ದಾರೆ.

    ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡೋದು ದೊಡ್ಡ ಸುದ್ದಿಯಾಗಿದೆ. ಉಡುಪಿಯ ಉಪ್ಪೂರಿನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶೀರೂರು ಶ್ರೀಗಳ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು. ಇದನ್ನೂ ಓದಿ: ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

    ಸ್ವಾಮೀಜಿ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಿಳಿದಿದ್ದೇನೆ. ಅವರ ಅಸಮಾಧಾನದ ಬಗ್ಗೆ ಶೀರೂರು ಶ್ರೀಗಳ ಜೊತೆ ಚರ್ಚೆ ಮಾಡುತ್ತೇನೆ. ನನಗೆ ಶೀರೂರು ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರಿಗೆ ಆಗಿರುವ ನೋವಿನ ಬಗ್ಗೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಹೇಳಿದರೆ ನಾನು ಖಂಡಿತಾ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಬಾರಿ ಉಡುಪಿಯಿಂದ ಸ್ಪರ್ಧಿಸುವುದಾಗಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನಿನ್ನೆ ಘೋಷಿಸಿದ್ದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಫೋನ್ ಮೂಲಕ ಮಾತುಕತೆ ಮಾಡಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ಬಗ್ಗೆ ಶೀರೂರು ಶ್ರೀಗಳ ಅಸಮಾಧಾನವನ್ನು ವರಿಷ್ಠರು ಆಲಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಉದಯ ಕುಮಾರ್ ಶೆಟ್ಟಿ ಫೋನ್ ಮೂಲಕ ಉಭಯ ನಾಯಕರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿದ್ದರು. ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ಮುಖತಃ ಭೇಟಿಯಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.