Tag: Shiroor Seer

  • ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಉಡುಪಿ: ಶಿರೂರು ಮಠದ ಒಂದು ತಿಂಗಳ ಆಡಳಿತ ನಿರ್ವಹಣೆಗೆ ಐವರು ಸದಸ್ಯರ ಆಡಳಿತ ಸಮಿತಿ ಸೋಮವಾರ ರಚನೆಯಾಗಲಿದೆ ಎಂಬ ಮಾಹಿತಿ ಸೋದೆ ಮಠದ ಮೂಲಗಳಿಂದ ಲಭಿಸಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಠದ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಈ ವ್ಯವಸ್ಥೆ ಮಾಡುತ್ತೇವೆ. ಸೋದೆ ವಿಶ್ವವಲ್ಲಭ ಸ್ವಾಮಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತದೆ. ಸೋದೆಮಠವೂ ಶಿರೂರು ಮಠದ ದ್ವಂದ್ವ ಮಠ ಆಗಿರುವುದರಿಂದ ಜವಾಬ್ದಾರಿ ವಹಿಸುತ್ತೇವೆ ಎಂದಿದ್ದಾರೆ. ಆದರೆ ಶಿರೂರು ಮಠದ ಮುಂದಿನ ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

    ಒಂದು ತಿಂಗಳೊಳಗೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಗಬೇಕು. ಉತ್ತರಾಧಿಕಾರಿ ಆಯ್ಕೆಗೆ ಸೋದೆ ಮಠದ ಪ್ರಯತ್ನ ನಡೆಸುತ್ತಿದ್ದು, ಹಲವಾರು ವಟುಗಳ ಜಾತಕ ಪರಿಶೀಲನೆ ನಡೆಸುತ್ತಿದ್ದಾರೆ. ವಟು ಆಯ್ಕೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕವಾಗಲಿದೆ. ಆದರೆ ನೂತನ ಉತ್ತರಾಧಿಕಾರಿಯಾಗಿ ಬರಲು ಹಲವರ ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಿರೂರು ಮಠದ ಆರ್ಥಿಕ ನಷ್ಟವೇ ಈ ನಿರಾಸಕ್ತಿಗೆ ಕಾರಣವಾಗಿದ್ದು, ಸನ್ಯಾಸ ಯೋಗವಿದ್ದರೂ ಉತ್ತರಾಧಿಕಾರಿಯಾಗಲು ಹಲವರ ನಿರಾಸಕ್ತಿ ವಹಿಸಿದ್ದಾರೆ. ಈ ಕುರಿತು ಕಳೆದ ಕೆಲ ವಾರಗಳಿಂದ ಮೂಡಿರುವ ಗೊಂದಲಗಳೇ ಕಾರಣ ಎನ್ನಲಾಗಿದೆ.

    ಮಠಾಧೀಶರುಗಳ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಉತ್ತರಾಧಿಕಾರಿ ಆಯ್ಕೆ ಸಮಿತಿಯಲ್ಲಿ ಶಿರೂರು ಮಠದ ವಿದ್ವಾಂಸರಿಗೂ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

  • ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ದ್ರವವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಬಾಟಲಿ Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

    ಮೊರಿಜೈನ್ ಆರೋಗ್ಯ ವೃದ್ಧಿ ಪಾನೀಯವಾಗಿದ್ದು, ಇದನ್ನೇ ವಿಷದ ಬಾಟಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ಆ ಹೆಸರಿನ ಶಕ್ತಿವರ್ಧಕ ಪಾನೀಯ ಲಭ್ಯವಿದ್ದು, ಸ್ವಾಮೀಜಿ ತಮ್ಮ ಆಪ್ತ ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ರಾ? ಅಥವಾ ಮಹಿಳೆಯೇ ತಂದು ಕುಡಿಸಿದ್ರಾ? ಎಂಬ ಶಂಕೆಯ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಶಿರೂರು ಸ್ವಾಮೀಜಿ ಆಪ್ತರು ನೀಡಿರುವ ಮಾಹಿತಿ ಪ್ರಕಾರ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಈ ಮಹಿಳೆ ಬಂದಿರಲಿಲ್ಲ. ಅನಾರೋಗ್ಯಕ್ಕೀಡಾದಾಗಲೂ ಆಸ್ಪತ್ರೆಗೆ ಬಂದಿರಲಿಲ್ಲ. ಹಾಗಾದ್ರೆ ಸ್ವಾಮೀಜಿ ಜೊತೆ ಕೊನೆಗಳಿಗೆಯಲ್ಲಿ ಆಪ್ತೆ ಎನಿಸಿಕೊಂಡಿದ್ದ ಮಹಿಳೆ ಮುನಿಸಿಕೊಂಡಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.

  • ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಕಾರವಾರ: ಶಿರೂರು ಶ್ರೀಗಳು ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಅವರಿಗೆ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ಶಿರೂರು ಶ್ರೀ ಗಳ ಅಂತಿಮ ದರ್ಶನಕ್ಕೆ ಹೋಗದ ಕುರಿತು ಸ್ವಷ್ಟನೆ ನೀಡಿ ಶಿರಸಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವಕ್ಕೆ ಭ್ರಷ್ಟರಾಗಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿಗಳಿವೆ. ಅದ್ದರಿಂದ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿಗಳಾದ ಮೇಲೆ ಧರ್ಮ ಬೇಕು. ಅದ್ದರಿಂದ ಅವರು ಮಠಾಧೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂದರು.

    ಶಿರೂರು ಶ್ರೀಗಳ ಮೇಲೆ ಮಠಾಧೀಶರಿಗೆ ದ್ವೇಷವಿಲ್ಲ. ನನ್ನ ಅವರ ಮಧ್ಯೆ ಉತ್ತಮ ವಿಶ್ವಾಸವಿತ್ತು. ಆದರೆ ಕೆಲವು ನೈತಿಕ, ತಾತ್ವಿಕ ಕಾರಣಗಳಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಶಿರೂರು ಶ್ರೀಗಳನ್ನು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ. ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ. ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಎಂದರು.

    ಇದೇ ವೇಳೆ ಶಿರೂರು ಶ್ರೀಗಳ ಸಂಶಯಾಸ್ಪದ ಸಾವು ಕುರಿತು ಪೂರ್ವಾಶ್ರಮದ ಸಹೋದರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಅವರು ನಿನ್ನೆ ನನ್ನೊಂದಿಗೆ ಲಾತವ್ಯ ಆಚಾರ್ಯ ಮಾತನಾಡುವಾಗ ಶಿರೂರು ಶ್ರೀಗಳು ಫಲಾಹಾರವನ್ನು ತೆಗೆದುಕೊಂಡಿದ್ದರು. ಆಹಾರವನ್ನು ಒಂದು ಕೆಟ್ಟ ಕಿಲುಬು ಪಾತ್ರೆಯನ್ನು ನೀಡಲಾಗಿದೆ ಅಂದಿದ್ದರು. ಅವರ ಸಾವಿಗೆ ಪಾತ್ರೆ ದೋಷ ಕಾರಣವಾಗಿರುವ ಸಾಧ್ಯತೆಗಳಿವೆ. ನಿನ್ನೆ ಅನುಮಾನ ಬಾರದ್ದು ಇಂದು ಹೇಗೆ ಅನುಮಾನ ಬಂತು. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಈ ಕುರಿತು ಎಲ್ಲಾ ವಿಷಯ ತಿಳಿಯುತ್ತದೆ ಎಂದರು.