Tag: shiroor lakshmivara tirtha Sri

  • ಸಾಬೀತಾಯ್ತು ಗೋಲ್ಮಾಲ್- ಕೃಷ್ಣಮಠದ ಪಾರ್ಕಿಂಗ್ ವ್ಯವಹಾರ ಅಧಿಕಾರ ಶೀರೂರು ಸ್ವಾಮೀಜಿಗೆ

    ಸಾಬೀತಾಯ್ತು ಗೋಲ್ಮಾಲ್- ಕೃಷ್ಣಮಠದ ಪಾರ್ಕಿಂಗ್ ವ್ಯವಹಾರ ಅಧಿಕಾರ ಶೀರೂರು ಸ್ವಾಮೀಜಿಗೆ

    ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಗೋಲ್ಮಾಲ್ ವಿರುದ್ಧ ಕಳೆದ ಕೆಲವು ದಿನಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಿಡಿದೆದ್ದಿದ್ದರು. ಅಲ್ಲದೇ ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಜೆಸಿಬಿ ತಂದು ಒಡೆಸಿದ್ದರು. ಆದರೆ ಇದೀಗ ಪೇಜಾವರ ಶ್ರೀಗಳ ಆಪ್ತರು ಈ ಅಕ್ರಮದ ಹಿಂದೆ ಇದ್ದಾರೆ ಎಂದು ಸಾಬೀತಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಶೀರೂರು ಸ್ವಾಮೀಜಿ ಪಾಲಾಗಿದೆ.

    ಪೇಜಾವರ ಮಠದಲ್ಲಿ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ನಡೆದಿದೆ. ಅಷ್ಟಮಠಾಧೀಶರ ಅಭಿಪ್ರಾಯದಂತೆ ಶೀರೂರು ಸ್ವಾಮೀಜಿಗೆ ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಕೊಡಲಾಗಿದೆ. ಪಾರ್ಕಿಂಗ್ ಶುಲ್ಕ ಸಂಗ್ರಹ ಹಾಗೂ ಸ್ಥಳದ ಕಟ್ಟಡಗಳ ವ್ಯವಹಾರ ಎಲ್ಲವನ್ನೂ ಶೀರೂರು ಸ್ವಾಮೀಜಿ ನೋಡಿಕೊಳ್ಳಬೇಕು ಎಂದು ಅಷ್ಟಮಠಗಳ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ.

    ಪಾರ್ಕಿಂಗ್ ರಸೀದಿ ಪುಸ್ತಕವನ್ನು ನಕಲು ಮಾಡಿದ್ದು, ಒಂದೇ ಸಂಖ್ಯೆ ಇರುವ ಪುಸ್ತಕಗಳು ತಪಾಸಣೆ ವೇಳೆ ಲಭ್ಯವಾಗಿದೆ. ಹೀಗಾಗಿ ಪಾರ್ಕಿಂಗ್ ನಲ್ಲಿ ನಡೆದ ಅವ್ಯವಹಾರವನ್ನು ಶೀರೂರು ಸ್ವಾಮೀಜಿ ಪೇಜಾವರ ಶ್ರೀಗಳ ಗಮನಕ್ಕೆ ತಂದಿದ್ದಾರೆ. ಆರೋಪ ಸಾಬೀತಾಗಿರುವುದರಿಂದ ಅಧಿಕಾರವನ್ನು ಶೀರೂರು ಸ್ವಾಮೀಜಿಗೆ ನೀಡಲಾಗಿದೆ. ಪಾರ್ಕಿಂಗ್ ಸ್ಥಳದ ಜವಾಬ್ದಾರಿ ಜೊತೆ ರಥಬೀದಿಯ ಆಸುಪಾಸಿನ ಅಂಗಡಿಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಶಿಫ್ಟ್ ಮಾಡುವ ಕನಸಿದೆ ಎಂದು ಶೀರೂರು ಸ್ವಾಮೀಜಿ ಹೇಳಿದ್ದಾರೆ.

    ಶ್ರೀಕೃಷ್ಣ ಮಠದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಪೇಜಾವರ ಶ್ರೀ ಹಾಗೂ ಪರ್ಯಾಯ ಪಲಿಮಾರು ಸ್ವಾಮೀಜಿ ಸಹಿತ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠ ಪರಿಸರ ಸೇವಾ ಪ್ರತಿಷ್ಠಾನದ ಸಭೆ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ನಡೆಯಿತು.

    ಸಭೆಯ ಬಳಿಕ ಮಾತನಾಡಿದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ಟ್ರಸ್ಟ್ ವತಿಯಿಂದ ಪಾರ್ಕಿಂಗ್ ಹಣ ಸಂಗ್ರಹ ಉಸ್ತುವಾರಿಯಾಗಿ ಉದಯ ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡಲಾಗಿತ್ತು. ಅವರು ಒಂದೇ ರೀತಿಯ ನಂಬರ್ ಇರುವ ಎರಡು ರಶೀದಿ ಪುಸ್ತಕಗಳನ್ನು ಇಟ್ಟುಕೊಂಡು ಪಾರ್ಕಿಂಗ್ ಹಣ ಸಂಗ್ರಹಿಸಿ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಶೀರೂರು ಸ್ವಾಮೀಜಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉದಯ ಅವರನ್ನು ಆ ಜವಾಬ್ದಾರಿಯಿಂದ ತೆಗೆದುಹಾಕಿದ್ದೇವೆ. ಅವರ ಬದಲು ಪಾರ್ಕಿಂಗ್ ಹಣ ಸಂಗ್ರಹದ ಜವಾಬ್ದಾರಿಯನ್ನು ಶೀರೂರು ಶ್ರೀಗಳಿಗೆ ವಹಿಸಿಕೊಡಲಾಗಿದೆ ಎಂದು ತಿಳಿಸಿದರು.

    ಪಾರ್ಕಿಂಗ್ ಪ್ರದೇಶದಲ್ಲಿರುವ ವಿಷ್ಣುಮೂರ್ತಿ ಅವರ ಎರಡು ಅಂಗಡಿಗಳಿಗೆ ಮಠಾಧೀಶರ ವಿರೋಧ ಇರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಅದೇ ರೀತಿ ಬೇರೆ ಅಂಗಡಿಗಳನ್ನು ಕೂಡ ತೆರವುಗೊಳಿಸಬೇಕು ಎಂಬುದು ಶೀರೂರು ಸ್ವಾಮೀಜಿಗಳ ಅಪೇಕ್ಷೆ. ಅದಕ್ಕೆ ನಾವು ಎಲ್ಲ ಒಪ್ಪಿಗೆ ಕೊಟ್ಟಿದ್ದೇವೆ ಎಂದರು.

    ಕಳೆದ ಪರ್ಯಾಯ ಅವಧಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಮಠಕ್ಕೆ ಯಾವುದೇ ನಷ್ಟ ಆಗಿಲ್ಲ. ಅದಕ್ಕಿಂತ ಹೆಚ್ಚಿನ ಪಾಲು ಹಣವನ್ನು ನಾವು ಟ್ರಸ್ಟ್‍ಗೆ ಕೊಟ್ಟಿದ್ದೇವೆ. 50 ಲಕ್ಷ ರೂ. ಯಾತ್ರಿ ನಿವಾಸಕ್ಕೆ ಮತ್ತು 2.5 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ಕಟ್ಟಡವನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿದ್ದೇವೆ. ಹಾಗಾಗಿ ಟ್ರಸ್ಟ್‍ಗೆ ನಮ್ಮಿಂದ ಯಾವುದೇ ರೀತಿಯ ಅನ್ಯಾಯ ಆಗಲಿ, ನಷ್ಟ ಆಗಲಿ ಆಗಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.

    ಇದು ಶ್ರೀ ಕೃಷ್ಣ ಮಠದ ಭಕ್ತರಿಗಾಗಿ ಮಾಡಿರುವ ಹೋರಾಟ. ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ರಥಬೀದಿ ಹಾಗೂ ಕೃಷ್ಣ ಮಠದ ಪರಿಸರ ವಾಹನ ಮುಕ್ತ ಹಾಗೂ ವಾಣಿಜ್ಯ ಮುಕ್ತ ಆಗಬೇಕು. ಆದರೆ ಕೆಲವರು ಅದನ್ನು ಹಾಳು ಮಾಡುವ ಯತ್ನ ಮಾಡುತ್ತಿದ್ದಾರೆ. ಈ ಕುರಿತು ಪೇಜಾವರ ಶ್ರೀಗಳಿಗೆ ಎಲ್ಲ ರೀತಿಯ ಆಧಾರಗಳನ್ನು ನೀಡಿದ್ದೇನೆ. ಮುಂದೆ ಪಾರ್ಕಿಂಗ್ ಪ್ರದೇಶದಲ್ಲಿ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆ ಹಾಗೂ ವಾಣಿಜ್ಯ ಅಂಗಡಿಗಳನ್ನು ಮಾಡಲಾಗುವುದು ಎಂದರು.

    ಮಠಗಳ ವತಿಯಿಂದ ಖರೀದಿಸಲಾದ ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಶೀರೂರು ಶ್ರೀ ತಿಳಿಸಿದರು. ಸಭೆಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾಲ್ಲಭ ತೀರ್ಥ ಸ್ವಾಮೀಜಿ ಹಾಜರಿದ್ದರು.

  • ಜೆಸಿಬಿ ಜೊತೆ ಬಂದು ಪೇಜಾವರ ಶ್ರೀ ಆಪ್ತರ ಅಕ್ರಮದ ವಿರುದ್ಧ ಘರ್ಜಿಸಿದ ಶೀರೂರು ಶ್ರೀ

    ಜೆಸಿಬಿ ಜೊತೆ ಬಂದು ಪೇಜಾವರ ಶ್ರೀ ಆಪ್ತರ ಅಕ್ರಮದ ವಿರುದ್ಧ ಘರ್ಜಿಸಿದ ಶೀರೂರು ಶ್ರೀ

    ಉಡುಪಿ: ಪೇಜಾವರಶ್ರೀ ಆಪ್ತರು ನಡೆಸುತ್ತಿದ್ದ ಆಕ್ರಮಗಳ ಮೇಲೆ ಶೀರೂರು ಸ್ವಾಮೀಜಿ ಘರ್ಜಿಸಿದ್ದಾರೆ. ಮಠದ ಹೆಸರಲ್ಲಿ ಸಾರ್ವಜನಿಕರ ಹಣವನ್ನು ಪೇಜಾವರಶ್ರೀ ಗಳ ಆಪ್ತರು ಲೂಟಿ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳಿಗೆ ದಾಕ್ಷಿಣ್ಯ ಜಾಸ್ತಿ. ಆದರೆ ಅಕ್ರಮವನ್ನು ನೋಡಿಕೊಂಡು ನಾನು ಸುಮ್ಮನಿರಲ್ಲ ಎಂದು ಬುಲ್ಡೋಜರ್ ತಂದು ಅಂಗಡಿ ಮತ್ತು ಬಟ್ಟೆ ಮಳಿಗೆಯನ್ನು ಶೀರೂರು ಸ್ವಾಮೀಜಿ ನೆಲಕ್ಕುರುಳಿಸಿದ್ದಾರೆ.

    ಕಳೆದ 12 ವರ್ಷಗಳಿಂದ ಅಕ್ರಮಗಳನ್ನು ನೋಡಿಯೂ ಏನೂ ಮಾಡಲಾಗದೆ ಸುಮ್ಮನಿದ್ದ ಉಡುಪಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಜೆಸಿಬಿ ಜೊತೆ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಬಂದ ಶೀರೂರು ಶ್ರೀ ಅಕ್ರಮ ಅಂಗಡಿ ಮಾಲೀಕರಿಗೆ ಚಳಿ ಬಿಡಿಸಿದರು.

    ಯಾತ್ರಿ ನಿವಾಸ ಲಾಡ್ಜ್ ಕಚೇರಿಗೆ ಬಂದು ಕಡತಗಳನ್ನು ಜಾಲಾಡಿ ಸಿಬ್ಬಂದಿಗೆ ಚಳಿ ಬಿಡಿಸಿದರು. ಐಟಿ ದಾಳಿಗಿಂತ ನನ್ನ ದಾಳಿ ಪರಿಣಾಮಕಾರಿ, ಈಗ ಕಾರ್ಯಾಚರಣೆ ಮಾಡಿದ್ದು 5% ನಿಂದ 95% ಅಕ್ರಮದ ವಿರುದ್ಧ ನನ್ನ ಹೋರಾಟವಿದೆ ಎಂದು ಎಚ್ಚರಿಕೆ ನೀಡಿದರು. ಈ ಮೂಲಕ ಪೇಜಾವರಶ್ರೀ ಆಪ್ತರಿಗೆ ಬಿಸಿಮುಟ್ಟಿಸಿದರು.

    ಕೃಷ್ಣಮಠದ ಸುತ್ತಮುತ್ತಲ ಅಂಗಡಿಗಳು, ಪಾರ್ಕಿಂಗ್ ನಿಂದ ಬರುವ ಹಣವನ್ನು ಕೃಷ್ಣಮಠಕ್ಕೆ ಸಲ್ಲಿಕೆ ಮಾಡಬೇಕು. ಆದರೆ ಅಷ್ಟಮಠಗಳ ಟ್ರಸ್ಟ್ ನಲ್ಲಿದ್ದವರು ಹಣವನ್ನು ಮಠಕ್ಕೆ ಕೊಡದೇ ಲೂಟಿ ಮಾಡುತ್ತಿದ್ದರು. ಅಷ್ಠಮಠಗಳ ಟ್ರಸ್ಟ್ ಗೆ ಕೆಲವರಿಂದ ಅನ್ಯಾಯವಾಗಿದೆ. ಎಲ್ಲವನ್ನು ನೋಡಿಕೊಂಡು ಕೂರುವ ಜಾಯಮಾನ ನನ್ನದಲ್ಲ. ಕೃಷ್ಣ ಮುಖ್ಯಪ್ರಾಣನಿಗೆ ಪೂಜೆ ಮಾಡಲೂ ಗೊತ್ತು ಅಕ್ರಮಕ್ಕೆ ಬ್ರೇಕ್ ಹಾಕಲೂ ಗೊತ್ತು ಎಂದು ಗುಡುಗಿದರು.

    ಪೇಜಾವರ ಪರ್ಯಾಯ ಮುಗಿಯುವುದಕ್ಕೆ ಕಾಯುತ್ತಿದ್ದೆ. ಪೇಜಾವರ ಶ್ರೀಗಳ ಆಪ್ತರು ಅಕ್ರಮ ಮಾಡಿದ್ದರೂ, ಹಿರಿಯರು ಕಣ್ಮುಂದೆ ನಡೆಯುವ ಲೂಟಿ ನೋಡಿಕೊಂಡು ಸುಮ್ಮನಿದ್ದರು. ಅಲ್ಲದೇ ಸ್ವಾಮೀಜಿ ಅವರು ಆಪ್ತ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಲ್ಲ. ವಿಚಾರ ಗಮನಕ್ಕೆ ತಂದರೆ ನಾನು ಉಪವಾಸ ಮಾಡುತ್ತೇನೆ ಅಂತ ಬೇಸರದ ಮಾತನಾಡುತ್ತಾರೆ. ಹೀಗಾಗಿ ಅಕ್ರಮ ಮಾಡುವ ಆಪ್ತರಿಗೆ ನಾನು ಬುದ್ಧಿ ಕಲಿಸುತ್ತೇನೆ. ಇಂತವರಿಗೆ ಇದೇ ಸೂಕ್ತ ದಾರಿ ಎಂದು ನಾನು ರೇಡ್ ಮಾಡಲು ಇಳಿದಿದ್ದೇನೆ ಎಂದರು.

    ಎರಡೂವರೆ ಎಕರೆ ಜಮೀನನ್ನು ನಾನು ಹಣಕೊಟ್ಟು ಖರೀದಿ ಮಾಡಿದ್ದೇನೆ. ರಥಬೀದಿ ವಾಹನ ಮುಕ್ತ ಮಾಡಿದಾಗ ಆಟೋ, ಕಾರು ಚಾಲಕರನ್ನು ಇಲ್ಲಿಗೆ ಕರೆದುಕೊಂಡು ಬಂದು ನೆಲೆ ಕೊಟ್ಟಿದ್ದೇನೆ. ಎಂಟೂ ಮಠದ ಸ್ವಾಮೀಜಿಗಳು ಹಣ ಕೊಟ್ಟು ಒಟ್ಟು ಐದೂವರೆ ಎಕರೆ ಜಮೀನು ಖರೀದಿ ಮಾಡಿದ್ದೇವೆ. ಮಠದ ಜಮೀನಿನ ಪಾರ್ಕಿಂಗ್, ಮಳಿಗೆ ಹೆಸರಲ್ಲಿ ಅಷ್ಟ ಮಠಗಳ ಟ್ರಸ್ಟ್ ದರೋಡೆ ಮಾಡುತ್ತಿದೆ. ಪಾರ್ಕಿಂಗ್, ಅಂಗಡಿ ಹಣದಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡಲಾಗಿದೆ. ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತಾನು ದಾನ ಕೊಟ್ಟ ಭೂಮಿಯಲ್ಲಿ ಅಕ್ರಮ ಸಹಿಸಲ್ಲ. ಕೃಷ್ಣಮಠಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎಂದು ಶೀರೂರು ಲಕ್ಷ್ಮೀವರತೀರ್ಥ ಶ್ರೀ ಆಕ್ರೋಶ ಹೊರ ಹಾಕಿದರು.

    ಪೇಜಾವರ ಸ್ವಾಮೀಜಿ ಜ್ಞಾನವೃದ್ಧರು, ವಯೋವೃದ್ಧರು ಅವರ ಪಕ್ಕದಲ್ಲೇ ಹೆಗ್ಗಣಗಳಿವೆ. ಅವುಗಳನ್ನು ಓಡಿಸಿದರೆ ಪೇಜಾವರಶ್ರೀ ಗಳ ಗೌರವ ಇನ್ನೂ ಹೆಚ್ಚಾಗುತ್ತದೆ. ಅವರ ಆಪ್ತರಿಂದಲೇ ಅನ್ಯಾಯವಾಗಿದೆ ಎಂದು ಶೀರೂರು ಸ್ವಾಮೀಜಿ ಆರೋಪಿಸಿದ್ದಾರೆ.

    ಯಾವುದೇ ಪೂರ್ವಸೂಚನೆ ನೀಡದೇ ಕಟ್ಟಡ ತೆರವು ಮಾಡಿದ್ದರಿಂದ ಅಂಗಡಿ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಕೆಲಕಾಲ ಭೂಕಂಪವಾದ ಅನುಭವವಾದಂತಿತ್ತು. ಅಷ್ಟಮಠಗಳ ಟ್ರಸ್ಟ್ ಅಕ್ರಮದಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದಂತಾಗಿದೆ.