Tag: Shirdi Sai Baba

  • ಬೊಂಬೆನಗರದಲ್ಲಿ ಪವಾಡ ಪುರುಷ – ಶಿರಡಿ ಸಾಯಿ, ಸತ್ಯಸಾಯಿಯ ಅವತಾರವೆಂದು ಮುಗಿಬಿದ್ದ ಭಕ್ತರು

    ಬೊಂಬೆನಗರದಲ್ಲಿ ಪವಾಡ ಪುರುಷ – ಶಿರಡಿ ಸಾಯಿ, ಸತ್ಯಸಾಯಿಯ ಅವತಾರವೆಂದು ಮುಗಿಬಿದ್ದ ಭಕ್ತರು

    ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ಓರ್ವ ಪವಾಡ ಪುರುಷ ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾ, ಪುಟ್ಟಪರ್ತಿ ಸತ್ಯ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

    ಮಹಾರಾಷ್ಟ್ರದಿಂದ ಚನ್ನಪಟ್ಟಣಕ್ಕೆ ಪ್ರೇಮ್‍ಸಾಯಿ ಆಗಮಿಸಿದ್ದು ಶಿರಡಿ ಸಾಯಿಬಾಬಾ, ಸತ್ಯಸಾಯಿಬಾಬಾರ ಅವತಾರ ಪುರುಷ ಎಂದು ಜನ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಪ್ರೇಮ್ ಸಾಯಿ ಮಹಾರಾಷ್ಟ್ರದಿಂದ ಚನ್ನಪಟ್ಟಣಕ್ಕೆ ಆಗಮಿಸಿದ್ದಾರೆ. ಮೊದಲಿಗೆ ನಗರದ ಹೊರವಲಯದಲ್ಲಿನ ಚಿಕ್ಕಮಳೂರಿನ ಸ್ಮಶಾನದಲ್ಲಿನ ಪುಟ್ಟಸ್ವಾಮಿಗೌಡರ ಸಮಾಧಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ಕೆಲವು ಜನ ಪ್ರೇಮ್‍ಸಾಯಿ ಬಳಿ ಹೋಗಿದ್ದು ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಕೆಲವರಿಗೆ ವಿಭೂತಿ ನೀಡಿದ್ದು ಕೆಲವರಿಗೆ ತಾಯತವನ್ನು ನೀಡಿದ್ದಾರೆ.

    ಎರಡು ದಿನಗಳ ಹಿಂದೆ ಶಿಕ್ಷಕರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಪ್ರೇಮ್ ಸಾಯಿಯನ್ನು ಮಂಗಳವಾರ ಪೇಟೆಯ ಪ್ರಕಾಶ್ ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದಕ್ಕೆ ಸಮ್ಮತಿಸಿ ಮನೆಗೆ ಬಂದಿದ್ದಾರೆ. ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದು ದರ್ಶನ ಪಡೆಯಲು ಬರುತ್ತಿರುವ ಭಕ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಚೀಟಿಯಲ್ಲಿ ಬರೆದು ನೀಡುತ್ತಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಲ್ಲಿ ಕೆಲವರನ್ನು ಕರೆದು ವಿಭೂತಿ ನೀಡುವುದು, ಸಾಯಿಬಾಬಾರ ಫೋಟೋ ನೀಡುವುದು ಹಾಗೂ ಸಿಹಿ ತಿನಿಸುಗಳನ್ನು ಸಹ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಪವಾಡ ಪುರುಷ ಪ್ರೇಮ್‍ಸಾಯಿಯ ವಿಚಾರ ತಿಳಿಯುತ್ತಿದ್ದಂತೆ ಭಕ್ತರ ದಂಡು ಸಹ ಹರಿದುಬರುತ್ತಿದ್ದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಬೆಳಗ್ಗೆ 8 ರಿಂದ 9 ಗಂಟೆವರೆಗೆ ಹಾಗೂ ಸಾಯಂಕಾಲದ 5 ಗಂಟೆ ಬಳಿಕ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಅಲ್ಲದೇ ರಾತ್ರಿಯ ವೇಳೆ ಭಕ್ತರು ಭಜನೆ ಸಹ ಮಾಡುತ್ತಿದ್ದು, ಪ್ರೇಮ್‍ಸಾಯಿಯನ್ನು ಕಂಡು ಅವತಾರ ಪುರುಷ ಎನ್ನುತ್ತಿದ್ದಾರೆ ಭಕ್ತರು.

    ಮೈಸೂರಿನಲ್ಲಿ ವ್ಯಾಸಂಗ ಮಾಡ್ತಿರುವ ಪ್ರಕಾಶ್ ಅವರ ಪುತ್ರಿ ಸಪ್ತಮಿಗೆ ಮೂರು ದಿನಗಳಿಂದ ಜ್ವರ, ಮೈ ಕೈ ನೋವು ಎಂದು ಮಲಗಿದ್ದಳು. ಆಸ್ಪತ್ರೆಗೆ ಹೋದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ ಇಂದು ಮನೆಗೆ ವಾಪಸ್ಸಾಗಿದ್ದಾಳೆ ಈ ವೇಳೆ ಮನೆಯಲ್ಲಿಯೇ ವಾಸ್ತವ್ಯ ಹೂಡಿರುವ ದರ್ಶನ ಪಡೆಯಲು ಮುಂದಾದಾಗ ತಲೆ ಮುಟ್ಟಿ ಮಾತನಾಡಿಸಿದ ಕೆಲವೇ ಕ್ಷಣಗಳಲ್ಲಿ ಜ್ವರ, ಮೈ ಕೈ ನೋವು ಮಾಯವಾಗಿದ್ರೆ, ಇನ್ನೋರ್ವ ಗೋಪಾಲಯ್ಯ ಎಂಬವರು ಈ ಹಿಂದೆ ಸತ್ಯಸಾಯಿಯವರನ್ನು ಪ್ರಶ್ನಿಸಿಕೊಂಡು ಪುಟ್ಟಪರ್ತಿಗೆ ಹೋಗಿದ್ದೆ. ಆಗ ಅವರು ಚೋರ್ ಚೋರ್ ಆಗಯಾ ಎಂದು ಕರೆದಿದ್ದರು. ಇಂದು ಈ ಪ್ರೇಮ್ ಸಾಯಿಯವರ ಬಳಿ ಬಂದಾಗಲೂ ಸಹ ಅದೇ ರೀತಿ ದೇಖೋ ಚೋರ್ ಆಗಾಯಾ ಅಂದರ್ ಆವ್ ಬೇಟಾ ಎಂದು ಕರೆದರು ಎಂದು ತಿಳಿಸಿದರು.

    ಪವಾಡಪುರುಷ ಪ್ರೇಮ್‍ಸಾಯಿ ಕೆಲವೇ ಕೆಲವು ದಿನಗಳು ಮಾತ್ರ ಇಲ್ಲಿ ಇರುವುದಾಗಿ ತಿಳಿಸಿರೋದ್ರಿಂದ ಭಕ್ತರ ದಂಡು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೇ ಜನ ಮರುಳೋ, ಜಾತ್ರೆ ಮರುಳೋ ಅನ್ನೋ ರೀತಿ ಕಷ್ಟಗಳನ್ನು ಹೇಳಿಕೊಂಡುಬರುವವರು ಸಹ ಪವಾಡಗಳಿಗೆ ಮರುಳಾಗಿದ್ದಾರೆ.

  • ಶಿರಡಿ ಸಾಯಿಬಾಬಾನ ದರ್ಶನ ಪಡೆದು ಅತೃಪ್ತರಿಂದ ಶಪಥ

    ಶಿರಡಿ ಸಾಯಿಬಾಬಾನ ದರ್ಶನ ಪಡೆದು ಅತೃಪ್ತರಿಂದ ಶಪಥ

    ಮುಂಬೈ: ಕಳೆದ ಒಂದು ವಾರದಿಂದ ಮುಂಬೈನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ ಅತೃಪ್ತ ಶಾಸಕರು ಇಂದು ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇಂದು ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಮಾಡಿ ಶಪಥ ಮಾಡಿದ್ದಾರೆ.

    ಇಂದು ಬೆಳಗ್ಗೆ ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈನಿಂದ ಶಿರಡಿಗೆ ತೆರಳಿದ್ದರು. ಈ ವೇಳೆ ಸಾಯಿ ಬಾಬಾನ ದರ್ಶನ ಪಡೆದ ಅವರು, ವಿಶ್ವಾಸಮತ ಯಾಚನೆ ವೇಳೆ ನಾವು ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗುವುದಿಲ್ಲ. ಬಹುಮತಯಾಚನೆ ವೇಳೆ ನಾವು ಗೈರಾಗುತ್ತೇವೆ. ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಲೇಬಾರದು. ರಾಜೀನಾಮೆ ಕೊಟ್ಟು ವಿಶ್ವಾಸಮತಯಾಚನೆ ವೇಳೆ ಹಾಜರಾದರೆ ಅರ್ಥನೇ ಇಲ್ಲ ಎಂದು ಶಪಥ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅತೃಪ್ತ ಶಾಸಕರು ಶಿರಡಿ ಸಾಯಿ ಬಾಬಾನ ದರ್ಶನ ಪಡೆದ ನಂತರ ಶನಿಶಿಂಗ್ನಾಪುರಕ್ಕೆ ತೆರಳಿದ್ದಾರೆ. ನಂತರ ಅಲ್ಲಿಂದ ಅಜಂತಾ, ಎಲ್ಲೋರಾ ಗುಹಾಂತರ ದೇಗುಲಗಳಿಗೆ ಭೇಟಿ ಕೊಟ್ಟಿದ್ದಾರೆ. ಇಂದು ರಾತ್ರಿ ಔರಂಗಾಬಾದ್‍ನಲ್ಲಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನಂತರ ಭಾನುವಾರ ನಾಸಿಕ್‍ನ ತ್ರಯಂಬಕೇಶ್ವರನ ದರ್ಶನ ಮುಗಿಸಿ ಸಂಜೆ ಮತ್ತೆ ಮುಂಬೈಗೆ ವಾಪಸ್ ಆಗಲಿದ್ದಾರೆ.

    ಶುಕ್ರವಾರ ಮುಂಬೈನ ರಿನೈಸನ್ಸ್ ಹೋಟೆಲ್‍ನಿಂದ ಹೊರ ಬಂದ ರೆಬೆಲ್ ಶಾಸಕರಾದ ಬಿ.ಸಿ ಪಾಟೀಲ್, ಬೈರತಿ ಬಸವರಾಜ್, ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಸಂಕಷ್ಟ ನಿವಾರಿಸಲು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದ ನಾಲ್ವರು ಶಾಸಕರು ನಂತರ ಮುಂಬೈನ ದಾದರ್ ನಲ್ಲಿರುವ ಗೋವಾ ಪೋರ್ಚುಗೀಸ್ ಹೋಟೆಲಿನಲ್ಲಿ ಊಟ ಮುಗಿಸಿ ಮತ್ತೆ ರಿನೈಸನ್ಸ್ ಕಡೆ ತೆರಳಿದ್ದರು.

  • ದಕ್ಷಿಣ ಶಿರಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದ ರಾಜಮಾತೆ

    ದಕ್ಷಿಣ ಶಿರಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದ ರಾಜಮಾತೆ

    ಬೆಂಗಳೂರು: ಗುರುಪೂರ್ಣಿಮೆ ನಿಮಿತ್ತ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ವಡ್ಡರಹಳ್ಳಿ ಬಳಿಯ ಇರುವ ಪ್ರಸಿದ್ಧ ದಕ್ಷಿಣ ಶಿರಡಿ ಸಾಯಿಬಾಬಾ ದೇಗುಲಕ್ಕೆ ಮೈಸೂರು ಸಂಸ್ಥಾನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾ ದೇವಿ, ದೇವರಲ್ಲಿ ನಂಬಿಕೆ ಇಟ್ಟರೆ ಯಾವ ಆಂತಕವೂ ಬರಲ್ಲ. ಚಂದ್ರಗ್ರಹಣ ಪ್ರಕೃತಿಯಲ್ಲಿ ಆಗಾಗ ಸಂಭವಿಸುತ್ತದೆ. ಒಂದು ವೇಳೆ ಏನಾದರೂ ಸಮಸ್ಯೆ, ದೋಷ ಇದ್ದರೆ ಪೂಜೆ ಮಾಡಿಸಿದರೆ ಪರಿಹಾರವಾಗುತ್ತದೆ. ಆದ್ದರಿಂದ ಇಂದು ರಾತ್ರಿ ಸಂಭವಿಸುವ ರಕ್ತ ಚಂದ್ರ ಗ್ರಹಣದ ಬಗ್ಗೆ ಜನರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ದೇವರು ಎಲ್ಲಾ ಒಳ್ಳೆಯದನ್ನೇ ಮಾಡುತ್ತಾನೆ. ದೇವರಲ್ಲಿ ನಂಬಿಕೆ ಇರಬೇಕು ಒಳಿತಾಗಲಿದೆ ಎಂದು ಹೇಳಿದರು.

    ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ.