Tag: Shirahatti Fakireshwara Matt

  • ಆನೆಗೂ ಕೊರೊನಾ ವೈರಸ್ ಭೀತಿ – ಮಠದಲ್ಲೇ ಐಸೋಲೇಷನ್

    ಆನೆಗೂ ಕೊರೊನಾ ವೈರಸ್ ಭೀತಿ – ಮಠದಲ್ಲೇ ಐಸೋಲೇಷನ್

    ಗದಗ: ದೈತ್ಯ ಆನೆಗೆ ಇರುವೆಯೊಂದು ಕಾಟ ಕೊಡುವ ಕಥೆ ಕೇಳಿದ್ದೆವು. ಆದರೆ ಈಗ ಕಣ್ಣಿಗೆ ಕಾಣದ ಕೊರೊನಾ ವೈರಸ್ ಆನೆಗಳಲ್ಲೂ ಭೀತಿ ಹುಟ್ಟಿಸಿದ್ದು, ಆನೆಗಳಿಗೆ ಕೊರೊನಾ ಹರಡಬಾರದು ಎಂದು ಜಿಲ್ಲೆಯ ಶಿರಹಟ್ಟಿಯ ಫಕೀರೇಶ್ವರ ಮಠ ಹಾಗೂ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರದ ಆನೆಗಳನ್ನು ಮಠದಲ್ಲೇ ಐಸೋಲೇಷನ್‍ನಲ್ಲಿ ಇಡಲಾಗಿದೆ.

    ಪ್ರತಿದಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಬಂದು ಎರಡೂ ಆನೆಗಳ ಆರೋಗ್ಯವನ್ನು ಪರೀಕ್ಷೆ ಮಾಡುತ್ತಿದ್ದಾರೆ. ಈ ಮೊದಲು ಎರಡೂ ಆನೆಗಳನ್ನು ಪ್ರತಿದಿನ ನಾಲ್ಕಾರು ಕಿಲೋಮೀಟರ್ ವಾಕಿಂಗ್ ಹಾಗೂ ಆಹಾರಕ್ಕಾಗಿ ಕರೆದುಕೊಂಡು ಹೋಗಲಾಗುತಿತ್ತು. ಆದರೆ ಸರ್ಕಾರದ ಲಾಕ್‍ಡೌನ್ ಆದೇಶದ ನಂತರ ಎರಡು ಆನೆಗಳಿಗೆ ಮಠದಲ್ಲೇ ಆರೈಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯವರು ಎರಡು ಆನೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

    ಪ್ರತಿದಿನ ಮಠಗಳಿಗೆ ಭೇಟಿ ನೀಡಿ ಎರಡು ಆನೆಗಳ ಆರೋಗ್ಯದ ಬಗ್ಗೆ ಪಶುವೈದ್ಯರು ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಆನೆಗಳನ್ನು ನೋಡಿಕೊಳ್ಳುತ್ತಿರುವ ಮಾವುತರಿಗೆ ಮಾಸ್ಕ್ ಧರಿಸಿಯೇ ಆನೆಗಳ ಆರೈಕೆ ಮಾಡಬೇಕು ಹಾಗೂ ಹೊರಗಿನ ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡದಂತೆ ಸೂಚನೆ ನೀಡಿದ್ದಾರೆ. ಸದ್ಯ ಎರಡೂ ಆನೆಗಳ ಆರೋಗ್ಯವು ಚೆನ್ನಾಗಿದೆ.

    ಈ ಹಿಂದೆ ನ್ಯೂಯಾರ್ಕ್‍ನಲ್ಲಿನ ಬ್ರಾನ್ಸ್ ಮೃಗಾಲಯದಲ್ಲಿನ ಹುಲಿಗೆ ಕೊರೊನಾ ವೈರಸ್ ತಗುಲಿರುವುದು ವರದಿಯಾಗಿತ್ತು. ಮನುಷ್ಯನಿಂದ ವನ್ಯ ಜೀವಿಗೆ ಕೊರೊನಾ ವೈರಸ್ ತಗುಲಿರುವುದು ಇದೇ ಮೊದಲ ಪ್ರಕರಣವಾಗಿದ್ದು, ಬಹುಶಃ ಝೂನಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ಸಿಬ್ಬಂದಿಯಿಂದ ಹುಲಿಗೆ ಸೋಂಕು ಹರಡಿದೆ ಎಂದು ಶಂಕಿಸಲಾಗಿತ್ತು. ಅಷ್ಟೇ ಅಲ್ಲದೆ ಕೊರೊನಾ ವೈರಸ್ ಬೆಕ್ಕುಗಳಿಗೂ ಹರಡಿರುವುದು ವರದಿಯಾಗಿತ್ತು. ಬೆಕ್ಕಿನ ಮಾಲೀಕನಿಗೆ ಕೊರೊನಾ ಬಂದಿದ್ದು ಆತ ಹೋಮ್ ಕ್ವಾರಂಟೈನ್‍ನಲ್ಲಿದ್ದ. ಇದರಿಂದಾಗಿ ವೈರಸ್ ಬೆಕ್ಕಿಗೂ ಬಂದಿದೆ. ಬೆಕ್ಕಿನಲ್ಲಿ ಕೊರೊನಾ ಸೋಂಕು ಬಂದಿರುವುದನ್ನು ಬೆಲ್ಜಿಯಂನ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿದ್ದರು.

    ಹಾಗೆಯೇ ಹಾಂಕಾಂಗ್‍ನಲ್ಲಿ ಕೊರೊನಾ ಪೀಡಿತರ ಸಂಪರ್ಕಕ್ಕೆ ಬಂದಿದ್ದ 17 ನಾಯಿ ಮತ್ತು 8 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 2 ನಾಯಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ವೈರಸ್ ಮನುಷ್ಯನಿಂದ ಪ್ರಾಣಿಗಳಿಗೆ ಹೋಗಬಹುದು. ಆದರೆ ಪ್ರಾಣಿಗಳಿಂದ ಮನುಷ್ಯನಿಗೆ ಬರಬಹುದು ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ಬೆಲ್ಜಿಯಂ ಆರೋಗ್ಯ ಅಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.