Tag: shiradi ghat

  • ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಹಾಸನ: ಅನಿರ್ಧಿಷ್ಟಾವಧಿಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧವಿದ್ದರೂ, ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಇನ್ನು ಇದನ್ನು ಪ್ರಶ್ನಿಸಲು ಹೋದ ಪಂಜಾಬ್ ಚಾಲಕನ ಮೇಲೆಯೇ ಪೊಲೀಸರು ದರ್ಪ ಮೆರೆದಿದ್ದಾರೆ.

    ಸಕಲೇಶಪುರದ ಗುಂಡ್ಯ ಚೆಕ್‍ಪೋಸ್ಟ್ ಬಳಿ ಶಿರಾಡಿ ಘಾಟ್ ಮೂಲಕ 12 ಚಕ್ರದ ಲಾರಿಗಳ ಸಂಚಾರಕ್ಕೆ ಪೊಲೀಸರು ಬಿಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಂಜಾಬ್ ಮೂಲದ ಲಾರಿ ಚಾಲಕ, ಪೊಲೀಸರು 500 ರೂ. ಪಡೆದ ನಿಷೇಧ ಇದ್ದರೂ ವಾಹನ ಬಿಡುತ್ತಿದ್ದಾರೆ. ನಾವು ಕಳೆದ ಹತ್ತು ದಿನಗಳಿಂದ ಇಲ್ಲಿ ಕಾದು ಕುಳಿತರೂ ಸಂಚಾರಕ್ಕೆ ಬಿಟ್ಟಿಲ್ಲ. ಆದರೆ ಈಗ ಹಣ ಪಡೆದು ಪೊಲೀಸರು ಬಿಡುತ್ತಿದ್ದಾರೆ ಎಂದು ಆರೋಪಿಸುತ್ತಾ ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದರು. ಇದನ್ನು ಓದಿ: ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಪೊಲೀಸರು ಚಾಲಕನಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು. ಆದರೆ ಆತ ಮೊಬೈಲ್ ನೀಡದೆ, ನಾನು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಆದರೆ ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು, ಜಿಲ್ಲಾಧಿಕಾರಿ ಅಲ್ಲ ನಿಮ್ಮಪ್ಪಗೂ ಹೇಳು ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/veR3b6PZiZ0

  • ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    – ಅನಿರ್ದಿಷ್ಟಾವಧಿಗೆ ಸಂಚಾರ ನಿಷೇಧ ಹೇರಿದ ದಕ್ಷಿಣ ಕನ್ನಡ ಡಿಸಿ

    ಮಂಗಳೂರು: ಮಂಗಳೂರು-ಬೆಂಗಳೂರು ಸಂಚಾರ ಶಿರಾಡಿ ಘಾಟ್ ಮೂಲಕ ಸದ್ಯಕ್ಕಂತೂ ಆರಂಭವಾಗುವ ಸಾಧ್ಯತೆಯಿಲ್ಲ. ಭಾರೀ ಮಳೆಯಿಂದಾಗಿ ಶಿರಾಡಿಘಾಟ್‍ನಲ್ಲಿ ಆಗಸ್ಟ್ 25ರವರೆಗೆ ವಾಹನ ಸಂಚಾರಕ್ಕೆ ಹೇರಿದ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

    ಮಳೆ ನಿಂತರೂ ಶಿರಾಡಿ ಘಾಟ್‍ನಲ್ಲಿ ಕೆಲ ಪ್ರದೇಶಗಳಲ್ಲಿ ಗುಡ್ಡಕುಸಿತ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಲಾಗಿದೆ. ಕಳೆದ ವಾರ ಸುರಿದ ಭಾರೀ ಮಳೆಗೆ ಶಿರಾಡಿಘಾಟ್‍ನ ಹಲವೆಡೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹೆಚ್ಚಿನ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

    ಕಳೆದ ವಾರದ ಮಳೆ ವೇಳೆ ಶಿರಾಡಿ ಘಾಟ್‍ನ ದೊಡ್ಡತಪ್ಲು ಬಳಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿತ್ತು. ಈ ಘಟನೆಯಲ್ಲಿ ಕೆ.ಆರ್.ಪೇಟೆ ಮೂಲದ ಸಂದೀಪ್ ಹಾಗು ಮಾನ್ವಿ ಮೂಲದ ವೆಂಕಟೇಶ್ ಸಾವನ್ನಪ್ಪಿದ್ದರು. ಇನ್ನು ಟ್ಯಾಂಕರ್ ನೋಡಲು ಹೋದ ಮಂಗಳೂರು ಮೂಲದ ರಾಮದೇವ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈಗ ಮತ್ತೇ ಗುಡ್ಡ ಕುಸಿತ ಹೆಚ್ಚಾಗಿದ್ದರಿಂದ ಮುಂದಾಗುವ ಅನಾಹುತ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ರೀತಿಯ ವಾಹಗಳ ಸಂಚಾರಕ್ಕೂ ನಿರ್ಬಂಧ ಹೇರಿದೆ. ಇದನ್ನೂ ಓದಿ: #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    ಬೆಂಗಳೂರು: ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

    ಶಿರಾಡಿ, ಸಂಪಾಜೆ ಘಾಟಿ ಬಂದ್ ಆಗಿರುವ ಕಾರಣ ಈಗ ವಾಹನಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಸ್ತೆಯಲ್ಲಿ ಸಂಚರಿಸುತ್ತವೆ. ಚಾರ್ಮಾಡಿ ಘಾಟ್ ನಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಾಗಲೇ ಇರುವ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಿ ಎಂದು ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಈಗಾಗಲೇ ಪರ್ಯಾಯ ರಸ್ತೆಗಳು ಇದೆ. ಆದರೆ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಹೀಗಾಗಿ ಈ ರಸ್ತೆಗಳನ್ನೇ ಅಭಿವೃದ್ಧಿ ಪಡಿಸಿದರೆ ಈ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವ ಸಲಹೆಯನ್ನು ಜನ ನೀಡುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು! ಸುಲಭ ರಸ್ತೆಗಳು ಎಲ್ಲಿವೆ? ಎಷ್ಟು ಕಿ.ಮೀ ಇದೆ?

    ಬೇಡಿಕೆ ಯಾಕೆ?
    1. ಕರಾವಳಿಯ ನಗರಗಳಾದ ಮಂಗಳೂರು, ಉಡುಪಿ ರಾಜ್ಯದ ಪ್ರಮುಖ ನಗರಗಳಾಗಿ ಬೆಳೆದಿವೆ. ವಿಮಾನ ಮತ್ತು ರೈಲು ಸಂಪರ್ಕ ಇದ್ದರೂ ಬಹಳಷ್ಟು ಜನ ಈಗಲೂ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕೆಎಸ್ಆರ್‌ಟಿಸಿ ವೋಲ್ವೋ, ರಾಜಹಂಸ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಸರ್ಕಾರಿ ಬಸ್ಸಿಗೆ ಪೈಪೋಟಿ ಎನ್ನುವಂತೆ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಅತಿ ಹೆಚ್ಚು ಆದಾಯ ತರುವ ಮಾರ್ಗಗಳು ಬಂದ್ ಆಗಿರುವ ಕಾರಣ ಸರ್ಕಾರದ ಜೊತೆ ಖಾಸಗಿ ಕಂಪೆನಿಗಳಿಗೂ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.

    2. ಈ ಹಿಂದೆ ಚಾರ್ಮಾಡಿ ಘಾಟಿ ಮೂಲಕ ಮಂಗಳೂರನ್ನು ಬಸ್ಸಿನಲ್ಲಿ ಪ್ರಯಾಣಿಸಿದರೆ 8, 9 ಗಂಟೆಯಲ್ಲಿ ತಲುಪಬಹುದಾಗಿತ್ತು. ಆದರೆ ಈಗ ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟರೂ ಮಂಗಳೂರನ್ನು 9 ಗಂಟೆಯಲ್ಲಿ ತಲುಪಬಹುದು ಎನ್ನುವ ಖಾತರಿ ಇಲ್ಲ. ಅದರಲ್ಲೂ ಅಪಘಾತ, ವಾಹನಗಳು ಪಲ್ಟಿಯಾದರೆ ದಿನಗಟ್ಟಲೇ ಈ ರಸ್ತೆಯಲ್ಲಿ ಸಂಚಾರ ಬಂದ್ ಆಗುತ್ತಿದೆ.

    3. ಘಾಟಿ ರಸ್ತೆಗಳು ಬಂದ್ ಆದರೆ ಜನರ ಪ್ರಯಾಣಕ್ಕೆ ಮಾತ್ರ ಹೊಡೆತ ಬೀಳುವುದಿಲ್ಲ. ವ್ಯಾಪಾರಿಗಳ ಮೇಲೂ ಭಾರೀ ಹೊಡೆತ ಬೀಳುತ್ತದೆ. ಉದಾಹರಣೆಗೆ ಸಂಪಾಜೆ ಘಾಟಿ ಬಂದ್ ಆಗಿರುವುದರಿಂದ ಮಡಿಕೇರಿ, ಸುಳ್ಯ, ಪುತ್ತೂರು ತಾಲೂಕಿನ ಹೋಟೆಲ್ ಹಣ್ಣಿನ ಅಂಗಡಿ, ಜ್ಯೂಸ್… ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲೂ ಹೇಗೂ ವ್ಯಾಪಾರ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ರಸ್ತೆಗಳು ಬಂದ್ ಆದರೆ ಅವರ ಜೀವನೋಪಾಯಕ್ಕೂ ಕಷ್ಟವಾಗುತ್ತದೆ.

    4. ವ್ಯಾಪಾರಕ್ಕೆ ಕಡೆ ರಸ್ತೆ ಬಂದ್ ಹೊಡೆತ ಕೊಟ್ಟರೆ ಇನ್ನೊಂದು ಕಡೆ ಘಟ್ಟ ಪ್ರದೇಶಗಳಿಗೆ ಸರಕು ಸಾಗಣೆಕೆಗೂ ಕಷ್ಟವಾಗುತ್ತದೆ. ದೇಶದ 9ನೇ ಅತಿ ದೊಡ್ಡ ಬಂದರು ಎನ್ನುವ ಹೆಗ್ಗಳಿಕೆ ಮಂಗಳೂರು ಪಾತ್ರವಾಗಿದೆ. ಈ ಬಂದರಿಗೆ ರೈಲಿಗಿಂತ ಹೆಚ್ಚಾಗಿ ಸರಕುಗಳು ರಸ್ತೆಯ ಮೂಲಕವೇ ಬರುತ್ತಿದೆ. ಬಂದರಿನ ಜೊತೆಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಘಟಕ ಮಂಗಳೂರಿನಲ್ಲಿದೆ. ಉದಾಹರಣೆಗೆ ಈಗ ಕೊಡಗು ಜಿಲ್ಲೆಗೆ ಎಂಆರ್‌ಪಿಎಲ್ ನಿಂದ ತೈಲವನ್ನು ಕಳುಹಿಸುವುದೇ ದುಸ್ತರವಾಗಿದೆ. ಸಂಪಾಜೆ ಘಾಟಿ ಮೂಲಕ ಮಡಿಕೇರಿಗೆ 120 ಕಿ.ಮೀ ಕ್ರಮಿಸಿ ಟ್ಯಾಂಕರ್ ತಲುಪುತ್ತಿದ್ದರೆ ಈಗ 250ಕ್ಕೂ ಹೆಚ್ಚು ಕಿ.ಮೀ ಕ್ರಮಿಸಬೇಕಿದೆ.

    5. ದಕ್ಷಿಣ ಕನ್ನಡದ ಪ್ರತಿ ತಾಲೂಕು, ಗ್ರಾಮಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಬೆಳೆದಿರುವ ತರಕಾರಿಗಳನ್ನು ರೈತರು ಇಲ್ಲಿ ತಂದು ಮಾರಾಟ ಮಾಡುತ್ತಾರೆ. ಈಗ ರಸ್ತೆ ಸಂಪರ್ಕವೇ ಬಂದ್ ಆಗಿದ್ದರಿಂದ ರೈತರ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

    6. ಎರಡು ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಈಗ ಚಾರ್ಮಾಡಿ ಮೂಲಕವೇ ಸಂಚರಿಸುತ್ತಿದೆ. ಒಂದು ವೇಳೆ ವಾಹನಗಳ ಒತ್ತಡವನ್ನು ತಾಳಲಾರದೇ ಚಾರ್ಮಾಡಿಯ ರಸ್ತೆಯಲ್ಲೂ ಭೂ ಕುಸಿತವಾದರೆ ಸಂಪರ್ಕ ಮತ್ತಷ್ಟು ದುಸ್ತರವಾಗುತ್ತದೆ.

    7. ಈಗಾಗಲೇ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕೆಲವು ಕಡೆ ಮರಗಳನ್ನು ಕಡಿಯಬೇಕಾದಿತು. ಒಂದು ವೇಳೆ ಪರ್ಯಾಯ ರಸ್ತೆ ಇದ್ದು ಮತ್ತೊಂದು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರೆ ಅದು ತಪ್ಪಾಗುತ್ತದೆ. ಆದರೆ ಇಲ್ಲಿ ಯಾವುದೇ ಪರ್ಯಾಯ ರಸ್ತೆ ಇಲ್ಲದೇ ಇರುವ ಕಾರಣ ಅರಣ್ಯನಾಶವಾಗುತ್ತದೆ ಎನ್ನುವ ಕಾರಣ ನೀಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ.

    8. ರಸ್ತೆ ಸಂಪರ್ಕ ಬಂದ್ ಆದರೆ ವಿಶೇಷವಾಗಿ ಜಿಲ್ಲೆಗಳ ಗಡಿಯಲ್ಲಿರುವ ಮಂದಿ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದ ಜನತೆ ವಾಣಿಜ್ಯ ಕೆಲಸಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕನ್ನೇ ಅವಲಂಬಿಸಿದರೆ ಸರ್ಕಾರಿ ಕೆಲಸಕ್ಕೆ ಮಡಿಕೇರಿಗೆ ಹೋಗುವುದು ಅನಿವಾರ್ಯ. ಅದರಲ್ಲೂ ವಿದ್ಯಾರ್ಥಿಗಳಿಗೆ ಮತ್ತು ಪ್ರತಿನಿತ್ಯ ಉದ್ಯೋಗಕ್ಕೆ ತೆರಳುವ ಮಂದಿ ಪಾಡು ಹೇಳತೀರದಾಗಿದೆ.

    8. ಕೊನೆಯದಾಗಿ ಯಾವುದೇ ಅಭಿವೃದ್ಧಿ ಕೆಲಸ ನಡೆಯಬೇಕಾದರೆ ಅರಣ್ಯ ನಾಶವಾಗುತ್ತದೆ. ಅದರಲ್ಲೂ ರಸ್ತೆ ಸಂಪರ್ಕದಂತಹ ವಿಚಾರಗಳು ಬಂದಾಗ ಅನಿವಾರ್ಯವಾಗಿ ಮೊದಲ ಆದ್ಯತೆಯನ್ನು ರಸ್ತೆಗೆ ನೀಡಬೇಕಾಗುತ್ತದೆ. ಅರಣ್ಯನಾಶವನ್ನು ತಡೆಗಟ್ಟಬೇಕಾದರೆ ಮೊದಲು ಅರಣ್ಯ ಇಲಾಖೆಗೆ ಖಡಕ್ ಅಧಿಕಾರಿಗಳನ್ನು ನೇಮಿಸಿ ಟಿಂಬರ್ ಮಾಫಿಯಾವನ್ನು ತಡೆಗಟ್ಟಬೇಕು. ಟಿಂಬರ್ ಮಾಫಿಯಾ ನಡೆಯಬೇಕಾದರೆ ಗ್ರಾಮಸ್ಥರ ಸಾಥ್ ಇದ್ದೇ ಇರುತ್ತದೆ. ಹೇಗೆ ವ್ಯಕ್ತಿಗಳು ಖಾಸಗಿ ಆಸ್ತಿಯನ್ನು ರಕ್ಷಣೆ ಮಾಡುತ್ತಾರೋ ಅದೇ ರೀತಿಯಾಗಿ ಅರಣ್ಯವು ನನ್ನ ಆಸ್ತಿ. ಅದನ್ನು ನಾನು ರಕ್ಷಿಸುತ್ತೇನೆ ಎಂದು ಅರಣ್ಯದ ಬುಡದಲ್ಲಿರುವ ಜನ ಪಣ ತೊಡುವುದಿಲ್ಲವೋ ಅಲ್ಲಿಯವರೆಗೂ ಈ ಮಾಫಿಯಾವನ್ನು ತಡೆಗಟ್ಟಲು ಸಾಧ್ಯವಿಲ್ಲ.

     

     

     

    https://twitter.com/MeghanNaik/status/1032913383685799936

     

  • ನಾಲ್ಕೈದು ತಿಂಗಳು ಶಿರಾಡಿಯಲ್ಲಿ ವಾಹನ ಸಂಚರಿಸಲ್ಲ

    ನಾಲ್ಕೈದು ತಿಂಗಳು ಶಿರಾಡಿಯಲ್ಲಿ ವಾಹನ ಸಂಚರಿಸಲ್ಲ

    ಹಾಸನ: ಶಿರಾಡಿಘಾಟ್ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಯಾವುದೇ ಸಂಚಾರಕ್ಕೆ ಅವಕಾಶ ನೀಡಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಶಿರಾಡಿಘಾಟ್ ರಸ್ತೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಯಾವುದೇ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಕಾಮಗಾರಿ ಮುಗಿಯಲು ನಾಲ್ಕೈದು ತಿಂಗಳ ಕಾಲ ಸಮಯವಕಾಶ ಬೇಕಿದೆ. ಶಿರಾಡಿಘಾಟ್ ಸಂಚಾರ ರಸ್ತೆ ಕಾಮಗಾರಿ ಪ್ರಗತಿಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿ ರಸ್ತೆ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಪ್ರವಾಹದಲ್ಲಿ ಸಿಲುಕಿರುವ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಸಚಿವರು, ಸಕಲೇಶಪುರ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನರ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅತ್ತಿಹಳ್ಳಿ, ಹೊಂಗಡಹಳ್ಳ ಮಾಗೇರಿ, ಪಟ್ಲ, ಹೆತ್ತೂರು ಗ್ರಾಮಸ್ಥರಿಗೆ ಗಂಜಿಕೇಂದ್ರ ತೆರೆಯಲು ಆದೇಶಿಸಲಾಗಿದೆ ಎಂದರು.

    ಜಿಲ್ಲೆಯ ಇತರೇ ಭಾಗಗಳಲ್ಲಿ ಅಪಾಯವಿದೆಯೋ ಅಲ್ಲಿರುವ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೊಡಗಿನಲ್ಲಿರುವ ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಅಂದಾಜು 138 ಕೋಟಿ ರೂ. ನಷ್ಟ ಉಂಟಾಗಿದೆ. ಅಲ್ಲದೇ ಒಟ್ಟು ಲೋಕೋಪಯೋಗಿ ಇಲಾಖೆಯಲ್ಲಿ 150 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದರು.

    ಪ್ರವಾಹದಲ್ಲಿ ಸಿಲುಕಿರುವ ಜನರನನ್ನು ರಕ್ಷಿಸಲು ಎರಡು ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಸಂತ್ರಸ್ತರಿಗೆ ಬೇಕಾದ ಎಲ್ಲಾ ನೆರವನ್ನು ಸರ್ಕಾರದಿಂದ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಪ್ರವಾಹ ನಷ್ಟದ ಬಗ್ಗೆ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಮಾಹಿತಿ ನೀಡಿದರು.

    ಜುಲೈ 15 ರಂದು ಸಚಿವ ಹೆಚ್.ಡಿ.ರೇವಣ್ಣ ಶಿರಾಡಿ ಘಾಟ್ ಉದ್ಘಾಟಿಸಿದ್ದರು. ಆರಂಭದಲ್ಲಿ ಲಘು ವಾಹನಗಳಿಗೆ, ಬಳಿಕ ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಗಳು ಜರಿದು ಬೀಳುತ್ತಿದ್ದ ಕಾರಣ ಇಲ್ಲೂ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.

    ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟಿಯ ಮದೇನಾಡು, ಜೋಡುಪಾಲದಲ್ಲಿ ಗುಡ್ಡ ಕುಸಿದು ಅಲ್ಲಲ್ಲಿ ಪ್ರವಾಹ ರೂಪದಲ್ಲಿ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹೋಗುತ್ತಿದೆ. ಹೀಗಾಗಿ ಈ ರಸ್ತೆಯ ರಿಪೇರಿಯಾಗಲು ಹಲವು ತಿಂಗಳು ಬೇಕಾಗಬಹುದು ಎಂದು ಈ ಸ್ಥಳಕ್ಕೆ ತೆರಳಿದವರು ಹೇಳುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಮಾರ್ಗದ ಮೂಲಕವಷ್ಟೇ ಮಂಗಳೂರನ್ನು ಸಂಪರ್ಕಿಸಬೇಕಾಗುತ್ತದೆ. ಎರಡು ಹೆದ್ದಾರಿಗಳು ಬಂದ್ ಆಗಿರುವ ಕಾರಣ ಈ ರಸ್ತೆಯಲ್ಲೂ ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ.

  • ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಸಂಪಾಜೆ, ಶಿರಾಡಿ ಘಾಟಿ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟ್‍ನಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.

    ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.

    ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ವಾಹನಗಳಿಗೂ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

    ಭಾರೀ ವಾಹನಗಳಿಗೂ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

    ಹಾಸನ: ರಸ್ತೆ ದುರಸ್ತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದ ಶಿರಾಡಿ ಘಾಟ್ ಈಗ ಸಂಚಾರಕ್ಕೆ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 75 ರಲ್ಲಿರುವ 26 ಕಿ.ಮೀ. ಶಿರಾಡಿ ಘಾಟ್ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಸಂಚಾರ ಸ್ಥಗಿತಗೊಂಡಿತ್ತು. ಸಚಿವ ಎಚ್.ಡಿ.ರೇವಣ್ಣ ಜುಲೈ 15ರಂದು ವಾಸ್ತುಪ್ರಕಾರವಾಗಿ ಶಿರಾಡಿ ಘಾಟ್ ಉದ್ಘಾಟಿಸಿ, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೃಹತ್ ವಾಹನಗಳನ್ನು ನಿಷೇಧಿಸಲಾಗಿತ್ತು. ಇದನ್ನು ಓದಿ: ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ಶಿರಾಡಿ ಘಾಟ್ ಬೆಂಗಳೂರು-ಮಂಗಳೂರು ನಡುವಿನ ಪ್ರಮುಖ ಹೆದ್ದಾರಿಯಾಗಿದ್ದು, ಲಾರಿ ಹಾಗೂ ಬಸ್ ಸಂಚಾರಕ್ಕೆ ತೊಡಕಾಗಿತ್ತು. ಇದೀಗ ಹಾಸನ-ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿನ ಗಡಿ ಭಾಗದ 26 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿದ್ದು, ಎಲ್ಲ ರೀತಿಯ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಇದನ್ನು ಓದಿ: ಶಿರಾಡಿ ಘಾಟ್ ನಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ- ಖಾದರ್

  • ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ!

    ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರ!

    ಹಾಸನ: ನಿಷೇಧದ ನಡುವೆಯೂ ಶಿರಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರವಾಗುತ್ತಿದ್ದು, ಅಪಾಯಕಾರಿ ರಸ್ತೆಯಲ್ಲಿ ಆತಂಕದ ನಡುವೆ ಸಣ್ಣ ವಾಹನಗಳು ಸಂಚಾರ ಮಾಡುತ್ತಿದೆ.

    ರಸ್ತೆ ದುರಸ್ಥಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಲಾರಿ, ಬಸ್ ಸೇರಿ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೃಹತ್ ವಾಹನಗಳನ್ನು ನಿಷೇಧಿಸಲಾಗಿತ್ತು. ಆದರೆ ಈಗ ನಿಷೇಧದ ನಡುವೆಯೂ ಭಾರೀ ವಾಹನ ಎಗ್ಗಿಲ್ಲದೆ ಸಂಚಾರ ಮಾಡುತ್ತಿದೆ.

    ಕಾಂಕ್ರಿಟೀಕರಣಕ್ಕಾಗಿ ಕಳೆದ ಆರು ತಿಂಗಳಿನಿಂದ ವಾಹನ ಸಂಚಾರವನ್ನು ಸರ್ಕಾರ ನಿಷೇಧಿಸಿತ್ತು. ಬಳಿಕ ಜುಲೈ 15ರ ಬಳಿಕ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಲಘು ವಾಹನಗಳ ಜೊತೆ ಭಾರೀ ವಾಹನಗಳ ಸಂಚಾರದಿಂದ ಜನರಲ್ಲಿ ಆತಂಕ ಮೂಡಿದೆ. ಸದ್ಯ ಜನರು ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು, ಸಚಿವ ಹೆಚ್.ಡಿ.ರೇವಣ್ಣ ಜುಲೈ 15ರಂದು ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು.

  • ಶಿರಾಡಿ ಘಾಟ್ ನಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ- ಖಾದರ್

    ಶಿರಾಡಿ ಘಾಟ್ ನಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ- ಖಾದರ್

    ಹಾಸನ: ಕಳೆದ 6 ತಿಂಗಳಿನಿಂದ ಬಂದ್ ಆಗಿದ್ದ ಶಿರಾಡಿ ಘಾಟ್ ಉದ್ಘಾಟನೆಗೊಂಡು ಈಗಾಗಲೇ ಸಂಚಾರಕ್ಕೆ ಮುಕ್ತಾಗಿದ್ದು, ಆದ್ರೆ ಕಾಮಗಾರಿ ಅಪೂರ್ಣ ಆಗಿದ್ದರಿಂದ ಭಾರೀ ವಾಹನ, ಬಸ್ ಸಂಚಾರಕ್ಕೆ ತಡೆ ನೀಡಲಾಗಿದೆ ಅಂತ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

    ಹಾಸನ- ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 15 ದಿನಗಳ ಅವಧಿಯೊಳಗೆ ಡೇಂಜರ್ ಝೋನ್ ಕಾಮಗಾರಿ ಮುಗಿಸಲು ಗುತ್ತಿಗಾದಾರರಿಗೆ ಸೂಚನೆ ನೀಡಲಾಗಿದೆ.

    ಘಾಟ್‍ನಲ್ಲಿ ವೇಗದ ಮಿತಿ 60 ಕಿ.ಮೀ. ಹೆಚ್ಚಿರದಂತೆ ಸೂಚಿಸಿದ್ದು, ಸಿಸಿಟಿವಿ ಅಳವಡಿಸಿ ನಿಗಾ ಇಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಶಿರಾಡಿ ಪ್ರವಾಸಿ ಮಂದಿರದ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್ ಪಿ ಸಭೆಯಲ್ಲಿ ಭಾಗಿಯಾಗಿದ್ದರು.

    ರಾಜಧಾನಿಯಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಶಿರಾಡ್ ಘಾಟ್ ಅನ್ನು ಅಧಿಕಾರಿಗಳು ಪಶ್ಚಿಮಾಭಿಮುಖವಾಗಿ ಸಿದ್ಧಪಡಿಸಿದ್ದರು. ಆದ್ರೆ ಸ್ಥಳಕ್ಕಾಗಮಿಸಿದ ಸಚಿವ ರೇವಣ್ಣ ಅವರು ಶುಭಕಾರ್ಯಗಳನ್ನು ಪೂರ್ವಾಭಿಮುಖವಾಗಿ ಮಾಡಬೇಕು ಎಂದು ಟೇಪ್ ಕೆಳಗೆ ನುಸುಳಿ ಎಲ್ಲರಿಗೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದ್ದರು. ಸಚಿವರು ದಿಕ್ಕು ಬದಲಿಸಿದ್ದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ನಿಂತ ಸಚಿವರು ಟೇಪ್ ಕತ್ತರಿಸಿ ಶಿರಾಡಿ ಘಾಟ್ ಸಂಚಾರವನ್ನು ಮುಕ್ತಗೊಳಿಸಿದ್ದರು.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ.

  • ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ಹಾಸನ: ಸಚಿವ ಹೆಚ್.ಡಿ.ರೇವಣ್ಣ ಇಂದು ವಾಸ್ತು ಪ್ರಕಾರವೇ ಶಿರಾಡಿ ಘಾಟ್ ಉದ್ಘಾಟಿಸಿದ್ದಾರೆ.

    ಅಧಿಕಾರಿಗಳು ಶಿರಾಡಿ ಘಾಟ್ ಉದ್ಘಾಟನೆಯನ್ನು ಪಶ್ಚಿಮಾಭಿಮುಖವಾಗಿ ಸಿದ್ಧಪಡಿಸಿದ್ದರು. ಸ್ಥಳಕ್ಕಾಗಮಿಸಿದ ಸಚಿವರು ಶುಭಕಾರ್ಯಗಳನ್ನು ಪೂರ್ವಾಭಿಮುಖವಾಗಿ ಮಾಡಬೇಕು ಎಂದು ಟೇಪ್ ಕೆಳಗೆ ನುಸುಳಿ ಎಲ್ಲರಿಗೂ ಪೂರ್ವಾಭಿಮುಖವಾಗಿ ನಿಲ್ಲುವಂತೆ ಸೂಚಿಸಿದರು.

    ಸಚಿವರು ದಿಕ್ಕು ಬದಲಿಸಿದ್ದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಯಿತು. ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ನಿಂತ ಸಚಿವರು ಟೇಪ್ ಕತ್ತರಿಸಿ ಶಿರಾಡಿ ಘಾಟ್ ಸಂಚಾರವನ್ನು ಮುಕ್ತಗೊಳಿಸಿದರು. ತಡೆಗೋಡೆ, ಸೂಚನಾ ಫಲಕ, ಸಣ್ಣ-ಪುಟ್ಟ ಕಾಮಗಾರಿಗಳು ಪ್ರಗತಿ ಬಾಕಿ ಹಿನ್ನೆಲೆಯಲ್ಲಿ ಕೇವಲ ಲಘು ವಾಹನಗಳಿಗೆ ಮಾತ್ರ ಸಂಚಾರ ಮುಕ್ತಗೊಳಿಸಲಾಗಿದೆ.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದ್ದು ಇಂದು ಸಂಚಾರ ಮುಕ್ತವಾಗಿದೆ.

  • ಭಾನುವಾರ ಬೆಳಗ್ಗೆ 10.30ರಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ- ಸಚಿವ ಎಚ್.ಡಿ ರೇವಣ್ಣ

    ಭಾನುವಾರ ಬೆಳಗ್ಗೆ 10.30ರಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ- ಸಚಿವ ಎಚ್.ಡಿ ರೇವಣ್ಣ

    ಹಾಸನ: ನಾಳೆಯಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದ್ದು, ಉಳಿದಿರುವ ಕಾಮಗಾರಿಗಳ ಬಗ್ಗೆ ತ್ವರಿತ ಕಾಮಗಾರಿಗೆ ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‍ಡಿ ರೇವಣ್ಣ ಅವರು ಭನುವಾರ ಬೆಳಗ್ಗೆ 10.30ಕ್ಕೆ ಸಕಲೇಶಪುರದಲ್ಲಿ ಮೊದಲು ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದ್ರು.

    ಇದೇ ವೇಳೆ ಬಿಳಿಕೆರೆ-ಬೇಲೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಆರಂಭವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದೆ. ಭೂಸ್ವಾಧೀನ ಕುರಿತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಅಂತ ಹೇಳಿದ್ರು.

    ಬ್ರಾಹ್ಮಣ ಅಧಿಕಾರಿ ಕಾಲ್ಗುಣದಿಂದಾಗಿ ಈ ಬಾರಿ ಮಳೆ ಬೆಳೆ ಚೆನ್ನಾಗಿದೆ. ಗೊರೂರು ಜಲಾಶಯ ಬಳಿ ಬೃಂದಾವನ ಮಾದರಿಯಲ್ಲೇ ಪ್ರವಾಸಕೇಂದ್ರ ಮಾಡಲು 98 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಅಂತ ಅವರು ತಿಳಿಸಿದ್ರು.

    ಕಳೆದ ನಾಲ್ಕು ವರ್ಷಗಳಿಂದ ತುಂಬದ ಹೇಮಾವತಿ ಇದೀಗ ಭರ್ತಿಯಾಗಿದೆ. ಅಧಿಕಾರಿಗಳಿಗೆ ನೀರಿನ ಸದ್ಬಳಕೆಗೆ ಸೂಚನೆ ನೀಡಲಾಗಿದೆ. ಕಾಮಸಮುದ್ರ, ಕಾಚೇನಹಳ್ಳಿ, ಹುಚ್ಚನಕೊಪ್ಪಲು, ಬಾಗೂರು ನವಿಲೆ ಸೇರಿದಂತೆ ಎಲ್ಲ ಕಡೆ ಕೃಷಿ ಆರಂಭಿಸಲು ಸೂಚಿಸಿಲಾಗಿದೆ. ದೈವಾನುಗ್ರಹ ಕುಮಾರಸ್ವಾಮಿ ಸರ್ಕಾರದಲ್ಲಿ ನೀರು ತುಂಬಿದ್ದು, ಸಂತಸ ತಂದಿದೆ. ಭತ್ತ ಬೆಳೆಯುವವರಿಗೆ ನೀರು ಲಭ್ಯವಾಗಲಿದೆ. ಮಳೆಯಿಂದಾಗಿರುವ ನಷ್ಟಕ್ಕೆ ಕ್ರಮಕೈಗೊಳ್ಳಲಾಗುವುದು ಅಂತ ಅವರು ಭರವಸೆ ನೀಡಿದರು.

    ಕಳೆದ ಜನವರಿ 20 ರಿಂದ ಆರಂಭವಾಗಿದ್ದ 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಸೈಡ್ ವಾಲ್, ಸೂಚನಾ ಫಲಕ ಅಳವಡಿಕೆ ಸೇರಿದಂತೆ ಕೆಲವು ಸಣ್ಣಪುಟ್ಟ ಕೆಲಸ ಹೊರತುಪಡಿಸಿದರೆ ಸಿಮೆಂಟ್ ಹಾಕುವ ಕೆಲಸ ಮುಗಿದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಿರುವ ಒಟ್ಟು 26 ಕಿ.ಮೀ ಉದ್ದದ ಶಿರಾಡಿಘಾಟ್ ಕಾಂಕ್ರೀಟ್ ರಸ್ತೆ ಸುಮಾರು 30 ವರ್ಷ ಬಾಳಿಕೆ ಬರಲಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.