Tag: ships

  • ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ನವದೆಹಲಿ: ಜನವರಿ 1ರಿಂದ ಭಾರತದ ಎಲ್ಲ ಹಡಗುಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದ್ದು, ಈ ಕುರಿತು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಎಲ್ಲ ಬಂದರುಗಳಿಗೆ ಸೂಚನೆ ನೀಡಿದೆ.

    ಒಂದು ಬಾರಿ ಬಳಸುವ ಐಸ್ ಕ್ರೀಂ ಕಪ್, ಇತರೆ ಪ್ಲಾಸ್ಟಿಕ್ ಕಪ್‌ಗಳು, ಮೈಕ್ರೋವೇವ್ ಡಿಶಸ್ ಹಾಗೂ ಆಲೂಗಡ್ಡೆ ಚಿಪ್ಸ್ನ ಕವರ್‌ಗಳು ಸೇರಿದಂತೆ ಎಲ್ಲ ರೀತಿಯ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ನಿಂದ ಭಾರತವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ‘ಮೊದಲ ದಿಟ್ಟ ಹೆಜ್ಜೆಯನ್ನಿಡಬೇಕು’ ಎಂದು ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಭಾರತೀಯ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಏಕ ಬಳಕೆ ಪ್ಲಸ್ಟಿಕ್‌ಗಳನ್ನು ನಿಷೇಧಿಸಲಾಗುವುದು. ಮಾತ್ರವಲ್ಲದೆ, ಭಾರತೀಯ ನೀರಿನಲ್ಲಿ ಸಂಚರಿಸುವಾಗ ವಿದೇಶಿ ಹಡಗುಗಳಲ್ಲಿಯೂ ಸಹ ಪ್ಲಾಸ್ಟಿಕ್ ನಿಷೇಧಿಸಲಾಗುವುದು.

    ಈ ಪಟ್ಟಿಯಲ್ಲಿ ಚೀಲಗಳು, ಟ್ರೇ, ಪ್ಲಾಸ್ಟಿಕ್ ಪಾತ್ರೆ, ಫುಡ್ ಪ್ಯಾಕೇಜಿಂಗ್ ಫಿಲ್ಮ್, ಹಾಲಿನ ಬಾಟಲಿಗಳು, ಫ್ರೀಜರ್ ಚೀಲಗಳು, ಶ್ಯಾಂಪೂ ಬಾಟಲಿಗಳು, ಐಸ್ ಕ್ರೀಮ್ ಬಾಕ್ಸ್, ನೀರು ಹಾಗೂ ಇತರೆ ಪಾನೀಯ ಬಾಟಲಿಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

    ತಪಾಸಣೆ ಹಾಗೂ ಲೆಕ್ಕಪರಿಶೋಧನೆ ವೇಳೆ ಯಾವುದೇ ಭಾರತೀಯ ಹಡಗಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಪ್ಲಾಸ್ಟಿಕ್ ಬಳಸದ ಕುರಿತು ಹಾಗೂ ಸಂಗ್ರಹಿಸದ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ಪಾಲಿಸದೆ ಪದೇ ಪದೆ ಅಪರಾಧ ಎಸಗಿದಲ್ಲಿ ಅಂತಹವರನ್ನು ಬಂಧಿಸುವಂತೆ ಸೂಚಿಸಲಾಗಿದೆ.

    ಭಾರತೀಯ ಸಮುದ್ರದಲ್ಲಿ ಪ್ರವೇಶಿಸುವ ವಿದೇಶಿ ಹಡುಗುಗಳು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಬೇಕು. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದಲ್ಲಿ ಅಂತಹ ವಸ್ತುಗಳನ್ನು ಭಾರತೀಯ ಬಂದರುಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

    ಏಕ ಬಳಕೆಯ ಪ್ಲಾಸ್ಟಿಕ್ ಅಂಶ ಮಣ್ಣು, ನದಿ ಅಥವಾ ಯಾವುದೇ ಜಲಮೂಲಗಳನ್ನು ಸೇರಿದರೆ ಸರಿಪಡಿಸಲಾಗದಷ್ಟು ಕಲುಷಿತಗೊಳ್ಳುತ್ತದೆ. ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್(ಐಎಂಒ) ಸಾಗರದ ಕಸವು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ. ಈ ರೀತಿ ಮುಂದುವರಿದರೆ 2050ರ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ಪ್ರಮಾಣವು ಅಲ್ಲಿನ ಮೀನುಗಳನ್ನು ಮೀರಿಸುತ್ತದೆ ಎಂದು ಕೆಲವು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ.

  • 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಅವಘಡ – 11 ಮಂದಿ ದುರ್ಮರಣ

    2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಅವಘಡ – 11 ಮಂದಿ ದುರ್ಮರಣ

    ಮಾಸ್ಕೋ: ಟರ್ಕಿಷ್, ಲಿಬಿಯನ್ ಹಾಗೂ ಭಾರತೀಯ ನಾವಿಕರು ಕಾರ್ಯ ನಿರ್ವಹಿಸುತ್ತಿದ್ದ 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಷ್ಯಾದ ಕೆರ್ಚ್ ಜಲಸಂಧಿ ಬಳಿ ಸೋಮವಾರದಂದು ನಡೆದಿದೆ.

    ಸೋಮವಾರದಂದು ರಷ್ಯಾದ ಪ್ರಾದೇಶಿಕ ಜಲಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ದುರಂತಕ್ಕೆ ಒಳಗಾದ 2 ಹಡಗುಗಳ ಮೇಲೆ ಕೂಡ ತಾಂಜಾನಿಯನ್ ಭಾವುಟವನ್ನು ಅಳವಡಿಸಲಾಗಿತ್ತು. 2 ಹಡಗುಗಳ ಪೈಕಿ ಒಂದು ಲಿಕ್ವಿಫಾಯ್ದ್ ನ್ಯಾಚುರಲ್ ಗಾಸ್(ಎಲ್‍ಎನ್‍ಜಿ) ಸಾಗಿಸುತ್ತಿದ್ದರೆ, ಇನ್ನೊಂದು ಹಡಗು ಟ್ಯಾಂಕರ್ ಗಳನ್ನು ಸಾಗಿಸುತ್ತಿತ್ತು. ಒಂದು ಎಲ್‍ಎನ್‍ಜಿ ತುಂಬಿದ್ದ ಹಡಗಿನಿಂದ ಟ್ಯಾಕರ್ ಹಡಗಿಗೆ ಇಂಧನವನ್ನು ವರ್ಗಾವಣೆ ಮಾಡುತ್ತಿದ್ದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ:ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ

    ಒಂದು ಹಡಗಿನಲ್ಲಿ 8 ಮಂದಿ ಭಾರತೀಯರು ಹಾಗೂ 9 ಮಂದಿ ಟರ್ಕಿ ನಾವಿಕರು ಸೇರಿ ಒಟ್ಟು 17 ಮಂದಿ ಇದ್ದರು. ಇನ್ನೊಂದರಲ್ಲಿ 7 ಮಂದಿ ಭಾರತೀಯರು, 7 ಮಂದಿ ಟರ್ಕಿ ನಾವಿಕರು ಹಾಗೂ ಓರ್ವ ಲಿಬಿಯಾದ ನಾವಿಕ ಸೇರಿ ಒಟ್ಟು 15 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು.

    ಈ ದುರ್ಘಟನೆಯಿಂದ ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದು, 9 ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ನಾವಿಕರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಇವರೆಗೆ 12 ಮಂದಿಯನ್ನು ರಕ್ಷಣಾ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಹಾಗೆಯೇ ಕಾಣೆಯಾದವರನ್ನು ಹುಡುಕುವ ಕೆಲಸವನ್ನು ರಕ್ಷಣಾ ಪಡೆ ಮುಂದುವರಿಸಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

    ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

    ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

    ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.