Tag: Shimron Hetmyer

  • ಭಾರತಕ್ಕೆ 9 ವಿಕೆಟ್‌ಗಳ ಯಶಸ್ವಿ ಜಯ ತಂದ ಗಿಲ್‌, ಜೈಸ್ವಾಲ್‌ – ಇಂದು ರೋಚಕ ಹಣಾಹಣಿ

    ಭಾರತಕ್ಕೆ 9 ವಿಕೆಟ್‌ಗಳ ಯಶಸ್ವಿ ಜಯ ತಂದ ಗಿಲ್‌, ಜೈಸ್ವಾಲ್‌ – ಇಂದು ರೋಚಕ ಹಣಾಹಣಿ

    ಲಾಡರ್ಹಿಲ್‌: ಯುವತಾರೆ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ಶುಭಮನ್‌ ಗಿಲ್‌ (Shubman Gill) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ಟಿ20 ಸರಣಿಯ 4ನೇ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2-2 ಅಂತರದಲ್ಲಿ ಸಮಬಲ ಸಾಧಿಸಿದೆ. ಇಂದು (ಆ.13) ಲಾಡರ್ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಕ್ರೀಡಾಂಗಣದಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದ್ದು, ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಭಾರತ (Team India) 17 ಓವರ್‌ಗಳಲ್ಲೇ ಕೇವಲ 1 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ ಆರಂಭದಿಂದಲೇ ವಿಂಡೀಸ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 94 ಎಸೆತಗಳಲ್ಲಿ 165 ರನ್‌ ಕಲೆಹಾಕಿತ್ತು.

    ಶುಭಮನ್‌ ಗಿಲ್‌ 47 ಎಸೆತಗಳಲ್ಲಿ 77 ರನ್‌ (3 ಬೌಂಡರಿ, 5 ಸಿಕ್ಸರ್)‌ ಗಳಿಸಿ ಔಟಾದರು. ಆದ್ರೆ ಕೊನೆಯವರೆಗೂ ಅಬ್ಬರಿಸಿದ ಯಶಸ್ವಿ 51 ಎಸೆತಗಳಲ್ಲಿ 84 ರನ್‌ (3 ಸಿಕ್ಸರ್‌, 11 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಕೊನೆಯಲ್ಲಿ ತಿಲಕ್‌ ವರ್ಮಾ 7 ರನ್‌ ಗಳಿಸಿದರು. ಇದನ್ನೂ ಓದಿ: Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

    ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ಪರ ಶಿಮ್ರಾನ್‌ ಹೆಟ್ಮೇಯರ್‌ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 156.41 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಹೆಟ್ಮೇಯರ್‌ 39 ಎಸೆತಗಳಲ್ಲಿ 61 ರನ್‌ (4 ಸಿಕ್ಸರ್‌, 3 ಬೌಂಡರಿ) ಗಳಿಸಿದರು. ಇದರೊಂದಿಗೆ ಶಾಯ್‌ ಹೋಪ್‌ 29 ಎಸೆತಗಳಲ್ಲಿ 45 ರನ್‌ (2 ಸಿಕ್ಸರ್‌, 3 ಬೌಂಡರಿಗಳ ಕೊಡುಗೆ ನೀಡಿದರು. ಅಂತಿಮವಾಗಿ ವಿಂಡೀಸ್‌ 178 ರನ್‌ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದ್ರೆ ಕಳಪೆ ಬೌಲಿಂಗ್‌ನಿಂದಾಗಿ ಹೀನಾಯ ಸೋಲು ಅನುಭವಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಟೀಂ ಇಂಡಿಯಾ ಪರ ಅರ್ಷ್‌ದೀಪ್‌ ಸಿಂಗ್‌ 4 ಓವರ್‌ಗಳಲ್ಲಿ 38 ರನ್‌ ನೀಡಿ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಅಕ್ಷರ್‌ ಪಟೇಲ್‌, ಯಜುವೇಂದ್ರ ಚಾಹಲ್‌, ಮುಕೇಶ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ವಿಂಡೀಸ್‌ ಪರ ರೊಮಾರಿಯೋ ಶೆಫರ್ಡ್ ಒಂದೇ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    IPL 2023: ಸಂಜು ಸೈನ್ಯಕ್ಕೆ ಪ್ಲೇ ಆಫ್‌ ಕನಸು ಜೀವಂತ – ರಾಜಸ್ಥಾನ್‌ಗೆ 4 ವಿಕೆಟ್‌ಗಳ ರೋಚಕ ಜಯ

    ಶಿಮ್ಲಾ: ಶಿಮ್ರಾನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. ಕೊನೆಯವರೆಗೂ ಹೋರಾಡಿದ ಪಂಜಾಬ್‌ ಕಿಂಗ್ಸ್‌ ಸೋಲಿನೊಂದಿಗೆ ವಿದಾಯ ಹೇಳಿದೆ.

    ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.148 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ. ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಸೋತರೇ ರಾಜಸ್ಥಾನ್‌ ರಾಯಲ್ಸ್‌ಗೆ ಪ್ಲೇ ಆಫ್‌ ತಲುಪುವ ಅವಕಾಶ ಸಿಗಲಿದೆ.

    ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಗೆಲುವು ಸಾಧಿಸಿತು.

    ಕೊನೆಯ 4 ಓವರ್‌ಗಳಲ್ಲಿ ರಾಜಸ್ಥಾನ್‌ಗೆ 39 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 6 ರನ್‌, 18ನೇ ಓವರ್‌ನಲ್ಲಿ 14 ರನ್‌ ಹಾಗೂ 19ನೇ ಓವರ್‌ನಲ್ಲಿ 11 ರನ್‌ ಸೇರ್ಪಡೆಯಾಯಿತು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಶಿಮ್ರಾನ್‌ ಹೆಟ್ಮೇಯರ್‌ 28 ಎಸೆತಗಳಲ್ಲಿ ಭರ್ಜರಿ 46 ರನ್‌ (4 ಬೌಂಡರಿ, 3 ಸಿಕ್ಸ್‌) ಚಚ್ಚಿ ಔಟಾದರು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿದ್ದಾಗ. ಮೊದಲ 3 ಎಸೆತಗಳಲ್ಲಿ 4 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ಕ್ರೀಸ್‌ ತೆಗೆದುಕೊಂಡ ಧ್ರುವ್‌ ಜುರೆಲ್‌ ಸಿಕ್ಸ್‌ ಬಾರಿಸುವ ಮೂಲಕ ಜಯ ತಂದುಕೊಟ್ಟರು.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡರೂ 2 ವಿಕೆಟ್‌ಗೆ ಉತ್ತಮ ಆರಂಭ ಪಡೆಯಿತು. 2ನೇ ವಿಕೆಟ್‌ಗೆ ಜೊತೆಯಾದ ದೇವದತ್‌ ಪಡಿಕಲ್‌ ಹಾಗೂ ಯಶಸ್ವೀ ಜೈಸ್ವಾಲ್‌ ಭರ್ಜರಿ ಅರ್ಧ ಶತಕ ಸಿಡಿಸಿ ಔಟಾದರು.

    ಜೈಸ್ವಾಲ್‌ 36 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 50 ರನ್‌ ಗಳಿಸಿದರು. ಈ ಮೂಲಕ 14 ಲೀಗ್‌ ಪಂದ್ಯಗಳಲ್ಲಿ 600 ರನ್‌ ಪೂರೈಸಿದರು. ಪಡಿಕಲ್‌ 30 ಎಸೆತಗಳಲ್ಲಿ 51 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಕೊನೆಯ ಪಂದ್ಯದಲ್ಲೂ ನಾಯಕ ಸಂಜು ಸ್ಯಾಮ್ಸನ್‌ ಕೇವಲ 2 ರನ್‌ ಗಳಿಸಿ ನಿರಾಸೆ ಮೂಡಿಸಿದರು. ರಿಯಾನ್‌ ಪರಾಗ್‌ 12 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ 20 ರನ್‌ ಗಳಿಸುವ ಮೂಲಕ ತಂಡಕ್ಕೆ ಇನ್ನಷ್ಟು ರನ್‌ ಕೊಡುಗೆ ನೀಡಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್‌ ಕರ್ರನ್‌, ಜಿತೇಶ್‌ ಶರ್ಮಾ ಹಾಗೂ ಶಾರೂಖ್‌ ಖಾನ್‌ ಬ್ಯಾಟಿಂಗ್‌ ನೆರವಿನಿಂದ 187 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಜಿತೇಶ್‌ ಶರ್ಮಾ 44 ರನ್‌ (28 ಎಸೆತ, 3 ಸಿಕ್ಸ್‌, 3 ಬೌಂಡರಿ) ಗಳಿಸಿದರೆ, ಶಾರೂಖ್‌ ಖಾನ್‌ 41 ರನ್‌ (23 ಎಸೆತ, 2 ಸಿಕ್ಸರ್‌, 4 ಬೌಂಡರಿ), ಸ್ಯಾಮ್‌ ಕರ್ರನ್‌ 49 ರನ್‌ (31 ಎಸೆತ, 4 ಬೌಂಡರಿ, 2 ಸಿಕ್ಸ್‌) ಗಳಿಸಿ ಅಜೇಯರಾಗುಳಿದರು. ನಾಯಕ ಶಿಖರ್‌ ಧವನ್‌ 17 ರನ್‌, ಅಥರ್ವ್‌ ಟೈಡೆ 19 ರನ್‌ ಕೊಡುಗೆ ನೀಡಿದರು.

    ರಾಜಸ್ಥಾನ್‌ ಪರ ನವದೀಪ್‌ ಸೈನಿ 4 ಓವರ್‌ಗಳಲ್ಲಿ 40 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ ಹಾಗೂ ಆಡಂ ಜಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • 59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

    59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

    ಜೈಪುರ: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell), ಫಾಫ್‌ ಡು ಪ್ಲೆಸಿಸ್‌ (Faf du Plessis) ಭರ್ಜರಿ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB), ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 112 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಪ್ಲೆ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ.

    ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ ಗುರಿ ಪಡೆದ ರಾಜಸ್ಥಾನ್‌ (Rajasthan Royals) 10.3 ಓವರ್‌ನಲ್ಲೇ 59 ರನ್‌ ಗಳಿಗೆ ಸರ್ವಪತನ ಕಂಡು ತವರಿನಲ್ಲೇ ಹೀನಾಯ ಸೋಲನುಭವಿಸಿತು.

    ರಾಜಸ್ಥಾನ್‌ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 2 ಸ್ಥಾನ ಮೇಲಕ್ಕೆ ಜಿಗಿದಿರುವ ಆರ್‌ಸಿಬಿ ಪ್ಲೆ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿತ್ತು. ಇದೀಗ 12ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, +0.166 ರನ್‌ರೇಟ್‌ನೊಂದಿಗೆ 12 ಅಂಕ ಗಳಿಸಿ 5ನೇ ಸ್ಥಾನಕ್ಕೆ ಜಿಗಿದಿದೆ. 5ನೇ ಸ್ಥಾನದಲ್ಲಿದ್ದ ರಾಜಸ್ಥಾನ್‌ ರಾಯಲ್ಸ್‌ +0.140 ರನ್‌ರೇಟ್‌ನೊಂದಿಗೆ 12 ಅಂಕ ಪಡೆದು 6ನೇ ಸ್ಥಾನಕ್ಕೆ ಕುಸಿದಿದೆ. ಒಂದು ವೇಳೆ ಲಕ್ನೋ ಸೋತು ಇನ್ನೆರಡು ಪಂದ್ಯಗಳಲ್ಲಿ ಆರ್‌ಸಿಬಿ ಸತತ ಗೆಲುವು ಸಾಧಿಸಿದರೆ ಪ್ಲೆ ಆಫ್‌ ಪ್ರವೇಶಿಸುವ ಸಾಧ್ಯತೆಗಳಿವೆ.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಮೊದಲ ಓವರ್‌ನಿಂದಲೇ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್‌ ಪ್ಲೇನಲ್ಲೇ 5 ವಿಕೆಟ್‌ ಕಳೆದುಕೊಂಡು ಕೇವಲ 28 ರನ್‌ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್‌ ಹೆಟ್ಮೇಯರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದಾದರೂ ಆರ್‌ಸಿಬಿ ಬೌಲರ್‌ಗಳ ಎದುರು ತಲೆಬಾಗಬೇಕಾಯಿತು. ರಾಜಸ್ಥಾನ್‌ ಪರ ಹೆಟ್ಮೇಯರ್‌ 35 ರನ್‌ (19 ಎಸೆತ, 4 ಸಿಕ್ಸರ್‌, 1 ಬೌಂಡರಿ), ಜೋ ರೂಟ್‌ 10 ರನ್‌, ಸಂಜು ಸ್ಯಾಮ್ಸನ್‌ 4 ರನ್‌, ಧ್ರುವ್‌ ಜುರೆಲ್‌ 1 ರನ್‌, ಆಡಂ ಜಂಪಾ 2 ರನ್‌ ಗಳಿಸಿದರೆ, ಉಳಿದವರೆಲ್ಲರೂ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು.

    ಆರ್‌ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್‌ ಪಡೆದು ಮಿಂಚಿದರೆ, ಮೈಕೆಲ್‌ ಬ್ರೇಸ್‌ವೆಲ್‌, ಕರನ್‌ ಶರ್ಮಾ ತಲಾ 2 ವಿಕೆಟ್‌ ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಟಾಸ್‌‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಪರ ಫಾಫ್‌ ಡು ಪ್ಲೆಸಿಸ್‌ 55 ರನ್‌ (44 ಎಸೆತ, 3 ಬೌಂಡರಿ, 2 ಸಿಕ್ಸರ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌ 33 ಎಸೆತಗಳಲ್ಲಿ 54 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ವಿರಾಟ್‌ ಕೊಹ್ಲಿ, 18 ರನ್‌‌ ಗಳಿದರೆ, ಮೈಕೆಲ್‌ ಬ್ರೇಸ್‌ವೆಲ್‌ 9 ರನ್‌ ಹಾಗೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಅನುಜ್‌ ರಾವತ್‌ 11 ಎಸೆತಗಳಲ್ಲಿ 29 ರನ್‌ (3 ಬೌಂಡರಿ, 2 ಸಿಕ್ಸರ್‌) ಚಚ್ಚಿ ಅಜೇಯರಾಗಿ ಉಳಿದರು.

    ರಾಜಸ್ಥಾನ್‌ ಪರ ಆಡಂ ಜಂಪಾ ಹಾಗೂ ಕೆ.ಎಂ ಆಸಿಫ್‌ ತಲಾ 2 ವಿಕೆಟ್‌ ಕಿತ್ತರೆ, ಸಂದೀಪ್‌ ಶರ್ಮಾ 1 ವಿಕೆಟ್‌ ಪಡೆದು ಮಿಂಚಿದರು.

  • ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಬೆಂಗಳೂರು: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಫಾಫ್‌ ಡು ಪ್ಲೆಸಿಸ್‌‌ (Faf du Plessis) ಭರ್ಜರಿ ಬ್ಯಾಟಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಅಶ್ವಿನ್‌ 2ನೇ ಎಸೆತದಲ್ಲಿ 2 ರನ್‌ ತೆಗೆದುಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟಿತ್ತು ಎನ್ನುವಷ್ಟು ಆರ್‌ಸಿಬಿ ಫ್ಯಾನ್ಸ್‌ ಆತಂಕಗೊಂಡಿದ್ದರು. ಆದ್ರೆ ಅಶ್ವಿನ್‌ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿ ರಾಜಸ್ಥಾನ್‌ ತಂಡಕ್ಕೆ ನಿರಾಸೆ ಮೂಡಿಸಿದರು. 5ನೇ ಎಸೆತದಲ್ಲಿ ಧ್ರುವ್‌ ಜುರೆಲ್‌ 1 ರನ್‌ ಕದ್ದರೆ, 6ನೇ ಎಸೆತದಲ್ಲಿ ಅಬ್ದುಲ್‌ ಬಶಿತ್‌ 1 ರನ್‌ ಗಳಿಸಿದರು.

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಜೋಸ್‌ ಬಟ್ಲರ್‌ ಎರಡೇ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ದೇವದತ್‌ ಪಡಿಕಲ್‌ (Devdutt Padikkal) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 66 ಎಸೆತಗಳಲ್ಲಿ ಈ ಜೋಡಿ 98 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ನಗೆ ಚಿಮ್ಮಿತ್ತು. ಪಡಿಕಲ್‌ 54 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 47 ರನ್‌ (37 ಎಸೆತ, 5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ನಂತರ 15‌ ಎಸೆತಗಳಲ್ಲಿ 22 ರನ್‌ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕ್ರಮಣಕಾರಿ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ಶಿಮ್ರಾನ್‌ ಹೆಟ್ಮೇಯರ್‌ ವಿಕೆಟ್‌ ಕೈಚೆಲ್ಲಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರವಿಚಂದ್ರನ್‌ ಅಶ್ವಿನ್‌ 6 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರೆ, ಧ್ರುವ್‌ ಜುರೆಲ್‌ 16 ಎಸೆತಗಳಲ್ಲಿ 34 ರನ್‌ (2 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌ ಪ್ರಮುಖ ಮೂರು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಡೇವಿಡ್‌ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲೇ ಟ್ರೆಂಟ್‌ ಬೋಲ್ಟ್‌ ಬೌಲಿಂಗ್‌ ದಾಳಿಗೆ ಔಟಾದರು, ಈ ಬೆನ್ನಲ್ಲೇ ಶಹಬಾಜ್‌ ಅಹ್ಮದ್‌ ಕೂಡ 2 ರನ್‌ ಗಳಿಸಿ ಔಟಾದರು. ಇದರಿಂದ ಆರಂಭದಲ್ಲೇ ಆರ್‌ಸಿಬಿಗೆ ಸಂಕಷ್ಟ ಎದುರಾಗಿತ್ತು.

    ಬಳಿಕ ಒಂದಾದ ಫಾಫ್‌ ಡು ಪ್ಲೆಸಿಸ್‌ ಹಾಗೂ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ರಾಜಸ್ಥಾನ್‌ ಬೌಲರ್‌ಗಳನ್ನ ಚೆಂಡಾಡಿದರು. 3ನೇ ವಿಕೆಟ್‌ಗೆ ಈ ಜೋಡಿ 66 ಎಸೆತಗಳಲ್ಲಿ ಬರೋಬ್ಬರಿ 127 ರನ್‌ ಸಿಡಿಸಿತ್ತು. ಈ ವೇಳೆ ಡುಪ್ಲೆಸಿಸ್‌ 39 ಎಸೆತಗಳಲ್ಲಿ 62 ರನ್‌ (8 ಬೌಂಡರಿ, 2 ಸಿಕ್ಸರ್)‌ ಸಿಡಿಸಿದರೆ, ಮ್ಯಾಕ್ಸ್‌ವೆಲ್‌ 77 ರನ್‌ (44 ಎಸೆತ, 4 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಗುವ ಜೊತೆಗೆ ಒಂದೊಂದೇ ವಿಕೆಟ್‌ ಪತನಗೊಂಡಿತು. ಮಹಿಪಾಲ್‌ ಲೊಮ್ರೋರ್‌ 8 ರನ್‌, ದಿನೇಶ್‌ ಕಾರ್ತಿಕ್‌ 16 ರನ್‌, ವಾನಿಂದು ಹಸರಂಗ 6 ರನ್‌ ಗಳಿಸಿದರೆ, ಸುಯಶ್‌ ಪ್ರಭುದೇಸಾಯ್‌ ಹಾಗೂ ವಿಜಯ್‌ಕುಮಾರ್‌ ವೈಶಾಕ್‌ ಶೂನ್ಯ ಸುತ್ತಿದರು. ಮೊಹಮ್ಮದ್‌ ಸಿರಾಜ್‌ 1 ರನ್‌ ಹಾಗೂ ಡೇವಿಡ್ ವಿಲ್ಲಿ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌ ಹಾಗೂ ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌, ಯಜುವೇಂದ್ರ ಚಹಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ಅಹಮದಾಬಾದ್‌: ಸಂಜು ಸ್ಯಾಮ್ಸನ್‌ (Sanju Samson), ಶಿಮ್ರಾನ್‌ ಹೆಟ್ಮೇಯರ್‌ (Shimron Hetmyer) ಸಿಕ್ಸರ್‌, ಬೌಂಡರಿ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಮೊದಲ 10 ಓವರ್‌ಗಳಲ್ಲಿ ಕೇವಲ 53 ರನ್‌ ಗಳಿಸಿದ್ದ ರಾಜಸ್ಥಾನ್‌ (Rajasthan Royals) ತಂಡ ಮುಂದಿನ 56 ಎಸೆತಗಳಲ್ಲಿ ಬರೋಬ್ಬರಿ 126 ರನ್‌ ಸಿಡಿಸಿತು. ಕೊನೆಯ 6 ಓವರ್‌ಗಳಲ್ಲಿ ತಂಡದ ಗೆಲುವಿಗೆ 64 ರನ್‌ಗಳ ಅಗತ್ಯವಿತ್ತು. ಈ ವೇಳೆ 15ನೇ ಓವರ್‌ನಲ್ಲಿ 13 ರನ್‌, 16ನೇ ಓವರ್‌ನಲ್ಲಿ 20 ರನ್‌, 17ನೇ ಓವರ್‌ನಲ್ಲಿ 8 ರನ್‌, 18ನೇ ಓವರ್‌ನಲ್ಲಿ 13 ರನ್‌ ಹಾಗೂ 19ನೇ ಓವರ್‌ನಲ್ಲಿ 16‌ ರನ್‌ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ಮೊದಲ ಎಸೆತದಲ್ಲಿ 2 ರನ್‌ ಕದ್ದ ಹೆಟ್ಮೇಯರ್‌ ರನೌಟ್‌ನಿಂದ ಪಾರಾದರು. 2ನೇ ಎಸೆತದಲ್ಲೇ ಸಿಕ್ಸರ್‌ ಚಚ್ಚಿ ತಂಡ ರೋಚಕ ಜಯ ಸಾಧಿಸಲು ಕಾರಣವಾದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿತ್ತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ 19.2 ಓವರ್‌ಗಳಲ್ಲೇ 179 ರನ್‌ ಗಳಿಸಿ ಗುಜರಾತ್‌ ತವರಿನಲ್ಲೇ ಗೆದ್ದು ಬೀಗಿತು. ಇದನ್ನೂ ಓದಿ: IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ 1 ರನ್‌ ಗಳಿಸಿದರೆ, ಜೋಸ್‌ ಬಟ್ಲರ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಇದರಿಂದ ಮೊದಲ 6 ಓವರ್‌ಗಳಲ್ಲಿ ಕೇವಲ 26 ರನ್‌ ಕಲೆಹಾಕಿತ್ತು. 3ನೇ ಕ್ರಮಾಂಕದಲ್ಲಿ ಬಂದ ದೇವದತ್‌ ಪಡಿಕಲ್‌ ಕೂಡ 25 ಎಸೆತಗಳಲ್ಲಿ 26 ರನ್‌, ರಿಯಾನ್‌ ಪರಾಗ್‌ 5 ರನ್‌ ಗಳಿಸಿ ಔಟಾದರು. ಇದರಿಂದ ತಂಡಕ್ಕೆ ಬಹುತೇಕ ಸೋಲು ಖಚಿತವಾಗಿತ್ತು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಶಿಮ್ರಾನ್‌ ಹೆಟ್ಮೇಯರ್‌ ಹಾಗೂ ಸಂಜು ಸ್ಯಾಮನ್‌ ಭರ್ಜರಿ ಬ್ಯಾಟಿಂಗ್‌ ನಡೆದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಉತ್ತಮ ರನ್‌ ಕಲೆಹಾಕಿದರು. 13ನೇ ಓವರ್‌ನಲ್ಲಿ ರಶೀದ್‌ಖಾನ್‌ ಬೌಲಿಂಗ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಸಂಜು ಸ್ಯಾಮ್ಸನ್‌ ಒಂದೇ ಓವರ್‌ನಲ್ಲಿ 20 ರನ್‌ ಚಚ್ಚಿದರು. ಆ ನಂತರ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. 32 ಎಸೆತಗಳನ್ನು ಎದುರಿಸಿದ ಸಂಜು ಬರೋಬ್ಬರಿ 6 ಸಿಕ್ಸರ್‌, 3 ಬೌಂಡರಿಗಳೊಂದಿಗೆ 60 ರನ್‌ ಗಳಿಸಿದರು. ಈ ವೇಳೆ ಮತ್ತೊಮ್ಮೆ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿದರು. ಸಂಜು ಔಟಾಗುತ್ತಿದ್ದಂತೆ ಗುಜರಾತ್‌ ಫ್ಯಾನ್ಸ್‌ ಹುಚ್ಚೆದ್ದು ಕುಣಿದರು. ಆದರೆ ತನ್ನ ಅಬ್ಬರ ನಿಲ್ಲಿಸದ ಹೆಟ್ಮೇಯರ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಕೇವಲ 25 ಎಸೆತಗಳನ್ನು ಎದುರಿಸಿದ ಹೆಟ್ಮೇಯರ್‌ 5 ಸಿಕ್ಸರ್‌, 2 ಬೌಂಡರಿಯೊಂದಿಗೆ 56 ರನ್‌ ಚಚ್ಚಿ ಅಜೇಯರಾಗುಳಿದರು. ಈ ನಡುವೆ ದ್ರುವ್‌ ಜುರೆಲ್‌ ಸ್ಪೋಟಕ 17 ರನ್‌ (10 ಎಸೆತ, 1 ಸಿಕ್ಸರ್‌, 2 ಬೌಂಡರಿ), ಅಶ್ವಿನ್‌ 3 ಎಸೆತಗಳಲ್ಲಿ 10 ರನ್‌ ಚಚ್ಚಿ ಔಟಾದರು. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್ ಟೈಟಾನ್ಸ್‌ ಬ್ಯಾಟ್ಸ್‌ಮ್ಯಾನ್‌ಗಳು ತವರಿನಲ್ಲಿ ಪಂದ್ಯ ನಡೆದರು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲವಾದರು. ಪವರ್‌ಪ್ಲೇ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಗುಜರಾತ್‌ ವಿರುದ್ಧ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿದರು. ಮೊದಲ 6 ಓವರ್‌ಗಳಲ್ಲಿ ಗುಜರಾತ್‌ ಟೈಟಾನ್ಸ್‌ 42 ರನ್‌ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು.

    ಆರಂಭಿಕ ಆಟಗಾರ ಶುಭಮನ್‌ ಗಿಲ್‌ 34 ಎಸೆತಗಳಲ್ಲಿ 45 ರನ್‌, ಮಂದಗತಿಯ ಬ್ಯಾಟಿಂಗ್‌ ನಡೆಸಿದ ಸಾಯಿ ಸುದರ್ಶನ್‌ 19 ಎಸೆತಗಳಲ್ಲಿ 20 ರನ್‌ ಗಳಿಸಲಷ್ಟೇ ಶಕ್ತವಾದರು. ನಾಯಕ ಹಾರ್ದಿಕ್‌ ಪಾಂಡ್ಯ 28 ರನ್‌ (19 ಎಸೆತ, 3 ಬೌಂಡರಿ, 1 ಸಿಕ್ಸರ್‌), ಅಭಿನವ್‌ ಮನೋಹರ್‌ 27 ರನ್‌ (13 ಎಸೆತ, 3 ಸಿಕ್ಸರ್‌) ಗಳಿಸಿದರು. ಈ ನಡುವೆ ಡೇವಿಡ್‌ ಮಿಲ್ಲರ್‌ 46 ರನ್‌ (30 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ರಾಹುಲ್‌ ತೆವಾಟಿಯಾ (1 ರನ್‌), ಅಲ್ಝರಿ ಜೋಸೆಫ್‌ ಅಜೇಯರಾಗುಳಿದರು.

    ರಾಜಸ್ಥಾನ್ ರಾಯಲ್ಸ್ ಪರವಾಗಿ ಸಂದೀಪ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೋಲ್ಟ್‌, ಆಡಂ ಜಂಪಾ ಹಾಗೂ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    – ಡೇವಿಡ್‌ ವಾರ್ನರ್‌ ಏಕಾಂಗಿ ಹೋರಾಟ ವ್ಯರ್ಥ

    ಗುವಾಹಟಿ: ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌ (Yashasvi Jaiswal) ಬೊಂಬಾಟ್‌ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಬರೋಬ್ಬರಿ 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಡೇವಿಡ್‌ ವಾರ್ನರ್‌ (DavidWarner) ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯ ಡೇವಿಡ್‌ ವಾರ್ನರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ರಾಜಸ್ಥಾನ್‌ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ಪ್ಲೇನಲ್ಲೇ 38 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್‌ 19ನೇ ಓವರ್‌ವರೆಗೂ ಹೋರಾಡಿ 65 ರನ್‌ (55 ಎಸೆತ, 7 ಬೌಂಡರಿ) ಗಳಿಸಿದರು. ಇದರೊಂದಿಗೆ ಲಲಿತ್‌ ಯಾದವ್‌ 38 ರನ್‌ (24 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ 20 ಓವರ್‌ಗಳಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌, ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಪಡೆದರೆ, ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಹಾಗೂ ಸಂದೀಪ್‌ ಶರ್ಮಾ 1 ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್‌ನಲ್ಲಿಯೇ ಬರೋಬ್ಬರಿ 5 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಮೊದಲ ಓವರ್ ನಲ್ಲೇ ಅತಿ ಹೆಚ್ಚು ರನ್ ದಾಖಲಾಯಿತು. ಯಶಸ್ವಿಯೊಂದಿಗೆ ಜೊತೆಯಾದ ಬಟ್ಲರ್‌ ಸಹ ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದರು. ಪರಿಣಾಮ ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 8.3 ಓವರ್‌ಗಳಲ್ಲಿ ಈ ಜೋಡಿ ಬರೋಬ್ಬರಿ 98 ರನ್‌ ಕಲೆಹಾಕಿ, ದೊಡ್ಡ ಮೊತ್ತ ಗಳಿಸಲು ನೆರವಾಯಿತು.

    ಈ ವೇಳೆ ಜೈಸ್ವಾಲ್‌ 60 ರನ್‌ (31 ಎಸೆತ, 11 ಬೌಂಡರಿ, 1 ಸಿಕ್ಸರ್‌) ಬಾರಿಸಿ ಔಟಾದರು. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಸಹ ಶೂನ್ಯ ಸುತ್ತಿ ನಿರ್ಗಮಿಸಿದರೆ, ರಿಯಾನ್‌ ಪರಾಗ್‌ ಕೇವಲ 7 ರನ್‌ ಗಳಿಸಿ ಹೊರನಡೆದರು. ಆದರೂ ಬಟ್ಲರ್‌ ಬ್ಯಾಟಿಂಗ್‌ ಅಬ್ಬರ ನಿಲ್ಲಲಿಲ್ಲ. ಬಳಿಕ 5ನೇ ವಿಕೆಟ್‌ಗೆ ಜೊತೆಯಾದ ಬಟ್ಲರ್‌ ಹಾಗೂ  ಹೆಟ್ಮೇಯರ್‌ 29 ಎಸೆತಗಳಲ್ಲಿ 49 ರನ್‌ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. 51 ಎಸೆತಗಳಲ್ಲಿ 79 ರನ್‌ (11 ಬೌಂಡರಿ, 1 ಸಿಕ್ಸರ್)‌ ಚಚ್ಚಿ ಬಟ್ಲರ್‌ ಔಟಾದರು. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಹೆಟ್ಮೇಯರ್‌ 21 ಎಸೆತಗಳಲ್ಲಿ ಸ್ಫೋಟಕ 39 ರನ್‌ (1 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಧ್ರುವ್ ಜುರೆಲ್ 3 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 8 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ರಾಜಸ್ಥಾನ್‌ 20 ಓವರ್‌ಗಳಲ್ಲಿ 199 ರನ್‌ ಕಲೆಹಾಕಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌, ರೋವ್ಮನ್‌ ಪೋವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಏರಿದ್ದು ಹೇಗೆ?
    50 ರನ್‌, 24 ಎಸೆತ
    100 ರನ್‌, 55 ಎಸೆತ
    150 ರನ್‌, 99 ಎಸೆತ
    199 ರನ್‌, 120 ಎಸೆತ

  • ನಿಮ್ಮ ಸೇವೆ ತಂಡಕ್ಕೆ ಅಗತ್ಯವಿಲ್ಲ – ಹೆಟ್ಮೆಯರ್‌ರನ್ನು T20 ವಿಶ್ವಕಪ್‍ನಿಂದ ಹೊರಗಿಟ್ಟ CWI

    ನಿಮ್ಮ ಸೇವೆ ತಂಡಕ್ಕೆ ಅಗತ್ಯವಿಲ್ಲ – ಹೆಟ್ಮೆಯರ್‌ರನ್ನು T20 ವಿಶ್ವಕಪ್‍ನಿಂದ ಹೊರಗಿಟ್ಟ CWI

    ಸಿಡ್ನಿ: ಟಿ20 ವಿಶ್ವಕಪ್‍ಗೆ (T20 World Cup) ಆಯ್ಕೆ ಆಗಿದ್ದ ವೆಸ್ಟ್ ಇಂಡೀಸ್‍ನ (West Indies) ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಶಿಮ್ರಾನ್ ಹೆಟ್ಮೆಯರ್ (Shimron Hetmyer)  ಎರಡೆರಡು ಬಾರಿ ವಿಮಾನ ಮಿಸ್ (Missing Flight) ಮಾಡಿಕೊಂಡ ಪರಿಣಾಮ ಅವರನ್ನು ವಿಶ್ವಕಪ್ ತಂಡದಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ (CWI) ಕೈಬಿಟ್ಟಿದೆ.

    ಶಿಮ್ರಾನ್ ಹೆಟ್ಮೆಯರ್ ಶನಿವಾರದಂದು ಆಸ್ಟ್ರೇಲಿಯಾ (Australia) ತೆರಳಬೇಕಿತ್ತು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಹೆಟ್ಮೆಯರ್ ವಿಮಾನವನ್ನು ಸೋಮವಾರಕ್ಕೆ ಬದಲಾಯಿಸಿ ಎಂದು ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸೋಮವಾರದ ವಿಮಾನವನ್ನು ಹೆಟ್ಮೆಯರ್ ಮಿಸ್ ಮಾಡಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ತೀವ್ರ ಅಶಿಸ್ತಿನ ಕಾರಣಕ್ಕಾಗಿ ಆಯ್ಕೆಗಾರರು ತಂಡದಿಂದ ಅವರನ್ನು ಕೈಬಿಟ್ಟಿದ್ದಾರೆ. ಅವರ ಸ್ಥಾನಕ್ಕೆ ಶಮರ್ ಬ್ರೂಕ್ಸ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಸಿಗೆ (ICC) ತಿಳಿಸಿದೆ. ಇದನ್ನೂ ಓದಿ: ಬುಮ್ರಾ ಇಲ್ಲ ಈ ಬಾರಿ ವಿಶ್ವಕಪ್ ಡೌಟ್ – BCCI ವಿರುದ್ಧ ಅಭಿಮಾನಿಗಳು ಗರಂ

    ಹೆಟ್ಮೆಯರ್ ಕುಟುಂಬದ ಕಾರಣ ಹೇಳಿ ಶನಿವಾರ ಆಸ್ಟ್ರೇಲಿಯಾಗೆ ತಂಡದೊಂದಿಗೆ ತೆರಳಲು ಸಾಧ್ಯವಿಲ್ಲ ಬದಲಿ ವ್ಯವಸ್ಥೆಯಾಗಿ ಸೋಮವಾರ ವಿಮಾನ ವ್ಯವಸ್ಥೆ ಮಾಡಿಕೊಡುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸೋಮವಾರ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹಾಗಾಗಿ CWI ಈ ನಿರ್ಧಾರಕ್ಕೆ ಮುಂದಾಗಿದೆ. ಇದನ್ನೂ ಓದಿ: ಸ್ಫೋಟಕ ಶತಕ ಸಿಡಿಸಿ T20ನಲ್ಲಿ ವಿಶ್ವದಾಖಲೆ ಬರೆದ ಮಿಲ್ಲರ್

    ಉತ್ತಮ ಫಾರ್ಮ್‍ನಲ್ಲಿದ್ದ ಹೆಟ್ಮೆಯರ್ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಬಲವಾಗಿದ್ದರು. ಆದರೆ ಇದೀಗ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಈ ಮೊದಲು ಸ್ಟಾರ್ ಆಟಗಾರರಾದ ಸುನೀಲ್ ನರೇನ್ ಮತ್ತು ಆಂಡ್ರೆ ರಸೆಲ್‍ರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಇದೀಗ ಹೆಟ್ಮೆಯರ್‌ರನ್ನು ಕೈಬಿಡಲಾಗಿದೆ. ಈ ನಡೆಗೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಚ್ ಡ್ರಾಪ್ – ಹೆಟ್ಮೆಯರ್, ಹೋಪ್ ದ್ವಿಶತಕದ ಜೊತೆಯಾಟಕ್ಕೆ ಸಿಕ್ತು 8 ವಿಕೆಟ್‍ಗಳ ಭರ್ಜರಿ ‌ಜಯ

    ಕ್ಯಾಚ್ ಡ್ರಾಪ್ – ಹೆಟ್ಮೆಯರ್, ಹೋಪ್ ದ್ವಿಶತಕದ ಜೊತೆಯಾಟಕ್ಕೆ ಸಿಕ್ತು 8 ವಿಕೆಟ್‍ಗಳ ಭರ್ಜರಿ ‌ಜಯ

    ಚೆನ್ನೈ: ವೆಸ್ಟ್ ಇಂಡೀಸ್ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಅಬ್ಬರದ ದ್ವಿಶತಕದ ಜೊತೆಯಾಟದಿಂದ ಭಾರತದ ವಿರುದ್ಧ 8 ವಿಕೆಟ್‍ನಿಂದ ಭರ್ಜರಿ ಗೆಲುವು ಸಾಧಿಸಿದೆ.

    ಚೆನ್ನೈನ ಚಿಪಾಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಏಕದಿನ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್‍ಗಳ ಗುರಿಯನ್ನು ವೆಸ್ಟ್ ಇಂಡೀಸ್ 13 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ. ವೆಸ್ಟ್ ಇಂಡೀಸ್ ಹೆಟ್ಮೆಯರ್ 139 ರನ್, ಶಾಯ್ ಹೋಪ್ 102 ರನ್, ನಿಕೋಲಸ್ ಪೂರನ್ 29 ರನ್‍ಗಳಿಂದ 47.5 ಓವರ್ ನಲ್ಲಿ 291 ಗಳಿಸಿ, ಭರ್ಜರಿ ಗೆಲುವು ಸಾಧಿಸಿದೆ.

    ಭಾರತದ ನೀಡಿದ್ದ 288 ರನ್‍ಗಳ ಗುರಿಯನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ಯಾವುದೇ ರನ್ ಗಳಿಸಲಿಲ್ಲ. ಅಷ್ಟೇ ಅಲ್ಲದೆ ಮೂರನೇ ಓವರ್ ನಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಹೀಗಾಗಿ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ ವಿಂಡೀಸ್ ತಂಡ ಒಂದು ವಿಕೆಟ್ ನಷ್ಟಕ್ಕೆ 36 ಗಳಿಸಲು ಶಕ್ತವಾಗಿತ್ತು. ಆದರೆ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಜೋಡಿಯು ವಿಕೆಟ್ ಕಾಯ್ದುಕೊಂಡು ನಿಧಾನಗತಿ ಬ್ಯಾಟಿಂಗ್ ಮುಂದುವರಿಸಿತು.

    ಇನ್ನಿಂಗ್ಸ್ ನ 20ನೇ ಓವರ್ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಹೆಟ್ಮೆಯರ್ ತಮ್ಮ ವೃತ್ತಿಜೀವನದ ಐದನೇ ಶತಕವನ್ನು ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಪರ ವೇಗವಾಗಿ 5 ಶತಕಗಳ ಗಳಿಸಿದ್ದ ಶಾಯ್ ಹೋಪ್ ದಾಖಲೆಯನ್ನು ಹೆಟ್ಮೆಯರ್ ಮುರಿದರು. ಹೆಟ್ಮೆಯರ್ 38 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹೋಪ್ 46 ಇನ್ನಿಂಗ್ಸ್ ಗಳಲ್ಲಿ ಐದು ಶತಕಗಳನ್ನು ಗಳಿಸಿದ್ದರು.

    ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 218 ರನ್‍ಗಳ ಬೃಹತ್ ಮೊತ್ತದ ಜೊತೆಯಾಟ ಕಟ್ಟಿಕೊಟ್ಟಿತು. ಇನ್ನಿಂಗ್ಸ್ ನ 39ನೇ ಓವರ್ ನಲ್ಲಿ ಹೆಟ್ಮೆಯರ್ ಮೊಹಮ್ಮದ್ ಶಮಿ ಬೌಲಿಂಗ್ ವೇಳೆ ಶ್ರೇಯಸ್ ಅಯ್ಯರ್ ಗೆ ಕ್ಯಾಚ್ ನೀಡಿದರು. 106 ಎಸೆತಗಳಲ್ಲಿ ಹೆಟ್ಮೆಯರ್ (11 ಬೌಂಡರಿ, 7 ಸಿಕ್ಸರ್) 139 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ವಿಕೆಟ್ ಒಪ್ಪಿಸಿದರು.

    ಶಮಿ ದಾಖಲೆ:
    2019ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆಯುವ ಮೂಲಕ ಟ್ರೆಂಟ್ ಬೌಲ್ಟ್ ಅವರನ್ನು ಸರಿಗಟ್ಟಿದ್ದಾರೆ. ಈ ಇಬ್ಬರು ವೇಗಿಗಳು ತಲಾ 38 ವಿಕೆಟ್ ಪಡೆದಿದ್ದಾರೆ. ಆದರೆ ಮೊಹಮ್ಮದ್ ಶಮಿ 13 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ಟ್ರೆಂಟ್ ಬೌಲ್ಟ್ 20 ಇನ್ನಿಂಗ್ಸ್ ಗಳಲ್ಲಿ 28 ವಿಕೆಟ್ ಕಿತ್ತಿದ್ದಾರೆ.

    ಹೆಟ್ಮೆಯರ್ ವಿಕೆಟ್ ಬಳಿಕ ಮೈದಾನಕ್ಕಿಳಿದ ನಿಕೋಲಸ್ ಪೂರನ್ ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್‍ಗೆ ಸಾಥ್ ನೀಡಿದರು. 151 ಎಸೆತಗಳಲ್ಲಿ ಶಾಯ್ ಹೋಪ್ (7 ಬೌಂಡರಿ, ಸಿಕ್ಸ್) 102 ರನ್ ಹಾಗೂ 23 ಎಸೆತಗಳಲ್ಲಿ ನಿಕೋಲಸ್ ಪೂರನ್ 4 ಬೌಂಡರಿ ಸೇರಿ 29ರನ್ ಸಹಾಯದಿಂದ ವೆಸ್ಟ್ ಇಂಡೀಸ್ 47.5 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 291 ರನ್ ಸಿಡಿಸಿ ಗೆಲುವು ಸಾಧಿಸಿತು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ 70 ರನ್, ರಿಷಭ್ ಪಂತ್ 71, ಕೇದಾರ್ ಜಾಧವ್ 40 ರನ್‍ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತ್ತು.

    ಪಂತ್-ಅಯ್ಯರ್ ಆಸರೆ:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಅರ್ಧಶತಕ (70 ಎಸೆತ) ಪೂರೈಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ 5ನೇ ಅರ್ಧಶತಕ ಇದಾಗಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಕೂಡ ಅರ್ಧಶತಕ (49 ಎಸೆತ) ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಂತ್ ಅವರ ಚೊಚ್ಚಲ ಅರ್ಧಶತಕವಾಗಿದೆ.

    ಭಾರತದ ಇನ್ನಿಂಗ್ಸ್ ನ 36ನೇ ಓವರ್ 3ನೇ ಎಸೆತದಲ್ಲಿ ಪೋಲಾರ್ಡ್ ಬೌಲಿಂಗ್ ವೇಳೆ ಪಂತ್ ನೀಡಿದ್ದ ಕ್ಯಾಚ್ ಅನ್ನು ಶೆಲ್ಡನ್ ಕಾಟ್ರೆಲ್ ಕೈಚೆಲ್ಲಿದರು. ಜೀವದಾನ ಪಡೆದ ಪಂತ್ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್ ನಷ್ಟಕ್ಕೆ 114 ರನ್‍ಗಳ ಜೊತೆಯಾಟ ಕಟ್ಟಿಕೊಟ್ಟು ತಂಡದ ಮೊತ್ತವನ್ನು ಏರಿಸಿತು. ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ ವಿಕೆಟ್ ನೀಡಿದರು. 88 ಎಸೆತಗಳಲ್ಲಿ ಶ್ರೇಯಸ್ (5 ಬೌಂಡರಿ, ಸಿಕ್ಸ್) 70 ರನ್ ಗಳಿಸಿ ಪೆವಿಲಿಯನ್‍ಗೆ ತರೆಳಿದ್ದರು.

    ಶ್ರೇಯಸ್ ಅಯ್ಯರ್ ಬೆನ್ನಲ್ಲೇ 69 ಎಸೆತಗಳಲ್ಲಿ (7 ಬೌಂಡರಿ, ಸಿಕ್ಸ್) 71 ರನ್ ಗಳಿಸಿದ್ದ ಪಂತ್ ಕೂಡ ವಿಕೆಟ್ ಒಪ್ಪಿಸಿದರು. 40ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ 210 ರನ್ ಪೇರಿಸಿತು. ಬಳಿಕ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ 6ನೇ ವಿಕೆಟ್ ನಷ್ಟಕ್ಕೆ 59 ರನ್ ಗಳ ಜೊತೆಯಾಟ ಕಟ್ಟಿಕೊಟ್ಟರು. ಇನ್ನಿಂಗ್ಸ್ ನ 47ನೇ ಓವರ್ ನ 3ನೇ ಎಸೆತದಲ್ಲಿ ಕೇದಾರ್ ಜಾಧವ್ (40 ರನ್) ಹಾಗೂ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜಾ (21 ರನ್) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ ಶಿವಂ ದುಬೆ (9 ರನ್) ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

    9 ಸರಣಿಯಲ್ಲಿ ಭಾರತಕ್ಕೆ ಜಯ:
    ಕಳೆದ 13 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 9 ಸರಣಿಗಳು ನಡೆದಿವೆ. ಎಲ್ಲ ಸರಣಿಯಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2006ರಿಂದ ಉಭಯ ದೇಶಗಳ ನಡುವೆ 39 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 23 ಪಂದ್ಯ ಗೆದ್ದರೆ, 10 ಪಂದ್ಯದಲ್ಲಿ ಸೋಲು ಕಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಮಣಿಸಿತ್ತು.

  • ಹೆಟ್ಮೇಯರ್ ಹೊಡೆತಕ್ಕೆ ಗಾಳಿಯಲ್ಲಿ ಹಾರಿತು ಗುರ್‍ಕೀರತ್ ಬ್ಯಾಟ್- ವಿಡಿಯೋ ನೋಡಿ

    ಹೆಟ್ಮೇಯರ್ ಹೊಡೆತಕ್ಕೆ ಗಾಳಿಯಲ್ಲಿ ಹಾರಿತು ಗುರ್‍ಕೀರತ್ ಬ್ಯಾಟ್- ವಿಡಿಯೋ ನೋಡಿ

    ಬೆಂಗಳೂರು: ಶನಿವಾರ ಬೆಂಗಳೂರು ಮತ್ತು ಹೈದರಾಬ್ ನಡುವಿನ ಪಂದ್ಯದ ವೇಳೆ ಶಿಮ್ರೊನ್ ಹೆಟ್ಮೇಯರ್ ಹೊಡೆತಕ್ಕೆ ಗುರುಕೀರತ್ ಬ್ಯಾಟ್ ಮೇಲಕ್ಕೆ ಚಿಮ್ಮಿದ ಪ್ರಸಂಗ ನಡೆಯಿತು.

    ಆರ್ಸಿಬಿ 20 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಬಳಿಕ ಹೆಟ್ಮೇಯರ್ ಮತ್ತು ಗುರುಕೀರತ್ ಕ್ರೀಸ್‍ನಲ್ಲಿ ನಿಧಾನವಾಗಿ ರನ್ ಪೇರಿಸುತ್ತಿದ್ದರು. ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು ಮಾಡಿದ ನಾಲ್ಕನೇ ಓವರ್‍ನ ನಾಲ್ಕನೇ ಎಸೆತವನ್ನು ಶಿಮ್ರೋನ್ ಹೆಟ್ಮರ್ ಬಲವಾಗಿ ಹೊಡೆದಿದ್ದಾರೆ.

    ಬಾಲ್ ತನ್ನತ್ತ ಬರುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ ನಾನ್ ಸ್ಟ್ರೈಕರ್ ನಲ್ಲಿದ್ದ ಗುರುಕೀರತ್ ಅವರು ಬ್ಯಾಟ್ ಮೇಲಕ್ಕೆ ಎತ್ತಿ ತಪ್ಪಿಸಲು ಯತ್ನಿಸಿದರು. ಆದರೆ ಈ ಪ್ರಯತ್ನ ವಿಫಲವಾಗಿದ್ದು, ಬಾಲ್ ನೇರವಾಗಿ ಬ್ಯಾಟಿಗೆ ಬಡಿದಿದೆ. ಚೆಂಡು ಹೊಡೆದ ರಭಸಕ್ಕೆ ಅವರ ಬ್ಯಾಟ್ ಗಾಳಿಯಲ್ಲಿ ಮೇಲಕ್ಕೆ ಹಾರಿ ಬಿದ್ದಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದಾರಬಾದ್ ತಂಡ ನಾಯಕ ಕೆ. ವಿಲಿಯಮ್ಸನ್ ಹೊಡೆದ 70 ರನ್ (43 ಎಸೆತ, 5 ಬೌಂಡರಿ, 4 ಸಿಕ್ಸರ್) ಸಹಾಯದಿಂದ 174 ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಇದನ್ನು ಬೆನ್ನಟಿದ ಬೆಂಗಳೂರು ತಂಡ ಆರಂಭಿಕ 3 ವಿಕೆಟ್‍ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಹೆಟ್ಮೇಯರ್ 75 ರನ್ (47 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಗುರುಕೀರತ್ ಸಿಂಗ್ 65 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರು ನಾಲ್ಕನೇ ವಿಕೆಟ್‍ಗೆ 144 ರನ್ ಗಳ ಜೊತೆಯಾಟವಾಡಿದರು. ಈ ಮೂಲಕ ಬೆಂಗಳೂರು ತಂಡವನ್ನು 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಸೂಪರ್ ಬ್ಯಾಟಿಂಗ್ ಮಾಡಿದ ಶಿಮ್ರೊನ್ ಹೆಟ್ಮರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಈ ಪಂದ್ಯದಲ್ಲಿ ಹೈದರಾಬಾದ್ ಗೆದ್ದಿದ್ದರೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಿತ್ತು. ಆದರೆ ಸೋತಿದ್ದರಿಂದ ಪ್ಲೇ ಆಫ್ ಪ್ರವೇಶದ ಕನಸು ಇಂದು ಕೋಲ್ಕತ್ತಾ ಮತ್ತು ಪಂಜಾಬ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ಈ ಪಂದ್ಯದಲ್ಲಿ 12 ಅಂಕಗಳಿಸಿರುವ ಕೋಲ್ಕತ್ತಾ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಪಂಜಾಬ್ ಗೆದ್ದರೆ ರನ್ ರೇಟ್ ಆಧಾರದಲ್ಲಿ ಹೈದರಾಬಾದ್ ಪ್ಲೇ ಆಫ್ ಪ್ರವೇಶಲಿದೆ.