Tag: Shikaripura

  • ಬಿಜೆಪಿಯವರೇ ಬಿಎಸ್‍ವೈ ಮನೆಗೆ ಕಲ್ಲು ಎಸೆಯುವುದಕ್ಕೆ ಕಳಿಸಿರಬೇಕು: ಸುರ್ಜೆವಾಲಾ

    ಬಿಜೆಪಿಯವರೇ ಬಿಎಸ್‍ವೈ ಮನೆಗೆ ಕಲ್ಲು ಎಸೆಯುವುದಕ್ಕೆ ಕಳಿಸಿರಬೇಕು: ಸುರ್ಜೆವಾಲಾ

    ಬೆಂಗಳೂರು: ಯಾರೋ ಬಿಜೆಪಿಯವರೇ ಯಡಿಯೂರಪ್ಪ ಮನೆಗೆ ಕಲ್ಲು ಎಸೆಯುವುದಕ್ಕೆ ಕಳಿಸಿರಬೇಕು ಎಂದು ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಹೇಳಿದರು.

    ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಿವಾಸದ ಬಳಿ ನಡೆದ ಘಟನೆಗೆ ಬೇಸರವಿದೆ. ಯಡಿಯೂರಪ್ಪ ಮನೆ ಮೇಲೆ ಯಾಕೆ ದಾಳಿ ಆಯ್ತು? ಅವರು ಈಗ ಅಧಿಕಾರದಲ್ಲಿಲ್ಲ. ಅದಕ್ಕೆ ಯಾರೋ ಬಿಜೆಪಿಯವರೇ (BJP) ಯಡಿಯೂರಪ್ಪ ಮನೆಗೆ ಕಲ್ಲು ಎಸೆಯುವುದಕ್ಕೆ ಕಳಿಸಿರಬೇಕು ಎಂದು ತಿಳಿಸಿದರು.

    ಬೊಮ್ಮಾಯಿ ಆಧುನಿಕ ಶಕುನಿ. ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷ ತರುತ್ತಿದ್ದಾರೆ. 56% ಮೀಸಲಾತಿಯನ್ನು ಹೇಗೆ ಜಾರಿಗೆ ತರುತ್ತಾರೆ? ಎಸ್.ಸಿ, ಎಸ್.ಟಿ ಸಮುದಾಯವನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಪ್ರಧಾನಿ ಬರ್ತಾರೆ ಟಾಟಾ ಬೈಬೈ ಮಾಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬಿಜೆಪಿ ಪಕ್ಷವು ಜನರಿಗೆ ಟೊಳ್ಳು ಭರವಸೆ ನೀಡಿಲ್ಲ- ಡಾ.ಕೆ.ಸುಧಾಕರ್

    ಘಟನೆಯೇನು?: ರಾಜ್ಯ ಸರ್ಕಾರ (Government Of Karnataka) ಕಳೆದ ಎರಡು ದಿನಗಳ ಹಿಂದೆ ಮೀಸಲಾತಿ (Reservation) ಪ್ರಕಟ ಮಾಡಿದ್ದು, ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರದಲ್ಲಿ (Shikaripura) ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು.

    ಸದಾಶಿವ ಆಯೋಗದ ವರದಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ಈ ವರದಿ ಜಾರಿಗೊಳಿಸದಂತೆ ಆಗ್ರಹಿಸಿದರು. ಅಲ್ಲದೇ ನಗರದ ಮಾಳರಕೇರಿ ಬಡಾವಣೆಯಲ್ಲಿನ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಇದನ್ನೂ ಓದಿ: ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

  • ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದ್ದು, ಶಿಕಾರಿಪುರಕ್ಕೆ ಹೋಗಿ ಎಲ್ಲರ ಜೊತೆ ಮಾತಾಡ್ತೀನಿ: ಬಿಎಸ್‍ವೈ

    ತಪ್ಪು ಗ್ರಹಿಕೆಯಿಂದ ಘಟನೆ ನಡೆದಿದ್ದು, ಶಿಕಾರಿಪುರಕ್ಕೆ ಹೋಗಿ ಎಲ್ಲರ ಜೊತೆ ಮಾತಾಡ್ತೀನಿ: ಬಿಎಸ್‍ವೈ

    ಬೆಂಗಳೂರು: ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ. ನಾಳೆ, ನಾಡಿದ್ದು ಹಾಗೇ ಅಲ್ಲಿಗೆ ಹೋಗಿ ಎಲ್ಲರ ಜೊತೆ ಮಾತಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.

    ಶಿವಮೊಗ್ಗದ (Shivamogga) ಶಿಕಾರಿಪುರದ (Shikaripura)  ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಕಲ್ಲು ತೂರಾಟ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಬಂಜಾರ ಸಮುದಾಯದ ಕಾರ್ಯಕರ್ತರು ನಮ್ಮ ಮನೆ ಮೇಲೆ ಕಲ್ಲು ತುರಾಟ ಮಾಡಿದ್ದಾರೆ. ನಾನು ಎಸ್ಪಿ, ಡಿಸಿ ಜೊತೆ ಮಾತಾಡಿದ್ದೇನೆ. ಅನೇಕ ವರ್ಷಗಳಿಂದ ಬಂಜಾರ ಸಮುದಾಯ ನಮ್ಮ ಜೊತೆ ಇದೆ. ತಪ್ಪು ಗ್ರಹಿಕೆಯಿಂದ ಈ ಘಟನೆ ಆಗಿದೆ. ಯಾರ ಮೇಲೂ ಕ್ರಮ ತೆಗೆದುಕೊಳ್ಳಬಾರದು. ಯಾರನ್ನು ಬಂಧನ ಮಾಡಬಾರದು ಎಂದು ಡಿಸಿ, ಎಸ್ಪಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

    ಘಟನೆಗೆ ಸಂಬಂಧಿಸಿದಂತೆ ಸಮುದಾಯದ ಮುಖಂಡರನ್ನು ಕರೆದು ಮಾತನಾಡುತ್ತೇನೆ. ಗೊಂದಲಕ್ಕೆ ಕಾರಣ ಏನು ಅಂತ ಸಮಾಲೋಚನೆ ಮಾಡುತ್ತೇನೆ. ಬಂಜಾರ ಸಮುದಾಯದ ಸಮಸ್ಯೆ ಏನೇ ಇದ್ದರೂ, ಚರ್ಚೆಗೆ ಸಿದ್ಧನಾಗಿದ್ದು, ಶಿಕಾರಿಪುರ ಜನ ಶಾಂತಿಗೆ ಹೆಸರಾದವರು. ಯಾವುದೇ ಕಾರಣಕ್ಕೂ ಸಮಾಜ ಘಾತುಕ ಶಕ್ತಿ ಮಾತು ಕೇಳಬೇಡಿ. ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯ ಕೊಡುತ್ತೇನೆ ಎಂದು ಭರವಸೆ ನೀಡಿದರು.

    4 ಬಾರಿ ಸಿಎಂ ಆಗಲು ಈ ಸಮುದಾಯದ ಜನರು ಕಾರಣ. ನಾಳೆ, ನಾಡಿದ್ದು ಅಲ್ಲಿಗೆ ಹೋಗಿ ಎಲ್ಲರ ಜೊತೆ ಮಾತನಾಡುತ್ತೇನೆ. ತಾಂಡಾ ಅಭಿವೃದ್ಧಿಗೆ ನಿರಂತರವಾಗಿ ನಾನು ಕೆಲಸ ಮಾಡಿದ್ದೇನೆ. ಬಂಜಾರ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಯಾರು ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು. ಎಲ್ಲರೂ ಶಾಂತಿಯುತವಾಗಿ ಇರಬೇಕು. ಅವರ ಸಮಸ್ಯೆ ತಿಳಿದುಕೊಂಡು ಪರಿಹಾರ ಮಾಡುತ್ತೇನೆ. ಸಮುದಾಯದ ಮುಖಂಡರು ಯಾವಾಗ ಬೇಕಾದ್ರು ಸಿಎಂ ಭೇಟಿ ಮಾಡಬಹುದು. ನಾನು ಬೇಕಾದ್ರೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಶಿಕಾರಿಪುರ ಶಾಂತಿಯುತವಾಗಿತ್ತು. ಇಂತಹ ಘಟನೆ ಆಗಿರೋದು ನೋವಾಗಿದೆ. ಯಾರ ಮೇಲೂ ಕ್ರಮ ತೆಗೆದುಕೊಳ್ಳದಂತೆ ಎಸ್‍ಪಿ, ಡಿಸಿಗೆ ಮನವಿ ಮಾಡಿದ್ದೇನೆ. ಯಾರದ್ದೋ ಕುಮ್ಮಕ್ಕು ಅಂತ ಈಗ ಹೇಳುವುದಿಲ್ಲ. ಯಾರ ಬಗ್ಗೆ ದೂರುವುದಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಪಕ್ಷವು ಜನರಿಗೆ ಟೊಳ್ಳು ಭರವಸೆ ನೀಡಿಲ್ಲ- ಡಾ.ಕೆ.ಸುಧಾಕರ್

  • ಸದಾಶಿವ ಆಯೋಗ ವರದಿ ಅಗತ್ಯವಿಲ್ಲ; ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ ಇರುತ್ತೆ – ಸಿಎಂ

    ಸದಾಶಿವ ಆಯೋಗ ವರದಿ ಅಗತ್ಯವಿಲ್ಲ; ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ ಇರುತ್ತೆ – ಸಿಎಂ

    – ಸದಾಶಿವ ಆಯೋಗ ವರದಿ ಜಾರಿ ಮಾಡಿಲ್ಲ ಎಂದ ಬೊಮ್ಮಾಯಿ

    ಚಿಕ್ಕಬಳ್ಳಾಪುರ: ಮೀಸಲಾತಿ (Reservation) ಹಂಚಿಕೆಯನ್ನು ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಅನ್ವಯ ಮಾಡಿಲ್ಲ. ನಮ್ಮ ಕ್ಯಾಬಿನೆಟ್‌ನ ಉಪಸಮಿಯಿಂದ ಮಾಡಿದ್ದೇವೆ. ಆದ್ದರಿಂದ ಬಂಜಾರ ಸಮುದಾಯದ ಮುಖಂಡರಿಗೆ ಆತಂಕ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.‌

    ಯಡಿಯೂರಪ್ಪ (BS Yediyurappa) ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣದ ಕುರಿತು ಚಿಕ್ಕಬಳ್ಳಾಪುರದಲ್ಲಿ ಸ್ಪಷ್ಟನೆ ನೀಡಿರುವ ಸಿಎಂ, ಬೋವಿ ಲಂಬಾಣಿ ಕೊರಮ ಕೊರಚ ಎಲ್ಲ ಸಮುದಾಯಗಳು ಎಸ್ಸಿ ಲಿಸ್ಟ್‌ನಲ್ಲೇ (SC Community) ಇರುತ್ತವೆ, ತೆಗೆದುಹಾಕುವ ಪ್ರಶ್ನೇಯೇ ಇಲ್ಲ. ನಾನೇ ಸ್ವತಃ ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇನೆ. ಸದಾಶಿವ ಆಯೋಗ ವರದಿಯ ಶಿಫಾರಸುಗಳ ಅನ್ವಯ ನಾವು ಮೀಸಲಾತಿ ಹಂಚಿಕೆ ಮಾಡಿಲ್ಲ, ಆಯೋಗದ ವರದಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

    3 ಪರ್ಸೆಂಟ್ ಮೀಸಲಾತಿಯನ್ನ ನಾಲ್ಕೂವರೆ ಪರ್ಸೆಂಟ್‌ಗೆ ಹೆಚ್ಚಿಸಿದ್ದೇವೆ. ಸದಾಶಿವ ಆಯೋಗ ವರದಿಯ ಅಗತ್ಯವಿಲ್ಲ ಅಂತಾ ನಾವು ತೀರ್ಮಾನ ಮಾಡಿದ್ದೇವೆ. ಬೇಡಿಕೆಗಳಿಗೆ ಅನುಗುಣವಾಗಿಯೇ ನಾವು ಮೀಸಲಾತಿ ಪ್ರಕಟಿಸಿದ್ದೇವೆ. ಯಾವುದೇ ಗೊಂದಲವಿಲ್ಲದೇ ಎಲ್ಲ ಸಮುದಾಯಗಳ ಹಿತರಕ್ಷಣೆ ಮಾಡಿದ್ದೇವೆ. 2 ಲಕ್ಷದ ಹಕ್ಕು ಪತ್ರಗಳನ್ನ ಲಂಬಾಣಿ ತಾಂಡಾದ ಜನರಿಗೆ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ನಿಮ್ಮ ಪರವಾಗಿ ಇರುವ ಸರ್ಕಾರ ಎಂದು ಅಭಯ ನೀಡಿದ್ದಾರೆ.

    ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು. ಆ ಭಾಗದ ತಾಂಡಾಗಳಿಗೆ ಮೂಲ ಸೌಕರ್ಯಗಳನ್ನ ಕಲ್ಪಿಸಿಕೊಟ್ಟವರು ಯಡಿಯೂರಪ್ಪನವರು. ಹಿಂಸೆಗೆ ಅವಕಾಶ ಕೊಡದೇ ಏನೇ ವಿಷಯ ಇದ್ರೂ ಕೂತು ಬಗೆಹರಿಸೋಣ ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಶಿಕಾರಿಪುರದಲ್ಲಿ (Shikaripura) ಜನರು ಭುಗಿಲೇಳಲು ಕಾಂಗ್ರೆಸ್ ಪ್ರಚೋದನೆ ಕೊಟ್ಟಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು (Congress Leaders) ಪ್ರಚೋದನೆ ಕೊಟ್ಟಿದ್ದಾರೆ. ಬಿಜೆಪಿ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದನ್ನು ತಡೆಯೋಕೆ ಆಗದೆ, ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಇದಕ್ಕೆಲ್ಲ ಬಂಜಾರ ಸಮುದಾಯ ಒಳಗಾಗಬಾರದು. ಬಂಜಾರ ಸಮುದಾಯದ ರಕ್ಷಣೆ ಮೊದಲಿಂದಲೂ ಬಿಜೆಪಿ ಮಾಡಿದೆ, ಮುಂದೆಯೂ ಮಾಡಲಿದೆ. ತಪ್ಪು ದಾರಿಗೆಳೆಯುವ ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

    ಕಾಂಗ್ರೆಸ್‌ನವರ ಕುಕೃತ್ಯವನ್ನು ಖಂಡಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಹಿಂಸೆಗೆ ಇಳಿಸುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್‌ನವರು ಕ್ಷೆಮೆಗೆ ಅರ್ಹರಲ್ಲ, ಇದು ರಾಷ್ಟ್ರೀಯ ಪಕ್ಷ ಮಾಡುವಂತಹ ಅತ್ಯಂತ ಸಣ್ಣ ಕೆಲಸ ಎಂದು ಕಿಡಿ ಕಾರಿದ್ದಾರೆ.

  • ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ವಿಜಯೇಂದ್ರ

    ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ವಿಜಯೇಂದ್ರ

    ಶಿವಮೊಗ್ಗ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿರುವ ವಿಜಯೇಂದ್ರ, ಕ್ಷೇತ್ರದ ಶಕ್ತಿ ಕೇಂದ್ರಗಳ ಪ್ರಮುಖರ ಭೇಟಿ ಮಾಡುವ ಜೊತೆಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.

    ಕ್ಷೇತ್ರದಲ್ಲಿ ಪ್ರಮುಖರ ಭೇಟಿ, ವಿಜಯೇಂದ್ರ ಅವರ ಈ ರೀತಿಯ ಓಡಾಟ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧೆ ಖಚಿತನಾ ಎಂಬ ಅನುಮಾನ ಮೂಡಲು ಆರಂಭಿಸಿದೆ.

    ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಶಿಕಾರಿಪುರ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಮನವಿ ಮಾಡಿದ್ದಕ್ಕೆ, ತಂದೆಯವರಾದ ಮಾಜಿ ಸಿಎಂ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ಇದನ್ನೂ ಓದಿ: ಧ್ವಜದ ಬಗ್ಗೆ ಸಿದ್ದರಾಮಯ್ಯ ಮಾತು ಕೇಳಿ ದುಃಖವಾಗುತ್ತಿದೆ: ನಾಗೇಶ್ ಕಿಡಿ 

    ಶಿಕಾರಿಪುರ ಕ್ಷೇತ್ರ ನನಗೆ ಹೊಸದೇನಲ್ಲ. ಈ ಹಿಂದೆ ಸಹ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚೆಚ್ಚು ಪ್ರವಾಸ ಮಾಡುತ್ತೇನೆ. ರಾಜಕೀಯದಲ್ಲಿ ಎಂಎಲ್‍ಎ, ಎಂಎಲ್‍ಸಿ ಆಗಬೇಕು ಅಂತಾ ಪಕ್ಷ ಸಂಘಟನೆ ಮಾಡುತ್ತಿಲ್ಲ. ಬಿಜೆಪಿಯಲ್ಲಿ ಹಲವು ಹುದ್ದೆಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದೀನಿ, ಮಾಡುತ್ತಿದ್ದೇನೆ ಎಂದರು.

    ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಅದರಲ್ಲಿ ಸಂತೃಪ್ತಿ ಇದೆ. ಬರುವಂತಹ ದಿನಗಳಲ್ಲಿ ಏನಾಗುತ್ತದೆ, ಏನಾಗುತ್ತೇನೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಈಗಾಗಿ ವಿಜಯೇಂದ್ರ ಯಾವಾಗ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷ ಹಾಗೂ ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ವಿವರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹೈಕಮಾಂಡ್‍ಗೆ ಸೆಡ್ಡು ಹೊಡೆದ ಬಿಎಸ್‍ವೈ – ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಹಿಂದಿದೆ ಹಲವು ಲೆಕ್ಕಾಚಾರ

    ಹೈಕಮಾಂಡ್‍ಗೆ ಸೆಡ್ಡು ಹೊಡೆದ ಬಿಎಸ್‍ವೈ – ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಹಿಂದಿದೆ ಹಲವು ಲೆಕ್ಕಾಚಾರ

    ಬೆಂಗಳೂರು: ರಾಜ್ಯ ಬಿಜೆಪಿ ಹಲವು ಸಂಚಲನಾತ್ಮಕ ವಿದ್ಯಮಾನಗಳಿಗೆ ಸಾಕ್ಷಿಯಾಗ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಘೋಷಣೆ ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಮುಂದಿನ ಸಲ ತಮ್ಮ ಕಿರಿಯ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಯಡಿಯೂರಪ್ಪ ಅವರ ಈ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

    ರಾಜ್ಯ ಬಿಜೆಪಿಯ ದಿಗ್ಗಜ ನಾಯಕ ಯಡಿಯೂರಪ್ಪ ಇಂದು ಹೈಕಮಾಂಡ್‍ಗೆ ಶಾಕ್ ಮೂಡಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಶಿಕಾರಿಪುರದಲ್ಲಿ ಮುಂದಿನ ಸಲ ತಾವು ನಿಲ್ಲಲ್ಲ, ತಮ್ಮ ಬದಲಾಗಿ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂಬ ಮಹದ್ಘೋಷಣೆಯನ್ನು ಯಡಿಯೂರಪ್ಪ ಮಾಡಿದ್ದಾರೆ. ತಮ್ಮ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೆ ತಮ್ಮ ಕ್ಷೇತ್ರವನ್ನೇ ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ‘ಮೆಂಟಲ್ ಹೆಲ್ತ್ ಇನೀಶಿಯೇಟಿವ್’ ಮೆಚ್ಚಿದ ಕೇಂದ್ರ, ದೇಶದಾದ್ಯಂತ ಜಾರಿ: ಡಾ.ಕೆ ಸುಧಾಕರ್

    ಯಡಿಯೂರಪ್ಪ ಅವರ ಈ ಘೋಷಣೆ ಪಕ್ಷದಲ್ಲಿ ನಾನಾ ತರ್ಕಗಳಿಗೆ ವೇದಿಕೆ ಒದಗಿಸಿದೆ. ಚುನಾವಣೆಗೆ ಒಂಭತ್ತು ತಿಂಗಳಿರುವಾಗ ಯಡಿಯೂರಪ್ಪ ಅವರ ಈ ಘೋಷಣೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಯಡಿಯೂರಪ್ಪ ಅವರದ್ದೇ ವೈಯಕ್ತಿಕ ನಿರ್ಧಾರವಾಗಿದೆ. ಆದ್ರೆ ಇದಕ್ಕೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಾ ಇಲ್ವಾ ಅನ್ನೋ ಜಿಜ್ಞಾಸೆಯೂ ಹುಟ್ಟಿಕೊಂಡಿದೆ. ಬಿಜೆಪಿ ಹೈಕಮಾಂಡ್, ವಿಜಯೇಂದ್ರಗೆ 2018ರ ಚುನಾವಣೆಯಲ್ಲಿ ವರುಣಾದಿಂದ ಟಿಕೆಟ್ ನಿರಾಕರಿಸಿತ್ತು. ಬಳಿಕ ನಡೆದ ಕೆಲವು ಉಪಚುನಾವಣೆಗಳಲ್ಲಿ ವಿಜಯೇಂದ್ರ ಸ್ಪರ್ಧೆಯ ಮಾತು ಕೇಳಿ ಬರುತ್ತಿತ್ತು. ಇತ್ತೀಚೆಗೆ ಪರಿಷತ್ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ವಿಜಯೇಂದ್ರಗೆ ಹೈಕಮಾಂಡ್ ಮತ್ತೆ ನಿರಾಸೆ ಮೂಡಿಸಿತ್ತು. ಇಷ್ಟಿದ್ರೂ ವಿಜಯೇಂದ್ರ, ಕಳೆದ ಕೆಲವು ವರ್ಷಗಳಿಂದ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ರು. ಹಳೇ ಮೈಸೂರು ಭಾಗದ ವರುಣಾ ಅಥವಾ ಗುಬ್ಬಿ ಕ್ಷೇತ್ರಗಳಲ್ಲಿ ವಿಜಯೇಂದ್ರ ಸ್ಪರ್ಧಿಸಲು ಬಯಸಿದ್ರು. ಅವರಿಗೆ ಶಿಕಾರಿಪುರದಲ್ಲೂ ಸ್ಪರ್ಧಿಸುವಂತೆ ಭಾರೀ ಒತ್ತಾಯ ಇತ್ತು. ವಿಜಯೇಂದ್ರ ಒಂದು ಕಡೆ ಹೈಕಮಾಂಡ್‍ನ ಅಸಹಕಾರ ಮತ್ತೊಂದು ಕಡೆ ಕ್ಷೇತ್ರದ ಆಯ್ಕೆ ಗೊಂದಲದಲ್ಲಿದ್ದ ವೇಳೆಯಲ್ಲೇ ತಂದೆ ಯಡಿಯೂರಪ್ಪ ಘೋಷಣೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನವರು ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸಿದ್ದರು: ಎಚ್‍ಡಿಕೆ

    ಯಡಿಯೂರಪ್ಪ ಅವರ ಈ ನಡೆ ಹಿಂದೆ ಸಾಕಷ್ಟು ಲೆಕ್ಕಾಚಾರಗಳು ಕಂಡುಬರುತ್ತಿವೆ. ಶಿಕಾರಿಪುರ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಡದೇ ತಮ್ಮ ಕುಟುಂಬದ ಹಿಡಿತದಲ್ಲಿ ಇರಿಸಿಕೊಳ್ಳುವ ಉದ್ದೇಶವೂ ಇದರ ಹಿಂದಿದೆ. ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರಗೆ ಈ ಸಲವೂ ಹೈಕಮಾಂಡ್ ಟಿಕೆಟ್ ನಿರಾಕರಿಬಹುದೆಂಬ ಆತಂಕವೂ ಇದರಲ್ಲಿ ಇಣುಕಿದೆ. ಹೀಗಾಗಿ ತಾವೇ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡುವ ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಪುತ್ರನಿಗೆ ಈ ಸಲ ಶತಾಯಗತಾಯ ವಿಧಾನಸಭೆಗೆ ಟಿಕೆಟ್ ಕೊಡಿಸಲೇಬೇಕೆಂಬ ಹಟವೂ ಇದರಲ್ಲಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಈ ನಡೆ ಹೈಕಮಾಂಡ್‍ಗೂ ಗೊಂದಲ ಮೂಡಿಸಿದೆ. ಹೈಕಮಾಂಡ್‍ನ ಪ್ರತಿಕ್ರಿಯೆ ಈ ವಿಚಾರದಲ್ಲಿ ಏನಿರುತ್ತೋ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ

    ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ

    ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ ಎಂದು ಬಿ.ವೈ.ವಿಜಯೇಂದ್ರ ತಂದೆಯನ್ನು ಪ್ರಶಂಸಿಸಿದರು.

    ಶಿಕಾರಿಪುರ ಅಭ್ಯರ್ಥಿ ಬಿಎಸ್‍ವೈ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಯಾವ ರೀತಿ ಮಾರ್ಗದರ್ಶನ ಕೊಡ್ತಾರೋ ಆ ಮಾರ್ಗದಲ್ಲಿ ಹೋಗುತ್ತೇನೆ. ಪಕ್ಷ ಯಾವ ರೀತಿಯ ನಿರ್ಧಾರ ಮಾಡ್ತದೋ ಅದರ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ: ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ

    ರಾಜ್ಯದ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡೋದು ನನ್ನ ಕರ್ತವ್ಯ. ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಮಾಡ್ತೇನೆ. ಒಂದು ತಿಂಗಳ ಹಿಂದೆ ಶಿಕಾರಿಪುರ ಕಾರ್ಯಕರ್ತರು ಈ ಬಗ್ಗೆ ಮನವಿ ಮಾಡಿದ್ದರು. ಅದಕ್ಕೆ ಯಡಿಯೂರಪ್ಪ ಅವರು ಈ ತೀರ್ಮಾನ ಮಾಡಿದ್ದಾರೆ ಎಂದು ವಿವರಿಸಿದರು.

    ಯಡಿಯೂರಪ್ಪ ತಮ್ಮ ಕ್ಷೇತ್ರವನ್ನು ನಿಮಗೆ ಬಿಟ್ಟುಕೊಟ್ಟು ನಿವೃತ್ತಿಯಾಗುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಇಲ್ಲ. ಯಡಿಯೂರಪ್ಪ ಅವರ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ. ಯಡಿಯೂರಪ್ಪ ಅವರು ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಹಾಕುತ್ತಾರೆ ಎಂದು ಸಂತಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: Bundelkhand Expressway; ಒಂದು ವಾರಕ್ಕೇ ಮಳೆಗೆ ಗುಂಡಿ ಬಿತ್ತು ಪ್ರಧಾನಿ ಮೋದಿ ಉದ್ಘಾಟಿಸಿದ್ದ ರಸ್ತೆ

    Live Tv
    [brid partner=56869869 player=32851 video=960834 autoplay=true]

  • ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ: ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ

    ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ: ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ

    ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಪುತ್ರನಿಗಾಗಿ ತಮ್ಮ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಎಸ್‌ವೈ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಶಿಕಾರಿಪುರದಲ್ಲಿ ನಿಲ್ಲುತ್ತಿಲ್ಲ. ವಿಜಯೇಂದ್ರ ಅವರೇ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ. ಬಹಳ ದೊಡ್ಡ ಅಂತರದಲ್ಲಿ ಅವನನ್ನು ಗೆಲ್ಲಿಸಿಕೊಡಬೇಕು ಅಂತಾ ಶಿಕಾರಿಪುರ ಜನತೆಯಲ್ಲಿ‌ ಕೈಜೋಡಿಸಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು

    ಹಳೆ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಇದೆ. ಆದರೆ ನಾನು ಕ್ಷೇತ್ರ ಖಾಲಿ ಮಾಡುತ್ತಿರುವುದರಿಂದ ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಲಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಐವರು ಖತರ್ನಾಕ್ ಕಳ್ಳರು ಅರೆಸ್ಟ್- 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಐವರು ಖತರ್ನಾಕ್ ಕಳ್ಳರು ಅರೆಸ್ಟ್- 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ 16 ಪ್ರಕರಣಗಳನ್ನು ಬೇಧಿಸಿ 774 ಗ್ರಾಂ ಚಿನ್ನ, 4 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು 27,28,721 ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಲ್ಲಿ ಕಳುವಾದ ಮಾಲು ಸಮೇತ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಚಿತ್ರದುರ್ಗ ಹಾಗೂ ಬೆಂಗಳೂರು ಮೂಲದವರಾಗಿದ್ದು, ಬಂಧಿತರನ್ನು ಮಂಜುನಾಥ್, ರಂಗನಾಥ, ವೆಂಕಟೇಶ, ಶಶಿಕುಮಾರ, ರಾಜೇಶ, ಗವಿರಾಜ, ರಾಜಪ್ಪ ಹಾಗೂ ಲೋಕೇಶ್ ಎಂದು ಗುರುತಿಸಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೆ, ಬೇರೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಚಿಕ್ಕಮಗಳೂರು ಕಾರಾಗೃಹದಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.

    ಆರೋಪಿಗಳ ಬಂಧನದಿಂದ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯಲ್ಲಿ 4, ಶಿಕಾರಿಪುರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ 4, ಸೊರಬ ಠಾಣಾ ವ್ಯಾಪ್ತಿಯಲ್ಲಿ 2 ಹಾಗೂ ಆನವಟ್ಟಿ ಠಾಣಾ ವ್ಯಾಪ್ತಿಯಲ್ಲಿ 6 ಮನೆಗಳ್ಳತನ ಸೇರಿದಂತೆ ಒಟ್ಟು 16 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ಹುಂಡೈ ಕಾರು ಹಾಗೂ ಟಾಟಾ ಏಸ್ ಲಗೇಜ್ ಆಟೋವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    – ಲೋಕಲ್ ಎಲೆಕ್ಷನ್ ನಲ್ಲಿ ಬಿಎಸ್‍ವೈಗೆ ಮುಖಭಂಗ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಳೆದ ಮೂರು ದಶಕಗಳಿಂದ ಇದ್ದ ಬಿಜೆಪಿ ಅಧಿಕಾರ ಅಂತ್ಯಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಯಡಿಯೂರಪ್ಪ ಲೋಕಲ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

    ಇಂದು ಪ್ರಕಟಗೊಂಡ ಪುರಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ದಯಾನೀಯ ಸೋಲು ಕಂಡಿದ್ದಾರೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಇಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ.

    ಜಿಲ್ಲೆಯಲ್ಲಿ ಚುನಾವಣೆ ನಡೆದ ಐದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಎರಡಲ್ಲಿ ಅಧಿಕಾರ ಹಿಡಿದರೆ ಒಂದರಲ್ಲಿ ಕಾಂಗ್ರೆಸ್, ಇನ್ನು ಎರಡರಲ್ಲಿ ಮೈತ್ರಿಕೂಟ ಅಧಿಕಾರ ಹಿಡಿದಿವೆ. ಇದೂವರೆಗೂ ಕಾಂಗ್ರೆಸ್ ವಶದಲ್ಲಿದ್ದ ಸಾಗರ ಪುರಸಭೆ ಈಗ ಬಿಜೆಪಿ ವಶವಾಗಿದೆ. ಸಾಗರ ನಗರಸಭೆಯ ಒಟ್ಟು ಸ್ಥಾನ 31 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗೆದ್ದು, ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರರು 5ಸ್ಥಾನದಲ್ಲಿ ಗೆದ್ದಿದ್ದಾರೆ.

    ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಲ್ಲಿ ಬಿಜೆಪಿ 2, ಜೆಡಿಎಸ್ 3, ಕಾಂಗ್ರೆಸ್ 7, ಪಕ್ಷೇತರರು 5 ಸ್ಥಾನದಲ್ಲಿ ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿದಿದೆ.

    ಅಧಿಕಾರ ಮೈತ್ರಿಗೆ
    ಸೊರಬ ಪಟ್ಟಣ ಪಂಚಾಯ್ತಿಯ 12 ಸ್ಥಾನಗಳಲ್ಲಿ ಬಿಜೆಪಿ 6 ಗೆದ್ದಿದ್ದು, ಒಂದು ಎಂಎಲ್‍ಎ ಹಾಗೂ ಒಂದು ಎಂಪಿ ಮತ ಪಡೆದು ಬಹುಮತದಿಂದ ಪಂಚಾಯ್ತಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 4, ಜೆಡಿಎಸ್ 1, ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಹೊಸನಗರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದಿದೆ. ಕಾಂಗ್ರೆಸ್ 4, ಜೆಡಿಎಸ್ 3 ಸ್ಥಾನಗಳನ್ನು ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿಯಲಿದೆ.

  • ಬಳ್ಳಾರಿ, ಜಮಖಂಡಿ, ಮಂಡ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳು ರೆಡಿ- ಬಿಎಸ್‍ವೈ

    ಬಳ್ಳಾರಿ, ಜಮಖಂಡಿ, ಮಂಡ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳು ರೆಡಿ- ಬಿಎಸ್‍ವೈ

    -ರಾಮನಗರ ಅಭ್ಯರ್ಥಿಯ ಹೆಸ್ರು ಇನ್ನೂ ರಹಸ್ಯ

    ಶಿವಮೊಗ್ಗ: ಲೋಕಸಭಾ ಉಪಚುನಾವಣೆಗೆ ಬಳ್ಳಾರಿ ಜೆ. ಶಾಂತ, ಜಮಖಂಡಿಯಲ್ಲಿ ಶ್ರೀಕಾಂತ್ ಕುಲಕರ್ಣಿ, ಮಂಡ್ಯದಲ್ಲಿ ಡಾ. ಸಿದ್ಧರಾಮಯ್ಯರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಬಳ್ಳಾರಿಯಿಂದ ಜೆ. ಶಾಂತ, ಜಮಖಂಡಿಯಲ್ಲಿ ಶ್ರೀಕಾಂತ್ ಕುಲಕರ್ಣಿ ಹಾಗೂ ಮಂಡ್ಯದಲ್ಲಿ ಡಾ. ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಎದುರು ನಾಳೆ, ನಾಡಿದ್ದರಲ್ಲಿಯೇ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಅಂತ ಸ್ಪಷ್ಟಪಡಿಸಿದ್ರು.

    ದೂರದೃಷ್ಟಿ ಇಲ್ಲದೇ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ. 20 ದಿನಗಳಲ್ಲಿ ಐದು ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕಿದೆ. ಯಾವ ರೀತಿ ಯಡಿಯೂರಪ್ಪ ಅವರನ್ನು ಗೆಲ್ಲಿಸಿದ್ದಿರೋ ಅದೇ ರೀತಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ. 50 ಸಾವಿರಕ್ಕೂ ಹೆಚ್ಚು ಮತಗಳಿಂದ ರಾಘವೇಂದ್ರರನ್ನು ಗೆಲ್ಲಿಸಿ ಎಂದು ಬಿಎಸ್‍ವೈ ಅವರು ಜನತೆಯಲ್ಲಿ ಮನವಿ ಮಾಡಿಕೊಂಡರು.

    ನಮ್ಮ ವಿರುದ್ಧದ ಅಭ್ಯರ್ಥಿ ಬಗ್ಗೆ ಮಾತನಾಡುವವರ ಹೆಸರು ಹೇಳುವ ಅಗತ್ಯವಿಲ್ಲ. ಪ್ರತಿ ಬೂತ್ ನಲ್ಲಿ ಶೇ. 70 ಕ್ಕಿಂತ ಮತಗಳು ಕಡಿಮೆ ಬರಬಾರದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು. ಬರುವ ಒಂದು ವರ್ಷದಲ್ಲಿ ಕ್ಷೇತ್ರದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಆರಂಭಿಸುವುದು ನನ್ನ ಜವಾಬ್ದಾರಿ. ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವುದು ನಮ್ಮ ಸಂಕಲ್ಪ ಅಂತ ಅವರು ಹೇಳಿದ್ರು.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ. ಇತ್ತ ಶಾಸಕ ಸಿದ್ದು ನ್ಯಾಮೆಗೌಡ ಅಕಾಲಿಕ ನಿಧನ ಮತ್ತು ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೂ ಇದೇ ವೇಳೆ ಉಪ ಚುನಾವಣೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv