Tag: Shiggaon

  • 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್- ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ

    50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್- ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ

    ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ (College) ಅನುಮತಿ ನೀಡಿದ್ದು, ಅದರಲ್ಲಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ.

    ರಾಜ್ಯ ಸರ್ಕಾರವು ನೂತನವಾಗಿ ಮಂಜೂರು ಮಾಡಿದ ಕಾಲೇಜುಗಳ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತವರು ಜಿಲ್ಲೆ ಹಾವೇರಿ (Haveri) ಹಾಗೂ ತವರು ಕ್ಷೇತ್ರ ಶಿಗ್ಗಾಂವಿಗೆ (Shiggaon) ಭರ್ಜರಿ ಕಾಲೇಜುಗಳ ಕೊಡುಗೆ ನೀಡಲಾಗಿದೆ. ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ. ಈ 12ರ ಪೈಕಿ 9 ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನೀಡಲಾಗಿದೆ.

    ನೂತನವಾಗಿ ಮಂಜೂರಾದ ಕಾಲೇಜುಗಳಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಗೋಳ ಗ್ರಾಮ, ಹಿರೆಮುಗದೂರು, ಅಲ್ಲಿಪೂರ ಹಾಗೂ ಶಿಗ್ಗಾಂವಿಯ ಬಂಕಾಪುರ, ಕೋಣನಕೇರಿ, ಹಿರೇಬೆಂಡಿಗೇರಿ, ಹೊಸೂರು-ಯತ್ನಳ್ಳಿ, ಬಸವನಾಳ ಸೇರಿವೆ. ಇದನ್ನೂ ಓದಿ: ಶಶಿ ತರೂರ್‌ಗೆ ಕೇರಳದಲ್ಲೇ ಸಿಕ್ತಿಲ್ಲ ಬೆಂಬಲ – ರಾಹುಲ್ ಸ್ಪರ್ಧಿಸುವಂತೆ ಒತ್ತಾಯ

    ಇನ್ನುಳಿದಂತೆ ಉತ್ತರ ಕನ್ನಡ 2, ಕೊಪ್ಪಳ 9, ಮೈಸೂರು 2, ಚಿತ್ರದುರ್ಗ 1, ರಾಯಚೂರು 3, ಯಾದಗಿರಿ 2, ದಾವಣಗೆರೆ 4, ಕಲಬುರಗಿ 2, ವಿಜಯಪುರ 3, ಬೆಳಗಾವಿ 7, ಬಾಗಲಕೋಟೆ 2, ಹಾಗೂ ಬೆಂಗಳೂರು ದಕ್ಷಿಣಕ್ಕೆ ಒಂದು ಕಾಲೇಜನ್ನು ಮಂಜೂರು ಮಾಡಲಾಗಿದೆ. ಇದನ್ನೂ ಓದಿ: ಆಟೋ ಸಂಸ್ಥೆಯೊಂದರ ಸಿಇಒಗೆ ಬೆದರಿಕೆಯೊಡ್ಡಿದ ಡಿಎಂಕೆ ಶಾಸಕನ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಹಾವೇರಿ: ಸಿಎಂ ತವರು ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಅಲ್ಲಿ ಗುಂಡಿನ ಸದ್ದು ಮೊಳಗಿತ್ತು. ಪ್ರಕರಣದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿತ್ರಮಂದಿರದಲ್ಲಿ ಫೈರಿಂಗ್ ಮಾಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ.

    ಅದು ಏಪ್ರಿಲ್ 19, ಸಮಯ ರಾತ್ರಿ ಸುಮಾರು 10 ಗಂಟೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ತಾಲೂಕಿನ ಮುಗಳಿ ಗ್ರಾಮದ ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.

    ತಕ್ಷಣವೇ ಗಾಯಾಳಿಗೆ ಶಿಗ್ಗಾಂವಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಲೂ ವಸಂತ್ ಕುಮಾರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ದರು.

    ಚಿತ್ರಮಂದಿರದಲ್ಲಿ ಕತ್ತಲು ಕಳೆದು ಬೆಳಕು ಹಚ್ಚುವುದರೊಳಗೆ ಗುಂಡು ಹಾರಿಸಿದ್ದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಹೀಗಾಗಿ ಆರೋಪಿಯನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಆದರೂ ತನಿಖೆಗೆ ಇಳಿದಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ್ ಅಲಿಯಾಸ್ ಸಂತೋಷ್ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂದು ಗುರುತು ಪತ್ತೆ ಮಾಡಿದರು. ಆದರೆ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದಂತೆ ಗೋವಾ, ಮಹಾರಾಷ್ಟ್ರ ಎಂಬಂತೆ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಆರೋಪಿಯ ಹೆಡೆಮುರಿ ಕಟ್ಟಲೇಬೇಕು ಎಂದು ಆತನ ಬೆನ್ನು ಬಿದ್ದಿದ್ದ ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ, ಕೊನೆಗೂ ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

    ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಗುರುವಾರ(ಮೇ 19) ಬೆಳ್ಳಂಬೆಳಗ್ಗೆ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಘಟನೆ ಬಳಿಕ ಮಂಜುನಾಥ್‌ಗೆ ಪರಾರಿಯಾಗಲು ನೆರವು ನೀಡಿದ್ದ ಬಂಕಾಪುರ ಪಟ್ಟಣದ ನಿವಾಸಿ ಇಸ್ಮಾಯಿಲ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

    ಚಿತ್ರಮಂದಿರದಲ್ಲಿ ಗಾಯಗೊಂಡಿದ್ದ ವಸಂತ್ ಕುಮಾರ್ ಹಾಗೂ ಆತನ ಸ್ನೇಹಿತರು ಚಿತ್ರವೀಕ್ಷಣೆ ವೇಳೆ ಅವರು ಕುಳಿತಿದ್ದ ಮುಂದಿನ ಸೀಟು ಖಾಲಿ ಇತ್ತು. ಖಾಲಿ ಸೀಟಿನ ಮೇಲೆ ಕಾಲಿಟ್ಟು ಕುಳಿತಿದ್ದ ಅವರಿಗೆ ಆರೋಪಿ ಮಂಜುನಾಥ್ ತಾಕೀತು ಮಾಡಿದ್ದ. ಆಗ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಆರೋಪಿ ಮಂಜುನಾಥ್ ಕೆಲವು ನಿಮಿಷಗಳ ಕಾಲ ಚಿತ್ರಮಂದಿರದಿಂದ ಹೊರಗೆ ಹೋಗಿ ಮತ್ತೆ ಒಳಗೆ ಬಂದು ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಿ ಪರಾಯಾಗಿದ್ದ. ಘಟನೆಯಲ್ಲಿ ವಸಂತ್ ಕುಮಾರ್ ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿದ್ದವು. ಶೂಟೌಟ್ ಪ್ರಕರಣದ ಆರೋಪಿ ಬಂಧನದಿಂದ ಶಿಗ್ಗಾಂವಿ ಪಟ್ಟಣ ಹಾಗೂ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಗೃಹ ಬಂಧನ – ಪತಿ ಅತ್ತೆ, ಮಾವ ಅರೆಸ್ಟ್

    ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಗೃಹ ಬಂಧನ – ಪತಿ ಅತ್ತೆ, ಮಾವ ಅರೆಸ್ಟ್

    – ಊಟ ನೀಡದೇ ಮಾನಸಿಕ, ದೈಹಿಕ ಕಿರುಕುಳ

    ಹಾವೇರಿ: ಪತಿ ಹಾಗೂ ಆತನ ಮನೆಯವರಿಂದ ಪ್ರತಿದಿನ ಕಿರುಕುಳ ಹಾಗೂ ಮಾನಸಿಕ ದೈಹಿಕ ಹಲ್ಲೆಗೊಳಗಾದ ಗೃಹಿಣಿ ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲಿರುವ ಘಟನೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಂಕದ ಕಣದ ನಿವಾಸಿ ಜ್ಯೋತಿ ಶಡಗರವಳ್ಳಿ ಕಿರುಕುಳಕ್ಕೆ ಒಳಗಾಗಿರುವ ಗೃಹಿಣಿ.

    ನಾಲ್ಕು ವರ್ಷಗಳ ಹಿಂದೆ ಸವಣೂರ ಪಟ್ಟಣದ ಜ್ಯೋತಿ ಬಂಕಾಪುರದ ಶಂಭಾಜಿ ಶಡಗರವಳ್ಳಿ ಯೊಡನೆ ವಿವಾಹವಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಎಂಬ ಕಾರಣದಿಂದ ಕೆಲ ತಿಂಗಳಿನಿಂದ ಪತಿ ಹಾಗೂ ಆತನ ತಂದೆ ತಾಯಿಯ ಸೇರಿ ಗೃಹಿಣಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಾ ಬಂದಿದ್ದಾರೆ. ಶನಿವಾರ ಪತಿ ಹಾಗೂ ಆತನ ತಂದೆ ದುರಗಪ್ಪ, ಆತನ ತಾಯಿ ತಾರಾಬಾಯಿ ಸೇರಿಕೊಂಡು ಜ್ಯೋತಿಯ ಕ್ಷುಲ್ಲಕ ಕಾರಣಕ್ಕೆ ಆವಾಚ್ಯ ಪದಗಳಿಂದ ನಿಂದಿಸಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ.

    ಜ್ಯೋತಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರದಲ್ಲಿ ಆರು ತಿಂಗಳಿನಿಂದ ಪತಿ, ಅತ್ತೆ ಮತ್ತು ಮಾವ ಸೇರಿಕೊಂಡು ಆಕೆಯನ್ನ ಗೃಹಬಂಧನದಲ್ಲಿ ಇರಿಸಿದ್ದಾರೆ. ಸರಿಯಾಗಿ ಊಟ, ನೀರು ಕೊಡದೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದಾರೆ. ಹೆಣ್ಣು ಮಗು ಜನಿಸಿದೆ ಅನ್ನೋದು ಮತ್ತು ತವರುಮನೆಯಿಂದ ವರದಕ್ಷಿಣೆ ತರುವಂತೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ತಡರಾತ್ರಿ ಆಗುತ್ತಿದ್ದಂತೆ ಜ್ಯೋತಿಯನ್ನ ನೀರು ತರೋಕೆ ಕಳಿಸುತ್ತಿದ್ದರಂತೆ. ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಜರ್ಜರಿತಗೊಂಡಿದ್ದ ಜ್ಯೋತಿ ಕಳೆದ ಕೆಲವು ದಿನಗಳ ಹಿಂದೆ ತಡರಾತ್ರಿ ನೀರು ತರ್ತಿರೋದನ್ನ ಸ್ಥಳೀಯರು ಗಮನಿಸಿದ್ದಾರೆ. ಸ್ಥಳೀಯರು ಜ್ಯೋತಿಯನ್ನ ಗಮನಿಸಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪ ಆಕೆಯನ್ನ ಮನೆಗೆ ಕರೆತಂದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜ್ಯೋತಿಯನ್ನ ಕೊಲೆ ಮಾಡೋಕೆ ಯತ್ನ ಮಾಡಿದ್ದಾರೆ. ಆಗ ಕೂಗಾಟ, ಚೀರಾಟದ ಮೂಲಕ ಜ್ಯೋತಿ ಮನೆಯಿಂದ ಹೊರಗೆ ಓಡಿ ಬಂದಿದ್ದಾg.

    ಸ್ಥಳೀಯರು ಹಾವೇರಿಯ ಸ್ವಧಾರ ಮಹಿಳಾ ಸಾಂತ್ವನ ಕೇಂದ್ರದವರು ಹಾಗೂ ಬಂಕಾಪುರ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸ್ವಧಾರ ಕೇಂದ್ರದವರು ಹಾಗೂ ಪೊಲೀಸರು ಜ್ಯೋತಿಗೆ ಗೃಹಬಂಧನದಿಂದ ಮುಕ್ತಿ ಕೊಡಿಸಿ ರಕ್ಷಣೆ ಮಾಡಿದ್ದಾರೆ. ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸ್ವಧಾರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಇನ್ನು ಜ್ಯೋತಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಗೃಹಬಂಧನದಲ್ಲಿಟ್ಟ ಜ್ಯೋತಿಯ ಪತಿ ಶಂಭಾಜಿ, ಅತ್ತೆ ತಾರಾಬಾಯಿ ಮತ್ತು ಮಾವ ದುರಗಪ್ಪನನ್ನ ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

  • ಜ್ಞಾನ ದೀವಿಗೆ ಅಭಿಯಾನ- ತಮ್ಮ ಹುಟ್ಟೂರಿನ 500 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಸುಧಾಮೂರ್ತಿ

    ಜ್ಞಾನ ದೀವಿಗೆ ಅಭಿಯಾನ- ತಮ್ಮ ಹುಟ್ಟೂರಿನ 500 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಸುಧಾಮೂರ್ತಿ

    ಹಾವೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಇನ್ಫೋಸಿಸ್ ಪೌಂಡೇಶನ್ ಕೈ ಜೋಡಿಸಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನೀಡಿದ ಟ್ಯಾಬ್‍ಗಳನ್ನು ಇಂದು ಜಿಲ್ಲೆಯ ಶಿಗ್ಗಾಂವ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

    ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾವಿರಾರು ದಾನಿಗಳು ಕೈ ಜೋಡಿಸಿದ್ದಾರೆ. ಅದೇ ರೀತಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಣೆ ಅಭಿಯಾನಕ್ಕೆ ಇನ್ಫೋಸಿಸ್ ಫೌಂಡೇಶನ್ ಕೈ ಜೋಡಿಸಿ 500 ವಿದ್ಯಾರ್ಥಿಗಳಿಗೆ ಟ್ಯಾಬ್ ದೇಣಿಗೆ ನೀಡಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ದೇಣಿಗೆ ನೀಡಿದ 250 ಟ್ಯಾಬ್‍ಗಳನ್ನು ಇಂದು ವಿತರಿಸಲಾಯಿತು.

    ಸುಧಾಮೂರ್ತಿಯವರ ಹುಟ್ಟೂರು ಶಿಗ್ಗಾಂವ, ಹೀಗಾಗಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂದು ಮೊದಲ ಹಂತದಲ್ಲಿ 91 ಟ್ಯಾಬ್ ವಿತರಣೆ ಮಾಡಲಾಯಿತು. ಶಿಗ್ಗಾಂವ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 50, ಶಿಗ್ಗಾಂವ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 67 ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 64 ಮಕ್ಕಳಿಗೆ ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನಪ್ಪ ವಡಿಗೇರಿ, ಶಿಗ್ಗಾಂವನ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

    ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಡಿಡಿಪಿಐ ಅಂದಾನಪ್ಪ ವಡಿಗೇರ, ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಆಧುನಿತ ತಂತ್ರಜ್ಞಾನದ ಬಳಸಿ ಶಿಕ್ಷಣ ನೀಡಲು ಮುಂದಾಗಿರುವುದು ಶಾಘ್ಲಂನೀಯ. ಈ ಅಭಿಯಾನದ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಸಹಕಾರಿಯಾಗಲಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಉನ್ನತ ಸ್ಥಾನಕ್ಕೆ ಬೆಳೆದರೂ ಹುಟ್ಟೂರು ಮರೆತಿಲ್ಲ. ತಾವು ಹುಟ್ಟಿ ಬೆಳೆದ ಶಿಗ್ಗಾಂವ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ದೇಣಿಗೆ ನೀಡಿದ್ದಾರೆ ಎಂದರು.

    ಮಕ್ಕಳಿಗೆ ಟ್ಯಾಬ್ ವಿತರಿಸಿದ ಬಳಿಕ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ಮಾತನಾಡಿ, ಕೋವಿಡ್ ವೇಳೆ ಶಾಲೆಗಳು ಬಂದ್ ಆದಾಗ ಮಕ್ಕಳಿಗೆ ಟ್ಯಾಬ್ ಮೂಲಕ ಸಿದ್ಧ ಪಠ್ಯಪೊರೈಸುವ ಮೂಲಕ ಮಕ್ಕಳು ಮನೆಯಲ್ಲೇ ಕುಳಿತು ಪಾಠ ಕಲಿಯಲು ಟ್ಯಾಬ್ ಅಭಿಯಾನ ಆರಂಭಿಸಿರುವುದು ನಿಜಕ್ಕೂ ಮಹಾಯಜ್ಞವಾಗಿದೆ. ಪಬ್ಲಿಕ್ ಟಿವಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಗ್ಗಾಂವ, ಹಿರೇಮಣಕಟ್ಟಿ, ಹಿರೇಬೆಂಡಿಗೇರಿ ಗ್ರಾಮದ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.