Tag: Shia Waqf

  • ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

    ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

    – ರಾಮಲಲ್ಲಾಗೆ ಅಯೋಧ್ಯೆ ಭೂಮಿ ಒಡೆತನ
    – ಮಸೀದಿಗೆ 5 ಎಕರೆ ಪರ್ಯಾಯ ಭೂಮಿ
    – 3 ತಿಂಗಳಲ್ಲಿ ಟ್ರಸ್ಟ್ ಸ್ಥಾಪನೆಗೆ ಸುಪ್ರೀಂಕೋರ್ಟ್ ಆದೇಶ
    – ಸುನ್ನಿ, ನಿರ್ಮೋಹಿ ಅಖಾಡ ಅರ್ಜಿ ವಜಾ
    – ಮಸೀದಿ ಧ್ವಂಸ ಕಾನೂನು ಉಲ್ಲಂಘನೆ ಎಂದ ಕೋರ್ಟ್

    ನವದೆಹಲಿ: ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿ, ಸುಮಾರು 5 ಶತಮಾನಗಳ ವಿವಾದಕ್ಕೆ ಷರಾ ಬರೆದಿದೆ.

    ರಾಮಜನ್ಮಭೂಮಿ ರಾಮನಿಗಷ್ಟೇ. ಸರ್ಕಾರದ ಟ್ರಸ್ಟಿಗೆ ಸೇರಬೇಕು. ಈ ಟ್ರಸ್ಟ್ ದೇವಾಲಯ ನಿರ್ಮಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಎಸ್.ಎ. ಬೋಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ತೀರ್ಪು ನೀಡಿದೆ.

    1,045 ಪುಟಗಳ ತೀರ್ಪನ್ನು ನ್ಯಾಯಪೀಠ ಸುಮಾರು 45ರಿಂದ 50 ನಿಮಿಷ ಕಾಲ ಓದಿ ಹೇಳಿದೆ. ವಿಶೇಷ ಅಂದ್ರೆ, ಐವರು ನ್ಯಾಯಮೂರ್ತಿಗಳು 5:0 ಅನುಪಾತದಲ್ಲಿ ಅಂದರೆ ಸರ್ವಾನುಮತದಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಧೀಶರು ತೀರ್ಪು ಓದುತ್ತಿದ್ದರೆ ಇಡೀ ಕೋರ್ಟ್ ಹಾಲ್‍ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಶತಕೋಟಿ ಭಾರತೀಯ ಚಿತ್ತ ಸುಪ್ರೀಂಕೋರ್ಟಿನತ್ತ   ಕೇಂದ್ರೀಕೃತವಾಗಿತ್ತು.

    ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಇವತ್ತು ಪುರಾತತ್ವ ಇಲಾಖೆಯ ಸಂಶೋಧನೆಗಳೇ ಹೆಚ್ಚಾಗಿ ಪ್ರಸ್ತಾಪವಾಗಿವೆ. ಸ್ವಾತಂತ್ರ್ಯ ಭಾರತದಲ್ಲಿ ರಾಮಮಂದಿರಕ್ಕೆ ವೈಜ್ಞಾನಿಕ ಪುರಾವೆ ಒದಗಿಸಿದ, ದೇಗುಲ ಮಾದರಿಯ ಕಟ್ಟಡ ರಚನೆ ಹುಡುಕಿದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಯೂ ಪುರಾತತ್ವ ಇಲಾಖೆಗೆ ಸಲ್ಲಬೇಕು. ಪುರಾತತ್ವ ಇಲಾಖೆಯ ವರದಿಗಳನ್ನೂ ಇದೀಗ ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ. ಜೊತೆಗೆ, ಪುರಾತತ್ವ ಇಲಾಖೆಯ ಶೋಧನೆಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಇದನ್ನೂ ಓದಿ:ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ಬಾಬ್ರಿ ಮಸೀದಿಯನ್ನು ಖಾಲಿ ಜಮೀನಿನಲ್ಲಿ ನಿರ್ಮಿಸಿದ್ದಲ್ಲ, ಅಲ್ಲಿ ದೊಡ್ಡ ಕಟ್ಟಡವಿತ್ತು. ಆ ಕಟ್ಟಡವು ಇಸ್ಲಾಮಿಕ್ ಮೂಲದ್ದಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ. ಹೀಗಾಗಿ ಬಾಬರಿ ಮಸೀದಿ ಕಟ್ಟಡದ ಅಡಿಯಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು ಎಂಬುದು ನಿಸ್ಸಂಶಯ. ಈ ಮೂಲಕ, ಶತಮಾನಗಳ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಹಿಂದೂಗಳ ಐತಿಹಾಸಿಕ ನಂಬಿಕೆ, ಧಾರ್ಮಿಕ ನಂಬಿಕೆ, ಪೌರಾಣಿಕ ಸಾಕ್ಷ್ಯಗಳಿಗೆ ಬಲ ಸಿಕ್ಕಿದೆ. ಸರಯೂ ನದಿ ತೀರದಲ್ಲಿದ್ದ ಶ್ರೀರಾಮಮಂದಿರ ಮತ್ತೊಮ್ಮೆ ಭವ್ಯವಾಗಿ ತಲೆ ಎತ್ತಲು ಈ ತೀರ್ಪು ಸಹಕಾರಿಯಾಗಿದೆ. ಸುಪ್ರೀಂ ಕೋರ್ಟ್‍ನ ಈ ತೀರ್ಪಿಗೆ ಬೆನ್ನೆಲುಬಾಗಿ ನಿಂತಿರೋದು ಪುರಾತತ್ವ ಇಲಾಖೆಯ ಸಂಶೋಧನೆ ಅನ್ನೋದು ಮಾತ್ರ ನಿಸ್ಸಂಶಯ.

    `ಪುರಾತತ್ವ’ ಆಧಾರ:
    ಅಯೋಧ್ಯೆಯ ಮಹಾರಾಜ ದಶರಥನ ಮಗನಾದ ಶ್ರೀರಾಮ, ಭಗವಾನ್ ವಿಷ್ಣುವಿನ ಮನುಷ್ಯ ರೂಪ ಅನ್ನೋದು ಧಾರ್ಮಿಕ ನಂಬಿಕೆ. ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಅವತಾರವಾಯ್ತು. ಸರಯೂ ನದಿ ತೀರದಲ್ಲಿ ಅಯೋಧ್ಯಾ ನಗರಿ ಹರಡಿಕೊಂಡಿತ್ತು ಎಂಬ ಮಾಹಿತಿ ರಾಮಾಯಣದಲ್ಲಿ ಪ್ರಸ್ತಾಪವಾಗುತ್ತೆ. ಈ ಪೌರಾಣಿಕ ಕಥೆ ನಿಜವೆನ್ನಲು ಸಾಕ್ಷಿಯಾಗಿ ಅಯೋಧ್ಯೆಯಲ್ಲಿ ಸರಯೂ ನದಿ ತೀರದಲ್ಲಿ ಶ್ರೀರಾಮ ಮಂದಿರವಿತ್ತು ಅನ್ನೋದು ವಾದ. ಆದ್ರೆ, ಈ ವಾದಕ್ಕೆ ಆಧುನಿಕ ಸಂಶೋಧನೆ ಹಾಗೂ ವೈಜ್ಞಾನಿಕ ಸಾಕ್ಷ್ಯ ಇರಲಿಲ್ಲ. 1976ರಲ್ಲಿ ಮೊದಲ ಬಾರಿಗೆ ಮಂದಿರವೊಂದರ ಇರುವಿಕೆಗೆ ಸಾಕ್ಷ್ಯ ಲಭ್ಯವಾಗಿತ್ತು. ಇದನ್ನೂ ಓದಿ:ಅಶೋಕ್ ಸಿಂಘಾಲ್‍ಗೆ ‘ಭಾರತ ರತ್ನ’ ನೀಡಿ: ಸುಬ್ರಮಣಿಯನ್ ಸ್ವಾಮಿ

    ಮಸೀದಿ ಬುಡ ಕೆದಕಿತ್ತು
    1973ರಲ್ಲಿ ರಾಮಾಯಣ ಕಾಲದ ಪುರಾತತ್ವ ಸಾಕ್ಷ್ಯಗಳನ್ನು ಸಂಗ್ರಹ ಯೋಜನೆ ಆರಂಭಗೊಂಡಿತ್ತು. ರಾಮ ಜನ್ಮಭೂಮಿ ಸೇರಿದಂತೆ 7 ಕಡೆ ಪುರಾತತ್ವ ಇಲಾಖೆ ಉತ್ಖನನ ನಡೆಸಿತ್ತು. 1976-77ರಲ್ಲಿ ಅಯೋಧ್ಯೆಯಲ್ಲಿ ಪುರಾತತ್ವ ಇಲಾಖೆ ಉತ್ಖನನ ಕಾರ್ಯ ಶುರುವಾಗಿತ್ತು. ಅಂದಿನ ಪುರಾತತ್ವ ಇಲಾಖೆಯ ಮಹಾನಿರ್ದೇಶಕ ಬಿ. ಬಿ. ಲಾಲ್, ಉತ್ಖನನ ಕಾರ್ಯದ ನೇತೃತ್ವ ವಹಿಸಿದ್ದರು. ಲಾಲ್ ಅವರಿಗೆ ಮೂವರು ಪುರಾತತ್ವ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದರು. ಜೊತೆಗೆ ಟ್ರೈನಿ ಅಧಿಕಾರಿಯಾಗಿ ಕೆ.ಕೆ. ಮುಹಮ್ಮದ್ ಎಂಬುವರೂ ಭಾಗಿಯಾಗಿದ್ದರು.

    ಉತ್ಖನನದ ವೇಳೆ ಹಿಂದೂ ಧರ್ಮೀಯರ ದೇಗುಲಗಳಲ್ಲಿರುವ ಕಂಬಗಳು ಪತ್ತೆಯಾಗಿತ್ತು. ಈ ಕಂಬಗಳನ್ನು ಬುನಾದಿಯಾಗಿಸಿಕೊಂಡು ಮಸೀದಿ ನಿರ್ಮಾಣವಾಗಿತ್ತು. ಕಂಬಗಳನ್ನು ಕಡೆದಿದ್ದ ರೀತಿ, ದೇಗುಲ ನಿರ್ಮಿಸಲು ಬಳಸಿದ್ದ ವಸ್ತು, ಶೈಲಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ್ದ ಪುರಾತತ್ವ ಇಲಾಖೆ ಇಲ್ಲಿ ಹಿಂದೂ ದೇಗುಲವಿತ್ತು ಎಂದು ಹೇಳಿತ್ತು. ಅಲಹಾಬಾದ್ ಹೈಕೋರ್ಟ್ ಕೂಡವಿವಾದಿತ ಜಾಗದಲ್ಲಿ ಉತ್ಖನನಕ್ಕೆ ಆದೇಶಿಸಿತ್ತು. ವಿಸ್ತೃತವಾಗಿ ಶೋಧ ನಡೆಸಿದ್ದ ಎಎಸ್‍ಐ, ತನ್ನ ನಿಲುವನ್ನು ಕೋರ್ಟ್ ಮುಂದಿಟ್ಟಿತ್ತು

    ವರದಿಯಲ್ಲಿ ಏನಿತ್ತು?
    ಈ ಜಾಗದಲ್ಲಿ ಹಿಂದೂ ದೇಗುಲ ಇತ್ತು ಅನ್ನೋದು ನಿಸ್ಸಂಶಯ. ವಿವಾದಿತ ಕಟ್ಟಡದ ಅಡಿಯಲ್ಲಿದ್ದ ಬೃಹತ್ ಕಟ್ಟಡದ ಪುರಾತತ್ವ ಸಾಕ್ಷ್ಯಗಳನ್ನು ಪರಿಗಣಿಸಿದರೆ, ಹತ್ತನೆಯ ಶತಮಾನದಿಂದ ಆರಂಭಿಸಿ ವಿವಾದಿತ ಕಟ್ಟಡ ನಿರ್ಮಾಣವಾಗುವವರೆಗಿನ ರಚನೆಯ ಹಂತಗಳ ನಿರಂತರತೆಯನ್ನು ಗಮನಿಸಿದರೆ, ಶಿಲೆ, ಅಲಂಕೃತ ಇಟ್ಟಿಗೆಗಳು ಹಾಗೂ ವಿರೂಪಗೊಂಡ ಗಂಡು-ಹೆಣ್ಣಿನ ಮೂರ್ತಿಯನ್ನು ಪರಿಗಣಿಸಿದರೆ, ಇವು ಉತ್ತರ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವ ಗುಣಲಕ್ಷಣಗಳಿರುವ ಅವಶೇಷಗಳನ್ನು ಸೂಚಿಸುತ್ತವೆ ಎಂದು ಎಎಸ್‍ಐ ತನ್ನ ವರದಿಯಲ್ಲಿ ವಿವರಿಸಿತ್ತು.

    ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:
    ರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಅನ್ನೋ ನಂಬಿಕೆ ಇದ್ದು ವಿವಾದಿತ 2.77 ಎಕರೆ ರಾಮಲಲ್ಲಾಗೆ ಸೇರಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಬೇಕು. 3 ತಿಂಗಳಲ್ಲಿ ಟ್ರಸ್ಟ್ ಮೂಲಕವೇ ನಿರ್ಮಿಸಬೇಕು. ಸರ್ಕಾರವೇ ರಾಮಮಂದಿರದ ಹೊಣೆ ಹೊರಬೇಕು.

    ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆಯಾಗಿದೆ. ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು. ಇದನ್ನೂ ಓದಿ:ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ವಿವಾದಿತ ಭೂಮಿಯನ್ನು ಮೂರು ಭಾಗಗಳಾಗಿ ಮಾಡಿದ ಅಲಹಾಬಾದ್ ಹೈಕೋರ್ಟ್ ತೀರ್ಪು ನ್ಯಾಯ ಸಮ್ಮತವಲ್ಲ. ಯಾತ್ರಿಗಳ ಅಭಿಪ್ರಾಯ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳ ಪೂಜೆ ನಡೆಯುತಿತ್ತು. ಬ್ರಿಟಿಷರಿಂದಾಗಿ ಹಿಂದೂಗಳಿಗೆ ಪೂಜೆ ಕೈತಪ್ಪಿತ್ತು. 1856-1857ರವರೆಗೆ ನಮಾಜ್ ಬಗ್ಗೆ ದಾಖಲೆ ಇಲ್ಲ.

    ರಾಮಲಲ್ಲಾ ಅಸ್ತಿತ್ವದ ಬಗ್ಗೆ ಹೇಳಿದ್ದೇನು?
    ಮಸೀದಿ ಮುಖ್ಯ ಗುಂಬಜ್‍ನ ಕೆಳಭಾಗದಲ್ಲಿ ಗರ್ಭಗುಡಿಯಿತ್ತು ಎಂದು ನಂಬಲಾಗುತ್ತಿದೆ. ಮಸೀದಿಯ ಒಳಭಾಗದಲ್ಲಿ ಹಿಂದುಗಳು ಕೂಡ ಪೂಜೆ ಮಾಡುತ್ತಿದ್ದರು. ಬ್ರಿಟಿಷರು ಒಳಭಾಗವನ್ನು ಮುಸ್ಲಿಮರಿಗೆ, ಹೊರಭಾಗವನ್ನು ಹಿಂದುಗಳಿಗೆ ಎಂದು ಪ್ರತ್ಯೇಕಿಸಿದರು. ಇದರಿಂದಾಗಿ ಹಿಂದುಗಳಿಗೆ ಪೂಜೆಯ ಅವಕಾಶ ಕೈತಪ್ಪಿತ್ತು. ಮಸೀದಿಯ ಗುಂಬಜನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನ ನಂಬುತ್ತಾರೆ. ಪುರಾಣಗಳಲ್ಲೂ ಸಹ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶವನ್ನು ಹಿಂದೂಗಳ ಪರಿಕ್ರಮ ಮಾಡುತ್ತಿದ್ದರು. ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು, ಇದು ಇಸ್ಲಾಂ ರಚನೆಯಾಗಿರಲಿಲ್ಲ.

    ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವ ಅಂಶದ ಕುರಿತು ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ರಚನೆಯಾಗಿರಲಿಲ್ಲ. ರಾಮ ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ಬಗ್ಗೆ ವಿವಾದವಿಲ್ಲ. ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.

    * ಸೀತಾ ರಸೋಯಿ – ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ, ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ
    * ರಾಮ್ ಭಂಡಾರ್ – ಭಗವಾನ್ ಶ್ರೀರಾಮನ ಭೋಜನ ಗೃಹ, ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ
    * ರಾಮ್ ಚಬೂತರ್ – ಇದು ಭಗವಾನ್ ಶ್ರೀರಾಮ ಹುಟ್ಟಿದ ಸ್ಥಳ, ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ

    ಕೇಳಿದವರಿಗೆ ಏನು ಸಿಕ್ಕಿತು?
    ಸುನ್ನಿ ವಕ್ಫ್ ಬೋರ್ಡ್ ಜಮೀನಿನಿಂದ ನಮ್ಮನ್ನು ಹೊರಗಡೆ ಇಡಬೇಡಿ ಎಂದು ಕೇಳಿಕೊಂಡಿತ್ತು. ಕೋರ್ಟ್ ವಿವಾದಿತ ಜಮೀನಿನಲ್ಲಿ ಜಾಗ ನೀಡದೇ ಅಯೋಧ್ಯೆಯಲ್ಲಿ ಪ್ರತ್ಯೇಕವಾಗಿ 5 ಎಕ್ರೆ ಜಾಗ ನೀಡುವಂತೆ ಆದೇಶಿಸಿದೆ.

    ನಿರ್ಮೋಹಿ ಅಖಾಡ ವಿವಾದಿತ ಜಾಗದ ಮೇಲೆ ನಮಗೆ ನಿಯಂತ್ರಣ ನೀಡಬೇಕು ಎಂದು ಕೇಳಿಕೊಂಡಿತ್ತು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ರಾಮಜನ್ಮಭೂಮಿ ನ್ಯಾಸ್ ವಿವಾದಿತ ಜಾಗದ ಮೇಲೆ ಪೂರ್ಣ ನಿಯಂತ್ರಣ ಸಿಗಬೇಕು ಎಂದು ಕೇಳಿತ್ತು. ಕೋರ್ಟ್ ಭೂಮಿಯ ಸಂಪೂರ್ಣ ಹಕ್ಕನ್ನು ನೀಡಿದೆ.

  • ಅಯೋಧ್ಯೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು – ಸುಪ್ರೀಂ ಐತಿಹಾಸಿಕ ತೀರ್ಪು

    ಅಯೋಧ್ಯೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು – ಸುಪ್ರೀಂ ಐತಿಹಾಸಿಕ ತೀರ್ಪು

    ನವದೆಹಲಿ: ಅಯೋಧ್ಯೆಯಲ್ಲಿನ 2.77 ಎಕ್ರೆ  ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನಿಕಾ ಪೀಠ ಸರ್ವ ಸಮ್ಮತದ ತೀರ್ಪು ಪ್ರಕಟಿಸಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ತಿಳಿಸಿದೆ.

    ಆದೇಶದ ಪ್ರಮುಖ ಅಂಶಗಳು
    ಮುಸ್ಲಿಮರಿಗೆ 5 ಎಕ್ರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.

    ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

    ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. 2ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಕೇವಲ ಪುರಾತತ್ವ ಸಾಕ್ಷ್ಯವನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ.

    ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡುತ್ತೇವೆ. 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1856ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

    ಮಸೀದಿಯ ಕೆಳಗಡೆ ಹಿಂದೂ ರಚನೆ ಇದೆ ಅಂತ ನಂಬಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕಿಸಿ ಬೇಲಿ ಹಾಕಿಸಿದ್ದರು. ಮಸೀದಿಯ ಒಳಗೆ ಮುಸ್ಲಿಮರು, ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು.

    ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ.

    ನಿರ್ಮೋಹಿ ಅಖಾಡದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರತಿನಿಧ್ಯ ನೀಡಬೇಕು.

    ಏನಿದು ಪ್ರಕರಣ?
    2010 ರಲ್ಲಿ ಅಲಹಾಬಾದ್ ಹೈಕೋರ್ಟ್ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಂಧಾನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚನೆ ನೀಡಿತ್ತು. ಆದರೆ ಈ ಸಂದರ್ಭದಲ್ಲೇ ಹಿಂದೂ ಧರ್ಮದ ಸಂಘಟನೆಗಳು 1950 ರಿಂದಲೂ ತೀರ್ಪಿಗಾಗಿ ಕಾಯುತ್ತಿದ್ದು, ಸಂಧಾನದಿಂದ ಇದರ ಪರಿಹಾರ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಅಯೋಧ್ಯೆ ವಿಚಾರ ಬಹಳ ಸೂಕ್ಷ್ಮವಾಗಿರುವ ಕಾರಣ ಸಂವಿಧಾನ ಪೀಠ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ತಂಡವನ್ನು ರಚಿಸಿತು. ಈ ತಂಡ ನಡೆಸಿದ ಸಂಧಾನ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಅಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್ 16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು.