Tag: Shelter

  • ಬಸ್ ನಿಲ್ದಾಣ ರಾತ್ರೋ ರಾತ್ರಿ ಮಾಯ – ಕಬ್ಬಿಣದ ಶೆಲ್ಟರ್‌ನನ್ನೇ ಕದ್ದ ಕಿಡಿಗೇಡಿಗಳು

    ಬಸ್ ನಿಲ್ದಾಣ ರಾತ್ರೋ ರಾತ್ರಿ ಮಾಯ – ಕಬ್ಬಿಣದ ಶೆಲ್ಟರ್‌ನನ್ನೇ ಕದ್ದ ಕಿಡಿಗೇಡಿಗಳು

    ಬೆಂಗಳೂರು/ಆನೇಕಲ್: ಸಾರ್ವಜನಿಕ ಬಸ್ ನಿಲ್ದಾಣ ರಾತ್ರೋ ರಾತ್ರಿ ಮಾಯವಾಗಿರುವ ಘಟನೆ ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    BUS STAND

    ಕೆ.ಆರ್ ಪುರದ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿರುವ ಆನಂದಪುರದ ಬಸ್ ನಿಲ್ದಾಣದಲ್ಲಿ ಕಬ್ಬಿಣದ ಶೆಲ್ಟರ್‌ನನ್ನೇ ಕಳ್ಳತನ ಮಾಡಿದ್ದು, ಆ ಮುಖ್ಯರಸ್ತೆಯಲ್ಲಿ ಹಲವು ವರ್ಷಗಳಿಂದ ಬಸ್ ನಿಲ್ದಾಣವಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅರಗ ಜ್ಞಾನೆಂದ್ರಗೆ ತಾವು ಸಚಿವರು ಅಂತ ಜ್ಞಾನವಿರಲಿ: ಎಚ್. ಕೆ. ಪಾಟೀಲ್

    BUS STAND

    ಶುಕ್ರವಾರ ರಾತ್ರಿ ಕಿಡಿಗೇಡಿಗಳು ಕಬ್ಬಿಣದಿಂದ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ವೆಲ್ಡಿಂಗ್ ಕಟರ್ ಮೂಲಕ ಕಟ್ ಮಾಡಿ ಕದ್ದೊಯ್ದಿದ್ದಾರೆ. ಇನ್ನು ಆರ್.ಎನ್.ಎಸ್ ಕಾಂಪ್ಲೆಕ್ಸ್ ಮೇಲೆ ಬಸ್ ನಿಲ್ದಾಣ ನಿರ್ಮಾಣದ ಬಳಿಕ ಇದರ ಹಿಂದೆ ಇದ್ದ ಸೈಟ್ ನಲ್ಲಿ ಆರ್‌ಎನ್ಎಸ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಅದರಲ್ಲಿ ರೂಟ್ ಅಂಡ್ ಶೂಟ್ಸ್ ಫ್ರೂಟ್ಸ್ ಮಳಿಕೆ ಹಾಗೂ ಮಂಜುನಾಥ ನೇತ್ರಾಲಯ ಆಸ್ಪತ್ರೆಗೆ ಬಾಡಿಗೆ ನೀಡಲಾಗಿತ್ತು.

    BUS STAND

    ಆನಂದಪುರ ಮುಖ್ಯರಸ್ತೆಯಲ್ಲಿನ ಈ ಕಾಂಪ್ಲೆಕ್ಸ್‌ಗೆ ಬಸ್ ನಿಲ್ದಾಣ ಅಡ್ಡಲಾಗಿತ್ತು. ಇದರಿಂದ ಬ್ಯುಸಿನೆಸ್ ಸಹ ಕಡಿಮೆ ಆಗಿತ್ತು. ಈ ಬಸ್ ನಿಲ್ದಾಣವನ್ನು ಹೇಗಾದರೂ ತೆರವು ಮಾಡಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದು, ಶುಕ್ರವಾರ ವೆಲ್ಡಿಂಗ್ ಕಟರ್ ಮೂಲಕ ರಾತ್ರೋ ರಾತ್ರಿ ಬಸ್ ನಿಲ್ದಾಣದ ಶೆಲ್ಟರ್‌ನನ್ನೇ ಕದ್ದಿದ್ದಾರೆ ಎಂದು ಸ್ಥಳೀಯರಾದ ಲಕ್ಷ್ಮಣ್ ಆರೋಪಿಸಿದ್ದಾರೆ. ಜೊತೆಗೆ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ವಶಕ್ಕೆ ಪಡೆದಿದ್ದು ಬಸ್ ನಿಲ್ದಾಣ ಮಾಯವಾಗಿರುವ ಕುರಿತು ತನಿಕೆ ಕೈಗೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಆರ್ ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ:ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್

  • ಪ್ರವಾಹ ನಿಂತರೂ ಸಂತ್ರಸ್ತರ ಪರದಾಟ ನಿಂತಿಲ್ಲ – ಸೂರಿಲ್ಲ, ಕೇಳುವವರು ಯಾರಿಲ್ಲ?

    ಪ್ರವಾಹ ನಿಂತರೂ ಸಂತ್ರಸ್ತರ ಪರದಾಟ ನಿಂತಿಲ್ಲ – ಸೂರಿಲ್ಲ, ಕೇಳುವವರು ಯಾರಿಲ್ಲ?

    ರಾಯಚೂರು: ಜಿಲ್ಲೆಯಲ್ಲಿ ಪ್ರವಾಹವೇನೋ ಇಳಿಮುಖವಾಗಿದೆ. ಆದ್ರೆ ಅತೀವೃಷ್ಠಿಯಿಂದ ಮನೆ ಕಳೆದುಕೊಂಡ ಜನ ಮಾತ್ರ ಇನ್ನೂ ಬೀದಿಯಲ್ಲೇ ಇದ್ದಾರೆ. ಒಂದು ತಿಂಗಳಿನಿಂದ ಅತಿಯಾಗಿ ಸುರಿದ ಮಳೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನರ ಬದುಕನ್ನ ಕಸಿದುಕೊಂಡಿದೆ. ಆಶ್ರಯ ಸಿಕ್ಕರೂ ಅನ್ನ ಸಿಗದೆ ಸಂತ್ರಸ್ತರು ಪರದಾಡುತ್ತಿದ್ದಾರೆ. ಸರ್ಕಾರಿ ಶಾಲೆ, ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಆಶ್ರಯ ನೀಡಿದೆ. ಆದ್ರೆ ಯಾವುದೇ ವ್ಯವಸ್ಥೆಗಳನ್ನ ಮಾಡಿಲ್ಲ. ಹೀಗಾಗಿ ಸುಮಾರು 56 ಕುಟುಂಬಗಳು ಊಟವಿಲ್ಲದೆ ಪರದಾಡುತ್ತಿವೆ. ಚಿಕ್ಕಮಕ್ಕಳು, ವೃದ್ದರು, ಮಹಿಳೆಯರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಒಂದು ತಿಂಗಳಿನಿಂದ ಶಾಲೆಯಲ್ಲಿಯೇ ವಾಸ ಮಾಡುತ್ತಿರುವ ಕುಟುಂಬಗಳನ್ನ ಕೇಳುವವರು ಇಲ್ಲದಂತಾಗಿದೆ.

    ಆರಂಭದಲ್ಲಿ ಅಧಿಕಾರಿಗಳು ಬಂದು ಒಂದೆರಡು ಬಾರಿ ದಿನಸಿ ನೀಡಿದ್ದಾರೆ ನಂತರ ಇತ್ತ ಯಾರು ನೋಡಿಲ್ಲ. ಊಟಕ್ಕಾಗಿ ಕೂಲಿ ಮಾಡಬೇಕು ಅಡುಗೆ ಮಾಡಿಕೊಳ್ಳಬೇಕು ಅನ್ನೋದು ಸಂತ್ರಸ್ತರ ಅಳಲು. ತಾತ್ಕಾಲಿಕವಾಗಿ ಶೆಡ್ಡು ಹಾಕಿಕೊಡುವುದಾಗಿ ಹೇಳಿದ್ದ ಶಾಸಕ ಬಸನಗೌಡ ದದ್ದಲ ಇದುವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ. ನಿರಂತರ ಮಳೆಯಿಂದ ಶಾಲೆ ಆವರಣ ಸಹ ಕೆಸರು ಗದ್ದೆಯಂತಾಗಿದೆ. ಮಳೆಯಿಂದಾಗಿ ಕೂಲಿ ಕೆಲಸವೂ ಇಲ್ಲ. ಸಂತ್ರಸ್ತ ಕುಟುಂಬಗಳು ಶಾಲೆ, ಸಮುದಾಯ ಭವನವನ್ನೇ ಆಶ್ರಯಿಸಿವೆ. ನಮಗೆ ಸೂರು ಕಲ್ಪಿಸಿ ಅಂತ ಸಂತ್ರಸ್ತರು ಆಗ್ರಹಿಸಿದ್ದಾರೆ.

    ನೂರಕ್ಕೂ ಹೆಚ್ಚು ಮನೆಗಳು ಬಿದ್ದಿವೆ, ಇದರಲ್ಲಿ 50 ಮನೆಗಳು ಸಂಪೂರ್ಣ ನೆಲಸಮವಾಗಿವೆ. ಸೂರು ಕಳೆದುಕೊಂಡಿರುವ ಜನ ಈಗ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇನ್ನೂ ಬಿದ್ದಮನೆಗಳಲ್ಲಿ ಕೆಲವರು ಬದುಕುತ್ತಿದ್ದಾರೆ. ಸಣ್ಣಪುಟ್ಟ ಶೆಡ್ ಗಳನ್ನ ಹಾಕಿಕೊಂಡು ಬದುಕುತ್ತಿರುವ ಜನ ಪ್ರತಿದಿನ ಗಾಳಿ ಮಳೆಗೆ ಹೆದರಿಕೊಂಡೆ ಜೀವನ ನಡೆಸುತ್ತಿದ್ದಾರೆ. ಆದ್ರೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾತ್ರ ಇವರ ಕಡೆ ಗಮನ ಹರಿಸುತ್ತಿಲ್ಲ. ಇದುವರೆಗೆ ಕೇವಲ ಎರಡು ಬಾರಿ ದಿನಸಿಯನ್ನ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ.

    ಸಂಪೂರ್ಣವಾಗಿ ಬಿದ್ದಿರುವ ಮನೆಗಳಿಗೆ ಪರಿಹಾರವಾಗಿ ಶೆಡ್ ನಿರ್ಮಿಸಿಕೊಳ್ಳಲು ಸದ್ಯಕ್ಕೆ ಟಿನ್ ಹಾಗೂ ಬಲೀಸ್‍ಗಳನ್ನ ಮಾತ್ರ ನೀಡಲಾಗಿದೆ. ಆದ್ರೆ ಇದ್ದ ಮನೆ ಕಳೆದುಕೊಂಡು ಕಂಗಾಲಾಗಿರುವ ಕುಟುಂಬಗಳು ದಿಕ್ಕು ಕಾಣದಂತಾಗಿವೆ. ಇನ್ನೊಂದೆಡೆ ನಿರಂತರ ಸುರಿಯುತ್ತಿರುವ ಮಳೆ ಕೂಲಿ ಕೆಲಸಕ್ಕೂ ಅಡ್ಡಿಯಾಗಿದೆ. ತುತ್ತು ಅನ್ನಕ್ಕೆ ಏನು ಮಾಡೋದು ಅಂತ ಕಂಗೆಟ್ಟ ಜನರ ಬಗ್ಗೆ ಕನಿಷ್ಠ ಈಗಲಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಅಂತ ಸಂತ್ರಸ್ತರು ಆಗ್ರಹಿಸಿದ್ದಾರೆ.

  • ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಮುಂದಾದ ರಕ್ಷಿತ್ ಶೆಟ್ಟಿ

    ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಮುಂದಾದ ರಕ್ಷಿತ್ ಶೆಟ್ಟಿ

    ಬೆಂಗಳೂರು: ಬೀದಿ ನಾಯಿಗಳಿಗೆ ಆಶ್ರಯ ಒದಗಿಸಿ, ಅವುಗಳನ್ನು ದತ್ತು ಪಡೆಯಿರಿ ಎಂಬ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಬಲ ನೀಡಿದ್ದಾರೆ. ಅನಾಥವಾಗಿ, ಆಶ್ರಯವಿಲ್ಲದೆ ಬೀದಿಗಳಲ್ಲಿ ಬದಕುವ ಮೂಕ ಪ್ರಾಣಿಗಳಿಗೆ ನೆರವು ನೀಡಲು ಮುಂದಾಗಿದ್ದಾರೆ.

    ಕೇರ್ ಎಂಬ ಎನ್‍ಜಿಓದ ಜೊತೆ ರಕ್ಷಿತ್ ಕೈಜೊಡಿಸಿ ಬೀದಿ ನಾಯಿಗಳಿಗೆ ಆಶ್ರಯ ನೀಡುವ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸದ್ಯ ರಕ್ಷಿತ್ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ನಾಯಿಯ ಪಾತ್ರ ಮುಖ್ಯವಾಗಿದೆ.

    ನಮ್ಮ ದೇಶದ ಪ್ರತಿಯೊಂದು ಬೀದಿಯಲ್ಲಿಯೂ ಹಲವಾರು ನಾಯಿಗಳನ್ನು ನೋಡುತ್ತೇವೆ. ಆದರೆ, ಮನೆಯಲ್ಲಿ ಸಾಕಲು ಮಾತ್ರ ಬ್ರೀಡ್ ನಾಯಿಗಳನ್ನು ಆಯ್ಕೆ ಮಾಡುತ್ತೇವೆ. ಬೀದಿ ನಾಯಿಗಳು ಕೂಡ ಬ್ರೀಡ್ ನಾಯಿಗಳಿಗಿಂತ ಏನು ಕಡಿಮೆ ಇಲ್ಲ. ನಮ್ಮ ವಾತಾವರಣಕ್ಕೆ ಅವುಗಳು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ ಅವುಗಳ ಸಾಕಲು ಖರ್ಚು ಕೂಡ ಕಡಿಮೆ. ಈ ನಾಯಿಗಳನ್ನು ದತ್ತು ಪಡೆಯಿರಿ ಆಗ ಅವುಗಳಿಗೂ ಮನೆ, ಕುಟುಂಬ, ಪ್ರೀತಿ, ವಾತ್ಸಲ್ಯ ಸಿಗುತ್ತದೆ. ಇದೇ ಸ್ವಾತಂತ್ರ್ಯ ದಿನವನ್ನು ಎಲ್ಲರು ಬೀದಿ ನಾಯಿಗಳನ್ನು ದತ್ತು ಪಡೆಯೋಣ, ಆಶ್ರಯ ನೀಡೋಣ ಎಂದು ವಿಡಿಯೋ ಮೂಲಕ ರಕ್ಷಿತ್ ಮನವಿ ಮಾಡಿಕೊಂಡಿದ್ದಾರೆ.

    ಕೇರ್ ಸಂಸ್ಥೆ ನೇತೃತ್ವದಲ್ಲಿ ಇದೇ ಆಗಸ್ಟ್ 11 ರಂದು ‘ಇಂಡಿಪೆಂಡೆನ್ಸ್ ಅಡಾಪ್‍ಕ್ಷನ್ ಡ್ರೈವ್’ ಆರೋಜಿಸಲಾಗಿದೆ. ಬೆಳಗ್ಗೆ 12 ರಿಂದ 3 ಗಂಟೆವರೆಗೆ ಈ ಕಾರ್ಯಕ್ರಮ ನಡೆಯಲಿದೆ. ನಾಯಿಗಳನ್ನು ಸಾಕಬೇಕು, ನಿಮ್ಮ ಕುಟುಂಬಕ್ಕೆ ಸೇರಿಕೊಳ್ಳಬೇಕು ಎಂದು ಇಚ್ಛಿಸುವವರು ಬೀದಿ ನಾಯಿಯನ್ನು ಇಲ್ಲಿ ಬಂದು ದತ್ತು ಪಡೆಯಬಹುದಾಗಿದೆ. ರಕ್ಷಿತ್ ಅವರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://www.facebook.com/therakshitshetty/videos/487983035108493/

  • 45 ಹೆಚ್‍ಐವಿ ಪೀಡಿತ ಮಕ್ಕಳಿಗೆ ತಂದೆಯಾದ ಚೆನ್ನೈ ವ್ಯಕ್ತಿ

    45 ಹೆಚ್‍ಐವಿ ಪೀಡಿತ ಮಕ್ಕಳಿಗೆ ತಂದೆಯಾದ ಚೆನ್ನೈ ವ್ಯಕ್ತಿ

    ಚೆನ್ನೈ: ತಮ್ಮ ಕುಟುಂಬದಿಂದ ದೂರಾಗಿದ್ದ 45 ಹೆಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು, ಆಶ್ರಯ ನೀಡುವ ಮೂಲಕ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

    ಹೆಚ್‍ಐವಿ ಪೀಡಿತ ಮಕ್ಕಳನ್ನು ಅವರ ಹೆತ್ತವರು ಬಿಟ್ಟು ಹೋಗಿರುತ್ತಾರೆ. ಇಂತಹ ಮಕ್ಕಳು ಇರಲು ಜಾಗವಿಲ್ಲದೆ, ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಕಷ್ಟಪಡುತ್ತಿರುತ್ತಾರೆ. ಇಂತಹ ಮಕ್ಕಳನ್ನು ಚೆನ್ನೈ ಮೂಲದ ಸಲೋಮನ್ ರಾಜ್ ದತ್ತು ಪಡೆದು ಆಶ್ರಯ ನೀಡಿದ್ದಾರೆ. ಅಲ್ಲದೆ ಮಕ್ಕಳಿಗೆ ತಂದೆ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಲೋಮನ್, ನಮಗೆ ಮದುವೆಯಾಗಿ 8 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ನಾವು ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದೆವು. ಆದರೆ ನಾವು ಈ ನಿರ್ಧಾರ ಮಾಡಿದ ಬಳಿಕ ನಮಗೆ ಮಕ್ಕಳಾದವು. ಆದ್ದರಿಂದ ದತ್ತು ಪಡೆಯುವ ಆಲೋಚನೆಯನ್ನು ಕೈ ಬಿಟ್ಟಿದ್ದೆವು. ಎಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹಬೇಕೆನ್ನುವ ಆಸೆ ನನಗಿತ್ತು. ಹೀಗಾಗಿ ಈ ವಿಚಾರ ನನಗೆ ಬಹಳ ದಿನದವರೆಗೆ ಕಾಡುತ್ತಿತ್ತು. ಬಳಿಕ ದೃಢ ನಿರ್ಧಾರ ಮಾಡಿ ಮೊದಲು ಒಂದು ಎಚ್‍ಐವಿ ಪೀಡಿತ ಮಗುವನ್ನು ದತ್ತು ಪಡೆದೆ. ಬಳಿಕ ಅದು ಹಾಗೆ ಮುಂದುವರಿಯಿತು. ಈಗ ನಾನು 45 ಎಚ್‍ಐವಿ ಪೀಡಿತ ಮಕ್ಕಳಿಗೆ ತಂದೆ ಆಗಿದ್ದೇನೆ ಎಂದು ಖುಷಿ ಹಂಚಿಕೊಂಡರು.

    ಈ ಮಕ್ಕಳ ಬಾಯಲ್ಲಿ ಅಪ್ಪ ಎಂದು ಕರೆಸಿಕೊಳ್ಳಲು ಖುಷಿಯಾಗುತ್ತೆ. ಈ ಮಕ್ಕಳನ್ನು ದತ್ತು ಪಡೆದು ಸಾಕುವುದರಲ್ಲಿ ನನಗೆ ನೆಮ್ಮದಿ ಸಿಕ್ಕಿದೆ. ಈ ಮಕ್ಕಳಿಗೆ ಆಶ್ರಯ ನೀಡಿ, ಬೇಕಾದ ಸೌಲಭ್ಯವನ್ನು ನಾನು ಒದಗಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಡ್ಯಾನ್ಸ್, ಕಂಪ್ಯೂಟರ್ ಶಿಕ್ಷಣವನ್ನೂ ಕೂಡ ಕೊಡಿಸುತ್ತಿದ್ದೇನೆ.

    ಈ ಮಕ್ಕಳಲ್ಲಿ ಹಲವರು ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹಾಗೆಯೇ 7 ಮಂದಿ ಬೇರೆ ಬೇರೆ ವಿಷಯದಲ್ಲಿ ಪದವಿ ಶಿಕ್ಷಣವನ್ನೂ ಕೂಡ ಪಡೆಯುತ್ತಿದ್ದಾರೆ. ಅಲ್ಲದೆ ಈಗ ಪಿಯುಸಿ ಕಲಿಯುತ್ತಿರುವ ಒಬ್ಬಳು ಹುಡುಗಿ ಮುಂದೆ ಡಾಕ್ಟರ್ ಆಗಬೇಕೆಂದು ಆಸೆ ಪಟ್ಟಿದ್ದಾಳೆ. ತನ್ನಂತ ಇತರೆ ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂಬುದು ಬಯಸಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

    ಅಲ್ಲದೆ ಕೆಲವೊಮ್ಮೆ ಮಕ್ಕಳನ್ನು ನೋಡಿಕೊಳ್ಳುವುದು, ಅವರ ಔಷಧಿಯ ವೆಚ್ಚ ಬರಿಸಲು ಕಷ್ಟವಾಗುತ್ತೆ. ಕೆಲವೊಮ್ಮೆ ಅವರು ತೀರಾ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು. ಹೆಚ್‍ಐವಿ ಪೀಡಿತ ಮಕ್ಕಳನ್ನು ಕೆಲವು ತಂದೆ ತಾಯಿಯರು ನಡು ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ಸಲೋಮನ್ ಅವರು ಇಂತಹ ಮಕ್ಕಳಿಗೆ ಜೀವನ ರೂಪಿಸಿಕೊಟ್ಟು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

  • ಕೊಡಗು ನಿರಾಶ್ರಿತರಿಗೆ ಮಸೀದಿ, ಹೋಂಸ್ಟೇ, ಲಾಡ್ಜ್ ಗಳಲ್ಲಿ ಆಶ್ರಯ

    ಕೊಡಗು ನಿರಾಶ್ರಿತರಿಗೆ ಮಸೀದಿ, ಹೋಂಸ್ಟೇ, ಲಾಡ್ಜ್ ಗಳಲ್ಲಿ ಆಶ್ರಯ

    ಮಡಿಕೇರಿ: ಕೊಡಗಿನ ಮಹಾಮಳೆಯಿಂದ ತತ್ತರಿಸಿ ಹೋಗಿದ್ದು ನಿರಾಶ್ರಿತರಿಗಾಗಿ ಮಸೀದಿ ಮತ್ತು ಹೋಂ ಸ್ಟೇ, ಲಾಡ್ಜ್ ಗಳಲ್ಲೂ ಆಶ್ರಯ ನೀಡಲಾಗಿದೆ.

    ಜಾತಿ, ಧರ್ಮ ಭೇದವೆನ್ನದೇ ನೂರಾರು ಮಂದಿ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ. ಇತ್ತ ಮಡಿಕೇರಿ ತಾಲೂಕಿನ ಜೋಡುಪಾಲ, ಸಂಪಾಜೆ, ಅರೆಕಲ್ಲು, ಕಾಟಕೇರಿ ಮುಂತಾದ ಕಡೆಗಳಲ್ಲಿ ಪದೇ ಪದೇ ಭೂಕುಸಿತವಾಗಿದೆ. ಹೀಗಾಗಿ ಅರೆಕಲ್ಲಿನ ಬಹುತೇಕ ಮನೆಗಳಲ್ಲಿದ್ದವರನ್ನು ಸ್ವಯಂ ಸೇವಕರು ತೆರವು ಮಾಡಿದ್ದಾರೆ.

    ಹಮ್ಮಿಯಾಲ, ಕಾಲೂರು, ದೇವಸ್ತೂರು ಗ್ರಾಮಗಳಲ್ಲಿ ಇರುವವರನ್ನು ಕರೆತಂದು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಡಿಕೇರಿಯಲ್ಲಿ ಹೋಂ ಸ್ಟೇ, ಲಾಡ್ಜ್ ಗಳನ್ನು ಪ್ರವಾಸಿಗರಿಗೆ ಕೊಡದೆ ಸಂತ್ರಸ್ತರಿಗೆ ಕೊಡಲು ಮುಂದಾಗಿದ್ದು, ಇದರಿಂದ ಪ್ರವಾಸಿಗರು ನಿರಾಶೆಯಿಂದ ತೆರಳುತ್ತಿದ್ದಾರೆ.

    ಮೈಸೂರು, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಹಿರಿಯ ಅಧಿಕಾರಿಗಳು ಕೊಡಗಿನತ್ತ ಧಾವಿಸಿ ಬಂದಿದ್ದು, ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿ ಔಷಧಿಯನ್ನು ಪೂರೈಸಲಾಗಿದೆ.

    ಹಿರಿಯ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ, ಅಗ್ನಿ ಶಾಮಕದ ದಳ, ವಿಪತ್ತು ನಿರ್ವಹಣಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ತಂಡೋಪತಂಡವಾಗಿ ಜಿಲ್ಲೆಗೆ ಬಂದು ಕಾರ್ಯೋನ್ಮುಖರಾಗಿದ್ದಾರೆ. ಸಂಪಾಜೆ, ಜೋಡುಪಾಲದಲ್ಲಿನ ಜನರ ರಕ್ಷಣೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ಆ ವಿಭಾಗದ ಜನರನ್ನು ಸುಳ್ಯದ ಕೆವಿಜಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸುಳ್ಯದಲ್ಲಿ ಹಲವು ಮಂದಿಗೆ ಆಶ್ರಯ ನೀಡಲಾಗಿದೆ.

    ಇತ್ತ ಕೊಡಗಿನಲ್ಲಿ ವರುಣನ ಆರ್ಭಟಕ್ಕೆ ಬಸ್ ನಿಲ್ದಾಣದ ಮಳಿಗೆ ಕುಸಿದು ನೆಲಸಮವಾಗಿದೆ. ಪ್ರವಾಹದಿಂದ ನಲುಗಿ ಹೋಗಿರುವ ಜಿಲ್ಲೆಯ ಜನರಲ್ಲಿ ಮಳೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಕೆಲವರು ಬೆಟ್ಟದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಮಡಿಕೇರಿಯ ಅನೇಕ ಸಂತ್ರಸ್ತರ ಶಿಬಿರಗಳಿಗೆ ನೀವು ಕೊಟ್ಟ ಆಹಾರ ಸಾಮಾಗ್ರಿಗಳನ್ನು ಮಳೆಯನ್ನು ಲೆಕ್ಕಿಸದೇ ಪಬ್ಲಿಕ್ ಸಿಬ್ಬಂದಿಗಳು ಜನರಿಗೆ ತಲುಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv