Tag: Sheila Dikshit

  • ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

    ಕೇಜ್ರಿವಾಲ್‌ ಸೋಲಿಸಿ ತಾಯಿಯ ಸೋಲಿಗೆ ಸೇಡು ತೀರಿಸಿದ ಸಂದೀಪ್‌ ದೀಕ್ಷಿತ್‌

    ನವದೆಹಲಿ: ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ನವದೆಹಲಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ಸೋಲು ಕಂಡಿದ್ದಾರೆ. ಆದಾಗ್ಯೂ ತನ್ನ ತಾಯಿಯನ್ನು ಸೋಲಿಸಿದ ಕೇಜ್ರಿವಾಲ್‌ (Arvind Kejriwal) ವಿರುದ್ಧ ಸೇಡು ತೀರಿಕೊಳ್ಳುವಲ್ಲಿ ಸಂದೀಪ್‌ ದೀಕ್ಷಿತ್‌ (Sandeep Dikshit) ಯಶಸ್ವಿಯಾಗಿದ್ದಾರೆ.

    ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಜ್ರಿವಾಲ್‌, ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇತ್ತ 3ನೇ ಸ್ಥಾನದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ 4,568 ಮತಗಳನ್ನ ಪಡೆದುಕೊಂಡಿದ್ದಾರೆ. ಆಪ್‌ ಪಾಲಿನ ಮತಗಳನ್ನು ತಿಂದುಹಾಕಿರುವ ಸಂದೀಪ್‌ ದೀಕ್ಷಿತ್‌, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿದ್ದಾರೆ. ಇದನ್ನೂ ಓದಿ: ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು

    ಸತತ 3ನೇ ಬಾರಿಗೆ ನವದೆಹಲಿ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಜ್ರಿವಾಲ್‌ ಒಟ್ಟು 25,999 ಮತಗಳನ್ನು ಪಡೆದಿದ್ದರೆ, ಸಂದೀಪ್‌ ದೀಕ್ಷಿತ್‌ 4,568 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಒಟ್ಟು 30,088 ಮತಗಳನ್ನು ಪಡೆದುಕೊಂಡಿದ್ದು 4,089 ಮತಗಳಿಂದ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾಗೆ ಹೀನಾಯ ಸೋಲು

    1993ರಿಂದ ಸತತವಾಗಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಶೀಲಾ ದೀಕ್ಷಿತ್‌ ಅವರನ್ನ ಅರವಿಂದ್‌ ಕೇಜ್ರಿವಾಲ್‌ 2013ರಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲಿಸಿದ್ದರು. 25,864 ಮತಗಳ ಅಂತರದಿಂದ ಕೇಜ್ರಿವಾಲ್‌ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ

    ಲೋಕಸಭಾ ಚುನಾವಣೆ ವೇಳೆ INDIA ಒಕ್ಕೂಟದ ಭಾಗವಾಗಿದ್ದ ಕಾಂಗ್ರೆಸ್‌ ಮತ್ತು ಆಪ್‌ ದೆಹಲಿಯಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡಿತ್ತು. ಸದ್ಯದ ಚುನಾವಣಾ ಫಲಿತಾಂಶ ಗಮನಿಸಿದರೆ ಆಪ್‌ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಮತಗಳನ್ನು ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಾಲಾಗಿವೆ. ಹೀಗಾಗಿ ಇಂಡಿಯಾ ಮೈತ್ರಿ ಕಡಿದುಕೊಂಡು ಆಪ್‌ ತಪ್ಪು ಮಾಡಿತೆ ಎಂಬ ಪ್ರಶ್ನೆಯೂ ಎದ್ದಿದೆ.

  • ‘ಶೀಲಾ ದೀಕ್ಷಿತ್‍ರಂತೆಯೇ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತೇನೆ’ ಎಂದವನಿಗೆ ಸುಷ್ಮಾ ಸ್ವರಾಜ್ ಖಡಕ್ ತಿರುಗೇಟು

    ‘ಶೀಲಾ ದೀಕ್ಷಿತ್‍ರಂತೆಯೇ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತೇನೆ’ ಎಂದವನಿಗೆ ಸುಷ್ಮಾ ಸ್ವರಾಜ್ ಖಡಕ್ ತಿರುಗೇಟು

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯಾವಾಗಲೂ ಜನರ ಸಂಪರ್ಕದಲ್ಲಿರುತ್ತಾರೆ. ಯಾರದರೂ ತೊಂದರೆಯಲ್ಲಿದ್ದರೆ, ತಕ್ಷಣವೇ ಸಹಕಾರ ನೀಡುವ ಕಾರ್ಯವನ್ನು ಮಾಡುತ್ತಾರೆ. ಅಲ್ಲದೇ ತಮ್ಮ ವಿರುದ್ಧ ಕಮೆಂಟ್ ಮಾಡುವವರಿಗೂ ಖಡಕ್ ತಿರುಗೇಟು ನೀಡುತ್ತಾರೆ.

    ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ರಾಮ್ ಗರ್ಗ್ ನಿಧನರಾದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಅವರು ಸಂತಾಪ ಸೂಚಿಸಿದ್ದರು. ಆದರೆ ಇವರ ಟ್ವೀಟ್ ಗೆ ಇರ್ಫಾನ್ ಖಾನ್ ಎಂಬಾತ ಪ್ರತಿಕ್ರಿಯೆ ನೀಡಿ ಸುಷ್ಮಾ ಸ್ವರಾಜ್ ರನ್ನ ಟ್ರೋಲ್ ಮಾಡಲು ಯತ್ನಿಸಿದ್ದ.

    ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಾವನ್ನು ಪ್ರಸ್ತಾಪ ಮಾಡಿದ್ದ ಆತ, ಶೀಲಾ ದೀಕ್ಷಿತ್ ರಂತೆಯೇ ನಿಮ್ಮನ್ನು ಕೂಡ ದೇಶದ್ಯಾಂತಹ ನೆನಪಿಸಿಕೊಳ್ಳುತ್ತಾರೆ ಅಮ್ಮಾ ಎಂದು ಕಮೆಂಟ್ ಮಾಡಿದ್ದ. ಈತನ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ನನ್ನ ಕುರಿತು ಇಂತಹ ಅತ್ಯುನ್ನತ ಆಲೋಚನೆ ಮಾಡಿದಕ್ಕೆ ಧನ್ಯವಾದ ಎಂದು ನಯವಾಗಿ ಟಾಂಗ್ ನೀಡಿದ್ದಾರೆ.

    ಈ ಹಿಂದೆಯೂ ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ್ದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಅವರು ಖಡಕ್ ಆಗಿಯೇ ಉತ್ತರಿಸಿದ್ದರು. ಅಂತರಧರ್ಮಿಯ ವಿವಾಹವಾಗಿದ್ದ ದಂಪತಿಗೆ ಪಾಸ್‍ಪೋರ್ಟ್ ನೀಡುವ ವಿಚಾರದಲ್ಲಿ ಟ್ರೋಲ್ ಮಾಡಿದ್ದ ವ್ಯಕ್ತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ತಮ್ಮನ್ನು ಬ್ಲಾಕ್ ಮಾಡಿ ಎಂದಿದ್ದರು.

  • ಪಂಚಭೂತಗಳಲ್ಲಿ ಶೀಲಾ ದೀಕ್ಷಿತ್ ಲೀನ

    ಪಂಚಭೂತಗಳಲ್ಲಿ ಶೀಲಾ ದೀಕ್ಷಿತ್ ಲೀನ

    ನವದೆಹಲಿ: ಶನಿವಾರ ವಿಧಿವಶರಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಇಂದು ಸಂಜೆ ಪಂಚಭೂತಗಳಲ್ಲಿ ಲೀನವಾದರು.

    ಶೀಲಾ ದೀಕ್ಷಿತ್ ಅವರ ಅಂತಿಮ ವಿಧಿವಿಧಾನಗಳನ್ನು ಇಂದು ಯಮುನಾ ನದಿ ದಡದ ನಿಗಮ್ ಬೋಧ ಘಾಟ್‍ನಲ್ಲಿ ನೆರವೇರಿಸಲಾಯ್ತು. ಅಂತಿಮ ವಿಧಿವಿಧಾನಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ಪಶ್ಚಿಮ ದೆಹಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇರಿಸಿ ಗಣ್ಯರಿಂದ ನಮನ ಸಲ್ಲಿಸಲಾಯ್ತು.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶೀಲಾ ದೀಕ್ಷಿತ್ ಶನಿವಾರ ಮಧ್ಯಾಹ್ನ ಸುಮಾರು 3.55ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದರು. ಬಳಿಕ ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷಬೇಧ ಮರೆತು ಎಲ್ಲರೂ ಆಗಮಿಸಿ ಶೀಲಾ ದೀಕ್ಷಿತ್ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದರು.

    ಇಂದು ಸಹ ಸುಷ್ಮಾ ಸ್ವರಾಜ್, ಎಲ್.ಕೆ.ಅಡ್ವಾನಿ, ಓಮರ್ ಅಬ್ದುಲ್ಲಾ, ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶೀಲಾ ದೀಕ್ಷಿತ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

    ನನಗೆ ಬೆಂಬಲವಾಗಿ ಶೀಲಾ ದೀಕ್ಷಿತ್ ಇದ್ದರು. ಗೆಳತಿ, ಹಿರಿಯ ಸಹೋದರಿಯ ಸ್ಥಾನದಲ್ಲಿ ಶೀಲಾ ದೀಕ್ಷಿತ್ ನನ್ನ ಬದುಕಿನ ಒಂದು ಭಾಗವಾಗಿದ್ದರು. ನಾನು ಯಾವತ್ತೂ ಶೀಲಾ ದೀಕ್ಷಿತ್ ಅವರನ್ನು ಮರೆಯಲ್ಲ ಎಂದು ಸೋನಿಯಾ ಗಾಂಧಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ್ದರು.

  • ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿಧಿವಶ

    ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿಧಿವಶ

    ನವದೆಹಲಿ: ದೀರ್ಘಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿಧಿವಶರಾಗಿದ್ದಾರೆ.

    ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10.30ರ ವೇಳೆಗೆ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ 3.55 ರ ವೇಳೆಗೆ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 81 ವರ್ಷದ ಶೀಲಾ ದೀಕ್ಷಿತ್ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

    ಮೂರು ಬಾರಿ ದೆಹಲಿ ಸಿಎಂ ಆಗಿದ್ದ ಅವರು 2019 ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯದ ನಡುವೆಯೂ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ದೆಹಲಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನೇತೃತ್ವ ವಹಿಸಿಕೊಂಡು ಆಪ್ ಪಕ್ಷದೊಂದಿಗೆ ಮೈತ್ರಿಯನ್ನ ವಿರೋಧ ಮಾಡಿದ್ದರು. ಈಶಾನ್ಯ ದೆಹಲಿಯಿಂದ ಲೋಕಸಭೆ ಚುನಾವಣೆ ಸ್ವರ್ಧೆ ಮಾಡಿ 3.66 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು.

    ಚುನಾವಣೆಯ ಬಳಿಕ ಶೀಲಾ ದೀಕ್ಷಿತ್ ಸಾರ್ವಜನಿಕ ವಲಯದಿಂದ ದೂರ ಉಳಿದುಕೊಂಡಿದ್ದರು. 1998 ರಿಂದ 2013 ರ ವರೆಗೆ ಸಿಎಂ ಆಗಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು ದೆಹಲಿಯಲ್ಲಿ ದೀರ್ಘಾವಧಿ ಸಿಎಂ ಆಗಿದ್ದ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಇದರೊಂದಿಗೆ ಕೇರಳದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ಹಾಲಿ ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು.  ಸದ್ಯ ಮಾಜಿ ಸಿಎಂ ನಿಧನಕ್ಕೆ ದೆಹಲಿ ಸ್ತಬ್ಧವಾಗಿದ್ದು, ದೇಶದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.