Tag: Sheetal Shetty

  • ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ನೇರ ನುಡಿಯಾದ್ರು ಹಸನ್ಮುಖಿಯಾಗಿ ಕಾಣಿಕೊಳ್ಳುವ ನಟಿ ಶೀತಲ್ ಶೆಟ್ಟಿ ಆ್ಯಕರಿಂಗ್‍ಗೆ ಗುಡ್ ಬೈ ಹೇಳಿದ ಬಳಿಕ ಮತ್ತೊಮ್ಮೆ ತಮ್ಮದೇ ನಟನೆಯ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರನ್ನು ಸಂದರ್ಶನ ಮಾಡಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕೇಶ್ ಅವರನ್ನು ಶೀತಲ್ ಮಾತನಾಡಿಸಿ ಚಿತ್ರದ ಇಂಟ್ರೆಸ್ಟಿಂಗ್ ಕಥೆಯನ್ನು ರಿವಿಲ್ ಮಾಡಿಸಿದ್ದಾರೆ.

    ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಪತಿಬೇಕು ಡಾಟ್‍ಕಮ್ ಸಿನಿಮಾ ನಿರ್ದೇಶಕನಾಗಿರುವುದು ನನಗೆ ಹೆಮ್ಮೆಯ ಅಂಶವಾಗಿದ್ದು, ಕುಟುಂಬ ಪ್ರಧಾನ ಸಿನಿಮಾ ಮಾಡಿದ ಗೌರವ ಈ ಸಿನಿಮಾ ನೀಡುವ ವಿಶ್ವಾಸವಿದೆ. ಏಕೆಂದರೆ ಈ ಹಿಂದಿನ ಸಿನಿಮಾ ನನ್ನ ತಾಯಿ, ಕುಟುಂಬದೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಕುಟುಂಬದ ಎಲ್ಲರೊಟ್ಟಿಗೆ ಕುಳಿತು ನೋಡುವಂತಹ ಯೋಚನೆಯಿಂದ ಸಿನಿಮಾ ಕಥೆ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು ನಿರ್ದೇಶಕ ರಾಕೇಶ್.

    ಪತಿಬೇಕು ಡಾಟ್ ಕಮ್ ಕಥೆಯೇ ಸಿನಿಮಾಗೆ ಜೀವ:
    ಸಿನಿಮಾ ಪ್ರಮುಖ ಪಾತ್ರದ ಕುರಿತು ಯಾರ ಆಯ್ಕೆ ಎಂಬ ಯೋಚನೆ ಬಂದ ಕೂಡಲೇ ನನಗೆ ಮೊದಲು ನೆನಪು ಬಂದಿದ್ದು ಶೀತಲ್ ಅವ್ರು, ಏಕೆಂದರೆ ಕರ್ನಾಟಕದ ಮನೆ ಹುಡುಗಿಯಾಗಿ ಶೀತಲ್ ಹೆಸರು ಪಡೆದಿದ್ದಾರೆ. ಕಥೆಗೂ ಅವರ ಆಯ್ಕೆ ಸೂಕ್ತ ಎನಿಸಿದ್ದರಿಂದ ಸಿನಿಮಾ ಜರ್ನಿ ಆರಂಭವಾಯ್ತು. ಚಿತ್ರಕಥೆಯೇ ಸಿನಿಮಾದ ಹೀರೋ ಆಗಿದ್ದು, ಎಲ್ಲ ಪಾತ್ರಗಳು ಉತ್ತಮವಾಗಿ ಮೂಡಿಬಂದಿದೆ. ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಿರ್ದೇಶಕನಾಗಿ ಕಥೆಯ ಮೇಲಿನ ಭರವಸೆಯೇ ಇಷ್ಟು ಬೇಗ ಚಿತ್ರ ಮೂಡಿಬರಲು ಕಾರಣ. ಸಿನಿಮಾ ಅಭಿಮಾನಿಗಳು ಚಿತ್ರ ನೋಡಿ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುವ ನಂಬಿಕೆ ಎಂದು ಅನುಭವ ಹಂಚಿಕೊಂಡರು.

    ಚಿತ್ರದ ಟೀಸರ್, ಹಾಡು ಈಗಾಗಲೇ ಜನರಿಗೆ ಇಷ್ಟವಾಗಿದ್ದು, ಎಲ್ಲೆಡೆ ಕೇಳಿ ಬರುತ್ತದೆ. ಚಿತ್ರದ ಕ್ಯಾಮೆರಾಮನ್ ಯೋಗಿ ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ವಿಜಯ್ ಎಂ ಕುಮಾರ್ ಸಂಕಲನವಿದೆ. ಚಿತ್ರ ಪ್ರಮುಖ ಪಾತ್ರದಲ್ಲಿರುವ ಕೃಷ್ಣ ಅಡಿಗ, ಅರುಣ್ ಗೌಡ ಅನುಭವಿ ತಂಡವಿದೆ. ಅಲ್ಲದೇ ಸೆನ್ಸರ್ ಬೋರ್ಡ್‍ನಲ್ಲಿ ಸಿನಿಮಾದ ಒಂದು ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಒಂದು ಮ್ಯೂಟ್ ಮಾಡದೇ ಪ್ರಮಾಣ ಪತ್ರ ನೀಡಿ ಹೆಗ್ಗಳಿಕೆಯೂ ಚಿತ್ರತಂಡಕ್ಕಿದೆ.

    ನಮ್ಮ ಹೊಸ ಪ್ರಯತ್ನದ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರು ಹಾಡು, ಟೀಸರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಇಂತಹ ಸ್ಟಾರ್‍ಗಳು ಚಿತ್ರದ ಬಗ್ಗೆ ವಿಶ್ವಾಸ ಮಾತು ಆಡಿದ್ದು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’…….. ಒಂದು ಚಿತ್ರದ ಡೈಲಾಗು, ಹಾಡು ಜನರಿಗಿಷ್ಟವಾಗಿ ಅವರ ನಡುವೆ ಹರಿದಾಡಿದರೆ ಅದಕ್ಕಿಂತಲೂ ಅದ್ಭುತವಾದ ಪ್ರಚಾರ ಬೇರೊಂದಿಲ್ಲ. ಅಂಥಾದ್ದೊಂದು ಭರಪೂರ ಪ್ರಚಾರ ಶೀತಲ್ ಶೆಟ್ಟಿ ಅಭಿನಯದ ಪತಿಬೇಕು ಡಾಟ್ ಕಾಮ್ ಚಿತ್ರಕ್ಕೀಗ ಸಿಗಲಾರಂಭಿಸಿದೆ!

    ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಜನ ಮೆಚ್ಚಿಕೊಂಡಿದ್ದೂ ಆಗಿದೆ. ಇದರಲ್ಲಿ ಶೀತಲ್ ಶೆಟ್ಟಿ ಹೇಳಿರೋ ಬಿಂದಾಸ್ ಡೈಲಾಗೊಂದೀಗ ಹುಡುಗೀರಿಗೆಲ್ಲ ಹುಚ್ಚು ಹಿಡಿಸಿಬಿಟ್ಟಿದೆ. ಡಬ್ ಸ್ಮ್ಯಾಶ್ ರೂಪದಲ್ಲಿ ಈ ಡೈಲಾಗು ಎಲ್ಲೆಡೆ ಹರಡಿಕೊಂಡು ಪತಿಬೇಕು ಡಾಟ್ ಕಾಮ್ ಚಿತ್ರ ಮಿಂಚಲಾರಂಭಿಸಿದೆ.

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’ ಎಂಬ ಡೈಲಾಗನ್ನು 1300ಕ್ಕೂ ಹೆಚ್ಚು ಹುಡುಗಿಯರು ಡಬ್ ಸ್ಮ್ಯಾಶ್ ಮಾಡಿ ಸಂಭ್ರಮಿಸಿದ್ದಾರೆ. ಡಬ್ ಸ್ಮ್ಯಾಶ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಮ್ಯೂಸಿಕಲಿ ಸೇರಿದಂತೆ ನಾನಾ ಆಪ್ ಗಳಲ್ಲೀಗ ಪತಿಬೇಕು ಡಾಟ್ ಕಾಮ್ ಚಿತ್ರದ ಈ ಡೈಲಾಗೇ ರಿಂಗಣಿಸಲಾರಂಭಿಸಿದೆ!

    ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಇದೊಂದೇ ಒಂದು ಮಜಾಕಾದ ಡೈಲಾಗಿನಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿರೋದರಿಂದ ಚಿತ್ರ ತಂಡ ಹ್ಯಾಪಿ ಮೂಡಿನಲ್ಲಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಪತಿಬೇಕು ಡಾಟ್‍ಕಾಮ್‍ನಲ್ಲಿ ಶೀತಲ್ ಶೆಟ್ಟಿಯ ಸಂಚಾರ

    ಪತಿಬೇಕು ಡಾಟ್‍ಕಾಮ್‍ನಲ್ಲಿ ಶೀತಲ್ ಶೆಟ್ಟಿಯ ಸಂಚಾರ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದ ಶೀತಲ್ ಶೆಟ್ಟಿ ಇಂದು ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರುವ ಚಿತ್ರದ ಟ್ರೇಲರ್ ನೋಡುಗರನ್ನು ಸೆಳೆಯುತ್ತಿದೆ. ಈ ಮೊದಲು ಚಿತ್ರದ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತಿದ್ದ ಶೀತಲ್ ಶೆಟ್ಟಿ, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ. ಈಗಾಗಲೇ ಪತಿಬೇಕು ಡಾಟ್ ಕಾಮ್ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಶೀತಲ್ ಅವರ ಸಹಜ ನಟನೆ, ಡೈಲಾಗ್ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ.

    ಜುಲೈ 26ರಂದು ಸಿನಿಮಾದ ಟ್ರೇಲರ್ ಬಿಡುಗೊಡೆಗೊಂಡಿದ್ದು, 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಮಧ್ಯಮ ವರ್ಗದ ಕುಟುಂಬವೊಂದರ ಕಥೆಯನ್ನು ಚಿತ್ರ ಹೊಂದಿದೆ. ಪೋಷಕರು ಮಗಳ ಮದುವೆಗಾಗಿ ಅನುಭವಿಸುವ ಕಷ್ಟಗಳು, ತೊಂದರೆಗಳು ಎಲ್ಲವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಒಟ್ಟಿನಲ್ಲಿ ಜನರಿಗೆ ಹತ್ತಿರವಾಗುವಂತ ಕಥಾ ಹಂದರವನ್ನು ಸಿನಿಮಾ ಹೊಂದಿದೆ.

    ಮಗಳಿಗೆ ಮದುವೆ ಮಾಡೋದೆಂದರೆ ಮಧ್ಯಮ ವರ್ಗದ ಪೋಷಕರಿಗೆ ಜೀವನದ ಪ್ರಮುಖ ಘಟ್ಟ. ಅದರಲ್ಲಿಯೂ ಮಗಳಿಗೆ ಮೂವತ್ತು ವರ್ಷ ದಾಟಿದ್ರೆ, ಅವರು ಪರದಾಡುವ ಕಷ್ಟ ಅಷ್ಟಿಷ್ಟಲ್ಲ. ಅಂಥ ಮೂವತ್ತು ವರ್ಷ ದಾಟಿದ ಮಗಳ ಮದುವೆಗೆ ತಯಾರಾದ ಹುಡುಗಿಯ ಪಾತ್ರದಲ್ಲಿ ಶೀತಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಶೀತಲ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದೆಲ್ಲವೂ ಗಂಭೀರವಾದ ಪಾತ್ರಗಳೇ. ಆದರೆ ಈ ಚಿತ್ರದಲ್ಲಿ ಶೀತಲ್ ನಗಿಸುವಂಥಾ ಪಾತ್ರವಿದ್ದು, ಎಲ್ಲರ ಮನರಂಜಿಸಲು ಸಜ್ಜಾಗಿದ್ದಾರೆ.

    ರಾಕೇಶ್ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಅಭಿನಯ ಚಕ್ರವರ್ತಿ ಸುದೀಪ್, ನಿರ್ದೇಶಕ ಪ್ರೇಮ್, ವಿಲನ್ ಬೆಡಗಿ ಆ್ಯಮಿ ಜಾಕ್ಸನ್ ಅವರು ಟ್ರೇಲರ್ ರಿಲೀಸ್ ಮಾಡುತ್ತಿದ್ದು, ಇಡೀ ಸಿನಿಮಾ ತಂಡಕ್ಕೆ ಶುಭಕೋರಿದ್ದಾರೆ. ಸಿನಿಮಾ ಶೀಘ್ರದಲ್ಲಿಯೇ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.