Tag: Sheetal Shetty

  • ‘ವಿಂಡೋ ಸೀಟ್’ ಫಸ್ಟ್ ಲುಕ್‍ಗೆ ನಿಗದಿಯಾಯ್ತು ಮುಹೂರ್ತ

    ‘ವಿಂಡೋ ಸೀಟ್’ ಫಸ್ಟ್ ಲುಕ್‍ಗೆ ನಿಗದಿಯಾಯ್ತು ಮುಹೂರ್ತ

    ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಈಗಾಗಲೇ ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿತವಾಗಿದೆ. ತಿಂಗಳ ಹಿಂದಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತಲ್ಲಾ? ಅದು ಮಾಡಿದ್ದ ಮ್ಯಾಜಿಕ್ಕಿನ ಬಲದಿಂದಲೇ ಪ್ರೇಕ್ಷಕರು ಮತ್ತಷ್ಟು ವಿವರಗಳಿಗಾಗಿ ಕಾದು ಕೂತಿದ್ದರು. ಅದಕ್ಕೆ ಸರಿಯಾಗಿ ಶೀತಲ್ ಶೆಟ್ಟಿ ಕೂಡಾ ಇಷ್ಟರಲ್ಲಿಯೇ ಫಸ್ಟ್ ಲುಕ್ ಅನಾವರಣಗೊಳಿಸೋದಾಗಿಯೂ ಅನೌನ್ಸ್ ಮಾಡಿದ್ದರು. ಇದೀಗ ಕಡೆಗೂ ಅದಕ್ಕೆ ಮುಹೂರ್ತ ನಿಗದಿಯಾಗಿದೆ. ಇದೇ ತಿಂಗಳ 24ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ವಿಂಡೋ ಸೀಟ್‍ನ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.

    ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಸಿನಿಮಾ. ಹೀಗೊಂದು ಸುಳಿವಿನಾಚೆಗೆ ಬೇರೆ ಯಾವ ಅಂಶಗಳೂ ಜಾಹೀರಾಗದಂಥಾ ಜಾಣ್ಮೆಯನ್ನು ಶೀತಲ್ ಶೆಟ್ಟಿ ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ಈಗಾಗಲೇ ಬಿಡುಗಡೆಗೊಂಡಿರೋ ಮೋಷನ್ ಪೋಸ್ಟರ್ ಮಾತ್ರ ಅಷ್ಟ ದಿಕ್ಕುಗಳಿಂದಲೂ ನಾನಾ ಪ್ರಶ್ನೆಗಳು ಮೂಡಿಕೊಳ್ಳುವಂತೆ ಮಾಡಿಬಿಟ್ಟಿದೆ. ಅದರಲ್ಲಿ ಕಾಣಿಸಿಕೊಂಡಿದ್ದು ಅಗೋಚರ ಚಹರೆಗಳು ಮಾತ್ರ. ಅದರಲ್ಲಿ ನಾಯಕ ನಿರೂಪ್ ಭಂಡಾರಿಯ ಲುಕ್ ಹೇಗಿರಬಹುದು? ಇನ್ನುಳಿದ ಪಾತ್ರಗಳು ಯಾವ್ಯಾವ ಅವತಾರಗಳಲ್ಲಿ ಕಾಣಿಸಿಕೊಂಡಿವೆ ಎಂಬೆಲ್ಲ ಕುತೂಹಲಗಳಿದ್ದವು. ಇದೀಗ ಅದಕ್ಕೆಲ್ಲ ನಿಖರ ಉತ್ತರ ಸಿಗೋ ಕ್ಷಣಗಳು ಹತ್ತಿರಾಗುತ್ತಿವೆ. ಇದನ್ನೂ ಓದಿ: ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ಇದು ಜಾಕ್ ಮಂಜು ನಿರ್ಮಾಣದ ಚಿತ್ರ. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರವೂ ಹೌದು. ಈಗಾಗಲೇ ಶೀತಲ್ ನಟಿಯಾಗಿ ಸೈ ಅನ್ನಿಸಿಕೊಂಡಿದ್ದಾರೆ. ನಾಯಕಿಯಾಗಿಯೂ ಮಿಂಚಿದ್ದಾರೆ. ಈ ಹಿಂದೆ ಎರಡು ಕಿರು ಚಿತ್ರಗಳ ಮೂಲಕ ನಿರ್ದೇಶಕಿಯಾಗೋ ಸುಳಿವು ನೀಡಿದ್ದ, ಅವರೀಗ ಸದ್ದೇ ಇಲ್ಲದೆ ನಿರ್ದೇಶಕಿಯಾಗಿ ಆಗಮಿಸಿದ್ದಾರೆ. ಈ ಹಿಂದೆ ಎರಡೂ ಕಿರುಚಿತ್ರಗಳಲ್ಲಿಯೂ ಸೂಕ್ಷ್ಮವಂತಿಕೆಯ ಕಥಾ ಕುಸುರಿ ಮತ್ತು ಅಷ್ಟೇ ಸೂಕ್ಷ್ಮವಾದ ದೃಶ್ಯಗಳ ನೇಯ್ಗೆಗಳಿಂದ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಈ ಕಾರಣದಿಂದಲೇ ಅವರು ವಿಂಡೋ ಸೀಟ್‍ಗಾಗಿ ಯಾವ ಥರದ ಕಥೆಯನ್ನು ಆಯ್ಕೆ ಮಾಡಿಕೊಂಡಿರಬಹುದೆಂಬ ಕೌತುಕ ಮೂಡಿಕೊಂಡಿದೆ. ಇದೇ ತಿಂಗಳ 24ರಂದು ಅದಕ್ಕೆ ಸ್ಪಷ್ಟ ಉತ್ತರ ದೊರಕೀತೇನೋ. ಇದನ್ನೂ ಓದಿ: ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ಇತ್ತೀಚೆಗಷ್ಟೇ ಅರ್ಜುನ್ ಜನ್ಯಾ ಈ ಸಿನಿಮಾದ ಸಂಗೀತ ಸಾರಥ್ಯ ವಹಿಸಿಕೊಂಡಿರೋ ಸುದ್ದಿ ಬಂದಿತ್ತು. ಇದೀಗ ಅದೂ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ. ಇನ್ನುಳಿದಂತೆ ಎಲ್ಲ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳೂ ಸಂಪನ್ನಗೊಳ್ಳುತ್ತಿವೆ. ಇನ್ನೇನು ಕೊರೊನಾ ಕಂಟಕ ತಿಂಗಳೊಪ್ಪತ್ತಿನಲ್ಲಿಯೇ ನೀಗಿಕೊಳ್ಳುವ ನಿರೀಕ್ಷೆಗಳೂ ಇದ್ದಾವೆ. ಚಿತ್ರಮಂದಿರಗಳೆಲ್ಲ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿದರೆ ಬೇಗನೆ ವಿಂಡೋ ಸೀಟ್ ಕೂಡಾ ತೆರೆಗಾಣಲಿದೆ. ಅಂತೂ ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಭಾರೀ ಗೆಲುವು ತಮ್ಮದಾಗಿಸಿಕೊಳ್ಳೋ ಲಕ್ಷಣಗಳಂತೂ ಇದ್ದೇ ಇವೆ. ಸದ್ಯ ಎಲ್ಲರ ಚಿತ್ತ ಫಸ್ಟ್ ಲುಕ್ಕಿನತ್ತ ನೆಟ್ಟುಕೊಂಡಿದೆ.

  • ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!

    ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಕೊರೊನಾ ಬಾಧೆಯ ನಡುವೆಯೂ ಒಂದಷ್ಟು ಸುದ್ದಿ ಮಾಡುತ್ತಾ ಬಂದಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾದ ಮೋಷನ್ ಪೋಸ್ಟರ್ ತನ್ನ ನಿಗೂಢ ಚಹರೆಗಳ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ಅದನ್ನೇ ಕನಸಾಗಿಸಿಕೊಂಡಿರೋ ಶೀತಲ್ ಈ ಮೂಲಕ ನಿರ್ಣಾಯಕ ಹೆಜ್ಜೆಯಿರಿಸಿದ್ದಾರೆಂಬ ಮೆಚ್ಚುಗೆಯೂ ಕೇಳಿ ಬಂದಿತ್ತು. ಅದೇ ಖುಷಿಯಲ್ಲೀಗ ಶೀತಲ್ ಮತ್ತೊಂದು ಖುಷಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.

    ಕೊರೊನಾ ವೈರಸ್ ರುದ್ರತಾಂಡವವಾಡುತ್ತಿರುವಾಗಲೇ ಶೀತಲ್ ವಿಂಡೋ ಸೀಟ್‍ನ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಅದಾದ ನಂತರದಲ್ಲಿ ನಾನಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಜರುಗುತ್ತಾ ಬಂದಿದ್ದವು. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವಿಂಡೋ ಸೀಟ್‍ಗೆ ಬಂದು ಕೂತಿರೋ ಸುದ್ದಿ ಸ್ವತಃ ಶೀತಲ್ ಕಡೆಯಿಂದಲೇ ಹೊರ ಬಿದ್ದಿದೆ.

    ವಿಂಡೋ ಸೀಟ್ ಅನ್ನೋದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಚಿತ್ರ. ಸಂಕೀರ್ಣ ಕಥೆಯನ್ನ ಚೇತೋಹಾರಿಯಾಗಿಯೇ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಸವಾಲನ್ನು ಶೀತಲ್ ಇಲ್ಲಿ ಸ್ವೀಕರಿಸಿದ್ದಾರಂತೆ. ಈ ಕಥೆಯಲ್ಲಿ ನಾಯಕ ನಿರೂಪ್ ಭಂಡಾರಿ ಗಿಟಾರಿಸ್ಟ್ ಆಗಿ ನಟಿಸಿದ್ದಾರೆ. ಅದಕ್ಕೆ ಪೂರಕವಾಗಿ ಈ ಸಿನಿಮಾವನ್ನ ಮ್ಯೂಸಿಕಲ್ ಹಿಟ್ ಆಗಿಸೋ ಜವಾಬ್ದಾರಿಯನ್ನ ಅರ್ಜುನ್ ಜನ್ಯಾ ವಹಿಸಿಕೊಂಡಿದ್ದಾರೆ.

    ಈಗಾಗಲೇ ಅರ್ಜುನ್ ಜನ್ಯಾರ ಕೆಲಸ ಆರಂಭವಾಗಿದೆ. ಜನ್ಯಾ ತನ್ಮಯರಾಗಿ ಸಂಗೀತ ಪಟ್ಟು ಹಾಕುತ್ತಿರೋದರ ಬಗೆಗಿನ ವಿಡಿಯೋ ಒಂದನ್ನು ಶೀತಲ್ ಹಂಚಿಕೊಂಡಿದ್ದಾರೆ. ಅವರ ಪ್ರತಿಭೆ, ಕೆಲಸದ ಬಗ್ಗೆಯೂ ಬೆರಗಿನ ಮಾತುಗಳನ್ನಾಡಿದ್ದಾರೆ. ಜನ್ಯಾರ ಪ್ರತಿಭೆಯಿಂದಲೇ ವಿಂಡೋ ಸೀಟ್ ಮತ್ತಷ್ಟು ಆಕರ್ಷಣೀಯವಾಗುತ್ತಿರೋದರ ಬಗ್ಗೆಯೂ ಶೀತಲ್ ಥ್ರಿಲ್ ಆದಂತಿದ್ದಾರೆ.

    ಈ ಸಿನಿಮಾದ ಹೀರೋ ಗಿಟಾರಿಸ್ಟ್ ಎಂಬ ವಿಚಾರವೇ ಇಲ್ಲಿ ಸಂಗೀತದ ಮಹತ್ವ ಅದೆಷ್ಟಿದೆ ಅನ್ನೋದರ ಸಂಕೇತ. ಕಥೆಯಲ್ಲಿಯೇ ಸಂಗೀತ ಹೊಸೆದುಕೊಂಡಿದ್ದಾಗ ಅದು ಸಂಗೀತ ನಿರ್ದೇಶಕನ ಪಾಲಿಗೂ ಸವಾಲು. ಅದನ್ನು ಅರ್ಜುನ್ ಜನ್ಯಾ ಖುಷಿಯಿಂದಲೇ ಸ್ವೀಕರಿಸಿದ್ದಾರೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ ವಿಂಡೋ ಸೀಟ್ ಅನ್ನು ರಾಗಗಳಿಂದ ಕಳೆಗಟ್ಟಿಸೋ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಜಾಕ್ ಮಂಜು ನಿರ್ಮಾಣ ಮಾಡಿರುವ ವಿಂಡೋ ಸೀಟ್ ಕೊರೊನಾ ಕಾಲದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪ್ರಧಾನವಾದದ್ದು. ಲಾಕ್‍ಡೌನ್ ಆರಂಭವಾಗೋದಕ್ಕೂ ಮುಂಚಿತವಾಗಿಯೇ ಇದರ ಚಿತ್ರೀಕರಣವನ್ನ ಶೀತಲ್ ಮುಗಿಸಿಕೊಂಡಿದ್ದರು. ಯಾವುದೇ ಸದ್ದುಗದ್ದಲವಿಲ್ಲದೆ ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಅನ್ನೂ ಆರಂಭಿಸಿದ್ದರು. ಅರ್ಜುನ್ ಜನ್ಯಾ ಎಂಟ್ರಿಯ ಮೂಲಕ ಅದೀಗ ನಿರ್ಣಾಯಕ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಶೀತಲ್ ಕಡೆಯಿಂದ ಮತ್ತೊಂದಷ್ಟು ಸಿಹಿ ಸುದ್ದಿಗಳು ರವಾನೆಯಾಗೋ ನಿರೀಕ್ಷೆಗಳಿದ್ದಾವೆ.

  • ರಕ್ಷಿತ್ ಶೆಟ್ಟಿ ಸಿನಿಮಾ ರಂಗ ಪ್ರವೇಶಿಸಿ 10 ವರ್ಷ- ಗೆಳೆಯರಿಂದ ಶುಭಾಶಯ

    ರಕ್ಷಿತ್ ಶೆಟ್ಟಿ ಸಿನಿಮಾ ರಂಗ ಪ್ರವೇಶಿಸಿ 10 ವರ್ಷ- ಗೆಳೆಯರಿಂದ ಶುಭಾಶಯ

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ 10 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನಿರ್ದೇಶಕ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 10 ವರ್ಷ. ಮಗಾ, ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ರಕ್ಷಿತ್ ಶೆಟ್ಟಿ ಫೋಟೋವನ್ನು ಕಾಮನ್ ಡಿಪಿಯಾಗಿ ಬಳಸಿದ್ದಾರೆ.

    ಇನ್ನು ನಟಿ ಶೀತಲ್ ಶೆಟ್ಟಿ ವಿಶ್ ಮಾಡಿದ್ದು, ಅಭಿನಂದನೆಗಳು ರಕ್ಷಿತ್ ಶೆಟ್ಟಿ, ಇನ್ನಷ್ಟು ಅದ್ಭುತ ಅನುಭಗಳೊಂದಿಗೆ ನಿನ್ನ ಭವಿಷ್ಯ ಹೀಗೆಯೇ ಮುಂದುವರಿಯಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಶ್ ಮಾಡಿದ ಎಲ್ಲರಿಗೂ ರಕ್ಷಿತ್ ಶೆಟ್ಟಿ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಕನ್ನಡ ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ .ಬಿ ಶೆಟ್ಟಿ ಕೂಡ ರಕ್ಷಿತ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಅವರು, ರಕ್ಷಿತ್ ಶೆಟ್ಟಿ ಎಂಬ ಕನಸಿಗೆ ಹತ್ತು ವರ್ಷಗಳು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸನ್ನಷ್ಟೇ ಹೊತ್ತುಕೊಂಡು ಬೆಂಗಳೂರು ಸೇರಿದ ರಕ್ಷಿತ್ ಇಂದು ತನ್ನ ಕನಸನ್ನು ನನಸಾಗಿದ್ದಷ್ಟೇ ಅಲ್ಲ ಸಣ್ಣ ಊರಿನ ಭವಿಷ್ಯದ ಸಿನಿಮಾ ಕರ್ತೃಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹಿಟ್ ಸಿನಿಮಾಗಳು ಅನೇಕವಿದ್ದರೂ ನಾನು ಅವರ ಅಭಿಮಾನಿಯಾಗಿದ್ದು ಉಳಿದವರು ಕಂಡಂತೆಗೆ. ಕಾರಣ ನನ್ನೂರಿನ ಭಾಷೆ ಜನ ಮತ್ತು ಸಂಸ್ಕೃತಿಯನ್ನು ಆ ಸಿನಿಮಾದಲ್ಲಿ ಅವರು ಬಿಂಬಿಸಿದ ರೀತಿ. ಉಳಿದವರು ಕಂಡಂತೆ ಇಲ್ಲದಿದ್ದಲ್ಲಿ ಒಂದು ಮೊಟ್ಟೆಯ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿಯೇ ಆಗುತ್ತಿತ್ತು ಎನ್ನುವುದು ಸಂಶಯ. ಅಷ್ಟರ ಮಟ್ಟಿಗೆ ನಮ್ಮಲ್ಲಿ ನಂಬಿಕೆ ತಂದದ್ದು ರಕ್ಷಿತ್ ಮತ್ತವರ ಸಿನಿಮಾ. ರಕ್ಷಿತ್ ಇನ್ನಷ್ಟು ಬೆಳೆಯಲಿ ಎಂಬ ಆಶಯದೊಂದಿಗೆ ಅವರಿಗೆ ಒಳ್ಳೆಯಾದಾಗಲಿ ಎಂದು ಬರೆದುಕೊಂಡಿದ್ದಾರೆ.

    ರಕ್ಷಿತ್ ಸಿನಿಜರ್ನಿ:
    ಕರಾವಳಿಯ ಅಪ್ಪಟ ಪ್ರತಿಭೆಯಾಗಿರುವ ರಕ್ಷಿತ್ ಶೆಟ್ಟಿ, ಎರಡು ವರ್ಷ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಸಿನಿಮಾ ರಂಗ ಪ್ರವೇಶಿಸಿದ ಅವರು, ಆರಂಭದಲ್ಲಿ ತಾವು ನಟಿಸಿದ ಎರಡು ಸಿನಿಮಾಗಳು ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಆದರೆ ಛಲಬಿಡದ ರಕ್ಷಿತ್ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಸಿನಿಮಾದಲ್ಲಿ ನಟನೆ ಮಾಡಿ ಸೈ ಅನಿಸಿಕೊಂಡಿದ್ದಲ್ಲದೇ ಎಲ್ಲರ ಹಾಟ್ ಫೇವರೇಟ್ ಆಗಿ ಮಿಂಚಿದ್ದರು. ಆ ಬಳಿಕದ ‘ಉಳಿದವರು ಕಂಡಂತೆ’ ಒಂದು ಲೆವೆಲ್‍ನಲ್ಲಿ ರಕ್ಷಿತ್‍ಗೆ ಹೆಸರು ತಂದುಕೊಟ್ಟಿದ್ದು, ನಂತರ ನಟಿಸಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಕೂಡ ಸೆಟ್ಟೇರಿತು.

    ಇದಾದ ಬಳಿಕ ಅಮದರೆ 2016ರಲ್ಲಿ ‘ಕಿರಿಕ್ ಪಾರ್ಟಿ’ ಸನಿಮಾ ತೆರೆಕಂಡಿದೆ. ಆನಂತರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಿಲೀಸ್ ಆಗಿದ್ದು, ಜನರ ಮನಸ್ಸಲ್ಲಿ ಸಿಂಪಲ್ ಸ್ಟಾರ್ ಉಳಿದುಕೊಂಡರು. ಕೇವಲ ನಟರಾಗದೆ ನಿರ್ದೇಶಕರೂ ಆಗಿರುವ ರಕ್ಷಿತ್, ಸದ್ಯ ‘ಪುಣ್ಯಕೋಟಿ’, ‘ಸಪ್ತಸಾಗರದಾಚೆ ಎಲ್ಲೋ’, ‘777 ಚಾರ್ಲಿ’ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ.

  • ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

    ಸಿನಿಮಾಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸುತ್ತಲೇ ನಟಿಯಾಗಿ ರೂಪುಗೊಂಡಿದ್ದವರು ಶೀತಲ್ ಶೆಟ್ಟಿ. ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಅವರು ನಿರ್ದೇಶಕಿಯಾಗುತ್ತ ಗಂಭೀರವಾಗಿ ಹೆಜ್ಜೆಯಿಡುತ್ತಿರುವ ಮುನ್ಸೂಚನೆ ನೀಡಿದ್ದರು. ಇದೀಗ ಯಾವ ಸದ್ದುಗದ್ದಲವೂ ಇಲ್ಲದೆ ಅವರೊಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಂಡೋ ಸೀಟ್ ಎಂಬ ಆಕರ್ಷಕವಾದ ಈ ಚಿತ್ರದ ಅತ್ಯಾಕರ್ಷಕ ಟೈಟಲ್ ಪೋಸ್ಟರ್ ಇದೀಗ ಲಾಂಚ್ ಆಗಿದೆ.

    ಇದು ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಾಣದ ಚಿತ್ರ. ಬಹುಕಾಲದಿಂದಲೂ ಈ ಕಥೆಯನ್ನು ಸೃಷ್ಟಿಸಿ ಒಪ್ಪ ಓರಣವಾಗಿಸಿದ್ದ ಶೀತಲ್ ಶೆಟ್ಟಿ ಲಾಕ್‍ಡೌನ್‍ಗಿಂತಲೂ ಮುಂಚಿತವಾಗಿಯೇ ಚಿತ್ರೀಕರಣ ಮುಗಿಸಿಕೊಂಡಿದ್ದರು. ಇದೀಗ ಅದರ ಟೈಟಲ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದನ್ನು ಇಡೀ ಚಿತ್ರದ ಬಗ್ಗೆ ನಾನಾ ದಿಕ್ಕುಗಳಿಂದ ಆಲೋಚನೆಗೆ ಹಚ್ಚುವಂತೆ, ಕುತೂಹಲ ಮೂಡಿಸುವಂತೆ ರೂಪಿಸಲಾಗಿದೆ. ಈ ಮೂಲವೇ ಚೆಂದದ ಕಥೆಯೊಂದರ ಹೊಳಹನ್ನೂ ಕೂಡಾ ಶೀತಲ್ ಜಾಹೀರು ಮಾಡಿದ್ದಾರೆ.

    ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವವರು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಅಷ್ಟೇ ಥ್ರಿಲ್ ಆಗಿ ಒಪ್ಪಿಕೊಂಡಿದ್ದ ನಿರೂಪ್ ಇಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಯೋಜನೆಯಂತೆಯೇ ಸಾಗರ ಮುಂತಾದ ರಮಣೀಯ ತಾಣಗಳ ಸುತ್ತಮುತ್ತ ಚಿತ್ರೀಕರಣವನ್ನು ನಡೆಸಲಾಗಿದೆ.

    ಇದೀಗ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಲಾಕ್‍ಡೌನ್ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಲೇ ಶೀತಲ್ ವಿಂಡೋ ಸೀಟಿನ ಅಚ್ಚರಿಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಮಹತ್ವದ ಹೆಜ್ಜೆ. ವಿಂಡೋ ಸೀಟಿನ ಮೂಲಕ ಅವರ ಮಹಾ ಕನಸು ನನಸಾಗುತ್ತಿದೆ. ಈ ಬಗ್ಗೆ ಒಂದಷ್ಟು ವಿವರ ಕೊಡಬೇಕೆಂಬಷ್ಟರಲ್ಲಿ ಲಾಕ್‍ಡೌನ್ ಶುರುವಾಗಿತ್ತು. ಇಷ್ಟರಲ್ಲಿಯೇ ವಿಂಡೋ ಸೀಟ್‍ನ ಫಸ್ಟ್ ಲುಕ್ ಕೂಡಾ ಬಿಡುಗಡೆಗೊಳ್ಳಲಿದೆ. ಈಗ ಬಾಕಿ ಉಳಿದಿರೋ ಕೆಲಸ ಕಾರ್ಯಗಳತ್ತ ಗಮನ ಹರಿಸಿರುವ ಶೀತಲ್ ಇಷ್ಟರಲ್ಲಿಯೇ ಒಂದಷ್ಟು ಖುಷಿಯ ಸಂಗತಿಗಳನ್ನು ಪ್ರೇಕ್ಷಕರ ಮುಂದೆ ತಂದು ಹರವಲಿದ್ದಾರೆ.

  • ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

    ಹಿಂದೆ ಸಂಗಾತಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದರೂ ನಿರ್ದೇಶನದತ್ತಲೇ ಪ್ರಧಾನ ಆಸಕ್ತಿ ಹೊಂದಿರುವ ಅವರೀಗ ಕಾರು ಎಂಬ ಮತ್ತೊಂದು ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನು ಇದೇ ತಿಂಗಳ ಹದಿನೈದನೇ ತಾರೀಕಿನಂದು ಬಿಡುಗಡೆ ಮಾಡಲು ಶೀತಲ್ ಮುಂದಾಗಿದ್ದಾರೆ.

    ಸಂಗಾತಿ ಚಿತ್ರದಲ್ಲಿ ಸಂಬಂಧಗಳ ಬಗೆಗಿನ ಸೂಕ್ಷ್ಮ ಕಥೆಯನ್ನು ಶೀತಲ್ ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಬಾರಿ ಬಾಲ್ಯದಲ್ಲಿ ಎಲ್ಲರನ್ನೂ ಕಾಡಬಹುದಾದ ಕನಸಿನಂಥಾ ವಿಚಾರವನ್ನು ಕಾರು ಕಿರುಚಿತ್ರದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಳೇ ವಯಸ್ಸಿನಲ್ಲಿ ಮನಸೆಳೆಯುವ ಯಾವುದೇ ವಸ್ತಗಳ ಬಗ್ಗೆ ಥರ ಥರದ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಏನೇನಿರಬಹುದೆಂಬುದರ ಬಗ್ಗೆ ವಾಸ್ತವವನ್ನು ಮೀರಿಕೊಂಡ ರೋಮಾಂಚಕ ಕಲ್ಪನೆಗಳು ಕಾಡುತ್ತವೆ. ಹಾಗೆ ಎಳೇ ಜೀವವೊಂದನ್ನು ಕಾರೆಂಬ ಮಾಯೆ ಕಲ್ಪನೆಯಾಗಿ, ಬೆರಗಾಗಿ ಕಾಡುವಂಥಾ ಕಥೆ ಈ ಕಿರುಚಿತ್ರದ್ದು.

    ಕಾರು ಕಥೆಗೆ ಸರಿ ಹೊಂದುವಂಥಾ ಹೆಣ್ಣು ಮಗುವನ್ನು ಆಡಿಷನ್ ನಡೆಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮಗು ನಿರೀಕ್ಷೆಗಿಂತಲೂ ಹೆಚ್ಚೇ ಪರಿಣಾಮಕಾರಿಯಾಗಿ ನಟಿಸಿದೆಯಂತೆ. ಇದರ ಚಿತ್ರೀಕರಣ ಮಾಕೋನಹಳ್ಳಿ ಡ್ಯಾಂನ ಸುತ್ತಮುತ್ತಲ ರಮಣೀಯ ಪ್ರದೇಶಗಳಲ್ಲಿ ನಡೆಸಲಾಗಿದೆ. ಯೋಗೀಶ್ವರ್ ಛಾಯಾಗ್ರಹಣ, ಋತ್ವಿಕ್ ಸಂಕಲನ, ಅನಂತ್ ಕಾಮತ್ ಸಂಗೀತ ನಿರ್ದೇಶನ ಈ ಕಿರು ಚಿತ್ರಕ್ಕಿದೆ. ಕಾರು ಎಂಬ ಕನಸಿನಂಥಾ ಕಥೆಯ ಮೂಲಕ ಮತ್ತೊಂದು ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಲ್ಲಿ ಶೀತಲ್ ಅವರಿದ್ದಾರೆ. ಈ ಹಿಂದೆ ಸಂಗಾತಿ ಕಿರುಚಿತ್ರಕ್ಕೆ ಸಿಕ್ಕಂಥಾದ್ದೇ ಸ್ಪಂದನೆ ಕಾರಿಗೂ ಸಿಗುತ್ತದೆಂಬ ನಿರೀಕ್ಷೆಯೂ ಅವರಲ್ಲಿದೆ.

    https://twitter.com/isheethalshetty/status/1204435062034321408

  • ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

    ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

    ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

    ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

  • ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲಿದ್ದಾರೆ ಶೀತಲ್ ಶೆಟ್ಟಿ!

    ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲಿದ್ದಾರೆ ಶೀತಲ್ ಶೆಟ್ಟಿ!

    ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ನಾಗಿಯೂ ಕಾಣಿಸಿಕೊಂಡಿರೋ ಅವರು ಅದರ ಬೆನ್ನಲ್ಲೇ ಕಿರುಚಿತ್ರವೊಂದರ ಮೂಲಕ ಗಮನ ಸೆಳೆದಿದ್ದರು. ಸಂಗಾತಿಯೆಂಬ ಕಿರುಚಿತ್ರದ ಮೂಲಕ ಗಹನವಾದೊಂದು ಸಂಗತಿಯನ್ನು ಹೇಳಿದ್ದ ಶೀತಲ್ ಇದೀಗ ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ!

    ಸಂಗಾತಿ ಚಿತ್ರದ ಮೂಲಕವೇ ಸೂಕ್ಷ್ಮವಾಗಿ ಕಥೆ ಹೇಳೋ ಶೀತಲ್ ಶೆಟ್ಟಿ ಇದೀಗ ಬೇರೆಯದ್ದೇ ಬಗೆಯ ಕಥೆಯೊಂದನ್ನು `ಕಾರು’ ಎಂಬ ಕಿರು ಚಿತ್ರದ ಮೂಲಕ ಹೇಳ ಹೊರಟಿದ್ದಾರೆ.

    ಯಾವುದೇ ಕೆಲಸವನ್ನಾದರೂ ನೀಟಾಗಿ ಮಾಡಬೇಕೆಂಬ ಮನಸ್ಥಿತಿಯ ಶೀತಲ್ ಸಂಪೂರ್ಣ ತಯಾರಿ ಮಾಡಿಕೊಂಡೇ ಈ ಕಿರು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ವಹಿಸಿಕೊಂಡಿದ್ದಾರೆ. ನಡುವೆ ಅಂತರವಿರಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಯೋಗೀಶ್ವರ್ ಈ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೂ ಸಂಕಲನಕಾರರಾಗಿದ್ದ ಪ್ರದೀಪ್ ರಾವ್ ಈ ಚಿತ್ರದ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಭಿಷೇಕ್ ಪೋಸ್ಟರ್ ಡಿಸೈನ್ ಕಾರ್ಯ ನೋಡಿಕೊಂಡರೆ, ಅನಂತ್ ಕಾಮತ್ ಮ್ಯೂಸಿಕ್ ಈ ಕಿರುಚಿತ್ರಕ್ಕಿರಲಿದೆ.

    `ಕಾರು’ ಹನ್ನೆರಡದಿಂದ ಹದಿನೈದು ನಿಮಿಷದ ಕಿರುಚಿತ್ರ. ಒಳ್ಳೆ ಫೀಲ್ ಕೊಡೋದರ ಜೊತೆಗೆ, ಈ ಕಿರುಚಿತ್ರ ನೋಡಿದವರೆಲ್ಲರ ಮುಖದಲ್ಲಿಯೂ ತೃಪ್ತಿಯ ಮಂದಹಾಸ ಮೂಡುವಂತಾಗಬೇಕು ಎಂಬ ಉದ್ದೇಶದಿಂದಲೇ ಶೀತಲ್ ಈ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಪುಟ್ಟ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಏನೇನೋ ಕನಸಿರುತ್ತೆ. ಯಾವುದೋ ವಸ್ತು ಕನಸಾಗಿರುತ್ತೆ. ಅದರಲ್ಲಿ ಕೆಲವು ನಿಜವಾಗಿ ಮತ್ತೆ ಕೆಲವು ಸುಳ್ಳಾಗಲೂ ಬಹುದು. ಮತ್ತೆ ಕೆಲ ಕನಸುಗಳು ಭ್ರಮೆಯ ಕೂಸಾಗಿರಲೂಬಹುದು. ಇಂಥಾದ್ದೊಂದು ಹೊಳಹಿನೊಂದಿಗೇ ಸಿದ್ಧಗೊಂಡಿರೋ ಈ ಕಿರುಚಿತ್ರ ಪುಟ್ಟ ಹುಡುಗಿಯೊಬ್ಬಳ ಸುತ್ತ ತಿರುಗೋ ಕಥೆ.

    ಹಳ್ಳಿಯೊಂದರಲ್ಲಿ ಘಟಿಸೋ ಈ ಕಥೆಯನ್ನು ಮಧುಗಿರಿಯ ಸುತ್ತಲ ವಾತಾವರಣದಲ್ಲಿ ಚಿತ್ರೀಕರಿಸಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಈ ಚಿತ್ರಕ್ಕೆ ಬೇಕಾದ ಪುಟಾಣಿಗಾಗಿ ಶೀತಲ್ ಆಡಿಷನ್ ಕರೆದಿದ್ದರು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂರಕ್ಕೂ ಹೆಚ್ಚು ಮಕ್ಕಳು ಸಂಪರ್ಕಿಸಿದ್ದಾರೆ. ಇದರಲ್ಲಿಬ್ಬರನ್ನು ಆರಿಸಿಕೊಂಡಿರೋ ಶೀತಲ್ ಇಷ್ಟರಲ್ಲೇ ಅದರಲ್ಲೊಬ್ಬರನ್ನು ಫೈನಲ್ ಮಾಡಲಿದ್ದಾರಂತೆ.

    ಇದೀಗ ಈ ಕಿರುಚಿತ್ರದ ತಯಾರಿ ಚಾಲ್ತಿಯಲ್ಲಿದೆ. ಸಂಗಾತಿ ಚಿತ್ರದಲ್ಲಿ ಗಹನವಾದೊಂದು ವಿಚಾರವನ್ನು ಹೇಳಿದ ಕಲಾತ್ಮಕ ಶೈಲಿಯಿಂದ ಗಮನ ಸೆಳೆದಿದ್ದ ಶೀತಲ್ ಅದರ ಕಾರಣದಿಂದಲೇ ತಾಂತ್ರಿಕವಾಗಿಯೂ ಅನುಭವ ಪಡೆದುಕೊಂಡಿದ್ದಾರೆ. ಆ ಕಿರುಚಿತ್ರದ ಫಲವಾಗಿಯೇ ಕಾರು ಚಿತ್ರಕ್ಕೂ ಹಣ ಹೂಡುವವರೂ ಸಿಕ್ಕಿದ್ದಾರೆ. ಇನ್ನೇನು ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಸಿ, ಡಿಸೆಂಬರಿನಲ್ಲಿ ನಡೆಯಲಿರೋ ಗೋವಾ ಶಾರ್ಟ್ ಫಿಲಂ ಫೆಸ್ಟಿವಲ್‍ನಲ್ಲಿ ಈ ಕಿರುಚಿತ್ರವನ್ನು ಪ್ರದರ್ಶನ ಮಾಡಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ.

    ಈ ಮೂಲಕ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ನೆಲೆಗೊಳ್ಳುವ ಸೂಚನೆ ನೀಡಿದ್ದಾರೆ. ಕಾರು ಚಿತ್ರ ಪೂರ್ಣಗೊಂಡು ಬಿಡುಗಡೆಯಾದ ನಂತರ ಶೀತಲ್ ಮುಂದಿನ ನಡೆ ನಿಖರವಾಗಿ ಜಾಹೀರಾಗಬಹುದೇನೋ..?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನಿರ್ದೇಶಕಿಯೊಬ್ಬರ ಆಗಮನವಾಗಿದೆ ಮತ್ತು ಅವರ ಕಡೆಯಿಂದ ಇನ್ನೊಂದಷ್ಟು ಸಂವೇದನಾಶೀಲ ಕಥೆಗಳು ದೃಶ್ಯರೂಪ ಪಡೆಯಲಿವೆ. ಸಂಗಾತಿ ಎಂಬ ಕಿರು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿದೆ. ಈ ಕಿರುಚಿತ್ರಕ್ಕೆ ಸಿಕ್ಕಿರೋ ವ್ಯಾಪಕ ಮೆಚ್ಚುಗೆಗಳು ಅದನ್ನು ಮತ್ತಷ್ಟು ಖಚಿತವಾಗಿಸಿವೆ!

    ಕಿರುಚಿತ್ರಗಳಿಗೆ ಇರುವುದು ಅತ್ಯಲ್ಪ ಕಾಲಾವಧಿ. ಅಷ್ಟರಲ್ಲಿಯೇ ಹೇಳಬೇಕಿರೋದನ್ನು ಅಚ್ಚುಕಟ್ಟಾಗಿ ಹೇಳಿ ಅದು ನೋಡಿದವರ ಮನಸಲ್ಲಿಯೇ ಮತ್ತೆ ಅರಳಿಕೊಳ್ಳುವಂತೆ ಮಾಡೋದು ಕಿರು ಚಿತ್ರಗಳ ನಿಜವಾದ ಯಶಸ್ಸು. ಈ ನಿಟ್ಟಿನಲ್ಲಿ ಶೀತಲ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ.

    ಸಂಗಾತಿ ಎಂಬುದು ಒಂಟಿ ಹೆಣ್ಣೊಬ್ಬಳ ಸುತ್ತಾ ಹರಡಿಕೊಂಡಿರೋ ಕಥಾನಕ. ಡ್ರಾಮಾ ಟೀಚರ್ ಒಬ್ಬಳು ಗಂಡ ಮನೆಯನ್ನೆಲ್ಲ ತೊರೆದು, ಒಬ್ಬಂಟಿತನವನ್ನೇ ಹಚ್ಚಿಕೊಂಡು ಬದುಕೋದರ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತೆ. ಗಂಡನೆಂಬ ನೆರಳು, ಸಂಬಂಧಗಳ ಆಸರೆ ಇಲ್ಲದೆ ಹೆಣ್ಣೊಬ್ಬಳಿಗೆ ಅಸ್ತಿತ್ವವೇ ಇಲ್ಲ ಎಂಬುದು ಈ ನೆಲದ ಪಾರಂಪರಿಕ ನಂಬಿಕೆ. ಅದರ ಪದತಲದಲ್ಲಿ ಕಾಲಾಂತರಗಳಿಂದಲೂ ಹೆಣ್ತನದ ನಿಜವಾದ ತುಮುಲಗಳು ಪತರುಗುಟ್ಟುತ್ತಿವೆ.

    ಹೆಣ್ಣಿನ ಪರಿಭಾಷೆಯಲ್ಲಿ ಸಾಂಗತ್ಯ ಅಂದರೇನು ಅಂದರೆ ಗಂಡಿನ ಡಿಕ್ಷನರಿಯಲ್ಲಿ ಬೇರೆಯದ್ದೇ ಅರ್ಥಗಳಿವೆ. ಆದರೆ ಆಕೆಯ ಕಣ್ಣಲ್ಲಿ ಸಾಂಗತ್ಯವೆಂದರೆ ಒಂದು ನಂಬಿಕೆ, ನಿಷ್ಕಾರಣ ಕಾಳಜಿ. ಅದರ ನಡುವಲ್ಲಾಕೆ ನೆಮ್ಮದಿಯಾಗಿ ಬದುಕಿ ಬಿಡುತ್ತಾಳೆ. ಈ ಸತ್ಯವನ್ನು ಒಂಟಿ ಮಹಿಳೆ ಬೀದಿ ನಾಯಿ ಮರಿಯೊಂದಕ್ಕೆ ಆರೈಕೆ ಮಾಡಿ ಅದನ್ನು ಹಚ್ಚಿಕೊಳ್ಳೋದರ ಮೂಲಕ ಶೀತಲ್ ಶೆಟ್ಟಿ ಪರಿಣಾಮಕಾರಿಯಾಗಿ ದೃಷ್ಯೀಕರಿಸಿದ್ದಾರೆ.

    ಕುತೂಹಲ ಉಳಿಸಿಕೊಳ್ಳುವ ಜಾಣ್ಮೆಯೂ ಸೇರಿದಂತೆ ಒಟ್ಟಾರೆಯಾಗಿ ಎಲ್ಲ ವಿಭಾಗಗಳಲ್ಲಿಯೂ ಈ ಕಿರು ಚಿತ್ರ ಗಮನ ಸೆಳೆಯುವಂತಿದೆ. ಈ ಮೂಲಕ ಕನ್ನಡದಲ್ಲಿ ವಿರಳ ಸಂಖ್ಯೆಯಲ್ಲಿರುವ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಶೀತಲ್ ಸೇರಿಕೊಂಡಿದ್ದಾರೆ. ಅವರ ಮುಂದಿನ ನಡೆ ಚಿತ್ರ ನಿರ್ದೇಶನದತ್ತ ಸಾಗುವ ಲಕ್ಷಣಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ಪತಿಬೇಕು ಡಾಟ್ ಕಾಮ್ ಚಿತ್ರಕ್ಕೆ ಶೀತಲ್ ಶೆಟ್ಟಿ ನಾಯಕಿಯೂ ಹೌದು, ನಾಯಕನೂ ಹೌದು ಅಂತ ಖುದ್ದು ನಿರ್ದೇಶಕ ರಾಕೇಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಶೀತಲ್ ಶೆಟ್ಟಿ ಹೇಳೋ ಪ್ರಕಾರ ಈ ಚಿತ್ರದ ನಿಜವಾದ ನಾಯಕಿ ಭಾಗ್ಯ ಅಂತೆ!

    ಭಾಗ್ಯ ಈ ಇಡೀ ಚಿತ್ರದ ಕೇಂದ್ರ ಬಿಂದುವಾಗಿರೋ ಪಾತ್ರ. ಅದು ಕೆಳ ಮಧ್ಯಮವರ್ಗದಿಂದ ಬಂದ ಮೂವತ್ತು ದಾಟಿದ ಹೆಣ್ಣುಮಗಳೊಬ್ಬಳ ಭಾವಕೋಶವನ್ನು ಬಿಚ್ಚಿಡುವ ಪಾತ್ರ. ಅದು ಸಮಸ್ತ ಹೆಣ್ಮಕ್ಕಳ ಮನೋಭೂಮಿಕೆಯನ್ನು ಪ್ರತಿನಿಧಿಸುವ ಪಾತ್ರವೂ ಹೌದು. ಆ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ ಖುಷಿಯಷ್ಟೇ ತಮ್ಮದು ಅನ್ನುವ ಶೀತಲ್ ಶೆಟ್ಟಿ ಒಟ್ಟಾರೆ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಭರವಸೆ ಹೊಂದಿದ್ದಾರೆ.

    ಖಾಸಗಿ ವಾಹಿನಿಯೊಂದರಲ್ಲಿ ಖ್ಯಾತ ನಿರೂಪಕಿಯಾಗಿದ್ದುಕೊಂಡು ಕನ್ನಡಿಗರೆಲ್ಲರ ಮನ ಗೆದ್ದವರು ಶೀತಲ್ ಶೆಟ್ಟಿ. ವರ್ಷಗಟ್ಟಲೆ ಅದೇ ಕೆಲಸ ಮಾಡಿ ಏಕತಾನತೆ ಕಾಡಿಸಿಕೊಂಡಿದ್ದ ಅವರ ಪಾಲಿಗೆ ಸಿನಿಮಾ ಎಂಬುದು ತಾವು ಬಯಸಿದ ಬದಲಾವಣೆಗೊಂದು ದಾರಿ. ಆ ದಾರಿಯಲ್ಲಿ ಹಂತ ಹಂತವಾಗಿ ಬಹುದೂರ ಸಾಗಿ ಬಂದಿರುವ ಅವರ ಪಾಲಿಗೆ ಪತಿಬೇಕು ಡಾಟ್ ಕಾಮ್ ಚಿತ್ರ ಮಹತ್ವದ ಮೈಲಿಗಲ್ಲು.

    ನಟಿಸುವ ನಿರ್ಧಾರ ಮಾಡಿದ ಶೀತಲ್ ಶೆಟ್ಟಿಯವರಿಗೆ ಹೀರೋಯಿನ್ ಆಗಿ ಮಿಂಚುವ ಇರಾದೆ ಇಲ್ಲದಿದ್ದರೂ ಒಂದೊಳ್ಳೆ ಕಥೆ ಹೊಂದಿರೋ ಚಿತ್ರದಲ್ಲಿ ನಟಿಸೋ ಆಸೆಯಂತೂ ಇದ್ದೇ ಇತ್ತು. ನಿರ್ದೇಶಕ ರಾಕೇಶ್ ಮೊದಲ ಸಲ ಬಂದು ಕಥೆ ಹೇಳಿದಾಗ ಆ ಆಸೆ ನೆರವೇರಿದ ಸೂಚನೆ ಪಡೆದುಕೊಂಡಿದ್ದ ಶೀತಲ್‍ಗೆ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಕ್ಷಣದಲ್ಲೊಂದು ಆತ್ಮತೃಪ್ತಿಯಿದೆಯಂತೆ.

    ಈಗಾಗಲೇ ಈ ಚಿತ್ರ ಟ್ರೈಲರ್, ಸಂಭಾಷಣೆ ಮತ್ತು ಹಾಡುಗಳ ಮೂಲಕ ಎಲ್ಲ ವರ್ಗದವರನ್ನೂ ತಲುಪಿಕೊಂಡಿದೆ. ‘ಯಾಕಪ್ಪ ದೇವರೆ ಆಡಿಸ್ತಿ ಕ್ಯಾಬರೆ’ ಹಾಡಂತೂ ಅದೆಷ್ಟೋ ಹೆಣ್ಣು ಜೀವಗಳನ್ನು ಪ್ರಾತಿನಿಧಿಕ ಗೀತೆಯಂತೆಯೇ ಕಾಡಿದೆ. ಅದುವೇ ಹೆಂಗಳೆಯರನ್ನೆಲ್ಲ ಥೇಟರಿನತ್ತಲೂ ಸೆಳೆದುಕೊಳ್ಳೋದು ಖಚಿತ. ಬರೀ ಹೆಣ್ಣುಮಕ್ಕಳು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಕಚಗುಳಿ ಇಟ್ಟಿರೋ ಈ ಚಿತ್ರ ಶೀತಲ್ ಶೆಟ್ಟಿಯವರ ಪಾಲಿಗೆ ಅತ್ಯಂತ ಮಹತ್ವದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಪತಿಬೇಕು.ಕಾಂ’ಗೆ ನೀವು ವಿಸಿಟ್ ಮಾಡಬೇಕು ಯಾಕೆ: ಶೀತಲ್ ಮಾತಲ್ಲಿ ಕೇಳಿ

    ‘ಪತಿಬೇಕು.ಕಾಂ’ಗೆ ನೀವು ವಿಸಿಟ್ ಮಾಡಬೇಕು ಯಾಕೆ: ಶೀತಲ್ ಮಾತಲ್ಲಿ ಕೇಳಿ

    ಬೆಂಗಳೂರು: ನ್ಯೂಸ್ ಆ್ಯಂಕರ್ ಆಗಿ ಕನ್ನಡಿಗರ ಮನ ಗೆದ್ದಿದ್ದ ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ `ಪತಿ ಬೇಕು ಡಾಟ್ ಕಾಮ್’ ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಶೀತಲ್ ಶೆಟ್ಟಿ ತಮ್ಮ ಸಿನಿ ಜರ್ನಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ನನ್ನ ಜೀವನಕ್ಕೆ ನಾನೇ ಸಾರಥಿ
    ಖಾಸಗಿ ವಾಹಿನಿಯ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರೂ ಜೀವನದಲ್ಲಿ ಭಿನ್ನ ಅನುಭವ ಪಡೆಯಲು ಹೊಸ ಆಯ್ಕೆ ಮಾಡಬೇಕಾಯ್ತು. ಮೊದಲು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಅವಕಾಶ ಲಭಿಸಿದ್ದು ನನ್ನ ಅದೃಷ್ಟ. ನಿರೂಪಕಿಯಾಗಿ ವೃತ್ತಿ ಜೀವನದಲ್ಲಿ ತಕ್ಕಮಟ್ಟಿಗೆ ಹೆಸರು ಪಡೆದು, ಬಳಿಕ ಸಿನಿಮಾ ರಂಗಕ್ಕೆ ಪ್ರವೇಶದ ಮಾಡಿದೆ. ಆದರೆ ಎರಡು ರಂಗಗಳು ಉತ್ತಮವಾಗಿದ್ದು, ಜನರು ತಮ್ಮನ್ನು ಸ್ವೀಕರಿಸಿ ನಡೆದರೆ ಮಾತ್ರ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ. ನನ್ನ ಜೀವನಕ್ಕೆ ನಾನೇ ಸಾರಥಿಯಾಗಿದ್ದು, ನನ್ನ ವೃತ್ತಿ ಜೀವನದ ಬದಲಾವಣೆಯಲ್ಲೂ ನನ್ನ ನಿರ್ಧಾರ ಅಂತಿಮವಾಗಿತ್ತು. ಇದಕ್ಕೆ ಕುಟುಂಬ ಬೆಂಬಲವೂ ಇದೆ. ಸದ್ಯ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದ್ರು.

     

    ಟೈಟಲ್ ನಂದೇ ಐಡಿಯಾ
    ಪತಿಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ. ಸಿನಿಮಾ ಕುರಿತು ಯೋಚನೆ ಮಾಡುವ ವೇಳೆ ಕೆಲ ಟೈಟಲ್‍ಗಳು ಹೊಳೆಯಿತು. ಇದನ್ನು ನಿರ್ದೇಶಕರಿಗೆ ತಿಳಿಸಿದೆ. ಅವ್ರು ಕೇಳಿದ ಕೂಡಲೇ ಒಪ್ಪಿಕೊಂಡ್ರು. ಉಳಿದಂತೆ ಎರಡು ಮೂರು ಸಿನಿಮಾಗಳಿಗೆ ಟೈಟಲ್ ನೀಡಿದ್ದು ಮುಂದಿನ ದಿನಗಳಲ್ಲಿ ಟೈಟಲ್ ಶೀತಲ್ ಅಂತಾನೇ ಕರೆಯಬಹುದು ಎಂದು ಹೇಳಿ ನಸುನಕ್ಕರು.

    ಸಿನಿಮಾ ಕ್ಷೇತ್ರಕ್ಕೆ ಪ್ರವೇಶದ ಮಾಡಿದ ಬಳಿಕ ಕೆಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ ಇಷ್ಟು ಬೇಗ ಇಂತಹ ಮಹಿಳಾ ಪ್ರಧಾನ ಚಿತ್ರದಲ್ಲಿ ಅವಕಾಶ ಲಭಿಸುತ್ತದೆ ಎಂದುಕೊಂಡಿರಲಿಲ್ಲ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ಪತಿ ಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೇಳುಗರಿಗೆ ನಗು ತಂದರೂ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶ ಇದೆ. ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಅಂಶ ಪ್ರಮುಖವಾದದ್ದು, ಇದರ ಹಿನ್ನೆಲೆಯಲ್ಲಿ ಕಥೆ ಸಿದ್ಧವಾಗಿದ್ದು, ಮದುವೆಯೇ ಅಂತಿಮ ಎಂಬ ಭಾವನೆ ಹೊಂದಿರುವ ಯುವಕ ಅಥವಾ ಯುವತಿಯರು ನೋಡಲೇಬೇಕು ಎಂದರು.

    ಚಿತ್ರದ ‘ಯಾಕಪ್ಪ ದೇವ್ರೇ’ ಹಾಡು ಹಾಗೂ ನನ್ನ ಡೈಲಾಗ್ ಜನರಿಗಿಷ್ಟವಾಗಿ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರದ ಈ ಅಂಶಗಳು ಭರಪೂರ ಪ್ರಚಾರ ನೀಡುತ್ತಿದ್ದು, ನಾನು ಸಹ ಸಿನಿಮಾ ನೋಡುವ ವೇಳೆ ಎಷ್ಟು ಮನರಂಜನೆಯಿದೆ? ಖುಷಿ ಕೊಡುತ್ತಾ ಎಂದು ನೋಡುತ್ತೇನೆ. ನಮ್ಮ ಸಿನಿಮಾದಲ್ಲೂ ಯಾವುದೇ ಬೋರ್ ಹೊಡೆಸುವ ಅಂಶಗಳಲಿಲ್ಲ. ಚಿತ್ರ ಕಥೆಯೇ ಅದ್ಭುತವಾಗಿದ್ದು, ಧೈರ್ಯದಿಂದ ಎಲ್ಲ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುತ್ತಿರುವ ಪ್ರತಿ ಹೆಣ್ಣು ಮಕ್ಕಳು ಸಿನಿಮಾದಲ್ಲಿದ್ದಾರೆ. ಅದ್ದರಿಂದ ಸಿನಿಮಾ ಬಂದು ನೋಡಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಮನವಿ ಮಾಡಿದ್ರು.

    ಬೆಳಗಾಗುವ ಮುನ್ನ ಟಿಫನ್ ಬಾಕ್ಸ್ ಕಟ್ಟಿ ಗಾರ್ಮೆಂಟ್ಸ್ ಹೊರಡುವ, ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು, ಮಾತು ಆಡದೇ ಸಮಾಜದಲ್ಲಿ ನಗುತ್ತಲೇ ಸಾಗುವ ಎಲ್ಲಾ ಹೆಣ್ಣುಮಕ್ಕಳಿಗೆ ಈ ಸಿನಿಮಾ ಖುಷಿ ನೀಡುತ್ತದೆ. ಖಂಡಿತ ನಮ್ಮ ಸಿನಿಮಾದಲ್ಲಿ ಸಿನಿ ವೀಕ್ಷಕರು ಸ್ವೀಕರಿಸುವ ನಿರೀಕ್ಷೆ ಇದೆ. ಕಾಮಿಡಿ ಜೊತೆ ಕಮರ್ಷಿಲ್ ಅಂಶಗಳು ಮೂಡಿಬಂದಿದೆ. ಇದಕ್ಕೆ ನನ್ನ ಡೈಲಾಗ್ ಸಾಥ್ ನೀಡಿದ್ದು, ಆದ್ರೆ ಸಿನಿಮಾದಲ್ಲಿ ಯಾವುದೇ ಡೈಲಾಗ್ ಡಬಲ್ ಮಿನಿಂಗ್ ಅರ್ಥ ನೀಡುವುದಿಲ್ಲ. ಕುಟುಂದ ಎಲ್ಲಾ ಸದಸ್ಯರು ಕುಳಿತು ನೋಡುವ ಸಿನಿಮಾವಾಗಿದೆ. ಮುಂದೇ ಅಭಿಜ್ಞಾನ, ಚೇಸ್, ಗೂಢಾಚಾರಿ ಧರಮಣಿ, ಕಥಾ ಸಂಗಮ ಸೇರಿದಂತೆ ಸಾಲು ಸಾಲು ಸಿನಿಮಾಗಳು ಕೈಲಿದೆ. ಆದ್ರೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ ಎಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv