Tag: She Inspires Us

  • ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ

    ಪ್ರಧಾನಿ ಮೋದಿ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಹ್ವಾನವನ್ನು 8 ವರ್ಷದ ಬಾಲಕಿ, ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ತಿರಸ್ಕರಿಸಿದ್ದಾರೆ.

    ನಾಳೆ ಮಹಿಳಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣದ ನಿರ್ವಹಿಸುವಂತೆ, ಶೀ ಇನ್‌ಸ್ಪೈರ್ಸ್ ಯೂ  #SheInspiresUs ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಸಾಧಕಿಯರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದರು. ಆದರೆ ಈ ಆಹ್ವಾನವನ್ನು ಮಣಿಪುರದ ಲಿಸಿಪ್ರಿಯಾ ಕಂಗುಜಮ್ ನಿರಾಕರಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಲಿಸಿಪ್ರಿಯಾ ಕಂಗುಜಮ್, ‘ಮೋದಿಯವರೇ ನೀವು ಆರಂಭಿಸಿರುವ ಶೀ ಇನ್‌ಸ್ಪೈರ್ಸ್ ಯೂ ಅಭಿಯಾನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಭೂಮಿ ರಕ್ಷಣೆ ಕುರಿತ ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಈ ಗೌರವವನ್ನು ನಾನು ನಿರಾಕರಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ತಮ್ಮ ಬದುಕು ಹಾಗೂ ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡಲು ಮಹಿಳೆಯರಿಗೆ ಈ ಮಹಿಳಾ ದಿನದಂದು ನನ್ನ ಸಾಮಾಜಿ ಜಾಲತಾಣದ ಖಾತೆಯನ್ನು ಬಿಟ್ಟುಕೊಡುತ್ತೇನೆ. ಇದು ಲಕ್ಷಾಂತರ ಜನರರಲ್ಲಿ ಸ್ಫೂರ್ತಿಯನ್ನು ಬೆಳೆಸುತ್ತದೆ. ನೀವು ಅಂತಹ ಮಹಿಳೆಯಾ? ಅಥವಾ ನಿಮಗೆ ಅಂತಹ ಮಹಿಳೆಯ ಬಗ್ಗೆ ಗೊತ್ತಿದೆಯಾ? ಅಂತಹ ಕಥೆಗಳನ್ನು ಶೀ ಇನ್‌ಸ್ಪೈರ್ಸ್ ಅಸ್ ಹ್ಯಾಷ್‍ಟ್ಯಾಗ್‍ನಲ್ಲಿ ಹಂಚಿಕೊಳ್ಳಿ ಎಂದು ತಿಳಿಸಿದ್ದರು.

    ಪ್ರಧಾನಿ ಮೋದಿ ಅವರ ಟ್ವೀಟ್ ಹಿನ್ನೆಲೆಯಲ್ಲಿ ಭಾರತದ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಲಿಸಿಪ್ರಿಯಾ ಕಂಗುಜಮ್ ಅವರನ್ನು ಪರಿಚಯಿಸಲಾಗಿತ್ತು. ಬಳಿಕ ಮೋದಿ ಅವರು ಲಿಸಿಪ್ರಿಯಾ ಕಂಗುಜಮ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಬಾಲಕಿ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ನಾಳೆ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಭಾರತದ ಮೊದಲ ಪ್ಯಾರಟ್ರೂಪರ್ ತಂಡದ ಕ್ಯಾಪ್ಟನ್ ಆಗಿದ್ದ ರುಚಿ ಶರ್ಮಾ ನಿರ್ವಹಿಸಲಿದ್ದಾರೆ.