– ಬಿಜೆಪಿ ಒನ್ ಮ್ಯಾನ್ ಶೋ, 2 ಮ್ಯಾನ್ ಆರ್ಮಿ: ಸಿನ್ಹಾ
ನವದೆಹಲಿ: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಬಾಲಿವುಟ್ ನಟ ಶತ್ರುಘ್ನಾ ಸಿನ್ಹಾ ಪಕ್ಷ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೆವಾಲ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು. ಇದರೊಂದಿಗೆ ಬಿಹಾರದ ಪಾಟ್ನಾ ಸಾಹೇಬ್ ಕ್ಷೇತ್ರದಿಂದ ಲೋಕಸಭಾ ಕಣಕ್ಕೆ ಇಳಿದಿದ್ದು, ಬಿಜೆಪಿ ಪಕ್ಷದಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಈ ಹಿಂದೆ ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಶತ್ರುಘ್ನಾ ಸಿನ್ಹಾ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿ ಕ್ಷೇತ್ರದಲ್ಲಿ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿತ್ತು.
ಪಕ್ಷಕ್ಕೆ ಆಹ್ವಾನ ನೀಡಿ ಮಾತನಾಡಿದ ಕೆ.ಸಿ ವೇಣುಗೋಪಾಲ್, ಅತ್ಯುತ್ತಮ ಸಂಸದೀಯ ಪಟು ಶತ್ರುಘ್ನಾ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಷ್ಟು ದಿನ ಒಳ್ಳೆಯ ವ್ಯಕ್ತಿ ಕೆಟ್ಟ ಪಕ್ಷದಲ್ಲಿದ್ದರು. ಈ ಚುನಾವಣಾ ಪ್ರಜಾಪ್ರಭುತ್ವ ವಿರೋಧಿ ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪಕ್ಷಕ್ಕೆ ಸಿನ್ಹಾ ಸೇರ್ಪಡೆ ಮತ್ತಷ್ಟು ಶಕ್ತಿ ತುಂಬಿದೆ.
ಆ ಬಳಿಕ ಮಾತನಾಡಿದ ಸಿನ್ಹಾ, ಜಯಪ್ರಕಾಶ್ ರಿಂದ ಪ್ರಭಾವಿತರಾಗಿ ರಾಜಕೀಯ ಪ್ರವೇಶ ಮಾಡಿ, ವಾಜಪೇಯಿ ಸಮಯದಲ್ಲಿ ಬಿಜೆಪಿ ಸೇರ್ಪಡೆಯಾದೆ. ನನ್ನ ಚಿಂತನೆ ಸದಾ ಪ್ರಶ್ನೆ ಮಾಡುವ ರೀತಿಯಾಗಿತ್ತು. ಆದರೆ ಬಿಜೆಪಿಯಲ್ಲಿ ನನಗೆ ಪ್ರಶ್ನಿಸಲು ಅವಕಾಶವಿರಲಿಲ್ಲ. ನನ್ನನ್ನು ಬಿಜೆಪಿ ಮಾರ್ಗದರ್ಶನ ಮಂಡಳಿ ಸದಸ್ಯರನ್ನಾಗಿ ಮಾಡಿದ್ದರು. ಪಕ್ಷದಲ್ಲಿ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಅರುಣ್ ಶೌ ಅವರಿಗೂ ಗೌರವ ಇಲ್ಲದಂತಾಗಿದೆ. ಈಗ ನನ್ನ ಕನಸು ಸಾಕಾರಗೊಳ್ಳುತ್ತಿದೆ. ಕಾಂಗ್ರೆಸ್ ನಿಜವಾಗಿ ನನ್ನ ಮನೆಯಂತಾಗಿದೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿನ್ಹಾ, ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಸ್ವಾತಂತ್ರ್ಯವಿಲ್ಲವಾಗಿದ್ದು, ಸಂಪೂರ್ಣ ನಿರ್ಧಾರಗಳನ್ನು ಮೋದಿ ತೆಗೆದುಕೊಳ್ಳುತ್ತಾರೆ. ಒನ್ ಮ್ಯಾನ್ ಶೋ, ಟು ಮ್ಯಾನ್ ಆರ್ಮಿ ರೀತಿ ಬಿಜೆಪಿ ಪಕ್ಷ ಆಗಿದೆ. ನಾನು ಯಾವಾಗಲೂ ನಿರುದ್ಯೋಗ, ರೈತರು, ಪೌರ ಕಾರ್ಮಿಕರು, ಯುವಕರು, ಸ್ಮಾರ್ಟ್ ಸಿಟಿಗಳ ಪರ ಧ್ವನಿ ಎತ್ತುತ್ತಿದೆ. ಆದರೆ ರಾತ್ರೋ ರಾತ್ರಿ ನೋಟು ರದ್ದು ಮಾಡಿ ಜನ ಪರದಾಡುವಂತೆ ಮಾಡಿದರು. ಎಲ್ಲಾ ವರ್ಗದ ಜನರಿಗೆ ಕಷ್ಟವಾಗಿದೆ ಅಂತಾ ಮೋದಿಗೆ ಅರ್ಥವಾಗಿಲ್ಲ. ಸ್ವತಃ ಮೋದಿ ತಾಯಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದರು. ಇದರಿಂದ ಮೋದಿ ನೀಡಿದ ಸಂದೇಶವಾದರೂ ಏನು ಎಂದು ಪ್ರಶ್ನಿಸಿದರು.
ಇಂದು ಬಿಜೆಪಿ ಸಂಸ್ಥಾಪನಾ ದಿನವಾಗಿದ್ದು, ಇಷ್ಟೆಲ್ಲಾ ಮಾತನಾಡಲೂ ಬೇಸರವಾಗುತ್ತಿದೆ. ಆದರೆ ಸತ್ಯವನ್ನು ಹೇಳುವ ಸ್ಥಿತಿ ಉದ್ಭವಿಸಿದೆ. ನನಗೆ ಬಿಜೆಪಿ ಪಕ್ಷ ಬಿಡುವ ಮನಸ್ಸಿರಲಿಲ್ಲ, ಬದಲಿಗೆ ಪಕ್ಷವೇ ನನ್ನನ್ನು ಬಿಟ್ಟಿದೆ. ನದಿ ಇಲ್ಲದಿರುವ ಕಡೆ ಸೇತುವೆ ಕಟ್ಟುವ ಸುಳ್ಳು ಭರವಸೆ ಬಿಜೆಪಿ ನೀಡುತ್ತದೆ ಎಂದು ಹೇಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ‘ಮೋಟಾ ಸೇಠು’ ಎಂದು ವ್ಯಂಗ್ಯವಾಗಿ ಮಾತನಾಡಿದರು.
