Tag: Shashthi

  • ಷಷ್ಠಿ ಹಬ್ಬದಂದು ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತಾಭಿಷೇಕ

    ಷಷ್ಠಿ ಹಬ್ಬದಂದು ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತಾಭಿಷೇಕ

    ಚಾಮರಾಜನಗರ: ಷಷ್ಠಿ ಹಬ್ಬದ ದಿನದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಹಲವೆಡೆ ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿ ಮೊಟ್ಟೆ ಹಾಕಿ ನಾಗಾರಾಧನೆ ಮಾಡುತ್ತಾರೆ.

    ಷಷ್ಠಿ ಹಬ್ಬದ ದಿನ ಎಲ್ಲಾ ಕಡೆ ಹುತ್ತಕ್ಕೆ ಹಾಲೆರೆದು ನಾಗ ಪೂಜೆ ಮಾಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಹುತ್ತದ ಮುಂದೆ ಕೋಳಿ ಕುಯ್ದು ಅದರ ರಕ್ತವನ್ನು ಹುತ್ತಕ್ಕೆ ಎರೆಯುತ್ತಾರೆ. ಕೋಳಿ ತಲೆ ಹಾಗೂ ಕೋಳಿ ಮೊಟ್ಟೆಯನ್ನು ಹುತ್ತಕ್ಕೆ ಹಾಕಿ ನಾಗಾರಾಧನೆ ಮಾಡುತ್ತಾರೆ.

    ಹೀಗೆ ಪೂಜೆ ಮಾಡಿದರೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ತಮಗೆ ಕಾಣಿಸುವುದಿಲ್ಲ. ಅಲ್ಲದೆ ಅವುಗಳಿಂದ ತಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ಮೂಢನಂಬಿಕೆ ಗ್ರಾಮೀಣ ಜನರಲ್ಲಿದೆ.

    ಮೇಲ್ನೋಟಕ್ಕೆ ಇದು ಮೂಢನಂಬಿಕೆ ಎನಿಸಿದರೂ ಇದರ ಹಿಂದೆ ಒಂದು ಸದುದ್ದೇಶ ಅಡಗಿದೆ. ಬಹುಶಃ ಹುತ್ತದ ಒಳಗಿರುವ ಹಾವುಗಳಿಗೆ ಹಾಲೆರೆದರೆ ಅವುಗಳಿಗೆ ತೊಂದರೆ ಉಂಟಾಗಬಹುದು, ಹುತ್ತಕ್ಕೆ ಹಾಲಿನ ಬದಲಾಗಿ ಕೋಳಿ ಮೊಟ್ಟೆ ಹಾಗೂ ಕೋಳಿಯ ತಲೆ ಭಾಗವನ್ನು ಹಾಕಿದರೆ ಹಾವುಗಳಿಗೆ ಆಹಾರವಾದರು ಆಗಲಿ ಎಂಬ ದೃಷ್ಟಿಯಿಂದ ಹಿರಿಯರು ಈ ಸಂಪ್ರದಾಯ ಹುಟ್ಟು ಹಾಕಿರಬಹುದು ಎಂಬುದು ನಾಸ್ತಿಕರ ವಾದವಾಗಿದೆ.