Tag: Shashank

  • ಆದಿಪುರಾಣ-ಲವ್ವು ಕಿಸ್ಸು ಕಾಮ, ಭಾವನೆಗಳ ಹೋಮ!

    ಆದಿಪುರಾಣ-ಲವ್ವು ಕಿಸ್ಸು ಕಾಮ, ಭಾವನೆಗಳ ಹೋಮ!

    ಬೆಂಗಳೂರು: ಕಿಸ್ಸಿಂಗ್ ಸೀನೊಂದರ ಮೂಲಕ ಅಪಾದಮಸ್ತಕ ಬಿಸಿಯೇರಿಸಿದ್ದ ಆದಿಪುರಾಣದ ಪಾರಾಯಣ ಶುರುವಾಗಿದೆ. ಯುವ ಮನಸಿನ ತವಕ ತಲ್ಲಣಗಳನ್ನೇ ಜೀವಾಳವಾಗಿಸಿಕೊಂಡು, ಅದನ್ನೇ ಮನರಂಜನೆಯ ಮೂಲವಾಗಿಸಿಕೊಂಡು ತಯಾರಾಗಿರೋ ಈ ಚಿತ್ರ ಈ ಹಿಂದೆಯೇ ಏರಿಕೊಂಡಿದ್ದ ‘ಚುಂಬಕ ಕುತೂಹಲ’ವನ್ನು ತಣಿಸುವಲ್ಲಿ ಯಶ ಕಂಡಿದೆ!

    ಕಾಲೇಜು ಬೇಸಿನ ಕಥೆ ಹೊಂದಿದ ಸಿನಿಮಾ ಎಂದ ಮೇಲೆ ಅಲ್ಲಿ ಹಂಡ್ರೆಡ್ ಪರ್ಸೆಂಟ್ ಮನೋರಂಜನೆ ಖಚಿತ. ಅದನ್ನೇ ಉದ್ದೇಶವಾಗಿಸಿಕೊಂಡು ಆದಿ ಎಂಬ ಹುಡುಗನ ಸುತ್ತ ಹರಡಿಕೊಂಡ ಕಥಾನಕವನ್ನು ಆದಿಪುರಾಣ ಚಿತ್ರ ಒಳಗೊಂಡಿದೆ. ಕಾಲೇಜು ಜೀವನದಲ್ಲಿ ನಡೆಸಬಹುದಾದ ಅಷ್ಟೂ ಕಿತಾಪತಿಗಳನ್ನು ರಸವತ್ತಾಗಿಯೇ ದಾಖಲಿಸಿರೋ ಈ ಚಿತ್ರ ಆದಿ ಎಂಬ ಕಥಾ ನಾಯಕನ ಬದುಕಿನ ಘಟ್ಟಗಳ ಜೊತೆಯೇ ಯುವ ಜೀವನದ, ಪಡ್ಡೆ ಮನಸ್ಥಿತಿಯ ಹಲವಾರು ಆಯಾಮಗಳನ್ನೂ ತೆರೆದಿಡುತ್ತದೆ.

    ಆದಿ ಬೆಂಗಳೂರಿನಲ್ಲಿಯೇ ಓದಿ ಅದೇ ನಗರದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡ ಹುಡುಗ. ಆತನ ಜೊತೆಗೊಂದು ಪಡೆ. ಅದರ ಸದಸ್ಯರಿಗೆಲ್ಲ ಕುಡಿತವೂ ಸೇರಿದಂತೆ ನಾನಾ ಖಯಾಲಿ. ಆದರೆ ತನ್ನ ಸುತ್ತಾ ಮಿನಿ ಬಾರುಗಳಂಥವರೇ ಓಡಾಡಿಕೊಂಡಿದ್ದರೂ ಒಂದು ತೊಟ್ಟು ಎಣ್ಣೆಯನ್ನೂ ಒಳಗಿಳಿಸದ ನಿಗ್ರಹ ಆದಿಯದ್ದು. ಆದರೆ ಆತ ತನ್ನೊಳಗಿನ ವಯೋಸಹಜ ಕಾಮನೆಗಳನ್ನು ತಡೆದುಕೊಳ್ಳಲಾಗದೆ ಪೋಲಿ ಚಿತ್ರ ನೋಡುವಾಗ ಅಪ್ಪನ ಮುಂದೆಯೇ ರೆಡ್ ಹ್ಯಾಂಡಾಗಿ ಸಿಕ್ಕಿಬೀಳೋ ದೌರ್ಭಾಗ್ಯವೂ ಬರುತ್ತೆ. ಅದುವೇ ವಿವಾಹ ಭಾಗ್ಯವಾಗಿಯೂ ರೂಪಾಂತರಗೊಳ್ಳುತ್ತೆ.

    ಆದರೆ ಕೆಟ್ಟದ್ದೂ ಕೂಡಾ ಒಳಿತಾಗಿಯೇ ಬದಲಾದರೂ ಆದಿಗೆ ಫಸ್ಟ್ ನೈಟ್ ಭಾಗ್ಯ ಮಾತ್ರ ಕೂಡಿ ಬರೋದಿಲ್ಲ. ಪದೇ ಪದೆ ಪೋಸ್ಟ್ ಪೋನ್ ಆಗಲಾರಂಭಿಸಿದ ಫಸ್ಟ್ ನೈಟಿಂದ ಕಂಗಾಲಾಗಿ ಕಾವೇರಿದ ಆದಿಗೆ ಟೀಮ್ ಲೀಡರ್ ಹುಡುಗಿ ಹತ್ತಿರಾಗುತ್ತಾಳೆ. ಇದೆಲ್ಲದರ ನಡುವೆ ಆದಿಯ ಅವಸ್ಥೆ ಏನಾಗುತ್ತೆ ಎಂಬುದು ಅಸಲೀ ಕುತೂಹಲ.

    ಇಡೀ ಚಿತ್ರ ಆದಿಯ ಸುತ್ತ ಸುತ್ತಿದರೂ ಯುವ ಲೋಕಕ್ಕೆ ರೌಂಡು ಹೊಡೆದಂತೆ ಚಿತ್ರ ಮೂಡಿ ಬಂದಿರೋದರಿಂದ ಹೆಚ್ಚೇನೂ ಬೋರು ಹೊಡೆಸೋದಿಲ್ಲ. ಆದಿಯಾಗಿ ನಟಿಸಿರೋ ಶಶಾಂಕ್ ನಟನೆಯಲ್ಲಿ ಭರವಸೆ ಮೂಡಿಸಿದ್ದಾರೆ. ಒಟ್ಟಾರೆಯಾಗಿ ಆದಿಯ ಪುರಾಣವನ್ನು ಒಂದು ಬಾರಿ ನೋಡಲೇನೂ ಮೋಸವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಆದಿಯ ಕಾಮಿಡಿ ಕಂ ರೊಮ್ಯಾಂಟಿಕ್ ಪುರಾಣ!

    ಆದಿಯ ಕಾಮಿಡಿ ಕಂ ರೊಮ್ಯಾಂಟಿಕ್ ಪುರಾಣ!

    ಮೋಹನ್ ಕಾಮಾಕ್ಷಿ ನಿರ್ದೇಶನದ ಆದಿಪುರಾಣ ಟೈಟಲ್ ಲಾಂಚ್ ಬಳಿಕ ಪ್ರೇಕ್ಷಕರನ್ನು ಇದು ಯಾವ ಕೆಟಗರಿಯ ಚಿತ್ರ ಎಂಬಂಥಾ ಗೊಂದಲ ಕಾಡಿತ್ತು. ಆದರೆ ಇತ್ತೀಚೆಗೆ ನಾಯಕ ನಾಯಕಿಗೆ ಕಿಸ್ ಕೊಡುತ್ತಿರೋ ಫೋಟೋ ಒಂದು ವೈರಲ್ ಆಗುತ್ತಲೇ ಇದು ಮಾಡರ್ನ್ ಆದಿಯ ಪುರಾಣ ಎಂಬ ವಿಚಾರ ಸಾಬೀತಾಗಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಗಮನ ಕೇಂದ್ರೀಕರಿಸುವಂತಾಗಿದೆ.

    ಈ ಚಿತ್ರದ ನಾಯಕನ ಹೆಸರು ಆದಿ. ಫೈನಲ್ ಇಯರ್ ಇಂಜಿನಿಯರಿಂಗ್ ಕಲಿಕೆಯಿಂದ ಹಿಡಿದು ಆತನಿಗೆ ಕೆಲಸ ಸಿಕ್ಕಿ ಮದುವೆಯಾಗಿ ಈ ಹಂತದ ಕಥೆಯನ್ನು ಹಾಸ್ಯದ ಹಿಮ್ಮೇಳದೊಂದಿಗೆ ಕಟ್ಟಿ ಕೊಡಲಾಗಿದೆಯಂತೆ. ಕಾಲೇಜಿನ ವಾತಾವರಣದಿಂದಲೇ ತೆರೆದುಕೊಳ್ಳುವ ಪಕ್ಕಾ ಯೂಥ್‍ಫುಲ್ ಕಥೆ ಹೊಂದಿರುವ ಈ ಚಿತ್ರದ ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ವೆರೈಟಿಯದ್ದೆಂಬುದು ನಿರ್ದೇಶಕರ ಭರವಸೆ.

    ಶಮಂತ್ ನಿರ್ಮಾಣದ ಈ ಚಿತ್ರದಲ್ಲಿ ಶಶಾಂಕ್ ನಾಯಕನಾಗಿ ನಟಿಸಿದ್ದಾರೆ. ಮೋಕ್ಷಾ ಕುಶಾಲ್ ಮತ್ತು ಅಹಲ್ಯಾ ಸುರೇಶ್ ನಾಯಕಿಯರಾಗಿ ನಟಿಸಿದ್ದಾರೆ. ಮೋಕ್ಷಾ ಈ ಹಿಂದೆ ಆಯನ ಚಿತ್ರದಲ್ಲಿ ನಟಿಸಿದ್ದರು. ಅಹಲ್ಯಾ ಕಮರೊಟ್ಟು ಚೆಕ್ ಪೋಸ್ಟ್ ಹಾಗೂ ತಮಿಳು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಇವರಿಬ್ಬರೂ ಈ ಚಿತ್ರದ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯರಾಗಿ ಹೊರ ಹೊಮ್ಮಿದ್ದಾರೆ.

    14 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಂಕಲನಕಾರರಾಗಿದ್ದವರು ಮೋಹನ್ ಕಾಮಾಕ್ಷಿ. ಕತ್ತರಿ ಹಿಡಿದುಕೊಂಡೇ ನಿರ್ದೇಶನ ವಿಭಾಗದತ್ತ ಕಣ್ಣು ನೆಟ್ಟು ನಿರ್ದೇಶಕನಾಗೋ ಕನಸನ್ನು ಹೊಳಪಾಗಿಸಿಕೊಂಡಿದ್ದ ಮೋಹನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಿಪುರಾಣಕ್ಕೂ ಸೆನ್ಸಾರ್ ಕಾಟ!

    ಆದಿಪುರಾಣಕ್ಕೂ ಸೆನ್ಸಾರ್ ಕಾಟ!

    ಸೆನ್ಸಾರ್ ಎಂಬ ತೂಗುಗತ್ತಿ, ಚಿತ್ರ ನಿರ್ಮಾಪಕರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ದಿನಕ್ಕೊಂದರಂತೆ ಬರುವ ಸಿನಿಮಾಗಳನ್ನು ನೋಡಿ, ಸಣ್ಣಪುಟ್ಟ ದೃಶ್ಯಗಳಿಗೂ ಕತ್ತರಿ ಹಾಕಿ ಅಥವಾ ಎ ಸರ್ಟಿಫಿಕೇಟ್ ನೀಡುವ ಜಮಾನ ಇದೀಗ ಚಾಲ್ತಿಯಲ್ಲಿದೆ. ಇದೇ ಅನುಭವ `ಆದಿಪುರಾಣ’ ಚಿತ್ರತಂಡದ್ದು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರು, ಸೆನ್ಸಾರ್ ನವರೇ ಹೇಳುವಂತೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆದರೆ ರವಿಚಂದ್ರನ್ ಅವರ ಚಿತ್ರದ ಹಾಡೊಂದನ್ನು ಕೇವಲ 5 ಸೆಕೆಂಡ್ ಬಳಸಿರುವ ಕಾರಣ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ನೀಡುತ್ತೇವೆ ಎಂದಿದ್ದಾರೆ.

    ರವಿಚಂದ್ರನ್ ನಟನೆಯ ಆ ಚಿತ್ರಕ್ಕೇ ‘ಯು’ ಸರ್ಟಿಫಿಕೇಟ್ ಸಿಕ್ಕಿದ್ದು, ಅದನ್ನು ಬಳಸಿಕೊಂಡ ನಮಗೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಬೇಸರ ತಂದಿದೆ. ವಿಧಿ ಇಲ್ಲದೇ ‘ಎ’ ಸರ್ಟಿಫಿಕೇಟ್ ಗೇ ತೃಪ್ತಿ ಪಡಬೇಕಾದ ಸಂದರ್ಭ ಇದೀಗ ಬಂದಿದೆ. ಅದಕ್ಕಾಗಿ ಎ ಫಾರ್ ಆಲ್ ಎಂದು ಬಿಡುಗಡೆಗೆ ಸಿದ್ಧವಾಗಿದ್ದೇವೆ ಎಂದರು.

    ನಿರ್ಮಾಪಕ ಶಮಂತ್ ಅವರು ಮಾತನಾಡಿ, ಕೆಲವು ನಿರ್ಮಾಪಕರ ಜೊತೆ ಸೇರಿ, ಸೆನ್ಸಾರ್ ಮಂಡಳಿ ವಿರುದ್ಧ ಹೋರಾಡಿದ್ದೇ ನಮಗೆ ಮುಳುವಾಗಿದೆ. ಎಷ್ಟೆಂದರೂ ಜನರೇ ಚಿತ್ರದ ಅಲ್ಟಿಮೇಟ್ ಡಿಸೈಡಿಂಗ್ ಫ್ಯಾಕ್ಟರ್ ಆಗಿರೋದ್ರಿಂದ ಗಾಂಧಿ ಜಯಂತಿಯಂದು ಉಚಿತ ಪ್ರದರ್ಶನ ನಡೆಸಲು ಚಿಂತನೆ ನಡೆಸಲಾಗಿದೆ. ಜನರ ತೀರ್ಮಾನವೇ ಅಂತಿಮವಾಗಿದ್ದು, ಬರುವ ಐದರಂದು ಸುಮಾರು 65 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

    ಅಣ್ಣ ನಿರ್ಮಾಣ ಮಾಡಿರುವ ಚಿತ್ರದಲ್ಲಿ ನಾಯಕನಾಗಿರುವುದು ಸಂತಸ ತಂದಿದೆ. ಇಬ್ಬರು ನಾಯಕಿಯರ ಜೊತೆ ಚುಂಬನ ದೃಶ್ಯದಲ್ಲಿ ಭಾಗವಹಿಸಿದ್ದು ಅತ್ಯಂತ ಕಷ್ಟದ ಕೆಲಸ. ಜೀವನದಲ್ಲಿ ಇದೇ ಫಸ್ಟ್ ಟೈಮ್. ಐದು ಟೇಕ್ ನಲ್ಲಿ ಮುಗಿಯಿತು ಎಂದು ಶಶಾಂಕ್ ಅವರು ಹೇಳುವಾಗ ನಾಯಕಿ ಅಹಲ್ಯಾ ಸುರೇಶ್ ತಲೆ ಕೆಳಗೆ ಮಾಡಿ ನಗುತ್ತಿದ್ದರು.

    ಭರತನಾಟ್ಯ ಪ್ರವೀಣೆ ಹಾಗೂ ಬ್ರಾಹ್ಮಣ ಹುಡುಗಿಯಾಗಿ ಅಹಲ್ಯಾ ಸುರೇಶ್ ಅವರು ನಟಿಸಿದ್ದರೆ, ಮೋಕ್ಷ ಇನ್ನೋರ್ವ ನಟಿಯಾಗಿ ಚಿತ್ರದಲ್ಲಿ ಮಿಂಚಲಿದ್ದಾರೆ. 70ರ ದಶಕದ ಕ್ಯಾಬರೆ ಹಾಡನ್ನು ಹೋಲುವ ಒಂದು ಗೀತೆ ಚಿತ್ರದಲ್ಲಿರುವುದು, ಚಿತ್ರದ ಹಾಡಿನ ಬಗ್ಗೆ ಎಲ್ಲರೂ ಕುತೂಹಲ ವ್ಯಕ್ತಪಡಿಸುವಂತೆ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ಬೆಂಗಳೂರು: ಚಿತ್ರದ ಫಸ್ಟ್ ಲುಕ್ ಮೂಲಕವೇ ಭರವಸೆ ಮೂಡಿಸಿದ್ದ ನಟ ಅಜಯ್ ರಾವ್ ಅಭಿನಯದ `ತಾಯಿಗೆ ತಕ್ಕ ಮಗ’ ಚಿತ್ರ ಮೊದಲ ಹಾಡಿನ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.

    `ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂದು ಸಾಗುವ ಹಾಡು ಸಾಹಿತಿ ಜಯಂತ್ ಕಾಯ್ಕಿಣಿ ಲೇಖನದಲ್ಲಿ ಮೂಡಿ ಬಂದಿದ್ದು, ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಹಾಗೂ ರವೀಂದ್ರನಾಥ್ ಅವರು ಧ್ವನಿ ನೀಡಿದ್ದು ಕೇಳುಗರಲ್ಲಿ ಹೊಸ ಭಾವನೆಯನ್ನು ಮೂಡಿಸುತ್ತಿದೆ.

    ಅಜಯ್ ರಾವ್‍ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರ ಶಶಾಂಕ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಜುದಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಜಯ್‍ರಾವ್ ಹಾಗೂ ನಾಯಕಿ ಆಶಿಕಾ ರಂಗನಾಥ್ ನಡುವಿನ ರೊಮ್ಯಾಟಿಂಕ್ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿರುವ ಈ ಹಾಡು ಕುತೂಹಲ ಮೂಡಿಸುತ್ತಿದೆ. ಈ ಹಿಂದಿನ ಚಿತ್ರದಲ್ಲಿ ಅಜಯ್ ರಾವ್ ಲುಕ್ ಬದಲಾಗಿದ್ದರೂ ಹಾಡಿನಲ್ಲಿ ಅದೇ ಲವ್ ಬಾಯ್ ಇಮೇಜ್ ನೋಡುಗರಿಗೆ ಕಾಣಸಿಗುತ್ತಿದೆ.

    ಪ್ರೇಕ್ಷಕರ ನಡುವೆ ಲವ್ವರ್ ಬಾಯ್ ಆಗಿಯೇ ನೆಲೆ ನಿಂತ ನಟ ಅಜಯ್ ರಾವ್ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಚಿತ್ರದ ವಿಶೇಷವಾಗಿ ಎಕ್ಸ್ ಕ್ಯೂಸ್ ಮಿ ಚಿತ್ರದ ಬಳಿಕ ಸುಮಲತಾ ಅಂಬರೀಶ್ ಮತ್ತೆ ಅಜಯ್ ರಾವ್‍ಗೆ ತಾಯಿ ತೆರೆಮೇಲೆ ಬರುತ್ತಿರುವುದು ಎಲ್ಲರಲ್ಲೂ ಮತ್ತಷ್ಟು ಕುತೂಹಲ ಮೂಡಿಸಿದೆ. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಬಳಿಕ ಮತ್ತೆ ಶಂಶಾಕ್, ಅಜಯ್ ರಾವ್ ಜೋಡಿ ಒಂದಾಗಿದ್ದು ಅಕ್ಟೋಬರ್ ವೇಳೆಗೆ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ಬೆಂಗಳೂರು: ಪ್ರೇಕ್ಷಕರ ನಡುವೆ ಲವರ್ ಬಾಯ್ ಆಗಿಯೇ ನೆಲೆ ನಿಂತ ನಟ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆಲ್ಲೋದೊಂದು ಸಾಹಸ. ಆದರೆ ಅಜೇಯ್ ರಾವ್ ಈಗಾಗಲೇ ಅದರಲ್ಲಿ ಗೆದ್ದಿದ್ದಾರೆ. ಈ ಹಿಂದೆ ಧೈರ್ಯಂ ಚಿತ್ರದಲ್ಲಿ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿ ಮಿಂಚಿದ್ದಾರೆ!

    ಇತ್ತೀಚೆಗಷ್ಟೇ ತಾಯಿಗೆ ತಕ್ಕ ಮಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತಲ್ಲಾ? ಅದಕ್ಕೆ ಸಿಕ್ಕಿರುವ ಭರಪೂರ ಮೆಚ್ಚುಗೆ ಮತ್ತು ವ್ಯಾಪಕ ಪ್ರತಿಕಿಯೆಗಳಾ ಅಭಿಮಾನಿಗಳಿಗೆ ಈ ಗೆಟಪ್ಪು ಇಷ್ಟವಾಗಿರೋದರ ಸಂಕೇತ. ಶಶಾಂಕ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿ ನಿರ್ಮಾಪಕರಾಗಿದ್ದಾರೆ. ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ಈ ಚಿತ್ರದ ಟ್ರೇಲರ್ ಗೆ ದೊರೆತಿರೋ ಮನ್ನಣೆಯೇ ಗೆಲುವಿನ ಲಕ್ಷಣದಂತೆಯೂ ಗೋಚರಿಸುತ್ತಿದೆ.

    ಅಮ್ಮ ಮಗನ ಬಾಂಧವ್ಯದೊಂದಿಗೇ ದುಷ್ಟರ ವಿರುದ್ಧ ಬಡಿದಾಡುವ ಕಥಾ ಹಂದರದ ತಾಯಿಗೆ ತಕ್ಕ ಮಗನ ಬಗ್ಗೆ ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ. ಒಂದು ಟ್ರೇಲರ್ ಮೂಲಕವೇ ಇಡೀ ಚಿತ್ರವನ್ನು ಕೌತುಕದ ಕೇಂದ್ರ ಬಿಂದುವಿಗೆ ತಂದು ನಿಲ್ಲಿಸುವಲ್ಲಿ ನಿರ್ದೇಶಕ ಶಶಾಂಕ್ ಅವರೂ ಗೆದ್ದಿದ್ದಾರೆ. ಇಡೀ ಟ್ರೈಲರಿನಲ್ಲಿ ಎಲ್ಲರನ್ನು ಅಚ್ಚರಿಗೀಡು ಮಾಡಿರುವುದು ಅಜೇಯ್ ರಾವ್ ಅವರ ಗೆಟಪ್. ಈ ಹಿಂದಿನ ಲವರ್ ಬಾಯ್ ಇಮೇಜ್, ಆ ಮುಗ್ಧ ಛಾಯೆಯಿಂದ ಸಂಪೂರ್ಣವಾಗಿ ಹೊರ ಬಂದಂತೆ ಕಾಣಿಸುತ್ತಿರೋ ಅಜೇಯ್ ರಾವ್ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿ ಬಳಗವನ್ನು ಸಂಪಾದಿಸೋದರಲ್ಲಿ ಯಾವ ಸಂಶಯವೂ ಇಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪವರ್ ಸ್ಟಾರ್

    ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪವರ್ ಸ್ಟಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇದೇ ಮೊದಲ ಬಾರಿಗೆ ಡಿಫರೆಂಟ್ ಕ್ಯಾರೆಕ್ಟರ್ ಮಾಡುತ್ತಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪುನೀತ್ ಫ್ಯಾನ್ಸ್ ಅಂತೂ ಈ ಸುದ್ದಿಯನ್ನು ಕೇಳಿದರೆ ಖಂಡಿತ ಇಷ್ಟಪಡುತ್ತಾರೆ.

    ಪುನೀತ್ ಈಗ ಅಂಜನಿ ಪುತ್ರ ಸಿನಿಮಾ ಮುಗಿಸಿ ಹೊಸ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಅದಕ್ಕಾಗಿ ಹೊಸ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಇದೇ ಸಿನಿಮಾಕ್ಕಾಗಿ ಪುನೀತ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿರುವುದು, ಕೆನ್ನೆ ತುಂಬಾ ದಾಡಿ ಬಿಡುತ್ತಿರುವುದೂ ಎಲ್ಲರಿಗೂ ಗೊತ್ತು. ಆದರೆ ಇದೀಗ ಬಂದಿರುವ ತಾಜಾ ಖಬರ್ ಮಾತ್ರ ಪುನೀತ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಪುನೀತ್ ವಿಭಿನ್ನ ಗೆಟಪ್‍ಗಾಗಿ ಬೆವರು ಹರಿಸುತ್ತಿದ್ದಾರೆ. ಅದೇ ಅವರನ್ನು ಇಪ್ಪತ್ತು ವರ್ಷದ ಹರೆಯದ ಹುಡುಗನ ಲುಕ್ಕಿಗೆ ಕಾರಣವಾಗುತ್ತಿದೆ.

    ಇದನ್ನು ನೋಡುತ್ತಾ ನೋಡುತ್ತಾ ನಿಮಗೆ ಅಚ್ಚರಿಯಾಗಬಹುದು. ಒಂದು ಕಡೆ ಸಿಕ್ಸ್ ಪ್ಯಾಕ್ ಮಾಡುತ್ತಾ, ದೇಹದ ತೂಕ ಏರಿಸಿಕೊಳ್ಳುತ್ತಿರುವ ಮತ್ತು ದಾಡಿ ಬಿಡುತ್ತಿರುವ ಪುನೀತ್ ಇದ್ದಾರೆ. ಇನ್ನೊಂದು ಕಡೆ ಇಪ್ಪತ್ತು ವರ್ಷದ ಹರೆಯದ ಹುಡುಗನಾಗುತ್ತಿದ್ದಾರೆ. ಏನಿದು ಸಸ್ಪೆನ್ಸ್ ಆಫ್ ಶಶಾಂಕ್ ಸಿನಿಮಾ? ಹೀಗೊಂದು ಅನುಮಾನ ನಿಮ್ಮನ್ನು ಕಾಡುವುದು ಸಹಜ. ಅಲ್ಲೇ ಇರುವುದು ಕಹಾನಿ ಮೇ ಟ್ವಿಸ್ಟ್. ಅಂದರೆ ಬಹುಶಃ ಪುನೀತ್ ಎರಡು ಡಿಫರೆಂಟ್ ಶೇಡ್‍ನಲ್ಲಿ ಮಿಂಚಲಿದ್ದಾರೆ.

    ಇಪ್ಪತ್ತರ ಹರೆಯದ ಹುಡುಗನಾಗುವುದು ಅಷ್ಟು ಸುಲಭವಲ್ಲ. ಕೇವಲ ದಾಡಿ ಮೀಸೆಯನ್ನು ತೆಗೆದು, ಜೀನ್ಸ್, ಟೀ-ಶರ್ಟ್ ಹಾಕಿದರೆ ಮಾತ್ರ ಆ ಲುಕ್ ಬರುವುದಿಲ್ಲ. ಹೀಗಾಗಿಯೇ ಪುನೀತ್ ಡಯಟ್ ಮಾಡುತ್ತಿದ್ದಾರೆ. ಒಂದು ಕಡೆ ಸಿಕ್ಸ್ ಪ್ಯಾಕ್ ರಾಜಕುಮಾರ, ಇನ್ನೊಂದು ಕಡೆ ಹರೆಯದ ರಾಜರತ್ನ. ಎರಡು ಶೇಡ್‍ನಲ್ಲಿ ಪುನೀತ್ ಹೇಗೆ ಕಾಣಿಸುತ್ತಾರೆ? ಅದ್ಯಾವ ರೀತಿ ಶಶಾಂಕ್ ಈ ಎರಡು ಪಾತ್ರಗಳನ್ನು ಸೃಷ್ಟಿಸಿದ್ದಾರೆ? ಅದಕ್ಕೆಲ್ಲ ಉತ್ತರ ಈಗಂತೂ ಸಿಗುವುದಿಲ್ಲ. ಜನವರಿಯಲ್ಲಿ ಆರಂಭವಾಗಲಿರುವ ಈ ಸಿನಿಮಾ ಮುಂದಿನ ವರ್ಷ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

    https://www.youtube.com/watch?v=JjUkzuFGupw