Tag: Shashank Manohar

  • ಬಿಸಿಸಿಐಗೆ ತಲೆನೋವಾದ ಐಸಿಸಿ ಅಧ್ಯಕ್ಷ ಮನೋಹರ್ ಕಾರ್ಯ ವೈಖರಿ

    ಬಿಸಿಸಿಐಗೆ ತಲೆನೋವಾದ ಐಸಿಸಿ ಅಧ್ಯಕ್ಷ ಮನೋಹರ್ ಕಾರ್ಯ ವೈಖರಿ

    ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಕಾರ್ಯ ವೈಖರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬಹುದೊಡ್ಡ ತಲೆನೋವಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನ.15ರ ವರೆಗೂ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡುವ ಕುರಿತು ಶಶಾಂಕ್ ಮನೋಹರ್ ಅವರು ಯಾವುದೇ ಅಂತಿಮ ನಿರ್ಧಾರ ಮಾಡದಿರುವುದು ಬಿಸಿಸಿಐಗೆ ಸಮಸ್ಯೆ ತಂದಿಟ್ಟಿದೆ.

    ಕೊರೊನಾ ವೈರಸ್ ಕಾರಣದಿಂದ ಟಿ20 ವಿಶ್ವಕಪ್ 2020ರ ಅತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ (ಸಿಎ) ಹೇಳಿಕೆ ನೀಡಿದೆ. ಆದರೆ ಐಸಿಸಿ ಮಾತ್ರ ಟಿ20 ವಿಶ್ವಕಪ್ ಭವಿಷ್ಯದ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಒಂದೊಮ್ಮೆ ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ.

    ಕಳೆದ 4 ವರ್ಷಗಳ ಹಿಂದೆ ಬಿಸಿಸಿಐ ನೆರವಿನೊಂದಿಗೆ ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ ಆಗಿದ್ದರು. ಆದರೆ ಆ ಬಳಿಕ ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಿದ್ದರು. ಸದ್ಯ ಐಪಿಎಲ್ 2020ರ ಆವೃತ್ತಿ ಮೇಲೆ ಆತಂಕ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂ.10 ರಂದೇ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಸಿಸಿ ಈ ಹಿಂದೆ ಹೇಳಿತ್ತು. ಆದರೆ ಯಾರು ಊಹೆ ಮಾಡದಂತೆ ಜುಲೈನಲ್ಲಿ ಈ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಂದೂಡಲಾಗಿತ್ತು. ಪರಿಣಾಮ ಐಪಿಎಲ್ ಕುರಿತು ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಮಸ್ಯೆಯಾಗಿದೆ.

    ಶಶಾಂಕ್ ಅವರ ಐಸಿಸಿ ಅಧ್ಯಕ್ಷ ಸ್ಥಾನದ ಅವಧಿ ಶೀಘ್ರವೇ ಅಂತ್ಯವಾಗಲಿದೆ. ಆದರೆ ಅಂತಿಮ ಅವಧಿಯಲ್ಲಿ ಏಕೆ ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಟಿ20 ವಿಶ್ವಕಪ್ ನಿರ್ವಹಿಸಲು ಆಸ್ಟ್ರೇಲಿಯಾ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಟೂರ್ನಿಯನ್ನು ಮುಂದೂಡಲು 1 ತಿಂಗಳ ಅವಧಿ ತೆಗೆದುಕೊಳ್ಳುವ ಅಗತ್ಯವೇನಿದೆ? ಉದ್ದೇಶ ಪೂರ್ವಕವಾಗಿಯೇ ಬಿಸಿಸಿಐಗೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. 2020ರ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಸರಿ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಎದುರಾಗಲಿದೆ.

  • ದಾದಾ ಕೈ ತಪ್ಪಿದ ಐಸಿಸಿ ಅಧ್ಯಕ್ಷ ಪಟ್ಟ

    ದಾದಾ ಕೈ ತಪ್ಪಿದ ಐಸಿಸಿ ಅಧ್ಯಕ್ಷ ಪಟ್ಟ

    ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗುವ ಊಹಾಪೋಹಗಳಿಗೆ ತೆರೆಬಿದ್ದಿದೆ.

    ಬಿಸಿಸಿಐ ಮೂಲಗಳ ಪ್ರಕಾರ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗುವುದಿಲ್ಲ. ಏಕೆಂದರೆ ಪ್ರಸ್ತುತ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಅವಧಿ ಈ ತಿಂಗಳು ಕೊನೆಗೊಳ್ಳಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರನ್ನು ನೇಮಿಸಲು ಸಿದ್ಧತೆ ನಡೆದಿದೆ.

    ಐಸಿಸಿ ಅಧ್ಯಕ್ಷ ಹುದ್ದಗೆ ಸೌರವ್ ಗಂಗೂಲಿ ಅವರ ಹೆಸರು ಕೇಳಿಬಂದಿತ್ತು. ಆದರೆ ಐಸಿಸಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅಧ್ಯಕ್ಷರಾಗಲು ದಾರಿ ಮಾಡಿಕೊಟ್ಟಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಗ್ರೇಮ್ ಸ್ಮಿತ್ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಹೆಸರನ್ನು ಬೆಂಬಲಿಸಿದ್ದರು. ಐಸಿಸಿ ಅಧ್ಯಕ್ಷ ಹುದ್ದೆಗೆ ಗಂಗೂಲಿ ಅತ್ಯುತ್ತಮ ವ್ಯಕ್ತಿ ಎಂದು ಅವರು ಬಣ್ಣಿಸಿದ್ದರು. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಡೇವಿಡ್ ಗೋವರ್ ಕೂಡ ಗಂಗೂಲಿಯನ್ನು ಬೆಂಬಲಿಸಿದ್ದರು.

    ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಅವರಿಗೆ ಆಧುನಿಕ ಆಟ ಹಾಗೂ ಮುಂಬರುವ ಸವಾಲುಗಳ ಬಗ್ಗೆ ಉತ್ತಮ ತಿಳುವಳಿಕೆ ಇದೆ. ಅವರು ಅಧ್ಯಕ್ಷರಾಗುವುದರಿಂದ ಅನೇಕ ಬದಲಾವಣೆ, ಸುಧಾರಣೆಗಳನ್ನು ತರಬಹುದು ಎಂದು ಸ್ಮಿತ್ ಹೇಳಿದ್ದರು. ಆದಾಗ್ಯೂ ಸ್ಮಿತ್ ಅವರ ವಿಚಾರಗಳನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಜಾಕ್ ಫಾಲ್ ಅನುಮೋದಿಸಲಿಲ್ಲ.

    ವಿಶೇಷವೆಂದರೆ, 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾದ ಗಂಗೂಲಿ, 2015ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಅಧ್ಯಕ್ಷರಾಗಿದ್ದರು. ಬಿಸಿಸಿಐ ಅಧ್ಯಕ್ಷರಾಗುವ ಮೊದಲು ಐಪಿಎಲ್ 2019ರಲ್ಲಿ ದೆಹಲಿ ಕ್ಯಾಪಿಟಲ್ ತಂಡದ ಸಲಹೆಗಾರರಾಗಿದ್ದರು. ನಂತರ 2019ರ ಅಕ್ಟೋಬರ್ ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

  • ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಮುಂಬೈ: ಬಿಸಿಸಿಐ ಮುಂಬರುವ ವರ್ಷದಲ್ಲಿ ಏಕದಿನ ಸೂಪರ್ ಸೀರಿಸ್ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ 4 ದೇಶಗಳ ನಡುವೆ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ‘ಬಿಗ್ ತ್ರೀ’ ಮಂಡಳಿಗಳು ಐಸಿಸಿ ವಿರುದ್ಧವೇ ತೊಡೆ ತಟ್ಟಲು ಮುಂದಾಗುತ್ತಿದೆ.

    ಐಸಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಾರ್ಷಿಕ ಒಂದು ಸರಣಿಯನ್ನು ವಿಶ್ವಕಪ್ ಮಾದರಿಯಲ್ಲಿ ನಡೆಸಲು ಸಿದ್ಧತೆ ನಡೆಸಿತ್ತು. ಆ ಮೂಲಕ ವಾರ್ಷಿಕವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾಪಕ್ಕೆ ವಿರೋಧವಾಗಿ 4 ದೇಶಗಳ ನಡುವೆ ಸೂಪರ್ ಸೀರಿಸ್ ನಡೆಸಲು ಮುಂದಾಗುತ್ತಿದೆ.

    ಯಾಕೆ ಈ ಪ್ರಸ್ತಾಪ?
    ಆದಾಯ ಹಂಚಿಕೆ ವಿಚಾರದಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಕಿತ್ತಾಟಗಳು ನಡೆಯುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಹೆಚ್ಚು ಆದಾಯ ತಂದುಕೊಡುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಐಸಿಸಿಯ ಆದಾಯದಲ್ಲಿ ತಮಗೆ ಹೆಚ್ಚಿನ ಪಾಲನ್ನು ನೀಡುವಂತೆ ಈ ಹಿಂದೆಯೇ ಈ ಮಂಡಳಿಗಳು ಪ್ರಸ್ತಾಪ ಮಾಡಿದ್ದವು. ಬಿಗ್ ತ್ರೀ ಕ್ರಿಕೆಟ್ ರಾಷ್ಟ್ರಗಳ ಈ ಬೇಡಿಕೆಯನ್ನು ನಿರಾಕರಿಸಿದ್ದ ಐಸಿಸಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಇತರೇ ರಾಷ್ಟ್ರಗಳಿಗೂ ಕೂಡ ಆರ್ಥಿಕವಾಗಿ ಬೆಂಬಲ ನೀಡಬೇಕಾದ ಕಾರಣ ಹೆಚ್ಚಿನ ಪಾಲನ್ನು ನೀಡಲಾಗುವುದಿಲ್ಲ ಎಂದಿತ್ತು.

    ಐಸಿಸಿ ತನ್ನ ಹೆಚ್ಚಿನ ಆದಾಯವನ್ನು ಕ್ರಿಕೆಟ್ ಸರಣಿಯ ಟೆಲಿವಿಷನ್ ಪ್ರಸಾರ ಹಕ್ಕುಗಳ ಮಾರಾಟದ ಮೂಲಕ ಪಡೆಯುತ್ತದೆ. ಉದಾಹರಣೆ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಐಸಿಸಿ ಪ್ರತಿವರ್ಷ ವಿಶ್ವಕಪ್ ಮಾದರಿಯ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು.

    ಐಸಿಸಿಯ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಸದ್ಯ ಸೂಪರ್ ಸೀರಿಸ್ ಆಯೋಜನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ಟೂರ್ನಿಯಲ್ಲಿ ಆಡಲು ಇಂಗ್ಲೆಂಡ್ ಈಗಾಗಲೇ ಸಮ್ಮತಿ ಸೂಚಿಸಿದೆ. ಇತ್ತ ಆಸೀಸ್ ಕೂಡ ಒಲವು ತೋರಿದ್ದು, ಆ ಮೂಲಕ ‘ಬಿಗ್ ತ್ರೀ’ ಎಂದೇ ಖ್ಯಾತಿ ಪಡೆದಿರುವ ಈ ಮೂರು ಸಂಸ್ಥೆಗಳು ಐಸಿಸಿ ವಿರುದ್ಧವೇ ಒತ್ತಡವನ್ನು ಹಾಕುತ್ತಿವೆ.

    ಐಸಿಸಿಯ ಈಗಿನ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಸಂಸ್ಥೆ ದ್ವಿಪಕ್ಷೀಯ ಟೂರ್ನಿಗಳನ್ನು ಆಯೋಜಿಸಲು ಮಾತ್ರ ಅನುಮತಿಯನ್ನು ಹೊಂದಿವೆ. ಈಗ ನಿಯಮಗಳ ಬದಲಾವಣೆಗೂ ಐಸಿಸಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಐಸಿಸಿಯ ವಾರ್ಷಿಕ ಕ್ರಿಕೆಟ್ ಟೂರ್ನಿಯ ಪ್ಲಾನ್‍ಗೆ ಅಪಸ್ವರವೂ ಕೇಳಿ ಬಂದಿದ್ದು, ಐಸಿಸಿ ಇಂತಹ ಟೂರ್ನಿ ನಡೆಸುವುದರಿಂದ ಆಟಗಾರರ ಮೇಲಿನ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲು ಕೂಡ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವಾಗಿದೆ. ಬಿಸಿಸಿಐ ಅಂದುಕೊಂಡಂತೆ ನಡೆದರೆ 2021 ರಲ್ಲಿ ಸೂಪರ್ ಸೀರಿಸ್ ನಡೆಯಲಿದ್ದು, ಭಾರತದಲ್ಲೇ ಮೊದಲ ಟೂರ್ನಿ ನಡೆಯಲಿದೆ.

    ಬಿಸಿಸಿಐ, ಐಸಿಸಿ ತಿಕ್ಕಾಟ ಯಾಕೆ?
    ಬಿಸಿಸಿಐ ಹಾಗೂ ಐಸಿಸಿ ನಡುವಿನ ತಿಕ್ಕಾಟ ಹಿಂದಿನಿಂದಲೇ ಜೋರಾಗಿದ್ದು, ಈ ಹಿಂದೆ ಆದಾಯದ ಹೆಚ್ಚುವರಿ ಪಾಲನ್ನು ನೀಡದಿದ್ದರೆ ಐಸಿಸಿ ಮಂಡಳಿಯಿಂದಲೇ ಹೊರ ಬರುವ ಎಚ್ಚರಿಕೆಯನ್ನು ನೀಡಿತ್ತು. ಈ ಸೂಪರ್ ಸೀರಿಸ್ ಹಿಂದಿನ ಪ್ರಮುಖ ವ್ಯಕ್ತಿ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಆಗಿದ್ದು, ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಲು ಬೆಂಬಲವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ, ಶ್ರೀನಿವಾಸನ್ ಅವರ ಪ್ರಸ್ತಾಪವನ್ನು ಚಾಲ್ತಿಗೆ ತರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿದೆ.

    ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಆರಂಭದಲ್ಲೇ ಐಸಿಸಿ ಆದಾಯ ಹಂಚಿಕೆ ವಿರುದ್ಧ ಅಪಸ್ವರ ಎತ್ತಿದ್ದರು. ಅಲ್ಲದೇ ಬಿಸಿಸಿಐಗೆ ಹೆಚ್ಚಿನ ಆದಾಯವನ್ನು ತರುವುದು ತಮ್ಮ ಪ್ರಮುಖ ಗುರಿ ಎಂದಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಶ್ರೀನಿವಾಸನ್ ಅವರು ಕೂಡ ಮಂಡಳಿಗೆ ಹೆಚ್ಚಿನ ಆರ್ಥಿಕತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದರು. ಬಿಸಿಸಿಐ ವಿಶ್ವ ಕ್ರಿಕೆಟ್‍ಗೆ ಸೇರುವ ಆದಾಯ ಶೇ.75 ರಿಂದ 80ರಷ್ಟನ್ನು ನೀಡುತ್ತಿದೆ.

    ವಿಶೇಷ ಎಂದರೆ ಹಲವು ಕ್ರಿಕೆಟ್ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸತತ 3 ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಷ್ಟವನ್ನು ಎದುರಿಸುತ್ತಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ಆರ್ಥಿಕ ಸಮಸ್ಯೆಗೆ ಸಿಲುಕಿ ಆಟಗಾರರ ವೇತನವನ್ನು ಪಾವತಿ ಮಾಡಲು ಸಮಸ್ಯೆ ಎದುರಿಸಿತ್ತು. ಐರ್ಲೆಂಡ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದ ಆಯೋಜನೆಯ ಅವಕಾಶವನ್ನು ಕೈ ಚೆಲ್ಲಿತ್ತು. ಉಳಿದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಅದರ ಭವಿಷ್ಯವೇ ಡೋಲಾಯಮಾನವಾಗಿದೆ.

    ಬಿಸಿಸಿಐ ನಿರ್ಧಾರವೇಕೆ?
    ಈಗಾಗಲೇ ಬಿಸಿಸಿಐ ಅಧ್ಯಕ್ಷರು ಮಂಡಳಿಗೆ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸೀರೀಸ್ ಆಯೋಜಿಸಿದರೆ ಟೂರ್ನಿಯ ಪ್ರಸಾರ ಹಕ್ಕುಗಳು ಸಹಜವಾಗಿಯೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ಆದಾಯ ಹೆಚ್ಚಳವಾಗಲಿದೆ. ಅಲ್ಲದೇ ಸೂಪರ್ ಸೀರೀಸ್ ಟೂರ್ನಿ ನಡೆಯುವುದರಿಂದ ಐಸಿಸಿಯ ಮಿನಿ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಬಹುದಾಗಿದೆ.