ಮುಂಬೈ: ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದ (Economic Recession) ಭೀತಿ ಎದುರಿಸುತ್ತಿದ್ದರೆ ಭಾರತದ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್(Sensex) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಗುರುವಾರ ಒಂದೇ ದಿನ 762.0 ಅಂಕ ಏರಿಕೆಯಾಗಿದೆ. ಬುಧವಾರ 61,510.58 ರಲ್ಲಿ ಕೊನೆಯಾಗಿದ್ದರೆ ಇಂದು 62,272.68ರಲ್ಲಿ ವಹಿವಾಟು ಕೊನೆಗೊಳಿಸಿತು. ಈ ಹಿಂದೆ 2021ರ ಅಕ್ಟೋಬರ್ 19ಕ್ಕೆ 62,245ಕ್ಕೆ ಏರಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) 216 ಅಂಕ ಏರಿಕೆ ಕಂಡಿದೆ. ಬುಧವಾರ 18,267.25 ರಲ್ಲಿ ಕೊನೆಗೊಂಡಿದ್ದರೆ ಇಂದು 18,484.10 ರಲ್ಲಿ ವಹಿವಾಟು ಮುಗಿಸಿದೆ. ಇದನ್ನೂ ಓದಿ: ಮಗಳಿಗೆ ಕಂಪನಿಯಲ್ಲಿ ಇಲ್ಲ ಆಸಕ್ತಿ – ಟಾಟಾಗೆ ಬಿಸ್ಲೆರಿಯನ್ನು ಮಾರಲು ಮುಂದಾದ ರಮೇಶ್ ಚೌಹಾಣ್

ಏರಿಕೆ ಆಗಿದ್ದು ಯಾಕೆ?
ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್(Federal Reserve) ಬಡ್ಡಿ ದರ ಏರಿಕೆಯನ್ನು ತಡ ಮಾಡಬಹುದು ಎಂಬ ತಜ್ಞರ ಸಮಿತಿಯ ಸಲಹೆಯ ವರದಿ ಪ್ರಕಟವಾದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆಯತ್ತ ಆಸಕ್ತಿ ತೋರಿದ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಾಗಿದೆ.
ಈ ಕಾರಣದ ಜೊತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್ ಮುಂದೆ ರುಪಾಯಿ ಮೌಲ್ಯ ಚೇತರಿಕೆಯಾಗುತ್ತಿರುವುದು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
























