Tag: Share Market

  • ಷೇರುಪೇಟೆ ವಂಚನೆ: ಸೆಬಿ ಮಾಜಿ ಅಧ್ಯಕ್ಷೆ ಬುಚ್‌ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

    ಷೇರುಪೇಟೆ ವಂಚನೆ: ಸೆಬಿ ಮಾಜಿ ಅಧ್ಯಕ್ಷೆ ಬುಚ್‌ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

    ಮುಂಬೈ: ಷೇರು ಮಾರುಕಟ್ಟೆ ವಂಚನೆ (Stock Market Fraud) ಆರೋಪ ಹಿನ್ನೆಲೆಯಲ್ಲಿ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ (Madhabi Puri Buch) ಮತ್ತು ಇತರ ಐದು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ACB) ನ್ಯಾಯಾಲಯ ಆದೇಶಿಸಿದೆ.

    ಸಪನ್ ಶ್ರೀವಾಸ್ತವ ಎಂಬವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ತಾನು ತನಿಖೆಯ ಮೇಲ್ವಿಚಾರಣೆ ಮಾಡುತ್ತೇನೆ ಮತ್ತು 30 ದಿನಗಳಲ್ಲಿ ಪ್ರಕರಣದ ವರದಿಯನ್ನು ನೀಡುವಂತೆ ಸೂಚಿಸಿದೆ.  ಇದನ್ನೂ ಓದಿ: ಬರಿಗಾಲಲ್ಲಿ ವಿವೇಕ್ ರಾಮಸ್ವಾಮಿ – ಸಾಮಾಜಿಕ ಜಾಲತಾಣದಲ್ಲಿ ವಿವಾದ, ಚರ್ಚೆ

    ಕೋರ್ಟ್‌ ಆದೇಶದ ಬೆನ್ನಲ್ಲೇ ಸೆಬಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದೊಂದು ಕ್ಷುಲ್ಲಕ ಅರ್ಜಿಯಾಗಿದೆ. ಕೋರ್ಟ್‌ ಯಾವುದೇ ಸೂಚನೆ ನೀಡದೇ ಮತ್ತು ತನ್ನ ವಾದವನ್ನು ದಾಖಲಿಸಲು ಯಾವುದೇ ಅವಕಾಶವನ್ನು ನೀಡದೇ ಅರ್ಜಿಯನ್ನು ಪುರಸ್ಕರಿಸಿದೆ ಎಂದು ಹೇಳಿದೆ.

    ಹೆಸರಿಸಲಾದ ಅಧಿಕಾರಿಗಳು ಆ ಸಮಯದಲ್ಲಿ ತಮ್ಮ ಹುದ್ದೆಗಳನ್ನು ಹೊಂದಿರಲಿಲ್ಲ. ಅರ್ಜಿದಾರರು ಕ್ಷುಲ್ಲಕ ವಿಚಾರದ ಬಗ್ಗೆ ಅರ್ಜಿ ಸಲ್ಲಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇವರು ಹಿಂದೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು ಮಾತ್ರವಲ್ಲದೇ ದಂಡವನ್ನೂ ವಿಧಿಸಿದೆ ಎಂದು ತಿಳಿಸಿದೆ.

  • ಚಿನ್ನದ ಬೆಲೆ ಒಂದು ವಾರದಲ್ಲಿ 6 ಸಾವಿರ ಇಳಿಕೆ – ಇಂದು 680 ರೂ. ಇಳಿಕೆ

    ಚಿನ್ನದ ಬೆಲೆ ಒಂದು ವಾರದಲ್ಲಿ 6 ಸಾವಿರ ಇಳಿಕೆ – ಇಂದು 680 ರೂ. ಇಳಿಕೆ

    ನವದೆಹಲಿ: ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ. 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ (Gold Price) ಇಂದು (ನ.14) 680 ರೂ. ಇಳಿಕೆಯಾಗಿದ್ದರೆ 22 ಕ್ಯಾರೆಟ್‌ ಚಿನ್ನದ ಬೆಲೆ 624 ರೂ. ಇಳಿದಿದೆ.

    ಬೆಲೆ ಇಳಿಕೆಯಿಂದ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ  73,940 ರೂ. ಇದ್ದರೆ 10 ಗ್ರಾಂ 22 ಕ್ಯಾರೆಟ್‌ ಚಿನ್ನ ದರ  67,778 ರೂ.ಗೆ ಇಳಿದಿದೆ. 1 ಕೆಜಿ ಬೆಳ್ಳಿ ದರ 1,067 ರೂ. ಇಳಿಕೆಯಾಗಿದ್ದು ಇಂದು 88,130 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಇದನ್ನೂ ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಬಾಸ್‌- ಭಾರತ ಸಂಬಂಧ ಇಲ್ಲದೇ ಇದ್ದರೂ ಹಿಂದೂ ಹೆಸರು ಬಂದಿದ್ದು ಹೇಗೆ?

    ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ (US Presidential Election Results) ಪ್ರಕಟಗೊಂಡ ದಿನವಾದ ನ.6 ರಂದು 10 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ 80,413 ರೂ. ದರ ಇತ್ತು. ಒಂದು ವಾರದಲ್ಲಿ ಚಿನ್ನದ ಬೆಲೆ ಸುಮಾರು 6 ಸಾವಿರ ರೂ. ಇಳಿಕೆಯಾಗಿದೆ.

    ಯಾಕೆ ಇಳಿಕೆ?
    ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡಾಲರ್‌ (Dollar) ಮೌಲ್ಯ ಏರಿಕೆಯಾಗುತ್ತದೆ. ಅಮೆರಿಕದಲ್ಲಿ ಈಗ ಹಣದುಬ್ಬರ ಜಾಸ್ತಿಯಿದ್ದು ಬೆಲೆಗಳು ಏರಿಕೆಯಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಮುಂದೆ ಬಡ್ಡಿದರವನ್ನ ಏರಿಸುವ ಸಾಧ್ಯತೆಯಿದೆ. ಬಡ್ಡಿದರ ಏರಿಕೆಯಾದರೆ ಡಾಲರ್‌ ಮೌಲ್ಯವೂ ಏರಿಕೆ ಆಗುತ್ತದೆ. ಡಾಲರ್‌ ಬಾಂಡ್‌ಗಳ ಮೌಲ್ಯ ಏರಿಕೆ ವಿಶ್ವದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

    ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿಯಿಂದ ಹೂಡಿಕೆದಾರರು ಹಿಂದೆ ಸ್ಟಾಕ್‌ ಮಾರುಕಟ್ಟೆ ಮತ್ತು ಚಿನ್ನದ ಮೇಲೆ ಭಾರೀ ಹೂಡಿಕೆ ಮಾಡುತ್ತಿದ್ದರು. ಇದರಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಈಗ ಡಾಲರ್‌ ಬಲಗೊಳ್ಳುತ್ತಿದ್ದು ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಕಡಿಮೆ ಮಾಡುತ್ತಿರುವುದರಿಂದ ಬೆಲೆಗಳು ಇಳಿಕೆಯಾಗುತ್ತಿದೆ.

    ಅಕ್ಟೋಬರ್‌ನಲ್ಲಿ ಭಾರತ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) 1,14,445 ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದರೆ ಈಗಾಲೇ ನವೆಂಬರ್‌ನಲ್ಲಿ 27,683 ಕೋಟಿ ರೂ. ಹಿಂದಕ್ಕೆ ಪಡೆದಿದ್ದಾರೆ. ಪರಿಣಾಮ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ 81,973 ಇದ್ದ ಸೆನೆಕ್ಸ್‌ ಈಗ ಸುಮಾರು 4 ಸಾವಿರ ಅಂಕ ಪತನಗೊಂಡು 77,500 ಅಂಕಕ್ಕೆ ಕುಸಿದಿದೆ.

     

  • ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು

    ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು

    ಮುಂಬೈ: ನಿರೀಕ್ಷೆಯಂತೆ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ (Investors) ಸಂಪತ್ತು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ.

    ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

    ಯಾವುದು ಎಷ್ಟು ಇಳಿಕೆ?
    ಸೆನ್ಸೆಕ್ಸ್‌ 1,769.19 (-2.10%) ಅಂಕ ಕುಸಿದು 82.497.1ರಲ್ಲಿ ಕೊನೆಯಾಯಿತು. ನಿಫ್ಟಿ 50 546.80(-2.12%) ಇಳಿಕೆಯಾಗಿ 25,250.1ರಲ್ಲಿ ಮುಕ್ತಾಯಗೊಳಿಸಿತು. ನಿಫ್ಟಿ ಮಿಡ್‌ಕ್ಯಾಪ್‌ 100 1,333.60 (-2.04%) ಅಂಕ ಕುಸಿದು 59,024.7 ರಲ್ಲಿ ಕೊನೆಯಾಯಿತು. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ದಸರಾಗೆ ಇಷ್ಟೇ ದಿನ ರಜೆ ಕೊಡಿ ಅಂತ ಒತ್ತಾಯ ಮಾಡ್ಬೇಡಿ: ಕ್ಯಾಮ್ಸ್ ಆಗ್ರಹ 

    ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್‌ಕ್ಯಾಪ್‌ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್‌ ಕ್ಯಾಪ್‌ ವ್ಯಾಪ್ತಿಯಲ್ಲಿ ಬರುತ್ತವೆ.

    ರಕ್ತಪಾತಕ್ಕೆ ಕಾರಣ ಏನು?
    ಇಸ್ರೇಲ್‌ ಮತ್ತು ಇರಾನ್‌ ನಡುವಿನ ತಿಕ್ಕಾಟ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಭಾರೀ ಪ್ರಮಾಣದಲ್ಲಿ ದೇಶ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣವನ್ನು ಹಿಂದಕ್ಕೆ ಪಡೆದ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿದಿದೆ. ವಿದೇಶಿ ಷೇರು ಮಾರುಕಟ್ಟೆಯಲ್ಲಿ ಬುಧವಾರವೇ ರಕ್ತಪಾತವಾಗಿತ್ತು. ಬುಧವಾರ ಭಾರತದ ಷೇರು ಮಾರುಕಟ್ಟೆಗೆ ಗಾಂಧಿ ಜಯಂತಿಯಂದು ರಜೆ ಇದ್ದ ಕಾರಣ ಇಂದು ರಕ್ತಪಾತವಾಗಿದೆ.

     

  • ಅನಿಲ್‌ ಅಂಬಾನಿಗೆ ಸೆಬಿ ಶಾಕ್‌ – ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್‌, 25 ಕೋಟಿ ದಂಡ

    ಅನಿಲ್‌ ಅಂಬಾನಿಗೆ ಸೆಬಿ ಶಾಕ್‌ – ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್‌, 25 ಕೋಟಿ ದಂಡ

    ನವದೆಹಲಿ: ವಂಚನೆ ಎಸಗಿದ್ದಕ್ಕೆ ಮಾರುಕಟ್ಟೆ ನಿಯಂತ್ರಕ ಸೆಬಿಯು (SEBI) ಕೈಗಾರಿಕೋದ್ಯಮಿ ಅನಿಲ್ ಅಂಬಾನಿ (Anil Ambni) ಅವರನ್ನು ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ನಿಷೇಧಿಸಿ 25 ಕೋಟಿ ರೂ. ದಂಡ ವಿಧಿಸಿದೆ.

    ರಿಲಯನ್ಸ್ ಹೋಮ್ ಫೈನಾನ್ಸ್‌ನ (RIHL) ಕಂಪನಿಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕೆ ಕಂಪನಿಯ ಪ್ರಮುಖ ಅಧಿಕಾರಿಗಳು ಸೇರಿದಂತೆ ಅನಿಲ್‌ ಅಂಬಾನಿಗೆ ಸೇರಿದ 24 ಘಟಕಗಳ ಮೇಲೆ ಸೆಬಿ 5 ವರ್ಷ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲದೇ ಆರ್‌ಐಹೆಚ್‌ಎಲ್‌ ಸಂಸ್ಥೆಯನ್ನು ಸೆಕ್ಯೂರೀಟೀಸ್‌ ಮಾರುಕಟ್ಟೆಯಿಂದ 6 ತಿಂಗಳು ನಿರ್ಬಂಧಿಸಿ 6 ಲಕ್ಷ ರೂ. ದಂಡವನ್ನು ವಿಧಿಸಿದೆ.  ಇದನ್ನೂ ಓದಿ: ಫ್ರೆಂಚ್‌ ಫ್ರೈಸ್‌ ತಿನ್ನಲು ಅನುಮತಿ ನೀಡದ್ದಕ್ಕೆ ದೂರು – ಪತಿ ವಿರುದ್ಧ ಕ್ರೌರ್ಯದ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ

    ಪಟ್ಟಿಮಾಡಿದ ಯಾವುದೇ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (KMP) ಅಥವಾ ರಿಲಯನ್ಸ್‌ನಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯೂರಿಟೀಸ್ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದದಂತೆ ಸೆಬಿ ಅನಿಲ್‌ ಅಂಬಾನಿಗೆ ಸೂಚಿಸಿದೆ.

    ಆರ್‌ಎಚ್‌ಎಫ್‌ಎಲ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ನೆರವಿನಿಂದ ಅನಿಲ್ ಅಂಬಾನಿ ಅವರು ಕಂಪನಿಯ ಹಣವನ್ನು ತನ್ನ ಸಂಸ್ಥೆಗಳ ಸಾಲವನ್ನು ಮರೆಮಾಚುವ ಉದ್ದೇಶದಿಂದ ವಂಚನೆಯ ಯೋಜನೆಯನ್ನು ರೂಪಿಸಿದ್ದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಸೆಬಿ ಇಂದು ಕಠಿಣ ಕ್ರಮವನ್ನು ಕೈಗೊಂಡಿದೆ.

     

  • ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    ನವದೆಹಲಿ: ಅದಾನಿ ಸಮೂಹ ಕಂಪನಿಗಳ (Adani Group Companies) ವಿರುದ್ಧ ವರದಿ ಪ್ರಕಟಿಸಿ ಷೇರು ಮೌಲ್ಯ ಕುಸಿತ ಮಾಡಿದ್ದ ಹಿಂಡನ್‌ಬರ್ಗ್‌ (Hindenburg Research) ಶೀಘ್ರವೇ ಭಾರತ ಬಗ್ಗೆ ದೊಡ್ಡ ಸುದ್ದಿ ಪ್ರಕಟಿಸುವುದಾಗಿ ತಿಳಿಸಿದೆ.

    ಅದಾನಿ ಕಂಪನಿಯ ಬಗ್ಗೆಯೋ ಅಥವಾ ಬೇರೆ ಯಾವುದೋ ಕಂಪನಿಯೋ ಅಥವಾ ಯಾವುದೋ ಕ್ಷೇತ್ರಗಳ ಕಂಪನಿಗಳ ಬಗ್ಗೆ ವರದಿ ಬಿಡುಗಡೆ ಮಾಡುತ್ತದೋ ಎನ್ನುವುದರ ಬಗ್ಗೆ ಯಾವುದೇ ವಿವರವನ್ನು ಹಿಂಡನ್‌ಬರ್ಗ್‌ ನೀಡಿಲ್ಲ.


    2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್‌ ಸೆಲ್ಲಿಂಗ್‌ (Short Selling) ಕಂಪನಿ ಹಿಂಡನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿತ್ತು. ಜಾರಿ ನಿರ್ದೇಶನಾಲಯ (ED) ಇಡಿ ನಡೆಸಿದ ತನಿಖೆಯಲ್ಲಿ 16 ಕಂಪನಿಗಳು ಭಾರೀ ಲಾಭ ಮಾಡಿಕೊಂಡ ವಿಚಾರ ದೃಢಪಟ್ಟಿತ್ತು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಮಿತಿಯೂ ಅದಾನಿ ಕಂಪನಿಗೆ ಕ್ಲೀನ್‌ ಚಿಟ್‌ ನೀಡಿತ್ತು. ತನಿಖಾ ವರದಿಗಳು ಪ್ರಕಟವಾಗುತ್ತಿದ್ದಂತೆ ನಿಧಾನವಾಗಿ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಹಿಂಡನ್‌ಬರ್ಗ್‌ ವರದಿಯಿಂದ ವಿಶ್ವದ ಮೂರನೇ ಶ್ರೀಮಂತರ ವ್ಯಕ್ತಿಯಾಗಿದ್ದ ಗೌತಮ್‌ ಅದಾನಿ ಸಂಪತ್ತು ಕರಗಿ 30ನೇ ಸ್ಥಾನಕ್ಕೆ ಕುಸಿದಿದ್ದರು. ನಂತರ ಚೇತರಿಕೆ ಕಂಡು 12ನೇ ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

    ಏನಿದು ಶಾರ್ಟ್‌ ಸೆಲ್ಲಿಂಗ್‌?
    ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್‌ ಸೆಲ್ಲಿಂಗ್‌ ಎಂದು ಕರೆಯಲಾಗುತ್ತದೆ.

    ಅದಾನಿಯಿಂದ ಎಫ್‌ಪಿಒ ರದ್ದು:
    20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್‌ ಕಳೆದ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್‌ ಅದಾನಿ ಕಂಪನಿಗಳ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಗಳ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದನ್ನೂ ಓದಿ: ಹಿಂಡನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಅದಾನಿಗೆ ಮಾರಿಷಸ್‌ ಸರ್ಕಾರದಿಂದ ಕ್ಲೀನ್‌ ಚಿಟ್‌

    ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ (Gautam Adani) ತಿಳಿಸಿದ್ದರು.

     

  • ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆ, ಆರ್ಥಿಕ ಹಿಂಜರಿತ ಭೀತಿ – ಕರಗಿತು ಹೂಡಿಕೆದಾರರ 17 ಲಕ್ಷ ಕೋಟಿ  ರೂ. ಸಂಪತ್ತು

    ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆ, ಆರ್ಥಿಕ ಹಿಂಜರಿತ ಭೀತಿ – ಕರಗಿತು ಹೂಡಿಕೆದಾರರ 17 ಲಕ್ಷ ಕೋಟಿ ರೂ. ಸಂಪತ್ತು

    ಮುಂಬೈ: ಇಸ್ರೇಲ್‌- ಇರಾನ್‌ ಮಧ್ಯೆ ಯುದ್ಧ (Israel Iran War) ಭೀತಿ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ (USA Recession) ಲಕ್ಷಣ ಸೇರಿದಂತೆ ಹಲವಾರು ಕಾರಣಗಳಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 17 ಲಕ್ಷ ಕೋಟಿ ರೂ. ಕರಗಿದೆ.

    ಇಂದು ಬೆಳಗ್ಗೆಯೇ ಗಿಫ್ಟ್‌ ನಿಫ್ಟಿ 300 ಅಂಕ ಇಳಿಕೆಯಾಗಿತ್ತು. ಈ ಕಾರಣದಿಂದ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸೆನ್ಸೆಕ್ಸ್‌ 2,500 ಅಂಕ ಪತಗೊಂಡರೆ ನಿಫ್ಟಿ 760 ಅಂಕ ಇಳಿಕೆಯಾಗಿದೆ.  ಇದನ್ನೂ ಓದಿ: ಜನರನ್ನ ಕಾಪಾಡಬೇಕಾದ ಶಾಸಕರೇ ನರಭಕ್ಷಕರಾದ್ರೆ ನಮ್ಮ ಗತಿಯೇನು?: ಮೃತ ಪಿಎಸ್‌ಐ ಪರಶುರಾಮ್ ಮಾವ ಕಿಡಿ

    ಪತನವಾಗಲು ಕಾರಣ ಏನು?
    ಅಮೆರಿಕದ ಆರ್ಥಿಕ ಹಿಂಜರಿತ ಭೀತಿ:
    ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆಗೆ (Job Growth) ನಿರೀಕ್ಷೆಗಿಂತಲೂ ಕಡಿಮೆಯಾಗಿದೆ. ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕೇವಲ 1,14,000 ಉದ್ಯೋಗಿಳ ನೇಮಕವಾಗಿದೆ ಎಂದು ವರದಿ ಮಾಡಿದೆ. ಕಳೆದ ತಿಂಗಳು 1,75,000 ಉದ್ಯೋಗಿಗಳ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದರೆ ಪ್ರತಿ ತಿಂಗಳು 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ಅಮೆರಿಕದಲ್ಲಿ ನಿರುದ್ಯೋಗ (Unemployment) ದರವು 4.3%ಕ್ಕೆ ಏರಿದ್ದು, ಇದು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.

    ಜಪಾನ್‌ನಲ್ಲಿ ಬಡ್ಡಿದರ ಏರಿಕೆ
    ಹಣದುಬ್ಬರವನ್ನು ನಿಯಂತ್ರಿಸಲು ಜಪಾನಿನ ಕೇಂದ್ರ ಬ್ಯಾಂಕ್‌  ಆಗಿರುವ ಬ್ಯಾಂಕ್‌ ಆಫ್‌ ಜಪಾನ್‌ (Bank Of Japan) ಬಡ್ಡಿದರವನ್ನು 0.25% ಏರಿಕೆ ಮಾಡಿದೆ ಮತ್ತು ಬಾಂಡ್‌ ಖರೀದಿಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮ ಜಪಾನ್‌ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಏಷ್ಯಾ ಸೇರಿದಂತೆ ವಿಶ್ವದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬಿದ್ದಿದೆ. ಜಪಾನ್‌ ನಿಕ್ಕಿ 4,451 ಅಂಕ (14%) ಇಳಿಕೆಯಾಗಿದೆ. 2011 ರ ಆರ್ಥಿಕ ಬಿಕ್ಕಟ್ಟಿನ ನಂತರ ಆಗಿರುವ ಅತಿದೊಡ್ಡ ನಷ್ಟ ಇದಾಗಿದೆ.

    ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು
    ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಂದ ಇಸ್ರೇಲ್‌ನ ಮೇಲೆ ಸಂಭಾವ್ಯ ದಾಳಿಯ ಬಗ್ಗೆ ಕಳವಳಗಳು ಹೆಚ್ಚಾದ ಕಾರಣ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ಸೋಮವಾರ ದಾಳಿ ನಡೆಸಹುದು ಅಮೆರಿಕ ಹೇಳಿಕೆಯೂ ಪರಿಣಾಮ ಬೀರಿದೆ.

    ಜೂನ್‌ ತ್ರೈಮಾಸಿಕ ವರದಿ:
    ಭಾರತದ ಹಲವು ಕಂಪನಿಗಳು ನಿರೀಕ್ಷೆಗಿಂತಲೂ ಹೆಚ್ಚು ಬೆಳವಣಿಗೆ ಸಾಧಿಸಲು ವಿಫಲವಾಗಿದೆ. ಲಾಭಾಂಶ ಕಡಿಮೆ ಆಗಿರುವುದರಿಂದ ಭಾರತದ ಮಾರುಕಟ್ಟೆಯಿಂದ ಹೂಡಿಕೆದಾರರು ಹಣವನ್ನು ತೆಗೆದಿದ್ದಾರೆ.

     

  • Budget 2024 | ದಿಢೀರ್‌ ಕುಸಿತಗೊಂಡು ನಂತರ ಸಾವಿರ ಅಂಕ ಏರಿಕೆಯಾಗಿ ಸೆನ್ಸೆಕ್ಸ್‌ ಮತ್ತೆ ಕುಸಿದಿದ್ದು ಯಾಕೆ?

    Budget 2024 | ದಿಢೀರ್‌ ಕುಸಿತಗೊಂಡು ನಂತರ ಸಾವಿರ ಅಂಕ ಏರಿಕೆಯಾಗಿ ಸೆನ್ಸೆಕ್ಸ್‌ ಮತ್ತೆ ಕುಸಿದಿದ್ದು ಯಾಕೆ?

    ನವದೆಹಲಿ: ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ಗೆ ಷೇರು ಮಾರುಕಟ್ಟೆಯಿಂದ (Share Market) ಅಷ್ಟೇನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಒಂದು ಹಂತದಲ್ಲಿ ಸಾವಿರ ಅಂಕ ಕುಸಿದ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ನಂತರ ಏರಿಕೆ ಕಂಡು ಮತ್ತೆ ಇಳಿಕೆಯಾಯಿತು. ಅಂತಿಮವಾಗಿ 73.04 ಅಂಕ ಕುಸಿದು 80,429.04 ಅಂಕಗಳಿಗೆ ಮಂಗಳವಾರದ ತನ್ನ ವ್ಯವಹಾರವನ್ನು ಮುಗಿಸಿತು.

    ಸೋಮವಾರ 80,724 ಅಂಕಗಳಿಗೆ ಮುಕ್ತಾಯವಾಗಿದ್ದ ಬಿಎಸ್‌ಇ ವ್ಯವಹಾರ ಇಂದು ಮಧ್ಯಾಹ್ನ 12:30ರ ವೇಳೆಗೆ 79,224 ಅಂಕಗಳಿಗೆ ಕುಸಿದಿತ್ತು. ನಂತರ ಮಧ್ಯಾಹ್ನ 2:30ರ ವೇಳೆಗೆ 80,766 ಅಂಕಗಳಿಗೆ ಏರಿಕೆ ಕಂಡು ಮತ್ತೆ ಕುಸಿಯಿತು. ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಂದು 30.20 ಅಂಕ ಕುಸಿದು 24,479.05 ರಲ್ಲಿ ವ್ಯವಹಾರ ಕೊನೆಗೊಳಿಸಿತು.

    ಕುಸಿದಿದ್ದು ಯಾಕೆ?
    ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ Long-Term Capital Gains (ದೀರ್ಘಾವಧಿಯ ಬಂಡವಾಳ ಲಾಭ – LTCG) ಮತ್ತು Short-Term Capital Gains (ಅಲ್ಪಾವಧಿಯ ಬಂಡವಾಳ ಲಾಭ – STCG) ತೆರಿಗೆ ಏರಿಕೆ ಮಾಡಿದ್ದರಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿದಿದೆ. ಸದ್ಯ LTCG ಮೇಲೆ 10% ತೆರಿಗೆ ಇದ್ದರೆ ಅದನ್ನು 12.5% ಏರಿಕೆ ಮಾಡಲಾಗಿದೆ. STCG ಮೇಲೆ 15% ತೆರಿಗೆ ಇದ್ದರೆ ಅದನ್ನು 20% ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ

    ಏನಿದು LTCG, STCG?
    ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳನ್ನು ಖರೀದಿಸಿದ ದಿನಾಂಕದಿಂದ 12 ತಿಂಗಳುಗಳು ಪೂರ್ಣಗೊಳ್ಳುವ ಮೊದಲು ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ಅಲ್ಪಾವಧಿಗೆ ವರ್ಗೀಕರಿಸಲಾಗುತ್ತದೆ. ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳನ್ನು 12 ತಿಂಗಳ ಪೂರ್ಣಗೊಂಡ ನಂತರ ಮಾರಾಟ ಮಾಡಿದರೆ ಆಗುವ ಲಾಭ ಅಥವಾ ನಷ್ಟವನ್ನು ದೀರ್ಘಾವಧಿ ಎಂದು ವರ್ಗೀಕರಣ ಮಾಡಲಾಗುತ್ತದೆ.

    ಪಟ್ಟಿಮಾಡದ ಈಕ್ವಿಟಿ ಷೇರುಗಳನ್ನು 24 ತಿಂಗಳ ಮೊದಲು ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ಅಲ್ಪಾವಧಿ ಎಂದು ಕರೆಯಲಾಗುತ್ತದೆ. ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು 24 ತಿಂಗಳ ನಂತರ ಮಾರಾಟ ಮಾಡಿದಾಗ ಆಗುವ ಲಾಭ ಅಥವಾ ನಷ್ಟವನ್ನು ದೀರ್ಘಾವಧಿ ಎಂದು ಕರೆಯಲಾಗುತ್ತದೆ.

    ಈ ಹೊಸ ಪ್ರಸ್ತಾಪ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಹಣಕಾಸಿನ ಆಸ್ತಿಗಳ ಮೇಲಿನ ಲಾಭದ ವಿನಾಯಿತಿ ಮಿತಿಯನ್ನು ಹಿಂದಿನ 1 ಲಕ್ಷ ರೂ. ನಿಂದ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ

    ಈ ವರ್ಷ ಫೆಬ್ರವರಿಯಲ್ಲಿ 1 ರಂದು ಬಜೆಟ್‌ ಮಂಡನೆಯ ದಿನದಂದು ಸೆನ್ಸೆಕ್ಸ್‌ 106.81 ಅಂಕ ಕುಸಿದು 71,645.30 ಅಂಕಗಳಿಗೆ ಕುಸಿದಿತ್ತು. ಆದರೆ 6 ತಿಂಗಳಿನಲ್ಲಿ 9 ಸಾವಿರ ಅಂಕ ಏರಿಕೆಯಾಗಿದೆ.

  • ಜೂನ್ 4ರಂದು ಷೇರುಪೇಟೆ ಮಹಾಪತನ ದೇಶದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

    ಜೂನ್ 4ರಂದು ಷೇರುಪೇಟೆ ಮಹಾಪತನ ದೇಶದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

    – ಮೋದಿ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹ

    ನವದೆಹಲಿ: ಐಎನ್‍ಡಿಐಎ ಕೂಟ ವಿಪಕ್ಷ ಸ್ಥಾನದಲ್ಲಿ ಕೂರಲು ನಿರ್ಧರಿಸಿದ ಬೆನ್ನಲ್ಲೇ ಮೋದಿ-ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ಆರಂಭಿಸಿದ್ದಾರೆ.

    ಎಕ್ಸಿಟ್ ಪೋಲ್‍ಗಳನ್ನು (Exit Poll) ಮತ್ತು ಜೂನ್ ನಾಲ್ಕರ ಷೇರುಪೇಟೆ ಮಹಾಪತನವನ್ನು ಅತಿ ದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ. ಮೋದಿ ಸೇರಿ ಬಿಜೆಪಿಯ ಉನ್ನತ ನಾಯಕರು ಸೇರಿಕೊಂಡು ಮಾಡಿರುವ ಹಗರಣ ಇದು. ಇದರಿಂದ ಹೂಡಿಕೆದಾರರಿಗೆ 30 ಲಕ್ಷ ಕೋಟಿ ನಷ್ಟವಾಗಿದೆ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

    ಫಲಿತಾಂಶಕ್ಕೆ ಕೆಲವೇ ದಿನ ಮೊದಲು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮ್ ಷೇರ್ ಮಾರ್ಕೆಟ್ ಬಗ್ಗೆ ಏಕೆ ಹೇಳಿಕೆ ನೀಡಿದ್ರು ಎಂದು ಕೇಳಿದ್ದಾರೆ. ಕೆಲ ನಿರ್ದಿಷ್ಟ ಮಾಧ್ಯಮಗಳಿಗೆ ಮೋದಿ ನೀಡಿದ ಸಂದರ್ಶನದ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

    ಈ ನಡುವೆ ವಿಪಕ್ಷ ನಾಯಕತ್ವ ಜವಾಬ್ದಾರಿ ವಹಿಸಲು ಐಎನ್‍ಡಿಐಎ ಕೂಟ ಮುಂದಾಗಿದೆ. ಆದರೆ ರಾಹುಲ್ ಗಾಂಧಿ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇನ್ನೂ ವಯನಾಡು-ರಾಯ್‍ಬರೇಲಿ ಪೈಕಿ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಜಿಜ್ಞಾಸೆಯಲ್ಲಿ ರಾಹುಲ್ ಗಾಂಧಿ ಇದ್ದಾರೆ. ಇದೀಗ ರಾಹುಲ್ ತೆಗೆದುಕೊಳ್ಳುವ ಎರಡು ನಿರ್ಧಾರಗಳ ಬಗ್ಗೆ ಇದೀಗ ಕುತೂಹಲ ಮನೆ ಮಾಡಿದೆ.

  • ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

    ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

    ಮುಂಬೈ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮೋದಿ(PM Narendra Modi) ನೇತೃತ್ವದ ಎನ್‌ಡಿಎ ಒಕ್ಕೂಟ 350ಕ್ಕೂ ಹೆಚ್ಚು ಸ್ಥಾನ ಗೆದ್ದು ಮೂರನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ.

    ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ದಿನ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

     

    ಸೆನ್ಸೆಕ್ಸ್‌ ಇಂದು ಒಂದೇ ದಿನ ಬರೋಬ್ಬರಿ 2,507.47 ಅಂಶ ಏರಿಕೆಯಾಗಿ ಅಂತಿಮವಾಗಿ 76,468.78 ರಲ್ಲಿ ಕೊನೆಯಾಯಿತು. ನಿಫ್ಟಿ 733 ಅಂಶ ಏರಿಕೆಯಾಗಿ 23,263.90 ರಲ್ಲಿ ಇಂದಿನ ವಹಿವಾಟನ್ನು ಮುಗಿಸಿತು. ಈ ಹಿಂದೆ ಸೆನ್ಸೆಕ್ಸ್‌ ಮತ್ತು ನಿಫ್ಟಿ 2021 ಜನವರಿಯಲ್ಲಿ 5% ಏರಿಕೆಯಾಗಿತ್ತು. ಮೂರು ವರ್ಷದ ಬಳಿಕ ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಭರ್ಜರಿ ಏರಿಕೆ ಕಂಡಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ 

    ಸರ್ಕಾರಿ ಸ್ವಾಮ್ಯದ ಕಂಪನಿಗಳು, ಬ್ಯಾಂಕ್‌ಗಳು, ಅದಾನಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳ ಷೇರು ಬೆಲೆಗಳು ಏರಿಕೆ ಕಂಡಿವೆ. ಗೇಲ್‌ ಪ್ರತಿ ಷೇರಿನ ಬೆಲೆ 26.50 ರೂ. (12.97%), ಪವರ್‌ ಫೈನಾನ್ಸ್‌ 62.35 ರೂ. (12.66%), ಆರ್‌ಇಸಿ 66.75 ರೂ.(12.41%), ಬ್ಯಾಂಕ್‌ ಆಫ್‌ ಬರೋಡಾ 32.05 ರೂ. (12.10%), ಅದಾನಿ ಪೋರ್ಟ್ಸ್‌ ರೂ. 146.55(10.20%) ಏರಿಕೆ ಕಂಡಿದೆ.

    ಏರಿಕೆಗೆ ಕಾರಣ ಏನು?
    ಸತತ ಮೂರನೇ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿದೆ. ಈ ಹಿಂದೆಯೂ ವಿಧಾನಸಭಾ ಚುನಾವಣೆಗಳ ಫಲಿತಾಂಶದ ದಿನ ಬಿಜೆಪಿ ಜಯಗಳಿಸಿದ ಸಮಯದಲ್ಲೂ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿರಲಿಲ್ಲ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ

    ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದ್ದು ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ 7.8% ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸಿದ್ದು, 2023-24ರ ಹಣಕಾಸು ವರ್ಷದಲ್ಲಿ 8.2% ಪ್ರಗತಿ ಸಾಧಿಸಿತ್ತು. ಮೇ 31 ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಈ ವರದಿಯನ್ನು ಬಿಡುಗಡೆ ಮಾಡಿತ್ತು. ವಿವಿಧ ಆರ್ಥಿಕ ತಜ್ಞರು, ವಿದೇಶದಲ್ಲಿರುವ ರೇಟಿಂಗ್‌ ಸಂಸ್ಥೆಗಳು 2023-24ರಲ್ಲಿ ಜಿಡಿಪಿ ದರ 7.5% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದ್ದವು. ಐಎಂಎಫ್ 6.8% ರಷ್ಟು ಮಾತ್ರ ಜಿಡಿಪಿ ದಾಖಲಿಸಬಹುದು ಎಂದು ಅಂದಾಸಿಜಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾವಾಗಿದ್ದು ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿಯಾಗುತ್ತಿರುವುದನ್ನು ಕಂಡು ಹರ್ಷಗೊಂಡು ಹೂಡಿಕೆದಾರರು ದೇಶದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 10% ಏರಿಕೆಯಾಗಿತ್ತು. ಈ ಎಲ್ಲಾ ಕಾರಣದಿಂದ ದೇಶದಲ್ಲಿರುವ ಹೂಡಿಕೆದಾರರು ಮತ್ತು ವಿದೇಶದ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

     

  • ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕಾದರರ 14 ಲಕ್ಷ ಕೋಟಿ ಸಂಪತ್ತು

    ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕಾದರರ 14 ಲಕ್ಷ ಕೋಟಿ ಸಂಪತ್ತು

    ಮುಂಬೈ: ಷೇರುಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗಿದ್ದು ಹೂಡಿಕೆದಾರರ (Investors) ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂ. ಕರಗಿದೆ.

    ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 14 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ನಿಫ್ಟಿ ಮಿಡ್‌ಕ್ಯಾಪ್‌ ಮತ್ತು ನಿಫ್ಟಿ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 4% ಇಳಿಕೆಯಾಗಿದೆ.‌  ಇದನ್ನೂ ಓದಿ: ಮೈಸೂರಿನಿಂದ ಯದುವೀರ್‌, ಬೆಂಗಳೂರು ಉತ್ತರದಿಂದ ಕರಂದ್ಲಾಜೆ – ಯಾರಿಗೆ ಎಲ್ಲಿ ಟಿಕೆಟ್‌?

    ಯಾವುದು ಎಷ್ಟು ಇಳಿಕೆ?
    ಸೆನ್ಸೆಕ್ಸ್‌ 906.17 (-1.23%) ಅಂಕ ಕುಸಿದು 72,761.8ರಲ್ಲಿ ಕೊನೆಯಾಯಿತು. ನಿಫ್ಟಿ ಮಿಡ್‌ಕ್ಯಾಪ್‌ 100 2,115.45 (-4.40%) ಅಂಕ ಕುಸಿದು 45,971.4 ರಲ್ಲಿ ಕೊನೆಯಾಯಿತು. ಎರಡು ವರ್ಷದ ಬಳಿಕ ಒಂದೇ ದಿನ ನಿಫ್ಟಿ ಮಿಡ್‌ಕ್ಯಾಪ್‌ ಇಷ್ಟೊಂದು ಇಳಿಕೆಯಾಗಿದೆ.

    ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್‌ಕ್ಯಾಪ್‌ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್‌ ಕ್ಯಾಪ್‌ ವ್ಯಾಪ್ತಿಯಲ್ಲಿ ಬರುತ್ತವೆ.

     

    ಇಳಿಕೆಯಾಗಲು ಕಾರಣ ಏನು?
    ಸೆಬಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರು ಬೆಲೆಗಳನ್ನು ತಿರಚುಲಾಗುತ್ತಿದೆ. ಹೀಗಾಗಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಎಚ್ಚರದಲ್ಲಿ ಇರಬೇಕು ಎಂದು ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬಾಚ್ ಎಚ್ಚರಿಸಿದ್ದರು. ಇದನ್ನೂ ಓದಿ: ರಾಜವಂಶಸ್ಥ ಯದುವೀರ್ ಸ್ಪರ್ಧಿಸಿದ್ರೆ ಕಾಂಗ್ರೆಸ್‌ಗೆ ಲಾಭನಾ? ನಷ್ಟನಾ?

    ಕೆಲ ತಿಂಗಳಿನಿಂದ ಸಣ್ಣ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗುತ್ತಿದೆ. ಏರಿಕೆ ಆಗುತ್ತಿರುವ ಷೇರಿನ ಬೆಲೆಗಳು ಆಯಾ ಕಂಪನಿಗಳ ಆರ್ಥಿಕ ಮೂಲಗಳಿಗೆ ಸಂಬಂಧಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಈ ವಲಯದಲ್ಲಿ ಹೂಡಿಕೆದಾರರು ಹಣ ಕಳೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ ಎಂದು ಹೇಳಿದ್ದರು. ಮಂಗಳವಾರ ಮಾಧಬಿ ಪುರಿ ಬಾಚ್‌ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಮಿಡ್‌ಕ್ಯಾಪ್‌ ಕಂಪನಿಗಳ ಷೇರು ಒಂದೇ ದಿನದಲ್ಲಿ ಭಾರೀ ಇಳಿಕೆಯಾಗಿದೆ.

    ಜಾರಿ ನಿರ್ದೇಶನಾಲಯ ಮಹಾದೇವ ಬೆಟ್ಟಿಂಗ್‌ ಆಪ್‌ ವಿರುದ್ಧ ತನಿಖೆ ನಡೆಸುತ್ತಿದ್ದು ಈ ವೇಳೆ ಈ ಕಂಪನಿಯ ಪ್ರವರ್ತಕರು ಹಲವು ಸಣ್ಣ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೃತಕವಾಗಿ ಷೇರುಗಳ ದರವನ್ನು ಏರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಈ ಕಂಪನಿಯ ಡಿಮ್ಯಾಟ್‌ ಖಾತೆ ಲಿಂಕ್‌ ಆಗಿರುವ 1,100 ಕೋಟಿ ರೂ. ಮೌಲ್ಯದ ಷೇರುಗಳನ್ನು ತಡೆ ಹಿಡಿಯಲಾಗಿದೆ. ಸುಮಾರು 30ಕ್ಕೂ ಹೆಚ್ಚು ಕಂಪನಿಗಳ ಷೇರುಗಳಲ್ಲಿ ಮಹಾದೇವ ಬೆಟ್ಟಿಂಗ್‌ ಆಪ್‌ ಪ್ರವರ್ತಕರು ಹೂಡಿಕೆ ಮಾಡಿದ್ದಾರೆ ಎಂಬ ವರದಿಯೂ ಕೆಲ ಕಂಪನಿಗಳ ಷೇರು ಮೌಲ್ಯ ಇಳಿಕೆಗೆ ಕಾರಣವಾಯಿತು.