Tag: Sharavathi river

  • PublicTV Explainer | ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ಧತೆ – ಏನಿದು ಯೋಜನೆ? ವಿರೋಧ ಏಕೆ?

    PublicTV Explainer | ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ಧತೆ – ಏನಿದು ಯೋಜನೆ? ವಿರೋಧ ಏಕೆ?

    ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಮುಂದಾಗಿದೆ. ಈ ಯೋಜನೆಯಿಂದ ರಾಜ್ಯ ಸರ್ಕಾರವು 2000 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದೆ.‌ ಇದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದು ಕೆಲಸ ನಿರ್ವಹಿಸಲು ಗುತ್ತಿಗೆ ನೀಡಿದೆ.‌ ಇದರ ಬೆನ್ನಲ್ಲೇ ಈ ಯೋಜನೆಗೆ ಸ್ಥಳೀಯ ಹಾಗೂ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗಿದೆ. ಏನಿದು ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ? ಇದರದ ಉಪಯೋಗ, ಸಾಧಕ, ಭಾದಕಗಳೇನು? ಸ್ಥಳೀಯ ಹಾಗೂ ಪರಿಸರವಾದಿಗಳ ವಿರೋಧ ಏಕೆ ಎಂಬ ಮಾಹಿತಿ ಇಲ್ಲಿದೆ.

    ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು?
    ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ವಿದ್ಯುತ್​ಗಾರದಿಂದ 1469.20 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರು ಗೇರುಸೊಪ್ಪ ಅಣೆಕಟ್ಟೆಗೆ ಹೋಗುತ್ತದೆ. ಅಲ್ಲಿಯೂ 240 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ, ನಂತರದಲ್ಲಿ ಶರಾವತಿ ನದಿ ಮುಂದೆ ಸಾಗಿ, ಉತ್ತರ ಕನ್ನಡ ಜಿಲ್ಲೆಯ ಹೂನ್ನಾವರದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. 

    ಶರಾವತಿ ಪಂಪ್ಡ್​ ಸ್ಟೋರೇಜ್ ಯೋಜನೆಯಲ್ಲಿ ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ವಿದ್ಯುತ್ ಬಳಸಿಕೊಂಡು ತಲಕಳಲೆ ಅಣೆಕಟ್ಟೆಗೆ ಎತ್ತಿ ತರಲಾಗುತ್ತದೆ. ಹಾಗೇ ಎತ್ತಿ ತಂದ ನೀರಿನಿಂದ ಮತ್ತೆ 2000 ಮೆಗಾ ವ್ಯಾಟ್. ವಿದ್ಯುತ್ತನ್ನು ಉತ್ಪಾದಿಸುವುದು ಯೋಜನೆಯ ಉದ್ದೇಶವಾಗಿದೆ.

    ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಆಳ -ಅಗಲ
    ಯೋಜನಾ ವೆಚ್ಚ- 10,500 ಕೋಟಿ ರೂ. ಮೊತ್ತದ ಯೋಜನೆ
    ಯೋಜನೆಗೆ ಒಳಗೊಂಡ ಜಿಲ್ಲೆ – ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ
    ಯೋಜನೆಗೆ ಒಳಗೊಂಡ ಪ್ರದೇಶಗಳು – ಅರಣ್ಯ ಭೂಮಿ – 19.982 ಹೆಕ್ಟೇರ್ (ಭೂಮಿಯ ಒಳಗೆ), 34.173 ಹೆಕ್ಟೇರ್  (ಭೂಮಿಯ ಮೇಲ್ಮೈ) ಒಟ್ಟು ಅರಣ್ಯ ಭೂಮಿ- 54.155 ಹೆಕ್ಟೇರ್
    ಯೋಜನೆಗೆ ಒಳಗೊಂಡ ಅರಣ್ಯೇತರ ಭೂಮಿ- 0.1 ಹೆಕ್ಟೇರ್ (ಭೂಮಿಯ ಒಳಗೆ) , 88.508 ಹೆಕ್ಟೇರ್ (ಭೂಮಿಯ ಹೊರಗೆ) .ಒಟ್ಟು- 88.608 ಹೆಕ್ಟೇರ್ ಭೂಮಿ. ಒಟ್ಟು ಭೂಮಿ- 20.082 ಹೆಕ್ಟೇರ್ (ಭೂಮಿಯ ಒಳಗೆ) 122.681 (ಭೂಮಿಯ ಹೊರಗೆ) ಒಟ್ಟು ಭೂಮಿ 142.763 ಹೆಕ್ಟೇರ್ 

    ಜಿಲ್ಲಾವಾರು ಭೂ ಸ್ವಾಧೀನಗೊಳ್ಳುವ ಭೂ ಪ್ರದೇಶಗಳು
    ಶಿವಮೊಗ್ಗ ಜಿಲ್ಲೆ – ಸಾಗರ ತಾಲೂಕಿನ ತಳಕಳಲೆ ಗ್ರಾಮ – 3.63 ಹೆಕ್ಟೇರ್ – ಸರ್ಕಾರಿ ಶಾಲೆ-1, ಮನೆಗಳು-8, ದನದ ಕೊಟ್ಟಿಗೆ-7
    ಉತ್ತರ ಕನ್ನಡ ಜಿಲ್ಲೆ- ಹೊನ್ನಾವರ ತಾಲೂಕಿನ ಗೇರುಸೊಪ್ಪ, ನಗರಬಸ್ತಿಕೇರಿ, ಬೆಗುಡಿ ಗ್ರಾಮಗಳು
    ಗೇರುಸೊಪ್ಪ, ನಗರಬಸ್ತಿಕೇರಿ- 0.404 ಹೆಕ್ಟೇರ್ ಭೂ  ಭಾಗ- ಮನೆಗಳು-4, ಮಳಿಗೆ-3, ದೇವಾಲಯ ತಡೆಗೋಡೆ-2
    ಬೆಗುಡಿಗ್ರಾಮ- 20.497 ಹೆಕ್ಟೇರ್ – ಸರ್ಕಾರಿ ಅಂಗನವಾಡಿ-01, ಮನೆಗಳು-06, ದನದ ಕೊಟ್ಟಿಗೆ-04, ಬಾವಿ-01, ದೇವಾಲಯ-01
    ಒಟ್ಟು ಎರಡು ಜಿಲ್ಲೆಗಳು ಸೇರಿ -24.31 ಹೆಕ್ಟೇರ್ ಭೂ ಭಾಗ 

    ಎಷ್ಟು ಮರಗಳು ಕಟಾವಾಗಲಿದೆ?
    ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗ- 745 ಮರಗಳು
    ಶಿವಮೊಗ್ಗ ವನ್ಯಜೀವಿ ವಲಯ – 1518 ಮರಗಳು
    ಉತ್ತರ ಕನ್ನಡ ಹೊನ್ನಾವರ ವಿಭಾಗ- 13756
    ಒಟ್ಟು ಮರಗಳ ಕಟಾವು- 16,041 ಮರಗಳು

    ಯೋಜನೆಗೆ ತಾತ್ಕಾಲಿಕ ಅನುಮತಿ 
    ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಲು ಡಿಸೆಂಬರ್ 2023ರಲ್ಲಿ ನೀಡಲಾದ ಹೊಸ TOR ಪ್ರಕಾರ EIA ಅಧ್ಯಯನಗಳು ಪೂರ್ಣಗೊಂಡಿದೆ. ಇದರ ವರದಿ ಅಂತಿಮ ಗೊಳಿಸಲಾಗಿದೆ. ಪರಿಸರ ಅನುಮತಿಯನ್ನು (EC) MoEF & CC ಯಿಂದಪಡೆಯ ಬೇಕಾಗಿದ್ದು ಬಾಕಿ ಇದೆ. 26/06/2025 ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾತ್ಕಾಲಿಕ (In-principle) ಅನುಮತಿ ನೀಡಲಾಗಿದೆ.

    ಯೋಜನೆಯನ್ನು ಶರಾವತಿ ಕಣಿವೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು , ಯೋಜನೆಯ ಕೆಳಮಟ್ಟದಲ್ಲಿ ಗೇರುಸೊಪ್ಪ ಹಾಗೂ ಮೇಲ್ಪಟ್ಟದಲ್ಲಿ ತಳಕಳಲೆ ಜಲಾಶಯಗಳು ಅಸ್ತಿತ್ವದಲ್ಲಿ ಇದ್ದು , ಎರಡೂ ಜಲಾಶಯವನ್ನು ಏಳು ಕಿಲೋಮೀಟರ್ ಸುರಂಗ ಮಾರ್ಗದ ಮೂಲಕ ಜೋಡಿಸಿ ನೀರು ಹರಿಬಿಟ್ಟು ವಿದ್ಯುತ್ ಉತ್ಪಾದನೆಗೆ ಕಾರ್ಯನಿರ್ವಹಿಸಲಾಗುವುದು.

    ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ವಿರೋಧ ಏಕೆ?
    ಈ ಯೋಜನೆ ಪಶ್ಚಿಮ ಘಟ್ಟ ವಲಯದಲ್ಲಿ ಬರುತ್ತದೆ. ಹೆಚ್ಚುವರಿಯಾಗಿ ಅರಣ್ಯ ಭೂಮಿ ಯನ್ನು ಪಡೆಯಲಾಗುತ್ತದೆ. ಪರಿಸರ ಸೂಕ್ಷ್ಮವಲಯವಾಗಿರುವ ಈ ಪ್ರದೇಶ ಅತ್ಯಂತ ಹಳೆಯದಾದ ಮತ್ತು ಇತರೆ ಭಾಗದಲ್ಲಿ ಸಿಗದಂತಹ ಪ್ರಭೇದದ ಸಸ್ಯಗಳು ಇಲ್ಲಿವೆ. ಇದಲ್ಲದೇ ಇದು ಅವನತಿಯಲ್ಲಿ ಇರುವ ಸಿಂಗಳೀಕಗಳ ಆವಾಸ ಸ್ಥಾನ ಕೂಡ. ಇನ್ನು ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯದಿಂದ ಭೂಕುಸಿತ ದುರಂತಗಳು ನಡೆದಿದೆ. ಇದಲ್ಲದೇ ಅಭಿವೃದ್ಧಿ ಕಾರ್ಯದಿಂದ ನದಿಯ ದಿಕ್ಕು ಸಹ ಬದಲಾಗಿದೆ. ಹಲವು ಜೀವ ವೈವಿದ್ಯ ಹೊಂದಿರುವ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಮುಂದಾದರೇ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ.

    ಈಗಾಗಲೇ ಶರಾವತಿ ಜಲವಿದ್ಯುತ್ ಯೋಜನೆಯಿಂದ ಸಾವಿರಾರು ಜನ ತಮ್ಮ ನೆಲ ಕಳೆದುಕೊಂಡು ಸೂಕ್ತ ಪರಿಹಾರ ಸಹ ದೊರಕುವುದಿರಲಿ ,ಉದ್ಯೋಗದ ಭರವಸೆಯೂ ಸಮರ್ಪಕವಾಗಿ ಈಡೇರಿಲ್ಲ. ಇನ್ನೂ ಸುರಂಗ ಮಾರ್ಗ ಮಾಡುವುದರಿಂದ ಭೂಕುಸಿತದ ಆತಂಕವಿದ್ದು ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆಗಳು ಇವೆ. ಹೀಗೆ ಹತ್ತು ಹಲವು ಕಾರಣಗಳು ಈ ಯೋಜನೆ ಗೆ ಪರಿಸರವಾದಿಗಳು ಹಾಗೂ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

    ಸಧ್ಯಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಅನುಷ್ಟಾನ ಮಾಡಲಾಗಿದ್ದು, ಈ ಯೋಜನೆಗೆ ಮೊದಲ ಹೆಜ್ಜೆಯಾಗಿ ಹಣ ಸಹ ಬಿಡುಗಡೆಯಾಗಿದ್ದು , ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಅನುಷ್ಟಾನಗೊಳ್ಳುವ ಸಾಧ್ಯತೆಗಳಿವೆ.

    ಕತ್ತಲೆ ಕಾನು! 
    ಇನ್ನೂ ಹೊನ್ನಾವರ ತಾಲೂಕಿನ ಸೂರ್ಯನ ಬೆಳಕನ್ನೇ ಕಾಣದ ನೆರಳನ್ನೇ ಹೀರಿ ಬದುಕುವ ಕತ್ತಲೆ ಕಾನು ಎಂದೇ ಕರೆಯಲ್ಪಡುವ ಕಾಡು ಈ ಯೋಜನೆಯಿಂದ ಅಪಾಯಕ್ಕೆ ಸಿಲುಕಲಿದೆ. ಮನುಷ್ಯನ ಉಗಮಕ್ಕೂ ಮೊದಲೇ ಇಲ್ಲಿ ಅಲ್ಗೆಗಳು, ಸಸ್ಯಗಳು ಇಮನ್ನೂ ಇಲ್ಲಿವೆ. ಮನುಷ್ಯ ಕಾಲೇ ಇಡದ ಜಾಗಗಳು ಸಹ ಇಲ್ಲಿವೆ. ಇಂತಹ ಸ್ಥಳಗಳು ಮತ್ತೆ ನಾಶವಾದರೆ ಮತ್ತೆ ಸೃಷ್ಟಿಯಾಗುವುದಿಲ್ಲ. ಇನ್ನೂ ಸಿಂಹದ ಬಾಲದ ಅಪರೂಪದ ಸಿಂಗಳೀಕಗಳು ಇಲ್ಲಿದ್ದು, ಅವುಗಳ ಆವಾಸ ಸ್ಥಾನ ನಾಶದಿಂದ ಅವನತಿಯಾಗುವ ಭೀತಿ ಇದೆ. 

    10,000 ಪತ್ರದಲ್ಲಿ ಒಂದೇ ಒಂದು ಪತ್ರ ಯೋಜನೆ ಪರವಾಗಿಲ್ಲ! 
    ಇನ್ನೂ ಈ ಯೋಜನೆಯ ಪರ ವಿರೋಧದ ಬಗ್ಗೆ ಸಲ್ಲಿಸಲು ಅಹವಾಲು ಸಭೆಯಲ್ಲಿ ಸಲ್ಲಿಕೆಯಾದ ಉತ್ತರ ಕನ್ನಡ ಜಿಲ್ಲೆಯ 6000 ಹಾಗೂ ಶಿವಮೊಗ್ಗ ಜಿಲ್ಲೆಯ 4000 ಅರ್ಜಿಗಳಲ್ಲಿ ಯಾವ ಅರ್ಜಿಯೂ ಯೋಜನೆಯ ಪರವಾಗಿಲ್ಲ. ಹೀಗಿದ್ದರೂ ಜನರ ವಿರೋಧದ ನಡುವೆ ಈ ಯೋಜನೆಯ ಸಗತ್ಯವೇನು ಎಂಬುದು ಸಧ್ಯದ ಪ್ರಶ್ನೆ.

    ವಿವಾದದ ಬೆನ್ನಲ್ಲೇ ಕೆಪಿಸಿಎಲ್​ ಸ್ಪಷ್ಟೀಕರಣ
    ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಪರಿಸರವಾದಿಗಳು ಹಾಗೂ ಸ್ಥಳೀಯರು ಆಂತಕಕ್ಕೆ ಒಳಗಾಗುವುದು ಬೇಡ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾಗರ ತಾಲೂಕಿನ ತಳಕಳಲೆ ಡ್ಯಾಂ ಹಾಗೂ ಉತ್ತರ ಕನ್ನಡದ ಗೇರುಸೊಪ್ಪ ಜಲಾಶಯಗಳನ್ನು ಬಳಸಿ‌ಕೊಳ್ಳಲಾಗುತ್ತಿದೆ. ಇದರಿಂದ ಹೊಸ ಅಣೆಕಟ್ಟು ನಿರ್ಮಾಣ ಮಾಡುತ್ತಿಲ್ಲ. ಇದರಿಂದ ಯಾವುದೇ ಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಕೆಪಿಸಿಎಲ್​ ಸ್ಪಷ್ಟೀಕರಣ ನೀಡಿದೆ. 

    ಈ ಯೋಜನೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಪ್ರಾಧಿಕಾರವು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ಈ ಯೋಜನೆಯಿಂದ ಭೂ ಕುಸಿತ, ಭೂಕಂಪನಗಳು ಉಂಟಾಗುವುದಿಲ್ಲ. ಇಲ್ಲಿನ ಜೀವ ವೈವಿಧ್ಯತೆಗೆ ಸಮಸ್ಯೆ ಉಂಟಾಗುವುದಿಲ್ಲ. ಈ ಯೋಜನೆಗೆ ರಾಜ್ಯದ ವನ್ಯಜೀವಿ ಮಂಡಳಿ ಮತ್ತು ಕೇಂದ್ರದ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ. ನಿರ್ಮಾಣವಾಗುವ ಸುರಂಗದ ಒಳಗಡೆ, ತಡೆಗೋಡೆ ನಿರ್ಮಾಣ ಮಾಡುವುದರಿಂದ ಭೂಕುಸಿತ ಉಂಟಾಗುವುದಿಲ್ಲ.

    ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 24.31 ಹೆಕ್ಟೇರ್ ಖಾಸಗಿ ಭೂಮಿ ಬಳಸಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಶೇಖರಣೆ ಮಾಡುವ ಈ ಯೋಜನೆಯಿಂದ ಯಾವುದೇ ರೀತಿಯಲ್ಲಿ ಜನರು, ವನ್ಯಜೀವಿಗಳು ಮತ್ತು ಅರಣ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೊಂಡಿದೆ.

  • ಶರಾವತಿ ಹಿನ್ನೀರಿನಲ್ಲಿ ಕಡಿಮೆಯಾದ ನೀರಿನ ಹರಿವು – ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ

    ಶರಾವತಿ ಹಿನ್ನೀರಿನಲ್ಲಿ ಕಡಿಮೆಯಾದ ನೀರಿನ ಹರಿವು – ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ

    ಶಿವಮೊಗ್ಗ: ಶರಾವತಿ (Sharavathi) ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ (Sagara) ತಾಲೂಕಿನ ಕಾರ್ಗಲ್ – ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್ (Muppane Launch) ಮಾರ್ಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

    ಶುಕ್ರವಾರ ಬೆಳಗ್ಗೆ ಲಾಂಚ್ ಸಂಚಾರದ ವೇಳೆ ಮರದ ದಿಮ್ಮಿ ಹಾಗೂ ಮರಳಿನ ದಿಬ್ಬಗಳು ಲಾಂಚ್ ತಳಭಾಗಕ್ಕೆ ತಾಗಿದೆ. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇದನ್ನೂ ಓದಿ: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ: ಜಗದೀಶ್ ಶೆಟ್ಟರ್

    ಹೊಳೆಬಾಗಿಲು ಲಾಂಚ್‌ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿದಂತೆ ಜೋಗ ಕಾರ್ಗಲ್ ತೆರಳಲು ಹಾಗೂ ಸಿಗಂದೂರು ಪ್ರವಾಸಿಗರು ಈ ಸುಗಮ ಮಾರ್ಗದ ಮೊರೆ ಹೋಗಿದ್ದರು. ಸದ್ಯ ಇದು ಕೂಡ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ಸದ್ಯ ಈ ಭಾಗದಲ್ಲಿ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಆಧರಿಸಿ ಲಾಂಚ್ ಸೇವೆ ಮತ್ತೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ

  • ಶರಾವತಿ ಹಿನ್ನೀರಿನಲ್ಲಿ ಭರದಿಂದ ಸಾಗುತ್ತಿದೆ ರಾಜ್ಯದ 2ನೇ ಅತಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ

    ಶರಾವತಿ ಹಿನ್ನೀರಿನಲ್ಲಿ ಭರದಿಂದ ಸಾಗುತ್ತಿದೆ ರಾಜ್ಯದ 2ನೇ ಅತಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ

    -ನನಸಾಗುತ್ತಿದೆ ದ್ವೀಪದ ಜನರ ದಶಕಗಳ ಕನಸು

    ಶಿವಮೊಗ್ಗ: ಇದು ಸರಿಸುಮಾರು ದಶಕಗಳ ಕನಸು. ಈ ಊರಿನ ಜನರಿಗೆ ಇಲ್ಲೊಂದು ಸೇತುವೆ ಬೇಕಾಗಿತ್ತು. ಪಕ್ಕದ ತಾಲೂಕು ಕೇಂದ್ರಕ್ಕೆ 40 ಕಿ.ಮೀ. ಕ್ರಮಿಸುವ ಬದಲು ಬರೋಬ್ಬರಿ 150 ಕಿ.ಮೀ. ಕ್ರಮಿಸಬೇಕಿತ್ತು. ಹೀಗಾಗಿ ಸೇತುವೆ ನಿರ್ಮಾಣ ಮಾಡಿ ಅಂತಾ ಈ ಊರಿನ ಜನರು ಸಾಕಷ್ಟು ಬಾರಿ ಹೋರಾಟ ಮಾಡಿ, ಮಾಡಿ ಸುಸ್ತಾಗಿದ್ರು. ಆದ್ರೆ ಕೊನೆಗೂ ಈ ಗ್ರಾಮದ ಜನರಿಗೆ ಸೇತುವೆ ಭಾಗ್ಯ ಒದಗಿ ಬಂದಿದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಸೇತುವೆ ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ನೀರಿನಾಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

    ಇದು ರಾಜ್ಯಕ್ಕೆ ಬೆಳಕು ನೀಡಿ, ತಾವು ಕತ್ತಲಲ್ಲಿ ಇರುವ ಜನರಿಗೆ ಖುಷಿ ನೀಡುವ ಕಥೆ. ಶರಾವತಿ ಹಿನ್ನೀರಿನ ಜನರು ರಾಜ್ಯಕ್ಕೆ ಬೆಳಕು ನೀಡಲು ಹೋಗಿ ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿದ್ದರು. ಈ ಊರಿನ ಜನರಿಗೆ ತಾಲೂಕು ಕೇಂದ್ರ ಹತ್ತಿರವಿದ್ದರೂ, ಸಂಪರ್ಕ ಕೊಂಡಿಯೇ ಇರಲಿಲ್ಲ. ಮುಳುಗಡೆ ಪ್ರದೇಶದಲ್ಲಿರುವ ಅಂಬಾರಗೊಡ್ಲು, ಕಳಸವಳ್ಳಿ, ತುಮರಿ, ಬ್ಯಾಕೋಡು ಮತ್ತಿತರ ಗ್ರಾಮದ ಜನರಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರಕ್ಕೆ ತೆರಳಬೇಕಂದ್ರೆ ಕೇವಲ 40 ಕಿ.ಮೀ. ದೂರವಿದ್ದರೂ ಸುಮಾರು 150 ಕೀ.ಮೀ. ದೂರ ಕ್ರಮಿಸುವ ಅನಿವಾರ್ಯವಿದೆ. ಹೀಗಾಗಿ ಕಳೆದ 1963 ರಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡಿದ್ದು ಇಲ್ಲಿನ ಜನರು ನಿಟ್ಟುಸಿರು ಬಿಡುವಂತಾಗಿದೆ.

    ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸಿಗಂಧೂರು ಶ್ರೀ ಕ್ಷೇತ್ರಕ್ಕೆ ತೆರಳುವ ಮಾರ್ಗದ ಹಿನ್ನೀರಿನಲ್ಲಿ 18 ಗೋಪುರಗಳನ್ನು ಒಳಗೊಂಡ 2.1 ಕಿ.ಮೀ. ಉದ್ದ, 16 ಮೀ. ಅಗಲದ ಕೇಬಲ್ ಮಾದರಿಯ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಶರಾವತಿ ಹಿನ್ನೀರು ಪ್ರದೇಶದ ಜನರು ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ದ್ವೀಪ ಪ್ರದೇಶದ ಜನರು ಸಂಚಾರಕ್ಕೆ ಇಂದಿಗೂ ಲಾಂಚ್ ನ್ನೇ ಅವಲಂಬಿಸಿದ್ದಾರೆ. ತಾಲೂಕು ಕೇಂದ್ರ ಸಾಗರಕ್ಕೆ ಬರಲು ಹರಸಾಹಸಪಡುವ ಇಲ್ಲಿನ ಜನರು ಸೇತುವೆ ಬೇಕು ಎಂದು ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿದ್ದರು. ಇದೆಲ್ಲದರ ಪರಿಣಾಮ ಇದೀಗ ಈ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಟೆಂಡರ್ ನಿಯಮಾವಳಿ ಪ್ರಕಾರ 2023 ನೇ ಜೂನ್ ಒಳಗೆ ಈ ಕಾಮಗಾರಿ ಮುಕ್ತಾಯಗೊಳ್ಳಬೇಕಿದೆ.

    ಅಷ್ಟಕ್ಕೂ ಈ ತುಮರಿ ಸೇತುವೆ ರಾಜ್ಯದಲ್ಲಿಯೇ 2 ನೇ ಅತಿ ದೊಡ್ಡ ಸೇತುವೆಯಾಗಿ ನಿರ್ಮಾಣಗೊಳ್ಳಲಿದೆ. ಸೇತುವೆಯು 2.125 ಮೀಟರ್ ಉದ್ದ, 16 ಮೀ. ಅಗಲವಾಗಿ ನಿರ್ಮಾಣಗೊಳ್ಳುತ್ತಿದೆ. 177 ಮೀ. ಗೆ ಒಂದರಂತೆ ಪಿಲ್ಲರ್ ಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಅಂಬಾರಗೊಡ್ಲುವಿನಿಂದ 1 ಕಿ.ಮೀ., ಕಳಸವಳ್ಳಿಯಿಂದ 3 ಕಿ.ಮೀ. ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಇಕ್ಕೇರಿಯಿಂದ ಮರಕುಟಕ ಗ್ರಾಮದವರೆಗಿನ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ.

    2008ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರು. ನಂತರ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರತಿ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆ ಬಂದಾಗಲೆಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸೇತುವೆ ಬಗ್ಗೆ ಆಶ್ವಾಸನೆ ನೀಡುವುದು, ಅದು ಜಾರಿಗೆ ಬಾರದೇ ಇರುವುದು ನಡೆಯುತ್ತಿತ್ತು. ಹೀಗಾಗಿ ಸೇತುವೆ ಆಗುತ್ತದೆ ಎಂಬ ವಿಶ್ವಾಸವನ್ನೇ ಈ ಭಾಗದ ಜನರು ಕಳೆದುಕೊಂಡಿದ್ದರು.

    ನಂತರ ಹೋರಾಟ, ಪಾದಯಾತ್ರೆ, ಮೂಲಕ ಸರ್ಕಾರವನ್ನು ಎಚ್ಚರಿಸುವಂತಹ ಕೆಲಸವನ್ನು ಈ ಭಾಗದ ಜನರು ಮಾಡಿದ ಪ್ರತಿಫಲವಾಗಿ 2018ರಲ್ಲಿ ಆಗಿನ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ನಿತಿನ್ ಗಡ್ಕರಿ ಈ ಸೇತುವೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಧ್ಯ ಪ್ರದೇಶದ ಬಿಲ್ಡ್ ಕಾನ್ ಸಂಸ್ಥೆಯು ಈ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಹೊರ ರಾಜ್ಯಗಳಿಂದ ಸುಮಾರು 300 ರಿಂದ 400 ಕ್ಕೂ ಹೆಚ್ಚು ಕಾರ್ಮಿಕರು, ಈ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಲಾಕ್‍ಡೌನ್ ಘೋಷಣೆಯಾದಾಗ ಈ ಕಾಮಗಾರಿಗೆ ಹಿನ್ನೆಡೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ನಿಲ್ಲದೇ ಇನ್ನು ಮುಂದುವರೆದಿದೆ. ಇದರಿಂದಾಗಿ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದ್ದು ತಮಗೆ ಓಡಾಡಲು ಅನುಕೂಲವಾಗಲಿದೆ ಎಂಬ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ನಿರ್ಮಾಣವಾಗುವ ವಿಶ್ವಾಸವನ್ನೇ ಕಳೆದುಕೊಂಡಿದ್ದ ಸೇತುವೆಯೊಂದು ಇದೀಗ ರಾಜ್ಯದ 2 ನೇ ಅತಿ ದೊಡ್ಡ ಸೇತುವೆಯಾಗಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವುದಂತೂ ಸತ್ಯ. ಇದೀಗ ಇಲ್ಲಿನ ದ್ವೀಪ ಪ್ರದೇಶದ ಜನರ ಸಂಚಾರಕ್ಕೆ ಹಿಡಿದಿದ್ದ ಗ್ರಹಣ ಸಮಸ್ಯೆಗೆ ಮುಕ್ತಿ ಸಿಗುವಂತಾಗಿದೆ.

  • ಬೆಂಗ್ಳೂರಿಗೆ ಶರಾವತಿ ನದಿ ನೀರು – ಶಿವಮೊಗ್ಗದಲ್ಲಿ ಬಂದ್

    ಬೆಂಗ್ಳೂರಿಗೆ ಶರಾವತಿ ನದಿ ನೀರು – ಶಿವಮೊಗ್ಗದಲ್ಲಿ ಬಂದ್

    ಶಿವಮೊಗ್ಗ: ಬೆಂಗಳೂರಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಮಾಡಲಾಗುತ್ತಿದೆ.

    ಹಿರಿಯ ಸಾಹಿತಿ ನಾ.ಡಿಸೋಜಾ ನೇತೃತ್ವದಲ್ಲಿ ರಚನೆ ಆಗಿರುವ ಹೋರಾಟ ಸಮಿತಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಕರೆ ನೀಡಿತ್ತು. ಶರವಾತಿ ನದಿಗಾಗಿ ಕರೆ ನೀಡಲಾಗಿದ್ದ ಬಂದ್‍ಗೆ ಸಾಗರ, ಹೊಸನಗರ, ಸೊರಬ, ಶಿವಮೊಗ್ಗ, ತೀರ್ಥಹಳ್ಳಿ ತಾಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಶಿಕಾರಿಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಫೋಷಣೆ ಮಾಡಲಾಗಿದೆ. ಇನ್ನೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿ ಇಲ್ಲದೆ, ಸಿಗಂದೂರಿಗೆ ಬರುವ ಭಕ್ತರಿಗೆ ಬಸ್ ಸಿಗದೆ ಸಮಸ್ಯೆ ಆಗಲಿದೆ. ಜೊತೆಗೆ ಹಲವಾರು ಸಂಘಟನೆಗಳ ಸದಸ್ಯರು ಗುಂಪು ಗುಂಪಾಗಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಡಲ್ಲ ಎಂಬ ಫೋಷಣೆ ಕೂಗುತ್ತಾ ಮೆರವಣಿಗೆ ಮತ್ತು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘವೂ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲಿಸಿವೆ.

    ಕಳೆದ ದಿನವೇ ಬಂದ್ ಹಿನ್ನೆಲೆಯಲ್ಲಿ ಹೋರಾಟದ ಕೇಂದ್ರ ಸಮಿತಿಯು ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಬಂದ್ ಯಶಸ್ವಿ ಮಾಡಲು ನಾನಾ ಸಂಘಟನೆಗಳಿಗೆ ಮನವಿ ಮಾಡಿತ್ತು. ಸಾಗರ ತಾಲೂಕಿನ ಪ್ರತೀ ಹಳ್ಳಿಯಲ್ಲೂ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿತ್ತು.

    ಅಷ್ಟೇ ಅಲ್ಲದೆ ನಾನಾ ಬಗೆಯಲ್ಲಿ ವಿರೋಧ ದಾಖಲಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹೋರಾಟದ ಅಂಗವಾಗಿ ಹೊಸನಗರದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಯುವಕರು ಬೈಕ್ ಜಾಥಾ ಮೂಲಕ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ತಲುಪಿ ಯೋಜನೆ ವಿರೋಧಿಸಿ ಮನವಿ ಕೊಟ್ಟಿದ್ದಾರೆ.

  • ಶರಾವತಿ ಆಯ್ತು, ಈಗ ಬೆಂಗಳೂರಿಗೆ ಅಘನಾಶಿನಿ ನೀರು – ಸರ್ಕಾರಕ್ಕೆ ಜಯಚಂದ್ರ ಪ್ರಸ್ತಾಪ

    ಶರಾವತಿ ಆಯ್ತು, ಈಗ ಬೆಂಗಳೂರಿಗೆ ಅಘನಾಶಿನಿ ನೀರು – ಸರ್ಕಾರಕ್ಕೆ ಜಯಚಂದ್ರ ಪ್ರಸ್ತಾಪ

    ತುಮಕೂರು: ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದೇ ಪಶ್ಚಿಮಘಟ್ಟಕ್ಕೆ ಸೇರಿದ ಅಘನಾಶಿನಿ ನದಿ ನೀರಿನ ಯೋಜನೆಯ ಪ್ರಸ್ತಾವನೆಯನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಹರಿಯುವ ಅಘನಾಶಿನಿ ನದಿಯ ಸುಮಾರು 50-60 ಟಿಎಂಸಿ ನೀರನ್ನು ಬೆಂಗಳೂರಿಗೆ ಹರಿಸಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅಘನಾಶಿನಿ ನದಿಯಿಂದ ನೀರು ತರುವ ಯೋಜನೆಗೆ ಸರಿಸುಮಾರು 10-12 ಸಾವಿರ ಕೋಟಿ ರೂ. ಖರ್ಚಾಗಬಹುದು. ಈ ಯೋಜನೆ ಅನುಷ್ಠಾನಗೊಂಡರೆ ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ನಗರಕ್ಕೆ ಅನುಕೂಲ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ಈಗಾಗಲೇ ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆಗೆ ಮಲೆನಾಡು ಜನರು ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಮವಾರದಂದು ಸ್ವತಃ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಕೂಡ ಈ ಯೋಜನೆಯನ್ನು ವಿರೋಧಿಸಿ, ಬೆಂಗಳೂರು ಬೆಳೆಯುವುದನ್ನ ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ. ಇಲ್ಲಿ ಸಾಕಷ್ಟು ನದಿಗಳಿವೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದರು.

    ಅಷ್ಟೇ ಅಲ್ಲದೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯಿಂದ ಅಪಾರ ಪರಿಸರ ನಾಶವಾಗುತ್ತದೆ. ಅದ್ದರಿಂದ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜುಲೈ 10 ರಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಸಭೆ ಶಿವಮೊಗ್ಗ ಬಂದ್‍ಗೆ ಕರೆ ನೀಡಿದೆ.

    ಶನಿವಾರ ಜಿಲ್ಲೆಯ ನೌಕರರ ಭವನದಲ್ಲಿ ತಾಲೂಕು ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಜಾರಿ ಆದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂದು ಈ ತೀರ್ಮಾನ ಕೈಗೊಂಡಿದೆ.

  • ದೋಸ್ತಿ ಸರ್ಕಾರದ ನಿರ್ಧಾರದ ವಿರುದ್ಧವೇ ಬಿಸಿ ಪಾಟೀಲ್ ಕಿಡಿ

    ದೋಸ್ತಿ ಸರ್ಕಾರದ ನಿರ್ಧಾರದ ವಿರುದ್ಧವೇ ಬಿಸಿ ಪಾಟೀಲ್ ಕಿಡಿ

    ಹಾವೇರಿ: ಬೆಂಗಳೂರಿಗೆ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ನೀರು ಹರಿಸುವ ಯೋಜನೆಯನ್ನು ವಿರೋಧಿಸುತ್ತೇವೆ. ಬೆಂಗಳೂರು ಬೆಳೆಯುವುದನ್ನು ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ ಎಂದು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಟ್ವೀಟ್ ಮೂಲಕ ದೊಸ್ತಿ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರಿಗೆ ಶರಾವತಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಲೆನಾಡು ಜನತೆ ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಬಿಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕ ನೇರವಾಗಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

    ಈ ಯೋಜನೆಗೆ ವಿರೋಧವಿದೆ. ಬೆಂಗಳೂರು ಬೆಳೆಯುವುದನ್ನ ನಿಲ್ಲಿಸಿ, ಉತ್ತರ ಕರ್ನಾಟಕವನ್ನ ಬೆಳೆಸಿ. ಇಲ್ಲಿ ಸಾಕಷ್ಟು ನದಿಗಳಿವೆ. ಅವುಗಳನ್ನ ಅಭಿವೃದ್ಧಿ ಮಾಡಿ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ವಹಿಸಿ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬೆಂಗಳೂರಿಗೆ ಶರಾವತಿ ನದಿಯ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ವಿರೋಧ. ಬೆಂಗಳೂರು ಬೆಳೆಯುವುದನ್ನು ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ ಇಲ್ಲಿ ಸಾಕಷ್ಟು ನದಿಗಳಿವೆ ಎಂದು ಬರೆದು, ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿಎಂ ಆಫ್ ಕರ್ನಾಟಕ ಟ್ಯಾಗ್ ಮಾಡಿ ಟ್ವೀಟ್ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗ ಬಂದ್‍ಗೆ ಕರೆ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯಿಂದ ಅಪಾರ ಪರಿಸರ ನಾಶವಾಗುತ್ತದೆ. ಅದ್ದರಿಂದ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜುಲೈ 10 ರಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಸಭೆ ಶಿವಮೊಗ್ಗ ಬಂದ್‍ಗೆ ಕರೆ ನೀಡಿದೆ.

    ಶನಿವಾರ ಜಿಲ್ಲೆಯ ನೌಕರರ ಭವನದಲ್ಲಿ ತಾಲೂಕು ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಜಾರಿ ಆದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂದು ಈ ತೀರ್ಮಾನ ಕೈಗೊಂಡಿದೆ.