Tag: sharath madiwala

  • ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೇಸ್: ಕೊಲೆ ಮಾಡಿದ್ದು ಯಾಕೆ? ಆರೋಪಿಗಳು ಯಾರು?

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೇಸ್: ಕೊಲೆ ಮಾಡಿದ್ದು ಯಾಕೆ? ಆರೋಪಿಗಳು ಯಾರು?

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ತಲ್ಲಣ ಮೂಡಿಸಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೈದಿದ್ದ ಆರೋಪಿಗಳು ಕೊನೆಗೂ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ಮುಚ್ಚಿ ಹೋಗುತ್ತದೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದ ಪ್ರಕರಣಕ್ಕೆ ಜೀವ ತುಂಬಿದ್ದಾರೆ.

    ಚಾಮರಾಜನಗರ ಪಿಎಫ್‍ಐ ಜಿಲ್ಲಾ ಅಧ್ಯಕ್ಷ ಖಲೀಲುಲ್ಲಾ ಹಾಗೂ ಬಂಟ್ವಾಳದ ಸಜಿಪ ನಿವಾಸಿ ಪಿಎಫ್‍ಐ ಕಾರ್ಯಕರ್ತ ಅಬ್ದುಲ್ ಶಾಫಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಕಳೆದ ಜುಲೈ 4ರಂದು ರಾತ್ರಿ 9.30ಕ್ಕೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಲಾಂಡ್ರಿ ಶಾಪ್‍ಗೆ ಬಾಗಿಲು ಹಾಕುತ್ತಿದ್ದ ಶರತ್ ಮಡಿವಾಳನನ್ನು ಮೂವರು ಆಗಂತುಕರು ಬೈಕಿನಲ್ಲಿ ಬಂದು ಹತ್ಯೆಗೈದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ದೇಹವನ್ನು ಸ್ಥಳೀಯರು ಸೇರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಮೂರು ದಿನಗಳ ಬಳಿಕ ಜುಲೈ 7ರಂದು ಶರತ್ ಸಾವನ್ನಪ್ಪಿರುವುದನ್ನು ಪೊಲೀಸರು ಘೋಷಿಸಿದ್ದರು.

    ಘಟನೆಗೆ ಸಂಬಂಧಿಸಿದಂತೆ ಬಿ.ಸಿ.ರೋಡಿನಲ್ಲಿ ನಿಷೇಧಾಜ್ಞೆ ನಡುವೆಯೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಪ್ರತಿಭಟನೆ ನಡೆಸಿದ್ದು ಪೊಲೀಸ್ ಇಲಾಖೆಗೆ ಎಚ್ಚರಿಕೆ ರವಾನಿಸಿದಂತಾಗಿತ್ತು. ಆ ಬಳಿಕ ಪೊಲೀಸರು ಶರತ್ ಹತ್ಯೆ ಪ್ರಕರಣದ ತನಿಖೆಗೆ ಏಳು ಪ್ರತ್ಯೇಕ ಪೊಲೀಸರ ತಂಡಗಳನ್ನು ರಚಿಸಿ, ಮುಂಬೈ, ಬೆಂಗಳೂರು, ಕೇರಳಕ್ಕೂ ಕಳಿಸಿದ್ದರು. ಆದರೆ ಎರಡು ವಾರಗಳ ಹಿಂದೆ ಪೊಲೀಸ್ ತಂಡಗಳು ಬರಿಗೈಲಿ ವಾಪಸಾಗಿದ್ದರಿಂದ ಪ್ರಕರಣ ಇನ್ನೇನು ಮುಚ್ಚಿ ಹೋಗುತ್ತದೆ ಎನ್ನುವ ಅನುಮಾನ ಕೇಳಿಬಂದಿತ್ತು.

    ಈ ನಡುವೆ, ಖಚಿತ ಮಾಹಿತಿ ಆಧರಿಸಿ ಸ್ಥಳೀಯ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಪಶ್ಚಿಮ ವಲಯ ಐಜಿಪಿ ಸ್ಥಾನದಿಂದ ನಿರ್ಗಮಿಸುತ್ತಿರುವ ಹರಿಶೇಖರನ್, ಹಠಾತ್ತಾಗಿ ಶರತ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಏಳು ತಂಡಗಳಲ್ಲಿ 30 ಪೊಲೀಸರು ಕಾರ್ಯನಿರ್ವಹಿಸಿದ್ದು ಸವಾಲಾಗಿದ್ದ ಪ್ರಕರಣವನ್ನು ಬೇಧಿಸಿದ್ದಾರೆ, ಒಟ್ಟು ಐದು ಮಂದಿ ಪ್ರಕರಣದ ಆರೋಪಿಗಳಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

    ಹತ್ಯೆಗೆ ಕಾರಣ ಏನು?
    ಶರತ್ ಹತ್ಯೆಯ ಎರಡು ವಾರಗಳ ಹಿಂದೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಎಸ್‍ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಮಾಡಲಾಗಿತ್ತು. ಕಲ್ಲಡ್ಕದಲ್ಲಿ ಕಲ್ಲು ತೂರಾಟ, ಚೂರಿ ಇರಿತದ ಕಾರಣದಿಂದ ತಿಂಗಳ ಪರ್ಯಂತ ಸೆಕ್ಷನ್ ಇದ್ದರೂ ಈ ಕೊಲೆ ನಡೆದಿದ್ದು ಈ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಶ್ರಫ್ ಹತ್ಯೆಯ ಪ್ರತೀಕಾರಕ್ಕಾಗಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.

    ಆರೋಪಿಗಳು ಪಿಎಫ್‍ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು ಮತೀಯ ದ್ವೇಷಕ್ಕೆ ಅಮಾಯಕ ಶರತ್‍ನ ರಕ್ತ ಹೀರಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಚಾಮರಾಜನಗರ ಜಿಲ್ಲೆಯ ಪಿಎಫ್‍ಐ ಅಧ್ಯಕ್ಷ ಖಲೀಲುಲ್ಲಾ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಪರೋಕ್ಷ ಭಾಗಿಯಾದವರ ಮಾಹಿತಿಗಾಗಿ ಪೊಲೀಸರು ಕಠಿಣ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹರಿಶೇಖರನ್ ಹೇಳಿದ್ದಾರೆ.

    ಆರೋಪಿಗಳ ಬಂಧನದಿಂದ 43 ದಿನಗಳಿಂದ ಮಗನ ಸಾವಿನ ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಶರತ್ ಹೆತ್ತವರಲ್ಲಿ ಸಮಾಧಾನ ಮೂಡಿದೆ. ಆದರೆ ಮತೀಯವಾದಿಗಳ ರಕ್ತ ದಾಹಕ್ಕೆ ಅಮಾಯಕರು ಬಲಿಯಾಗುತ್ತಿರುವುದು ದುರಂತ.

     

     

     

    https://www.youtube.com/watch?v=o40hIeKFh8E

  • ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಮಂಗಳೂರು: ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ಶರತ್ ಮಡಿವಾಳ (28) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿತ್ತು. ಬೆನ್ನು, ಕೆನ್ನೆ, ಕೊರಳು, ತಲೆಯ ಹಿಂಬದಿಯಲ್ಲಿ ತೀವ್ರ ಗಾಯಗೊಂಡಿದ್ದ ಶರತ್ ಅವರನ್ನು ಉಳಿಸಲು ವೈದ್ಯರು ಶತಾಯಗತಾಯ ಪ್ರಯತ್ನಿಸಿದ್ದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.

    ಇಂದು ಬೆಳಿಗ್ಗೆಯಷ್ಟೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಶರತ್ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿ.ಸಿ. ರೋಡಿನಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ಸಂಜೆ ಸ್ವತಃ ಶರತ್ ಸಾವನ್ನಪ್ಪಿದ್ದಾರೆ.

    ಶರತ್ ಮಡಿವಾಳ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ತನಿಯಪ್ಪ ಎಂಬವರ ಮಗನಾಗಿದ್ದು 28 ವರ್ಷ ವಯಸ್ಸಾಗಿತ್ತು. ಬಿ.ಸಿ.ರೋಡಿನಲ್ಲಿ ಉದಯಲಾಂಡ್ರಿಯನ್ನು ನಡೆಸುತ್ತಿದ್ದ ಅವರು  ಕೆಲಸ ಮುಗಿಸಿ, ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ದಾಳಿ ನಡೆದಿತ್ತು.

    ಆರ್‍ಎಸ್‍ಎಸ್ ನಿರಂತರ ಚಟುವಟಿಕೆಯಲ್ಲಿ ಶರತ್  ಭಾಗಿಯಾಗುತ್ತಿದ್ದರು. ಹೀಗಾಗಿಯೇ ಶರತ್‍ರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

    ದಾಳಿಯ ನಂತರ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಶರತ್ ಅವರನ್ನು ಹಣ್ಣಿನ ವ್ಯಾಪಾರಿಯಾಗಿರುವ ಅಬ್ದುಲ್ ರವೂಫ್ ತಮ್ಮ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದ್ದರು.

    ಈ ಹಿಂದೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳು:
    1. ಬೆಂಗಳೂರಿನ ಶಿವಾಜಿನಗರಲ್ಲಿ ಆರ್. ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. 2016 ಅಕ್ಟೋಬರ್ 16ರ ಭಾನುವಾರ ಆರ್‍ಎಸ್‍ಎಸ್ ಪಥಸಂಚಲ ಮುಗಿಸಿ ವಾಪಸ್ ಬರುವಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

    2. ಮೈಸೂರಿನಲ್ಲಿ ಮಾರ್ಚ್ 13ರಂದು ರಾಜು ಎಂಬವರನ್ನು ಹತ್ಯೆ ಮಾಡಲಾಗಿತ್ತು. ನೇತಾಜಿ ಸರ್ಕಲ್‍ನಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದು ಸಾಯಿಸಿದ್ರು.

    3. ಬೊಮ್ಮಸಂದ್ರ ಮುನ್ಸಿಪಾಲಿಟಿ ಮೆಂಬರ್ ಕಿತ್ತಗಾನಹಳ್ಳಿ ವಾಸು ಎಂಬುವರನ್ನು ಮಾರ್ಚ್ 14ರಂದು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿತ್ತು.