ಮಂಗಳೂರು: ಕಾನತ್ತೂರು ದೈವಸ್ಥಾನಕ್ಕೆ ಭೇಟಿ ನೀಡಿ ದೂರು ನೀಡಿರುವ ಕುರಿತು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟನೆ ನಿಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾನು ಕಾನತ್ತೂರಿಗೆ ಭೇಟಿ ನೀಡಿದ್ದೇನೆ. ನಾನೊಬ್ಬ ಪರಿಪೂರ್ಣ ಆಸ್ತಿಕವಾದಿ. ದೈವ ದೇವರುಗಳ ಮೇಲೆ ಅಚಲ ನಂಬಿಕೆ ಹೊಂದಿದ್ದೇನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಾನತ್ತೂರಿನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ, ಅದಕ್ಕಾಗಿ ಪ್ರಾರ್ಥಿಸಿದ್ದೇನೆ. ಏನು ಪ್ರಾರ್ಥನೆ ಅನ್ನೋದು ನನಗೆ ಬಿಟ್ಟಿದ್ದು. ಆರೋಪಿಗಳ ಪತ್ತೆಯಾಗಿದೆ, ಆದ್ರೂ ಆರೋಪ ಮಾಡಿರುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ.

ತಮ್ಮ ಮೇಲಿನ ಅಪಪ್ರಚಾರವನ್ನು ಖಂಡಿಸಿ ರೈ ನ್ಯಾಯ ದೇಗುಲದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿತ್ತು. ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಗಳಲ್ಲಿ ಬಿ. ರಮಾನಾಥ ರೈ ಮೇಲೆ ಆರೋಪವೂ ಕೂಡಾ ಕೇಳಿಬಂದಿತ್ತು. ಅಲ್ಲದೇ ಈ ವಿಚಾರ ಮತಗಳ ಧೃವೀಕರಣಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಮನನೊಂದ ಮಾಜಿ ಸಚಿವ ರಮಾನಾಥ ರೈ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೂರು ಸಲ್ಲಿಸಿದ್ದರು ಎಂದು ವರದಿಯಾಗಿತ್ತು.
ಶರತ್ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಅಪಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವುಂಟಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ಸುಮ್ಮನೇ ನನ್ನ ಮೇಲೆ ಆರೋಪ ಮಾಡಿದವರನ್ನು ಕರೆದು ವಿಚಾರಣೆ ನಡೆಸಿ ಎಂದು ದೇವಸ್ಥಾನದ ಸನ್ನಿಧಿಯಲ್ಲಿ ವಿನಂತಿ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿತ್ತು.















































