Tag: Sharath Bachegowda

  • ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    – ಪ್ರಿಯಾಂಕ್‌ ಖರ್ಗೆ, ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್

    ಬೆಂಗಳೂರು: ಇಲ್ಲಿನ ಕುಮಾರ ಪಾರ್ಕ್‌ ರಸ್ತೆಯಲ್ಲಿರುವ ಕಿಯೋನಿಕ್ಸ್‌ (KEONICS) ಕಚೇರಿ ಎದುರು ಭಾರೀ ಹೈಡ್ರಾಮಾ ನಡೆದಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಷ ಕುಡಿಯುವ ಪ್ರತಿಭಟನೆಗೆ (KEONICS Protest) ಕರೆ ಕೊಟ್ಟಿದ್ದಾರೆ.

    ಈಗಾಗಲೇ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಈ ಹಿಂದೆ ದಯಾಮರಣ ಕೋರಿದ್ದ ಕಿಯೋನಿಕ್ಸ್‌ ವೆಂಡರ್ಸ್‌ ಇದೀಗ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅಲ್ಲದೇ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge), ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್ ಸಹ ಬರೆದುಕೊಂಡಿದ್ದರು.

    ಕಚೇರಿಯ ಮುಂಭಾಗ ವೆಂಡರ್ಸ್ ಪ್ರತಿಭಟನೆ ಬೆನ್ನಲ್ಲೇ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ವೇಳೆ ವೆಂಡರ್ಸ್ ಕಚೇರಿಗೆ ಬರುತ್ತಿದ್ದ ವ್ಯಕ್ತಿಯಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಕಚೇರಿಗೆ ಹೋಗ್ತಾ ಇದ್ದೀನಿ ಅಂದ್ರೂ ಬಿಡದೇ ಸದಾಶಿವನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಕಿಯೋನಿಕ್ಸ್ ವೆಂಡರ್ಸ್ ಡೆತ್ ನೋಟ್ ನಿಂದ ಸರ್ಕಾರ ಮತ್ತೆ ಮುಜುಗರಕ್ಕೆ ಒಳಗಾದಂತಿದೆ.

    ಒಂದು ವಾರದ ಹಿಂದೆಯಷ್ಟೇ ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಈಗಾಗಲೇ ಬಾಕಿ ಹಣ ಪಾವತಿ ಮಾಡ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದರು.

    ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಬಾಕಿ ಪಾವತಿ ವಿಚಾರ ಮತ್ತು ಕಿಯೋನಿಕ್ಸ್ ವೆಂಡರ್ಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ವೆಂಡರ್ಸ್ ಜೊತೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಾನು ಇಬ್ಬರು ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಪರಿಹಾರ ಕೊಡುವ ಕುರಿತು ಚರ್ಚೆಗಳನ್ನ ನಡೆಸಿದ್ದೇವೆ. ಕಳೆದ ಸರ್ಕಾರದಲ್ಲಿ ನಡೆದ ಹಗರಣಗಳನ್ನ ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೆಂಡರ್ಸ್‌ಗಳಿಗೆ ಮತ್ತು ಸಣ್ಣ ಗುತ್ತಿಗೆದಾರಿಗೆ ತೊಂದರೆ ಕೊಡುವ ಉದ್ದೇಶ ನಮಗೆ ಇಲ್ಲ. ಆದರೆ ಸರ್ಕಾರದ ಖಜಾನೆಗೆ ಆಗಿರುವ ಖೋತಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ತನಿಖೆಯನ್ನ ಗಂಭೀರವಾಗಿ ಮಾಡ್ತಿದ್ದೇವೆ ಎಂದು ಹೇಳಿದ್ದರು.

  • ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ಆನೇಕಲ್‌: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ(Sharath Bachegowda) ಹಾಗೂ ಸಚಿವ ಎಂಟಿಬಿ ನಾಗರಾಜ್(MTB Nagaraj) ವೇದಿಕೆಯಲ್ಲಿ ಪರಸ್ಪರ ಮಾತಿನ ಚಕಮಕಿಯನ್ನು ನಡೆಸಿದ್ದಾರೆ.

    ಹೊಸಕೋಟೆ(Hosakote) ತಾಲೂಕಿನ ಮುತ್ಸಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಸಚಿವರು ಭಾಷಣ ಮಾಡಿ ವೇದಿಕೆಯಿಂದ ಹೊರಡುತ್ತಿದ್ದ ವೇಳೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಹೊಸಕೋಟೆ ಸಮಸ್ಯೆಗಳನ್ನು ನಾನು ಹೇಳುತ್ತೇನೆ ಕೇಳಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಇದನ್ನು ಹೇಳಿ ಬಗೆಹರಿಸಿ ಕೊಡಿ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ಸಚಿವರು ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ವೇದಿಕೆಯ ಮೇಲೆ ವಾಕ್ ಸಮರ ನಡೆಯಿತು. ಇದನ್ನೂ ಓದಿ: ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು – ಕರಾವಳಿಯಲ್ಲಿ ಸಿದ್ದರಾಮಯ್ಯ ಹಿಂದೂ ಜಪ

    ನಿಮ್ಮ ಭಾಷಣ ಕೇಳಿದ್ದೇನೆ. ನನ್ನ ಭಾಷಣದಲ್ಲಿ ಸಮಸ್ಯೆಗಳ ಪಟ್ಟಿಯನ್ನು ಓದುತ್ತೇನೆ ಕೇಳಿಸಿಕೊಂಡು ಸಿಎಂ ಸಭೆಯಲ್ಲಿಟ್ಟು ಪರಿಹರಿಸಿ ಅಂತಾ ಎಂಟಿಬಿಗೆ ವೇದಿಕೆಯಲ್ಲೇ ಠಕ್ಕರ್‌ ಕೊಟ್ಟಿದ್ದಾರೆ. ಇದಕ್ಕೆ ಮತ್ತೊಂದು ಮೈಕ್‌ನಲ್ಲಿ ಸಮಸ್ಯೆಗಳ ಪಟ್ಟಿಕೊಡಿ ಎಂದು ಹೇಳಿ ಎಂಟಿಬಿ ವೇದಿಕೆಯಿಂದ ಇಳಿದಿದ್ದಾರೆ.

    ಎಂಟಿಬಿ ಇಳಿಯತ್ತಿದ್ದಂತೆ ವೇದಿಕೆ ಮೇಲೆಯಿಂದಲೇ ಸಚಿವರಿಗೆ ಶರತ್ ಬಚ್ಚೇಗೌಡ ಧಿಕ್ಕಾರ ಕೂಗಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಸಭೆಗೆ ಬಂದಿದ್ದ ಜನರ ಬಳಿ ಸಮಸ್ಯೆ ಹೇಳಿಕೊಳ್ಳಬಾರದೇ? ಸಿಎಂ ಹತ್ರ ಇವರು ಕೆಲಸ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.


    ಕಂದಾಯ ಇಲಾಖೆ ವತಿಯಿಂದ ನಡೆಸುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗೈರಾಗಿದ್ದರೂ ಕನಿಷ್ಠಪಕ್ಷ ಶಾಸಕರು ಹಾಗೂ ಸಚಿವರು ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಮನವಿ ಮಾಡಲು ಸ್ಥಳಕ್ಕೆ ಬಂದಿದ್ದರು. ಆದರೆ ಕಿತ್ತಾಟವನ್ನು ನೋಡಿದ ಸಾರ್ವಜನಿಕರು ಬೇಸರದಿಂದ ವಾಪಸ್ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಹೊಸಕೋಟೆಯಲ್ಲಿ ಇನ್ನೂ ಮುಗಿದಿಲ್ಲ ಫೈಟ್- ಬಚ್ಚೇಗೌಡ ಫ್ಯಾಮಿಲಿಗೆ ಎಂಟಿಬಿ ಸವಾಲು

    ಆನೇಕಲ್: ಬಹಿರಂಗ ವೇದಿಕೆಯೊಂದರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡಗೆ ಚಾಲೆಂಜ್ ಮಾಡಿದ್ದು, ಹೊಸಕೋಟೆಯಲ್ಲಿ ಇನ್ನೂ ಫೈಟ್ ಮುಗಿದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಎಂಟಿಬಿ, ನಿಮ್ಮಿಬ್ಬರ ಅನುದಾನದಲ್ಲಿ ನಡೆಯುವ ಕಾಮಗಾರಿಯ ಪೂಜೆ ನೀವು ಮಾಡಿ. ಜನರಿಗೆ ಯಾರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ತಿಳಿಯಲಿ. ನಾನು ತಂದ ಅನುದಾನದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ತಮ್ಮ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಟಿಬಿ ಟಾಂಗ್ ನೀಡಿದರು.

    ಶಾಸಕರ ನಿಧಿ ಕೇವಲ 50 ಲಕ್ಷ ಮಾತ್ರ ಇದೆ. ಈಗ ನಡೆಯುತ್ತಿರೋ ಕಾಮಗಾರಿಗಳು ಕೋಟಿ ಲೆಕ್ಕದ ಅನುದಾನ ನಾನು ತಂದದ್ದು. ಇನ್ನು ಕೇವಲ 25 ದಿನದಲ್ಲಿ 20 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಹೊಸಕೋಟೆಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಲಾಗುತ್ತೆ. ನಾನು 3 ಬಾರಿ ಶಾಸಕನಾಗಿದ್ದವನು, 6 ತಿಂಗಳು ಮಂತ್ರಿ ಆಗಿದ್ದಾಗ ತಂದ ಅನುದಾನವಾಗಿದೆ ಎಂದರು.

    ಕಾವೇರಿ ನೀರು ಹೊಸಕೋಟೆಗೆ ಕೊಡಲು ಯಡಿಯೂರಪ್ಪ ಒಪ್ಪಿದ್ದಾರೆ. ಈ ಕೆಲಸಗಳು ನನ್ನ ಅನುದಾನದಲ್ಲಿ ಬಂದವು. ಅಪ್ಪ ಲೋಕಸಭಾ ಸದಸ್ಯ, ಮಗ ಶಾಸಕ ಇವರಿಬ್ಬರೂ ಹೊಸಕೋಟೆಗೆ ಕೊಟ್ಟ ಅನುದಾನ ಬಹಿರಂಗಪಡಿಸಲಿ ಎಂದು ಅಪ್ಪ- ಮಗನಿಗೆ ಎಂಟಿಬಿ ಸವಾಲೆಸೆದರು.

  • ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನಗರಸಭೆ ಚುನಾವಣೆಗೆ ಅವಕಾಶ: ಶರತ್ ಬಚ್ಚೇಗೌಡ

    ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನಗರಸಭೆ ಚುನಾವಣೆಗೆ ಅವಕಾಶ: ಶರತ್ ಬಚ್ಚೇಗೌಡ

    ಬೆಂಗಳೂರು: ತಾಲೂಕಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗು ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ನಗರಸಭೆ ಚುನಾವಣೆಯ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

    ಹೊಸಕೋಟೆ ಕ್ಷೇತ್ರದಲ್ಲಿ ನಗರಸಭೆ ಚುನಾವಣೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಬಳಿಕ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನೀರು ಸರಬರಾಜುಗುತ್ತಿದ್ದ ಪೈಪನ್ನು ಒಡೆದು ಕೋರ್ ಕಮುಟಿಯಲ್ಲಿ ವಾರ್ಡ್‍ನವರು ವ್ಯವಸ್ಥೆಯನ್ನು ಕೆಡಿಸುತ್ತಿದ್ದಾರೆ. ಇದನ್ನೆಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮಾಡುತ್ತಿರುವುದು ನಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಈ ಬಗ್ಗೆ ಈ ಸಮಿತಿಯಲ್ಲಿ ತಿರ್ಮಾನಿಸಲಾಗುವುದು. ಇದಕ್ಕೆಲ್ಲ ನಾವು ಹೆದರದೆ ಕೆಲಸ ಒಗ್ಗಟ್ಟಿನಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ಮಾಡಬೇಕು. ನಗರಸಭೆಯ ಚುನಾವಣೆಯಲ್ಲಿ ಸರ್ವಸಮ್ಮತವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ತಂದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತರಬೇಕು. ಹೊಸಕೋಟೆ ಕ್ಷೇತ್ರದಲ್ಲಿ ಷಡ್ಯಂತರ ಮಾಡುತ್ತಿರುವವರಿಗೆ ತಕ್ಕ ಪಾಠವನ್ನು ತಾಲೂಕಿನ ಮತದಾರರು ಸ್ವಾಭಿಮಾನದ ಪಕ್ಷಕ್ಕೆ ಮತ ನೀಡಿ ಅಭಿವೃದ್ಧಿಯ ಮೂಲಕ ತೋರಿಸಬೇಕಾಗಿದೆ ಎಂದರು.

  • ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಒತ್ತಡ ಹೇರಲ್ಲ: ಶರತ್ ಬಚ್ಚೇಗೌಡ

    ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಒತ್ತಡ ಹೇರಲ್ಲ: ಶರತ್ ಬಚ್ಚೇಗೌಡ

    – ಅಧಿಕಾರಿಗಳು ಪಕ್ಷಪಾತ ತೋರದೆ ಕೆಲಸ ನಿರ್ವಹಿಸಿ

    ಬೆಂಗಳೂರು: ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಯಾವುದೇ ಅಧಿಕಾರಿಯ ಮೇಲೆ ಒತ್ತಡ ತರುವುದಿಲ್ಲ. ಅಧಿಕಾರಿಗಳು ಸಹ ಪಕ್ಷಪಾತ ಮಾಡದೆ ಕೆಲಸ ಮಾಡಿ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿಕೊಂಡಿದ್ದಾರೆ.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳು ಸಂಬಂಧಪಟ್ಟ ಪಲಾನುಭವಿಗೆ ತಲುಪಬೇಕು. ಇದರಲ್ಲಿ ಯಾರದೋ ಕೈವಾಡವಾಗಲಿ ರಾಜಕೀಯವಾಗಿಲಿ ಮಾಡುವುದು ಬೇಡ. ನಾನು ಸಹ ಅಭಿವೃದ್ಧಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ರಾಜಕೀಯ ಮಾಡದೇ ಕೆಲಸ ಮಾಡೋಣ. ಈಗಾಗಲೇ ತಾಲೂಕು ಪಂಚಾಯಿತಿ ಹಂತದಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ತಾಲೂಕಿನಲ್ಲಿ ಈವರೆಗೆ ಶೇ.69.94ರಷ್ಟು ಕೆಲಸವಾಗಿದ್ದು, ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಧಿಕ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ ತಿಳಿಸಿದರು. ತಾಲೂಕಿನಲ್ಲಿ 268 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 8 ಮಾತ್ರ ಕೆಲಸ ಮಾಡುತ್ತಿಲ್ಲ. ಉಳಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

    ತಾಲೂಕಿನ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಊರಿನ ಎಲ್ಲ ಬೀದಿ ದೀಪಗಳಿಗೂ ಸೋಲಾರ್ ಕರೆಂಟ್ ಅಳವಡಿಸಿದ್ದು, ಇದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡೆಸಿದರು. ನೀರಿಗೆ ಹೆಚ್ಚು ಒತ್ತು ಕೊಟ್ಟು ಕೆಲಸಮಾಡಿ, ನೀರಿನ ಸಮಸ್ಯೆ ಬಗೆಹರಿಸಿವಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಸ್ವಾಭಿಮಾನಿಗೆ ಹೊಸಕೋಟೆಯಲ್ಲಿ ಭರ್ಜರಿ ಸ್ವಾಗತ

    ಸ್ವಾಭಿಮಾನಿಗೆ ಹೊಸಕೋಟೆಯಲ್ಲಿ ಭರ್ಜರಿ ಸ್ವಾಗತ

    ಬೆಂಗಳೂರು: ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ತವರಿಗೆ ಬಂದ ಶರತ್ ಬಚ್ಚೇಗೌಡರಿಗೆ ಅಭಿಮಾನಿಗಳು ಅದ್ಧೂರಿ ರೀತಿಯಾಗಿ ಬರಮಾಡಿಕೊಂಡಿದ್ದಾರೆ.

    ಅರ್ಹರು, ಅನರ್ಹರು ಹೋರಾಟದ 15 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಹೊಸಕೋಟೆಯಲ್ಲಿ ಮಾತ್ರ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿತ್ತು. ಸ್ವಾಭಿಮಾನಿ ಹೆಸರಿನಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ತಮ್ಮ ಕುಟುಂಬದ ಎದುರಾಳಿ ಅನರ್ಹ ಶಾಸಕ ಬಿಜೆಪಿಯ ಎಂ.ಟಿ.ಬಿ.ನಾಗರಾಜ್ ವಿರುದ್ಧ ಭರ್ಜರಿಯಾಗಿ ಜಯಗಳಿಸಿದ್ದರು.

    ಹೊಸಕೋಟೆಯ ಅಯ್ಯಪ್ಪ ದೇವಾಲಯದ ಬಳಿಯಿಂದ ಆರಂಭವಾದ ಮೆರವಣಿಗೆ ಮುಖ್ಯರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಶರತ್ ಅಭಿಮಾನಿಗಳು ಬೃಹತ್ ಸೇಬಿನ ಹಾರ ಕ್ರೇನ್ ಮೂಲಕ ಹಾಕಿ ಹಾಗೂ ಬೆಳ್ಳಿ ಗದೆಯನ್ನು ನೀಡಿ ತಮ್ಮ ಯುವನಾಯಕನನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಭರ್ಜರಿ ಸ್ವಾಗತ ನೀಡಿದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಶರತ್ ಮೇಲೆ ಹೂವಿನ ಮಳೆ ಸುರಿಸಿ ತಮ್ಮ ಅಭಿಮಾನ ಪ್ರದರ್ಶಿಸಿದರು. ಶರತ್ ಬಚ್ಚೇಗೌಡರ ಮೆರವಣಿಗೆಯುದ್ದಕ್ಕೂ ನೆರೆದಿದ್ದ ಮತದಾರರಿಗೆ ಮತ ನೀಡಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.

  • ಬಿ.ಎನ್.ಬಚ್ಚೇಗೌಡ ವಿರುದ್ಧ ಶಿಸ್ತುಕ್ರಮ ವಿಚಾರ: ವಿಚಿತ್ರವಾದ ಮುಂದಿಟ್ಟ ಶರತ್ ಬಚ್ಚೇಗೌಡ

    ಬಿ.ಎನ್.ಬಚ್ಚೇಗೌಡ ವಿರುದ್ಧ ಶಿಸ್ತುಕ್ರಮ ವಿಚಾರ: ವಿಚಿತ್ರವಾದ ಮುಂದಿಟ್ಟ ಶರತ್ ಬಚ್ಚೇಗೌಡ

    ಬೆಂಗಳೂರು: ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಶಿಸ್ತು, ಸೂಚನೆಗಳನ್ನು ಉಲ್ಲಘಿಸಿರುವ ಆರೋಪ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಅವರ ಮೇಲೆ ಇದೆ. ಈ ಮಧ್ಯೆ ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಶಾಸಕ ಶರತ್ ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ.

    ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಪಕ್ಷವು ಸಂಸದ ಬಿ.ಎನ್.ಬಚ್ಚೇಗೌಡರಿಗೆ ಸೂಚನೆ ಕೊಟ್ಟಿತ್ತು. ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣಾ ಉಸ್ತುವಾರಿಯನ್ನೂ ಪಕ್ಷ ಕೊಟ್ಟಿತ್ತು. ಆದರೆ ಸಂಸದ ಬಚ್ಚೇಗೌಡರು ಮಾತ್ರ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಒಂದೇ ಒಂದು ದಿನ ಪ್ರಚಾರಕ್ಕೆ ಬರಲಿಲ್ಲ. ಕನಿಷ್ಠ ಪಕ್ಷದ ಅಭ್ಯರ್ಥಿಗಳ ಪರ ಒಂದೂ ಹೇಳಿಕೆ ಕೊಡಲಿಲ್ಲ. ಇಡೀ ಉಪಚುನಾವಣೆಯ ಅವಧಿಯಲ್ಲಿ ಸ್ವಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಒಂದೇ ಒಂದು ದಿನವೂ ಅವರು ಪ್ರಚಾರಕ್ಕೆ ಹೋಗಲಿಲ್ಲ.

    ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅವರು ಬಿಜೆಪ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿದ್ದರು. ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಸಿಟ್ಟಲ್ಲಿ ಪಕ್ಷದ ಅಭ್ಯರ್ಥಿ ಪರ ಬಚ್ಚೇಗೌಡರು ಪ್ರಚಾರಕ್ಕೆ ಹೋಗಲಿಲ್ಲ ಎನ್ನಲಾಗಿದೆ. ಮೇಲಾಗಿ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಯಾಗಿದ್ದು, ಟಿಕೆಟ್ ಪಡೆದಿದ್ದು ಸಹ ಬಚ್ಚೇಗೌಡರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ಬಚ್ಚೇಗೌಡರೇ ತಮ್ಮ ಸೋಲಿಗೆ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಡಿಯೂರಪ್ಪರಿಗೆ ಈಗಾಗಲೇ ಹಲವು ಸಲ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಇನ್ನೂ ಮನಸು ಮಾಡಿದಂತೆ ಕಂಡುಬರುತ್ತಿಲ್ಲ.

    ಬಿ.ಎನ್ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಶಾಸಕ ಶರತ್ ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ. ನಮ್ಮ ತಂದೆ ಸಂಸದ ಬಚ್ಚೇಗೌಡರ ವಿರುದ್ಧ ಬಿಜೆಪಿ ಪಕ್ಷವು ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಮೊದಲಿಗೆ ತಮ್ಮ ತಂದೆ ಎಂಟಿಬಿ ನಾಗರಾಜ್ ಅವರ ಸೋಲಿಗೆ ಕಾರಣರಲ್ಲ. ಅವರು ನನ್ನ ಪರವಾಗಿ ಅಥವಾ ಎಂಟಿಬಿ ನಾಗರಾಜ್ ಅವರ ವಿರುದ್ಧವಾಗಲೀ ಕೆಲಸ ಮಾಡಿಲ್ಲ. ಹೊಸಕೋಟೆ ಮತದಾರರು ಸ್ವಾಭಿಮಾನಕ್ಕೆ ಮನ್ನಣೆ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಎಂಟಿಬಿ ನಾಗರಾಜ್ ಅವರ ಸೋಲಿಗೆ ನಾನೇ ಕಾರಣ ಹೊರತು ತಂದೆಯವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಹೊಸಕೋಟೆ ಕ್ಷೇತ್ರದಲ್ಲಿ ನಮ್ಮ ತಂದೆ ಬಿಜೆಪಿ ಪರ ಕೆಲಸ ಮಾಡದಿದ್ದಕ್ಕೆ ಎಂಟಿಬಿ ನಾಗರಾಜ್ ಸೋತಿದ್ದಾರೆ ಎಂದು ಹೇಳುವುದಾದರೆ ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಅಭ್ಯರ್ಥಿ ಸೋಲಬೇಕಾಗಿತ್ತಲ್ಲವೇ? ಚಿಕ್ಕಬಳ್ಳಾಪುರ ಉಸ್ತುವಾರಿಯಾಗಿದ್ದ ಬಚ್ಚೇಗೌಡರು ಅಲ್ಲೂ ಸಹ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ. ಹಾಗಂತ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸೋತಿದ್ದಾರಾ, ಗೆಲ್ಲಲಿಲ್ಲವೇ? ಚಿಕ್ಕಬಳ್ಳಾಪುರ ಅಭ್ಯರ್ಥಿ ಗೆಲುವಿಗೆ ಅವರ ಸ್ವಂತ ವರ್ಚಸ್ಸು ಕಾರಣವಾಗಿದ್ದರೆ ಹೊಸಕೋಟೆಯಲ್ಲೂ ಎಂಟಿಬಿ ನಾಗರಾಜ್ ಅವರಿಗೆ ಅಷ್ಟೇ ವರ್ಚಸ್ಸು ಇತ್ತಲ್ಲವೇ? ಸತ್ಯ ಇಷ್ಟೇ, ಹೊಸಕೋಟೆ ಚುನಾವಣಾ ಸೋಲು ಗೆಲುವಿಗೆ ತಮ್ಮ ತಂದೆ ಕಾರಣ ಅಲ್ಲವೇ ಅಲ್ಲ. ಹಾಗಾಗಿ ಅವರ ವಿರುದ್ಧ ಕ್ರಮದ ಪ್ರಶ್ನೆಯೇ ಇಲ್ಲ ಎಂದು ಶರತ್ ಬಚ್ಚೇಗೌಡ ವಿಚಿತ್ರ ವಾದ ಮಂಡಿಸುತ್ತಿದ್ದಾರೆ.

    ಶಾಸಕ ಶರತ್ ಬಚ್ಚೇಗೌಡರ ಈ ವಾದ ಪಕ್ಷದ ಪಡಸಾಲೆಯಲ್ಲೂ ಚರ್ಚೆ ಹುಟ್ಟು ಹಾಕಿದೆಯಂತೆ. ಶರತ್ ವಾದದಲ್ಲಿ ಸತ್ಯಾಂಶ ಇದೆ ಎಂದು ಕೆಲವು ಬಿಜೆಪಿ ಮುಖಂಡರೇ ಗುಪ್ತವಾಗಿ ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಇದರ ಮಧ್ಯೆ ಪಕ್ಷದ ಸೂಚನೆಗಳನ್ನು ಸಂಸದ ಬಿ.ಎನ್.ಬಚ್ಚೇಗೌಡರು ಉಲ್ಲಂಘಿಸಿದ್ದಾರೆ ಅಂತ ಹೊಸ ಶಾಸಕರು ಮತ್ತು ಎಂಟಿಬಿ ನಾಗರಾಜ್ ಎದುರೇ ಕೆಲ ಹಿರಿಯ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುತ್ತೇವೆ ಎಂದು ಎಂಟಿಬಿ ನಾಗರಾಜ್ ಅವರಿಗೆ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಶಿಸ್ತು ಕ್ರಮ ಏನು, ಯಾವಾಗ ಅನ್ನುವ ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ನಾಯಕರ ಬಳಿ ಉತ್ತರ ಇಲ್ಲ.

  • ರಮೇಶ್ ಕುಮಾರ್ ಭೇಟಿಯಾಗಿ ಅಚ್ಚರಿ ಮೂಡಿಸಿದ ಸ್ವಾಭಿಮಾನಿ ಶರತ್

    ರಮೇಶ್ ಕುಮಾರ್ ಭೇಟಿಯಾಗಿ ಅಚ್ಚರಿ ಮೂಡಿಸಿದ ಸ್ವಾಭಿಮಾನಿ ಶರತ್

    ಕೋಲಾರ: ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಹೊಸಕೋಟೆ ನೂತನ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಗುರುವಾರ ರಾತ್ರಿ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ರಮೇಶ್ ಕುಮಾರ್ ಆಶೀರ್ವಾದ ಪಡೆದುಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಶರತ್ ನಡೆ ತೀವ್ರ ಕುತೂಹಲ ಕೆರಳಿಸಿದೆ.

    ಹೊಸಕೋಟೆಯ ಪರಾಜಿತ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದ ನಂತರ ನೂತನ ಪಕ್ಷೇತರ ಶಾಸಕ ಶರತ್, ರಮೇಶ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶರತ್ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿ ರಮೇಶ್ ಕುಮಾರ್ ಶುಭಾಶಯ ಕೋರಿದ್ದಾರೆ. ನಂತರ ರಮೇಶ್ ಕುಮಾರ್ ಅವರ ಬಳಿ ಆಶೀರ್ವಾದ ಪಡೆದು ಶರತ್ ವಾಪಸ್ ಆಗಿದ್ದಾರೆ.

    ಸದ್ಯಕ್ಕೆ ಬಿಜೆಪಿಗೆ ಪಕ್ಷಕ್ಕೆ ಸೇರಿಸಿಕೊಳ್ಳಲೂ ಆಗದೆ, ಇತ್ತ ಉಚ್ಚಾಟನೆ ಮಾಡಲೂ ಆಗದೆ ಬಿಸಿ ತುಪ್ಪವಾಗಿ ಶರತ್ ಪರಿಣಮಿಸಿದ್ದಾರೆ. ಹೀಗಿರುವಾಗ ಶರತ್ ಅವರು ಹಿರಿಯ ಕಾಂಗ್ರೆಸ್ ಮುಖಂಡನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

  • ಪಟಾಕಿ ಸಿಡಿಸಿದ್ದಕ್ಕೆ ಶರತ್, ಎಂಟಿಬಿ ಬೆಂಬಲಿಗರ ನಡುವೆ ಮಾರಾಮಾರಿ

    ಪಟಾಕಿ ಸಿಡಿಸಿದ್ದಕ್ಕೆ ಶರತ್, ಎಂಟಿಬಿ ಬೆಂಬಲಿಗರ ನಡುವೆ ಮಾರಾಮಾರಿ

    ಬೆಂಗಳೂರು: ಸೋಮವಾರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರವಾಗಿ ನಿಂತು ಶರತ್ ಬಚ್ಚೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೇ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಕ್ಕೆ ಎಂಟಿಬಿ ಹಾಗೂ ಶರತ್ ಬೆಂಗಲಿಗರ ನಡುವೆ ಮಾರಾಮಾರಿ ನಡೆದಿದೆ.

    ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿಯಲ್ಲಿ ಈ ಗಲಾಟೆ ನಡೆದಿದೆ. ಶರತ್ ಬಚ್ಚೇಗೌಡ ಅವರು ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬೆಂಗಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇತ್ತ ಎಂಟಿಬಿ ಸೋಲನ್ನು ಕಂಡಿದ್ದಕ್ಕೆ ಅವರ ಬೆಂಬಲಿಗರು ಬೇಸರದಲ್ಲಿದ್ದರು. ಆದರೆ ಅವರೆದುರೆ ಶರತ್ ಬೆಂಬಲಿಗರು ಗೆಲುವಿನ ಸಂಭ್ರಮಾಚರಣೆ ಮಾಡಿ, ಪಟಾಕಿ ಸಿಡಿಸಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿ, ಮಾತಿಗೆ ಮಾತು ಬೆಳೆದು ಎರಡು ಗುಂಪು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಗಲಾಟೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್ ಅವರ ತಲೆಗೆ ಪಟ್ಟು ಬಿದ್ದಿದ್ದು, ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ನಂದಗುಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ 7,597 ಮತಗಳ ಅಂತರದಿಂದ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.

  • ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ಬೆಂಗಳೂರು: ನಾನು ಉಪಚುನಾವಣೆಯಲ್ಲಿ ಸೋಲಲು ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡ ಅವರೇ ನೇರ ಕಾರಣ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಆರೋಪಿಸಿದ್ದಾರೆ.

    ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನ್ನ ಸೋಲಿನ ಪರಾಮರ್ಶೆ ಮಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮ. ಹೀಗಾಗಿ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನ ನಾನು ಗೌರವಿಸುತ್ತೇನೆ ಎಂದರು.

    ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಸುಮಾರು 71 ಸಾವಿರ ಮತದಾರರು ಮತವನ್ನ ಹಾಕಿದ್ದಾರೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

    ನಾನು ಉಪಚುನಾವಣೆಯಲ್ಲಿ ಸೋಲಲು ಬಿಎನ್ ಬಚ್ಚೇಗೌಡರೇ ನೇರ ಕಾರಣರಾಗಿದ್ದಾರೆ. ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ, ಈಗ ಸಂಸದರಾಗಿ ಬಿಜೆಪಿ ಪಕ್ಷದಿಂದ ಎಲ್ಲಾ ಅಧಿಕಾರವನ್ನ ಅನುಭವಿಸಿ ಪಕ್ಷಕ್ಕೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಪರವಾಗಿ ಕೆಲಸ ಮಾಡದೆ ಮಗನನ್ನ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.

    ಭಾರತೀಯ ಜನತಾ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದೆ. ಮಗನನ್ನ ಬೆಳಸಲು ರಾಜಕೀಯ ದುರುದ್ದೇಶದಿಂದ ಪಕ್ಷದ ಪರ ಕೆಲಸ ಮಾಡದೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕುತಂತ್ರ ನಡೆಸಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡಿರುವ ಬಚ್ಚೇಗೌಡರ ವಿರುದ್ಧ ಈ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರಲ್ಲಿ ಈ ಮೂಲಕ ಒತ್ತಾಯ ಮಾಡುವುದಾಗಿ ಹೇಳಿದರು.