– ಬಚ್ಚೇಗೌಡರ ಕುಟುಂಬದವರಿಗಿಂತ ನಾನು 10 ಪಟ್ಟು ಶ್ರೀಮಂತ
– ದುಡ್ಡು ಮಾಡುವ ಆಸೆ ನನಗಿಲ್ಲ
ಬೆಂಗಳೂರು: ಶರತ್ ಬಚ್ಚೇಗೌಡ ಕೇವಲ 8 ತಿಂಗಳ ಶಾಸಕ, ನಾನು 40 ವರ್ಷದ ರಾಜಕಾರಣದಲ್ಲಿ ನಾಲ್ಕು ಭಾರಿ ಶಾಸಕನಾಗಿ ಒಂದು ಭಾರಿ ಸಚಿವನಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ಶಾಸಕ ಶರತ್ ಬಚ್ಚೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಚ್ಚೇಗೌಡ ಕುಟುಂಬದವರು ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಬಚ್ಚೇಗೌಡ ಕುಟುಂಬದವರಿಗಿಂತ ನಾನು 10 ಪಟ್ಟು ಶ್ರೀಮಂತ, ನನಗೆ ರಾಜಕೀಯದಲ್ಲಿ ಹಣ ಮಾಡುವ ಆಸೆ ಇಲ್ಲ. ಸ್ಮಶಾನದ ಜಾಗವನ್ನು ಅಕ್ರಮವಾಗಿ ಶರತ್ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ತಾಕತ್ತಿದ್ದರೆ ನನ್ನ ಎದುರು ಬರಲಿ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸುಳ್ಳು, ಮೋಸ ಮಾಡಿ ರಾಜಕೀಯ ಮಾಡಿಕೊಂಡು ಜೆಡಿಎಸ್, ಬಿಜೆಪಿ, ಪಕ್ಷೇತರ ಆಗಿ ಇದೀಗ ಕಾಂಗ್ರೆಸ್ ಮನೆಯ ಬಾಗಿಲು ತಟ್ಟಿದ್ದಾರೆ. ಇವರು ಸ್ವಾರ್ಥಿಗಳಾ, ನಿಸ್ವಾರ್ಥಿಗಳಾ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡಗೆ ಎಂಟಿಬಿ ತಿರುಗೇಟು ನೀಡಿದ್ದಾರೆ.
-ಎಂಟಿಬಿಗೆ ಸಿಎಂ ಅಭಯದ ಮಾತು
-ಡಿಕೆಶಿಗೆ ಚುನಾವಣಾ ಅಖಾಡಕ್ಕೆ ಸ್ವಾಗತ
ಬೆಂಗಳೂರು: ಗೃಹಕಚೇರಿ ಕೃಷ್ಣಾಗೆ ಆಗಮಿಸಿದ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಇಂದು ಸಿಎಂ ಯಡಿಯೂರಪ್ಪ ಜೊತೆ ಉಪ ಚುನಾವಣೆ ಕುರಿತು ಚರ್ಚೆ ನಡೆಸಿದರು. ಸಿಎಂ ಮುಂದೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಯನ್ನು ಹಂಚಿಕೊಂಡಿದ್ದು, ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನು ನಿಯಂತ್ರಿಸಬೇಕೆಂದು ಎಂಟಿಬಿ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀವು ಕೇಳಿದ ತಕ್ಷಣ ರಾಜೀನಾಮೆ ನೀಡಿ ಕಾಂಗ್ರೆಸ್‍ನಿಂದ ಹೊರ ಬಂದಿದ್ದೇವೆ. ಹಾಗಾಗಿ ಉಪ ಚುನಾವಣೆಯಲ್ಲಿ ಅಡ್ಡಿ ಆಗುತ್ತಿರುವ ಶರತ್ ಬಚ್ಚೇಗೌಡರನ್ನ ಕಂಟ್ರೋಲ್ ಮಾಡಿ. ಕಾಂಗ್ರೆಸ್ ಗಿಂತ ಶರತ್ ಬಚ್ಚೇಗೌಡರ ಭಯವೇ ಹೆಚ್ಚಾಗಿದೆ. ಶರತ್ ಬಚ್ಚೇಗೌಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷೇತರ ಅಭ್ಯರ್ಥಿ ಎಂದು ಹೇಳುತ್ತಾ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಸಿಎಂ ಮುಂದೆ ಎಂಟಿಬಿ ನಾಗರಾಜ್ ಬೇಸರ ತೋಡಿಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಉಪಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬುಸ್‍ಬುಸ್ – ಎಂಟಿಬಿಗೆ ಟಿಕೆಟ್ ನೀಡದಂತೆ ಬಿಎಸ್‍ವೈ ಕಾರಿಗೆ ಮುತ್ತಿಗೆ
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಟಿಪ್ಪು ಸುಲ್ತಾನ ಜಯಂತಿ ಆಚರಣೆ ಬಗ್ಗೆ ಶರತ್ ಅವರೇ ಹೇಳಿಕೆ ನೀಡಿದ್ದು, ನನಗೆ ಸಂಬಂಧಿಸಿಲ್ಲ. ಪಕ್ಷೇತರ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ಶರತ್ ಬಚ್ಚೇಗೌಡರು ಕಳೆದ ಒಂದು ತಿಂಗಳಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬಂದು ಬಳಿಕ ಎಲ್ಲ ವಿಚಾರಗಳು ಸ್ಪಷ್ಟವಾಗಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
ಡಿಕೆಶಿಗೆ ಸ್ವಾಗತ:ಈ ಹಿಂದೆ ಡಿಕೆಶಿ ನಮ್ಮ-ನಿಮ್ಮ ಭೇಟಿ ಚುನಾವಣೆ ರಣರಂಗದಲ್ಲಿ ಅಂದಿದ್ದರು. ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೊಸಕೋಟೆಯ ಚುನಾವಣೆ ರಣರಂಗಕ್ಕೆ ಸ್ವಾಗತಿಸುತ್ತೇನೆ. ಈ ಹಿಂದೆಯೂ ಸ್ವಾಗತಿಸುತ್ತೇನೆ ಎಂದು ಹೇಳಿದ್ದೆ, ಈಗಲೂ ನಾನು ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸುತ್ತೇನೆ ಎಂದರು. ಇದನ್ನೂ ಓದಿ: ಉಪಚುನಾವಣೆ ಟಿಕೆಟ್ ಫೈಟ್ – ಹೊಸಕೋಟೆ ಟಿಕೆಟ್‍ಗಾಗಿ ಶರತ್ ಬಚ್ಚೇಗೌಡ ಪಟ್ಟು
ಕಾಂಗ್ರೆಸ್‍ಗೆ ಸೋಲು: ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಈಗಾಗಲೇ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಎಂಬ ಮೂರು ಬಣಗಳಾಗಿವೆ. ಕಾಂಗ್ರೆಸ್ ನಲ್ಲಿ 40 ವರ್ಷ ರಾಜಕೀಯ ಮಾಡಿದ್ದೇನೆ. ಆದರೆ ಇಂದು ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಕಾಣುತ್ತಿದೆ. ಮುಂದಿನ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಸೋಲಲಿದೆ ಎಂದು ಎಂಟಿಬಿ ನಾಗರಾಜ್ ಭವಿಷ್ಯ ನುಡಿದರು.