Tag: sharanabasappa appa

  • ಶರಣಬಸಪ್ಪ ಅಪ್ಪ ಲಿಂಗೈಕ್ಯ – ಪತ್ರದ ಮೂಲಕ ಪ್ರಧಾನಿ ಮೋದಿ ಸಂತಾಪ

    ಶರಣಬಸಪ್ಪ ಅಪ್ಪ ಲಿಂಗೈಕ್ಯ – ಪತ್ರದ ಮೂಲಕ ಪ್ರಧಾನಿ ಮೋದಿ ಸಂತಾಪ

    ನವದೆಹಲಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ (Sharanabasappa appa) ಲಿಂಗೈಕ್ಯರಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (PM Modi) ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.

    ಡಾ.ಶರಣಬಸಪ್ಪ ಅಪ್ಪ ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಹಾಗೂ ದಾಕ್ಷಾಯಿಣಿ ಅಮ್ಮನವರಿಗೆ ದೇವರು ದು:ಖ ಸಹಿಸುವ ಶಕ್ತಿಯನ್ನು ನೀಡಲಿ. ಅಪ್ಪ ಅವರನ್ನು ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೆ ಭಕ್ತಗಣಕ್ಕೂ ನಷ್ಟ ಉಂಟಾಗಿದೆ. ಶರಣಬಸಪ್ಪ ಅವರ ಸಮಾಜ ಸೇವೆ, ಭಕ್ತರಿಗಾಗಿ ಅವರ ತ್ಯಾಗ, ಧಾರ್ಮಿಕ ಕ್ರಿಯೆ ಎಂದು ಮರೆಯಲಾಗದು. ಅದಲ್ಲದೇ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸೋಮವಾರ ಶಾಲೆಗಳಿಗೆ ರಜೆ ಘೋಷಣೆ

    90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಕಳೆದ ತಿಂಗಳು ಜು.26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

    ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ (ಆ.14) ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಅವರನ್ನು ಮಠಕ್ಕೆ ಸ್ಥಳಾಂತರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಗೃಹ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಕಲಬುರಗಿಯ ಖಾಸಗಿ ಆಸ್ಪತ್ರೆಯಿಂದ ಶರಣಬಸಪ್ಪ ಅಪ್ಪ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಶರಣಬಸಪ್ಪ ಅಪ್ಪ ಅವರ ಅಂತಿಮ ಆಸೆ ಕೂಡ ಮಠಕ್ಕೆ ಹೋಗಬೇಕೆನ್ನುವುದಿತ್ತು. ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕೊಂಡೊಯ್ಯಲಾಗಿತ್ತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು. ಅದೇ ವೇಳೆ ಆರತಿ ಕೂಡ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿಸಲಾಗಿತ್ತು.

    ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರಗಳನ್ನು ಮುಂದುವರೆಸಲಾಯಿತು. ರಾತ್ರಿ 9:23ಕ್ಕೆ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದಲ್ಲಿಯೇ ಕೊನೆಯುಸಿರೆಳೆದರು.ಇದನ್ನೂ ಓದಿ: ನಗರಸಭೆಗೆ ಸಂಬಂಧಿಸಿದ ಬೋರ್‌ವೆಲ್ ಬಳಿ ಭೂಕುಸಿತ; ಸ್ಥಳಿಯರಲ್ಲಿ ಹೆಚ್ಚಿದ ಆತಂಕ

  • ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

    ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

    ಕಲಬುರಗಿ: ಇಲ್ಲಿನ ಮಹಾ ದಾಸೋಹಿ, ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾಗಿದ್ದ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಅವರು ನಿನ್ನೆ ರಾತ್ರಿ ಲಿಂಗೈಕ್ಯರಾದರು. ಇಂದು ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ದೇವಸ್ಥಾನ ಮುಂಭಾಗದಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

    ಅಂತ್ಯಸಂಸ್ಕಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪಾಲ್ಗೊಂಡಿದ್ರು. ಅಂತ್ಯ ಸಂಸ್ಕಾರಕ್ಕೂ ಮುನ್ನ ಶರಣಬಸವೇಶ್ಚರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

    ಸಾಗರೋಪಾದಿಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಡಾ.ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರ ಸಚಿವರು, ಶಾಸಕರು ಹಾಗೂ ನೂರಾರು ಮಠಾಧೀಶರು, ಗಣ್ಯರು ಅಂತಿಮ ದರ್ಶನ ಪಡೆದ್ರು. ಇದನ್ನೂ ಓದಿ: ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

    ಇನ್ನೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾಗಿ ಡಾ.ಶರಣಬಸಪ್ಪ ಅವರ ಪುತ್ರ ಚಿರಂಜೀವಿ ದೊಡಪ್ಪ ಅಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯ್ತು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ; ಸಚಿವ ಶರಣಪ್ರಕಾಶ್ ಪಾಟೀಲ್ ಸಂತಾಪ

    ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ
    ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ. ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಕಲಬುರಗಿ ಜನರ ಆರಾಧ್ಯ ದೈವ ಎಂದೇ ಖ್ಯಾತಿಯಾಗಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಡಿ ಕಳೆದ 4 ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿದ್ಯಾಭ್ಯಾಸಕ್ಕೆ ಮಹತ್ವಕೊಟ್ಟಿದ್ದ ಅಪ್ಪ ಖುದ್ದು ಶರಣಬಸವೇಶ್ವರ ವಿಶ್ವವಿದ್ಯಾಲಯ ಆರಂಭಿಸಿ, ಆ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದರು.

    1935ರ ನವೆಂಬರ್‌ 14ರಂದು ಜನಿಸಿದ ಡಾ.ಶರಣಬಸಪ್ಪ ಅಪ್ಪ, ಸಂಸ್ಥಾನದ 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಗೋದುತಾಯಿ ಅವರ ಪುತ್ರ. 1957ರ ಫೆಬ್ರವರಿ 17ರಂದು ಕೋಮಲಾದೇವಿ ಅವರೊಂದಿಗೆ ವಿವಾಹವಾದರು. 1983ರಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ನೇಮಕವಾದರು. 1993ರ ಮಾರ್ಚ್‌ 23ರಂದು ಕೋಮಲಾದೇವಿ ಅನಾರೋಗ್ಯದಿಂದ ನಿಧನ ಹೊಂದಿದರು. ಅದಾದ ಬಳಿಕ ಅಪ್ಪ ಅವರು 1993ರ ನ.30ರಂದು ಡಾ.ದ್ರಾಕ್ಷಯಣಿ ಅವ್ವಾಜಿ ಅವರೊಂದಿಗೆ 2ನೇ ವಿವಾಹವಾದರು.

     

    ಇದರ ಹೊರತಾಗಿ ಧಾರವಾಡ ಕರ್ನಾಟಕ ವಿವಿಯ ಎಮ್.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅಪ್ಪ ಅವರು ಧಾರವಾಡ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಗುಲಿ ವಿವಿಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ವಿವಿಗೆ ಭದ್ರ ಭೂನಾದಿ ಹಾಕಿಕೊಟ್ಟರು. 2003ರ ಏಪ್ರಿಲ್ 28ರಲ್ಲಿ ಸಂಸದ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು. ಸದ್ಯ ಅಪ್ಪಾಜಿ ನಿರ್ಮಿಸಿದಂತಹ ಶಿಕ್ಷಣ ಸಂಸ್ಥೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ. 1991ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

    ಪ್ರಶಸ್ತಿ, ಗೌರವಗಳು
    * ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋ ಪ್ರಶಸ್ತಿ
    * 1999ರಲ್ಲಿ ಗುಲಬರ್ಗಾ ವಿವಿ ಇಂದ ಗೌರವ ಡಾಕ್ಟರೇಟ್ ಪ್ರಧಾನ
    * ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ
    * ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ್ ಪ್ರಶಸ್ತಿ ಪ್ರಧಾನ

  • ಎಚ್‍ಡಿ ರೇವಣ್ಣ ಸಿಎಂ ಆಗ್ತಾರೆ – ಶ್ರೀ ಶರಣಬಸಪ್ಪ ಅಪ್ಪಾರಿಂದ ಆಶೀರ್ವಾದ

    ಎಚ್‍ಡಿ ರೇವಣ್ಣ ಸಿಎಂ ಆಗ್ತಾರೆ – ಶ್ರೀ ಶರಣಬಸಪ್ಪ ಅಪ್ಪಾರಿಂದ ಆಶೀರ್ವಾದ

    ಕಲಬುರಗಿ: ಭವಿಷ್ಯದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಕೂಡ ಸಿಎಂ ಆಗಲಿ ಎಂದು ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಅವರು ಆಶೀರ್ವಾದ ಮಾಡಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆ ಆದ ಬಳಿಕ ಮೊದಲ ಬಾರಿಗೆ ರೇವಣ್ಣ ಅವರು ಕಲಬುರಗಿಗೆ ಭೇಟಿ ನೀಡಿದ್ದರು. ಈ ವೇಳೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.

    ಶ್ರೀಗಳ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ರೇವಣ್ಣ ಅವರನ್ನು ಸಿಎಂ ಆಗುವಂತೆ ಆಶೀರ್ವಾದ ಮಾಡಿ ಎಂದು ಪಕ್ಕದಲ್ಲಿದ್ದವರು ಶ್ರೀಗಳಿಗೆ ಕೇಳಿದರು. ಆ ವೇಳೆ ಶ್ರೀಗಳು ಆಯ್ತು ನೀನು ಮುಖ್ಯಮಂತ್ರಿ ಆಗುತ್ತಿಯಾ ಆಶೀರ್ವಾದಿಸಿದರು.

    ಶ್ರೀಗಳ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಹೀಗಿರುವಾಗ ಲೋಕಸಭಾ ಚುನಾವಣೆಯಲ್ಲಿ ಆ ಕ್ಷೇತ್ರ ಹೇಗೆ ಬಿಟ್ಟುಕೊಡುವುದು ಎಂದು ಪ್ರಶ್ನೆ ಮಾಡಿದರು. ಈ ಮೂಲಕ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ ‘ಕೈ’ ನಾಯಕರಿಗೆ ಪರೋಕ್ಷವಾಗಿ ರೇವಣ್ಣ ಟಾಂಗ್ ನೀಡಿದರು.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರ ನನಗೆ ಮಾಹಿತಿ ಇಲ್ಲ. ಸದ್ಯ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ರಾಜ್ಯದ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಬರದ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ ನಾಲ್ಕೂವರೆ ಸಾವಿರ ಕೋಟಿ ರೂ. ಕೊಟ್ಟಿದೆ. ಆದರೆ ರಾಜ್ಯಕ್ಕೆ 932 ಕೋಟಿ ರೂ. ಮಾತ್ರ ನೀಡಿದೆ. ಇದರಿಂದ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಈ ವೇಳೆ ಸಚಿವರಿಗೆ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಸಾಥ್ ನೀಡಿದರು.

    ಇದೇ ವೇಳೆ ತಮ್ಮ ಭೇಟಿ ಕುರಿತು ಮಾಹಿತಿ ನೀಡಿದ ಸಚಿವರು, ಲೋಕೋಪಯೋಗಿ ಇಲಾಖೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದೇನೆ. ಒಂದೂವರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೈ-ಕ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲಿದ್ದೇವೆ ಎಂದರು. ಅಲ್ಲದೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ತಗೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕೆಂಬುದು ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv