Tag: sharanabasappa

  • ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

    ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

    ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ (SharanaBasavappa) ಲಿಂಗೈಕ್ಯರಾಗಿದ್ದಾರೆ. ಇಂದು (ಆ.15) ಶರಣಬಸವೇಶ್ವರ ದೇವಾಲಯದ ಎದುರು ಅಂತ್ಯಕ್ರಿಯೆ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಹಾಗೂ 5050 ವಿಭೂತಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಬೆ.8 ಗಂಟೆಯಿಂದ ಅಪ್ಪಾಜಿಯವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದ್ದು, ಇಂದು ಸಂಜೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ದಿ.ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿಯ ಪಕ್ಕದಲ್ಲಿ ಸಂಜೆ 5 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಡಾ.ಶರಣಬಸವಪ್ಪ ಅಪ್ಪ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಗೌರವಾರ್ಥ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಅಂತಿಮ ಇಚ್ಛೆಯಂತೆ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರೆಳೆದ ಮಹಾದಾಸೋಹಿ

    ಪಂಚಪೀಠ ಮತ್ತು ಬಸವಾದಿ ಶರಣರ ತತ್ವದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ ಹಾಗೂ 5050 ವಿಭೂತಿಯಿಂದ ಬಳಸಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಅಂತಿಮ ನಮನ ಸಲ್ಲಿಸಲು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರುಗಳು ಭಾಗಿಯಾಗಲಿದ್ದಾರೆ.

    90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಕಳೆದ ತಿಂಗಳು ಜು.26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

    ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ (ಆ.14) ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಅವರನ್ನು ಮಠಕ್ಕೆ ಸ್ಥಳಾಂತರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಗೃಹ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಕಲಬುರಗಿಯ ಖಾಸಗಿ ಆಸ್ಪತ್ರೆಯಿಂದ ಶರಣಬಸಪ್ಪ ಅಪ್ಪ ಅವರನ್ನು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಜೊತೆಗೆ ಶರಣಬಸಪ್ಪ ಅಪ್ಪ ಅವರ ಅಂತಿಮ ಆಸೆ ಕೂಡ ಮಠಕ್ಕೆ ಹೋಗಬೇಕೆನ್ನುವುದಿತ್ತು. ತಮ್ಮ ಅಂತಿಮ ಇಚ್ಛೆಯಂತೆ, ಅಪ್ಪಾಜಿಯವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಆರೋಗ್ಯಕರ ಉಸಿರಾಟದ ಸ್ಥಿತಿಯಲ್ಲಿ ಕೊಂಡೊಯ್ಯಲಾಗಿತ್ತು. ಅಲ್ಲಿ ಅಪ್ಪಾಜಿಯವರು ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು. ಅದೇ ವೇಳೆ ಆರತಿ ಕೂಡ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿಸಲಾಗಿತ್ತು.

    ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರಗಳನ್ನು ಮುಂದುವರೆಸಲಾಯಿತು. ರಾತ್ರಿ 9:23ಕ್ಕೆ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದಲ್ಲಿಯೇ ಕೊನೆಯುಸಿರೆಳೆದರು.ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

  • 86ರ ಹರೆಯದಲ್ಲಿ ಪಿಎಚ್‍ಡಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಕೊಪ್ಪಳದ ಶರಣಬಸಪ್ಪ

    86ರ ಹರೆಯದಲ್ಲಿ ಪಿಎಚ್‍ಡಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಕೊಪ್ಪಳದ ಶರಣಬಸಪ್ಪ

    ಬಳ್ಳಾರಿ: ಸಾಧಿಸುವ ಛಲ, ಓದುವ ಹಂಬಲ ಇದ್ದರೆ ಏನು ಬೇಕಾದ್ರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಇವರಿಗೆ ಬರೋಬ್ಬರಿ 86 ವರ್ಷ ವಯಸ್ಸು. ಆದರೂ ಇವರ ಓದುವ ಹಂಬಲ ಮಾತ್ರ ನಿಂತಿಲ್ಲ. ಕಲಿಯುವ ಕನವರಿಕೆ ಸಹ ಕಡಿಮೆಯಾಗಿಲ್ಲ. ಯುವಕರು ನಾಚುವಂತೆ ಇಳಿವಯಸ್ಸಿನಲ್ಲಿ ಪಿಎಚ್‍ಡಿ ಅಧ್ಯಯನ ಮಾಡುತ್ತಿರೋ ಶರಣಬಸಪ್ಪ ಬಿಸರಳ್ಳಿ ಇದೀಗ ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ಕಲಿಕೆಗೆ ವಯಸ್ಸಿನ ಹಂಗಿಲ್ಲ ಅನ್ನೋದಕ್ಕೆ ಸಾಕ್ಷಿ ಇವರು. ಶರಣ ಬಸಪ್ಪ ಅವರ ಊರು ಕೊಪ್ಪಳದ ಬಿಸರಳ್ಳಿ. ಹಂಪಿ ಕನ್ನಡ ವಿವಿಯಲ್ಲಿ ಈಗ ಶರಣಬಸಪ್ಪ ಪಿಎಚ್‍ಡಿ ವಿದ್ಯಾರ್ಥಿಯಾಗಿದ್ದಾರೆ. ಮೊಮ್ಮಕ್ಕಳ ಜೊತೆ ಇರಬೇಕಾದ ವಯಸ್ಸಿನಲ್ಲಿ ಇದೆಲ್ಲ ಬೇಕಾ ಎಂದು ಕೇಳಿದರೆ ಪಿಎಚ್‍ಡಿ ಮಾಡಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.

    ಅಂದ ಹಾಗೇ ಶರಣಬಸಪ್ಪ ಬಿಸರಳ್ಳಿ ಸ್ವಾತಂತ್ರ್ಯ ಹೋರಾಟಗಾರು. ಮೂರು ಬಾರಿ ಜೈಲುವಾಸ ಅನುಭವಿಸಿ ಬಂದವರು. ಆರು ಮಕ್ಕಳ ತಂದೆಯಾಗಿರೋ ಶರಣಬಸಪ್ಪಗೆ ಪಿಹೆಚ್‍ಡಿ ಮಾಡಬೇಕೆಂಬ ಬಯಕೆ ಇನ್ನಿಲ್ಲದಂತೆ ಕಾಡುತ್ತಿತ್ತು. ಮೂರನೇ ಯತ್ನದಲ್ಲಿ ಶರಣಬಸಪ್ಪಗೆ ಪಿಹೆಚ್‍ಡಿ ಸೀಟ್ ಸಿಕ್ಕಿದೆ. ಕವಿ ಚನ್ನಕವಿ ದ್ಯಾಂಪುರ ಅವರ ಕುರಿತು ಪಿಎಚ್‍ಡಿ ಅಧ್ಯಯನ ಮಾಡುತ್ತಿದ್ದಾರೆ. ಶರಣಬಸಪ್ಪ ಕಲಿಕೆಯ ಹಂಬಲಕ್ಕೆ ಪ್ರಾಧ್ಯಾಪಕರೇ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

    ವಚನಕಾರರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಶರಣಬಸಪ್ಪರು ಈಗಾಗಲೇ ಹಲವು ಪುಸ್ತಕ ಬರೆದಿದ್ದಾರೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಡಾಕ್ಟರೇಟ್ ಪಡೆಯುವ ಉತ್ಸಾಹದಲ್ಲಿ ಶರಣಬಸಪ್ಪ ಯುವಕರಂತೆ ಪಿಎಚ್‍ಡಿ ಅಧ್ಯಯನ ಮಾಡುತ್ತಿರುವುದು ನಿಜಕ್ಕೂ ವಿಶೇಷವೇ ಸರಿ.

  • 85ರ ಶರಣಬಸಪ್ಪ ಅಪ್ಪಾ ಪುತ್ರನಿಗೆ ಆಶ್ರಮದಲ್ಲಿ ಅದ್ಧೂರಿ ಸ್ವಾಗತ- ಕಲಬುರಗಿಯಲ್ಲಿ ವೈಭೋಗದ ಮೆರವಣಿಗೆ

    85ರ ಶರಣಬಸಪ್ಪ ಅಪ್ಪಾ ಪುತ್ರನಿಗೆ ಆಶ್ರಮದಲ್ಲಿ ಅದ್ಧೂರಿ ಸ್ವಾಗತ- ಕಲಬುರಗಿಯಲ್ಲಿ ವೈಭೋಗದ ಮೆರವಣಿಗೆ

    ಕಲಬುರಗಿ: ಗಂಡು ಮಗುವಿನ ತಂದೆಯಾದ ಬಳಿಕ ಇದೇ ಮೊದಲ ಬಾರಿಗೆ ಶರಣಬಸಪ್ಪ ಅಪ್ಪಾ ದಂಪತಿ ಕಲಬುರಗಿಗೆ ಆಗಮಿಸಿದ್ದಾರೆ.

    ಸಂಪ್ರಾದಾಯಿಕ ಸ್ವಾಗತ, ಕುಂಭಮೇಳ, ಆರತಿ, ಡೊಳ್ಳು, ಭಜನೆ ಮೂಲಕ ಅಪ್ಪಾ ದಂಪತಿಗೆ ಭರ್ಜರಿ ಸ್ವಾಗತ ಮಾಡಲಾಯ್ತು. ಇದೆ ಸಂದರ್ಭದಲ್ಲಿ ಲಕ್ಷ ದೀಪೋತ್ಸವಕ್ಕೆ ಡಾ ಶರಣಬಸಪ್ಪ ಅಪ್ಪಾ ಚಾಲನೆ ನೀಡಿದ್ದಾರೆ. ದೇವಸ್ಥಾನದತ್ತ ಅಪಾರ ಭಕ್ತರು ದರ್ಶನಕ್ಕಾಗಿ ಹರಿದು ಬಂದಿದ್ದಾರೆ.

    ಜಿಲ್ಲೆಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರು ತಮ್ಮ 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಶ್ರೀ ಶರಣಬಸಪ್ಪ ಅವರ ಪತ್ನಿ 40 ವರ್ಷದ ದಾಕ್ಷಾಯಿಣಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶ್ರೀಗಳು ತಮ್ಮ 82ನೇ ವಯಸ್ಸಿಯಲ್ಲಿ ತಂದೆಯಾಗಿದ್ದಕ್ಕೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಸಡಗರದಿಂದ ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದರು.

    ಡಾ. ಶರಣಬಸಪ್ಪ ಅಪ್ಪಾ ಅವರು 1935ರ ನವೆಂಬರ್ 14 ರಂದು ಜನಿಸಿದ್ದರು. ಶ್ರೀಗಳಿಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿ ಕೋಮಲಾತಾಯಿ ಐದು ಪುತ್ರಿಯರಿಗೆ ಜನ್ಮ ನೀಡಿದ್ದರು. ಮೊದಲ ಪತ್ನಿಯ ಐದು ಪುತ್ರಿಯರಿಗೂ ಮದುವೆಯಾಗಿದೆ. ಮೊದಲ ಪತ್ನಿ ಕೋಮಲಾತಾಯಿ ಹಲವು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮೊದಲ ಪತ್ನಿ ಮೃತಪಟ್ಟ ಬಳಿಕ ದಾಕ್ಷಾಯಿಣಿ ಅವರನ್ನು ಶರಣಬಸಪ್ಪ ಅಪ್ಪಾ ಅವರು ಮದುವೆಯಾಗಿದ್ದರು. ಎರಡನೇ ಪತ್ನಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.