Tag: Shankersinh Vaghela

  • ಕಾಂಗ್ರೆಸ್ಸಿಗೆ ಈಗ ಗುಜರಾತ್‍ನಲ್ಲಿ ಕೈ ಶಾಸಕರಿಂದಲೇ ಶಾಕ್

    ಕಾಂಗ್ರೆಸ್ಸಿಗೆ ಈಗ ಗುಜರಾತ್‍ನಲ್ಲಿ ಕೈ ಶಾಸಕರಿಂದಲೇ ಶಾಕ್

    ಗಾಂಧಿನಗರ: ಬಿಹಾರದಲ್ಲಿ ನಿತೀಶ್ ಕುಮಾರ್ ದಿಢೀರ್ ಆಗಿ ಬುಧವಾರ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ಸಿಗೆ ಶಾಕ್ ನೀಡಿದ್ದರೆ, ಈಗ ಗುಜರಾತ್‍ನಲ್ಲಿ ಸ್ವಪಕ್ಷೀಯರೇ ನಾಯಕರಿಗೆ ಶಾಕ್ ನೀಡಿದ್ದಾರೆ.

    ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಅವರು ಕಾಂಗ್ರೆಸ್ಸಿಗೆ ರಾಜಿನಾಮೆ ನೀಡಿದ ಬೆನ್ನಲ್ಲೇ ಇದೀಗ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಘೇಲಾ ಅವರ ಹತ್ತಿರ ಸಂಬಂಧಿ ಬಲವಂತ್ ಸಿಂಗ್ ರಜಪೂತ್, ತೇಜಶ್ರೀ ಪಟೇಲ್, ಪಿಐ ಪಟೇಲ್ ರಾಜೀನಾಮೆ ನೀಡಿ ಕಮಲ ಪಡೆಯನ್ನು ಸೇರಿಕೊಂಡಿದ್ದಾರೆ.

    ಆಗಸ್ಟ್ 8 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು ಈ ನಡುವೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿರುವುದು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರ ಮರು ಆಯ್ಕೆಗೆ ಕಷ್ಟವಾಗಲಿದೆ. ತೆರವಾಗುತ್ತಿರುವ ಮೂರು ಸ್ಥಾನಗಳ ಪೈಕಿ ಎರಡರಲ್ಲಿ ಬಿಜೆಪಿ ಸುಲಭವಾಗಿ ಜಯಗಳಿಸಲಿದ್ದು, ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ 11 ಕೈ ಶಾಸಕರು ಕೋವಿಂದ್ ಅವರಿಗೆ ವೋಟ್ ಹಾಕಿದ ಕಾರಣ ಅಹ್ಮದ್ ಪಟೇಲ್ ಅವರು ರಾಜ್ಯಸಭೆಗೆ ಮತ್ತೊಮ್ಮೆ ಆಯ್ಕೆ ಆಗುತ್ತಾರಾ ಇಲ್ಲವೋ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಒಟ್ಟು 182 ಶಾಸಕರನ್ನು ಹೊಂದಿರುವ ಗುಜರಾತ್ ನಲ್ಲಿ 57 ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ. ಎನ್‍ಸಿಪಿ ಇಬ್ಬರು ಶಾಸಕರು ಮತ್ತು ಜೆಡಿಯು ಒಬ್ಬರು ಶಾಸಕರು ಅಹ್ಮದ್ ಪಟೇಲ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ರಾಜ್ಯಸಭೆಗೆ ಆಯ್ಕೆ ಆಗಲು ಅಹ್ಮದ್ ಪಟೇಲ್ ಅವರಿಗೆ ಕನಿಷ್ಟ 47 ಮತಗಳು ಬೇಕು. ಹೀಗಾಗಿ ಈಗಾಗಲೇ ಅಡ್ಡಮತದಾನ ಮಾಡಿರುವ 11 ಶಾಸಕರ ಜೊತೆಗೆ ಮತ್ತಷ್ಟು ಕೈ ಶಾಸಕರು ಸೇರ್ಪಡೆಯಾದರೆ ಅಹ್ಮದ್ ಪಟೇಲ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಕೈ ತಪ್ಪುವ ಸಾಧ್ಯತೆಯಿದೆ.

    ತನ್ನ 77ನೇ ಹುಟ್ಟುಹಬ್ಬದ ದಿನವೇ ಗುಜರಾತ್‍ನ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಹಾಗೂ ಗುಜರಾತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

  • ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನದ ಬಳಿಕ ಕಾಂಗ್ರೆಸ್‍ಗೆ ಡಬಲ್ ಶಾಕ್!

    ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನದ ಬಳಿಕ ಕಾಂಗ್ರೆಸ್‍ಗೆ ಡಬಲ್ ಶಾಕ್!

    ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಡಬಲ್ ಶಾಕ್ ಸಿಕ್ಕಿದೆ. ಗುಜರಾತ್‍ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರೆ, ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಹಿರಿಯ ನಾಯಕಿ ಅಂಬಿಕಾ ಸೋನಿ ರಾಜೀನಾಮೆ ಸಲ್ಲಿಸಿದ್ದಾರೆ.

    ತನ್ನ 77ನೇ ಹುಟ್ಟುಹಬ್ಬದ ದಿನವೇ ಗುಜರಾತ್‍ನ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಹಾಗೂ ಗುಜರಾತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯಿಂದಾಗಿ ಡಿಸೆಂಬರ್‍ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.

    ಹುಟ್ಟುಹಬ್ಬದ ಹೆಸರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಹೈಕಮಾಂಡ್ ಎಚ್ಚರಿಸಿದರೂ ಕ್ಯಾರೇ ಮಾಡದ ವಘೇಲಾ ಗಾಂಧಿನಗರದಲ್ಲಿ ಬೆಂಬಲಿಗರ ಸಮಾವೇಶ ನಡೆಸಿ ಕಾಂಗ್ರೆಸ್ ತನ್ನನ್ನು 24 ಗಂಟೆಗಳ ಹಿಂದೆಯೇ ವಜಾ ಮಾಡಿದೆ ಎಂದು ಆರೋಪಿಸಿದರು.

    ನಾನು ರಾಜ್ಯದಲ್ಲಿ ಪಕ್ಷವನ್ನು ಕಟ್ಟುವನ್ನು ಬಹಳ ಶ್ರಮಿಸಿದ್ದೆ. ಆದರೆ ನಾನೇ ಈಗ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಸಂತ್ರಸ್ತನಾಗಿದ್ದೇನೆ ಎಂದು ಹೇಳಿದರು.

    ಭಾಷಣದಲ್ಲಿ, ನಾನು ಈಗ ಸ್ವತಂತ್ರ ಪಕ್ಷಿ. ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಬಿಡಬಹುದು. ರಾಜೀನಾಮೆ ನೀಡಿದ ಬಳಿಕ ನಾನು ಬಿಜೆಪಿ ಸೇರುವುದಿಲ್ಲ. ಹೊಸ ಪಕ್ಷವನ್ನು ಕಟ್ಟುವುದಿಲ್ಲ. ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ತಿಳಿಸಿದರು.

    ಎರಡು ದಶಕಗಳ ಹಿಂದೆ ಬಂಡಾಯ ಎದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ವಘೇಲಾ ಇದೀಗ ‘ಕೈ’ಯನ್ನು ತೊರೆದಿದ್ದಾರೆ. ಆದರೆ ಮುಂದಿನ ನಡೆ ಏನು ಎನ್ನುವುದನ್ನು ವಘೇಲಾ ತಿಳಿಸಿಲ್ಲ. ಈ ನಡುವೆ ಕಾಂಗ್ರೆಸ್ ವಘೇಲಾ ಅವರನ್ನು ನಾವು ಉಚ್ಚಾಟಿಸಿಲ್ಲ ಎಂದು ಹೇಳಿದೆ.

    ರಾಷ್ಟ್ರೀಯ ಸ್ವಯಂಸೇವಕಾ ಸಂಘದ ಸದಸ್ಯರಾಗಿದ್ದ ವಘೇಲಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. 1981 ರಿಂದ 1991ರವರೆಗೆ ಗುಜರಾತ್ ಬಿಜೆಪಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಆಂತರಿಕ ಭಿನ್ನಪ್ರಾಯದಿಂದಾಗಿ ಬಿಜೆಪಿ ತೊರೆದು ತನ್ನ ಆಪ್ತ ಶಾಸಕರ ಜೊತೆ ರಾಷ್ಟ್ರೀಯ ಜನತಾ ಪಕ್ಷವನ್ನು ಹುಟ್ಟುಹಾಕಿದ್ದರು. 1996-97ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಇವರು 1997ರಲ್ಲಿ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನಗೊಳಿಸಿದರು.

    ಅಂಬಿಕಾ ಸೋನಿ ರಾಜೀನಾಮೆ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಹಿರಿಯ ನಾಯಕಿ ಅಂಬಿಕಾ ಸೋನಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ಈ ಸುದ್ದಿಗೆ ಪ್ರತಿಕ್ರಿಯಿಸಿದ ಅಂಬಿಕಾ ಸೋನಿ, ಅನಾರೋಗ್ಯ ಕಾರಣದಿಂದಾಗಿ ನಾನು ಬಿಡುಗಡೆ ಮಾಡುವಂತೆ ಕೇಳಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಹಿಮಾಚಲ ಪ್ರದೇಶದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ
    ಸಚಿವಾಲಯದ ಸಚಿವೆಯಾಗಿದ್ದ ಅಂಬಿಕಾ ಸೋನಿ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸ್ವೀಕರಿಸಿದಯೋ ಇಲ್ಲವೋ ಎನ್ನುವುದು ಇನ್ನು ತಿಳಿದು ಬಂದಿಲ್ಲ.

    ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಗುಜರಾತ್ ನಲ್ಲಿ ಕೈಗೆ ಶಾಕ್