Tag: Shankarapuram shankara mata

  • ಗ್ರಹಣ ನಿವಾರಣೆಗೆ ದೊಡ್ಡಗೌಡ್ರ ಕುಟುಂಬ ಪೂಜೆ- ದೇಗುಲದಲ್ಲೇ ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

    ಗ್ರಹಣ ನಿವಾರಣೆಗೆ ದೊಡ್ಡಗೌಡ್ರ ಕುಟುಂಬ ಪೂಜೆ- ದೇಗುಲದಲ್ಲೇ ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

    – ವೈಯಕ್ತಿಕ ಪೂಜೆಗೆ ಯಾಕೆ ಬಂದಿದ್ದೀರಾ?
    – ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ

    ಬೆಂಗಳೂರು: ಕೇತುಗ್ರಸ್ಥ ಚಂದ್ರ ಗ್ರಹಣ ಮುಗಿದಿದ್ದು ಎಲ್ಲೆಡೆ ಗ್ರಹಣ ನಿವಾರಣೆಗೆ ಪೂಜೆಗಳು ನಡೆಯುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕೂಡ ಗ್ರಹಣ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ.

    ಗ್ರಹಣ ನಿವಾರಣೆಗೆ ಶೃಂಗೇರಿ ಶಾರದಾಂಬೆ ಮಠದ ಶಾಖಾ ಮಠವಾಗಿರೋ ಬೆಂಗಳೂರಿನ ಶಂಕರಪುರಂ ಶಂಕರ ಮಠದಲ್ಲಿ ಹೆಚ್‍ಡಿಡಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಶಕ್ತಿ ದೇವತೆ ಈಶ್ವರಿಗೆ ಪೂಜೆ ಪುನಸ್ಕಾರ ಮಾಡಿ ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ಮಠದಲ್ಲಿ ಹೋಮ ಹವನವನ್ನು ದೇವೇಗೌಡರ ಕುಟುಂಬ ಮಾಡಿಸುತ್ತಿದೆ.

    ಶಂಕರ ಮಠದಲ್ಲಿ ನಡೆಯುತ್ತಿರುವ ವಿಷೇಷ ಪೂಜೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಮೇಲೆ ಮತ್ತೆ ರೇವಣ್ಣ ಗರಂ ಆಗಿದ್ದಾರೆ. ಇದು ವೈಯಕ್ತಿಕ ಪೂಜೆ. ಯಾಕೆ ಇಲ್ಲಿಗೆ ಬಂದಿದ್ದೀರಾ? ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು. ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತದೆ ಎಂದು ಮಾಧ್ಯಮಗಳ ಮೇಲೆ ಹಿಡಿಶಾಪ ಹಾಕಿದ್ದಾರೆ. ರೇವಣ್ಣ ಅವರು ಇತ್ತೀಚೆಗೆ ಮಂಗಳೂರಿನ ದೇವಸ್ಥಾನವೊಂದರಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದರು.

    ಇಂದು ಸುಪ್ರೀಂ ಕೋರ್ಟ್ ನಿಂದ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ತೀರ್ಪು ಬರೋ ಸಮಯಕ್ಕೆ ಅಮೋಘ ನಿವಾಸಕ್ಕೆ ಹೆಚ್‍ಡಿಡಿ ವಾಪಸ್ಸಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇತ್ತ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ ದೇವರ ಮೊರೆ ಹೋಗಿದ್ದಾರೆ. ಗವಿ ಗಂಗಾಧರ ದೇವಾಲಯದಲ್ಲಿ ಮೂರು ಗಂಟೆಗಳ ಕಾಲ ಮಹಾ ರುದ್ರಯಾಗ ಮಾಡಲಿದ್ದು, ಈಗಾಗಲೇ ಯಾಗ ಆರಂಭವಾಗಿದೆ.