Tag: Shane Watson

  • IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ತಂಡಗಳು ಸಿದ್ಧತೆಯಲ್ಲಿದೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಆಟಗಾರ ಶೇನ್ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

    ಶೇನ್ ವಾಟ್ಸನ್ ಡೆಲ್ಲಿ ತಂಡ ಸೇರಿಕೊಂಡಿರುವುದು ಈ ಬಾರಿ ಆಟಗಾರನಾಗಿ ಅಲ್ಲ. ಸಹಾಯಕ ಕೋಚ್ ಆಗಿ. ವಾಟ್ಸನ್ 2020ರಲ್ಲಿ ಐಪಿಎಲ್ ಸಹಿತ ಎಲ್ಲಾ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಇದೀಗ ಐಪಿಎಲ್‌ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ

    ಈ ಹಿಂದೆ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ವಾಟ್ಸನ್ ಭರ್ಜರಿ ಪ್ರದರ್ಶನ ನೀಡಿದ್ದರು. ಇದೀಗ ಮತ್ತೆ ಐಪಿಎಲ್‍ನಲ್ಲಿ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ತಂಡದ ಹೆಡ್ ಕೋಚ್ ಆಗಿ ರಿಕಿ ಪಾಟಿಂಗ್ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಸಹಾಯಕ ಕೋಚ್ ಆಗಿ ವಾಟ್ಸನ್ ಕಾಣಿಸಿಕೊಳ್ಳಲಿದ್ದಾರೆ.

    ಡೆಲ್ಲಿ ತಂಡದ ಅಸಿಸ್ಟೆಂಟ್ ಕೋಚ್ ಆಗಿ ಸೇರ್ಪಡೆಗೊಂಡ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ವಾಟ್ಸನ್, ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್, ಈಗಾಗಲೇ ನಾನು ಐಪಿಎಲ್‍ನಲ್ಲಿ ಆಟಗಾರನಾಗಿ ಹಲವು ತಂಡ ಮತ್ತು ಆಟಗಾರೊಂದಿಗೆ ಆಡಿದ್ದೇನೆ. ಇದೀಗ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ. ಅದೂ ಕೂಡ ರಿಕಿ ಪಾಟಿಂಗ್ ಅವರಂತಹ ದಿಗ್ಗಜ ನಾಯಕ ಮತ್ತು ಕೋಚ್ ಆಗಿದ್ದವರೊಂದಿಗೆ ಕಾರ್ಯನಿರ್ವಹಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು ಮ್ಯಾಚ್ ವೇಳೆ ಕ್ರೀಡಾಂಗಣಕ್ಕೆ ನುಗ್ಗಿದ ಅಭಿಮಾನಿಗಳು – ನಾಲ್ವರು ಅರೆಸ್ಟ್

    ವಾಟ್ಸನ್ ಐಪಿಎಲ್‍ನಲ್ಲಿ ಒಟ್ಟು 3,875 ರನ್ ಮತ್ತು 92 ವಿಕೆಟ್ ಕಿತ್ತಿದ್ದಾರೆ. ಅಲ್ಲದೆ 2008ರಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ ರಾಯಲ್ಸ್ ಮತ್ತು 2018ರಲ್ಲಿ ಐಪಿಎಲ್ ಟ್ರೋಫಿಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಲ್‍ರೌಂಡರ್ ಆಗಿ ವಾಟ್ಸನ್ ಮಿಂಚಿದ್ದರು.

  • ಎಲ್ಲ ಮಾದರಿಯ ಕ್ರಿಕೆಟಿಗೆ ಶೇನ್‌ ವಾಟ್ಸನ್‌ ನಿವೃತ್ತಿ

    ಎಲ್ಲ ಮಾದರಿಯ ಕ್ರಿಕೆಟಿಗೆ ಶೇನ್‌ ವಾಟ್ಸನ್‌ ನಿವೃತ್ತಿ

    ದುಬೈ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ 39 ವರ್ಷದ ಶೇನ್‌ ವಾಟ್ಸನ್‌ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

    ಶೇನ್‌ ವಾರ್ನ್‌ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಥವಾ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಹೇಳಿಲ್ಲ. ಭಾನುವಾರ ಚೆನ್ನೈ ತಂಡ ಪಂಜಾಬ್‌ ವಿರುದ್ಧ ಜಯಗಳಿಸಿದ ಬಳಿಕ ಸಹ ಆಟಗಾರರ ಜೊತೆ ನಿವೃತ್ತಿ ಘೋಷಣೆಯ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಪಂಜಾಬ್‌ ವಿರುದ್ಧ ಗೆದ್ದ ಬಳಿಕ ವಾಟ್ಸನ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಈ ವಿಚಾರ ತಿಳಿಸುತ್ತಿದ್ದಂತೆ ಬಹಳ ಭಾವನಾತ್ಮಕವಾಗಿದ್ದರು. ಫ್ರಾಂಚೈಸಿಗಳ ಪರ ಆಡಿದ್ದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.

    ಅಂತಾರಾಷ್ಟ್ರೀಯ ಕ್ರಿಕೆಟಿಗೆ ಈಗಾಗಲೇ ನಿವೃತ್ತಿ ಹೇಳಿರುವ ಶೇನ್‌ ವಾಟ್ಸನ್‌ 2008ರಲ್ಲಿ ರಾಜಸ್ಥಾನ ಪರ ಆಡಿದ್ದರು. ಈ ಆವೃತ್ತಿಯಲ್ಲಿ ರಾಜಸ್ಥಾನ ಚಾಂಪಿಯನ್‌ ಆಗಿದ್ದು ವಾಟ್ಸನ್‌ ಫೈನಲ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಬಳಿಕ ಆರ್‌ಸಿಬಿ ಪರ ಆಡಿದ್ದ ವಾಟ್ಸನ್‌ 2018ರಲ್ಲಿ ಚೆನ್ನೈ ಪರ ಆಡಲು ಆರಂಭಿಸಿದ್ದರು. ಚೆನ್ನೈ 4 ಕೋಟಿ ರೂ. ನೀಡಿ ವಾಟ್ಸನ್‌ ಅವರನ್ನು ಖರೀದಿಸಿತ್ತು.

    2018 ರಲ್ಲಿ 15 ಪಂದ್ಯಗಳಿಂದ 555 ರನ್‌, 2019 ರಲ್ಲಿ 17 ಪಂದ್ಯಗಳಿಂದ 398 ರನ್‌ ಹೊಡೆದಿದ್ದ ವಾಟ್ಸನ್‌ ಈ ಬಾರಿ 11 ಪಂದ್ಯ ಮಾತ್ರ ಆಡಿದ್ದರು. 247 ಬಾಲ್‌ ಎದುರಿಸಿದ್ದ ವಾಟ್ಸನ್‌ 29.90 ಸರಾಸರಿಯಲ್ಲಿ 299 ರನ್‌ ಮಾತ್ರ ಹೊಡೆದಿದ್ದರು.

    2018ರ ಐಪಿಎಲ್‌ ಫೈನಲ್‌ನಲ್ಲಿ ವಾಟ್ಸನ್‌ ಶತಕ ಸಿಡಿಸಿದ್ದರು. ಹೈದರಾಬಾದ್‌ ನೀಡಿದ್ದ 179 ರನ್‌ಗಳ ಗುರಿಯನ್ನು ಚೆನ್ನೈ 18.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 181 ರನ್‌ ಹೊಡೆಯುವ ಮೂಲಕ ಮುಟ್ಟಿತ್ತು. ಈ ಪಂದ್ಯದಲ್ಲಿ ವಾಟ್ಸನ್‌ ಔಟಾಗದೇ 57 ಎಸೆತದಲ್ಲಿ 11 ಬೌಂಡರಿ, 8 ಸಿಕ್ಸರ್‌ ಚಚ್ಚಿ 117 ರನ್‌ ಹೊಡೆದಿದ್ದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ವಾಟ್ಸನ್‌ ಪಾತ್ರರಾಗಿದ್ದರು.

  • ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ವಯಸ್ಸು 39 ಆದ್ರೂ, ನೆಟ್ಸ್‌ನಲ್ಲಿ ಧೋನಿ, ವಾಟ್ಸನ್ ಘರ್ಜನೆ – ವಿಡಿಯೋ

    ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ ಮ್ಯಾನ್ ಶೇನ್ ವಾಟ್ಸನ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

    ತಂಡದಲ್ಲಿ ಇಬ್ಬರು ಆಟಗಾರಿಗೆ ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚೆನ್ನೈ ತಂಡ ಸ್ವಲ್ಪ ತಡವಾಗಿ ಅಭ್ಯಾಸವನ್ನು ಆರಂಭ ಮಾಡಿತ್ತು. ಸದ್ಯ ನಿರಂತರ ಅಭ್ಯಾಸದಲ್ಲಿ ನಿರತವಾಗಿರುವ ಧೋನಿ ನೇತೃತ್ವದ ಸಿಎಸ್‍ಕೆ ತಂಡ, ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಯುಇಎಯ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದೆ.

    ಭಾನುವಾರದ ಅಭ್ಯಾಸದ ವೇಳೆ 39 ವರ್ಷದ ಶೇನ್ ವಾಟ್ಸನ್ ಮತ್ತು ಎಂಎಸ್ ಧೋನಿ ನೆಟ್ಸ್ ಪ್ರಾಕ್ಟೀಸ್‍ನಲ್ಲಿ ಬೌಲರ್ ಗಳನ್ನು ದಂಡಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಶೇನ್ ವಾಟ್ಸನ್, 39ರ ವಯಸ್ಸಿನಲ್ಲೂ, ಈ ಇಬ್ಬರು ಹಳೆಯ ವ್ಯಕ್ತಿಗಳು ಮಾಡುತ್ತಿರುವ ಅಭ್ಯಾಸವು ಇಷ್ಟವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಓದಿ: ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ – ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ

    ಐಪಿಎಲ್‍ನಲ್ಲಿ ಹೆಚ್ಚು ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಆಡಿದ್ದ ವಾಟ್ಸನ್ ಕಳೆದ ಎರಡು ಆವೃತ್ತಿಯಿಂದ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನನಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಬೇಕು ಮತ್ತು ಶೇನ್ ವಾರ್ನ್ ಅವರ ಮಾರ್ಗದರ್ಶನದಲ್ಲಿ ಆಡಬೇಕು ಎಂದು ಇಷ್ಟವಿತ್ತು. ಆದರೆ ಅದೂ ಆಗಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಂತಹ ದೊಡ್ಡ ತಂಡಕ್ಕಾಗಿ ಆಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ.

    ಚೆನ್ನೈ ತಂಡ ನನ್ನ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದೆ. ಚೆನ್ನೈ ಒಂದು ಒಳ್ಳೆಯ ತಂಡ. ನಾನು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇದ್ದಾಗ ಚೆನ್ನೈ ವಿರುದ್ಧ ಆಡುವ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರನ್ನು ಮೆಚ್ಚಿಕೊಂಡಿದ್ದೆ. ಅವರು ಪಂದ್ಯದಲ್ಲಿ ಮತ್ತು ಪಂದ್ಯದಿಂದ ಹೊರಗೂ ತಮ್ಮ ತಂಡದ ಆಟಗಾರರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಮೆಚ್ಚಿಕೊಂಡಿದ್ದೆ ಎಂದು ವಾಟ್ಸನ್ ತಿಳಿಸಿದ್ದಾರೆ. ಇದನ್ನು ಓದಿ: ಅನುಭವ ಮಾರ್ಕೆಟಿನಲ್ಲಿ ಸಿಗಲ್ಲ – ಧೋನಿಯನ್ನು ಹಾಡಿಹೊಗಳಿದ ಆಕಾಶ್ ಚೋಪ್ರಾ

    ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದ್ದ ಐಪಿಎಲ್ ಯುಎಇಯಲ್ಲಿ ರಂಗೇರಲು ಸಿದ್ಧವಾಗಿದೆ. ಇದೇ ಸೆಪ್ಟಂಬರ್ 19ರಿಂದ ಐಪಿಎಲ್ ಹಂಗಾಮ ಶುರುವಾಗಲಿದೆ. ಆರಂಭಿಕ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಫೈನಲ್ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡ ಕಣಕ್ಕೀಳಿಯಲಿವೆ. ಒಟ್ಟು 46 ದಿನ 56 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

  • ಬ್ಯಾಟಿಂಗ್ ವೇಳೆ ನಾನು ಮೃತಪಟ್ಟರೂ ದು:ಖವಿಲ್ಲ: ವಿವಿಯನ್ ರಿಚರ್ಡ್ಸ್

    ಬ್ಯಾಟಿಂಗ್ ವೇಳೆ ನಾನು ಮೃತಪಟ್ಟರೂ ದು:ಖವಿಲ್ಲ: ವಿವಿಯನ್ ರಿಚರ್ಡ್ಸ್

    ಸಿಡ್ನಿ: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರು ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಗಳ ಎಸೆತಗಳನ್ನು ಎದುರಿಸುತ್ತಿದ್ದರು. ಈ ವಿಚಾರವಾಗಿ ಮಾತನಾಡಿರುವ ಅವರು, ಬ್ಯಾಟಿಂಗ್ ಮಾಡುವಾಗ ನಾನು ಮೃತಪಟ್ಟರೂ ದು:ಖವಿಲ್ಲ ಎಂದು ಹೇಳಿದ್ದಾರೆ.

    ವಿವಿಯನ್ ರಿಚರ್ಡ್ಸ್ ಅವರು ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಶೇನ್ ವ್ಯಾಟ್ಸನ್ ನಡೆಸಿದ ಆನ್‍ಲೈನ್‍ನಲ್ಲಿ ಚಾಟ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬ್ಯಾಟಿಂಗ್ ಮಾಡುವಾಗ ಸತ್ತರೂ ಯಾವುದೇ ದುಃಖವಿಲ್ಲ ಅಂತ ರಿಚರ್ಡ್ಸ್ ಹೇಳಿದ್ದರು ಎಂದು ವ್ಯಾಟ್ಸನ್ ತಿಳಿಸಿದರು.

    ರಿಚರ್ಡ್ಸ್ ಅವರು 121 ಟೆಸ್ಟ್ ಪಂದ್ಯಗಳನ್ನು ಆಡಿ 8,540 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ 187 ಏಕದಿನ ಪಂದ್ಯಗಳಲ್ಲಿ 6,721 ರನ್ ದಾಖಲಿಸಿದ್ದಾರೆ. ರಿಚಡ್ರ್ಸ್ ಕಾಲದಲ್ಲಿ ಜೆಫ್ ಥಾಮನ್ಸ್, ಡೆನಿಸ್ ಲಿಲ್ಲಿ, ರಿಚರ್ಡ್ ಹ್ಯಾಡ್ಲಿ, ಮಾಲ್ಕಮ್ ಮಾರ್ಷಲ್ ಹಾಗೂ ಜೊಯೆಲ್ ಗಾರ್ನರ್ ಅವರಂತಹ ವಿಶ್ವದ ಅತ್ಯಂತ ಬಲಿಷ್ಠ ವೇಗದ ಬೌಲರ್‍ಗಳಿದ್ದರು. ಬಹುತೇಕ ಅವರು ಗಂಟೆಗೆ 150 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದರು. ಆದರೂ ಕೂಡ ವಿವಿಯನ್ ರಿಚರ್ಡ್ಸ್ ಹೆಲ್ಮೆಟ್ ಧರಿಸದೆಯೇ ಆಟವಾಡಿ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

    ಆಟದ ಬಗೆಗಿನ ಉತ್ಸಾಹ ಹೇಗಿರುತ್ತದೆ ಅಂದ್ರೆ ನಾನು ಪ್ರೀತಿಸುವ ಆಟವನ್ನು ಆಡುತ್ತಾ ಸತ್ತರೂ ಅದು ನೋಯಿಸುವುದಿಲ್ಲ. ಹೀಗೆ ಅನೇಕ ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಗೌರವಿಸುವವರನ್ನು ನಾನು ನೋಡುತ್ತಿದ್ದೆ. ಫಾರ್ಮುಲಾ-1ನಲ್ಲಿ ರೇಸರ್ ಕಾರು ಚಾಲನೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೆ. ಇದಕ್ಕಿಂತ ಹೆಚ್ಚು ಅಪಾಯಕಾರಿ ಯಾವುದಿದೆ? ನನ್ನ ದಂತವೈದ್ಯರು ನನಗೆ ಮೌತ್‍ಪೀಸ್ ನೀಡಿದ್ದರು. ಆದರೆ ಮೌತ್‍ಪೀಸ್‍ನಿಂದಾಗಿ ಚೂಯಿಂಗಮ್ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅದನ್ನು ನಾನು ಕೆಲವೇ ದಿನಗಳು ಬಳಸಿದ್ದೆ ಎಂದು ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ.

  • ಒಳ ಉಡುಪಿನಲ್ಲಿ ಮಹಿಳೆಯರ ಫೋಟೋ ಪೋಸ್ಟ್ – ಕ್ಷಮೆ ಕೇಳಿದ ವ್ಯಾಟ್ಸನ್

    ಒಳ ಉಡುಪಿನಲ್ಲಿ ಮಹಿಳೆಯರ ಫೋಟೋ ಪೋಸ್ಟ್ – ಕ್ಷಮೆ ಕೇಳಿದ ವ್ಯಾಟ್ಸನ್

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಶೇನ್ ವ್ಯಾಟ್ಸನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಒಳ ಉಡುಪಿನಲ್ಲಿ ಇರುವ ಮಹಿಳೆಯರ ಫೋಟೋ ಪೋಸ್ಟ್ ಆಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

    ಕಳೆದ ವಾರವಷ್ಟೇ ವ್ಯಾಟ್ಸನ್ ಅವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಮಂಗಳವಾರ ಅವರ ಇನ್‍ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿ ಅವರ ಖಾತೆಯಿಂದ ಒಳ ಉಡುಪಿನಲ್ಲಿರುವ ಮೂರು ಮಹಿಳೆಯರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಕಳೆದ ವಾರ ವ್ಯಾಟ್ಸನ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಅವರ ಖಾತೆಯಿಂದ ಜನಾಂಗೀಯ ನಿಂದನೆ ಮತ್ತು ಕೋಮುವಾದ ಸೃಷ್ಠಿ ಮಾಡುವ ಟ್ವೀಟ್ ಮಾಡಿ ಕೆಲವರಿಗೆ ಅವಹೇಳನಕಾರಿಯಾಗಿ ಕಮೆಂಟ್ ಕೂಡ ಮಾಡಿದ್ದರು. ಈಗ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿ ಮಹಿಳೆಯರು ಒಳ ಉಡುಪಿನಲ್ಲಿರುವ ಮೂರು ಅಸಭ್ಯ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.

    ಈ ವಿಚಾರದ ಬಗ್ಗೆ ಇಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿರುವ ವ್ಯಾಟ್ಸನ್ ಅವರು, ನನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅಕ್ರಮ ಫೋಟೋಗಳ ವಿಚಾರವಾಗಿ ನಾನು ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಕಳೆದ ಶುಕ್ರವಾರ ನನ್ನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದರು. ಈಗ ಇನ್‍ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿದ್ದಾರೆ. ಅದರಲ್ಲಿ ಅಕ್ರಮ ಫೋಟೋಗಳು ಮತ್ತು ಅಸಭ್ಯ ವಿಡಿಯೋಗಳನ್ನು ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.

    ಇನ್‍ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿರುವ ವ್ಯಾಟ್ಸನ್ ಅವರ ಎರಡು ಖಾತೆಗಳು ಒಂದು ವಾರದಲ್ಲಿ ಎರಡು ಬಾರಿ ಹ್ಯಾಕ್ ಹಾಕಿದ್ದು, ಈ ವಿಚಾರವಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

    ಆಸ್ಟ್ರೇಲಿಯಾ ಪರ ಉತ್ತಮ ಆಲ್‍ರೌಂಡರ್ ಆಟವಾಡಿದ್ದ ವ್ಯಾಟ್ಸನ್ 190 ಏಕದಿನ ಪಂದ್ಯಗಳನ್ನು ಆಡಿ 5,757 ರನ್ ಬಾರಿಸಿದ್ದಾರೆ ಮತ್ತು 168 ವಿಕೆಟ್ ಪಡೆದಿದ್ದಾರೆ. 59 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 3,731 ರನ್ ಹೊಡೆದು 75 ವಿಕೆಟ್ ಕಬಳಿಸಿದ್ದಾರೆ. 58 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿರುವ ಅವರು 1,462 ರನ್ ಹೊಡೆದು ಒಟ್ಟು 48 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ ಆಡುತ್ತಿರುವ ವ್ಯಾಟ್ಸನ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಪ್ರಮುಖ ಆಟಗಾರ ಆಗಿದ್ದಾರೆ.

  • ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಬೆಂಗಳೂರು: ಮುಂಬೈ ವಿರುದ್ಧ ಐಪಿಎಲ್ ಫೈನಲ್ ಪಂದ್ಯದ ವೇಳೆ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದ ವಾಟ್ಸನ್ ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಬ್ಯಾಟ್ ಮಾಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇನ್‍ಸ್ಟಾ ಗ್ರಾಮ್ ನಲ್ಲಿ ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಹಾಕಿ, ವಾಟ್ಸನ್ ಅವರ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆಟ ಮುಗಿದ ಬಳಿಕ 6 ಸ್ಟಿಚ್ ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಕಾಲಿಗೆ ಪೆಟ್ಟಾಗಿದ್ದು, ಈ ವಿಚಾರವನ್ನು ಯಾರಿಗೂ ಹೇಳದೇ ಆಟವಾಡಿ ಪಂದ್ಯವನ್ನು ಗೆಲುವಿನ ಸಮೀಪ ತಂದಿದ್ದರು. ಇದು ನಮ್ಮ ಶೇನ್ ವಾಟ್ಸನ್ ಎಂದು ಬರೆದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಭಜ್ಜಿ 5 ಸ್ಟಾರ್ ನೀಡಿ ವಾಟ್ಸನ್ ಆಟವನ್ನು ಹೊಗಳಿದ್ದಾರೆ.

    ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಾಗ ಯಾರಿಂದಲೂ ಸ್ಪಷ್ಟನೆ ಸಿಗದ ಕಾರಣ ಇದು ನಕಲಿ ಫೋಟೋ, ಫೋಟೋ ಶಾಪ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಹರ್ಭಜನ್ ಅವರೇ ಸ್ಪಷ್ಟನೆ ನೀಡಿದ ಬಳಿಕ ಎದ್ದಿದ್ದ ಎಲ್ಲ ಅಂತೆ ಕಂತೆಗಳ ಸುದ್ದಿಗೆ ತೆರೆ ಬಿದ್ದಿದೆ.

    150 ರನ್ ಗಳ ಸವಾಲು ಪಡೆದ ಚೆನ್ನೈ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ವಾಟ್ಸನ್ ತಂಡದ ಮೊತ್ತ  146 ರನ್ ಆಗಿದ್ದಾಗ ಪಂದ್ಯದ ಕೊನೆ ಓವರಿನ 4ನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದರು.

    ಮಾಲಿಂಗ ಎಸೆದ 16ನೇ ಓವರ್ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರೆ, ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. ಅಂತಿಮವಾಗಿ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ವಾಟ್ಸನ್ ಔಟ್ ಆದರು.

    ವಾಟ್ಸನ್ ಕ್ರೀಸಿನಲ್ಲಿ ಇರುವವರೆಗೂ ಚೆನ್ನೈ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಕೊನೆಯ ಓವರಿನಲ್ಲಿ 9 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಕಾಲು ನೋವಿನ ನಡುವೆಯೂ 2 ರನ್ ಕದಿಯಲು ಮುಂದಾದಾಗ ರನೌಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

  • ಚೆನ್ನೈ ಟೈಟಲ್ ವಿಕ್ಟರಿ ಬಳಿಕ ಪುತ್ರಿಯ ಆಸೆ ಈಡೇರಿಸಿದ ಧೋನಿ- ವಿಡಿಯೋ ನೋಡಿ

    ಚೆನ್ನೈ ಟೈಟಲ್ ವಿಕ್ಟರಿ ಬಳಿಕ ಪುತ್ರಿಯ ಆಸೆ ಈಡೇರಿಸಿದ ಧೋನಿ- ವಿಡಿಯೋ ನೋಡಿ

    ಮುಂಬೈ: ಐಪಿಎಲ್ ಗೆ ಎರಡು ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆಲ್ಲುವ ಮೂಲಕ ತನ್ನ ಅಭಿಮಾನಿಗಳಿಗೆ ಅದ್ಧೂರಿ ಗಿಫ್ಟ್ ನೀಡಿದೆ. ಇದೇ ವೇಳೆ ಧೋನಿ ತಮ್ಮ ಪುತ್ರಿ ಕೇಳಿದ್ದ ಆಸೆಯನ್ನು ಈಡೇರಿಸಿದ್ದಾರೆ.

    ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಧೋನಿ, ಮೊದಲಿಗೆ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ವ್ಯಾಟ್ಸನ್ ಶಾಕಿಂಗ್ ಆಟ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಆದರೆ ಜೀವಾ ಇವುಗಳನ್ನು ಬದಿಗೊತ್ತಿ ತನ್ನ ಪಾಡಿಗೆ ತಾನು ಮೈದಾನದಲ್ಲಿ ಆಟವಾಡಲು ಬಯಸಿದ್ದಳು. ಪಂದ್ಯ ಮುಗಿದ ನಂತರ ಆಕೆ ಮೈದಾನದಲ್ಲಿ ಆಡಿ ತನ್ನ ಆಸೆ ಪೂರ್ಣಗೊಳಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

    https://instagram.com/p/BjSyjBfnmma/?utm_source=ig_embed

    ಸಿಎಸ್‍ಕೆ ಆಟಗಾರರು ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾರೆ. ಜೀವಾ ಕ್ರೀಡಾಂಗಣದ ಹುಲ್ಲು ಹಾಸಿನ ಮೇಲೆ ಇತರರೊಂದಿಗೆ ಆಟವಾಡುತ್ತ ಕಾಲ ಕಳೆದಿದ್ದಳು. ಸದ್ಯ ಧೋನಿ ಪುತ್ರಿಯ ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

    ಪಂದ್ಯದ ಬಳಿಕ ಮಾತನಾಡಿ ತಂಡದ ಧೋನಿ, ಪ್ರತಿ ಆಟಗಾರರ ಶ್ರಮ ಕಪ್ ಗೆಲುವಿನ ಹಿಂದಿನ ಗುಟ್ಟು ಎಂದು ತಿಳಿಸಿದರು. ಹಲವರು ಇಂದು ದಿನಾಂಕ 27, ತನ್ನ ಜರ್ಸಿ ನಂ.7, ಚೆನ್ನೈ ತಂಡ 7ನೇ ಬಾರಿಗೆ ಪ್ರವೇಶ ಎಂದು ಎಲ್ಲವುಗಳ ಕುರಿತು ಮಾತನಾಡುತ್ತಾರೆ. ಆದರೆ ಇವು ಯಾವುದು ಕಾರಣವಲ್ಲ, ನಾವು ಕಪ್ ಗೆದ್ದಿದ್ದೇವೆ ಎಂಬುವುದು ಅಂತ್ಯ ಎಂದು ಹೇಳಿದರು.

    ವಾಟ್ಸನ್ ದಾಖಲೆ: ಈ ಪಂದ್ಯದಲ್ಲಿ ಬೀರುಸಿನ ಆಟ ಪ್ರದರ್ಶಿಸಿ ತಂಡದ ಗೆಲುವುವಿಗೆ ಕಾರಣರಾದ ವ್ಯಾಟ್ಸನ್ ಅಜೇಯ 117 ರನ್ (57 ಎಸೆತ, 11 ಬೌಂಡರಿ, 8 ಸಿಕ್ಸರ್) ಸಿಡಿಸಿ ಸಂಭ್ರಮಿಸಿದರು. ಪಂದ್ಯದ ಆರಂಭದಲ್ಲಿ ಮೊದಲ 1 ರನ್ ಗಳಿಸಲು 10 ಎಸೆತ ಎದುರಿಸಿದ 36 ವರ್ಷದ ವಾಟ್ಸನ್ ಬಳಿಕ 51 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಫೈನಲ್ ನಲ್ಲಿ ಶತಕ ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    https://www.instagram.com/p/BjTmn8cjSyj/?utm_source=ig_embed

    https://twitter.com/VIDtweetshere/status/1000805748467646464?

    https://twitter.com/welldone1venkat/status/1000832358772236288?

    https://twitter.com/azazdr/status/1000815973144788992?