Tag: Shakib Al Hasan

  • ಬೌಲಿಂಗ್‌ಗೆ ಬ್ಯಾನ್‌ – ಬಾಂಗ್ಲಾ ಬೌಲರ್‌ ಶಕೀಬ್‌ಗೆ ಐಸಿಸಿ ಶಾಕ್‌

    ಬೌಲಿಂಗ್‌ಗೆ ಬ್ಯಾನ್‌ – ಬಾಂಗ್ಲಾ ಬೌಲರ್‌ ಶಕೀಬ್‌ಗೆ ಐಸಿಸಿ ಶಾಕ್‌

    ದುಬೈ: ಬಾಂಗ್ಲಾದೇಶದ (Bangladesh) ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ (Shakib Al Hasan) ಬೌಲಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ICC) ನಿಷೇಧ ಹೇರಿದೆ.

    ಬೌಲಿಂಗ್‌ ವೇಳೆ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿದ ಹಿನ್ನೆಲೆಯಲ್ಲಿ ಶಕೀಬ್‌ ಬೌಲಿಂಗ್‌ಗೆ ನಿಷೇಧ ಹೇರಲಾಗಿದೆ. ಇದು ಐಸಿಸಿಯ ದೇಶೀಯ ಮತ್ತು ವಿದೇಶದಲ್ಲಿ ನಡೆಯಲಿರುವ ಪಂದ್ಯಗಳಿಗೆ ಅನ್ವಯವಾಗಲಿದೆ.

    ಡಿಸೆಂಬರ್‌ನಲ್ಲಿ ಇಂಗ್ಲೆಂಡಿನ ಲೌಬರೋ ವಿಶ್ವವಿದ್ಯಾನಿಲಯದಲ್ಲಿ ದಿನನಿತ್ಯದ ಮೌಲ್ಯಮಾಪನದ ನಂತರ, ಬೌಲಿಂಗ್ ಮಾಡುವಾಗ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮದ ಪ್ರಕಾರ ಬೌಲಿಂಗ್‌ ವೇಳೆ ಮೊಣಕೈ ವಿಸ್ತರಣೆಯು 15 ಡಿಗ್ರಿ ಮಿತಿಯನ್ನು ಮೀರುವಂತಿಲ್ಲ.ಯಾವುದೇ ಬೌಲರ್‌ನ ಮೊಣಕೈ ಈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿ ಶಕೀಬ್ ಅವರ ಬೌಲಿಂಗ್‌ ಐಸಿಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತಪಡಿಸಿದೆ. ವರದಿ ಬಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳನ್ನು ಒಳಗೊಂಡಿರುವ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಟೂರ್ನಿಗಳಲ್ಲಿ ಬೌಲಿಂಗ್‌ನಿಂದ ಅವರನ್ನು ಅಮಾನತುಗೊಳಿಸುವುದಾಗಿ ಇಸಿಬಿ ಘೋಷಿಸಿತು.

    ಬಾಂಗ್ಲಾದೇಶದ ಹೊರಗೆ ಐಸಿಸಿ-ಅನುಮೋದಿತ ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬೌಲಿಂಗ್‌ನಿಂದ ಶಕೀಬ್ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ದೃಢಪಡಿಸಿದೆ.‌ ಇದನ್ನೂ ಓದಿ: ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

    37 ವರ್ಷದ ಶಕೀಬ್‌ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಎಡಗೈ ಬ್ಯಾಟ್ಸ್‌ಮ್ಯಾನ್‌ ಮತ್ತು ಎಡಗೈ ಬೌಲರ್‌ ಆಗಿರುವ ಬಾಂಗ್ಲಾ ಪರವಾಗಿ 71 ಟೆಸ್ಟ್‌, 247 ಏಕದಿನ, 129 ಟಿ20 ಪಂದ್ಯವಾಡಿದ್ದಾರೆ.

  • ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ಚೆನ್ನೈ: ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಅವರ ಆಲ್‌ರೌಂಡರ್‌ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್‌ ತಂಡವು ಬಾಂಗ್ಲಾದೇಶ (Bangladesh) ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 280 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ ಭಾರತದ ಸ್ಪಿನ್‌ ಮಾಂತ್ರಿಕರ ದಾಳಿಗೆ ಮಕಾಡೆ ಮಲಗಿದರು. 158 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ 357 ರನ್‌ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿತು. 200 ರನ್‌ ದಾಟುತ್ತಿದ್ದಂತೆ ಪೆವಿಲಿಯನ್‌ ಪರೇಡ್‌ ನಡೆಸಿತು. ಪರಿಣಾಮ 234 ರನ್‌ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾ ಪರ 5ನೇ ವಿಕೆಟ್‌ಗೆ ಶಕೀಬ್‌ ಮತ್ತು ನಾಯಕ ನಜ್ಮುಲ್‌ ಹೊಸೈನ್‌ ಸ್ಯಾಂಟೋ (Najmul Hossain Shanto) ತಾಳ್ಮೆಯ ಇನ್ನಿಂಗ್ಸ್‌ ಕಟ್ಟಿದ್ದರು. 108 ಎಸೆತಗಳಲ್ಲಿ ಈ ಜೋಡಿ 48 ರನ್‌ ಗಳಿಸಿತ್ತು. ಶಕೀಬ್‌ (Shakib Al Hasan) ಔಟಾಗುತ್ತಿದ್ದಂತೆ ಬಾಂಗ್ಲಾ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ‌ ಸ್ಯಾಂಟೋ 82 ರನ್‌, ಜಾಕಿರ್‌ ಹಸನ್‌ 33 ರನ್‌, ಶದಾಮನ್‌ ಇಸ್ಲಾಮ್‌ 35 ರನ್‌, ಮಮಿನ್ಮುಲ್‌ ಹಾಕಿ ಹಾಗೂ ರಹೀಂ ತಲಾ 13 ರನ್‌ ಗಳಿಸಿದ್ರೆ, ಶಕೀಬ್‌ 25 ರನ್‌ ಗಳಿಸಿದರು. ಉಳಿದ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ, ಭಾರತದ ಎದುರು ಮಂಡಿಯೂರಬೇಕಾಯಿತು.

    ಭಾರತ 287ಕ್ಕೆ ಡಿಕ್ಲೆರ್:
    ಇದರ ನಡುವೆ ಭಾರತ ತಂಡ 287/4 ಸ್ಕೋರ್‌ಗೆ ಎರಡನೇ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಸೇರಿದಂತೆ ಬಾಂಗ್ಲಾದೇಶಕ್ಕೆ ಭಾರತ, 515 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಪಂತ್ ಜೊತೆಗೆ ಶುಭಮನ್ ಗಿಲ್ (ಔಟಾಗದೆ 119; 176 ಎಸೆತ, 10 ಬೌಂಡರಿ, 4 ಸಿಕ್ಸರ್) ಕೂಡ ಶತಕ ಗಳಿಸಿದರು. ಕೆಎಲ್ ರಾಹುಲ್ (ಔಟಾಗದೆ 22; 19 ಎಸೆತ, 4 ಬೌಂಡರಿ) ಅಜೇಯರಾಗಿ ಉಳಿದರು.

    ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್:
    ಬಾಂಗ್ಲಾದೇಶ ಬೌಲರ್‌ಗಳಲ್ಲಿ ಮೆಹದಿ ಹಸನ್ ಮಿರಾಜ್ ತಲಾ ಎರಡು, ಟಾಸ್ಕಿನ್ ಅಹ್ಮದ್ ಮತ್ತು ನಹಿದ್ ತಲಾ ಒಂದೊಂದು ವಿಕೆಟ್ ಪಡೆದರು. ಇದರ ನಡುವೆ ಭಾರತ ಮೊದಲ ಇನಿಂಗ್ಸ್ನಲ್ಲಿ 376 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರವಿಚಂದ್ರನ್ ಅಶ್ವಿನ್ (113) ಮತ್ತು ರವೀಂದ್ರ ಜಡೇಜಾ (86) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹಸನ್ ಮಹ್ಮೂದ್ (5/83) ಐದು ವಿಕೆಟ್ ಪಡೆದಿದ್ದರು.

    ಬಾಂಗ್ಲಾ 149ಕ್ಕೆ ಆಲ್‌ಔಟ್
    ಜಸ್‌ಪ್ರೀತ್ ಬುಮ್ರಾ (4/50), ಆಕಾಶ ದೀಪ್ (2/19), ರವೀಂದ್ರ ಜಡೇಜಾ (2/19) ಮತ್ತು ಮೊಹಮ್ಮದ್ ಸಿರಾಜ್ (2/30) ನೆರವಿನಿಂದ ಭಾರತ ತಂಡ, ಪ್ರಥಮ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡವನ್ನು 149 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಶಕಿಬ್ ಅಲ್ ಹಸನ್ (32) ಗರಿಷ್ಠ ಸ್ಕೋರರ್ ಆಗಿದ್ದರು.

  • ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಢಾಕಾ: ಕೊಲೆ ಪ್ರಕರಣದ ಆರೋಪಿಯಾಗಿರುವ ಬಾಂಗ್ಲಾದೇಶ ಪುರುಷರ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನ ಕೂಡಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಬ್ಯಾನ್‌ ಮಾಡುವಂತೆ ಬಾಂಗ್ಲಾದೇಶ ಕ್ರಿಕೆಟ್ ‌ಮಂಡಳಿಗೆ (Bangladesh Cricket Board) ನೋಟಿಸ್‌ ನೀಡಲಾಗಿದೆ.

    ಸದ್ಯ ರಾವಲ್ಪಿಂಡಿಯಲ್ಲಿರುವ ಶಕೀಬ್‌ ಪಾಕಿಸ್ತಾನ (Pakistan_ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯ (Test Series) ಭಾಗವಾಗಿದ್ದಾರೆ. ಈ ನಡುವೆ ಬಾಂಗ್ಲಾ ರ‍್ಯಾಲಿಯಲ್ಲಿ ಕೊಲೆಯಾದ ರುಬೆಲ್‌ ಎಂಬಾತನ ತಂದೆ ರಫೀಕುಲ್‌ ಇಸ್ಲಾಂ ಪರ ವಕೀಲರು ಶಕೀಬ್‌ ಅವರನ್ನು ಬ್ಯಾನ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ಲೀಗಲ್‌ ನೋಟಿಸ್‌ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Jammu Kashmir Election | ಘೋಷಿಸಿದ ಪಟ್ಟಿ ಹಿಂಪಡೆದು ಕೊನೆಗೂ 15 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ

    ಶಕೀಬ್‌ ಅವರನ್ನ ಕೂಡಲೇ ಕ್ರಿಕೆಟ್‌ನಿಂದ ನಿಷೇಧಿಸುವಂತೆ ಮಂಡಳಿಯನ್ನು ಕೋರಿದ್ದಾರೆ. ಆದ್ರೆ ಪಾಕ್‌ ವಿರುದ್ಧ ಟೆಸ್ಟ್‌ ಪಂದ್ಯ ಮುಗಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಬಿ ಅಧ್ಯಕ್ಷ ಫಾರುಕ್ ಅಹ್ಮದ್ ತಿಳಿಸಿದ್ದಾರೆ. ಇದನ್ನೂ ಓದಿ: MUDA Scam | ವೈಟ್ನರ್‌ ಹಿಂದಿರುವ ಅಕ್ಷರಗಳೇನು? – ವೀಡಿಯೋ ಸಮೇತ ಸಾಕ್ಷಿ ನೀಡಿದ ಸಿದ್ದರಾಮಯ್ಯ

    ಶಕೀಬ್‌ ವಿರುದ್ಧ ಕೊಲೆ ಕೇಸ್‌ ದಾಖಲಾಗಿರುವುದು ಏಕೆ?
    ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿ ಇದೇ ಆಗಸ್ಟ್ 7ರಂದು ಮುಸ್ಲಿಂ ಮುಖಂಡ ರಫೀಕುಲ್‌ನ ಪುತ್ರ ರುಬೆಲ್ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್‌ನ ರಿಂಗ್‌ರಸ್ತೆಯಲ್ಲಿ ನಡೆಯುತ್ತಿದ್ದ ರ‍್ಯಾಲಿ ವೇಳೆ ರುಬೆಲ್‌ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಹಾಗೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಗೃಹ ಸಚಿವರೇ ನಿಮ್ಮದು ಯಾವ ನ್ಯಾಯ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ?- ಸಾರ್ವಜನಿಕರಿಂದ ತರಾಟೆ

    ಈ ಕೊಲೆ ಪ್ರಕರಣ ಸಂಬಂಧ ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶಕೀಬ್ 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾಗಿರುವ ಒಟ್ಟು 154 ಪ್ರಮುಖ ವ್ಯಕ್ತಿಗಳ ಪೈಕಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರೂ ಪ್ರಕರಣದಲ್ಲಿ ದಾಖಲಾಗಿದೆ. ಅಲ್ಲದೇ ಸುಮಾರು 400-500 ಅಪರಿಚಿತ ವ್ಯಕ್ತಿಗಳೂ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.

  • ಓವರ್‌ ಕಾನ್ಫಿಡೆನ್ಸ್‌ನಿಂದ‌ ಪಾಕ್‌ಗೆ ತವರಿನಲ್ಲೇ ಹೀನಾಯ ಸೋಲು – ಬಾಂಗ್ಲಾಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು!

    ಓವರ್‌ ಕಾನ್ಫಿಡೆನ್ಸ್‌ನಿಂದ‌ ಪಾಕ್‌ಗೆ ತವರಿನಲ್ಲೇ ಹೀನಾಯ ಸೋಲು – ಬಾಂಗ್ಲಾಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು!

    ರಾವಲ್ಪಿಂಡಿ: ಪಾಕ್‌ (Pakistan) ತಂಡದ ಓವರ್‌ ಕಾನ್ಫಿಡೆನ್ಸ್‌ನಿಂದಾಗಿ ತವರಿನಲ್ಲೇ ನಡೆದ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಅಲ್ಲದೇ ಪಾಕ್‌ ನೆಲದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು (Test Series) 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದರಿಂದ ಪಾಕ್‌ ತಂಡದ ಆಟಗಾರರು ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 171 ರನ್‌ ಗಳಿಸಿ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಬ್ಯಾಟ್‌ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಪಾಕ್‌ ತಂಡ ಮಾಡಿದ ಯಡವಟ್ಟಿನಿಂದಲೇ ಇದೀಗ ಹೀನಾಯ ಸೋಲು ಕಂಡಿದೆ.

    ಪಾಕ್‌ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಪಾಕ್‌ ಪರ ಸೌದ್‌ ಶಕೀಲ್‌ 261 ಎಸೆತಗಳಲ್ಲಿ 141 ರನ್‌ ಗಳಿದಿದ್ರೆ, ಮೊಹಮ್ಮದ್‌ ರಿಜ್ವಾನ್‌ 239 ಎಸೆತಗಳಲ್ಲಿ 171 ರನ್‌ (11 ಬೌಂಡರಿ, 3 ಸಿಕ್ಸರ್)‌, ಸೈಮ್ ಅಯೂಬ್ 56 ರನ್‌ ಗಳಿಸಿದ್ದರು. ಇದರಿಂದ ತಂಡದ ಮೊತ್ತ ಪಾಕ್‌ 113 ಓವರ್‌ಗಳಲ್ಲಿ 448 ರನ್‌ ಗಳಿಸಿತ್ತು. ಆದ್ರೆ ತನ್ನ ಸರದಿ ಆರಂಭಿಸಿದ್ದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 167.3 ಓವರ್‌ಗಳಲ್ಲಿ 565 ರನ್‌ ಪೇರಿಸಿತ್ತು. ಬ್ಯಾಟಿಂಗ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ 191 ರನ್‌ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್‌ಗಳ ಕೊಡುಗೆ ನೀಡಿದ್ದರು.

    ಇನ್ನೂ 4ನೇ ದಿನ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ 146 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್‌ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌ 51 ರನ್‌, ಅದ್ಭುಲ್‌ ಶಫಿಕ್‌ 37 ರನ್‌, ಬಾಬರ್‌ ಆಜಂ (Babar Azam) 22 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದ್ದರು. ಇದರಿಂದ ಗೆಲುವಿಗೆ ಕೇವಲ 30 ರನ್‌ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್​ ತಂಡದ ಸೋಲಿಗೆ ಕಾರಣವಾಯಿತು.

    ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್​ಗೆ 4 ವಿಕೆಟ್​ ಕಿತ್ತರೆ, ಆಲ್‌ರೌಂಡರ್‌ ಶಕಿಬ್​ ಅಲ್​ ಹಸನ್ 3 ವಿಕೆಟ್,ಶೊರಿಫುಲ್‌, ಹಸನ್‌ ಮೊಹಮ್ಮದ್‌ ಹಾಗೂ ನಹಿದ್‌ ರಾಣಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಜಾಕಿರ್‌ ಹಸನ್‌ 15 ರನ್‌, ಶಾದ್‌ಮನ್‌ ಇಸ್ಲಾಮ್‌ 9 ರನ್‌ ಗಳಿಸಿದ್ರೆ, ವೈಡ್‌ ಮತ್ತು ಲೆಗ್‌ಬೈಸ್‌ನಿಂದ ಹೆಚ್ಚುವರಿ 6 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಐತಿಹಾಸಿಕ ಗೆಲುವು:
    ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್​ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌
    ಪಾಕಿಸ್ತಾನ – 448/6d, ಬಾಂಗ್ಲಾದೇಶ – 565/10

    2ನೇ ಇನ್ನಿಂಗ್ಸ್‌
    ಪಾಕಿಸ್ತಾನ – 146/10, ಬಾಂಗ್ಲಾದೇಶ – 30/0

  • ಮಾಜಿ ಪ್ರಧಾನಿ ಶೇಖ್‌ ಹಸೀನಾ, ಬಾಂಗ್ಲಾದ ಆಲ್‌ರೌಂಡರ್‌ ಶಕೀಬ್‌ ವಿರುದ್ಧ ಕೊಲೆ ಪ್ರಕರಣ ದಾಖಲು

    ಮಾಜಿ ಪ್ರಧಾನಿ ಶೇಖ್‌ ಹಸೀನಾ, ಬಾಂಗ್ಲಾದ ಆಲ್‌ರೌಂಡರ್‌ ಶಕೀಬ್‌ ವಿರುದ್ಧ ಕೊಲೆ ಪ್ರಕರಣ ದಾಖಲು

    – 400ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಕೇಸ್‌

    ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina), ಬಾಂಗ್ಲಾದೇಶ ಪುರುಷರ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ (Shakib Al Hasan) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಢಾಕಾದ ಮಾಧ್ಯಮವೊಂದು ವರದಿ ಮಾಡಿದೆ.



    ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ (Reservation) ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ ಇದೇ ಆಗಸ್ಟ್‌ 7ರಂದು ಮುಸ್ಲಿಂ ಮುಖಂಡ (Muslim Leader) ರಫೀಕುಲ್‌ನ ಪುತ್ರ ರುಬೆಲ್‌ ಎಂಬಾತನ ಹತ್ಯೆಯಾಗಿತ್ತು. ಢಾಕಾದ ಅಡಬೋರ್‌ನ ರಿಂಗ್‌ರಸ್ತೆಯಲ್ಲಿ ನಡೆಯುತ್ತಿದ್ದ ರ‍್ಯಾಲಿ ವೇಳೆ ರುಬೆಲ್‌ನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಘಟನೆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್‌ ಹಾಗೂ ಹಸೀನಾ ಸೇರಿದಂತೆ ನೂರಾರು ಮಂದಿ ವಿರುದ್ಧ ಕೇಸ್‌ ದಾಖಲಾಗಿದೆ.

    ಈ ಕೊಲೆ ಪ್ರಕರಣ ಸಂಬಂಧ ಢಾಕಾದ ಅಡಾಬೋರ್ ಪೊಲೀಸ್ ಠಾಣೆಯಲ್ಲಿ (Dhaka Adabor Police) ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶಕೀಬ್‌ 28ನೇ ಆರೋಪಿ ಎಂದು ಹೆಸರಿಸಲಾಗಿದೆ. ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾನೆ. ಇವರಿಬ್ಬರೂ ಸಂಸತ್ತಿನಲ್ಲಿ ಅವಾಮಿ ಲೀಗ್‌ನ ಮಾಜಿ ಸಂಸದರಾಗಿದ್ದರು. ಪ್ರಕರಣ ದಾಖಲಾಗಿರುವ ಒಟ್ಟು 154 ಪ್ರಮುಖ ವ್ಯಕ್ತಿಗಳ ಪೈಕಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರೂ ಪ್ರಕರಣದಲ್ಲಿ ದಾಖಲಾಗಿದೆ. ಅಲ್ಲದೇ ಸುಮಾರು 400-500 ಅಪರಿಚಿತ ವ್ಯಕ್ತಿಗಳೂ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.

    ಕಳೆದ ವರ್ಷ ಬಿಸಿಸಿಐ ಆತಿಥ್ಯದಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾ (Bangladesh) ತಂಡದ ನಾಯಕನಾಗಿ ಶಕೀಬ್ ಅಲ್ ಹಸನ್ (Shakib Al Hasan) ನೇಮಕಗೊಂಡಿದ್ದರು. ಆದ್ರೆ ಸರಣಿಯುದ್ಧಕ್ಕೂ ಕಳಪೆ ಪ್ರದರ್ಶನದಿಂದಾಗಿ ಲೀಗ್‌ಸುತ್ತಿನಲ್ಲೇ ಹೊರಬಿದ್ದ ಪರಿಣಾಮ ಶಕೀಬ್‌ ಅವರನ್ನ ನಾಯಕತ್ವದಿಂದ ಕೆಳಗಿಳಿಸಲಾಯಿತು. ಸದ್ಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ನಜ್ಮುಲ್ ಹೊಸೈನ್ ಶಾಂಟೊ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿದ್ದಾರೆ.

  • T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    ಕಿಂಗ್ಸ್‌ಟೌನ್‌: 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ (T20WC SemiFinal) ಪ್ರವೇಶಿಸಿದೆ. ಆದ್ರೆ ವಿಶ್ವಕಪ್‌ ಸೆಮಿಸ್‌ ಪ್ರವೇಶಿಸುವ ಕನಸು ಕಂಡಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದಿದೆ.

    ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್‌ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್‌ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ

    ಚೇಸಿಂಗ್‌ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿ ಅಫ್ಘಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. 6.3 ಓವರ್‌ಗಳಲ್ಲೇ 48 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ 49 ಎಸೆತಗಳಲ್ಲಿ 54 ರನ್‌ಗಳಿಸಿ ನೆರವಾಗಿದ್ದರು. ಆದ್ರೆ ಸಹ ಆಟಗಾರರು ಉತ್ತಮ ಸಾಥ್‌ ನೀಡದ ಕಾರಣ ಬಾಂಗ್ಲಾ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಅಫ್ಘಾನ್‌ ಪರ ರೆಹ್ಮಾನುಲ್ಲಾ ಗುರ್ಬಾಝ್‌ 55 ಎಸೆತಗಳಲ್ಲಿ 43 ರನ್‌, ರಶೀದ್‌ ಖಾನ್‌ 19 ರನ್‌, ಇಬ್ರಾಹಿಮ್‌ 18 ರನ್‌, ಅಝ್ಮತ್ತುಲ್ಲಾ ಒಮರ್ಝೈ 10 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ

    ರಶೀದ್‌, ನವೀನ್‌ ಸಮಬಲ ಪ್ರದರ್ಶನ:
    ಬಾಂಗ್ಲಾ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಮಾರಕ ದಾಳಿ ನಡೆಸಿದ ನವೀನ್‌ ಉಲ್‌ ಹಕ್‌ ಹಾಗೂ ರಶೀದ್‌ ಖಾನ್‌ ಸಮಬಲ ಪ್ರದರ್ಶನ ಸಾಧಿಸಿದ್ದಾರೆ. ನವೀನ್‌ 3.5 ಓವರ್‌ಗಳಲ್ಲಿ 26 ರನ್‌ ಕೊಟ್ಟು 4 ವಿಕೆಟ್‌ ಕಿತ್ತರೆ, ರಶೀದ್‌ ಖಾನ್‌ 4 ಓವರ್‌ಗಳಲ್ಲಿ 23 ರನ್‌ ಕೊಟ್ಟು 4 ವಿಕೆಟ್‌ ಉರುಳಿಸಿದರು. ಫಸಲ್‌ಹಕ್‌ ಫರೂಕಿ ಮತ್ತು ಗುಲ್ಬದೀನ್‌ ನೈಬ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ:  24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

  • World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    ಬೆಂಗಳೂರು: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಶತಕಗಳ ದಾಖಲೆ ಸರಿಗಟ್ಟಿದ್ದ ವಿರಾಟ್‌ ಕೊಹ್ಲಿ (Virat Kohli), ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ ಸಚಿನ್‌ (Sachin Tendulkar) ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

    ಲೀಗ್‌ ಸುತ್ತಿನ ಕೊನೆಯ ಪಂದ್ಯವು ಟೀಂ ಇಂಡಿಯಾ (Team India) ಅಭಿಮಾನಿಗಳ ಪಾಲಿಗೆ ರಸದೌತಣವಾಗಿತ್ತು. ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಬ್ಯಾಟರ್ಸ್‌, ನೆದರ್ಲೆಂಡ್ಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಅದರಲ್ಲೂ ಚೇಸ್‌ ಮಾಸ್ಟರ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿಯುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ಕೊಹ್ಲಿ ಅರ್ಧಶತಕ ದಾಖಲಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

    ಡಚ್ಚರ ವಿರುದ್ಧ ಅರ್ಧಶತಕ ಸಿಡಿಸಿದ ಕೊಹ್ಲಿ ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ 7 ಬಾರಿ 50+‌ ರನ್‌ ಗಳಿಸಿದ ವಿಶೇಷ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದರು. 2003ರಲ್ಲಿ ಸಚಿನ್‌ ತೆಂಡೂಲ್ಕರ್‌ 7 ಬಾರಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 50+ ಸ್ಕೋರ್‌ ಗಳಿಸಿದ್ದರೆ, ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ (Shakib Al Hasan) 2019ರಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 2023ರ ವಿಶ್ವಕಪ್‌ ಆವೃತ್ತಿಯಲ್ಲಿ ಇವರಿಬ್ಬರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 410 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್‌ (Netherlands) 47.5 ಓವರ್‌ಗಳಲ್ಲೇ 250 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 2023ರ ವಿಶ್ವಕಪ್‌ಗೆ ಸೋಲಿನೊಂದಿಗೆ ಭಾವುಕ ವಿದಾಯ ಹೇಳಿತು.

    ಭಾನುವಾರದ ಪಂದ್ಯವು ಟೀಂ ಇಂಡಿಯಾದ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. 2023ನೇ ಸಾಲಿನಲ್ಲಿ ಭಾರತ 8 ಬಾರಿ 350ಕ್ಕಿಂತ ಹೆಚ್ಚು ರನ್ ಗಳಿಸಿ ದಾಖಲೆ ಬರೆಯಿತು. ಅಲ್ಲದೇ ಇದು ಟೀಂ ಇಂಡಿಯಾ ವಿಶ್ವಕಪ್‌ ಟೂರ್ನಿಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್‌ (2nd Highest World Cup Score in History) ಸಹ ಆಗಿದೆ. 2007ರ ವಿಶ್ವಕಪ್‌ನಲ್ಲಿ ಭಾರತ ಬರ್ಮುಡಾ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 413 ರನ್‌ ಗಳಿಸಿದ್ದು, ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ಆಗಿದೆ. ಅಷ್ಟೇ ಅಲ್ಲದೇ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೇ ಆರಂಭಿಕನಾಗಿಯೇ 14 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಒಟ್ಟು 60 ಸಿಕ್ಸರ್‌ ಸಿಡಿಸುವ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ನಂ.1 ಆಟಗಾರ ಸಹ ಎನಿಸಿಕೊಂಡರು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನ ಪೂರೈಸಿದರು. ಇನ್ನೂ ಕೆ.ಎಲ್‌ ರಾಹುಲ್‌ 62 ಎಸೆತಗಳಲ್ಲೇ ಶತಕ ಸಿಡಿಸಿ ವೇಗದ ಶತಕ ಸಿಡಿಸಿದ ಟಾಪ್‌-1 ದಿಗ್ಗಜರ ಎಲೈಟ್‌ ಪಟ್ಟಿ ಸೇರಿದರು.

  • ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ನವದೆಹಲಿ: ಶಕೀಬ್‌ ಅಲ್‌ ಹಸನ್‌ (Shakib Al Hasan) ಮತ್ತು ಬಾಂಗ್ಲಾದೇಶ ತಂಡ ಮಾಡಿದ್ದು ನಿಜಕ್ಕೂ ಅವಮಾನಕರ ಕೃತ್ಯ. ಅವರು ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಏಂಜಲೋ ಮಾಥ್ಯೂಸ್ (Angelo Mathews) ಕಿಡಿ ಕಾರಿದ್ದಾರೆ.

    ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಸೋಲನುಭವಿಸಿದ ನಂತರ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ನಾಯಕ ಶಕೀಬ್‌ ಅಲ್‌ ಹಸನ್‌ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಕೀಬ್‌ ಅಲ್‌ ಹಸನ್‌ ಮಾಡಿದ್ದು, ನಿಜಕ್ಕೂ ಅವಮಾನಕರ ಕೃತ್ಯ. ಅವರ ಸಾಮಾನ್ಯ ಜ್ಞಾನ ಎಲ್ಲಿ ಹೋಯ್ತು ಅನ್ನೋದು ನನಗೆ ಗೊತ್ತಾಗಲಿಲ್ಲ. ಅವರು ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಜಾಡಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ಯಾವುದೇ ಒಬ್ಬ ಆಟಗಾರ ಔಟಾದ ಬಳಿಕ ಮುಂದಿನ ಆಟಗಾರ 2 ನಿಮಿಷದ ಒಳಗೆ ಕ್ರೀಸ್‌ನಲ್ಲಿ ಇರಬೇಕು ಏಂದು ಐಸಿಸಿ ನಿಯಮ ಹೇಳುತ್ತದೆ. ನಾನೂ ಕೂಡ 2 ನಿಮಿಷದಲ್ಲೇ ಕ್ರೀಸ್‌ನಲ್ಲಿ ಇದ್ದೆ. ಆದ್ರೆ ನನ್ನ ಹೆಲ್ಮೆಟ್‌ ಒಡೆದಿತ್ತು. ಬದಲಿ ಹೆಲ್ಮೆಟ್‌ ಪಡೆದ ನಂತರವೂ ಇನ್ನೂ 5ಕ್ಕೂ ಹೆಚ್ಚು ಸೆಕೆಂಡುಗಳನ್ನು ಹೊಂದಿದ್ದೆ. ಆದರೂ ಔಟ್‌ ನೀಡಿದ್ದು ಅಮಾನವೀಯ ಎಂದು ಕಿಡಿಕಾರಿದರಲ್ಲದೇ ನಾನು ಶಕೀಬ್‌ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಆದ್ರೆ ಇಂತಹ ಘಟನೆಯ ನಂತರ ಅವರ ಮೇಲೆ ನನಗಿದ್ದ ಮನಸ್ಥಿತಿ ಬದಲಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಏನಿದು ವಿವಾದ..?
    ಬಾಂಗ್ಲಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್ ಎದುರಿಸಲು ಮುಂದಾದಾಗ ಹೆಲ್ಮೆಟ್ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪೈರ್ ಜೊತೆ ಬ್ಯಾಟರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್ ಔಟ್‌ಗೆ (Timed Out) ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್ ಅವರು, ನನ್ನ ಹೆಲ್ಮೆಟ್ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್ ಮಾತ್ರ ತಮ್ಮ ಟೈಮ್ಡ್ ಔಟ್ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್ ಎಸೆದು ಸಿಟ್ಟು ಹೊರಹಾಕಿದರು.

    ಟೈಮ್ಡ್ ಔಟ್ ನಿಯಮ ಏನು ಹೇಳುತ್ತದೆ?
    ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೇ ಫೀಲ್ಡಿಂಗ್ ನಡೆಸುವ ತಂಡದ ನಾಯಕ ಟೈಮ್ಡ್ ಔಟ್‌ಗೆ ಮನವಿ ಮಾಡಬಹುದು. ಅಂಪೈರ್ ನೇರವಾಗಿ ಔಟ್ ನೀಡಲು ಬರುವುದಿಲ್ಲ. ಬೌಲಿಂಗ್ ನಡೆಸುವ ತಂಡದ ನಾಯಕ ಮನವಿ ಮಾಡಿದ್ರೆ ಮಾತ್ರ ಟೈಮ್ಡ್ ಔಟ್ ನೀಡಬಹುದು. ಬ್ಯಾಟರ್ ಟೈಮ್ಡ್ ಔಟಾದರೆ ಬೌಲರ್‌ಗೆ ವಿಕೆಟ್ ಸಿಗುವುದಿಲ್ಲ. ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

  • ವಿಶ್ವಕಪ್‌ ಕ್ರಿಕೆಟ್‌ನಿಂದ ಬಾಂಗ್ಲಾ ನಾಯಕ ಶಕೀಬ್‌ ಔಟ್‌

    ವಿಶ್ವಕಪ್‌ ಕ್ರಿಕೆಟ್‌ನಿಂದ ಬಾಂಗ್ಲಾ ನಾಯಕ ಶಕೀಬ್‌ ಔಟ್‌

    ಪುಣೆ: ವಿಶ್ವಕಪ್‌ ಕ್ರಿಕೆಟ್‌ನಿಂದ (World Cup Cricket) ಬಾಂಗ್ಲಾದೇಶದ (Bangladesh) ನಾಯಕ ಶಕೀಬ್‌ ಅಲ್‌ ಹಸನ್‌ (Shakib Al Hasan) ಔಟಾಗಿದ್ದಾರೆ.

    ಸೋಮವಾರ ದೆಹಲಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆದ ಪಂದ್ಯದಲ್ಲಿ ಶಕೀಬ್‌ ಅವರ ಎಡಗೈ ತೋರುಬೆರಳಿಗೆ ಗಾಯವಾಗಿತ್ತು. ಪಂದ್ಯದ ನಂತರ ಎಕ್ಸ್‌ರೇ ತೆಗೆದಾಗ ಮೂಳೆ ಮುರಿತವಾಗಿದ್ದು ದೃಢಪಟ್ಟಿತ್ತು. ಮೊಬೈಲಿನಲ್ಲೇ ಲೇಟೆಸ್ಟ್‌ ಸುದ್ದಿ ಓದಲು ಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲಿಗೆ ಸೇರ್ಪಡೆಯಾಗಿಪಬ್ಲಿಕ್‌ ಟಿವಿ ವಾಟ್ಸಪ್‌ ಚಾನೆಲ್‌

    ಗಂಭೀರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ನವೆಂಬರ್‌ 11 ರಂದು ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

    ವಿಶ್ವಕಪ್‌ ಸೆಮಿಫೈನಲ್‌ ರೇಸ್‌ನಿಂದ ಔಟಾಗಿರುವ ಬಾಂಗ್ಲಾದೇಶ ಶ್ರೀಲಂಕಾ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತ್ತು. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಈ ಪಂದ್ಯದಲ್ಲಿ ಶಕೀಬ್‌ 2 ವಿಕೆಟ್‌ ಪಡೆಯುವುದರ ಜೊತೆ 82 ರನ್‌ (65 ಎಸೆತ, 12 ಬೌಂಡರಿ, 2 ಸಿಕ್ಸರ್‌) ಸಿಡಿಸಿದ್ದರು. ಶಕೀಬ್‌ ಮತ್ತು ನಜ್ಮುಲ್‌ ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲುವಿನ ಕಡೆಗೆ ತಿರುಗಿಸಿದ್ದರು. ಅತ್ಯುತ್ತಮ ಆಟದ ಪ್ರದರ್ಶನಕ್ಕೆ ಶಕೀಬ್‌ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

  • ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಬೆಂಗಳೂರು: ಶ್ರೀಲಂಕಾದ ಏಂಜಲೋ ಮಾಥ್ಯೂಸ್ (Angelo Mathews) ಮತ್ತು ಬಾಂಗ್ಲಾದೇಶ ಶಕಿಬ್ ಉಲ್ ಹಸನ್ (Shakib Al Hasan) ಕಿತ್ತಾಟದ ಮಧ್ಯೆ ವೀರೇಂದ್ರ ಸೆಹ್ವಾಗ್ ಸುದ್ದಿಯಾಗುತ್ತಿದ್ದಾರೆ.

    ದೆಹಲಿಯಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್ ಒಂದು ಎಸೆತ ಎದುರಿಸದೇ ಟೈಮ್ಡ್ ಔಟ್‌ಗೆ (timed out) ಬಲಿಯಾಗಿದ್ದರು. ಈ ಮೂಲಕ ಟೈಮ್ಡ್ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಟೈಮ್ಡ್ ಔಟ್ ಮನವಿ ಮಾಡಿದ್ದಕ್ಕೆ ಶಕಿಬ್ ಉಲ್ ಹಸನ್ ಸೇರಿದಂತೆ ಬಾಂಗ್ಲಾ (Bangladesh) ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಹಲವು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ (Team India) ಅಭಿಮಾನಿಗಳು 2010 ಪಂದ್ಯದಲ್ಲಿ ಸೆಹ್ವಾಗ್ (Virender sehwag) ಅವರ ಉದಾಹರಣೆ ನೀಡಿ ಶ್ರೀಲಂಕಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.

    2010ರಲ್ಲಿ ಏನಾಗಿತ್ತು?
    ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು.  ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

    ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು.

    ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು.

    ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಯಾಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಐಸಿಸಿಯ ಈ ನಿಯಮದಿಂದಾಗಿ ಸೆಹ್ವಾಗ್ ಶತಕ ಪೂರ್ಣಗೊಂಡಿರಲಿಲ್ಲ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಪ್ರತಿಕ್ರಿಯಿಸಿದ ಸೆಹ್ವಾಗ್, ಒಬ್ಬ ಬ್ಯಾಟ್ಸ್‌ಮನ್‌ 99 ರನ್‌ ಗಳಿಸಿದ್ದಾಗ ಮತ್ತು ಸ್ಕೋರ್‌ಗಳು ಸಮವಾಗಿದ್ದಾಗ ಬೌಲರ್‌ಗಳು ನೋ-ಬಾಲ್‌ಗಳು ಮತ್ತು ವೈಡ್‌ಗಳನ್ನು ಎಸೆಯುವುದು ಸಾಮಾನ್ಯ ಎಂದು ಹೇಳಿ ಲಂಕಾ ತಂಡದ ಕ್ರೀಡಾ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದರು.

     

    ಈ ವಿಚಾರವನ್ನು ಮುಂದಿಟ್ಟುಕೊಂಡು ಟೀಂ ಇಂಡಿಯಾ ಅಭಿಮಾನಿಗಳು ಈಗ ಶ್ರೀಲಂಕಾ ತಂಡವನ್ನು ಪ್ರಶ್ನಿಸುತ್ತಿದ್ದಾರೆ. ಈಗ ನೀವು ಬಾಂಗ್ಲಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಅಂದು ಕುಮಾರ ಸಂಗಕ್ಕಾರ ಹಿಡಿಯಬಹುದಾದ ಚೆಂಡನ್ನು ಹಿಡಿಯದ ಕಾರಣ ಅದು ಬೌಂಡರಿಗೆ ಹೋಗಿತ್ತು. ಕೊನೆಗೆ ರಂದೀವ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದು ಸೆಹ್ವಾಗ್ ಶತಕವನ್ನು ತಡೆದಿದದ್ದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.