Tag: Shai Hope

  • ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌ – ಫಾಲೋ ಆನ್‌ ಬಳಿಕ ವಿಂಡೀಸ್‌ ದಿಟ್ಟ ಹೋರಾಟ; ಭಾರತಕ್ಕೆ ಇನ್ನಿಂಗ್ಸ್‌ & 97 ರನ್‌ಗಳ ಮುನ್ನಡೆ

    ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌ – ಫಾಲೋ ಆನ್‌ ಬಳಿಕ ವಿಂಡೀಸ್‌ ದಿಟ್ಟ ಹೋರಾಟ; ಭಾರತಕ್ಕೆ ಇನ್ನಿಂಗ್ಸ್‌ & 97 ರನ್‌ಗಳ ಮುನ್ನಡೆ

    ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ 3ನೇ ದಿನದಾಟ ರೋಚಕವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 248 ರನ್‌ಗಳಿಗೆ ಆಲೌಟ್‌ ಆದ ವಿಂಡೀಸ್‌ ತಂಡ ಫಾಲೋ ಆನ್‌ ಬಳಿಕ ದಿಟ್ಟ ಹೋರಾಟದ ಮೂಲಕ ಭಾರತ ತಂಡಕ್ಕೆ ತಿರುಗೇಟು ನೀಡಿದೆ. ಆದಾಗ್ಯೂ ಭಾರತ 3ನೇ ದಿನದ ಅಂತ್ಯಕ್ಕೆ ಇನ್ನಿಂಗ್ಸ್‌ನೊಂದಿಗೆ 97 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

    ಶನಿವಾರ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ಶುರು ಮಾಡಿದ್ದ ವಿಂಡೀಸ್‌ ತಂಡ ದಿನದ ಅಂತ್ಯಕ್ಕೆ 43 ಓವರ್‌ಗಳಲ್ಲಿ 140 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು. 3ನೇ ದಿನ 248 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್‌ ಬಳಿಕ 270 ರನ್‌ಗಳ ಭಾರೀ ಹಿನ್ನಡೆಯಲ್ಲಿದ್ದ ಕಾರಣ ಭಾರತ ಫಾಲೋ ಆನ್‌ ಘೋಷಿಸಿತು. ಹೀಗಾಗಿ ವೆಸ್ಟ್‌ ಇಂಡೀಸ್‌ ತಂಡ 3ನೇ ದಿನವೇ ತನ್ನ 2ನೇ ಇನ್ನಿಂಗ್ಸ್‌ ಶುರು ಮಾಡಿತು.

    ಫಾಲೋ ಆನ್​ ಎಂದರೇನು?
    ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿ 518 ರನ್​ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್​ ತಂಡ​ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 248 ರನ್​ಗಳಿಗೆ ಆಲೌಟ್​ ಆಯ್ತು. ಇದರೊಂದಿಗೆ 270 ರನ್​ಗಳ ಹಿನ್ನಡೆ ಸಾಧಿಸಿತು. ಟೆಸ್ಟ್​ನಲ್ಲಿ ಯಾವುದೇ ತಂಡವೂ 200 ರನ್​ ಹಿನ್ನಡೆಯೊಂದಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ ಕೊನೆಗೊಂಡರೇ ಎದುರಾಳಿ ತಂಡಗಳು ಫಾಲೋ ಆನ್​ ಹೇರಬಹುದು.​ ಆಗ ಫಾಲೋ ಆನ್​ ಪಡೆದ ತಂಡ ಬೆನ್ನಲ್ಲೇ ಎರಡನೇ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಬೇಕು. 2ನೇ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ರನ್​ಗಳನ್ನು ಪೂರ್ಣಗೊಳಿಸಿ ಅದರ ನಂತರ ಎಷ್ಟು ರನ್ ಕಲೆಹಾಕುತ್ತದೊ ಅದನ್ನು ಟಾರ್ಗೆಟ್​ ಆಗಿ ಪರಿಗಣಿಸಲಾಗುತ್ತದೆ.

    ಫಾಲೋ ಆನ್‌ ಬಳಿಕ ಬ್ಯಾಟಿಂಗ್‌ ಶುರು ಮಾಡಿದ ವೆಸ್ಟ್‌ ಇಂಡೀಸ್‌ ತಂಡದ ಕೇವಲ 35 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಆರಂಭಿಕ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯಿ ಹೋಪ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. 208 ಎಸೆತಗಳಲ್ಲಿ 138 ರನ್‌ಗಳ ಅಜೇಯ ಶತಕದ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದರು. ಇದರಿಂದಾಗಿ ವಿಂಡೀಸ್‌ ತಂಡ 3ನೇ ದಿನದ ಅಂತ್ಯಕ್ಕೆ ಮುರಿಯದ 3ನೇ ವಿಕೆಟ್‌ಗೆ 173 ರನ್‌ ಗಳಿಸಿದೆ. 145 ಎಸೆತಗಳಲ್ಲಿ 87 ರನ್‌ (2 ಸಿಕ್ಸರ್‌, 9 ಬೌಂಡರಿ) ಬಳಿಸಿರುವ ಜಾನ್ ಕ್ಯಾಂಪ್ಬೆಲ್, 103 ಎಸೆತಗಳಲ್ಲಿ 66 ರನ್‌ (2 ಸಿಕ್ಸರ್‌, 8 ಬೌಂಡರಿ) ಸಿಡಿಸಿರುವ ಶಾಯಿ ಹೋಪ್‌ ಕ್ರೀಸ್‌ನಲ್ಲಿದ್ದು, ಸೋಮವಾರ 4ನೇ ದಿನದಾಟ ಆರಂಭಿಸಲಿದ್ದಾರೆ.

    ದಿಲ್ಲಿಯಲ್ಲಿ ಬೌಲರ್‌ಗಳ ದರ್ಬಾರ್‌
    ಇನ್ನೂ 3ನೇ ದಿನ ಭಾರತೀಯ ಬೌಲರ್‌ಗಳು ಪಾರಮ್ಯ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್‌ ಯಾದವ್‌ 5 ವಿಕೆಟ್‌ ಗೊಂಚಲು ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ತಲಾ ಒಂದು ವಿಕೆಟ್‌ ಕಿತ್ತರು. 2ನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಸಂಕ್ಷಿಪ್ತ ಸ್ಕೋರ್
    ಭಾರತ ಪ್ರಥಮ ಇನ್ನಿಂಗ್ಸ್ 518/5 ಡಿ, ಯಶಸ್ವಿ ಜೈಸ್ವಾಲ್ 175, ಶುಭಮನ್ ಗಿಲ್ 129, ಸಾಯಿ ಸುದರ್ಶನ್ 87
    ವಾರಿಕನ್ 98ಕ್ಕೆ 3, ರೋಸ್ಟನ್ ಚೇಸ್ 83ಕ್ಕೆ 1.

    ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ 248ಕ್ಕೆ ಆಲೌಟ್, ಅಲಿಖ್ ಅಥನಾಝ್ 41, ಶಾಯಿ ಹೋಪ್ 36, ಚಂದ್ರಪಾಲ್ 34
    ಕುಲ್ದೀಪ್ ಯಾದವ್ 82ಕ್ಕೆ 5, ರವೀಂದ್ರ ಜಡೇಜಾ 46ಕ್ಕೆ 3

  • ಐಪಿಎಲ್‌ನಲ್ಲಿ ಕೆಟ್ಟ ಅಂಪೈರಿಂಗ್‌ ಸದ್ದು: ಹಾಲಿ, ಮಾಜಿ ಕ್ರಿಕೆಟರ್ಸ್‌ ಕೆಂಡಾಮಂಡಲ – ಯಾರು ಏನ್‌ ಹೇಳ್ತಾರೆ?

    ಐಪಿಎಲ್‌ನಲ್ಲಿ ಕೆಟ್ಟ ಅಂಪೈರಿಂಗ್‌ ಸದ್ದು: ಹಾಲಿ, ಮಾಜಿ ಕ್ರಿಕೆಟರ್ಸ್‌ ಕೆಂಡಾಮಂಡಲ – ಯಾರು ಏನ್‌ ಹೇಳ್ತಾರೆ?

    ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 20 ರನ್‌ಗಳ ಅಮೋಘ ಜಯ ಸಾಧಿಸಿತ್ತು. ಆದ್ರೆ ಜಿದ್ದಾ ಜಿದ್ದಿ ಕಣದಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಔಟ್‌ ಆದ ಬಗೆ ಈಗ ವಿವಾದಕ್ಕೆ ಕಾರಣವಾಗಿದೆ.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ಪರ ನಾಯಕ ಸಂಜು ಸ್ಯಾಮ್ಸನ್‌ (Sanju Samso) ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದರು. 45 ಎಸೆತಗಳಲ್ಲಿ 8 ಫೋರ್‌ ಮತ್ತು 6 ಸಿಕ್ಸರ್‌ಗಳೊಂದಿಗೆ 86 ರನ್‌ ಸಿಡಿಸಿದ್ದ ಸ್ಯಾಮ್ಸನ್‌ 86 ರನ್‌ ಗಳಿಸಿದ್ದರು. ಸಂಜು ಅವರ ಸ್ಫೋಟಕ ಇನ್ನಿಂಗ್ಸ್‌ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, 16ನೇ ಓವರ್‌ನ 4ನೇ ಎಸೆತದಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ ಅವರ ಎಸೆತವನ್ನು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿದರು. ಆದ್ರೆ ಬೌಂಡರಿ ಗೆರೆಯ ಬಳಿ ಫೀಲ್ಡರ್‌ ಶಾಯ್‌ ಹೋಪ್‌ (Shai Hope) ಕ್ಯಾಚ್ ತಗೆದುಕೊಂಡರು. ಆದರೆ, ಅವರ ಕಾಲು ಬೌಂಡರಿ ಗೆರೆಗೆ ತಾಕಿರುವ ಸಾಧ್ಯತೆಗಳೂ ಹೆಚ್ಚಾಗಿ ಕಂಡುಬಂದಂತೆ ಇತ್ತು. ಟಿವಿ ಅಂಪೈರ್‌ ಎರಡು ಮೂರು ಆಂಗಲ್‌ಗಳಲ್ಲಿ ಬೌಂಡರಿ ಗೆರೆಗೆ ಶೂಗಳು ಟಚ್‌ ಆಗಿದೆಯೇ ಎಂಬುದನ್ನು ಪರಿಶೀಲಿಸಿದರು. ಬಳಿಕ ಟಿವಿ ಅಂಪೈರ್‌ ಔಟ್ ತೀರ್ಪು ನೀಡಿದರು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

    ಗ್ರೌಂಡ್‌ನಲ್ಲೇ ವಾಗ್ವಾದಕ್ಕಿಳಿದ ಸಂಜು:
    ಔಟ್‌ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಸಮಾಧಾನಗೊಂಡ ಸಂಜು ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ಪೆವಿಲಿಯನ್‌ಗೆ ಮರಳಿದರು. ಸಂಜು ಸ್ಯಾಮ್ಸನ್‌ ನಿರ್ಗಮನದ ಬಳಿಕ ಆರ್‌ಆರ್‌ ತಂಡದ ಮುಖ್ಯ ಕೋಚ್‌ ಕುಮಾರ ಸಂಗಕ್ಕಾರ ಕೂಡ ಡಗೌಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು. ನಂತರ ಅಂಪೈರ್‌ ವಿರುದ್ಧ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡರು. 2024 ಟೂರ್ನಿಯಲ್ಲಿ ಅಂಪೈರ್‌ಗಳಿಂದ ಆಗುತ್ತಿರುವ ಸಾಲು ಸಾಲು ತಪ್ಪುಗಳನ್ನು ಎತ್ತಿ ತೋರಿಸಿದರು. ಅಂಪೈರ್‌ ಕೇವಲ ಒಂದು ಮೂಲೆಯ ಕ್ಯಾಮೆರಾ ವಿಡಿಯೋ ಮಾತ್ರವೇ ವೀಕ್ಷಿಸಿದ್ದು, ಮತ್ತೊಂದು ತುದಿಯ ಕ್ಯಾಮೆರಾದ ವಿಡಿಯೋ ನೋಡಿದ್ದರೆ ಕಾಲು ಗೆರೆಗೆ ತಾಗಿರುವುದು ಕಾಣಿಸುತ್ತಿತ್ತು ಎಂಬುದು ಅಭಿಮಾನಿಗಳ ವಾದವಾಗಿದೆ. ಸಂಜು ವಿಕೆಟ್‌ ಪತನದ ಬಳಿಕ ರನ್‌ ವೇಗ ಕುಂಟಿತಗೊಂಡು ರಾಜಸ್ಥಾನ ತಂಡ ಸೋಲಿಗೆ ತುತ್ತಾಯಿತು.

    ಬೌಂಡರಿ ಲೈನ್‌ಗೆ ತಾಕಿತ್ತು: ಸಿಧು
    ಈ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ನವಜ್ಯೋತ್‌ ಸಿಂಗ್‌ ಸಿಧು, ಸಂಜು ಸ್ಯಾಮ್ಸನ್‌ ಅವರ ಔಟ್‌ ನಿರ್ಧಾರ ಆಟದ ದಿಕ್ಕನ್ನೇ ಬದಲಿಸಿತು.‌ ಅಂಪೈರ್‌ ಲೈನ್‌ನ ಮತ್ತೊಂದು ಭಾಗವನ್ನೂ ಎರಡು ಬಾರಿ ನೋಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು: ಸಂಗಕ್ಕಾರ
    ಸಂಜು ಔಟ್‌ ಕುರಿತು ಪ್ರತಿಕ್ರಿಯೆ ನೀಡಿದ ಮೆಂಟರ್‌ ಕುಮಾರ ಸಂಗಕ್ಕಾರ, ಕೆಲವೊಂದು ಪಂದ್ಯಗಳಲ್ಲಿ ಅಂಪೈರ್‌ಗಳು ನೋಡುವ ದೃಷ್ಟಿಕೋನದ ಮೇಲೆ ತೀರ್ಪು ನಿರ್ಧಾರವಾಗುತ್ತವೆ. ಕೊನೆಯಲ್ಲಿ 3ನೇ ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    ಕೆಟ್ಟ ಅಂಪೈರಿಂಗ್: ಸಂಜು
    ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸಂಜು, ಗೆಲುವು ನಮ್ಮ ಕೈಲಿತ್ತು. ಓವರ್‌ಗೆ 11-12 ರನ್‌ಗಳ ಅಗತ್ಯವಿತ್ತಷ್ಟೆ. ಆದರೆ, ಐಪಿಎಲ್‌ ಪಂದ್ಯದಲ್ಲಿ ಈ ರೀತಿಯ ಸೋಲೆದುರಾಗುತ್ತವೆ. ಇಲ್ಲಿನ ಪಿಚ್‌ನಲ್ಲಿ ನಾವು 10 ರನ್‌ ಹೆಚ್ಚು ಬಿಟ್ಟುಕೊಟ್ಟೆವು. ಕೆಲ ಬೌಂಡರಿಗಳನ್ನು ತಡೆದಿದ್ದರೆ ಗುರಿ ಕಡಿಮೆ ಆಗಿರುತ್ತಿತ್ತು. ಇನ್ನು ಅಂಪೈರಿಂಗ್‌ ಕೂಡ ಕೆಟ್ಟದಾಗಿತ್ತು. ಸೋಲಿಗೆ ಕಾರಣಗಳನ್ನು ಹುಡುಕಿ ಅದನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಕಡೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

  • ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ಬ್ರಿಡ್ಜ್‌ಟೌನ್‌: ಟೆಸ್ಟ್‌ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಬಾಳೆಹಣ್ಣು ಸುಲಿದಂತೆ ವಿಂಡೀಸ್‌ (West Indies) ವಿರುದ್ಧ ಜಯ ಸಾಧಿಸಿದ್ದ ಟೀಂ ಇಂಡಿಯಾಕ್ಕೆ (Team India) 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಾಗಿದೆ. ಈ ಮೂಲಕ ಸತತ 3 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.

    ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ 36.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    ರೋಹಿತ್‌ ಶರ್ಮಾ (Rohit Sharm) ಹಾಗೂ ವಿರಾಟ್‌ ಕೊಹ್ಲಿ 2ನೇ ಪಂದ್ಯದಲ್ಲಿ ಹೊರಗುಳಿದಿದ್ದರಿಂದ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಜೋಡಿ 16.5 ಓವರ್‌ಗಳಲ್ಲಿ 90 ರನ್‌ಗಳ ಜೊತೆಯಾಟ ನೀಡಿತು. ನಂತರ ಕ್ರೀಸ್‌ಗಿಳಿದವರಲ್ಲಿ ಯಾರೊಬ್ಬರು ಸ್ಥಿರವಾಗಿ ಉಳಿಯದ ಕಾರಣ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾಯಿತು.

    50 ಓವರ್ ಪೂರ್ಣ ಆಡಲಿಲ್ಲ:
    ಮೊದಲ ಪಂದ್ಯದಲ್ಲೂ ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಇಲ್ಲದೇ ಟೀಂ ಇಂಡಿಯಾ 115 ರನ್​ಗಳ ಗುರಿ ತಲುಪಲು ಸಾಕಷ್ಟು ಕಷ್ಟ ಪಡಬೇಕಾಯಿತು. ಮೊದಲ ಪಂದ್ಯದಲ್ಲಿ‌ ರೋಹಿತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದಿದ್ದು ವಿಶೇಷವಾಗಿತ್ತು. 2ನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಕಳಪೆ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆದ್ರೆ ಆರಂಭಿಕ ಇಶಾನ್‌ ಕಿಶನ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

    ಟೀಂ ಇಂಡಿಯಾ ಪರ ಇಶಾನ್‌ ಕಿಶನ್‌ 55 ರನ್‌ (55 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಶುಭಮನ್‌ ಗಿಲ್‌ 34 ರನ್‌ (49 ಎಸೆತ, 5 ಬೌಂಡರಿ) ಸೂರ್ಯಕುಮಾರ್‌ ಯಾದವ್‌ 24 ರನ್‌ ಗಳಿಸಿದರು. ಇನ್ನೂ ವಿಂಡೀಸ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶಾಯ್‌ ಹೋಪ್‌ (Shai Hope) ಅಜೇಯ 63 ರನ್‌ (80 ಎಸೆತ, 2 ಬೌಂಡರಿ, 2 ಸಿಕ್ಸ್‌), ಕೈಲ್‌ ಮೇಯರ್ಸ್‌ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಈ ಪಂದ್ಯದಲ್ಲಿ ಎರಡೂ ತಂಡಗಳಲ್ಲಿಯೂ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸಿದ್ದರು ವಿಂಡೀಸ್‌ ಪರ ಗುಡಾಕೇಶ್ ಮೋತಿ, ರೊಮಾರಿಯೋ ಶೆಫರ್ಡ್ ತಲಾ ಮೂರು ವಿಕೆಟ್‌ ಪಡೆದರೆ, ಟೀಂ ಇಂಡಿಯಾ ಪರ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ 3 ವಿಕೆಟ್‌ ಪಡೆದು ಮಿಂಚಿದರು.

    ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನಿಂಗ್ಸ್‌ ಬಳಿಕ 2ನೇ ಇನ್ನಿಂಗ್ಸ್​ಗೆ ವಿಕೆಟ್‌ ಉತ್ತಮವಾಗಿತ್ತು. ಈ ಸೋಲಿನಿಂದ ನಿರಾಸೆಯಾಗಿದೆ. ಆದ್ರೆ ಅನೇಕ ವಿಷಯಗಳನ್ನ ಕಲಿತಿದ್ದೇವೆ. ವಿಶ್ವಕಪ್‌ಗೆ ಸಿದ್ಧವಾಗಲು ನಾನು ಇನ್ನಷ್ಟು ಹೆಚ್ಚು ಓವರ್‌ಗಳನ್ನ ಬೌಲ್ ಮಾಡಬೇಕಾಗಿದೆ. ವಿಶ್ವಕಪ್‌ ವೇಳೆಗೆ ಎಲ್ಲವೂ ಸರಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಟ್ಟ ಪೋರಿಯ ಫುಟ್‍ವರ್ಕ್‍ಗೆ ಅಂತಾರಾಷ್ಟ್ರೀಯ ಆಟಗಾರರು ಫಿದಾ

    ಪುಟ್ಟ ಪೋರಿಯ ಫುಟ್‍ವರ್ಕ್‍ಗೆ ಅಂತಾರಾಷ್ಟ್ರೀಯ ಆಟಗಾರರು ಫಿದಾ

    ನವದೆಹಲಿ: 7 ವರ್ಷದ ಪುಟ್ಟ ಪೋರಿಯೊಬ್ಬಳು ಸೂಪರ್ ಆಗಿ ಬ್ಯಾಟಿಂಗ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    7 ವರ್ಷದ ಪರಿ ಶರ್ಮಾ ಬ್ಯಾಟಿಂಗ್ ಸ್ಕಿಲ್‍ಗೆ ಭಾರತದ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಫಿದಾ ಆಗಿದ್ದಾರೆ. ಪರಿ ಶರ್ಮಾರ ಬ್ಯಾಟಿಂಗ್ ನೋಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ವೆಸ್ಟ್ ಇಂಡೀಸ್‍ನ ಆಟಗಾರ ಶೈ ಹೋಪ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೈಕೆಲ್ ವಾನ್ ಪರಿ ಶರ್ಮಾರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ. 7 ವರ್ಷದ ಪರಿ ಶರ್ಮಾ ಬ್ಯಾಟಿಂಗ್ ನೋಡಿ. ಜೊತೆಗೆ ಅವಳ ಲೆಗ್ ಮೂಮೆಂಟ್ ನೋಡಿ. ಈ ರೀತಿಯ ಕೌಶಲ್ಯವನ್ನು ರೂಡಿಸಿಕೊಳ್ಳುವುದು ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಶೈ ಹೋಪ್ ಅವರು ಕೂಡ ನಾನು ದೊಡ್ಡವನಾದಾಗ ಪರಿ ಶರ್ಮಾಳಂತೆ ಇರಬೇಕು ಎಂದು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಟ್ವಿಟ್ಟರ್ ಬಳಕೆದಾರ ರೈಸ್ ಮೋರ್ಗಾಸ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ ಭಾರತದ ಮಹಿಳಾ ಆಲ್‍ರೌಂಡರ್ ಶಿಖಾ ಪಾಂಡೆಯವರಿಗೆ ಟ್ಯಾಗ್ ಮಾಡಿದ್ದು, ನೀವು ಈ ಆಟಗಾರರನ್ನು ಕಂಡು ಹಿಡಿಯಬೇಕು ಎಂದು ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿಖಾ ಪಾಂಡೆ ಅವರಿಂದ ತರಬೇತಿಯನ್ನು ತೆಗೆದುಕೊಳ್ಳಿ ಬಹಳ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.

    56 ಸೆಕೆಂಡ್ ಇರುವ ಪರಿ ಶರ್ಮಾ ವಿಡಿಯೋವನ್ನು ಮೊದಲಿಗೆ ಇಎಸ್‍ಪಿಎನ್ ಕ್ರಿಕ್‍ಇನ್ಫೋ ಅವರು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಪರಿ ಡಿಫೆನ್ಸ್, ಕವರ್ ಶಾಟ್, ಪುಲ್ ಶಾಟ್ ನಂತಹ ಕಷ್ಟಕರವಾದ ಹೊಡೆತಗಳನ್ನು ಸರಿಯಾದ ಫುಟ್‍ವರ್ಕ್ ಮತ್ತು ಟೈಮಿಂಗ್ ಸಮೇತ ಹೊಡೆದ್ದಾಳೆ. ಪರಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ.

  • ಕ್ಯಾಚ್ ಡ್ರಾಪ್ – ಹೆಟ್ಮೆಯರ್, ಹೋಪ್ ದ್ವಿಶತಕದ ಜೊತೆಯಾಟಕ್ಕೆ ಸಿಕ್ತು 8 ವಿಕೆಟ್‍ಗಳ ಭರ್ಜರಿ ‌ಜಯ

    ಕ್ಯಾಚ್ ಡ್ರಾಪ್ – ಹೆಟ್ಮೆಯರ್, ಹೋಪ್ ದ್ವಿಶತಕದ ಜೊತೆಯಾಟಕ್ಕೆ ಸಿಕ್ತು 8 ವಿಕೆಟ್‍ಗಳ ಭರ್ಜರಿ ‌ಜಯ

    ಚೆನ್ನೈ: ವೆಸ್ಟ್ ಇಂಡೀಸ್ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಅಬ್ಬರದ ದ್ವಿಶತಕದ ಜೊತೆಯಾಟದಿಂದ ಭಾರತದ ವಿರುದ್ಧ 8 ವಿಕೆಟ್‍ನಿಂದ ಭರ್ಜರಿ ಗೆಲುವು ಸಾಧಿಸಿದೆ.

    ಚೆನ್ನೈನ ಚಿಪಾಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಏಕದಿನ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್‍ಗಳ ಗುರಿಯನ್ನು ವೆಸ್ಟ್ ಇಂಡೀಸ್ 13 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ. ವೆಸ್ಟ್ ಇಂಡೀಸ್ ಹೆಟ್ಮೆಯರ್ 139 ರನ್, ಶಾಯ್ ಹೋಪ್ 102 ರನ್, ನಿಕೋಲಸ್ ಪೂರನ್ 29 ರನ್‍ಗಳಿಂದ 47.5 ಓವರ್ ನಲ್ಲಿ 291 ಗಳಿಸಿ, ಭರ್ಜರಿ ಗೆಲುವು ಸಾಧಿಸಿದೆ.

    ಭಾರತದ ನೀಡಿದ್ದ 288 ರನ್‍ಗಳ ಗುರಿಯನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ಯಾವುದೇ ರನ್ ಗಳಿಸಲಿಲ್ಲ. ಅಷ್ಟೇ ಅಲ್ಲದೆ ಮೂರನೇ ಓವರ್ ನಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಹೀಗಾಗಿ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ ವಿಂಡೀಸ್ ತಂಡ ಒಂದು ವಿಕೆಟ್ ನಷ್ಟಕ್ಕೆ 36 ಗಳಿಸಲು ಶಕ್ತವಾಗಿತ್ತು. ಆದರೆ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಜೋಡಿಯು ವಿಕೆಟ್ ಕಾಯ್ದುಕೊಂಡು ನಿಧಾನಗತಿ ಬ್ಯಾಟಿಂಗ್ ಮುಂದುವರಿಸಿತು.

    ಇನ್ನಿಂಗ್ಸ್ ನ 20ನೇ ಓವರ್ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಹೆಟ್ಮೆಯರ್ ತಮ್ಮ ವೃತ್ತಿಜೀವನದ ಐದನೇ ಶತಕವನ್ನು ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಪರ ವೇಗವಾಗಿ 5 ಶತಕಗಳ ಗಳಿಸಿದ್ದ ಶಾಯ್ ಹೋಪ್ ದಾಖಲೆಯನ್ನು ಹೆಟ್ಮೆಯರ್ ಮುರಿದರು. ಹೆಟ್ಮೆಯರ್ 38 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹೋಪ್ 46 ಇನ್ನಿಂಗ್ಸ್ ಗಳಲ್ಲಿ ಐದು ಶತಕಗಳನ್ನು ಗಳಿಸಿದ್ದರು.

    ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 218 ರನ್‍ಗಳ ಬೃಹತ್ ಮೊತ್ತದ ಜೊತೆಯಾಟ ಕಟ್ಟಿಕೊಟ್ಟಿತು. ಇನ್ನಿಂಗ್ಸ್ ನ 39ನೇ ಓವರ್ ನಲ್ಲಿ ಹೆಟ್ಮೆಯರ್ ಮೊಹಮ್ಮದ್ ಶಮಿ ಬೌಲಿಂಗ್ ವೇಳೆ ಶ್ರೇಯಸ್ ಅಯ್ಯರ್ ಗೆ ಕ್ಯಾಚ್ ನೀಡಿದರು. 106 ಎಸೆತಗಳಲ್ಲಿ ಹೆಟ್ಮೆಯರ್ (11 ಬೌಂಡರಿ, 7 ಸಿಕ್ಸರ್) 139 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ವಿಕೆಟ್ ಒಪ್ಪಿಸಿದರು.

    ಶಮಿ ದಾಖಲೆ:
    2019ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅಗ್ರಸ್ಥಾನದಲ್ಲಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆಯುವ ಮೂಲಕ ಟ್ರೆಂಟ್ ಬೌಲ್ಟ್ ಅವರನ್ನು ಸರಿಗಟ್ಟಿದ್ದಾರೆ. ಈ ಇಬ್ಬರು ವೇಗಿಗಳು ತಲಾ 38 ವಿಕೆಟ್ ಪಡೆದಿದ್ದಾರೆ. ಆದರೆ ಮೊಹಮ್ಮದ್ ಶಮಿ 13 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ಟ್ರೆಂಟ್ ಬೌಲ್ಟ್ 20 ಇನ್ನಿಂಗ್ಸ್ ಗಳಲ್ಲಿ 28 ವಿಕೆಟ್ ಕಿತ್ತಿದ್ದಾರೆ.

    ಹೆಟ್ಮೆಯರ್ ವಿಕೆಟ್ ಬಳಿಕ ಮೈದಾನಕ್ಕಿಳಿದ ನಿಕೋಲಸ್ ಪೂರನ್ ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್‍ಗೆ ಸಾಥ್ ನೀಡಿದರು. 151 ಎಸೆತಗಳಲ್ಲಿ ಶಾಯ್ ಹೋಪ್ (7 ಬೌಂಡರಿ, ಸಿಕ್ಸ್) 102 ರನ್ ಹಾಗೂ 23 ಎಸೆತಗಳಲ್ಲಿ ನಿಕೋಲಸ್ ಪೂರನ್ 4 ಬೌಂಡರಿ ಸೇರಿ 29ರನ್ ಸಹಾಯದಿಂದ ವೆಸ್ಟ್ ಇಂಡೀಸ್ 47.5 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 291 ರನ್ ಸಿಡಿಸಿ ಗೆಲುವು ಸಾಧಿಸಿತು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ 70 ರನ್, ರಿಷಭ್ ಪಂತ್ 71, ಕೇದಾರ್ ಜಾಧವ್ 40 ರನ್‍ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತ್ತು.

    ಪಂತ್-ಅಯ್ಯರ್ ಆಸರೆ:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಅರ್ಧಶತಕ (70 ಎಸೆತ) ಪೂರೈಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ 5ನೇ ಅರ್ಧಶತಕ ಇದಾಗಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಕೂಡ ಅರ್ಧಶತಕ (49 ಎಸೆತ) ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಂತ್ ಅವರ ಚೊಚ್ಚಲ ಅರ್ಧಶತಕವಾಗಿದೆ.

    ಭಾರತದ ಇನ್ನಿಂಗ್ಸ್ ನ 36ನೇ ಓವರ್ 3ನೇ ಎಸೆತದಲ್ಲಿ ಪೋಲಾರ್ಡ್ ಬೌಲಿಂಗ್ ವೇಳೆ ಪಂತ್ ನೀಡಿದ್ದ ಕ್ಯಾಚ್ ಅನ್ನು ಶೆಲ್ಡನ್ ಕಾಟ್ರೆಲ್ ಕೈಚೆಲ್ಲಿದರು. ಜೀವದಾನ ಪಡೆದ ಪಂತ್ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್ ನಷ್ಟಕ್ಕೆ 114 ರನ್‍ಗಳ ಜೊತೆಯಾಟ ಕಟ್ಟಿಕೊಟ್ಟು ತಂಡದ ಮೊತ್ತವನ್ನು ಏರಿಸಿತು. ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ ವಿಕೆಟ್ ನೀಡಿದರು. 88 ಎಸೆತಗಳಲ್ಲಿ ಶ್ರೇಯಸ್ (5 ಬೌಂಡರಿ, ಸಿಕ್ಸ್) 70 ರನ್ ಗಳಿಸಿ ಪೆವಿಲಿಯನ್‍ಗೆ ತರೆಳಿದ್ದರು.

    ಶ್ರೇಯಸ್ ಅಯ್ಯರ್ ಬೆನ್ನಲ್ಲೇ 69 ಎಸೆತಗಳಲ್ಲಿ (7 ಬೌಂಡರಿ, ಸಿಕ್ಸ್) 71 ರನ್ ಗಳಿಸಿದ್ದ ಪಂತ್ ಕೂಡ ವಿಕೆಟ್ ಒಪ್ಪಿಸಿದರು. 40ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ 210 ರನ್ ಪೇರಿಸಿತು. ಬಳಿಕ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ 6ನೇ ವಿಕೆಟ್ ನಷ್ಟಕ್ಕೆ 59 ರನ್ ಗಳ ಜೊತೆಯಾಟ ಕಟ್ಟಿಕೊಟ್ಟರು. ಇನ್ನಿಂಗ್ಸ್ ನ 47ನೇ ಓವರ್ ನ 3ನೇ ಎಸೆತದಲ್ಲಿ ಕೇದಾರ್ ಜಾಧವ್ (40 ರನ್) ಹಾಗೂ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜಾ (21 ರನ್) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ ಶಿವಂ ದುಬೆ (9 ರನ್) ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

    9 ಸರಣಿಯಲ್ಲಿ ಭಾರತಕ್ಕೆ ಜಯ:
    ಕಳೆದ 13 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 9 ಸರಣಿಗಳು ನಡೆದಿವೆ. ಎಲ್ಲ ಸರಣಿಯಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2006ರಿಂದ ಉಭಯ ದೇಶಗಳ ನಡುವೆ 39 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 23 ಪಂದ್ಯ ಗೆದ್ದರೆ, 10 ಪಂದ್ಯದಲ್ಲಿ ಸೋಲು ಕಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಮಣಿಸಿತ್ತು.