Tag: Shahid Afridi

  • ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    – ಹಿಂದೂ ಆಟಗಾರನಾಗಿ ಪಾಕ್ ತಂಡದಲ್ಲಿ ಬಚಾವ್ ಆಗೋದು ಅತ್ಯಂತ ಕಷ್ಟ

    ಇಸ್ಲಾಮಾಬಾದ್: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಶಹೀದ್ ಅಫ್ರಿದಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್ ಕರೇನಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ 39 ವರ್ಷದ ದಾನಿಶ್, “ಧರ್ಮದ ಹೊರತಾಗಿ ಅಫ್ರಿದಿ ಅವರ ತಾರಮ್ಯದ ಹಿಂದಿನ ಕಾರಣ ತಿಳಿಯಲು ಕಷ್ಟವಾಗುತ್ತಿತ್ತು. ದೇಶಿಯ ಕ್ರಿಕೆಟ್ ಅಥವಾ ಏಕದಿನ ಕ್ರಿಕೆಟ್ ಆಡುವಾಗ ಅಫ್ರಿದಿ ಯಾವಾಗಲೂ ನನ್ನ ವಿರುದ್ಧವೇ ಇರುತ್ತಿದ್ದರು. ಒಬ್ಬ ವ್ಯಕ್ತಿ ನಿಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದರೆ ಅದು ಧರ್ಮವನ್ನು ಬಿಟ್ಟು ಬೇರೆ ಏನೂ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    “ಹಿಂದೂ ಆಟಗಾರನಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬಚಾವ್ ಆಗುವುದು ಅತ್ಯಂತ ಕಷ್ಟ. ಹಿಂದೂ ಧರ್ಮದವರಾಗಿದ್ದರಿಂದ ನನ್ನನ್ನು ತಂಡದಲ್ಲಿ ಅತ್ಯಂತ ಹೀನಾಯವಾಗಿ ನೋಡಲಾಗಿತ್ತು. ನಾನು ಹಿಂದೂ ಧರ್ಮದವನಾಗಿದ್ದರಿಂದ ಅಫ್ರಿದಿ ಯಾವಾಗಲೂ ನನ್ನ ವಿರುದ್ಧ ಕಿಡಿಕಾರುತ್ತಿದ್ದ. ಅಂತಹ ಸನ್ನವೇಶದಲ್ಲಿ ನನ್ನ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು” ಎಂದು ದಾನಿಶ್ ಕನೇರಿಯಾ ತಿಳಿಸಿದರು.

    ಅಫ್ರಿದಿಯಿಂದಾಗಿಯೇ ನಾನು ವೃತ್ತಿ ಜೀವನದಲ್ಲಿ ಕೇವಲ 18 ಏಕದಿನ ಪಂದ್ಯಗಳನ್ನು ಆಡಿದೆ. ಇಲ್ಲವಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೆ. ಏಕದಿನ ಕ್ರಿಕೆಟ್‍ನಲ್ಲಿ ಶಾಹೀದ್ ಅಫ್ರಿದಿ ಬೇರೆ ಸ್ಪಿನ್ನರ್‍ಗಳಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ನನಗೆ ನೀಡಲಿಲ್ಲ. ಆದರೂ ಪಾಕಿಸ್ತಾನ 10 ವರ್ಷಗಳ ಕಾಲ ಆಡಿದ್ದೇನೆಂಬ ಸಂತೋಷ ಹಾಗೂ ಗೌರವ ಇದೆ” ಎಂದು ನೆನೆದರು.

    “ಆಡುವ ಇಲೆವೆನ್‍ನಲ್ಲಿ ಇಬ್ಬರು ಸ್ಪಿನ್ನರ್ ಗಳು ಇರುತ್ತಾರೆ. ಆದರೆ ನನ್ನ ಫಿಲ್ಡಿಂಗ್ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿತ್ತು. ಆಗ ತಂಡದಲ್ಲಿ ಯಾರು ಹೇಳಿಕೊಳ್ಳುವ ಮಟ್ಟಿಗೆ ಉತ್ತಮ ಫಿಲ್ಡರ್ ಗಳಾಗಿರಲಿಲ್ಲ. ಅಷ್ಟೇ ಅಲ್ಲದೆ ಆಗ ಪಾಕ್ ತಂಡ ಅಷ್ಟೇನು ಹೆಸರು ಮಾಡಿರಲಿಲ್ಲ. ಮೋಯಿನ್ ಖಾನ್, ರಶೀದ್ ಲತೀಫ್, ಇಂಜಾಮಾಮ್ ಉಲ್ ಹಕ್ ಹಾಗೂ ಯೂನಿಸ್ ಖಾನ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ಅಫ್ರಿದಿ ನಾಯಕತ್ವದಲ್ಲಿ ಅತ್ಯಂತ ಕಡಿಮೆ ಪಂದ್ಯಗಳನ್ನಾಡಿದ್ದೇನೆ. ಇಂಜಾಮಾಮ್ ಹಾಗೂ ಯೂನಿಸ್ ಭಾಯ್ ನನಗೆ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡಿದ್ದರು” ಎಂದು ತಿಳಿಸಿದರು.

  • ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ಮುಂಬೈ: ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿರಿಕಾರಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹೇಳಿಕೆಗಳಿಗೆ ಶಿಖರ್ ಧವನ್ ಟಾಂಗ್ ನೀಡಿದ್ದು, ಎಂದಿಗು ಕಾಶ್ಮೀರ ನಮ್ಮದೇ ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಬಳಿಕ ಅಫ್ರಿದಿ ವಿರುದ್ಧ ಧವನ್ ಕಿಡಿಕಾರಿದ್ದಾರೆ.

    ಕೊರೊನಾದಿಂದ ಪಾಕಿಸ್ತಾನದಲ್ಲಿ ಸಮಸ್ಯೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಅಫ್ರಿದಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅಫ್ರಿದಿ, ಪಾಕಿಸ್ತಾನದ ಸೈನದ ಬಲದಷ್ಟು ಸೈನಿಕರನ್ನು ಪ್ರಧಾನಿ ಮೋದಿ ಕಾಶ್ಮೀರದಲ್ಲಿ ನಿಯೋಜಿಸಿದ್ದಾರೆ. ಆತನ ಮನಸ್ಸಿನಲ್ಲಿ ಕೊರೊನಾಗೂ ಹೆಚ್ಚಿನ ರೋಗ ಇದೇ ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ ಭಾರತದಲ್ಲಿ ಅಫ್ರಿದಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

    ಇತ್ತ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಧವನ್, ಇಡೀ ಜಗತ್ತು ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕಾಶ್ಮೀರ ಸಮಸ್ಯೆಯನ್ನ ಎಳೆದು ತಂದಿರುವುದಕ್ಕೆ ನಾಚಿಕೆಯಾಗಬೇಕು. ಕಾಶ್ಮೀರ ಒಂದು ಕಾಲದಲ್ಲಿ ನಮ್ಮದಾಗಿತ್ತು. ಇಂದು ಕೂಡ ನಮ್ಮದೇ. ಮುಂದಿನ ದಿನಗಳಲ್ಲೂ ನಮ್ಮದೇ ಆಗಿರುತ್ತದೆ. 22 ಕೋಟಿ ಸೈನಿಕರನ್ನು ಕರೆತಂದರೂ ನಮ್ಮ ಒಬ್ಬ ಸೈನಿಕ ಲಕ್ಷ ಮಂದಿಗೆ ಸಮಾನ. ಉಳಿದ ಲೆಕ್ಕವನ್ನು ನೀವೇ ಮಾಡಿಕೊಳ್ಳಿ ಎಂದು ಧವನ್ ಟ್ವೀಟ್‍ನಲ್ಲಿ ಅಫ್ರಿದಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟ ಗಡಿಗಳು ಮತ್ತು ಧರ್ಮ, ಜಾತಿಗಳನ್ನು ಮೀರಿ ಮಾಡಬೇಕು ಎಂದು ನಮ್ಮ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ನಾವು ಮಾಡುತ್ತಿರುವ ಮನವಿ ಬಗ್ಗೆ ತುಂಬ ಸ್ಪಷ್ಟತೆ ಇತ್ತು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಸಹಾಯ ಆಗಲಿ ಎಂದು ನಾವು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಆತ ನಮ್ಮ ದೇಶದ ವಿರುದ್ಧವೇ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಆತ ನಮ್ಮ ಸಹಾಯ ಕೇಳಿದ ತಕ್ಷಣ ಯಾವುದನ್ನು ಆಲೋಚಿಸದೆ ಸಹಾಯ ಮಾಡಿದ್ದೆವು. ಆದರೆ ಈಗ ಹೇಳುತ್ತಿದ್ದೇವೆ. ಆತನೊಂದಿಗೆ ಯಾವುದೇ ಬಾಂಧವ್ಯವಿಲ್ಲ. ನಮ್ಮ ದೇಶದ ವಿರುದ್ಧ ಮಾತನಾಡುವ ಹಕ್ಕು ಆತನಿಗೆ ಇಲ್ಲ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇತ್ತ ಅಫ್ರಿದಿ ಹೇಳಿಕೆ ವೈರಲ್ ಆಗುತ್ತಿದಂತೆ ಆತನಿಗೆ ಮೊದಲು ಸಹಾಯ ಮಾಡುವಂತೆ ಮನವಿ ಮಾಡಿದ್ದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

  • ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ನವದೆಹಲಿ: ಇನ್ಮೇಲಿಂದ ಶಾಹಿದ್ ಅಫ್ರಿದಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನು ಮಿತಿಗಳನ್ನು ದಾಟಿದ್ದಾನೆ ಎಂದು ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಗರಂ ಆಗಿದ್ದಾರೆ.

    ಸದಾ ಕಾಶ್ಮೀರಾ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಅಫ್ರಿದಿ ಆಗಾಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಈಗ ಮತ್ತೆ ಕಾಶ್ಮೀರ ವಿಚಾರವಾಗಿ ಮಾತನಾಡಿರುವ ಅಫ್ರಿದಿ, ಭಾರತದ ಪ್ರಧಾನಿ ಮೋದಿ ಅವರನ್ನು ಬಗ್ಗೆಯೂ ತೆಗಳಿ ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಇದಕ್ಕೂ ಮುನ್ನ ಅಫ್ರಿದಿ ಮತ್ತು ಹರ್ಭಜನ್ ಸಿಂಗ್ ಅವರು ಉತ್ತಮ ಸ್ನೇಹಿತರಾಗಿದ್ದರು. ಜೊತೆಗೆ ಪಾಕಿಸ್ತಾನದಲ್ಲಿ ಇರುವ ಶಾಹಿದ್ ಅಫ್ರಿದಿ ಫೌಂಡೇಶನ್ ಗೆ ಸಹಾಯ ಮಾಡುವಂತೆ ಸ್ವತಃ ಹರ್ಭಜನ್ ಸಿಂಗ್ ಅವರೇ ಕೇಳಿಕೊಂಡಿದ್ದರು. ಆದರೆ ಕಾಶ್ಮೀರದ ಬಗ್ಗೆ ಅಫ್ರಿದಿ ಕೆಟ್ಟ ಹೇಳಿಕೆ ನೀಡಿದ ನಂತರ ಭಜ್ಜಿ ಅಫ್ರಿದಿ ಮೇಲೆ ಗರಂ ಆಗಿದ್ದಾರೆ. ಅವನು ಮಿತಿ ಮೀರಿದ್ದಾನೆ. ಇನ್ಮೇಮಿಂದ ಅವನಿಗೂ ನನಗೂ ಸಂಬಂಧವಿಲ್ಲ ಎಂದು ಭಜ್ಜಿ ಹೇಳಿದ್ದಾರೆ.

    ಈ ವಿಚಾರವಾಗಿ ಸ್ಪೋರ್ಟ್ಸ್ ಚಾನೆಲ್‍ವೊಂದರಲ್ಲಿ ಮಾತನಾಡಿರುವ ಭಜ್ಜಿ, ಶಾಹಿದ್ ಅಫ್ರಿದಿ ನಮ್ಮ ದೇಶದ ಬಗ್ಗೆ ಮತ್ತು ನಮ್ಮ ಪ್ರಧಾನಿ ಮೋದಿ ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಮಾತಿನ ಮೇಲೆ ನಿಗಾ ಇರಬೇಕು. ಅಫ್ರಿದಿಗೆ ನಮ್ಮ ದೇಶದ ಬಗ್ಗೆ ಮಾತನಾಡಲು ಯಾವುದೇ ಹಕ್ಕು ಇಲ್ಲ. ಜೊತೆಗೆ ನಾವು ಕೂಡ ಅಫ್ರಿದಿಯೊಂದಿಗೆ ಸೇರಿ ಏನೂ ಮಾಡಬೇಕಿಲ್ಲ ಎಂದು ಭಜ್ಜಿ ಕಿಡಿಕಾರಿದ್ದಾರೆ.

    ಈ ಹಿಂದೆ ಯುವರಾಜ್ ಸಿಂಗ್ ಮತ್ತು ಭಜ್ಜಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಫೌಂಡೇಶನ್‍ಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ನಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿ ಸ್ಪಷ್ಟನೆಯನ್ನು ನೀಡಿದ್ದರು. ಈ ವಿಚಾರದ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪ್ರಮಾಣಿಕವಾಗಿ ಹೇಳಬೇಕು ಎಂದರೆ ಆತ ನಮಗೆ ಅವನ ಚಾರಿಟಿಗಾಗಿ ಮನವಿ ಮಾಡಲು ಹೇಳಿದ್ದ. ಒಳ್ಳೆಯ ವಿಚಾರ ಎಂದು ನಾವು ಮನವಿ ಮಾಡಿದೆವು ಅಷ್ಟೇ ಎಂದು ತಿಳಿಸಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟ ಗಡಿಗಳು ಮತ್ತು ಧರ್ಮ, ಜಾತಿಗಳನ್ನು ಮೀರಿ ಮಾಡಬೇಕು ಎಂದು ನಮ್ಮ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ನಾವು ಮಾಡುತ್ತಿರುವ ಮನವಿ ಬಗ್ಗೆ ತುಂಬ ಸ್ಪಷ್ಟತೆ ಇತ್ತು. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಸಹಾಯ ಆಗಲಿ ಎಂದು ನಾವು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಆತ ನಮ್ಮ ದೇಶದ ವಿರುದ್ಧವೇ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.

    ನಾನು ಈ ದೇಶದಲ್ಲಿ ಹುಟ್ಟಿದ್ದೇನೆ ಈ ದೇಶಕ್ಕಾಗಿ ಪ್ರಾಣ ನೀಡುತ್ತೇನೆ. 20 ವರ್ಷ ದೇಶದ ಪರವಾಗಿ ಆಡಿ ಹಲವಾರು ಪಂದ್ಯಗಳನ್ನು ಗೆದ್ದಿದ್ದೇವೆ. ನಾನು ದೇಶದ ವಿರುದ್ಧವಾಗಿ ಏನಾದರೂ ಮಾಡಿದ್ದೇನೆ ಎಂದು ಯಾರೂ ಹೇಳುವುದಿಲ್ಲ. ಇಂದಿಲ್ಲ ನಾಳೆ ನನ್ನ ದೇಶಕ್ಕೆ ಎಲ್ಲಿಯಾದರೂ ನನ್ನ ಅವಶ್ಯಕತೆ ಇದ್ದರೆ ಅದೂ ಗಡಿಯಲ್ಲಿ ಆದರೂ ಸರಿ ನಾನು ಹೋಗುತ್ತೇನೆ. ನನ್ನ ದೇಶಕ್ಕಾಗಿ ಗನ್ ಹಿಡಿದು ಹೋರಾಟ ನಡೆಸುತ್ತೇನೆ ಎಂದು ಭಜ್ಜಿ ಹೇಳಿದ್ದಾರೆ.

    ಅಫ್ರಿದಿ ಟ್ವೀಟ್
    ಕಾಶ್ಮೀರಿಗಳ ಸಂಕಟವನ್ನು ಅನುಭವಿಸಲು ಧಾರ್ಮಿಕ ನಂಬಿಕೆಯನ್ನು ತೆಗೆದುಕೊಳ್ಳಬೇಡಿ. ಅದರ ಬದಲು ಸೂಕ್ತವಾದ ಸ್ಥಳದಲ್ಲಿ ಒಳ್ಳೆಯ ಮನಸ್ಸು ಇರಬೇಕು. ಕಾಶ್ಮೀರವನ್ನು ಉಳಿಸಿ ಎಂದು ಬರೆದು ಅಫ್ರಿದಿ ಶುಕ್ರವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಂತರ ಟ್ವೀಟ್ ಮಾಡಿದ್ದ ಗೌತಮ್ ಗಂಭೀರ್ ಅಫ್ರಿದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  • 15 ಲಕ್ಷಕ್ಕೆ ಬಾಂಗ್ಲಾ ಕ್ರಿಕೆಟರ್ ಬ್ಯಾಟ್ ಖರೀದಿಸಿದ ಅಫ್ರಿದಿ

    15 ಲಕ್ಷಕ್ಕೆ ಬಾಂಗ್ಲಾ ಕ್ರಿಕೆಟರ್ ಬ್ಯಾಟ್ ಖರೀದಿಸಿದ ಅಫ್ರಿದಿ

    ಇಸ್ಲಾಮಾಬಾದ್: ಬಾಂಗ್ಲಾದೇಶ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹರಾಜಿಗಿಟ್ಟಿದ್ದ ಬ್ಯಾಟನ್ನು ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ 20,000 ಡಾಲರ್ (15,17,540 ರೂ.)ಗೆ ಖರೀದಿಸಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ಬಾಂಗ್ಲಾದೇಶ ಜನರನ್ನು ಕೂಡ ಕಂಗೆಡಿಸಿದೆ. ದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ಪರಿಹಾರಕ್ಕಾಗಿ ಮುಷ್ಫಿಕರ್ ತಮ್ಮ ಫೇವರಿಟ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಇದನ್ನೂ ಓದಿ: ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಮುಷ್ಫಿಕರ್ ರಹೀಮ್ 2013ರಲ್ಲಿ ಶ್ರೀಲಂಕಾ ವಿರುದ್ಧ ದ್ವಿಶತಕ ಸಿಡಿಸಿದ್ದಾಗ ಬಳಸಿದ್ದ ಬ್ಯಾಟನ್ನು ಕಳೆದ ತಿಂಗಳು ಹರಾಜಿಗಿಟ್ಟಿದ್ದರು. ಇದರಿಂದ ಬಂದ ಹಣವನ್ನು ಬಾಂಗ್ಲಾದೇಶದಲ್ಲಿ ಕೊರೊನಾ ವಿರುದ್ಧದ ಪರಿಹಾರಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ಸದ್ಯ ಬ್ಯಾಟನ್ನು ಅಫ್ರಿದಿ ಖರೀದಿಸಿದ್ದಾರೆ. ಈ ವಿಚಾರವನ್ನು ಮುಷ್ಫಿಕರ್ ರಹೀಮ್ ಇಎಸ್‍ಪಿಎನ್ ಕ್ರಿಕ್ ಇನ್ಫೋ ಜೊತೆ ಹಂಚಿಕೊಂಡಿದ್ದಾರೆ.

    “ನಾನು ಹರಾಜಿಗಿಟ್ಟಿದ್ದ ಕ್ರಿಕೆಟ್ ಬಾಟನ್ನು ಪಾಕಿಸ್ತಾನದ ಆಲ್‍ರೌಡರ್ ಶಾಹಿದ್ ಅಫ್ರಿದಿ ತಮ್ಮ ಸಂಸ್ಥೆಯ ಪರವಾಗಿ ಖರೀದಿಸಿದ್ದಾರೆ. ಈ ಮೂಲಕ ಉತ್ತಮ ಕಾರ್ಯಕ್ಕೆ ನೆರವಾದ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ” ಎಂದು ರಹೀಮ್ ಹೇಳಿದ್ದಾರೆ.

    “ಕೆಲ ಮೋಸಗಾರ ಬಿಡ್ಡರ್ ಗಳಿಂದ ಹರಾಜನ್ನು ರದ್ದುಗೊಳಿಸುವುದಕ್ಕೆ ಮುಂದಾಗಿದ್ದೆವು. ಆದರೆ ಅನಿರೀಕ್ಷಿತವಾಗಿ ಶಾಹಿದ್ ಭಾಯ್ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಬ್ಯಾಟ್ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಈ ವೇಳೆ ನೀವು ಮಾಡುತ್ತಿರುವುದು ನಿಜಕ್ಕೂ ದೊಡ್ಡ ಕಾರ್ಯ. ವಾಸ್ತವ ಬದುಕಿನಲ್ಲಿ ಹೀರೋಗಳು ಮಾತ್ರವೇ ಇದನ್ನು ಮಾಡಲು ಸಾಧ್ಯ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಮೇ 13ರಂದು 20,000 ಯುಎಸ್ ಡಾಲರ್‌ಗೆ ಬ್ಯಾಟ್ ಖರೀದಿಸುವ ಬಗ್ಗೆ ಪತ್ರ ಕಳುಹಿಸಿದ್ದರು” ಎಂದು ರಹೀಮ್ ತಿಳಿಸಿದ್ದಾರೆ.

  • ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ- ಹಿಂದೂ ದೇವಾಲಯದಲ್ಲಿ ಅಫ್ರಿದಿ ಕಿಟ್ ಹಂಚಿಕೆ

    ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ- ಹಿಂದೂ ದೇವಾಲಯದಲ್ಲಿ ಅಫ್ರಿದಿ ಕಿಟ್ ಹಂಚಿಕೆ

    – ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರದಲ್ಲಿ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹಿಂದೂ ದೇವಾಯಗಳಿಗೆ ಭೇಟಿ ನೀಡಿ ಅಲ್ಲಿನ ಬಡವರಿಗೆ ಆಹಾರ ಹಂಚಿಕೆ ಮಾಡಿದ್ದಾರೆ.

    ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಜನರು ಊಟವಿಲ್ಲದೇ ಪರಾದಾಡುವಂತೆ ಮಾಡಿದೆ. ಈ ಸಮಯದಲ್ಲಿ ಕೆಲ ಸೆಲೆಬ್ರಿಟಿಗಳು ಹಾಗೂ ಹಣವಂತರು ಬಡ ಜನರಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದಾರೆ. ಈಗ ತನ್ನ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಶಾಹಿದ್ ಅಫ್ರಿದಿ ಅವರು ಕೂಡ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

    ಪಾಕಿಸ್ತಾನದಲ್ಲೂ ಕೊರೊನಾ ಹೆಚ್ಚಿರುವ ಕಾರಣ ಅಲ್ಲಿನ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು ಅಲ್ಲಿನ ಬಡಜನರ ನೆರವಿಗೆ ಬರುತ್ತಿದ್ದಾರೆ. ಅಂತೆಯೇ ಶಾಹಿದ್ ಅಫ್ರಿದಿ ಅವರು ಕೂಡ ಪಾಕಿಸ್ತಾನ ಗ್ರಾಮೀಣ ಭಾಗಗಳಿಗೆ ತೆರಳಿ ಅಲ್ಲಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಮೂಲಭೂತವಾಗಿ ಬೇಕಾದ ವಸ್ತುಗಳು, ಆಹಾರ ಕಿಟ್‍ಗಳನ್ನು ಒದಗಿಸುತ್ತಿದ್ದಾರೆ. ಜೊತೆಗೆ ತಮ್ಮ ಶಾಹಿದ್ ಅಫ್ರಿದಿ ಫೌಂಡೇಶನ್ ಕಡೆಯಿಂದ ಪಾಕಿಸ್ತಾನದ ಎಲ್ಲ ಕಡೆಗೂ ತೆರಳಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

    https://twitter.com/SAfridiOfficial/status/1259461825860702208

    ಈ ವಿಚಾರವಾಗಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿರುವ ಅಫ್ರಿದಿ, ನಾವು ಒಟ್ಟಿಗೆ ಇದ್ದೇವೆ ಮತ್ತು ನಾವು ಒಟ್ಟಿಗೆ ಮೇಲುಗೈ ಸಾಧಿಸುತ್ತೇವೆ. ಏಕತೆ ನಮ್ಮ ಶಕ್ತಿ. ಅಗತ್ಯ ಆಹಾರ ಪದಾರ್ಥಗಳನ್ನು ತಲುಪಿಸಲು ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಮಂದಿರ ಮತ್ತು ಭೇಟಿ ನೀಡಿದ್ದೆವು. ಎಂದು ಬರೆದುಕೊಂಡು ತಾವು ಹೋಗಿ ಆಹಾರ ಸಾಮಗ್ರಿ ನೀಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    https://twitter.com/SAfridiOfficial/status/1249680900641771521

    ಜೊತೆಗೆ ಕೊರೊನಾದಿಂದ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡಲು ಇನ್ನೂ ಒಂದು ಹೆಜ್ಚೆ ಮುಂದೇ ಹೋಗಿರುವ ಅವರು, ಅಫ್ರಿದಿ ನಟಿಸಿರುವ ಜಾಹೀರಾತುಗಳ ಬ್ರಾಂಡ್ ಕಂಪನಿಗಳಿಗೆ ಕೂಡ ಜನರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ನಾನು ಕೆಲಸ ಮಾಡಿದ ಬ್ರಾಂಡ್ ಕಂಪನಿಗಳು ನನಗೆ ಹಣ ನೀಡುವುದು ಬೇಡ. ಅದರ ಬದಲು ಫುಡ್ ಕಿಟ್ ನೀಡಿ ನಾನು ಅದನ್ನು ಬಡವರಿಗೆ ತಲುಪಿಸುತ್ತೇನೆ ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಶಾಹಿದ್ ಅಫ್ರಿದಿ ಎಂಬ ಪೌಂಡೇಶನ್ ಆರಂಭಿಸಿರುವ ಅಫ್ರಿದಿ, ಈ ಪ್ರತಿಸ್ಠಾನದ ಕಡೆಯಿಂದ ಹಲವಾರ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಕೊರೊನಾ ಸಮಯದಲ್ಲಿ ಅಫ್ರಿದಿ ಫೌಂಡೇಶನ್ ಗೆ ಬೆಂಬಲ ನೀಡಿ ಎಂದು ಭಾರತದ ಕ್ರಿಕೆಟ್ ಆಟಗಾರರಾದ ಯುರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರು ಮನವಿ ಮಾಡಿದ್ದರು. ಈ ವಿಚಾರವಾಗಿ ಯುವ ಭಜ್ಜಿ ಮೇಲೆ ಸಿಡಿದೆದ್ದಿದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಮೋದಿ ಪವರ್‌ನಲ್ಲಿ ಇರೋವರೆಗೂ ಇಂಡೋ-ಪಾಕ್ ಟೂರ್ನಿ ನಡೆಯಲ್ಲ: ಅಫ್ರಿದಿ

    ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಶಾಹೀದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

    2012ರಿಂದ ದ್ವಿಪಕ್ಷೀಯ ಸರಣಿಗಳಿಂದ ದೂರವೇ ಉಳಿದಿರುವ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ತಂಡಗಳು ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಆದರೆ ಕಳೆದ ವರ್ಷ ಪಾಕ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಐಸಿಸಿಗೆ ಭಾರತದ ವಿರುದ್ಧ ದೂರು ನೀಡಿ ದ್ವಿಪಕ್ಷೀಯ ಸರಣಿ ಆಡುವಂತೆ ಇಲ್ಲವೇ ಪರಿಹಾರ ಮೊತ್ತ ನೀಡುವಂತೆ ಕೋರಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಇತ್ತ ಬಿಸಿಸಿಐ ಕೂಡ ಪಾಕ್ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿರಲಿಲ್ಲ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕ್ ಮಾಜಿ ಆಟಗಾರ ಶಾಹೀದ್ ಅಫ್ರಿದಿ, ಪಾಕ್-ಭಾರತ ನಡುವೆ ಸರಣಿ ನಡೆದಿರಲು ಪ್ರಧಾನಿ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರುವವರೆಗೂ ಟೂರ್ನಿ ನಡೆಯುವುದು ಅನುಮಾನ. ಮೋದಿ ಅಜೆಂಡಾ ಏನೆಂದು ಭಾರತೀಯರಿಗೂ ಅರಿವಿದೆ. ಮೋದಿ ಯಾವಾಗಲೂ ಋಣಾತ್ಮಕ ಆಲೋಚನೆಗಳನ್ನೇ ಹೊಂದಿರುತ್ತಾರೆ. ಅವರ ಕಾರಣದಿಂದಲೇ ಎರಡು ದೇಶಗಳ ನಡುವಿನ ಸ್ನೇಹ ವಾತಾವರಣಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಪಿಸಿಬಿ ಕೈಗೊಂಡಿರುವ ಪ್ರಯತ್ನಗಳಿಗೆ ಅಫ್ರಿದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‍ನಲ್ಲಿ ವಿವಿಧ ದೇಶಗಳ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಪಾಕ್ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಭಾಗಿಯಾಗದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಈಗಾಗಲೇ ಹೇಳಿದೆ. ಆದರೆ ಪಿಸಿಬಿಯ ಎಚ್ಚರಿಕೆಗಳಿಗೆ ಬಿಸಿಸಿಐ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಪಾಕ್, ಭಾರತವಿಲ್ಲದೇ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಸಿದರೆ ನಷ್ಟ ಸಂಭವಿಸಲಿದೆ. ಆದ್ದರಿಂದ ಪಾಕ್‍ನಲ್ಲಿ ಟೂರ್ನಿಯನ್ನು ಆಯೋಜಿಸುವುದರ ಬದಲು ಯುಎಇನಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

  • 5ನೇ ಮಗಳ ಜನನದ ಖುಷಿ ಹಂಚಿಕೊಂಡ ಅಫ್ರಿದಿ ಕಾಲೆಳೆದ ನೆಟ್ಟಿಗರು

    5ನೇ ಮಗಳ ಜನನದ ಖುಷಿ ಹಂಚಿಕೊಂಡ ಅಫ್ರಿದಿ ಕಾಲೆಳೆದ ನೆಟ್ಟಿಗರು

    ಇಸ್ಲಾಮಾಬಾದ್: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ತಮಗೆ ಐದನೇ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಅಫ್ರಿದಿ ಅವರು 2008ರಲ್ಲಿ ತಮ್ಮ ತಾಯಿಯ ಸೋದರಸಂಬಂಧಿ ನಾಡಿಯಾ ಅಫ್ರಿದಿ ಅವರೊಂದಿಗೆ ಮದುವೆಯಾಗಿದ್ದು, ಅಫ್ರಿದಿ ದಂಪತಿಗೆ ಅಕ್ಸಾ, ಅನ್‍ಷಾ, ಅಜ್ವಾ ಹಾಗೂ ಅಸ್ಮರಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈಗ ನಾಡಿಯಾ ಅವರು 5ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    https://twitter.com/SAfridiOfficial/status/1228358607948984322

    ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಅಫ್ರಿದಿ, ಸರ್ವಶಕ್ತ ಅಲ್ಲಾನ ಅನಂತ ಆಶೀರ್ವಾದ ಮತ್ತು ಕರುಣೆ ನನ್ನ ಮೇಲೆ ಇದೆ. ಈಗಾಗಲೇ 4 ಅದ್ಭುತ ಹೆಣ್ಣುಮಕ್ಕಳನ್ನು ನೀಡಿರುವ ಅಲ್ಲಾ ನನಗೆ ಈಗ 5ನೇ ಹೆಣ್ಣು ಮಗುವನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಖುಷಿ ವಿಚಾರವನ್ನು ನನ್ನ ಹಿತೈಷಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಕೆಲ ನೆಟ್ಟಿಗರು ರಿಟ್ವೀಟ್ ಮಾಡಿ, ಅಲ್ಲಾನ ಕರುಣೆ ನಿಮ್ಮ ಮೇಲೆ ಇದ್ದೇ ಇರುತ್ತದೆ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಆದರೆ ಕೆಲ ನೆಟ್ಟಿಗರು ಅಫ್ರಿದಿ ಕಾಲೆಳೆದು ಗೇಲಿ ಮಾಡಿದ್ದಾರೆ.

    ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನೀವು ಯಾವಾಗ ನಿಯಂತ್ರಣಕ್ಕೆ ತರುತ್ತೀರಾ? ನಿಮಗೆ ನಾಲ್ಕು ಹೆಣ್ಣು ಮಕ್ಕಳು ಸಾಕು ಅನಿಸಲಿಲ್ಲವೇ? ಅಥವಾ ಗಂಡು ಸಂತಾನಕ್ಕಾಗಿ ಈ ಪ್ರಯತ್ನವೇ ಎಂದು ಕೆಲ ನೆಟ್ಟಿಗರು ಕಟುಕಿದ್ದಾರೆ.

    ಗಂಡು ಮಗು ಜನಿಸುವವರೆಗೂ ಅಫ್ರಿದಿ ಅವರು ಬಿಡುವುದಿಲ್ಲ. ಅವರಿಗೆ ಗಂಡು ಮಗುವು ಆಗುವ ವೇಳೆಗೆ ಅಂಡರ್ 19 ಮಹಿಳಾ ಕ್ರಿಕೆಟ್ ತಂಡವೇ ಸಿದ್ಧವಾಗಿರುತ್ತದೆ ಎಂದು ನೆಟ್ಟಿಗರೊಬ್ಬರು ಗೇಲಿ ಮಾಡಿದ್ದಾರೆ.

  • ಏಷ್ಯಾಕಪ್‍ನಲ್ಲಿ ಭಾರತ-ಪಾಕ್ ತಂಡಗಳು ಆಡದಿದ್ರೆ ಥ್ರಿಲ್ ಇರಲ್ಲ: ಅಫ್ರಿದಿ

    ಏಷ್ಯಾಕಪ್‍ನಲ್ಲಿ ಭಾರತ-ಪಾಕ್ ತಂಡಗಳು ಆಡದಿದ್ರೆ ಥ್ರಿಲ್ ಇರಲ್ಲ: ಅಫ್ರಿದಿ

    – ಪಾಕ್ ಈಗ ಸುರಕ್ಷಿತ ದೇಶ

    ಇಸ್ಲಾಮಾಬಾದ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡದಿದ್ದರೆ ಥ್ರಿಲ್ ಇರಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅಫ್ರಿದಿ, 2020ರ ಏಷ್ಯಾ ಕಪ್‍ನ ಆತಿಥ್ಯವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ. ಈ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಇರಬೇಕು. ಟೀಂ ಇಂಡಿಯಾ ಇಲ್ಲಿಗೆ ಬಂದು ಆಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ

    ಟೂರ್ನಿ ಎಲ್ಲಿ ನಡೆದರೂ ಪರವಾಗಿಲ್ಲ. ಭಾರತ-ಪಾಕ್ ಆಡುವುದು ಮುಖ್ಯ. ಈ ನಿಟ್ಟಿನಲ್ಲಿ ಉಭಯ ದೇಶಗಳು ಪರಸ್ಪರ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

    ಶ್ರೀಲಂಕಾ ಮತ್ತು ಬಾಂಗ್ಲಾದೇಶದ ತಂಡಗಳು ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು. ಬಾಂಗ್ಲಾದೇಶ ಕೂಡ ಇಲ್ಲಿ ಟೆಸ್ಟ್ ಆಡಲು ಒಪ್ಪಿದೆ. ಈ ಬಾರಿ ನಾವು ಪಿಎಸ್‍ಎಲ್ ಅನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದೇವೆ. ಪಾಕಿಸ್ತಾನ ಈಗ ಸುರಕ್ಷಿತ ದೇಶ ಅಂತ ಹೇಳಲು ಬಯಸುತ್ತೇನೆ. ಇಲ್ಲಿ ಆಟಗಾರರಿಗೆ ಯಾವುದೇ ಬೆದರಿಕೆ ಇಲ್ಲ. ಭಾರತ ತಂಡವು ಪಾಕಿಸ್ತಾನಕ್ಕೆ ಬಂದು ಸರಣಿಯನ್ನು ಆಡುವ ಸಮಯವನ್ನು ನಾನು ಎದುರು ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕಿವೀಸ್ ಟೆಸ್ಟ್ ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಔಟ್

    ಭಾರತ-ಪಾಕ್ ಆಡುವುದಿಲ್ಲ: ಬಿಸಿಸಿಐ
    ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾಕಪ್ ಟಿ20 ಆತಿಥ್ಯ ವಹಿಸುವುದರಲ್ಲಿ ತಮಗೆ ಯಾವುದೇ ತೊಂದರೆ ಇಲ್ಲ. ಆದರೆ ಭಾರತೀಯ ಕ್ರಿಕೆಟ್ ತಂಡ ಆಡಲು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ಪಿಸಿಬಿ ಸಿಇಒ ವಾಸಿಮ್ ಖಾನ್, ಭಾರತ ತಂಡವು ಏಷ್ಯಾ ಕಪ್ ಆಡಲು ಬರದಿದ್ದರೆ ನಾವು ಟಿ 20 ವಿಶ್ವಕಪ್ ಆಡಲು ಹೋಗುವುದಿಲ್ಲ ಎಂದು ಹೇಳಿದ್ದರು.

    ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಇದೇ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಹೊಸದಾಗಿ ಮಲೇಷ್ಯಾ ಸೇರಿಕೊಂಡಿದೆ. ಒಂದು ವೇಳೆ ಭಾರತ ಟೂರ್ನಿಯಿಂದ ಹೊರ ಉಳಿದರೆ ಕೇವಲ ಐದು ತಂಡಗಳು ಮಾತ್ರ ಆಡಬೇಕಾಗುತ್ತದೆ.

  • ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದಿದ್ದೆ- ಶಾಹಿದ್ ಅಫ್ರಿದಿ

    ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದಿದ್ದೆ- ಶಾಹಿದ್ ಅಫ್ರಿದಿ

    ಇಸ್ಲಾಮಾಬಾದ್: ನನ್ನ ಮಗಳು ಆರತಿ ಮಾಡುವಂತೆ ನಟಿಸುವದನ್ನು ನೋಡಿ ನಾನು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಫ್ರಿದಿ ಪ್ರತಿಕ್ರಿಯಿಸಿದ್ದು, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ತಿಳಿಸಿದ್ದಾರೆ.

    ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಟ್ವಿಟ್ಟರ್ ಬಳಕೆದಾರರೊಬ್ಬರು ಈ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಫುಲ್ ವೈರಲ್ ಆಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಅಫ್ರಿದಿ ಹೇಳಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರ ದಾನಿಶ್ ಕನೇರಿಯಾ, ಹಿಂದೂ ಆಗಿದ್ದಕ್ಕೆ ತಂಡದಲ್ಲಿ ನನ್ನನ್ನು ಕೀಳಾಗಿ ನೋಡಲಾಗುತಿತ್ತು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಅಫ್ರಿದಿ ವಿಡಿಯೋ ವೈರಲ್ ಆಗಿದೆ.

    ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದರು.

    ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದರು.

    ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಶಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ಅವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಸಿಗಬೇಕಾದ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಶೋಯೆಬ್ ಅಖ್ತರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದರು.

  • ನಿಜವಾದ ಶ್ರೇಷ್ಠ ಆಟಗಾರ ನೀವು- ವಿರಾಟ್ ಆಟಕ್ಕೆ ಅಫ್ರಿದಿ ಮೆಚ್ಚುಗೆ

    ನಿಜವಾದ ಶ್ರೇಷ್ಠ ಆಟಗಾರ ನೀವು- ವಿರಾಟ್ ಆಟಕ್ಕೆ ಅಫ್ರಿದಿ ಮೆಚ್ಚುಗೆ

    ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು. ಅವರ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮೊಹಾಲಿಯಲ್ಲಿ ಬುಧವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 72 ರನ್ ಗಳಿಸಿದರು. ಮೂರು ಮಾದರಿಯ ಕ್ರಿಕೆಟ್‍ನಲ್ಲಿಯೂ ವಿರಾಟ್ ಕೊಹ್ಲಿ ಸರಾಸರಿ 50ಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಐಸಿಸಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಅಭಿನಂದನೆ ತಿಳಿಸಿದೆ.

    ಐಸಿಸಿ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಶಾಹೀದ್ ಅಫ್ರಿದಿ, ವಿರಾಟ್ ನಿಮಗೆ ಅಭಿನಂದನೆಗಳು. ನೀವು ನಿಜವಾದ ಶ್ರೇಷ್ಠ ಆಟಗಾರ. ಅದೇ ರೀತಿಯಲ್ಲಿ ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸಿ ಮತ್ತು ಪ್ರಪಂಚದಾದ್ಯಂತದ ನಿಮ್ಮ ಅಭಿಮಾನಿಗಳನ್ನು ರಂಜಿಸಿ ಎಂದು ಬರೆದುಕೊಂಡಿದ್ದಾರೆ.

    ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೊದಲ ಪಂದ್ಯವು ಧರ್ಮಶಾಲಾದಲ್ಲಿ ಸುರಿದ ಮಳೆಯಿಂದಾಗಿ ರದ್ದುಗೊಂಡಿತ್ತು. ಮೂರನೇ ಹಾಗೂ ಕೊನೆಯ ಟಿ-20 ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.

    ಶಾಹಿದ್ ಅಫ್ರಿದಿ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕಾರಣಗಳಿಗಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದ ವಿರುದ್ಧ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಸಿದ ಪಿಒಕೆ ರ್ಯಾಲಿಯಲ್ಲಿ ಶಾಹಿದ್ ಅಫ್ರಿದಿ ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ಅವರು ಸಂದರ್ಶನವೊಂದರಲ್ಲಿ ಸಕ್ರಿಯ ರಾಜಕೀಯಕ್ಕೂ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಮೊಹಾಲಿ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 2017ರಲ್ಲಿ ವಿರಾಟ್ ಆಟೋಗ್ರಾಫ್ ನೀಡಿದ ಬ್ಯಾಟ್ ಅನ್ನು ಹರಾಜಿಗೆ ಅಫ್ರಿದಿಯ ಚಾರಿಟಿ ಫೌಂಡೇಶನ್‍ಗೆ ಉಡುಗೊರೆಯಾಗಿ ನೀಡಿದ್ದರು. ಆಗ ಶಾಹಿದ್ ಅವರಿಗೆ ಧನ್ಯವಾದ ಅರ್ಪಿಸಿದ್ದರು.

    ಟಿ-20ಯಲ್ಲಿ ಕೊಹ್ಲಿ ದಾಖಲೆ:
    ವಿರಾಟ್ ಕೊಹ್ಲಿ ಟಿ-20ಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ 2,441 ಮತ್ತು ರೋಹಿತ್ 2,434 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಗುಪ್ಟಿಲ್ 2,283 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ ನಾಲ್ಕನೇ ಮತ್ತು ನ್ಯೂಜಿಲೆಂಡ್‍ನ ಬ್ರೆಂಡನ್ ಮೆಕಲಮ್ ಐದನೇ ಸ್ಥಾನದಲ್ಲಿದ್ದಾರೆ. ಮಲಿಕ್ 2,263 ಮತ್ತು ಮೆಕಲಮ್ 2,140 ರನ್ ಹೊಡೆದಿದ್ದಾರೆ.

    https://twitter.com/SAfridiOfficial/status/892343260034850816