Tag: Shaheen Bagh

  • ರಾಜಕೀಯ ಪಕ್ಷದ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ: ಸಿಪಿಐ(ಎಂ)ಗೆ ಸುಪ್ರೀಂ ಪ್ರಶ್ನೆ

    ರಾಜಕೀಯ ಪಕ್ಷದ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ: ಸಿಪಿಐ(ಎಂ)ಗೆ ಸುಪ್ರೀಂ ಪ್ರಶ್ನೆ

    ನವದೆಹಲಿ: ದೆಹಲಿಯ ಶಾಹೀನ್‌ ಬಾಗ್‌ ಪ್ರದೇಶದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

    ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಿಪಿಐ(ಎಂ) ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿತ್ತು. ಇಲ್ಲಿ ನೆಲೆಸಿರುವ ನಿವಾಸಿಗಳು ಅನಧಿಕೃತ ನಿವಾಸಿಗಳಲ್ಲ. ಈ ಆಸ್ತಿಗಳ ನೆಲಸಮ ಪ್ರಕ್ರಿಯೆ ನೈಸರ್ಗಿಕ ನ್ಯಾಯ ಮತ್ತು ಭಾರತದ ಸಂವಿಧಾನದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಕಾನೂನುಬಾಹಿರ ಮತ್ತು ಅಮಾನವೀಯ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.

    ಈ ಅರ್ಜಿಯ ವಿಚಾರಣೆ ನಡೆಸಿದ ನಾ. ನಾಗೇಶ್ವರ್‌ ರಾವ್‌ ಮತ್ತು ನ್ಯಾ.ಬಿಆರ್‌ ಘವಿ ಅವರಿದ್ಧ ದ್ವಿಸದಸ್ಯ ಪೀಠ, ಇದರಲ್ಲಿ ರಾಜಕೀಯ ಪಕ್ಷದ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ಖಾರವಾಗಿ ಪ್ರಶ್ನಿಸಿತು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬುಗಿಲೆದ್ದ ಆಕ್ರೋಶಕ್ಕೆ ಆಡಳಿತ ಪಕ್ಷದ ಸಂಸದ ಬಲಿ

    ಸಿಪಿಐ(ಎಂ) ಪಕ್ಷವು ಏಕೆ‌ ಅರ್ಜಿಯನ್ನು ಸಲ್ಲಿಸಿದೆ. ಸಂತ್ರಸ್ತ ವ್ಯಕ್ತಿ ಇಲ್ಲಿಗೆ ಅರ್ಜಿ ಸಲ್ಲಿಸಿದರೆ ನಾವು ಅದನ್ನು ಅರ್ಥಮಾಡಿಕೊಳ್ಳಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದದಂತೆಯಾವುದೇ ವ್ಯಕ್ತಿ ಇಲ್ಲವೇ? ಸಂತ್ರಸ್ತ ವ್ಯಕ್ತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿ. ಈ ಅರ್ಜಿಯನ್ನು ನಾವು ಮಾನ್ಯ ಮಾಡುವುದಿಲ್ಲ ಎಂದು ಹೇಳಿತು.

    ಏನಿದು ಪ್ರಕರಣ?
    ದೆಹಲಿಯ ಬಿಜೆಪಿ ಮುಖ್ಯಸ್ಥ ಅದೇಶ್‌ ಸಿಂಗ್‌ ಅವರು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಗೆ ಪತ್ರ ಬರೆದು, ರೋಹಿಂಗ್ಯಾ, ಬಾಂಗ್ಲಾದೇಶಿಯರು ಮತ್ತು ಸಮಾಜ ವಿರೋಧಿ ಶಕ್ತಿಗಳು ಶಾಹೀನ್‌ ಬಾಗ್‌ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದ್ದರು.

    ಈ ಪತ್ರದ ಬೆನ್ನಲ್ಲೇ ಯಾವುದೇ ಗಲಾಟೆಗಳು ಆಗದೇ ಇರಲು ದಕ್ಷಿಣ ದೆಹಲಿಯ ಜಿಲ್ಲಾಡಳಿತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಇಂದು ಬೆಳಗ್ಗೆಯಿಂದ ಅಕ್ರಮ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿತ್ತು. ತೆರವು ಮಾಡಲು ಮುಂದಾದಾಗ ಸ್ಥಳಿಯ ನಿವಾಸಿಗಳು ಪ್ರತಿಭಟನೆ ಮಾಡಲು ಆರಂಭಿಸಿದರು. ಈ ಪ್ರತಿಭಟನೆಗೆ ಆಪ್‌ ಮತ್ತು ಕಾಂಗ್ರೆಸ್‌ ನಾಯಕರು ಸಾಥ್‌ ನೀಡಿದ್ದರು. ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.  ಇದನ್ನೂ ಓದಿ: ದಾವುದ್ ಇಬ್ರಾಹಿಂನ ಸಹಚರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಎನ್‍ಐಎ ದಾಳಿ

    ದಕ್ಷಿಣ ದೆಹಲಿ ಪಾಲಿಕೆ 10 ದಿನಗಳ ಕಾಲ ಶಾಹೀನ್‌ ಬಾಗ್‌ ವಲಯದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ. ಸಿಎಎ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ 2019ರ ಡಿಸೆಂಬರ್‌ 15 ರಿಂದ 2020ರ ಮಾರ್ಚ್‌ 24ರವರೆಗೆ ಭಾರೀ ಪ್ರತಿಭಟನೆ ನಡೆದಿತ್ತು.

  • ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ

    ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ

    ನವದೆಹಲಿ: ದೆಹಲಿಯ ಶಾಹೀನ್‌ಬಾಗ್‌ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಯಾವುದೇ ಗಲಾಟೆಗಳು ಆಗದೇ ಇರಲು ದಕ್ಷಿಣ ದೆಹಲಿಯ ಜಿಲ್ಲಾಡಳಿತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುತ್ತಿದೆ. ತೆರವು ಮಾಡಲು ಮುಂದಾದಾಗ ಸ್ಥಳಿಯ ನಿವಾಸಿಗಳ, ಆಪ್‌, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದು, ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

    ನಿಗದಿ ಪ್ರಕಾರ ಏಪ್ರಿಲ್‌ 28 ರಂದೇ ತೆರವು ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಗೊಳಿಸದ ಕಾರಣ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.  ಇದನ್ನೂ ಓದಿ: ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ

    ದೆಹಲಿಯ ಬಿಜೆಪಿ ಮುಖ್ಯಸ್ಥ ಅದೇಶ್‌ ಸಿಂಗ್‌ ಅವರು ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರು. ರೋಹಿಂಗ್ಯಾ, ಬಾಂಗ್ಲಾದೇಶಿಯರು ಮತ್ತು ಸಮಾಜ ವಿರೋಧಿ ಶಕ್ತಿಗಳು ಇಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದ್ದರು.

    ದಕ್ಷಿಣ ದೆಹಲಿ ಪಾಲಿಕೆ 10 ದಿನಗಳ ಕಾಲ ಶಾಹೀನ್‌ ಬಾಗ್‌ ವಲಯದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.

    ಸಿಎಎ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ 2019ರ ಡಿಸೆಂಬರ್‌ 15 ರಿಂದ 2020ರ ಮಾರ್ಚ್‌ 24ರವರೆಗೆ ಭಾರೀ ಪ್ರತಿಭಟನೆ ನಡೆದಿತ್ತು.

  • ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ನವದೆಹಲಿ: ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

    ಶಾಹೀನ್ ಬಾಗ್‍ನಲ್ಲಿ ನಡೆದ ಪೌರತ್ವ ತಿದ್ದು ಪಡಿ ಕಾಯ್ದೆ(ಸಿಎಎ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕಾ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ.

    ಆದೇಶದಲ್ಲಿ ಏನಿದೆ?
    ಅನಿರ್ದಿಷ್ಟಾವಧಿಗೆ ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕಾ ಸ್ಥಳಗಳನ್ನು ಬಂದ್ ಮಾಡುವಂತಿಲ್ಲ. ಈ ರೀತಿ ಮಾಡಿದ್ದಲ್ಲಿ ಅಧಿಕಾರಿಗಳು ಪ್ರತಿಭಟನೆಯನ್ನು ತೆರವು ಮಾಡಬೇಕು. ಪ್ರತಿಭಟನೆಗಳು ನಿರ್ಧಿಷ್ಟ ಜಾಗದಲ್ಲಿ ನಡೆಯಬೇಕು.

    ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕಾ ಸ್ಥಳ ಅಥವಾ ರಸ್ತೆಯನ್ನು ಬಂದ್ ಮಾಡಿದ್ದಲ್ಲಿ ಭಾರೀ ಸಂಖ್ಯೆಯ ಜನರಿಗೆ ಸಮಸ್ಯೆಯಾಗುತ್ತದೆ. ಇದು ಆ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಶಾಂತ ರೀತಿಯ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆ. ಸಂವಿಧಾನವೇ ಈ ಹಕ್ಕನ್ನು ನೀಡಿದೆ.

    ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಹೀನ್ ಬಾಗ್ ಮಾರುಕಟ್ಟೆ ಸಂಘಟನೆಯ ಅಧ್ಯಕ್ಷ ಡಾ. ನಾಸೀರ್, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಭಟನೆಯಿಂದ 200ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಬೇಕಾಯಿತು. 2 ಸಾವಿರ ಕೆಲಸಗಾರರು ಕೆಲಸ ಕಳೆದುಕೊಳ್ಳಬೇಕಾಯಿತು. ಈ ಅಂಗಡಿಗಳಲ್ಲಿ ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರತಿಭಟನೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಶಾಹೀನ್ ಬಾಗ್‍ನಲ್ಲಿ 2019ರ ಡಿಸೆಂಬರ್ 14 ರಿಂದ ಪ್ರತಿಭಟನೆ ಆರಂಭವಾಗಿತ್ತು. ಈ ನಡುವೆ ಕೊರೊನಾ ಬಂದ ಕಾರಣ ದೇಶವ್ಯಾಪಿ ಮಾ.22 ರಿಂದ ಲಾಕ್‍ಡೌನ್ ಘೋಷಣೆಯಾಗಿತ್ತು. ಲಾಕ್‍ಡೌನ್ ಘೋಷಣೆಯಾಗಿದ್ದರೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿದಿತ್ತು.

    ಮಾ.24ರಂದು ದೆಹಲಿ ಪೊಲೀಸರು ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಿದ್ದರು. ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದರು. ಈ ಮೂಲಕ 101 ದಿನಗಳ ಪ್ರತಿಭಟನೆ ಮುಕ್ತಾಯಗೊಂಡಿತ್ತು. ಸಾರ್ವಜನಿಕಾ ಸ್ಥಳವನ್ನು ಪ್ರತಿಭಟನಾ ಹೋರಾಟಕ್ಕೆ ಬಳಸಿದ್ದನ್ನು ಪ್ರಶ್ನಿಸಿ ಹಲವು ಮಂದಿ ಪಿಐಎಲ್ ಸಲ್ಲಿಸಿದ್ದರು.

  • ಜೆಸಿಬಿ ತಂದು ಶಾಹೀನ್ ಬಾಗ್ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಪೊಲೀಸರು

    ಜೆಸಿಬಿ ತಂದು ಶಾಹೀನ್ ಬಾಗ್ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಪೊಲೀಸರು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ಹಿಂದೆ ನೂರಾರು ಮಹಿಳೆಯರು ಹಲವು ದಿನಗಳಿಂದ ಬೀಡುಬಿಟ್ಟಿದ್ದ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳವನ್ನು ದೆಹಲಿ ಪೊಲೀಸ್ ಸಿಬ್ಬಂದಿ ಇಂದು ತೆರವುಗೊಳಿಸಿದ್ದಾರೆ.

    ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಶಾಹೀನ್ ಬಾಗ್‍ನಿಂದ ಬಲವಂತವಾಗಿ ಹೊರಹಾಕಿದ್ದಾರೆ. ಕೆಲವೇ ಮಹಿಳಾ ಪ್ರತಿಭಟನಾಕಾರರು ಮಾತ್ರ ಶಾಹೀನ್ ಬಾಗ್ ಸ್ಥಳದಲ್ಲಿದ್ದರು. ಹೀಗಾಗಿ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ ಎಂದು ತೋರಿಸಲು ತಮ್ಮ ಚಪ್ಪಲಿಗಳನ್ನು ಇಟ್ಟುಕೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ವಾಕ್ ಸಮರ ನಡೆಯಿತು. ಬಳಿಕ ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದಾರೆ. ಬಳಿಕ ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಲಾಯಿತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಆಗ್ನೇಯ ಡಿಸಿಪಿ, ‘ದೆಹಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳವನ್ನು ತೊರೆಯುವಂತೆ ಕೋರಲಾಗಿತ್ತು. ಆದರೆ ಪ್ರತಿಭಟನಾಕಾರರು ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಯಿತು. ಈಗಾಗಲೇ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲಾಗಿದೆ. ಅದರಲ್ಲಿ ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಏಕಾಏಕಿ ಹರಡಿ ದೆಹಲಿ ಬೀಗ ಹಾಕುತ್ತಿದ್ದಂತೆ ಶಾಹೀನ್ ಬಾಗ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚಿನ ಮಹಿಳೆಯರು ಪ್ರತಿಭಟನಾ ಸ್ಥಳದಿಂದ ಹೊರಬಂದಿದ್ದರು. ಆದರೆ ಕೆಲವರು ಸಿಎಎ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದರು.

  • ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಉಡುಪಿ: ನಗರದಲ್ಲಿ ಶಾಹಿನ್‍ಬಾಗ್ ಮಾದರಿ ಸತ್ಯಾಗ್ರಹಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳ ನಡೆಯುತ್ತಿದ್ದು, ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

    ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಶಾಹಿನ್‍ಬಾಗ್ ಎಂದು ಹೆಸರಿಡಲಾಗಿದೆ. ಶಾಹಿನ್‍ಬಾಗ್ ಸಂಯೋಜನಾ ಸಮಿತಿ ಸತ್ಯಾಗ್ರಹವನ್ನು ಆಯೋಜನೆ ಮಾಡಿದೆ. ಸಂವಿಧಾನ ಸಂರಕ್ಷಕಾ ಸಮಿತಿ ಬೆಂಬಲ ನೀಡಿದೆ. ಇಂದು ಸಂಜೆ 5.30 ಸುಮಾರಿಗೆ ಸತ್ಯಾಗ್ರಹಕ್ಕೆ ಚಾಲನೆ ಸಿಗಲಿದೆ.

    ಮಸೀದಿ ರಸ್ತೆಯ ಖಾಸಗಿ ಜಮೀನಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದ್ದು, ತಯಾರಿ ನಡೆಯುತ್ತಿದೆ. ಸಂವಿಧಾನ ಹಾಗು ಪೌರತ್ವ ರಕ್ಷಣೆ ಉದ್ದೇಶ ಇಟ್ಟುಕೊಂಡು ಸತ್ಯಾಗ್ರಹಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೂರು ಪಾಳಿಯಲ್ಲಿ ಹಲವಾರು ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

     

  • ಶಹೀನ್ ಬಾಗ್ ಸಿಎಎ ಪ್ರತಿಭಟನೆಯಲ್ಲಿ ಇರ್ಫಾನ್ ಪಠಾಣ್?- ವೈರಲ್ ವಿಡಿಯೋ ಹಿಂದಿನ ರಹಸ್ಯ ರಿವೀಲ್

    ಶಹೀನ್ ಬಾಗ್ ಸಿಎಎ ಪ್ರತಿಭಟನೆಯಲ್ಲಿ ಇರ್ಫಾನ್ ಪಠಾಣ್?- ವೈರಲ್ ವಿಡಿಯೋ ಹಿಂದಿನ ರಹಸ್ಯ ರಿವೀಲ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ದೆಹಲಿಯ ಶಹೀನ್ ಬಾಗ್‍ನಲ್ಲಿ ನಡೆದ ಸಿಎಎ ಹಾಗೂ ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಹಿಂದಿನ ಅಸಲಿ ಸತ್ಯಾಂಶವೇ ಬೇರೆಯಾಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ,”ಸಿಎಎ, ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಗೆ ಮತ್ತೊಂದು ಸಿಂಹ ಎಂಟ್ರಿಯಾಗಿದೆ. ಆದರ ಹೆಸರು ಇರ್ಫಾನ್ ಪಠಾಣ್” ಎಂಬ ಮಾಹಿತಿ ಇರುವುದನ್ನು ಕಾಣಬಹುದಾಗಿದೆ. ಇರ್ಫಾನ್ ತೆರೆದ ವಾಹನದಲ್ಲಿ ಅಭಿಮಾನಿಗಳತ್ತ ಕೈಬೀಸುತ್ತಾ ಘಟನಾ ಸ್ಥಳಕ್ಕೆ ಆಗಮಿಸುತ್ತಾರೆ. ಕೇವಲ 17 ಸೆಕೆಂಡ್ ಇರುವ ಈ ವಿಡಿಯೋವನ್ನು ‘ಲ್ಯಾಬ್ ಅಜಾದ್ ಹೈ ತೇರೆ’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಜ.24ರಂದು ಪೋಸ್ಟ್ ಮಾಡಲಾಗಿದೆ. ಅಲ್ಲದೇ ವಿಡಿಯೋದಲ್ಲಿ ಲೊಕೇಶನ್ ಟ್ಯಾಗ್ ಮಾಡಿ ಶಹೀನ್ ಬಾಗ್ ಎಂದು ನೀಡಿದ್ದಾರೆ.

    ಇದುವರೆಗೂ ಈ ವಿಡಿಯೋ 80 ಸಾವಿರ ವ್ಯೂ, 300 ಶೇರ್, 666 ಲೈಕ್ ಪಡೆದುಕೊಂಡಿದೆ. ಆದರೆ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಮದನ್ ಮಿಶ್ರಾರನ್ನು ಕಾಣಬಹುದಾಗಿದೆ. ಈ ಕುರಿತು ಇರ್ಫಾನ್ ಫಠಾಣ್ ಅವರ ಫೇಸ್‍ಬುಕ್, ಇನ್‍ಸ್ಟಾ, ಟಿಕ್‍ಟಾಕ್ ಅಧಿಕೃತ ಖಾತೆ ಪರಿಶೀಲನೆ ನಡೆಸಿದರೆ ಜನವರಿ 14ರಂದು ಪಠಾಣ್ ಈ ವಿಡಿಯೋ ಶೇರ್ ಮಾಡಿರುವುದು ತಿಳಿದು ಬರುತ್ತದೆ.

    ಜ.14 ರಂದು ಮದನ್ ಮಿಶ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇರ್ಫಾನ್‍ರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದ ವಿಡಿಯೋ ಹಾಗೂ ಮದಾನ್ ಅವರ ಟ್ವೀಟ್ ಪ್ರಕಾರ ಜನವರಿ 14 ರಂದು ಪಶ್ಚಿಮ ಬಂಗಾಳದ ಕಮರ್ಹಟಿ ಪ್ರದೇಶದಲ್ಲಿ ನಡೆದ ಪ್ರೀಮಿಯರ್ ನಾಕೌಟ್ ಕ್ರಿಕೆಟ್ ಟೂರ್ನಿಗೆ ಇರ್ಫಾನ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

  • ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಆಪ್ ಕಾರ್ಯಕರ್ತ

    ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಆಪ್ ಕಾರ್ಯಕರ್ತ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಕಪಿಲ್ ಗುಜ್ಜರ್ ಆಮ್ ಅದ್ಮಿ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

    ಕಪಿಲ್ ಗುಜ್ಜರ್ ಬಂಧಿಸಿದ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ್ದು ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿದ್ದ ಫೋಟೋಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್‍ನಲ್ಲಿ ವಾಟ್ಸಪ್ ಸಂದೇಶಗಳನ್ನು ಪರಿಶೀಲನೆ ನಡೆಸಲಾಯಿತು. ಎಲ್ಲ ಸಂದೇಶಗಳನ್ನು ಡಿಲಿಟ್ ಮಾಡಲಾಗಿತ್ತು. ತಂತ್ರಜ್ಞಾನ ಸಹಾಯದಿಂದ ಎಲ್ಲ ಮಾಹಿತಿಯನ್ನು ಮರಳಿ ಪಡೆಯಲಾಗಿದ್ದು, ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿರುವ ಫೋಟೋಗಳು ಪತ್ತೆಯಾಗಿದೆ. ಈ ಫೋಟೋಗಳು ಒಂದು ವರ್ಷ ಹಳೆಯದು ಎನ್ನಲಾಗಿದ್ದು ಆಪ್ ನಾಯಕಿ ಅತಿಶಿ ಮತ್ತು ಸಂಜಯ್ ಸಿಂಗ್ ಜೊತೆಗೆ ಆರೋಪಿ ಕಪಿಲ್ ಗುಜ್ಜರ್ ಗುರುತಿಸಿಕೊಂಡಿದ್ದಾನೆ. ತಂದೆಯೂ ಸೇರಿ ಹಲವರೊಂದಿಗೆ ಕಪಿಲ್ ಆಮ್ ಅದ್ಮಿ ಸೇರ್ಪಡೆಗೊಂಡಿದ್ದರು ಎಂದು ಕ್ರೈಂ ಬ್ರ್ಯಾಂಚ್ ಡಿಸಿಪಿ ರಾಜೇಶ್ ಡಿಯೊ ಪ್ರತಿಕ್ರಿಯಿಸಿದ್ದಾರೆ.

    ಫೆಬ್ರವರಿ ಒಂದರಂದು ದಕ್ಷಿಣ ದೆಹಲಿ ಪ್ರದೇಶದ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಕಪಿಲ್ ಗುಜ್ಜರ್, ‘ನಮ್ಮ ದೇಶದಲ್ಲಿ ಹಿಂದುಗಳದಷ್ಟೇ ನಡೆಯೋದು, ಬೇರೆ ಯಾರದ್ದು ಅಲ್ಲ’ ಎನ್ನುತ್ತಾ ಎರಡು ಮೂರು ಬಾರಿ ಗುಂಡು ಹಾರಿಸಿದ್ದ. ತಕ್ಷಣವೇ ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದ್ದರು ಪ್ರಾಥಮಿಕ ತನಿಖೆಯಲ್ಲಿ ಬಂಧಿತ ವ್ಯಕ್ತಿ ನೋಯ್ಡಾ ಬಾರ್ಡರ್ ನಲ್ಲಿರುವ ದಲ್ಲಾಪುರ ಗ್ರಾಮಾದ ನಿವಾಸಿ ಎಂದು ತಿಳಿದು ಬಂದಿತ್ತು.

  • ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ ಶಾಹಿನ್ ಬಾಗ್ ಪ್ರತಿಭಟನೆ?

    ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ ಶಾಹಿನ್ ಬಾಗ್ ಪ್ರತಿಭಟನೆ?

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಹತ್ತು ದಿನಗಳು ಬಾಕಿ ಉಳಿದಿದೆ. ಪ್ರಚಾರ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ದೆಹಲಿಯಲ್ಲಿ ಮೋದಿ ವಸರ್ಸ್ ಕೇಜ್ರಿವಾಲ್ ಹೋರಾಟ ತೀವ್ರವಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಅಭಿವೃದ್ಧಿ ಅಜೆಂಡಾ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

    ಗುಣಮಟ್ಟದ ಶಿಕ್ಷಣ, ಉಚಿತ ನೀರು, ವಿದ್ಯುತ್, ವೈದ್ಯಕೀಯ ಸೇವೆ, ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರವನ್ನು ಇಟ್ಟುಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ. ಆಪ್ ಅಬ್ಬರದ ಪ್ರಚಾರಕ್ಕೆ ಪರ್ಯಾಯ ಹುಡುಕುತ್ತಿರುವ ಬಿಜೆಪಿ ಇಂಡಿಯಾ ವರ್ಸಸ್ ಪಾಕಿಸ್ತಾನ ಅಜೆಂಡಾ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟಾರ್ಗೆಟ್ ಮಾಡಲು ಆರಂಭಿಸಿ ತಿರುಗೇಟು ನೀಡಲು ಆರಂಭಿಸಿದೆ.

    ಕಳೆದ ಎರಡು ದಿನಗಳಿಂದ ದೆಹಲಿ ಚುನಾವಣೆಯಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ಚುನಾವಣಾ ವಿಷಯ ವಸ್ತುವಾಗಿದೆ. ಕಳೆದ 44 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಿಳೆಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಮೂಲೆಯೊಂದರಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ದೆಹಲಿಯಲ್ಲಿ ಹೊಸ ಸಂಚಲವೊಂದನ್ನ ಸೃಷ್ಟಿಸಿದೆ.

    ಇದೇ ವಿಚಾರವನ್ನು ಚುನಾವಣೆ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ತೀಕ್ಷ್ಣ ರಾಜಕೀಯ ಪ್ರಚಾರಕ್ಕೆ ಮುಂದಾಗಿದೆ. ಶಾಹಿನ್ ಬಾಗ್ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಹಾಕುವ ಮತ ದೆಹಲಿ ಮತ್ತು ದೇಶವನ್ನು ಸುರಕ್ಷಿತವಾಗಿಡಲಿದೆ. ಶಾಹಿನ್ ಬಾಗ್ ನಂತಹ ಸಾವಿರಾರು ಪ್ರತಿಭಟನೆಗಳು ತಡೆಯುವ ಶಕ್ತಿ ನಿಮ್ಮ ಮತಕ್ಕಿದೆ ಎನ್ನುವ ಮೂಲಕ ಪ್ರಚಾರಕ್ಕೆ ಶಾಹಿನ್ ಬಾಗ್ ಪ್ರತಿಭಟನೆಯನ್ನು ಎಳೆದು ತಂದಿದ್ದರು.

    ಇದರ ಬೆನ್ನಲ್ಲೇ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಪ್ರತಿಭಟನೆಯ ಹೆಸರಿನಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಗಳಿಗೆ ವೇದಿಕೆ ನೀಡಲಿದೆ. ಇದು ಸಿಎಎ ವಿರುದ್ಧದ ಪ್ರತಿಭಟನೆಯಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ, ಸಿಎಂ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶ ಒಡೆಯುವ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಟ್ವೀಟ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾರತವನ್ನು ತುಂಡು ತುಂಡು ಮಾಡುವವರ ಪರವಾಗಿದ್ದಾರೆ ಕೇಜ್ರಿವಾಲ್ ಎಂದು ಆರೋಪಿಸಿದ್ದರು.

    ಹಿರಿಯ ನಾಯಕರ ಬೆನ್ನಲ್ಲೇ ಕಿರಿಯರೂ ನಾವು ಕಮ್ಮಿಯಿಲ್ಲ ಎನ್ನುವಂತೆ ಮತ್ತಷ್ಟು ಉಗ್ರವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಿ ಎನ್ನುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮಾವೇಶದಲ್ಲಿ ತಮ್ಮ ಕೈಗಳನ್ನು ಮೇಲೆತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ನೆರೆದಿದ್ದ ಜನರು ಗೋಲಿಮಾರೋ (ಗುಂಡಿಕ್ಕಿ ಕೊಲ್ಲಿ) ಎಂದು ಆಕ್ರೋಶಭರಿತರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

    ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಏನಾಯಿತೋ ಅದೇ ದೆಹಲಿಯಲ್ಲೂ ಆಗುವ ಸಂಭವ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮನೆಮನೆಗೆ ನುಗಿ ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ಅತ್ಯಾಚಾರ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕವಾಗಿ ಭಾಷಣ ಮಾಡಿದ್ದು ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗಲೇ ಮತ್ತೆ ಚರ್ಚೆ ಜಾಸ್ತಿಯಾಗಿದೆ.

    ದೆಹಲಿಯಲ್ಲಿ ಬಿಜೆಪಿಗೆ ಶೇ.30-34 ಓಟ್ ಬ್ಯಾಂಕ್ ಹೊಂದಿದೆ. ಪ್ರತಿ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ ಅದು ಶೇಕಡವಾರು ಮತಗಳು ಗೆಲುವಾಗಿ ಬದಲಾಗುತ್ತಿಲ್ಲ. ಈ ಬಾರಿ ಪ್ರಚೋದಕಾರಿ ಭಾಷಣಗಳ ಮೂಲಕ ಉಗ್ರ ಹಿಂದುತ್ವ ಮತ್ತು ಸಿಎಎ ಪರ ಮತಗಳನ್ನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಆಪ್ ಅಭಿವೃದ್ಧಿ ಜನಪ್ರಿಯತೆಯನ್ನು ಸೈಡ್ ಲೈನ್ ಮಾಡುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಪ್ ಅಭಿವೃದ್ಧಿ ಮೇಲೆ ಮತ ಕೇಳುವುದನ್ನು ಮುಂದುವರಿಸಿದ್ದು ಶಾಹಿನ್ ಬಾಗ್ ಪ್ರತಿಭಟನೆ ಹಾಗೂ ಸಿಎಎ ವಿಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

    ಈ ಬೆಳವಣಿಗೆ ನೋಡಿದಾಗ ಶಾಹಿನ್ ಬಾಗ್ ಪ್ರತಿಭಟನೆ ದೆಹಲಿ ಚುನಾವಣಾ ಕಣದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಲಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

  • ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೇಶಾದ್ಯಂತ ಜೆಎನ್‍ಯು ಬಳಿಕ ಈಗ ಭಾರೀ ಚರ್ಚೆಯಲ್ಲಿರೋದು ಶಹೀನ್ ಬಾಗ್. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಜೆಎನ್‍ಯು ಅಂದ್ರೆ ಜವಹಾರಲಾಲ್ ನೆಹರು ವಿಶ್ವವಿದ್ಯಾಲಯ ಎಷ್ಟು ಸುದ್ದಿಯಾಗಿತ್ತೋ? ಅದರಷ್ಟೇ ಮಟ್ಟಿಗೆ ಈಗ ಸುದ್ದಿಯಾಗ್ತಿರೋದು ಶಹೀನ್ ಬಾಗ್. ಕಳೆದ ಎರಡು ತಿಂಗಳಿಂದ ಶಹೀನ್ ಬಾಗ್‍ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೀತಿವೆ. ಈ ಮೂಲಕ ಸಿಎಎ, ಎನ್​ಆರ್​ಸಿ ವಿರೋಧಿ ಹೋರಾಟದ ವೇದಿಕೆಯಾಗಿ ಮಾರ್ಪಟ್ಟಿದೆ. ಮಹಿಳೆಯರು ಸೇರಿದಂತೆ ಸಾವಿರಾರು ಜನ ಹೋರಾಟ ಮಾಡ್ತಿದ್ದಾರೆ.

    ಶಹೀನ್‍ಬಾಗ್ ಹೋರಾಟಗಾರರು ರೇಪಿಸ್ಟ್‌ಗಳು
    ಫೆಬ್ರವರಿ 8ರ ದೆಹಲಿ ವಿಧಾನಸಭೆ ಎಲೆಕ್ಷನ್‍ಗೆ ದಿನಗಣನೆ ಇರುವಾಗಲೇ ಶಹೀನ್ ಬಾಗ್ ಈಗ ರಾಜಕೀಯ ವಸ್ತುವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಈ ಶಹೀನ್ ಬಾಗ್ ಅನ್ನು ದೇಶದ್ರೋಹಿ, ಪ್ರಚೋದನಕಾರಿ ಹೇಳಿಕೆಗೆ ಅಡ್ಡೆ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಶಹೀನ್ ಬಾಗ್‍ನ ಪ್ರತಿಭಟನಾಕಾರರನ್ನು ಅತ್ಯಾಚಾರಿಗಳು, ಕೊಲೆಗಡುಕರು. ಈ ಪ್ರತಿಭಟನಾಕಾರರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಅಂತ ಪಶ್ಚಿಮ ದೆಹಲಿಯ ಬಿಜೆಪಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಿಮಗೆ ಯೋಚನೆ ಮಾಡಲು ಸಕಾಲ. ಈಗಲೇ ಎಚ್ಚರಗೊಳ್ಳಬೇಕಿದೆ. ನೀವು ಎಚ್ಚರಗೊಂಡರೆ ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ನೆರವಿಗೆ ಬರ್ತಾರೆ. ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ನೆರವಿಗೆ ಬರಲ್ಲ ಅಂತ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಶಬೀನ್ ಬಾಗ್ ಧ್ವಂಸ ಮಾಡ್ತೇವೆ ಅಂದಿದ್ದಾರೆ.

    ಆಪ್-ಬಿಜೆಪಿ ಕೋಮು ಸಂಘರ್ಷ
    ದೆಹಲಿಯ ಎಲೆಕ್ಷನ್‍ನ ರಾಜಕೀಯ ವಿಷಯವಾಗಿರೋ ಶಹೀನ್ ಬಾಗ್‍ಗೆ ಹೋರಾಟಗಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಇದಕ್ಕೆ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ತಿರುಗೇಟು ಕೊಟ್ಟಿದ್ದರು. ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತು ಈ ರೀತ್ಯಾಗಿ ಆಧಾರ ರಹಿತ ಆರೋಪಗಳನ್ನು ಮಾಡ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಚುನಾವಣೆಯ ಪ್ರಚಾರಕ್ಕೆ ಸರಕು ಇಲ್ಲ. ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ ಅನ್ನೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹಾಗಾಗಿ, ಪ್ರತಿ ಚುನಾವಣೆಯ ಅಸ್ತ್ರ ಎಂಬಂತೆ ಪ್ರಚಾರದಲ್ಲಿ ಕೋಮುವಾದವನ್ನು ತುಂಬಲು ಆರಂಭಿಸಿದೆ. ಸಿಎಎ ವಿರೋಧಿಸುತ್ತಿರುವವರೆಲ್ಲಾ ಮುಸಲ್ಮಾನರು ಎಂಬ ಭಾವನೆ ಬರುವ ರೀತಿಯಲ್ಲಿ ಬಿಂಬಿಸಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಅಂತ ವಾಗ್ದಾಳಿ ನಡೆಸಿದೆ.

    ಗೋಲಿ ಮಾರೋ.. ಗೋಲಿ ಮಾರೋ
    ಸಂಸದ ಪರ್ವೇಶ್ ವರ್ಮಾ ರೀತಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಮಂತ್ರಿ ಅಮಿತ್ ಶಾ ಪಾಲ್ಗೊಂಡಿದ್ದ ಚುನಾವಣಾ ಸಮಾವೇಶದಲ್ಲಿ `ದೇಶ್ ದ್ರೋಹಿಯೋಂಕೋ ಗೋಲಿ ಮಾರ್.. ಗೋಲಿಮಾರ್’ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು) ಅಂತ ಘೋಷಣೆ ಕೂಗಿದ್ದಾರೆ. ಕೇಂದ್ರ ಸಚಿವರು ಅನ್ನೋ ತಮ್ಮ ಸ್ಥಾನದ ಮಹತ್ವ-ಜವಾಬ್ದಾರಿಯನ್ನು ಅರಿತು ಅನುರಾಗ್ ಘೋಷಣೆ ಕೂಗಿದ್ದು ಎಷ್ಟು ಸರಿ ಅಂತ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ, ಅನುರಾಗ್ ಠಾಕೂರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ನೊಟೀಸ್ ಕೊಟ್ಟಿದ್ದು, ಜನವರಿ 30ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.

    ಶಹೀನ್ ಬಾಗ್ ಅಂತಾರಾಷ್ಟ್ರೀಯ ಸುದ್ದಿ
    ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಪಿಸ್ತೂಲ್ ಸಮೇತ ನುಗ್ಗಿ, ಪ್ರತಿಭಟನಾಕಾರರು ಈ ಕ್ಷಣವೇ ಜಾಗ ಖಾಲಿ ಮಾಡ್ಬೇಕು ಅಂತಲೂ ಬೆದರಿಸಿದ್ದ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಸಿಎಎ ವಿರೋಧಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಶಹೀನ್ ಬಾಗ್ ಪ್ರದೇಶ ಕೇವಲ ಹೆಸರಾಗಿ ಉಳಿದಿಲ್ಲ. ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್, ಈಜಿಪ್ಟ್ ತಹ್ರೀರ್ ಸ್ಕ್ವೇರ್, ಟರ್ಕಿಯ ತಕ್ಸಿಂ ಸ್ಕ್ವೇರ್ ನಷ್ಟೇ ಪ್ರಸಿದ್ಧವಾಗಿದೆ. ಅಲ್ಲದೆ, ಕೋಲ್ಕತ್ತಾದ ಪಾರ್ಕ್ ಸರ್ಕಸ್, ಲಖನೌದ ಘಂಟಾ ಘರ್, ಬೆಂಗಳೂರಿನ ಮಸೀದ್ ರೋಡ್‍ಗಳು ಕೂಡ ಶಹೀನ್ ಬಾಗ್‍ಗಳಾಗಿ ಮಾರ್ಪಟ್ಟಿವೆ ಅಂತ ಜೆಎನ್‍ಯು ವಿದ್ಯಾರ್ಥಿ ಹೋರಾಟಗಾರ ಖಾಲಿದ್ ಉಮರ್ ಹೇಳಿದ್ದಾರೆ.

    ಎಲ್ಲಿದೆ ಶಹೀನ್ ಬಾಗ್?
    ದಕ್ಷಿಣ ದೆಹಲಿಯ ಓಕ್ಲಾ ಪ್ರದೇಶದಲ್ಲಿದೆ ಶಹೀನ್ ಬಾಗ್. ಯಮುನಾ ನದಿಯ ದಡದಲ್ಲಿದೆ. ಪೌರತ್ವ ವಿರೋಧಿ ಹೋರಾಟದ ಸದ್ಯದ ಕೇಂದ್ರ ಸ್ಥಾನ.

    ಶಹೀನ್ ಬಾಗ್‍ಗೂ ಪಿಎಫ್‍ಐ ನಂಟು:
    ದೇಶಾದ್ಯಂತ ಪೌರತ್ವ ವಿರೋಧಿ ಹೋರಾಟದ ವೇಳೆ ಹಿಂಸಾಚಾರ ಸೃಷ್ಟಿಗೆ ಕೇರಳ ಮೂಲದ ಪಿಎಫ್‍ಐಗೆ 120 ಕೋಟಿ ಫಂಡ್ ಬಂದಿರೋ ಸಂಬಂಧ ಪಿಎಫ್‍ಐ ಮತ್ತದರ ಜೊತೆ ನಂಟು ಹೊಂದಿರೋ ಎನ್‍ಜಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ. ಈ ಹೊತ್ತಲ್ಲೇ, ಪಿಎಫ್‍ಐನ ಪ್ರಮುಖ ಅಧಿಕಾರಿಗಳು ಶಹೀನ್ ಬಾಗ್ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಿದೆ.

    ಪ್ರಚೋದನಕಾರಿ ಭಾಷಣದ ಮಾಸ್ಟರ್ ಮೈಂಡ್
    ಜೆಎನ್‍ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ಶಹೀನ್ ಬಾಗ್ ಹೋರಾಟದ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬಂದಿದೆ. ಈತನ ಪ್ರಚೋದನಕಾರಿ ಹೇಳಿಕೆಯಿಂದಲೇ ಶಹೀನ್ ಬಾಗ್‍ನಲ್ಲಿ ಹೋರಾಟ ಭಾವೋದ್ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಸಿಎಎ ವಿರೋಧಿಸಿ ಕಿಚ್ಚೆಬ್ಬಿಸೋ ನೆಪದಲ್ಲಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿರೋ ಶರ್ಜಿಲ್ ಇಮಾಮ್ ವೀಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಹೀಗಾಗಿ, ಶರ್ಜಿಲ್ ಇಮಾಮ್ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿತ್ತು. ಈಗ ಅರೆಸ್ಟ್ ಮಾಡಲಾಗಿದೆ. ಆದರೆ, ರಾಷ್ಟ್ರ ಬಿಜೆಪಿಯ ಜೋಡೆತ್ತುಗಳಂತಿರೋ ಮೋದಿ-ಅಮಿತ್ ಶಾ ಏನು ಬೇಕಾದರೂ ಹೇಳಬಹುದು. ಆ ಹೇಳಿಕೆಗಳಿಂದ ಸಮಾಜದಲ್ಲಿ ಎಂಥಹ ಅನಾಹುತಗಳು ನಡೆಯಬಹುದು. ಆದರೆ, ಇವರನ್ನು ಟೀಕಿಸಿದರೆ, ಇವರ ವಿರುದ್ಧ ದನಿ ಎತ್ತಿದರೆ ಸುಳ್ಳು ಕೇಸ್‍ಗಳನ್ನು ಹಾಕಿ ಆ ದನಿಯನ್ನು ಅಡಗಿಸೋ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅಂತ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
    – ಆನಂದ ಪಿಎನ್