Tag: Shah Mahmood Qureshi

  • ಹಿಜಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ, ಮುಸಲ್ಮಾನರ ಶೋಷಣೆಯಾಗಿದೆ: ಪಾಕ್‌ ಸಚಿವ

    ಹಿಜಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ, ಮುಸಲ್ಮಾನರ ಶೋಷಣೆಯಾಗಿದೆ: ಪಾಕ್‌ ಸಚಿವ

    ಇಸ್ಲಾಮಾಬಾದ್: ಹಿಜಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸಲ್ಮಾನರ ಶೋಷಣೆಯಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುವುದು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಕವಾಗಿ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸಲ್ಮಾನರ ಶೋಷಣೆಯಾಗಿದೆ. ಭಾರತ ಸರ್ಕಾರ ಈ ವಿವಾದದ ಭಾಗವಾಗಿದೆ ಎಂಬುದನ್ನು ಜಗತ್ತು ಅರಿತುಕೊಳ್ಳಬೇಕು ಎಂದು ಆರೋಪಿಸಿದ್ದಾರೆ.

    ವಿಶೇಷವೆಂದರೆ ಇಡೀ ಏಷ್ಯಾದಲ್ಲಿಯೇ ಮುಸ್ಲಿಂ ಹೆಣ್ಣುಮಕ್ಕಳ ಅನಕ್ಷರತೆ ಹೆಚ್ಚಿರೋ ದೇಶಗಳಲ್ಲಿ ಪಾಕಿಸ್ಥಾನ ಅಗ್ರ ಸ್ಥಾನದಲ್ಲಿದ್ದು, ಭಾರತಕ್ಕೆ ಬುದ್ಧಿ ಹೇಳೋಕೆ ಬಂದಿರೋದು ಮಾತ್ರ ದ್ವಂದ್ವ ನೀತಿಯ ಪರಾಕಾಷ್ಠೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಕರ್ನಾಟಕದಲ್ಲಿ ಹಿಜಬ್ ಧರಿಸಿ ಕಾಲೇಜು ಕ್ಯಾಂಪಸ್ ಒಳಗೆ, ಕ್ಲಾಸ್‍ರೂಮ್‍ನೊಳಗೆ ಬರಬೇಡಿ ಎಂದು ಹೇಳಿದ್ದಕ್ಕೆ ಮುಸ್ಲಿಂ ಹುಡುಗಿಯರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದವರು ಕೇಸರಿಶಾಲು ಹಾಕಿಕೊಂಡು ಬರುತ್ತಿದ್ದಾರೆ. ಅವರು ಕ್ಲಾಸ್‍ರೂಮ್‌ನಲ್ಲೂ ಧರ್ಮಾಚರಣೆ ಮಾಡುತ್ತಾರೆ ಎಂದಾದರೆ, ನಾವೂ ನಮ್ಮ ಧರ್ಮಾಚರಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಇದೀಗ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಬ್-ಕೇಸರಿಶಾಲು ವಿವಾದ ತಾರಕಕ್ಕೇರಿದ ಪರಿಣಾಮ ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

  • ಭಾರತ ಪಾಕ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ: ಪಾಕ್ ವಿದೇಶಾಂಗ ಸಚಿವ

    ಭಾರತ ಪಾಕ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ: ಪಾಕ್ ವಿದೇಶಾಂಗ ಸಚಿವ

    – ಗಮನ ಬೇರೆಡೆ ಸೆಳೆದು ದಾಳಿಗೆ ಪ್ಲಾನ್

    ಇಸ್ಲಾಮಾಬಾದ್: ಚೀನಾ-ಭಾರತದ ಸಂಘರ್ಷದ ಕಡೆ ಗಮನ ಸೆಳೆದು ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆಧಾರ ರಹಿತ ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪಾಕ್ ಟಿವಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನಮ್ಮ ದೇಶದ ಮೇಲೆ ಭಾರತ ದಾಳಿ ನಡೆಸಿದಲ್ಲಿ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ. ಭಾರತ-ಚೀನಾದ ನಡುವೆ ನಡೆದ ಸಂಘರ್ಷದ ಕುರಿತು ಗಮನ ಸೆಳೆದು ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.

    ಈ ಹಿಂದೆ ಇಸ್ಲಾಮಾಬಾದ್‍ನಲ್ಲಿ ಭಾರತದ ರಾಯಭಾರ ಕಚೇರಿಯ ಇಬ್ಬರು ಕಾಣೆಯಾಗಿದ್ದರು. ಈ ಕುರಿತು ಭಾರತ ಖಡಕ್ ಎಚ್ಚರಿಕೆ ನೀಡಿದ ಹಿನ್ನೆಲೆ ಪಾಕಿಸ್ತಾನ ಪ್ರತಿಕ್ರಿಯಿಸಿತ್ತು. ಭಾರತದ ರಾಯಭಾರ ಕಚೇರಿಯ ಚಾಲಕರು ಎಂದು ಗುರುತಿಸಲ್ಪಟ್ಟ ಇಬ್ಬರು, ಪಾದಚಾರಿಗಳನ್ನು ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು. ಪೊಲೀಸರು ಅವರ ವಾಹನವನ್ನು ಪರಿಶೀಲಿಸಿದಾಗ ನಕಲಿ ಕರೆನ್ಸಿ ಪತ್ತೆಯಾಗಿತ್ತು ಎಂದು ಸುಳ್ಳು ಹೇಳಿತ್ತು. ಅಲ್ಲದೆ ಇಬ್ಬರನ್ನೂ ಬಿಡುಗಡೆ ಮಾಡಿ ಭಾರತದ ಗಡಿ ತಲುಪಿಸಲಾಗಿದೆ ಎಂದು ಪಾಕಿಸ್ತಾನ ತಿಳಿಸಿತ್ತು.

    ಇದೆಲ್ಲದರ ಮಧ್ಯೆ ಇದೀಗ ಪಾಕ್ ವಿದೇಶಾಂಗ ಸಚಿವ ಖುರೇಷಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಹಿಮಾಲಯ ಪ್ರದೇಶದಲ್ಲಿ ಚೀನಾ ಹೊಡೆತದಿಂದ ಮುಜುಗರಕ್ಕೊಳಗಾಗಿರುವ ಭಾರತ, ಇದೀಗ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ. ನಮ್ಮ ರಾಯಭಾರ ಕಚೇರಿಯ ಶೇ.50ರಷ್ಟು ಅಧಿಕಾರಿಗಳು ಮರಳಿದ ನಂತರ, ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ನಾವು ಮರಳಿಸುತ್ತೇವೆ ಎಂದು ಹೇಳಿದ್ದಾರೆ.

  • ಒಳ್ಳೆಯ ವ್ಯಕ್ತಿತ್ವ ಇರೋ ಮನುಷ್ಯ- ಮನಮೋಹನ್ ಸಿಂಗ್‍ರನ್ನು ಹೊಗಳಿದ ಖುರೇಷಿ

    ಒಳ್ಳೆಯ ವ್ಯಕ್ತಿತ್ವ ಇರೋ ಮನುಷ್ಯ- ಮನಮೋಹನ್ ಸಿಂಗ್‍ರನ್ನು ಹೊಗಳಿದ ಖುರೇಷಿ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಳ್ಳೆಯ ವ್ಯಕ್ತಿತ್ವ ಇರುವ ಮನುಷ್ಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಡಿ ಹೊಗಳಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಖುರೇಷಿ ಅವರು ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯದಲ್ಲಿ ಚಹಾ ನೀಡಿದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

    ನಾನು ನಿಮ್ಮ ಮನೆಗೆ ಭೇಟಿ ನೀಡಿದ್ದೆ. ನಿಮ್ಮ ಪತ್ನಿ ಚಹಾ ತಯಾರಿಸಿದ್ದರು. ಸ್ವತಃ ಮನಮೋಹನ್ ಸಿಂಗ್ ಅವರೇ ಚಹಾವನ್ನು ತಂದುಕೊಟ್ಟಿದ್ದರು. ನಾನು ಮರಳಿ ಬಂದ ನಂತರ ಜನರಿಗೆ ಈ ಕಥೆಯನ್ನು ವಿವರಿಸಿದೆ. ಎಂತಹ ದೊಡ್ಡ ಮನುಷ್ಯ ಅವರು ಎಂದು ಹೇಳಿದೆ ಎಂದು ಖುರೇಷಿ ಮನಮೋಹನ್ ಸಿಂಗ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಈ ಘಟನೆಯು 90 ದಶಕದಲ್ಲಿ ಸಂಭವಿಸಿದೆ ಎಂದು ಖುರೇಷಿ ವಿಡಿಯೋದಲ್ಲಿ ನೆನಪಿಸಿಕೊಳ್ಳುತ್ತಾರೆ. ಇದರಲ್ಲಿ ಅವರು ಪ್ರಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರ್ಷರನ್ ಕೌರ್ ಅವರೊಂದಿಗೆ ಕುಳಿತಿದ್ದಾರೆ.

    ಸಿಖ್ ಪವಿತ್ರ ಮಂದಿರದ ಉದ್ಘಾಟನಾ ಸಮಾರಂಭಕ್ಕಾಗಿ ಪಾಕಿಸ್ತಾನದ ಕಡೆಗೆ ತೆರಳಿದ ಭಾರತೀಯ ಯಾತ್ರಿಕರ ಮೊದಲ ಬ್ಯಾಚ್‍ನಲ್ಲಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.

    ಮೊದಲ ಬ್ಯಾಚ್‍ನಲ್ಲಿ ಅಕಲ್ ತಖ್ತ್ ಜತೇದರ್ ಹರ್ಪೀತ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಸುಖ್ಖೀರ್ ಸಿಂಗ್ ಬಾದಲ್, ಹರ್ಸಿಮ್ರತ್ ಕೌರ್ ಬಾದಲ್, ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ತೆರಳಿದ್ದಾರೆ.

  • ಮುಸ್ಲಿಂ ಸಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ – ಪಾಕ್ ಪ್ರತಿಕ್ರಿಯೆ

    ಮುಸ್ಲಿಂ ಸಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ – ಪಾಕ್ ಪ್ರತಿಕ್ರಿಯೆ

    ಇಸ್ಲಾಮಾಬಾದ್: ಅಯೋಧ್ಯೆ ತೀರ್ಪಿಗೆ ಪಾಕಿಸ್ತಾನ ವಿದೇಶಾಂಗ ಮಂತ್ರಿ ಶಾ ಮಹಮೂದ್ ಖುರೇಷಿ ಪ್ರತಿಕ್ರಿಯೆ ನೀಡಿದ್ದಾರೆ.

    ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಒತ್ತಡದಲ್ಲಿರುವ ಮುಸ್ಲಿಂ ಸುಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ. ಪಾಕಿಸ್ತಾನ ವಿದೇಶ ಕಾರ್ಯಾಲಯದಿಂದ ತೀರ್ಪಿನ ಹೆಚ್ಚಿನ ವಿವರಣೆಯನ್ನು ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಖುರೇಶಿ ಹೇಳಿದ್ದಾರೆ.

    ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿ, ಸುಮಾರು 5 ಶತಮಾನಗಳ ವಿವಾದಕ್ಕೆ ಷರಾ ಬರೆದಿದೆ. ರಾಮಜನ್ಮಭೂಮಿ ರಾಮನಿಗಷ್ಟೇ. ಸರ್ಕಾರದ ಟ್ರಸ್ಟ್ ಗೆ ಸೇರಬೇಕು. ಈ ಟ್ರಸ್ಟ್ ದೇವಾಲಯ ನಿರ್ಮಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಎಸ್.ಎ. ಬೋಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ತೀರ್ಪು ನೀಡಿದೆ.

    ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷರಾಗಿರುವ ಫರ್ಹತ್ ಖಾನ್ ತಮ್ಮ ರಕ್ತದಿಂದ ‘ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಹಿಂದೂಸ್ಥಾನಕ್ಕೆ ತೀರ್ಪನ್ನು ಅರ್ಥೈಸುವ ಕೆಲಸವನ್ನು ಮಾಡುತ್ತೇನೆ. ಇಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸಹೋದರತೆಗೆ ಗೆಲುವು ಸಿಕ್ಕಿದೆ. ನ್ಯಾಯಾಧೀಶರು ಎಲ್ಲ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯೋಚಿತವಾದ ತೀರ್ಪನ್ನು ಪ್ರಕಟಿಸಿದ್ದಾರೆ. ಹಾಗಾಗಿ ಅಯೋಧ್ಯೆ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಹಿಂದೂಸ್ಥಾನದ ಪ್ರತಿಯೊಂದು ಕಣದಲ್ಲಿ ರಾಮ್ ಮತ್ತು ರಹೀಂ ಇದ್ದಾರೆ ಎಂದು ಫರ್ಹರ್ ಹೇಳಿದ್ದಾರೆ.

    ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

  • ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ!

    ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ!

    ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

    ಭಾರತೀಯ ವಾಯುಪಡೆ ಇಂದು ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದೆ. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಮೇಲೆ ದಾಳಿ ನಡೆಸಿದೆ. ಇದಕ್ಕೆ ನಾವು ಪ್ರತೀಕಾರವನ್ನು ಕೈಗೊಳ್ಳುತ್ತೇವೆ ಎಂದು ಖುರೇಷಿ ಕಿಡಿಕಾರಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    ಸರ್ಜಿಕಲ್ ಸ್ಟ್ರೈಕ್ 2 ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಖುರೇಷಿ ಅವರು, ದಾಳಿಯ ಸಂಬಂಧ ಚರ್ಚೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಗೋಖಲೆ ಅವರು, ನಮ್ಮ ಗುರಿಯಿದ್ದ ಪ್ರದೇಶಗಳು ಜೈಶ್ ಉಗ್ರರ ಕ್ಯಾಂಪ್ ಆಗಿತ್ತು. ಹಲವು ಉಗ್ರರು, ತರಬೇತಿದಾರರು ಮತ್ತು ಕಮಾಂಡರ್ ಗಳು ನಮ್ಮ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ದಾಳಿ ನಡೆದ ಸ್ಥಳಗಳು ಅರಣ್ಯ ಪ್ರದೇಶದಲ್ಲಿದ್ದು ಯಾವುದೇ ಜನರಿಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    ಬಾಲಕೋಟ್ ಉಗ್ರರ ನೆಲೆಯನ್ನು ಮೌಲಾನ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ನೋಡಿಕೊಳ್ಳುತ್ತಿದ್ದ. ಈತ ಜೈಷ್ ಮುಖ್ಯಸ್ಥ ಮಸೂದ್ ಅಜರ್ ಸಹೋದರನಾಗಿದ್ದಾನೆ. ಬಾಲಕೋಟ್ ಜೈಷ್ ಸಂಘಟನೆಯ ಅತಿ ದೊಡ್ಡ ಕ್ಯಾಂಪ್ ಆಗಿತ್ತು ಎಂದು ತಿಳಿಸಿದ್ದಾರೆ.

    ಉಗ್ರರ ಬಗ್ಗೆ ಭಾರತ ಹಲವು ಬಾರಿ ಮಾಹಿತಿ ನೀಡಿದರೂ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಾವೇ ನೇರವಾಗಿ ಹೋಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ದಾಳಿ ಬಗ್ಗೆ ಸಮರ್ಥನೆ ನೀಡಿದ್ದಾರೆ.

    ಇದೇ ವೇಳೆ ಜೈಷ್ ಸಂಘಟನೆ ದೇಶದ ಹಲವೆಡೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ನಮಗೆ ಖಚಿತ ಗುಪ್ತಚರ ಮಾಹಿತಿಗಳು ಸಿಕ್ಕಿವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv